‘ಭಾರತೀಯ ಸಿನೆಮಾ ಹಾಗೂ ಸ್ಕ್ರಿಪ್ಟ್ ರಚನೆ’ ಎಂಬ ಸಭೆಯೊಂದರಲ್ಲಿ ‘ರಂಗ್ ದೆ ಬಸಂತಿ’ ಚಿತ್ರಕ್ಕೆ ಕಥೆ ಬರೆದ ಕಮಲೇಶ್ ಪಾಂಡೆಯವರನ್ನು ಮಾತನಾಡುವುದನ್ನು ಕೇಳಿದ್ದೆ. ಒಂದು ಚಿತ್ರದ ಗಲ್ಲಾಪೆಟ್ಟಿಗೆ ಯಶಸ್ಸಿನ ನಂತರ ಆ ಚಿತ್ರ ಹೇಗಿದ್ದರೂ ಅದು ಶ್ರೇಷ್ಟವೇ ಸರಿ ಎಂಬ ಅಭಿಪ್ರಾಯ ಆ ಸಭೆಯಲ್ಲಿತ್ತು. ಯಾವುದೋ ಒಂದು ಎಂ.ಬಿ.ಎ ಕಾಲೇಜಿಗೆ ಹೋಗಿ ಚಿತ್ರವನ್ನು ತೋರಿಸಿದ್ದನ್ನೂ ಅದನ್ನು ನೋಡಿದ ಯುವಕರು ತಮ್ಮ ಪಾಸ್‍ಪೋರ್ಟ್‍ಗಳನ್ನು ಹರಿದು ಹಾಕಿದ್ದನ್ನೂ ಪಾಂಡೆಯವರು ವರ್ಣರಂಜಿತವಾಗಿ ವಿವರಿಸಿದರು. ಪರಿಣಾಮಕಾರಿ ಚಿತ್ರವೊಂದಕ್ಕೆ ವೀಕ್ಷಕರನ್ನು ಯೋಚನೆಗೆ ಹಚ್ಚುವ ಬದಲು ಒಂದು ಕ್ರಿಯೆಯನ್ನೇ ಪ್ರಚೋದಿಸುವ ಸಾಮರ್ಥ್ಯ ಇದೆ ಎನ್ನುವುದು ನಿಜ. ಆದರೆ ಆ ಸಾಮರ್ಥ್ಯವನ್ನು ರಂಗ್ ದೇ ಬಸಂತಿ ಚಿತ್ರದ ಶೈಲಿಯಲ್ಲಿ ಬಳಸಿದರೆ ಸಿನೆಮಾ ಒಂದು ಅಭಿವ್ಯಕ್ತಿ ಮಾಧ್ಯಮವಾಗದೆ, ಒಂದು ಕಲಾಕೃತಿಯಾಗಿರದೆ ಪ್ರೊಪಗಾಂಡಾ ಸಲಕರಣೆಯಾಗುವ ಅಪಾಯ ಇದೆ. ವಿಶ್ವ ಯುದ್ಧದ ವೇಳೆಗೆ ಹಿಟ್ಲರ್ ಕೂಡಾ ಇಂಥಾ ಚಿತ್ರಗಳನ್ನು ಮಾಡುತ್ತಿದ್ದದ್ದು, ಜರ್ಮನಿಯ ಆರಿಫ್ಲೆಕ್ಸ್ ಕಂಪನಿಯ ೧೬ ಎಮ್.ಎಮ್. ಕ್ಯಾಮರಾಗಳು ಹುಟ್ಟಿಸಿದ್ದ ಕ್ರಾಂತಿ ಇವೆಲ್ಲವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಇಂಥಾ ಒಂದು ಚಿತ್ರ ಹೇಳುತ್ತಿರುವುದೇನೆಂದು ನೋಡಿದರೆ ಅದು ದೇಶಭಕ್ತಿಯ ಹೆಸರಿನಲ್ಲಿ ಅದೇ ಕಲ್ಪನೆಯ ಮೂಲವನ್ನೇ ಅಲ್ಲಾಡಿಸುತ್ತದೆ. ದೇಶ ಗಣತಂತ್ರವಾದ ಮೇಲೂ ರಂಗ್ ದೇಯಲ್ಲಿ ಕಾಣುವ ಯುವಕರು ಒಬ್ಬ ಶಾಸಕನನ್ನು ಕೊಲ್ಲುವ ಮೂಲಕ ಹುತಾತ್ಮರಾಗುವ ಪ್ರಯತ್ನದಲ್ಲಿ ಹಾದಿ ತಪ್ಪಿದ ಪೆಡ್ಡೆಗಳಾಗಿ ಕಾಣುತ್ತಾರೆ. ಇಂದು ಹಿಂದೆಂದಿಗಿಂತಲೂ ಹೆಚ್ಚು ಜನಮನ ತಟ್ಟುವ ಸಾಮರ್ಥ್ಯವನ್ನು ಹೊಂದಿರುವ ಚಿತ್ರ ಮಾಧ್ಯಮವನ್ನು ಇನ್ನಷ್ಟು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬಹುದಾಗಿತ್ತೋ ಎಂದನಿಸುತ್ತದೆ. ಸ್ವಾತಂತ್ರ ಹೋರಾಟದ ಕ್ರಾಂತಿಕಾರಿಗಳನ್ನು ಮಾಮೂಲಿ ಪಡ್ಡೆ ಹುಡುಗರಂತೆ ಚಿತ್ರಿಸದಿರಬಹುದಾಗಿತ್ತು ಎಂದನಿಸುತ್ತದೆ.
ಕನ್ನಡದ ಖ್ಯಾತ ನಿರ್ದೇಶಕರಾದ ಸತ್ಯು ಅವರ ‘ಬರ’ ಚಿತ್ರವನ್ನು ತೋರಿಸಿ ಅದರ ಚರ್ಚೆ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಬರ ಚಿತ್ರ ಅದರ ಬಜೆಟ್ ಮಿತಿಗಳಿಂದಾಗಿ ತಾಂತ್ರಿಕವಾಗಿ ಸೊರಗಿದೆ. ಸ್ಕ್ರಿಪ್ಟ್ ಹೆಚ್ಚು ನೇರವಾಗಿ ಕಥೆಯನ್ನು ಹೇಳುತ್ತದೆ. ಕಥೆಯ ಸೌಂದರ್ಯವೇ ಇಲ್ಲಿ ಮುಖ್ಯವಾಗುತ್ತದೆಯೇ ಹೊರತು ಚಿತ್ರ ಮಾಧ್ಯಮದ ಸಾಧ್ಯತೆಯನ್ನು ಬಹಳವಾಗಿ ಶೋಧಿಸಲಿಲ್ಲ. ‘ಬರ’ ಕನ್ನಡ ಚಿತ್ರ ಇತಿಹಾಸದಲ್ಲಿ ನಿಲ್ಲುವಂಥ ಚಿತ್ರ, ಗಟ್ಟಿ ವಸ್ತುವಿನ ಚಿತ್ರ. ಆದರೆ ಇಂಥ ಚಿತ್ರ ಎದುರಿಸಬೇಕಾದದ್ದು ರಂಗ್ ದೇ ಬಸಂತಿಯಂಥಾ ಜನಪ್ರಿಯ ಧಾಟಿಯಲ್ಲಿ ಮಾಡಿದ ತಪ್ಪು ಚಿತ್ರಗಳನ್ನು. ಆಧುನಿಕ ತಂತ್ರಜ್ಞಾನವನ್ನು ಬಳಸಿ, ಹೊಸತನದೊಂದಿಗೆ ಒಳ್ಳೆಯ ಕವಚದಲ್ಲಿ ತಪ್ಪು ಸಂದೇಶವನ್ನು ರಂಗ್ ದೇ ಬಸಂತಿ ನೀಡುತ್ತದೆ. ಇದು ಅಮೀರ್ ಖಾನ್‍ನಂತಹ ತಾರೆಯ ಬೆಂಬಲ, ರೆಹಮಾನ್ ಸಂಗೀತದ ಓಘ, ವಿನೋದ್ ಪ್ರಧಾನ್ ಕ್ಯಾಮರಾ ಚಳಕ, ಹಿಂದಿ ಭಾಷೆಗೆ ಇರುವ ಸೌಕರ್ಯ ಇತ್ಯಾದಿಯಿಂದಾಗಿ ಭಾರತದ ಪ್ರತಿನಿಧಿಯಾಗಿ ಅಕಾಡೆಮಿ ಪ್ರಶಸ್ತಿಗೆ ಉಮೀದುದಾರನಾಗಿಯೂ ನಿಂತಿತ್ತು. ಕನ್ನಡ ಒಂದರಲ್ಲೇ ನೋಡಿದರೂ, ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ ಇತ್ಯಾದಿ ಅನೇಕ ಉತ್ತಮ ನಿರ್ದೇಶಕರ ಚಿತ್ರಗಳು ಬಜೆಟ್ಟಿನ ಕೊರತೆಯಿಂದಾಗಿ ತಾಂತ್ರಿಕವಾಗಿ ಸ್ವಲ್ಪ ಕೆಳಮಟ್ಟದಲ್ಲಿ ತಯಾರಾದದ್ದೇ ತಪ್ಪೆಂಬಂತೆ ಉತ್ಕೃಷ್ಟ ಗುಣಮಟ್ಟದ ಸರಕಿದ್ದೂ ಸದ್ದಡಗಿ ಸಪ್ಪಗಾಗುತ್ತವೆ. ನಮ್ಮ ವೈಚಾರಿಕತೆಯನ್ನು ನಿರಾಕರಿಸಿ ಕುರಿ ಮಂದೆಯಂತೆ ಮುನ್ನೂಕುವ ರಂಗ್ ದೇ ಬಸಂತಿಯಂಥಾ ಚಿತ್ರಗಳು ಭಾರತದ ಚಿತ್ರೋದ್ಯಮದ ಮುಖವಾಗಿ ನಿಲ್ಲುತ್ತವೆ. ಇದು ಸ್ವಾತಂತ್ರ್ಯದ ೬೦ನೆಯ ವರ್ಷದ ಸಂದರ್ಭದಲ್ಲಿ ಚಿತ್ರೋದ್ಯಮದ ದುರಂತ.
ನಿಮ್ಮ ವಾದ ಸರಿಯಾಗಿದೆ. ಪ್ರೇಕ್ಷಕನೇ ಕುರುಡಾಗಿದ್ದಾನೆಯೇ ಎಂಬ ಪ್ರಶ್ನೆ ಮೂಡುತ್ತಿದೆ.