ಕಲೆಯಲ್ಲಿ ಶೀಲ-ಅಶ್ಲೀಲದ ಬಗ್ಗೆ ಚರ್ಚೆ ಬಹಳ ಕಾಲದಿಂದ ನಡೆಯುತ್ತಲೇ ಬಂದಿದೆ. ಚಲನಚಿತ್ರವೂ ಈ ಪ್ರಶ್ನೆಗಳಿಗೆ ಹೊರತಾಗಿಲ್ಲ. ದೇಹವನ್ನು ಹೇಗೆ ತೋರಿಸಲಾಗುತ್ತದೆ ಮತ್ತು ಹಾಗೆ ತೋರಿಸುವುದರ ಉದ್ದೇಶವನ್ನು ಆಧರಿಸಿ ಈ ಚರ್ಚೆಯ ಎರಡು ಮುಖಗಳೆಂದರೆ ಕಲಾತ್ಮಕ (Art) ಅಥವಾ ಅಶ್ಲೀಲ ಚಿತ್ರ (Pornography). ಉದ್ದೇಶ ಸರಿಯಾಗಿದ್ದಲ್ಲಿ ಕಲೆಯಲ್ಲೂ ಆ ಉದ್ದೇಶ ಕಂಡುಬರುವುದರಿಂದ ಅದು ಅಶ್ಲೀಲ ಎನಿಸುವುದಿಲ್ಲ. ನೋಡುವಾಗ ಅಸಹ್ಯ ಎನಿಸಿದರೂ, ಅಶ್ಲೀಲ ಎನಿಸಿದರೂ ಅವು ಹುಟ್ಟಿಸುವ ಧ್ವನಿಗಳಿಂದಾಗಿ ಅವು ಕೇವಲ ಕಾಮ ಪ್ರಚೋದಕ ವಸ್ತುವಾಗದೆ ಮೇಲಿನ ಮಟ್ಟಕ್ಕೇರುತ್ತವೆ. ಇಂಥಾ ಒಂದು ಚಿತ್ರ ‘ಇನ್ ದಿ ರೆಲ್ಮ್ ಆಫ್ ಸೆನ್ಸಸ್’ (೧೯೭೬ರಲ್ಲಿ ತಯಾರಾದ ಈ ಚಿತ್ರಕ್ಕೆ ‘ಎಂಪರರ್ ಆಫ್ ಸೆನ್ಸಸ್’ ಇತ್ಯಾದಿ ಇತರ ಹೆಸರುಗಳೂ ಬಳಕೆಯಲ್ಲಿ ಇವೆ).
ಚಿತ್ರದ ಉದ್ದಕ್ಕೂ ಅತಿ ಎನ್ನಿಸುವಂಥಾ ಸಂಭೋಗದ ವಿವರಗಳನ್ನು ನಿರ್ದೇಶಕ ತೋರಿಸುತ್ತಾ ಹೋಗುತ್ತಾರೆ (ಒಶಿಮಾ ನಗಸಕಿ). ೧೯೩೬ನೇ ಇಸವಿಯ ಟೋಕಿಯೋದಲ್ಲಿ ನಡೆಯುವ ಈ ಕಥೆ ‘ಸದಾ ಅಬೆ’ ಎನ್ನುವ ಮಾಜೀ ವೇಶ್ಯೆ ಹಾಗೂ ಆಕೆಯ ಪ್ರೇಮಿಯದ್ದು. ಕಥೆ ನಡೆಯುವ ಸಮಯದಲ್ಲಿ ಸದಾ ಅಬೆ ಟೋಕಿಯೋದ ಒಂದು ಹೋಟೇಲಿನಲ್ಲಿ ಕೆಲಸ ಮಾಡಿಕೊಂಡಿರುತ್ತಾಳೆ. ಹೋಟೇಲಿನ ಮಾಲಿಕ ಕಿಚಿಜೂಗೂ ಸದಾಳಿಗೂ ಪ್ರೇಮಾಂಕುರವಾಗುತ್ತದೆ. ಈ ಪ್ರೇಮದ ಮೂಲ ಇರುವುದು ಅವರಿಬ್ಬರ ಉತ್ಕಟ ಕಾಮದಲ್ಲಿ. ಇವರದ್ದು ತೀರಾ ದೈಹಿಕವಾದ ಪ್ರೇಮ. ಅತಿಶಯವಾದ ಮಧ್ಯಪಾನ, ಲೈಂಗಿಕ ಕ್ರಿಯೆಯಲ್ಲಿ ವಿವಿಧ ಪ್ರಯೋಗಗಳು, ವಿಕಾರಗಳು ಇತ್ಯಾದಿ ಅನೇಕ ಆಯಾಮಗಳನ್ನು ಹೊಂದಿರುತ್ತದೆ. ಸದಾ ತನ್ನ ಪ್ರಿಯಕರ ತನ್ನ ಪತ್ನಿಯೊಂದಿಗೆ ಇರುವುದನ್ನೂ ಸಹಿಸಲಾರದ ಹಂತ ತಲಪುತ್ತಾಳೆ. ತನ್ನನ್ನು ಬಿಟ್ಟು ಇತರ ಸ್ತ್ರೀಯರೆಡೆಗೆ ಗಮನ ಹರಿಸಿದರೆ ಕೊಲ್ಲುವ ಬೆದರಿಕೆಯನ್ನೂ ಆಕೆ ಒಡ್ಡುತ್ತಾಳೆ. ಚಿತ್ರ ಮುಖ್ಯವಾಗಿ ಇವರ ವಿಕಾರ ಎನ್ನಬಹುದಾದ ಆದರೆ ಉತ್ಕಟ ಕಾಮದ ಆಟಗಳನ್ನು ತೋರಿಸುತ್ತಾ ಇವರ ಸಂಬಂಧದ ಬೆಳವಣಿಗೆಯನ್ನು ತೋರಿಸುತ್ತಾ ಹೋಗುತ್ತದೆ. ಇಂಥಾ ಒಂದು ಸಂದರ್ಭದಲ್ಲಿ ಕಿಚಿಜೂ ಕಾಮದಾಟದಲ್ಲಿ ಆತನ ದೇಹಕ್ಕೆ ನೋವುಂಟು ಮಾಡಿದರೆ ವಿಕೃತ ಸಂತೋಷ ಸಿಗುವುದನ್ನು ಕಂಡುಕೊಳ್ಳುತ್ತಾನೆ. ಇದರಿಂದ ಆತ ಸದಾಳಿಗೆ ತನ್ನನ್ನು ಹಿಂಸಿಸಲು ಅವಕಾಶ ಕೊಡುತ್ತಾನೆ. ಈ ಹಿಂಸೆ ಬೆಳೆಯುತ್ತಾ ಸಾಗುತ್ತದೆ. ಇವರ ಸಂಬಂಧ ಶಿಖರದಲ್ಲಿರಬೇಕಾದರೆ, ಹಿಂಸೆಯೂ ಶಿಖರಪ್ರಾಯವಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಈ ಪ್ರೇಮಿಗಳು ಉತ್ಕಟತೆಯ ಉತ್ತುಂಗದಲ್ಲಿ ಇದ್ದಾಗ ಪ್ರಿಯತಮೆ ಹರಿತವಾದ ಚೂರಿಯೊಂದನ್ನು ತೆಗೆದುಕೊಂಡು ನಿಧಾನಕ್ಕೆ ತನ್ನ ಪ್ರಿಯಕರನ ಜನನಾಂಗವನ್ನೇ ಕತ್ತರಿಸುತ್ತಾಳೆ! ಆತ ರಕ್ತಸ್ತ್ರಾವ ಹಾಗೂ ನೋವಿನಿಂದ ನರಳುತ್ತಾ ಸಾಯುತ್ತಾನೆ. ಆತನ ನರಳಾಟವನ್ನು ಸದಾ ಅಲೌಕಿಕ ಸಂತೋಷದ ಅನುಭವ ಎಂದು ತಿಳಿಯುತ್ತಾಳೆ. ಆತ ಸತ್ತಿರುವುದು ಆಕೆಯ ಅರಿವಿಗೇ ಬರುವುದಿಲ್ಲ. ಆಕೆ ಆತನ ಎದೆಯ ಮೇಲೆ “ಸದಾ ಹಾಗೂ ಕಿಚಿ ಈಗ ಒಂದಾದರು” ಎಂದು ಆತನದೇ ರಕ್ತ ಬಳಸಿ ಬರೆಯುತ್ತಾಳೆ! ಪ್ರಜ್ಞೆಯಾಚಿನ ಹುಚ್ಚುತನದ ದರ್ಶನ ಇಲ್ಲಿ ನಮಗಾಗುತ್ತದೆ. ಅನೇಕ ವಿಮರ್ಷಕರು ಈ ಚಿತ್ರವನ್ನು ಜಪಾನೀ ಸಂಸ್ಕೃತಿಯಲ್ಲಿ ಅಡಗಿರುವ ವಿಕೃತ ಕಾಮದ ಚಿತ್ರಣ ಈ ಚಿತ್ರ ಎಂದು ವಿಶ್ಲೇಷಿಸುತ್ತಾರೆ.
ಅಸಹ್ಯ ಎನ್ನುವಷ್ಟು ವಿಕಾರ ಸಂಭಾಷಣೆಗಳು, ದೃಶ್ಯಗಳು ಈ ಸಿನೆಮಾದ ತುಂಬಾ ಇವೆ. ಇದನ್ನು ಒಂದು ವಿಧದಲ್ಲಿ ನೋಡಿದರೆ ಇದು ಅಶ್ಲೀಲ ಎಂದು ತಿರಸ್ಕರಿಸಬಹುದು. ಆದರೆ ಅದೇ ಸಂದರ್ಭದಲ್ಲಿ ಸಿನೆಮಾ ಮಾಧ್ಯಮದ ಶಕ್ತಿಯೆಂದರೆ, ಅದು ತಾನು ಬಳಸುವ ಶಬ್ದ ಹಾಗೂ ಚಿತ್ರಗಳ ಮೂಲಕ ಕಟ್ಟಿಕೊಡುವ ಭಾವನೆಗಳ ಪದರಗಳು. ಚಿತ್ರ, ಧ್ವನಿ ಹಾಗೂ ಸಂಕಲನಗಳ ಸಹಾಯದಿಂದ ಈ ಚಿತ್ರ ಕಾಮದ ವಿಕಾರ ರೂಪದ ದರ್ಶನ ನಮಗೆ ಮಾಡಿಸುತ್ತದೆ. ಇದಕ್ಕೆ ನಿಜ ಘಟನೆಯ ಹಂದರವನ್ನು ಬಳಸಿರುವುದರಿಂದಾಗಿ ಒಂದು ನಂಬಲರ್ಹ ಕಥನ ನಮಗೆ ದೊರೆಯುತ್ತದೆ. ಈ ಗುಣಗಳನ್ನು ಹೊಂದಿದ ಸಿನೆಮಾವು ಒಂದು ಕಲಾಕೃತಿಯಾಗಿ ಯಶಸ್ವಿಯಾಗುತ್ತದೆ. ಇಲ್ಲವಾದರೆ ಕೇವಲ ಭಾವನೆಗಳನ್ನು ಕೆರಳಿಸುವ (Titillating) ಸಾಹಿತ್ಯವಾಗಿ ಉಳಿದುಬಿಡುತ್ತದೆ, ಸಮಾಜದ ಒಂದು ವಿಕಾರವಾಗಿ ಕಾಣುತ್ತದೆ.
ನಾವು ಒಂದು ಸಂಸ್ಕಾರದ ಚೌಕಟ್ಟಿನಲ್ಲಿ ನಿಂತು ಕಲಾಕೃತಿಯೊಂದನ್ನು ನೋಡುತ್ತಿರುವಾಗ ಬೇರೆ ಬೇರೆ ಭಾವನೆಗಳು ಮೂಡುವುದು, ಅರ್ಥಗಳು ಹೊರಡುವುದು ಯಾವುದೇ ಉತ್ತಮ ಕಲಾಕೃತಿಯ ಗುಣವಾಗಿದೆ. ‘ಇನ್ ದ ರೆಲ್ಮ್ ಆಫ್ ಸೆನ್ಸಸ್’ನಂಥಾ ಚಿತ್ರವು ಮುಟ್ಟುತ್ತಿರುವಂಥಾ ವಿಷಯದ ಕುರಿತಾಗಿ ಬಹುತೇಕ ಎಲ್ಲಾ ದೇಶಗಳಲ್ಲೂ ತೀವ್ರವಾದ ನಿಲುವುಗಳಿರುವುದರಿಂದ ಇದರ ಕುರಿತಾಗಿ ಮೂಡಿಬರುವ ಅಭಿಪ್ರಾಯಗಳೂ ತೀರಾ ತೀಕ್ಷ್ಣವಾಗಿಯೇ ಇರುತ್ತವೆ. ಈ ಚಿತ್ರವು ಚಿತ್ರೀಕರಣ ನಡೆಯುತ್ತಿದ್ದಾಗ ಜಪಾನಿನಲ್ಲಿ ಆದ ಪ್ರತಿಭಟನೆಯಿಂದಾಗಿ ಚಿತ್ರೀಕರಿಸಿದ ರೀಲುಗಳನ್ನು ಫ್ರಾನ್ಸ್ ದೇಶಕ್ಕೆ ಒಯ್ದು ಅಲ್ಲಿ ಸಂಸ್ಕರಿಸಿ, ಸಂಕಲಿಸಲಾಯಿತು. ಚಿತ್ರ ಬಿಡುಗಡೆಯಾದಾಗ ಅದು ಅನೇಕ ದೇಶಗಳಲ್ಲಿ ಬಹಿಷ್ಕೃತವಾಯಿತು. ಕಾಮಪ್ರಚೋದಿ ಎಂದು ಹಣೆ ಪಟ್ಟಿ ಇದಕ್ಕೆ ಬಂತು. ಜರ್ಮನಿಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಾಗ Pornography ಎಂದು ಮುಟ್ಟುಗೋಲಾಯಿತು. ಬ್ರಿಟೀಷ್ ಆರ್ಖೈವ್ ಬಹಳ ವರ್ಷ ಇದನ್ನು ಪರಿಗಣಿಸಲೇ ಇಲ್ಲ. ಆದರೆ ನಿಧಾನಕ್ಕೆ ಆ ಎಲ್ಲಾ ದೇಶಗಳು ಇದನ್ನು ಒಂದು ಕಲಾಕೃತಿ ಎಂದು ಒಪ್ಪಿಕೊಂಡವು. ಈ ಚಿತ್ರವನ್ನು ಕಳೆದಬಾರಿ ಭಾರತದ ಯಾವುದೋ ಚಿತ್ರೋತ್ಸವದಲ್ಲಿ ನಾನು ನೋಡಿ ಚಿತ್ರಮಂದಿರದಿಂದ ಹೊರಗೆ ಬರುವಾಗ ನಮ್ಮ ವೀಕ್ಷಕರ ಪ್ರತಿಕ್ರಿಯೆಯೂ ಮುಜುಗರದ್ದೇ ಆಗಿತ್ತು. ಹೆಚ್ಚು ಚರ್ಚೆಯೂ ನಡೆಯಲಿಲ್ಲ. ಇಷ್ಟೆಲ್ಲಾ ತೀಕ್ಷ್ಣವಾದ ಪ್ರತಿಕ್ರಿಯೆಯ ಹೊರತಾಗಿಯೂ ಇಂದು ಈ ಚಿತ್ರ ‘ಕ್ಲಾಸಿಕ್’ ಎಂಬುದರ ಬಗ್ಗೆ ವಿಮರ್ಷಕರಲ್ಲಿ ಏಕ-ಅಭಿಪ್ರಾಯವಿದೆ.
ಈ ಚಿತ್ರವನ್ನು ನಿರ್ದೇಶಿಸಿದ ಒಶಿಮ ನಗಸಕಿ ಜಪಾನಿನ ಪ್ರಮುಖ ನಿರ್ದೇಶಕರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ನೈಟ್ ಆಂಡ್ ಫಾಗ್, ಜಪಾನಿಸ್ ಸಮ್ಮರ್, ಡೈರಿ ಆಫ್ ಅ ಸಿಂಜುಕು ಥೀಫ್, ಬ್ಯಾಟಲ್ ಆಫ್ ತ್ಸುಶಿಮಾ, ಇನ್ ದ ರೆಲ್ಮ್ ಆಫ್ ಪ್ಯಾಶನ್ ಹೀಗೆ ವಿವಿಧ ಪ್ರಬೇಧಗಳ ಉತ್ಕೃಷ್ಟ ಕೃತಿಗಳನ್ನು ನೀಡಿದ್ದಾರೆ. ಅನೇಕ ಪ್ರಮುಖ ಚಿತ್ರೋತ್ಸವಗಳಲ್ಲಿ ಇವರು ಜ್ಯೂರಿಯಾಗಿಯೂ ಇದ್ದರು. ಇವರ ಉತ್ತಮ ಕೃತಿಗಳಲ್ಲಿ ‘ಇನ್ ದ ರೆಲ್ಮ್ ಆಫ್ ಸೆನ್ಸಸ್’ ಕೂಡಾ ಒಂದಾಗಿ ಸೇರುತ್ತದೆ.
ಸಲಿಂಗಕಾಮದಂಥಾ ಅನೈಸರ್ಗಿಕ (ಅಸಾಮಾಜಿಕ?) ವಿಷಯಗಳು ಸಮಾಜದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕಾದರೆ ಅನೇಕ ಶತಮಾನಗಳೇ ಕಳೆದವು. ಇಂದಿಗೂ ಅನೇಕ ದೇಶಗಳಲ್ಲಿ ಈ ಚರ್ಚೆಗಳು ನಿಶಿದ್ಧವಾಗಿಯೇ (Taboo) ಉಳಿದಿವೆ. ಇಂಥಾ ಸಂದರ್ಭದಲ್ಲಿ ‘ಇನ್ ದ ರೆಲ್ಮ್ ಆಫ್ ಸೆನ್ಸಸ್’ನಂಥಾ ಚಿತ್ರ ಪಡೆಯುವ ಪ್ರತಿಕ್ರಿಯೆ ತೀರಾ ನಿರೀಕ್ಷಿತ. ಸಮಾಜದಲ್ಲಿ ಇಂಥಾ ಒಂದು ಸಂಭಾಷಣೆಯನ್ನು ಆರಂಭಿಸುವ ನೈತಿಕ ಜವಾಬ್ದಾರಿಯೂ ಉತ್ತಮ ಕಲಾಕೃತಿಗೆ ಇರುತ್ತದೆ (ಅದು ನೀತಿ ಬೋಧಕವಾಗಬೇಕಾಗಿಲ್ಲ). ಇಂಥಾ ಸಂಭಾಷಣೆ ಆರಂಭವಾದಾಗ ಜನ ಹೆಚ್ಚು ಮುಕ್ತರಾಗುತ್ತಾ ಹೋಗುತ್ತಾರೆ. ಇದು ಕಲೆಗೆ ಇರುವ ಸಾಮರ್ಥ್ಯ. ಯಾವುದೇ ಸಮಾಜದಲ್ಲೂ ಶೀಲ-ಅಶ್ಲೀಲ ನೀತಿ-ಅನೀತಿಗಳ ಮಿಶ್ರಣ ಇದ್ದೇ ಇರುತ್ತದೆ. ಇವುಗಳ ನಡುವೆ ಅರ್ಥ ಪೂರ್ಣ ಸಂಭಾಷಣೆ ನಡೆದಾಗಲೇ ಆ ಸಮಾಜ ಮನುಷ್ಯಮುಖಿಯಾಗುತ್ತಾ ಸಾಗುತ್ತದೆ. ಅಲ್ಲಿ ಧರ್ಮ, ವರ್ಣ, ಅಂತಸ್ತು ಇತ್ಯಾದಿಗಳನ್ನು ಮೀರುವ ಸಾಮರ್ಥ್ಯ ಜನರಿಗೆ ಬರುತ್ತದೆ.
ಕೊನೆಯ ಮಾತಾಗಿ ನಾನು ಇಲ್ಲಿ ಸೇರಿಸಲೇ ಬೇಕಾದ ವಿಷಯವೆಂದರೆ, ಚಿತ್ರದ ನಟರ ಕುರಿತು. ಚಿತ್ರದುದ್ದಕ್ಕೂ ಸಂಭೋಗದ ಚಿತ್ರಣ, ವಿಕೃತ ಕಾಮದ ಆಟಗಳನ್ನು ತೋರಿಸುತ್ತಾ ಹೋಗುವ ಈ ಚಿತ್ರದಲ್ಲಿ ನಟಿಸುವುದು ನಟರಿಗೆ ಮಾನಸಿಕವಾಗಿ ಬಹಳ ಹಿಂಸೆಯನ್ನು ತರಬಹುದಾದ ವಿಷಯ. ಅಂಥದ್ದರಲ್ಲಿ ಈ ಚಿತ್ರದಲ್ಲಿ ಬರುವ ಐಕೊ ಮತ್ಸುದ (ಸದಾ ಅಬೆ ಪಾತ್ರದಲ್ಲಿ) ತತ್ಸುಯ ಫುಜಿ (ಕಿಚಿಜೂ ಇಶಿದ ಪಾತ್ರದಲ್ಲಿ) ಮತ್ತಿತರರು ತಮ್ಮ ಅಭಿನಯದಿಂದ ಚಿತ್ರದ ನೈಜ ವಿವರಗಳಿಗೆ ಜೀವತುಂಬುತ್ತಾರೆ. ಕ್ಯಾಮರಾ, ಧ್ವನಿ ಸಂಯೋಜನೆ, ಸಂಗೀತ ಎಲ್ಲವೂ ಒಂದು ಒಳ್ಳೆಯ ಸಿನೆಮಾದಲ್ಲಿ ಆಗಬೇಕಾದಂತೆ ಮೇಳೈಸಿ ಒಟ್ಟಂದದ ಭಾಗವಾಗಿವೆ.
ಅಭಯ,
ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ಮೊದಲ ಬಾರಿ ಈ ಚಿತ್ರ ನೋಡಲು ಕುಳಿತಾಗ ನನಗೆ ಬಹಳ ಹಿಂಸೆಯಾಯಿತು. ಅರ್ಧಕ್ಕೇ ನಿಲ್ಲಿಸಿದೆ. ನಿರ್ದೇಶಕ ಏನನ್ನು ಹೇಳಹೊರಟಿದ್ದಾನೆ, ಇಂತಹ ಮುಕ್ತ ಕಾಮಕೇಳಿಯ ದೃಶ್ಯಗಳು ನಿಜಕ್ಕೂ ಅಗತ್ಯವೇ ಹೀಗೆ ಚಿತ್ರದ ಇಮೇಜುಗಳು ಪ್ರಶ್ನೆಗಳಾಗಿ ಕಾಡತೊಡಗಿದವು. ಸಾಹಿತ್ಯ ಕೃತಿಗಳಲ್ಲಿ ಬರುವ ಕಾಮದ ವಿವರಗಳು, ಮನುಷ್ಯನ ಮೂಲಭೂತ ವಾಸನೆಯ ವಿವಿಧ ಮಗ್ಗಲುಗಳು ದೃಶ್ಯಮಾಧ್ಯಮದಲ್ಲಿ ತರುವ ಬಗೆ ಹೇಗೆ ಎಂದೆಲ್ಲಾ ಚಿಂತಿಸುತ್ತಾ ಮನಸ್ಸು ಸ್ವಲ್ಪ ಹಗುರಾದ ಮೇಲೆ ಮತ್ತೊಮ್ಮೆ ಸಿನೆಮಾ ನೋಡತೊಡಗಿದೆ. ಈ ಬಾರಿ ಚಿತ್ರ ಹೊಸದೊಂದು ಅನುಭವಲೋಕವನ್ನೇ ತೆರೆದಿಡುತ್ತಾ ಹೋಯಿತು. ಮೊಟ್ಟಮೊದಲ ಬಾರಿಗೆ ಯಾವುದೋ ಮನಸ್ಥಿತಿಯಲ್ಲಿ ಇಂತಹ intense ಚಿತ್ರಗಳನ್ನು ನೋಡಬಾರದು ಎಂಬ ಪಾಠವೂ ತಿಳಿಯಿತು!!
ಈ ಸಿನೆಮಾದ ಬಗ್ಗೆ ನೀವು ಮುಕ್ತವಾಗಿ ಚರ್ಚಿಸುವ ಮೂಲಕ tabooವನ್ನು ಮೀರಲು ಪ್ರಯತ್ನಿಸುತ್ತಿರುವುದ್ದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ!! ಅಂದಹಾಗೆ ನಿರ್ದೇಶಕನ ಹೆಸರು ನಾಗೀಸಾ ಓಶಿಮಾ ಎಂದು ನೆನಪು. ಹೋದ ವರ್ಷದ ಫೆಸ್ಟಿವಲ್ ನಲ್ಲಿ ಆತನ ರೆಟ್ರೋ ಇತ್ತು. ಡೆತ್ ಬೈ ಹ್ಯಾಂಗಿಂಗ್ ನೋಡಿದ ನೆನಪು…
– ಪ್ರಶಾಂತ್
ಪ್ರಶಾಂತ್ ನೀವು ಹೇಳಿದ್ದು ಸರಿ. ಈ ಲೇಖನಕ್ಕೆ ಜನ ಹೇಗೆ ಪ್ರತಿಕ್ರಿಯೆ ಕೊಡುತ್ತಾರೆ ಎಂಬುದರ ಕುತೂಹಲ ನನಗಿದೆ. ಏನಾದರೂ ಉಪಯುಕ್ತ ಚರ್ಚೆ ನಡೆಯುತ್ತಾ ನೋಡೋಣ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
Have seen this movie. If iam not wrong, this was based on a true story.
Sleela Ashleelagala bagge bareda baraha sogasaagittu…..Ivattina dinagalalli adu tumba charchege oddikollabekaada vishaya…..In The Relm of Senses chitrada kuritu bareyutta neevu charchisida vishayagalu istavaayitu….Eega mangalore universityalli SAMSKAARA kuritu anagatya taleharategalaguttiruva sandharbhavu nenapaayitu…. Nimma shot movie WATCH OUT & LOVE BOY nodidde..ista aagittu…Eega nimma blognindaagi kutuhalada kannugalindane nimma belavanigeyanna noduttiddene. GUBBACCHI GUDU SADA BECCAGIRALI — Karthik paradkar
ನಾನು ಈ ಚಿತ್ರ ನೋಡಿಲ್ಲ. ಆದರೆ ಶೀಲ-ಅಶ್ಲೀಲಗಳ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ಸಹಮತವಿದೆ. ಬಹಳಷ್ಟು ಬಾರಿ ಎಲ್ಲದಕ್ಕೂ ಸಾಮಾನ್ಯ ಅರ್ಥ ಮತ್ತು ಸಾಮಾನ್ಯ ಕೋನಗಳಿಂದಲೇ ಅವಲೋಕಿಸುವುದರಿಂದ ಎರಡರ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಜತೆಗೆ ಒಂದನ್ನೇ ಭಿನ್ನ ಕೋನಗಳಲ್ಲಿ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ.
ನಾವಡ
While reading this, remembered the french new wave movie “The Weekend”, by Goddard… where I was attracted towards the way certain shots have been taken, the narrative and some techniques used.
But when I think about the film as a whole, it made me wonder what a film. or any art for that matter, should aim at… The scenes in the movie, the speeches made, the abstractness, the perversion – disturb a lot. A common viewer will not have the capacity to take it. A common man can never feel such movies in the intended sense… Such movies never reach common man really, and remain real “art movies”. Everyone will not understand the Abstract.
ಶೀಲ-ಅಶ್ಲೀಲದ ವಿಷಯ ಓದುತ್ತ ಯಕ್ಷಗಾನದ ಹಿರಿಯಜ್ಜ ಸೀತಾರಾಮಯ್ಯನವರು ಹೇಳಿದ್ದು ನೆನಪಾಯಿತು. ಮಾಯಾ ಪೂತನಿ ಅಥವಾ ಮಾಯಾ ಶೂರ್ಪನಖಿಯ ವೇಷಧಾರಿಗಳು ಸಂದರ್ಭಕ್ಕೆ ಅಗತ್ಯವೆಂದು ಸೆರಗು ಜಾರಿಸಿದರೆ ಅದು ಅಶ್ಲೀಲ. ಬದಲಾಗಿ ಸೆರಗನ್ನು ಸರಿಪಡಿಸಿಕೊಳ್ಳುವ ಅಭಿನಯ ತೋರುವ ಮೂಲಕ ಸೆರಗು ಜಾರಿದ್ದನ್ನು ಪ್ರೇಕ್ಷಕರಿಗೆ ತಲುಪಿಸಬೇಕು!
ಆದರೆ ನೀವಿಲ್ಲಿ ಸಿನಿಮಾ ಉದಾಹರಿಸುತ್ತ ಹೇಳುತ್ತಿರುವ ವಿಷಯ ಸುಲಭದಲ್ಲಿ ಬಗೆಹರಿಯುವಂತಿಲ್ಲ. ಆದರೆ ಕೊನೆಗೂ ಶೀಲ-ಅಶ್ಲೀಲದ ಪ್ರಶ್ನೆಗೆ ಉತ್ತರ ಸಿಗುವುದು -ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಮಾಡಿದರು ಎಂಬುದರ ಮೇಲೆಯೇ ಅನಿಸುತ್ತಿದೆ. ದುಃಖದ ಸುಂದರ ಚಿತ್ರಣವನ್ನು ಓದಿಯೋ, ನೋಡಿಯೋ ನಾವು ಸಂತೋಷಗೊಳ್ಳುವಂತೆ, ಲೈಂಗಿಕತೆಯ ಚಿತ್ರಣವೂ ನಮ್ಮಲ್ಲಿ ಬೇರೆಯದೇ ಭಾವವನ್ನು ಹುಟ್ಟಿಸುವುದಿದ್ದರೆ ಅದೂ ಕಲೆಯೇ ಆಗಿರಬೇಕಲ್ಲ !
ಭಾರತೀಯ ಸಿನಿಮಾದ ಹಾಡುಗಳ ಬಗ್ಗೆ ಮಣಿಕೌಲ್ ಹೇಳಿದ ಉದಾಹರಣೆ ಬಹಳ ಚೆನ್ನಾಗಿದೆ.
ಶ್ರೀಯವರೇ,
common man ಎಂಬ ಪದಕ್ಕೆ ಅರ್ಥವೇ ಇಲ್ಲ. ನಾವೆಲ್ಲರೂ common man ಆಗಿಯೂ ವಿಶಿಷ್ಟರೂ ಏಕ ಕಾಲದಲ್ಲಿಯೇ ಆಗಿದ್ದೇವೆ. ಹಾಗಾಗಿ ಗೋದಾರ್ದ್ ನೋಡಿ ಪಾಪ ಅವರಿಗೆ ಹೇಗೆ ಅರ್ಥವಾಗಬೇಕು ಎನ್ನುವುದು ಸುಳ್ಳು. ಹಾಗಾಗಿ ಯಾವುದೇ ಕಲೆ ಕೇವಲ ಸೀಮಿತ ಜನರಿಗೆ ಮಾತ್ರ ಅರ್ಥವಾಗುವುದಿದ್ದರೆ ಅದು ಕಲೆಯಾಗದೆ, ಯಾವುದೋ ಗಣಿತದ ಸೂತ್ರವಾಗಿ ಉಳಿಯುತ್ತದೆ. ಹಾಗಾಗಿ ಒಂದು ಸಿನೆಮಾ ನೋಡಿದಾಗ ನಮಗೆ ಅರ್ಥವಾಗದೇ ಹೋಗಬಹುದು. ಆದರೆ ಒಟ್ಟಿನಲ್ಲಿ ಒಂದು ರಸವನ್ನು ನೀಡುವಲ್ಲಿ ಸಹಕರಿಸಿದರೂ ಆ ಚಿತ್ರ ಸಫಲವಾದಂತೆಯೇ ಸರಿ. ನಾವು ನೋಡಿದ್ದೆಲ್ಲಾ ಅರ್ಥವಾಗುತ್ತದೆ, ನಮಗೆ ದಕ್ಕುತ್ತದೆ ಎನ್ನುವುದು ಹುಂಬತನವಾದೀತು ಅಲ್ಲವೇ? ಆದರೆ ಚಿತ್ರಮಾಧ್ಯಮ ಅಂಥಾ ಭ್ರಮೆಯನ್ನು ಹುಟ್ಟಿಸುತ್ತದೆ. ಇದು ಸುಳ್ಳು ಎನ್ನುವುದನ್ನು ಅರಿಯುವುದು ಚಿತ್ರಪ್ರಿಯರಾದ ನಾವುಗಳು ಅರಿತುಕೊಳ್ಳುವುದು ಅಗತ್ಯ.
ಬೇತಾಳ,
Abstract ಆಗಿರುವ ಯಾವುದೇ ವಿಚಾರವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಮತ್ತು ಅದು ಯಾವುದೋ ಒಂದು ರಸವನ್ನು ನೀಡುವುದೇನೋ ನಿಜ, ಚಿತ್ರಪ್ರಿಯರಿಗೆ ಇಷ್ಟವಾಗಲೂ ಬಹುದು. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ, ಸಿನಿಮಾ ವೀಕ್ಷಕರಲ್ಲಿ ಯಾವುದೋ ಒಂದು ತೀವ್ರ ಭಾವವನ್ನು ಮೂಡಿಸುವ ಜತೆಗೆ, ಪ್ರಜ್ಞೆಯನ್ನು ಚುಚ್ಚಿ ನೋವು ನೀಡಿದರೂ ಪರವಾಗಿಲ್ಲ, ಆದರೆ ಯೋಚನೆಗೆ ಹಚ್ಚಬೇಕು… ಅಥವಾ ಶುದ್ಧ ಮನರಂಜನೆ ನೀಡಬೇಕು. ಎರಡೂ ಇಲ್ಲದೆ ಇದ್ದಾಗ ಮಾತ್ರ ಅದು ಗಣಿತದ ಸೂತ್ರ ಆಗುತ್ತದೆ. ಗೊಡ್ಡಾರ್ಡರ ಇತರ ಚಿತ್ರಗಳನ್ನು ನಾನು ನೋಡಿಲ್ಲ, ನೋಡಿದ್ದು ಒಂದೇ ಒಂದು, ಅದರಲ್ಲಿ ಬಹಳಷ್ಚು ಅಂಶಗಳು ಇಷ್ಟವಾಯ್ತು, ಅದರಿಂದ ಹಲವಾರು ವಿಚಾರ ಕಲಿತಿದ್ದೂ ನಿಜ. ಆದ್ರೆ… ಯಾಕೋ…? 😦 ಗೊತ್ತಿಲ್ಲ. ಬಹುಷಃ ನೀವು ಹೇಳಿದ ಹಾಗೆ, ನನ್ನ ಪ್ರಜ್ಞೆಗೆ ದಕ್ಕದ ಅಂಶವಿರಬೇಕು..!
when i watch such films i believe there are two kinds of viewers, one who gets his high just by the visuals and the other who thinks beyond.
if the director is really good he will be able to satisfy both of them.!
if the number of second category is more then it will remain as classic.
if the number of first category is more it will become a porn!.