ಕಟ್ಟೆಯೊಡೆಯುವ ಮುನ್ನ ಒಂದು ಚೆಸ್ ಆಟ


೧೯೧೮ರಲ್ಲಿ ಸ್ವೀಡನ್ನಿನಲ್ಲಿ ಜನಿಸಿದ ಇಂಗ್ಮಾರ್ ಬರ್ಗ್ಮನ್ ನೂರಕ್ಕೂ ಹೆಚ್ಚು ನಾಟಕಗಳನ್ನು, ೧೫೦ಕ್ಕೂ ಮಿಗಿಲಾದ ರೇಡಿಯೋ ಕಾರ್ಯಕ್ರಮಗಳನ್ನು, ಐವತ್ತರಷ್ಟು ಸಿನೆಮಾಗಳನ್ನು ನಿರ್ದೇಶಿಸಿದರೂ ಇವರು ತಮ್ಮ ಸಿನೆಮಾಗಳಿಂದ ಲೋಕ ಪ್ರಸಿದ್ಧಿಯನ್ನು ಪಡೆದವರು. ಇವರ ಅನೇಕ ಚಿತ್ರಗಳನ್ನು ನಾನು ನೋಡಿದ್ದರೂ, ಮತ್ತೆ ಮತ್ತೆ ಕಾಡುವ ಒಂದು ಚಿತ್ರ, `ಸೆವೆನ್ತ್ ಸೀಲ್’ ಕುರಿತು ನಾಲ್ಕು ಮಾತುಗಳನ್ನು ಇಲ್ಲಿ ಬರೆದಿದ್ದೇನೆ.

ಹದಿನಾಲ್ಕನೆಯ ಶತಮಾನದ ಸ್ವೀಡನ್ನಿನ ಹಿನ್ನೆಲೆಯಲ್ಲಿ ರಚಿಸಿದ ಚಿತ್ರ ಇದು. ಅಂದಿನ ದಿನಗಳಲ್ಲಿ ಸ್ವೀಡನ್ ಒಂದೆಡೆಯಿಂದ ಪ್ಲೇಗಿನಿಂದಲೂ ಮತ್ತೊಂದೆಡೆ ಭೀಕರ ಕ್ರುಸೇಡ್ಗಳಿಂದಲೂ (ಧರ್ಮ ಯುದ್ಧ) ಜರ್ಜರಿತವಾಗಿತ್ತು. ಇಂಥಾ ಸಂದರ್ಭವನ್ನು ಹಿನ್ನೆಲೆಯಾಗಿ ಹೊಂದಿದ ಈ ಚಿತ್ರ ದೇವರ ಅಸ್ತಿತ್ವದ ಕುರಿತಾಗಿ, ಬದುಕಿನ ಗುರಿಯ ಬಗ್ಗೆ, ಸಾವಿನ ವಿಚಿತ್ರದ ಬಗ್ಗೆ ಇವೆಲ್ಲವುಗಳ ನಡುವೆ ಬದುಕಿನ ಸಣ್ಣ ಸಣ್ಣ ಸುಖಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ ಮಾತ್ರವಲ್ಲ ಹಲವೆಡೆ ಹೇಳಿಕೆಗಳನ್ನೂ ನೀಡುತ್ತದೆ.

ಧರ್ಮ ಯುದ್ಧವನ್ನು ಮುಗಿಸಿ ಮರಳುತ್ತಿರುವ ಒಬ್ಬ ನೈಟ್ (ಯೋಧ), ಅನ್ಟೋನಿಯೋ ಬ್ಲಾಕ್ ದಾರಿಯಲ್ಲಿ ಮೃತ್ಯು ಎದುರಾಗುತ್ತದೆ. ನಿನ್ನ ಸಮಯ ಮುಗಿಯಿತು ಇನ್ನು ನನ್ನೊಡನೆ ನಡಿ ಎಂದು ಸಾವು ಹೇಳಲು, (ಇಲ್ಲಿ ಬರುವ ಒಂದು ಸಂಭಾಷಣೆ ಬಹಳ ಸ್ವಾರಸ್ಯಕರ: ಯೋಧ ಕೇಳುತ್ತಾನೆ, “ನಿನ್ನನ್ನು ನಾನು ಬಲ್ಲೆನೇ?” ಸಾವು, “ಹೌದು. ನಾನು ಮೃತ್ಯು. ಕೆಲಕಾಲದಿಂದ ನಾನು ನಿನ್ನೊಂದಿಗೆ ಪಯಣಿಸುತ್ತಿದ್ದೆ. ಇಂದು ನಿನ್ನನ್ನು ಕರೆದೊಯ್ಯಲು ಸಜ್ಜಾಗಿದ್ದೇನೆ”) ವಿಚಲಿತನಾಗದ ಯೋಧ ಸಾವನ್ನು ಚೆಸ್ ಆಟಕ್ಕೆ ಆಹ್ವಾನಿಸುತ್ತಾನೆ. ಆಟ ಮುಗಿಯುವಲ್ಲಿಯವರೆಗೆ ಯೋಧನಿಗೆ ಸಾವು ಇಲ್ಲ. ಯೋಧ ಆಟದಲ್ಲಿ ಗೆದ್ದರೆ ಆತನ ಜೀವ ಉಳಿಯುತ್ತದೆ ಎನ್ನುವುದೇ ಯೋಧ ಹಾಗೂ ಸಾವಿನ ನಡುವಿನ ಒಪ್ಪಂದ. ಆಟ ನಡೆಯುತ್ತಿರುವಂತೆಯೇ ಚಿತ್ರ ನಮಗೆ ಆ ಸಮಯದ ಸಾಮಾಜಿಕ ಸ್ಥಿತಿಯನ್ನು ತೋರಿಸುತ್ತಾ ಹೋಗುತ್ತದೆ. ಒಂದೆಡೆ ಪ್ಲೇಗ್ ಇನ್ನೊಂದೆಡೆ ಧರ್ಮ ಯುದ್ಧಗಳಿಂದ ಅಂಧಕಾರ ಎಲ್ಲೆಡೆ ಮುಸುಕುತ್ತಿರುತ್ತದೆ. ಇಂಥಾ ಸಂದರ್ಭದಲ್ಲಿ ಬದುಕು, ನರಳಾಟ, ಸಾವುಗಳ ಬಗ್ಗೆ ಬರ್ಗ್ಮನ್ ವ್ಯಾಖ್ಯಾನ ಆರಂಭವಾಗುತ್ತದೆ.

ಈ ಚಿತ್ರ ಮೂಲತಃ ಒಂದು ನಾಟಕವಾಗಿ ಆರಂಭವಾಗಿದ್ದು. ಅದರ ಮೂಲ ಹೆಸರು `ಪೈನ್ಟಿಂಗ್ ಆನ್ ವುಡ್’ ಎಂದು ಇತ್ತಂತೆ. ಬರ್ಗ್ಮನ್ ಹೇಳುವಂತೆ, ಅವರು ಕೆಲವು ರಂಗ ನಟರೊಡನೆ ಕೂಡಿ ನಾಟಕವೊಂದಕ್ಕೆ ತಯಾರಿನಡೆಸುತ್ತಿದ್ದಾಗ ಹುಟ್ಟಿದ ಕಲ್ಪನೆಯೇ ಈ ಚಿತ್ರ. ಚಿತ್ರದುದ್ದಕ್ಕೂ ನಾವು ಕಾಣುವ ನಾಟಕೀಯ ಶೈಲಿ, ಅನೇಕ ಸಂದರ್ಭದಲ್ಲಿ ರಂಗಕ್ಕೆ ಹೇಳಿ ಮಾಡಿಸಿದಂಥಾ ಸಂಭಾಷಣೆಗಳು ಕಂಡು ಬರುತ್ತವೆ. ಆಂಟೋನಿಯಸ್ ಬ್ಲಾಕ್ ಸಾವಿಗೆ ಹೇಳುತ್ತಾನೆ, “ನಿನ್ನ ಗಮನದಿಂದ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಸಾವು ಮರಳಿ ಉತ್ತರಿಸುತ್ತೆ, “ಯಾವುದೂ ತಪ್ಪಿಸಿಕೊಳ್ಳದು ಹಾಗೂ ಯಾರೂ ತಪ್ಪಿಸಿಕೊಳ್ಳಲಾರರು”. ಮತ್ತೊಂದು ಸಂದರ್ಭದಲ್ಲಿ, “ಪ್ರೀತಿ ಎಲ್ಲ ರೋಗ ರುಜಿನಗಳಿಗಿಂತ ಕೆಟ್ಟದ್ದು ಆದರೆ ಅದರಿಂದ ಸತ್ತವರಿಲ್ಲ” ಎಂಬ ಸಂಭಾಷಣೆ ಬರುತ್ತದೆ. ಚಿತ್ರ ನಡೆಯುವ ಕಾಲ ಘಟ್ಟದಲ್ಲಿ ಪ್ರಚಲಿತದಲ್ಲಿದ್ದ ವಿಚ್ ಹನ್ಟ್ (ಹೆಂಗಸರನ್ನು ಕೆಲವು ವಿಶೇಷ ಕಾರಣಗಳಿಂದ ಮಾಟಗಾತಿ ಎಂದು ಗುರುತಿಸಿ ಕೊಲ್ಲುವ ಅಮಾನವೀಯ ಕ್ರಮ) ತೋರಿಸುತ್ತಾ, ಅಲ್ಲಿಗೆ ಬರುವ ಅನ್ಟೋನಿಯೋ ಬ್ಲಾಕ್, ಮಾಟಗಾತಿ ಎಂದು ಗುರುತಿಸಲ್ಪಟ್ಟ ಹುಡುಗಿಯನ್ನು ಡೆವಿಲ್ (ದಾನವ) ಬಗ್ಗೆ ವಿಚಾರಿಸುತ್ತಾನೆ. ನಿನಗೆ ಅವನಿಂದೇನಾಗಬೇಕು ಎಂದು ಆ ಹುಡುಗಿ ಕೇಳುತ್ತಾಳೆ, ಅವನಿಗಾದರೂ ದೇವರ ಕುರಿತಾಗಿ ಗೊತ್ತಿರಬಹುದು. ಅದನ್ನೇ ವಿಚಾರಿಸಬೇಕೆನ್ನುತ್ತಾನೆ ಅನ್ಟೋನಿಯೋ ಬ್ಲಾಕ್. ಹೀಗೆ ಚಿತ್ರದುದ್ದಕ್ಕೂ, ದೇವರ ಹುಡುಕಾಟ, ಜೀವನದ ನಿಜವಾದ ಗುರಿ ಇತ್ಯಾದಿಗಳ ಬಗ್ಗೆ ಅನ್ಟೋನಿಯೋ ಬ್ಲಾಕ್ ಮೂಲಕ ಬರ್ಗ್ಮನ್ರ ಹುಡುಕಾಟ ನಡೆಯುತ್ತದೆ.

ಚಿತ್ರ ಆರಂಭವಾಗುವಾಗ ಸತ್ಯದ ಏಳು ಕಟ್ಟೆಗಳಲ್ಲಿ ಆರು ಆಗಲೇ ಮುರಿದಿದ್ದು, ಲೋಕದಲ್ಲಿ ಮನುಷ್ಯ ರೂಪದಲ್ಲಿ ಲಿಗಿಯೋನ್ ದಾನವರು (Demon found in the Christian Bible Mark 5:9 and Luke 8:30) ತಿರುಗಾಡುತ್ತಿರುತ್ತಾರೆ. ಲೋಕದಲ್ಲಿ ಅವರ ಶಕ್ತಿ ಮೇಲುಗೈ ಸಾಧಿಸಿದ ದಿನ ಏಳನೆಯ ಕಟ್ಟೆಯೂ ಮುರಿದು ನಿರ್ಣಯದ ದಿನ (ಡೂಮ್ಸ್ ಡೇ) ಬರುತ್ತದೆ. ಆ ದಿನದಂದು, ದೇವರು ಧರೆಗಿಳಿಯುತ್ತಾರೆ, ಮುಚ್ಚಿದ್ದ ಗೋರಿಗಳು ಮತ್ತೆ ತೆರೆದು ಸತ್ತವರೆಲ್ಲರೂ ಎದ್ದು ಕುಳಿತು ತಮ್ಮ ಮುಂದಿನ ಲೋಕದ ಪಯಣದ ಕುರಿತಾದ ತೀರ್ಪಿಗಾಗಿ ಕಿವಿಯೊಡ್ಡುತ್ತಾರೆ. ಹೀಗಾಗಿ ಚಿತ್ರದುದ್ದಕ್ಕೂ ಮತ್ತೆ ಮತ್ತೆ ನಿರ್ಣಯದ ದಿನದ ಬಗ್ಗೆ ಹೇಳಿಕೆಗಳು, ಭಯ ಕಂಡುಬರುತ್ತದೆ. ಬದುಕಿರುವ ಪ್ರತಿಯೊಬ್ಬರೂ ಆ ದಿನದ ನಿರ್ಣಯದ ಹೆದರಿಕೆಯಿಂದ ನರಳುತ್ತಿದ್ದಾರೆ ಎಂದು ಬರ್ಗ್ಮನ್ ಹೇಳುತ್ತಾರೆ.

ಚಿತ್ರದಲ್ಲಿ ಗಮನ ಸೆಳೆಯುವ ಅತಿಮುಖ್ಯ ಭಾಗವೆಂದರೆ ಅದರ ಕ್ಯಾಮರಾ ವರ್ಕ್. ಗುನ್ನರ್ ಪಿ಼ಸ್ಚರ್ರವರ (ಕ್ಯಾಮರಾಮನ್) ಅತಿ ದಟ್ಟ ಕಪ್ಪು-ಬಿಳುಪು ಚಿತ್ರಗಳು (ಹೈ ಕಾನ್ಟ್ರಾಸ್ಟ್) ಚಿತ್ರಗಳು, ಬರ್ಗ್ಮನ್ರ ಗುರುತಾದ ಅತೀ ಕ್ಲೋಸಪ್ ಚಿತ್ರಗಳು ಇಡೀ ಚಿತ್ರದುದ್ದಕ್ಕೂ ಕಂಡುಬರುತ್ತದೆ. ಹೆಚ್ಚಾಗಿ ಮಿಡ್ ಶಾಟ್ ಹಾಗೂ ಕೋಸಪ್ ಚಿತ್ರಗಳು ಅಪರೂಪಕ್ಕೆ ಮುದನೀಡುವ ಲಾಂಗ್ ಶಾಟ್ ಬರ್ಗ್ಮನ್ರ ಮೆಚ್ಚಿನ ಶೈಲಿ. ಈ ಚಿತ್ರದಲ್ಲೂ ಬರ್ಗ್ಮನ್ ಈ ತಂತ್ರವನ್ನು ಬಳಸಿದ್ದಾರೆ. ಇದರಿಂದ ೧೪ನೆಯ ಶತಮಾದದಲ್ಲಿ ಹರಡಿದ್ದ ಅಂಧಕಾರದ (Black Death) ಚಿತ್ರಣ ನೀಡುವಲ್ಲಿ ಸಫ಼ಲವಾಗುತ್ತದೆ. ಮಂಜು ಮುಸುಕಿದ ವಾತಾವರಣ, ದಟ್ಟ ಕಾಡುಗಳು, ಕೊಳಚೆ ಹಳ್ಳಿಗಳು ಎಲ್ಲೆಡೆ ಕವಿಯುತ್ತಿರುವ ಸಾವಿನ ಚಿತ್ರಣವನ್ನು ಚೆನ್ನಾಗಿ ಕಟ್ಟಿಕೊಡುತ್ತವೆ. ಚಿತ್ರದಲ್ಲಿ ಮ್ಯಾಕ್ಸ್ ವೋನ್ ಸ್ಯೋಡೊವ್ ಆಂತೋನಿಯೋಸ್ ಬ್ಲಾಕ್ ಎಂಬ ಮೃತ್ಯುವಿಗೆ ಸವಾಲನ್ನೆಸೆಯುವ ಸೈನಿಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಬೆನ್ಟ್ ಎಕೆರೊಟ್ ಮೃತುವಿನ ಪಾತ್ರದಲ್ಲಿ ಅವಿಸ್ಮರನೀಯ ನಟನೆ ನೀಡಿದ್ದಾರೆ. ಇವರೆಲ್ಲರ ಅವಿಸ್ಮರಣೀಯ ಅಭಿನಯವೂ ಚಿತ್ರವನ್ನು ಮೇಲಿನ ಮಜಲಿಗೊಯ್ಯುತ್ತವೆ.

ಚಿತ್ರದ ಬಗ್ಗೆ ಬರ್ಗ್ಮನ್ರ ಹೇಳಿಕೆ ಬಹಳ ಗಮನಾರ್ಹವಾದದ್ದು, “ಈ ಚಿತ್ರ ಸಾವಿನ ಕುರಿತಾದ ಹೆದರಿಕೆಯ ಬಗ್ಗೆ. ಈ ಚಿತ್ರ ನಿರ್ಮಿಸುವುದರಿಂದ ನಾನು ನನ್ನ ಸಾವಿನ ಕುರಿತಾದ ಭಯದಿಂದ ಹೊರ ಬಂದಿದ್ದೇನೆ” ಈ ಹೇಳಿಕೆ ನಮಗೆ ಅನ್ಟೋನಿಯೋ ಬ್ಲಾಕ್ ಹಾಗೂ ಸಾವಿನ ನಡುವೆ ಚರ್ಚಿನಲ್ಲಿ ನಡೆಯುವ ಸಂಭಾಷಣೆಯಲ್ಲಿ ವಿಷದವಾಗಿ ತಿಳಿದು ಬರುತ್ತದೆ. ಫ಼ಾದರ್ ಎಂದು ನಂಬಿ ಅನ್ಟೋನಿಯೋ ಸಾವಿಗೆ ತನ್ನ ಅಂತರಂಗವನ್ನು ಬಿಚ್ಚಿಡುತ್ತಾನೆ. ಎಲ್ಲವನ್ನೂ ಸಹನೆಯಿಂದ ಕೇಳಿದ ಸಾವು ಕೊನೆಗೆ ತನ್ನ ಮುಖವನ್ನು ಅನ್ಟೋನಿಯೋಗೆ ತೋರಿಸಿ, ನಿನ್ನೆಲ್ಲಾ ಭಯಗಳನ್ನು ನಾನು ಅರಿತಿದ್ದೇನೆ ಇನ್ನು ಅವುಗಳನ್ನು ನಾನು ನೆನಪಿಡುತ್ತೇನೆ ಎನ್ನುತ್ತದೆ. ನಮ್ಮ ಭಯಗಳೇ ಅಲ್ಲವೇ ನಮ್ಮನ್ನು ಕೊಲ್ಲುವುದು? ಇಡೀ ಚಿತ್ರದಲ್ಲಿ ಬರ್ಗ್ಮನ್ ಬದುಕಿನ ಮೌಲ್ಯವನ್ನು ವಿವರಿಸುತ್ತಾ ಧರ್ಮ, ಹೋರಾಟಗಳ ನಿಷ್ಪ್ರಯೋಜಕತೆಯನ್ನು ವಿವರಿಸುತ್ತಾರೆ. ಪ್ರಾಯಷಃ ಬಾಲ್ಯದಿಂದ ಕೇಳಿಕೊಂಡು ಬಂದ ಎಲ್ಲಾ ಧಾರ್ಮಿಕ ಪ್ರವಚನಗಳ, ಬೋಧನೆಗಳ ವಿರೋಧ ಇದು ಬರ್ಗ್ಮನ್ರ ಧನಿ ಎನ್ನಬಹುದು. ಒಂದೆಡೆ ಪ್ಲೇಗ್ನಿಂದ ಜನ ಸಾಯುತ್ತಿದ್ದರೆ, ಇನ್ನೊಂದೆಡೆ ಧರ್ಮ ಯುದ್ಧದಿಂದ ಜನ ಸಾಯುತ್ತಿದ್ದಾರೆ, ಇಂಥಾ ಸಂದರ್ಭದಲ್ಲಿ ಸಾವಿನಿಂದ ದೂರ ನಿಲ್ಲುವ, ಬದುಕಿನ ಮೌಲ್ಯವನ್ನರಿಯುವ ಅಗತ್ಯವನ್ನು ಬರ್ಗ್ಮನ್ ಈ ಚಿತ್ರದಲ್ಲಿ ಹೇಳುತ್ತಾರೆ. ದೇವರು ಎನ್ನುವುದು ಸಾವಿನ ಕುರಿತಾಗಿ ಮನುಷ್ಯರಿಗಿರುವ ಭಯದಿಂದ ಮುಕ್ತರಾಗಲು ಕಟ್ಟಿಕೊಂಡ ಒಂದು ಕಲ್ಪನೆ ಎನ್ನುವುದನ್ನು ಬರ್ಗ್ಮನ್ ಚಿತ್ರದ ಮೂಲಕ ಹೇಳುತ್ತಾರೆ.

೧೯೫೭ರಲ್ಲಿ ಕಾನ್ಸ್ ಚಿತ್ರೋತ್ಸವದಲ್ಲಿ ಜ್ಯೂರಿ ವಿಶೇಷ ಬಹುಮಾನ, ೧೯೬೨ರಲ್ಲಿ ಸ್ಪೈನ್ನ ಸಿನೆಮಾ ರೈಟರ್ಸ್ ಸರ್ಕಲ್ ಬಹುಮಾನ, ೧೯೬೨ರಲ್ಲಿ ಫೊಟೊಗ್ರಾಮ್ಸ್ ಡೆ ಪ್ಲಾಟ ಬಹುಮಾನ, ೧೯೬೧ರಲ್ಲಿ ಇಟಾಲಿಯನ್ ನ್ಯಾಶನಲ್ ಸಿಂಡಿಕೇಟ್ ಆಫ಼್ ಪಿ಼ಲ್ಮ್ ಜರ್ನಲಿಸ್ಟ್ ಗೌರವ ಸೆವನ್ತ್ ಸೀಲ್ ಚಿತ್ರಕ್ಕೆ ಸಂದಿರುತ್ತದೆ.

೧೪ನೆಯ ಶತಮಾನದಲ್ಲಿ ಸ್ವೀಡನ್ನಿನಲ್ಲಿದ್ದ ಸಾಮಾಜದ ಅನೇಕ ಹೊಳಹುಗಳು ಚಿತ್ರದ ಉದ್ದಕ್ಕೂ ಸಿಗುತ್ತವೆ. ಹೆಚ್ಚಾಗಿ ಮಾನವ ಸಂಬಂಧಗಳ ಸೂಕ್ಷ್ಮ ಎಳೆಯನ್ನು ಹಿಡಿದು ಕೆಲವೇ ಪಾತ್ರಗಳೊಂದಿಗೆ ಇಡೀ ಚಿತ್ರವನ್ನು ನಿರ್ಮಿಸುವ ಬರ್ಗ್ಮನ್ ಈ ಚಿತ್ರದಲ್ಲಿ ಸಾವು ಬದುಕಿನಂಥಾ ಅಧ್ಯಾತ್ಮಿಕ ವಿಷಯದ ಕುರಿತಾಗಿ ಮಾತನಾಡಿದ್ದಾರೆ. ಸಾವಿನೊಂದಿಗೆ ಚೆಸ್ ಆಟ, ಸಾವಿನೊಂದಿಗೆ ಕನ್ಫೆಷನ್, ಪದೇ ಪದೇ ದಿವ್ಯದರ್ಶನಗಳನ್ನು ಪಡೆಯುವ ನಟ, ಮಗನಿಗಾಗಿ ಸುಂದರ ಕನಸುಗಳನ್ನು ಕಾಣುವ ನಟನ ಹೆಂಡತಿ, ಮುಗ್ಧ ಕಮ್ಮಾರ ಇವರೆಲ್ಲರೂ ಬದುಕಿನ ವಿವಿಧ ಮುಖಗಳಾಗಿ ಚಿತ್ರ ಮುಗಿದ ಹಲಕಾಲ ನಮ್ಮೊಂದಿಗೆ ಇದ್ದು ಕಾಡುತ್ತಾರೆ, ನಮ್ಮೊಳಗೆ ಅವರನ್ನು ಕಂಡು ಇಹಲೋಕದ ಜಂಜಾಟಗಳಲ್ಲಿ ದಾರಿತೋರುತ್ತಾರೆ. ಹಾಗಾಗಿಯೇ ೧೯೫೭ರಲ್ಲಿ ನಿರ್ಮಾಣವಾದ ಈ ೧೪ನೆಯ ಶತಮಾನದ ಕಥೆ ಇಂದಿಗೂ ಮುಖ್ಯವಾಗುತ್ತೆ ಮತ್ತೆ ಮತ್ತೆ ನಮ್ಮನ್ನು ಕಾಡುತ್ತೆ.

This entry was posted in Film Craft. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s