ಯುಫೋರಿಯಾ ಒಂದು ಅನುಭವ


ವರ್ಷ ೧೯೯೮ರ ಅಂದಾಜಿಗೆ ಭಾರತದಲ್ಲಿ ಮ್ಯೂಸಿಕ್ ವೀಡಿಯೋಗಳ ಮಹಾಪೂರ ಆರಂಭವಾಯಿತು ಎನ್ನಬಹುದು. ಆ ಸಮಯದಲ್ಲಿ ಟಿ.ವಿಯಲ್ಲಿ ಬರುತ್ತಿದ್ದ ಒಂದು ವೀಡಿಯೋ `ಧೂಂ ಪಿಚಕ್ ಧೂಂ’. ಪಲಾಶ್ ಸೇನ್ ಎಂಬಾತನ ನೇತೃತ್ವದಲ್ಲಿ Euphoria ಎಂಬ ಕೆಲವು ಹುಡುಗರ ತಂಡ, ಪ್ರದೀಪ್ ಸರ್ಕಾರ್ ಎಂಬ ನಿರ್ದೇಶಕರ ನಿರ್ದೇಶನದಲ್ಲಿ ಈ ವೀಡಿಯೋ ತಯಾರಿಸಿತ್ತು. ಇನ್ನೂ ನಿಮ್ಮ ಮನಸ್ಸಿನಲ್ಲಿ ಅದು ಹಸಿರಾಗಿರಬಹುದು. ಮುಂದಿನ ವರ್ಷಗಳಲ್ಲಿ ಇದು ಭಾರತದ ಅತೀ ಪ್ರಸಿದ್ಧ ಬ್ಯಾನ್ಡ್‌ಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿತು. ಇನ್ಡಿಪಾಪ್ ಸಂಗೀತ ಈ ತಂಡದ ವಿಶೇಷ. ಪ್ರದೀಪ್ ಸರ್ಕಾರ್ `ಪರಿಣೀತಾ’ ಸಿನೆಮಾ ಮಾಡಿ ಇತ್ತೀಚೆಗೆ ಪ್ರಸಿದ್ಧರಾದರು. ನನ್ನ ಗಲ್ಲಿಗೆ ಒಮ್ಮೆ ಬಾರೇ… ಎಂದು Euphoria ತಂಡ ಹಾಡಿದಾಗ ಪ್ರದೀಪ್ ಸರ್ಕಾರ್ ಅದನ್ನು ಮತ್ತೊಮ್ಮೆ ಚಿತ್ರೀಕರಿಸಿದರು ಈ ಬಾರಿ ವಿದ್ಯಾ ಬಾಲನ್ ಎಂಬ ಬೊಗಸೆ ಕಣ್ಣಿನ ಹುಡುಗಿಯನ್ನು ನಾಯಕಿಯನ್ನಾಗಿಸಿದರು. ಈಕೆ ಮುಂದೆ ಪರಿಣೀತಳಾಗಿ ಸಧ್ಯ ಮುನ್ನಾ ಭಾಯಿಯ ಜೊತೆ ಸೇರಿ ಗುಡ್ ಮಾರ್ನಿಂಗ್ ಮುಂಬೈಯ್ ಎಂದು ಹೇಳುತ್ತಾ ಮತ್ತೆ ಬೆಳ್ಳಿ ಪರದೆಗೆ ಬಂದಿದ್ದಾಳೆ… ಹೀಗೆ Euphoria ಹಾಗೂ ಅದರ ಜೊತೆ ಸೇರಿದವರೆಲ್ಲಾ ಇಂದು ತಮ್ಮ ತಮ್ಮ ಕ್ಷೇತ್ರದಲ್ಲಿ ಒಂದು ಹಂತವನ್ನು ತಲುಪಿದ್ದಾರೆ. Euphria ಗಲಿ, ಮಂತ್ರ, ಮಾಯಿರೇ, ರಾಜಾ ರಾಣಿ, ಸೋನೇ ದೇ ಮಾ, ಶಾ ನಾ.. ಇತ್ಯಾದಿ ಹಾಡುಗಳಿಂದ ಪ್ರಸಿದ್ಧಿಯ ಒಂದೊಂದೇ ಮೆಟ್ಟಲು ಏರುತ್ತಾ ಹೋಯಿತು. ತಂಡದ ನಾಯಕ ಡಾಕ್ಟರ್ ಪಲಾಶ್ ಸೇನ್. ದೆಲ್ಲಿಯಲ್ಲಿ ನೆಲೆಸಿರುವ ಈ ಬೆಂಗಾಲಿ ಗಾಯಕ ಪಲಾಶ್ ಒಬ್ಬ ಡಾಕ್ಟರ್ ಕೂಡಾ ಹೌದು. ವಿದ್ಯಾರ್ಥಿ ದೆಸೆಯಲ್ಲೇ ಹಾಡುಗಾರಿಕೆಯ ಹುಚ್ಚು ಹಿಡಿಸಿಕೊಂಡ ಈತ ಮುಂದೆ ವೃತ್ತಿಪರನಾಗಿ ಗಾಯಕನಾದದ್ದು ಹಾಗೂ ಪ್ರವೃತ್ತಿಯಾಗಿ ಮಾತ್ರ ವೈದ್ಯಕೀಯ ಹಿಡಿದದ್ದು ಈಗ ಇತಿಹಾಸ. Euphoria ತಂಡದಲ್ಲಿ ಇಂದು ಏಳು ಜನರಿದ್ದಾರೆ. ಮುಖ್ಯ ಗಾಯಕನಾಗಿ ಪಲಾಶ್ ಇದ್ದರೆ, ಇಲೆಕ್ಟ್ರಿಕ್ ಗಿಟಾರಿನಲ್ಲಿ ಡಿ.ಜೆ, ಅಕಸ್ಟಿಕ್ ಗಿಟಾರಿನಲ್ಲಿ ಹಿತೇಶ್, ರಾಕೇಶ್, ಡ್ರಮ್ಸ್‌ನಲ್ಲಿ ಅಶ್ವಿನಿ, ತಬಲಾದಲ್ಲಿ ಪ್ರಶಾಂತ್ ಹಾಗೂ ಕೀ ಬೋರ್ಡ್ ವಾದಕನಾಗಿ ಬೆನಿ ಇದ್ದಾರೆ.

Film and Television Instituteನಲ್ಲಿ (FTII) ಮೂರುವರ್ಷದ ಅಧ್ಯಯನದಲ್ಲಿ ನಾವು ಅನೇಕ ಪ್ರಾಜೆಕ್ಟ್ ತಯಾರಿಸಬೇಕಾಗುತ್ತದೆ. ಇದರಲ್ಲಿ ಸಂಭಾಷಣೆ ಚಿತ್ರೀಕರಣ ಅಭ್ಯಾಸ ಇರಬಹುದು ಅಥವಾ ಸಾಹಸ ಚಿತ್ರೀಕರಣ ಇರಬಹುದು ಪ್ರತಿಯೊಂದೂ ರೋಮಾಂಚಕ ಅನುಭವ. ಬಾಲ್ಯದಿಂದ ಪರದೆಯಲ್ಲಿ ನೋಡಿ ಸಂತಸಪಡುವ ಈ ವಿಷಯಗಳಲ್ಲಿ ಸ್ವತಃ ತೊಡಗಿ, ಪ್ರಯೋಗ ಮಾಡುವುದು ನಮ್ಮದೇ ಒಂದು ಹೊಸ ಶೈಲಿಯನ್ನು ಹುಡುಕುವುದು ಇತ್ಯಾದಿ FTIIನಲ್ಲಿ ನಮ್ಮ ದಿನ ನಿತ್ಯದ ಕಾರ್ಯ. ಕಳೆದ ೪೫ ವರ್ಷಗಳಲ್ಲಿ FTII ಸಂಪಾದಿಸಿದ ಒಳ್ಳೆಯ ಹೆಸರಿನಿಂದಾಗಿ ಪ್ರಸ್ತುತ ವಿದ್ಯಾರ್ಥಿಗಳಾದ ನಮಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿರುತ್ತದೆ.

FTIIನಲ್ಲಿ ಮೂರನೆಯ ವರ್ಷದಲ್ಲಿ ಅಭ್ಯಾಸದ ಅಂಗವಾಗಿ ನಾವು ಒಂದು ಹಾಡಿನ ಚಿತ್ರೀಕರಣ ಮಾಡಬೇಕಾಗುತ್ತದೆ. ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ ಎಂದೇ ಹೇಳಬಹುದಾದ ಹಾಡಿನ ಚಿತ್ರೀಕರಣ ನಮ್ಮ ಅಧ್ಯಯನದ ಅಂಗವಾಗಿರುವುದು ವಿಶೇಷವೇನೂ ಅಲ್ಲವಷ್ಟೆ? ಇಲ್ಲಿ ಹಾಡನ್ನು ಆರಿಸುವ ಹಾಗೂ ಬೇಕಾದ ನಟರನ್ನು ಆಯ್ಕೆ ಮಾಡಿ ಚಿತ್ರೀಕರಿಸುವ ಸ್ವಾತಂತ್ರ್ಯವನ್ನು FTII ನಮಗೆ ನೀಡುತ್ತದೆ. ಇದರೊಂದಿಗೆ FTII ತನ್ನ ವಿದ್ಯಾರ್ಥಿಗಳಿಗೆ ಕೊಡುವ ಇನ್ನೊಂದು ವಿಶೇಷ ಕೊಡುಗೆಯೆಂದರೆ, ಆತ್ಮ ವಿಶ್ವಾಸ! ಎಂಥದ್ದೇ ಕಷ್ಟ ಸಮಯದಲ್ಲೂ ಹೋರಾಟ ನಡೆಸಿ ಚಿತ್ರ ತಯಾರಿಸುವ ಛಲ. ಮೂರನೇ ವರ್ಷದಲ್ಲಿ ನಾನು ಹಾಡಿನ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾಗ, ಶತಾವಧಾನಿ ಆರ್. ಗಣೇಶ್‌ರಿಂದ ವಿಶೇಷವಾಗಿ ಒಂದು ಬರೆದು ಕೊಡಲು ಕೇಳಿಕೊಂಡೆ. ಉದಾರ ಮನಸಿನಿಂದ ಗಣೇಶರು ಹಾಡನ್ನು ಬರೇದೂ ಕೊಟ್ಟರು. ಶಾಸ್ತ್ರೀಯ ಹಿನ್ನೆಲೆಯಲ್ಲಿದ್ದ ಆ ಅದ್ಭುತ ಹಾಡು ಅದ್ಭುತವಾಗಿತ್ತು. ಅದಕ್ಕೆ ಸಾಕಷ್ಟು ತಯಾರಿಯೂ ನಡೆದಿತ್ತು. ಆದರೆ ಚಿತ್ರೀಕರಣದ ಒಂದು ದಿನ ಮೊದಲಷ್ಟೇ ಚಿತ್ರೀಕರಣ ನಡೆಯಬೇಕಿದ್ದ ಜಾಗದಲ್ಲಿ ನಡೆದ ಸಣ್ಣದೊಂದು ಅವಘಡದಿಂದ ಇಡೀ ಚಿತ್ರೀಕರಣ ತಂಡ ಹಿನ್ನಡೆಯಬೇಕಾಯಿತು. ಕಾಲ ಸರಿಯಿತು. ನಾನು ಆ ಪ್ರಾಜೆಕ್ಟನ್ನು ಹಿಂದಿಟ್ಟು ಮುಂದಿನ ಪ್ರಾಜೆಕ್ಟನ್ನು ಕೈಗೆತ್ತಿಕೊಳ್ಳಬೇಕಾಯಿತು. ಅದರ ಚಿತ್ರೀಕರಣ ಮುಗಿದು ಮತ್ತೆ ಹಿಂದುಳಿದಿದ್ದ ಈ ಪ್ರಾಜೆಕ್ಟನ್ನು ಕೈಗಿತ್ತಿಕೊಳ್ಳುವಾಗ ನನ್ನ ತಂಡ ಹಿಂದಿನ ಉತ್ಸಾಹ ತೋರಲಿಲ್ಲ. ಹಿಂದಿನ ಬಾರಿ ಹಾಕಿದ್ದ ಪ್ರಯತ್ನ, ಅನುಭವಿಸಿದ್ದ ದುಃಖದಿಂದಾಗಿ ಮತ್ತೆ ಅದೇ ಹಾಡನ್ನು ಕೈಗೆತ್ತಿಕೊಳ್ಳಲು ನನಗೂ ಮನಸ್ಸಾಗಲಿಲ್ಲ. ಹೋಸತೇನಾದರೂ ಮಾಡುವ ಮನಸ್ಸೂ ಇತ್ತು.

ಇದೇ ಸಮಯದಲ್ಲಿ FTII ತಂಡದ ಹೊಸ ಆಲ್ಬಂ ‘मेहफूस’ ಬಿಡುಗಡೆಯಾಯಿತು. ಇದರ ಮೂರು ವೀಡಿಯೋ ಟಿ.ವಿಯಲ್ಲಿ ಬರಲೂ ಆರಂಭಿಸಿತು. ಅದರ ಸಂಗೀತ ನನಗೆ ತುಂಬಾ ಪ್ರಿಯವಾಯಿತು. ನಾನು ಪಿ.ಯೂ.ಸಿಯಲ್ಲಿ ಇದ್ದಾಗ ಕೇಳಿದ್ದ `ಧೂಂ ಪಿಚಕ್ ಧೂಂ’ ಮತ್ತೆ ನನ್ನೆದೆಯಾಳದಿಂದ ಕೇಳಿಸಿತು. ಇವರೊಂದಿಗೆ ಯಾಕೆ ಮುಂದಿನ ವೀಡಿಯೋ ಮಾಡಬಾರದೆಂದು ಅನ್ನಿಸಿತು. ನನ್ನ FTII ತಂಡಕ್ಕೆ ವಿಚಾರವನ್ನು ತಿಳಿಸಿದೆ. ಒಳ್ಳೆಯ ಐಡಿಯಾ ಆದರೆ ಇದು ಸಾಧ್ಯವಿಲ್ಲ. ಅವರು ಅಷ್ಟೊಂದು ದೊಡ್ಡ ತಂಡ, ಹೆಸರಾಂತ ತಂಡ. ನಾವೋ ಇನ್ನೂ ಕಣ್ಣೇ ತೆರೆಯದು ಕೂಸುಗಳು. ನಮ್ಮೊಂದಿಗೆ ಅವರು ಕೆಲಸ ಮಾಡಲು ಎಂದಾದರೂ ಒಪ್ಪುವುದುಂಟೇ ಎಂದು ಹೇಳಿದವರೇ ಹೆಚ್ಚು. ಆದರೆ, ನನ್ನ ಕ್ಯಾಮರಾ ಮ್ಯಾನ್ ವಿಕ್ರಂ, ಆತಂಕದಲ್ಲಿದ್ದರೂ ನೀನು ಪ್ರಯತ್ನ ಮಾಡುವುದಿದ್ದರೆ, ನಾನು ನಿನ್ನೊಂದಿಗಿದ್ದೇನೆ ಎಂದ. ಎಡಿಟರ್ ಅಭಿಜೀತ್ ದೇಶ್‌ಪಾನ್ಡೆ ಹಾಗೂ ಧ್ವನಿ ತಜ್ಞ ಅಜಿತ್‌ಕೂಡಾ ಜೊತೆ ಸೇರಿದರು. ಇನ್ನು ಹೆದರಿಕೆಯೇನು. ನಾನು ‘मेहफूस’ನಿಂದ ಎಲ್ಲಾ ಹಾಡುಗಳನ್ನು ಕೇಳಿ `ರಬ್ ಜಾನೇ…’ (रब जाने…) ಎಂಬ ಹಾಡನ್ನು ಆಯ್ಕೆ ಮಾಡಿದೆ.

ಭಾರತೀಯರಲ್ಲಿ ಅಡಗಿರುವ ದೈವ ಭಕ್ತಿಯ ಕುರಿತಾದ ಹಾಡು ಇದು. ನಾಳೇನಾಗುತ್ತೆ ಎನ್ನುವ ಭಯ ಇಲ್ಲದವರು ನಾವು ಎನ್ನುವ ಅರ್ಥ ಹಾಡಿನಲ್ಲಿದೆ. ದಿನ ನಿತ್ಯದ ವಿಷಯಗಳಲ್ಲಿ ದೇವರನ್ನು ಕಾಣುವುದು ಭಾರತೀಯರ ವೈಶಿಷ್ಟ್ಯ. ಇದನ್ನೇ ಅನೇಕ ಘಟನೆಗಳ ಶ್ರೇಣಿಯಾಗಿ ಚಿತ್ರೀಕರಿಸುವ ಯೋಜನೆಯನ್ನು ನಾನು ಹಾಕಿಕೊಂಡೆ. ಅದಕ್ಕೆ ಬೇಕಾದ ದೃಶ್ಯಗಳನ್ನು ಯೋಚಿಸಿ, ಅದನ್ನು ರೇಖಾ ಚಿತ್ರಗಳಲ್ಲಿ ಇಳಿಸಿ, ಕ್ಷಣ ಕ್ಷಣದ ವಿವರ ಬರೆದು ನನ್ನ ಹಿಂದಿನ ಕೆಲಸಗಳ ಸಂಗ್ರಹವನ್ನು ಹಿಡಿದುಕೊಂಡು ದೆಲ್ಲಿಗೆ ಓಡಿದೆ.

ಮೊದಲೇ ಆಯೋಜಿಸಿದ್ದಂತೆ ಪಲಾಶ್ ಸೇನ್ ಮನೆಯಲ್ಲಿ ನಾವು ಒಟ್ಟಾದೆವು. ಅಲ್ಲಿ ನಾನು ತಯಾರಿಸಿದ ಎಲ್ಲಾ ವಿವರಗಳನ್ನು ಬಿಚ್ಚಿಟ್ಟೆ. ಪಲಾಶ್, ಹಿತೇಶ್ ಹಾಗೂ ಬೆನಿ ಸೇರಿ ಸಾಕಷ್ಟು ಕಾಲ ನನ್ನೊಂದಿಗೆ ಮಾತು ಕಥೆ ನಡೆಸಿದರು. ಕೊನೆಗೆ ಅವರು ನನ್ನೊಂದಿಗೆ ಕೆಲಸ ಮಾಡಲು ಒಪ್ಪಿದರು! ಮರುದಿನ ನಾನು ಪೂನಾಕ್ಕೆ ವಾಪಾಸಾದೆ. ವಿಷಯ ತಿಳಿದು ಗೆಳೆಯರೆಲ್ಲಾ ಸಂತೋಷಪಟ್ಟರು. ಯುಫೋರಿಯಾವನ್ನೇನೋ ಒಪ್ಪಿಸಿ ಆಯಿತು. ಆದರೆ ಮುಂದೆ ಹೇಗೆ ಏನು ಎಂಬುದು ಭಯವಾಗಿ ಕಾಡಲಾರಂಭಿಸಿತು ನನಗೆ ಹಾಗೂ ನನ್ನಿಡೀ ತಂಡಕ್ಕೆ. ನೀರಿಗಿಳಿದ ಮೇಲೆ ಚಳಿಯೇನು ಮಳೆಯೇನು ಎಂದು ಮುನ್ನುಗ್ಗಿದೆವು. ಒಂದೇ ವಾರದ ಅವಧಿಯಲ್ಲಿ ನಮ್ಮೆಲ್ಲಾ ತಯಾರಿ ನಡೆಯಬೇಕಿತ್ತು. ಕೆಲಸ ಬಹಳ ಇತ್ತು. ಈ ಸಂದರ್ಭದಲ್ಲಿ ನನ್ನ ತಂಡ ಹಿಂದೆ ನಿಂತು ನೀಡಿದ ಬೆಂಬಲ ನಾನು ಎಂದೂ ಮರೆಯುವಂತಿಲ್ಲ. ದೆಲ್ಲಿಯಲ್ಲೇ ಇದ್ದ ನನ್ನ ಸಹಾಯಕ ನಿರ್ದೇಶಕ ತುಶಾರ್ ತನ್ನ ಕೆಲಸ ಬಿಟ್ಟು ಪೂನಾಕ್ಕೆ ಮರಳಿದ. ವಿಕ್ರಂ ಕ್ಯಾಮರಾ, ಲೈಟಿಂಗ್ ಇತ್ಯಾದಿ ವಿಷಯಗಳಲ್ಲಿ ತೊಡಗಿಸಿಕೊಂಡ, ಅಭಿಜೀತ್ ಹಾಗೂ ಅಜಿತ್ ನನಗೆ ಪ್ರೊಡಕ್ಷನ್ನಿನಲ್ಲಿ ಸಹಾಯ ಮಾಡಿದರು.

ಅಂತೂ ಆಗಸ್ಟ್ ೨೯ರ ಸಂಜೆಗೆ ದೆಲ್ಲಿಯಿಂದ Euphoriaಪೂನಾಕ್ಕೆ ಬಂದಿಳಿಯಿತು. ನನ್ನ ತಂಡದ ಆತಂಕ ಅಷ್ಟಿಷ್ಟಲ್ಲ. ಮೂರು ಕಾರುಗಳಲ್ಲಿ ತಂಡದ ಸದಸ್ಯರು, ಒಂದು ಬಸ್ಸ್ ಪೂರ್ತಿ ಅವರ ಉಪಕರಣಗಳು ಹೀಗೆ ಬಂದಿಳಿದ ತಂಡವನ್ನು ಸ್ವಾಗತಿಸಿ ಅವರ ಹೋಟೇಲಿಗೆ ಬಿಟ್ಟು ಮರಳಿದಾಗ ವಿದ್ಯಾರ್ಥಿಗಳಾದ ನಮ್ಮ ಆತಂಕ ಹೇಳಿತೀರದು! ಆದರೆ ಹುಚ್ಚು ಧೈರ್ಯ ಬಿಡಲಿಲ್ಲ. ಮರುದಿನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆವಲ್ಲಾ, ಇನ್ನು ನಮ್ಮನ್ನು ತರಬೇತು ಮಾಡಿರುವುದೇ ಇಂಥಾ ಸಂದರ್ಭಗಳಿಗಾಗಿ ಎಂದು ನಮ್ಮೋಳಗೆ ಧೈರ್ಯ ತುಂಬಿಕೊಂಡು ಮುಂದುವರೆದೆವು.

ಮರುದಿನ ಬೆಳಿಗ್ಗೆ `ನಿವಾರಾ’ ಎಂಬ ವೃದ್ಧಾಶ್ರಮದಲ್ಲಿ ಚಿತ್ರೀಕರಣ ಆರಂಭವಾಯಿತು. ಸಮಯಕ್ಕೆ ಸರಿಯಾಗಿ ತಂಡ ಕಾರುಗಳಲ್ಲಿ ಬಂದು ಚಿತ್ರೀಕರಣ ಸ್ಥಳದಲ್ಲಿ ಇಳಿಯಿತು. ನಾವು ಆಗಲೇ ರೆಡಿಯಾಗಿ ಕುಳಿತಿದ್ದೆವು. ಅನೇಕ ಮಾಧ್ಯಮ ಸಂಸ್ಥೆಗಳು ಬಂದು ನನ್ನ ಸಂದರ್ಶನ ಆರಂಭಿಸಿದ್ದವು. ಮೊದಲ ಬಾರಿಗೆ ಮಾಧ್ಯಮದ ನೇರನೋಟಕ್ಕೆ ನಾನು ನಾಚಿಹೋಗಿದ್ದೆ. ಇದರೊಂದಿಗೆ ಹೆಗಲ ಮೇಲೆ ಬಿದ್ದಿರುವ ಹೊಣೆಯ ಅರಿವಿನಿಂದ ತಗ್ಗಿಯೂ ಹೋಗುತ್ತಿದ್ದೆ. ಅಷ್ಟರಲ್ಲಿ ಬಳಿಗೆ ಬಂದ ಪಲಾಶ್ ಹೆದರಬೇಡ, ನೀನು ನಿರ್ದೇಶಕ, ನಾವೆಲ್ಲಾ ನಿನ್ನ ಕೈ ಗೊಂಬೆಗಳು. ಹೇಳು ನಾವೇನು ಮಾಡಬೇಕು ಎಂದರು. ಇದು ನನ್ನಲ್ಲಿ ಹತ್ತಾನೆಯ ಬಲ ಕೊಟ್ಟಿತು. ಎಂಥಾ ದೊಡ್ಡ ಗುಣ ಎಂದು ಅನ್ನಿಸಿತು ನನಗೆ. ಮುಂದೆ ಎರಡು ದಿನ ಶೂಟಿಂಗ್ ನಿರಾತಂಕವಾಗಿ ನಡೆಯಿತು. ಪೂನಾದಲ್ಲಿರುವ ಕಲ್ಮಾಡಿ ಕನ್ನಡ ಮಾಧ್ಯಮ ಶಾಲೆಯಲ್ಲಿ, FTII ಕ್ಯಾಂಪಸ್ಸಿನಲ್ಲಿ, ಇಲ್ಲಿನ ಹನುಮಾನ್ ತೇಕಡಿಯಲ್ಲಿ ಹೀಗೆ ಅನೇಕ ಸ್ಥಳಗಳಲ್ಲಿ ಒಟ್ಟು ಮೂರು ದಿನ ನಿರಂತರವಾಗಿ ಚಿತ್ರೀಕರಣ ನಡೆಯಿತು. ಇದು ಯುಫೋರಿಯಾವನ್ನು ಇನ್ನಷ್ಟು ಹತ್ತಿರದಿಂದ ನೋಡಲು ನನಗೆ ಅವಕಾಶ ನೀಡಿತು. ಅವರ ಹೆಸರಿನ ಬಲದಿಂದ ಮಾಧ್ಯಮಗಳಲ್ಲಿ ನಮ್ಮ ಹೆಸರೂ ಮಿಂಚಿತು. ಇನ್ನೇನು ಸಿನೆಮಾ ರಂಗಕ್ಕೆ ಇಳಿಯಲಿರುವ ನನಗೆ ಹಾಗೂ ನನ್ನ ತಂಡಕ್ಕೆ ಇನ್ನಷ್ಟು ಬೆಂಬಲ ಹಾಗೂ ಆತ್ಮ ವಿಶ್ವಾಸ ನೀಡಿದಂತಾಯಿತು ಯುಫೋರಿಯಾದ ಈ ಪ್ರೋತ್ಸಾಹದಿಂದ.

ಹಿರಿಯ ವ್ಯಕ್ತಿಗಳ ಹಿರಿತನದ ಕಥೆಯಗಳನ್ನು ನಾವು ಆಗೀಗ ಕೇಳುತ್ತಿರುತ್ತೇವೆ. FTII ಮೂಲಕ ನನಗೆ ಇಂಥಾ ಒಂದು ಸನ್ನಿವೇಷದ ಭಾಗವಾಗುವ ಅವಕಾಶ ಒದಗಿ ಬಂತು. ಪಲಾಶ್ ತನ್ನ ಒಂದು ಸಂದರ್ಶನದಲ್ಲಿ ಸ್ವತಃ ಹೀಗೆ ಹೇಳಿದರು, “ FTII ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ!” ಕಾರಣ ಏನೇ ಇದ್ದರೂ ಮುಂದೆ ನಾನು ಎಷ್ಟೇ ಚಿತ್ರಗಳನ್ನು ನಿರ್ದೇಶಿಸಿದರೂ, ನನ್ನ ಮೊದಲ ಹೆಜ್ಜೆಗಳನ್ನಿಡಲು ಸಹಕರಿಸಿದ ಇಂಥಾ ವ್ಯಕ್ತಿಗಳನ್ನು ಮರೆಯುವುದು ಸಾಧ್ಯವೇ ಇಲ್ಲ. ಇದನ್ನು ನೋಡಿ ನೀವೆಲ್ಲಾ ನಮ್ಮೆಲ್ಲರ ಆನಂದದಲ್ಲಿ ಭಾಗಿಗಳಾಗುವಿರೆಂದು ಭಾವಿಸಿದ್ದೇನೆ.

This entry was posted in Daily Blog. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s