ಚಿತ್ರ ಹಾಗೂ ಧ್ವನಿ (ಭಾಗ – ೧)


ಸಿನೆಮಾ ಒಂದು ದೃಶ್ಯ ಮಾಧ್ಯಮ ಎಂದು ಹೇಳಿದಾಗಲೆಲ್ಲಾ ನನಗೆ ಕಸಿವಿಸಿಯಾಗುತ್ತದೆ. ಸಿನೆಮಾ ಒಂದು ದೃಶ್ಯ ಹಾಗೂ ಶ್ರವ್ಯ ಮಾಧ್ಯಮ. ಧ್ವನಿ ಸಂಯೋಜನೆ ಎನ್ನುವುದನ್ನು ವಿಶೇಷವಾಗಿ ಕಲಿಸುವಂಥಾ ಒಂದು ಶಾಸ್ತ್ರವೇ ಇದೆ. ಕನ್ನಡ ಚಿತ್ರಗಳಲ್ಲಿ ಧ್ವನಿ ಸಂಯೋಜನೆ ಹೆಚ್ಚಿನ ಕಡೆ ಉಪೇಕ್ಷಿತವಾಗಿದೆ. ಒಂದು ಚಿತ್ರವನ್ನು ನೊಡುವಾಗ ಪಾತ್ರಗಳು ನಡೆದಾಡಿದಾಗ ಹೆಜ್ಜೆಯ ಸಪ್ಪಳ, ಗಾಜು ಒಡೆದಾಗ ಅದರ ಶಬ್ದ ಇತ್ಯಾದಿಗಳನ್ನು ಧ್ವನಿ ಸಂಯೋಜನೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ನಿಜಕ್ಕೂ ಇವುಗಳು ಧ್ವನಿ ಸಂಯೋಜನೆಯ ಪ್ರಾಥಮಿಕ ಹಂತ ಮಾತ್ರ.

ನಮ್ಮೆಲ್ಲಾ ಅನುಭವಗಳು ಪಂಚೇಂದ್ರಿಯಗಳಿಂದಾಗುತ್ತವೆ ಎನ್ನುವುದು ಸರಿಯಷ್ಟೇ. ಸಿನೆಮಾವೊಂದಕ್ಕೆ ಕಣ್ಣು ಹಾಗೂ ಕಿವಿ ಈ ಎರಡು ಇಂದ್ರಿಯಗಳ ಮೂಲಕ ನಮ್ಮನ್ನು ತಟ್ಟಲು ಸಾಧ್ಯವಿದೆ. (ಸಧ್ಯಕ್ಕೆ) ಇವೆರಡೂ ನಮ್ಮಲ್ಲಿ ಉಂಟುಮಾಡುವ ತಾತ್ಕಾಲಿಕ ಅನುಭವಗಳ ಸರಣಿಯೆ ಒಂದು ಸಿನೆಮಾ ಆಗಿದೆ. ಕೆಲವು ಚಿತ್ರಗಳು ಕೇವಲ ಕಣ್ಣುಗಳ ಮೂಲಕ ನಮ್ಮನ್ನು ತಟ್ಟಿದರೆ, ಇನ್ನು ಕೆಲವು ಕೇವಲ ಧ್ವನಿಯ ಮೂಲಕ. ಒಬ್ಬ ಸಮರ್ಥ ನಿರ್ದೇಶಕ ಇವುಗಳ ಸಂಯೊಜನೆಯನ್ನು ಜಾಣ್ಮೆಯಿಂದ ಮಾಡಿಕೊಂಡಾಗ, ಇವೆರಡೂ ನಿರ್ದಿಷ್ಟ ಅನುಭವಗಳನ್ನು ಕೊಡುವುದರಿಂದಾಗಿ ಚಿತ್ರವು ಕೆಲವೆಡೆ ಕಿವಿಗಳ ಮೂಲಕವೂ ಇನ್ನು ಇತರೆಡೆ ದೃಶ್ಯದ ಮೂಲಕವೂ ನಮ್ಮನ್ನು ತಟ್ಟುತ್ತದೆ. ಇವೆರಡರ ಪ್ರಯೋಗದಿಂದಲೂ ಉತ್ಪನ್ನವಾಗುವ ಭಾವನೆಗಳು, ಅದರ ತೀವ್ರತೆ ಭಿನ್ನವಾದದ್ದರಿಂದ ನಿರ್ದೇಶಕ ತಾನು ಹೇಳಬಯಸುವ ಭಾವನೆಯನ್ನು ಸಮರ್ಥವಾಗಿ ಹೇಳುವ ಮಾಧ್ಯಮವನ್ನು ಆಯಾ ಸಂದರ್ಭದಲ್ಲಿ ಪ್ರಮಾಣಾನುಸಾರ ಬಳಸಿಕೊಳ್ಳುತ್ತಾನೆ.

ಧ್ವನಿ ಸಂಯೋಜನೆಯ ಕೆಲವು ಅಂಶಗಳು ಹೀಗಿವೆ:

ಧ್ವನಿ ಸಂಯೋಜನೆಯಲ್ಲಿ ಮುಖ್ಯವಾಗಿ ಎರಡು ವಿಭಾಗಗಳನ್ನು ಸಂಯೋಜಕರು ಅನುಸರಿಸುತ್ತಾರೆ.

೧) ಸಾಧ್ಯ ಧ್ವನಿಗಳು (Digetic Sounds)
೨) ಸಾಧಿತ ಧ್ವನಿಗಳು (Non-digetic Sounds)

ಸಾಧ್ಯ ಧ್ವನಿಗಳಲ್ಲಿ ಮುಖ್ಯವಾಗಿ ಚಿತ್ರ ಪರದೆಯ ಮೇಲೆ ಕಾಣುವ ಎಲ್ಲಾ ಧ್ವನಿಗಳೂ ಇಲ್ಲಿ ವರ್ಗೀಕರಿಸಲ್ಪಡುತ್ತವೆ. ಇಲ್ಲಿ ಬಾಗಿಲು ತೆರೆಯುವ ಶಬ್ದ, ಹಿನ್ನೆಲೆಯಲ್ಲಿ ಓದುತ್ತಿರುವ ಟಿ.ವಿ ಶಬ್ದ, ಪಾತ್ರೆ ತೊಳೆಯುವಾಗ ನೀರಿನ ಶಬ್ದ ಇತ್ಯಾದಿ ಪರದೆಯ ಮೇಲೆ ಕಾಣುವ ಕ್ರಿಯೆಗಳಿಂದ ಉತ್ಪತ್ತಿಯಾಗುವ ಶಬ್ದಗಳು ಇಲ್ಲಿರುತ್ತವೆ. ಸಾಧಿತ ಧ್ವನಿಗಳಲ್ಲೂ ಮೇಲಿನ ಧ್ವನಿಗಳು ಬರಬಹುದು. ಆದರೆ, ಇವುಗಳು ಪರದೆಯ ಮೆಲೆ ಕಾಣುವ ಕ್ರಿಯೆಗಳಲ್ಲದೇ ಇದ್ದರೂ ಬರೇ ಹೊರಗಿನಿಂದ ಕೆಳಿಸುವ ಧ್ವನಿಗಳು.

ಯಾವುದೇ ಚಿತ್ರವಾದರೂ, ಒಂದು ಫ್ರೇಮನ್ನೇ ತೋರಿಸುವುದು ಸಾಧ್ಯ. ಇತ್ತೀಚೆಗೆ ಸ್ಪ್ಲಿಟ್ ಸ್ಕ್ರೀನ್ ತಂತ್ರಜ್ಞಾನ ಎಲ್ಲಾ ಬಳಸಿದರೂ, ಮತ್ತೆ ಅವುಗಳು ಫ್ರೇಮ್ ಅಷ್ಟೇ. ಅವುಗಳು ಸೃಷ್ಟಿಸುವ ಆವರಣಕ್ಕೆ ಒಂದು ಪರಿಮಿತಿ ಇರುತ್ತದೆ. ಏಕೆಂದರೆ ಅವುಗಳು ಖಚಿತವಾದ ಚೌಕಟ್ಟಿನಿಂದ ಕಟ್ಟಲ್ಪಟ್ಟ ಒಂದು ಸೃಷ್ಟಿಯಾಗಿರುತ್ತದೆ. ಆದರೆ ಧ್ವನಿಗೆ ಆ ಮಿತಿ ಇಲ್ಲ. ಅದು ಮತ್ತೆ ಅಮೂರ್ತದ ಕಡೆಗೆ ಹೋಗುವ ಶಕ್ತಿಯನ್ನು ಅದು ಹೊಂದಿರುತ್ತದೆ. ಹೀಗಾಗಿ ಒಂದು ಧ್ವನಿ ಸೃಷ್ಟಿಸುವ ಆವರಣಕ್ಕೆ ಮಿತಿ ಇರುವುದಿಲ್ಲ ಹಾಗೂ ಇದರಿಂದಾಗಿ ಧ್ವನಿ ಸಂಯೋಜನೆಗೆ ಪರದೆಯ ಹಿಂದೆ, ಮುಂದೆ, ಅಕ್ಕ-ಪಕ್ಕದ ಎಲ್ಲಾ ಸ್ಪೇಸ್‌ಗಳನ್ನು ಬಳಸಿಕೊಂಡು ಕಥೆಯ ಭಾಗವನ್ನಾಗಿಸುವ ಸಾಮರ್ಥ್ಯ ಇರುತ್ತದೆ. ಹೀಗಾಗಿ ಯಾವುದೇ ಒಂದು ಸಿನೆಮಾಕ್ಕೆ, ಅದರ ಕಥೆಯ ಓಘಕ್ಕೆ ಸಮರ್ಥ ಧ್ವನಿ ಸಂಯೋಜನೆ ತೀರಾ ಅಗತ್ಯವಾಗಿರುತ್ತದೆ.

—- ಮುಂದುವರಿಯಲಿದೆ.

This entry was posted in Film Craft. Bookmark the permalink.

7 Responses to ಚಿತ್ರ ಹಾಗೂ ಧ್ವನಿ (ಭಾಗ – ೧)

 1. neelanjana ಹೇಳುತ್ತಾರೆ:

  ಅಭಯ ಸಿಂಹರೆ,

  ನಿಮ್ಮ ಬ್ಲಾಗ್ ಓದುಗರಲ್ಲಿ ನಾನೊಬ್ಬ – ಬಹಳ ಆಸಕ್ತಿ ಹುಟ್ಟಿಸುವಂತೆ ಬರೆಯುತ್ತಿದ್ದೀರಿ. ನಿಮ್ಮಿಂದ ತಿಳಿದುಕೊಳ್ಳಬೇಕಾದ್ದು ಬೇಕಾದಷ್ಟಿದೆ. ಹೀಗೇ ಬರೆಯುತ್ತಿರಿ.

  -ನೀಲಾಂಜನ

 2. uniquesupri ಹೇಳುತ್ತಾರೆ:

  ನಿಮ್ಮ ಬರಹಗಳು ತುಂಬಾ ಕುತೂಹಲಕರವಾಗಿವೆ….
  ದಯವಿಟ್ಟು ಹೆಚ್ಚು ಹೆಚ್ಚು ಈ ಬಗೆಯ ತಾಂತ್ರಿಕ ಸಂಗತಿಗಳ ಬಗ್ಗೆ ಬರೆಯಿರಿ…

 3. ಬೇತಾಳ ಹೇಳುತ್ತಾರೆ:

  Is it digest, non-digest? Or direct, non-direct (indirect)? Isn’t there a Kannada word?
  – ಬೇತಾಳ

 4. abhayaftii ಹೇಳುತ್ತಾರೆ:

  ಬೇತಾಳ,
  Digetic ಹಾಗೂ Non-Digetic soundsಗಳಿಗೆ, ಸಾಧ್ಯ ಹಾಗೂ ಸಾಧಿತ ಎಂಬ ಕನ್ನಡ ವ್ಯುತ್ಪತ್ತಿಯನ್ನು ಪ್ರಯತ್ನಿಸಿದ್ದೇನೆ. (ಈಗ ಬ್ಲಾಗಿನಲ್ಲಿ ಕಾಣಿಸುತ್ತಿರುವುದು ತಿದ್ದಿದ ಪ್ರತಿ) ಈ ಹಿಂದೆ ಕೆ.ವಿ ಸುಬ್ಬಣ್ಣ ಚಿತ್ರ ಪರಿಭಾಷೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡಸಿ ಕನ್ನಡದಲ್ಲಿ ಅದನ್ನು ಪ್ರಚುರಪಡಿಸಿದ್ದರು. ಅವರು ಇದಕ್ಕೆ ಯಾವ ಶಬ್ದ ಬಳಸಿದ್ದಾರೆಂದು ನನಗೆ ತಿಳಿದಿಲ್ಲ. ಯಾರಾದರೂ ಅದನ್ನು ಓದಿದ್ದು ನೆನಪಿದ್ದಲ್ಲಿ ದಯವಿಟ್ಟು ನನಗೂ ತಿಳಿಸಿದರೆ, ಉಪಕಾರ.

  – ಅಭಯ ಸಿಂಹ

 5. ಅನಿವಾಸಿ ಹೇಳುತ್ತಾರೆ:

  diegitic ಮತ್ತು non-diegetic (ಯಾ extra-diagetic) ಸದ್ದುಗಳು ಎಂಬ ಪ್ರಯೋಗ ಗ್ರೀಕಿನ diegesisನಿಂದ ಬಂದಂದ್ದಂತೆ. ನನಗೇನೋ diegetic – ವಾಸ್ತವ ದನಿ, non-diegetic – ಕಲ್ಪಿತ ದನಿ ಅನಿಸುತ್ತದೆ.
  ಹಾಗೆಯೇ, ಈ ಕಲ್ಪಿತ ದನಿ ಪರದೆಯ ಹೊರಗೆ ಅನ್ನುವುದಕ್ಕಿಂತ ಚಿತ್ರದ ಪರಿಸರಲೋಕದಲ್ಲಿ ನೇರವಾಗಿ ಇಲ್ಲದ ದನಿ ಅನ್ನಬೇಕೇನೋ. ಪರದೆಯ ಹೊರಗಿದ್ದೂ ಆ ಪರಿಸರದ ಸದ್ದಾದರೆ ಅದೂ ವಾಸ್ತವ ದಿನಯೇ ಆಗುತ್ತದೆ. ತಟ್ಟನೆ ಹೊಳೆದ ತುಂಬಾ ಪರಿಣಾಮಕಾರಿಯಾದ non-diegetic ಸದ್ದು ಸೈಕೋದ ಶವರ್‍ ಕೊಲೆಯ ದೃಶ್ಯದ ವಯೊಲಿನ್ ಸದ್ದು. ಅದು ಸಂಗೀತಕ್ಕಿಂತ ಸದ್ದಾಗಿಯೇ ಹೆಚ್ಚು ಕೆಲಸಮಾಡಿದೆ. ಮತ್ತು ಚಿತ್ರದ ಪರಿಸರದಲ್ಲ.
  ಅಭಯ್, ಒಳ್ಳೆಯ ಚರ್ಚೆ ಸಂಗತಿಗಳನ್ನು ಎತ್ತಿಕೊಳ್ಳುತ್ತಿದ್ದೀರಿ. ಅಭಿನಂದನೆಗಳು.

 6. abhayaftii ಹೇಳುತ್ತಾರೆ:

  ಪ್ರೀಯ ಅನಿವಾಸಿಯವರೇ,
  ಸಾಧಿತ ಎಂಬ ಶಬ್ದವನ್ನು ನಾನು ಬಳಸಲು ಕಾರಣವೇನೆಂದರೆ, ಆ ಶಬ್ದ ಚಿತ್ರದ ಪರಿಸರ ಲೋಕವನ್ನು ಸೃಷ್ಟಿಸುತ್ತಿರುತ್ತದೆ (ಇಲ್ಲಿ ಚಿತ್ರದ ಪರಿಸರಲೋಕ ಎಂದರೆ ನೀವು ಇಡೀ ಚಿತ್ರದ ಎಂಡು ಅರ್ಥೈಸಿದ್ದೀರೆಂದು ನನಗೆ ಅನಿಸಿತು. ತಪ್ಪಿದ್ದರೆ ಕ್ಷಮಿಸಿ. ಆದರೆ ನಾನು ಮಾತನಾಡುತ್ತಿರುವುದು ಪ್ರತಿಯೊಂದು ಶಾಟ್ ಕುರಿತಾಗಿ…). ಚಿತ್ರವೊಂದಕ್ಕೆ ಪರಿಸರವನ್ನೇ ಸೃಷ್ಟಿಸುವ ಶಕ್ತಿಯಿರುವುದರಿಂದ, ನಾನು ಧ್ವನಿಗೆ ಚಿತ್ರದ ಹಂಗೇ ಇಲ್ಲ ಎನ್ನುವ ಭಾವದಿಂದ ಹಾಗೆ ಬರೆದಿದ್ದೇನೆ. ಖಂಡಿತಾ ಅದು ನೀವೆಂದಂತೆ ಕಲ್ಪಿತ ಧ್ವನಿ. ಆದರೆ ಇದು ಪರದೆಯ ಹೊರಗೆ ಇರುವ ಕಲ್ಪಿತ ಧ್ವನಿ. ಆದರೆ ನಾವು ಉದ್ದಕ್ಕೂ ಸತ್ಯವನ್ನೇ ಸಾಧಿಸುವ ಪ್ರಯತ್ನ (ಅಥವಾ ಹಾಗೆ ಪ್ರೇಕ್ಷಕರನ್ನು ನಂಬಿಸುವ ಪ್ರಯತ್ನ) ಮಾಡುತ್ತಿರುವುದರಿಂದ ಇದನ್ನು ಸಾಧಿತ ಧ್ವನಿ ಎಂಬ ಪ್ರಯೋಗವನ್ನು ಮಾಡಿದ್ದೇನೆ.

  …. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸರ್. 🙂

 7. ಶ್ರೀ ಹೇಳುತ್ತಾರೆ:

  ಸುದರ್ಶನ್ ಸರ್,
  ನೀವು ಕೊಟ್ಟ ಕ್ಲೂ ಹಿಡಿದು ಹುಡುಕಿದಾಗ ಸಿಕ್ಕಿದ್ದು ಈ ಲಿಂಕ್ – http://www.reference.com/search?r=13&q=Diegetic.
  diegetic ಮತ್ತು non-diegetic ದನಿಗೆ ಮಾತ್ರ ಸಂಬಂಧಿಸಿರಬೇಕಿಲ್ಲ ಅಂತಲೂ ತಿಳಿಯಿತು. ನಿಜಕ್ಕೂ ಒಳ್ಳೆಯ ವಿಚಾರಗಳು ಈ ಬ್ಲಾಗ್-ನಲ್ಲಿ ಬರ್ತಾ ಇವೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s