ಚಿತ್ರ ಹಾಗೂ ಧ್ವನಿ (ಭಾಗ – ೩)


Location Sound Recordingಈ ಭಾಗದಲ್ಲಿ ಸಿಂಕ್-ಸೌನ್ಡ್ ಅಥವಾ ಚಿತ್ರೀಕರಣ ಸ್ಥಳದಲ್ಲಿಯೇ ಧ್ವನಿ ಮುದ್ರಿಸಿಕೊಳ್ಳುವ ವಿಧಾನದ ಕುರಿತು ಎರಡು ಮಾತು. ಭಾರತದಲ್ಲಿ ಹೆಚ್ಚಿನ ಚಿತ್ರಗಳು ಇಂದಿಗೂ ಡಬ್ಬಿಂಗ್ ಪ್ರಕ್ರಿಯೆಯ ಮೂಲಕವೇ ಮಾತುಗಳನ್ನು ಹೊಂದುತ್ತವೆ. ಆದರೆ ಹೊರದೇಶಗಳಲ್ಲಿ ಇಂದು ಹೆಚ್ಚಿನ ಚಿತ್ರಗಳು ಚಿತ್ರೀಕರಣ ಸಂದರ್ಭದಲ್ಲೇ ಮುದ್ರಿಸಿಕೊಂಡ ಧ್ವನಿಯನ್ನೇ ಅಂತಿಮ ತೆರೆಯಲ್ಲೂ ಬಳಸಿಕೊಳ್ಳುತ್ತಾರೆ. ಇದರ ಸಾಧ್ಯತೆ, ಬಾದ್ಯತೆ ಹಾಗೂ ನಮ್ಮಲ್ಲಿನ ವಿಧಾನಕ್ಕೂ ಇತರೆಡೆಯಲ್ಲಿನ ವಿಧಾನಗಳಿಗೂ ಇರುವ ವ್ಯತ್ಯಾಸ ನೋಡೋಣ.ಚಿತ್ರೀಕರಣ ಸ್ಥಳದಲ್ಲಿ ಮುದ್ರಿಸಿಕೊಂಡ ಧ್ವನಿಯ ಗುಣಗಳೇನು? ಅಲ್ಲಿ ನಟ ತಾನು ಬಳಸಿರುವ ಧ್ವನಿ ಏರಿಳಿತಗಳನ್ನು ಒಂದು ಸ್ಟುಡಿಯೋದಲ್ಲಿ ಮತ್ತೆ ಅಭಿನಯಿಸುವುದಕ್ಕೂ ಸ್ಥಳದಲ್ಲೇ ಅಭಿನಯಿಸಿದ ಧ್ವನಿಗಳಿಗೂ ವ್ಯತ್ಯಾಸ ಬಂದೇ ಬರುತ್ತದೆ. ಸ್ಥಳದಲ್ಲಿ, ನಟನು ಅಲ್ಲಿನ ಪರಿಸ್ಥಿತಿಗಳಿಂದ ಪ್ರೇರಿತನಾಗಿ ನೀಡಿರುವ ಧ್ವನಿಯ ಏರಿಳಿತಗಳು, ನಿಂತ್ರಿತ ಸ್ಟುಡಿಯೋದ ಒಳಗೆ ನೀಡುವುದು ಸ್ವಲ್ಪ ಕಷ್ಟ. ಆದರೆ ಇದನ್ನು ಒಂದು ಗುಣವಾಗಿಯೂ ನಾವು ನೋಡಬಹುದು. ಚಿತ್ರೀಕರಣ ಸ್ಥಳದಲ್ಲಿ ಇದ್ದಿರಬಹುದಾದ ಪರಿಸ್ಥಿತಿಗಳಿಂದಾಗಿ ನಟನ ಧ್ವನಿಯಲ್ಲಿ ಆಗಿರಬಹುದಾದ ತೊಂದರೆಗಳನ್ನು ಸರಿಪಡಿಸಿಕೊಳ್ಳಲು ಸ್ಟುಡಿಯೋದಲ್ಲಿ ಮಾತುಜೋಡಣೆಯ ಸಂದರ್ಭ ಒಂದು ಅವಕಾಶ ಎಂದೂ ನಾವು ಅಂದುಕೊಳ್ಳಬಹುದು.


ಆದರೆ ಚಿತ್ರೀಕರಣ ಸ್ಥಳದಲ್ಲಿ ಮುದ್ರಿಸಿದ ಧ್ವನಿಯ ಮತ್ತೊಂದು ಗುಣವೆಂದರೆ, ಅಲ್ಲಿ ನಟರ ಧ್ವನಿಯೊಡನೆ ಮಿಶ್ರವಾಗಿ ಬರುವ ಇತರ ಧ್ವನಿಗಳು. ನಿಜ ಜೀವನದಲ್ಲಿ ಯಾವುದೇ ಧ್ವನಿಯನ್ನು ನಾವು ಕೇಳುವಾಗ, ಇತರ ಧ್ವನಿಗಳು ಕೇಳದಂತೆ ಮೆದುಳು ಸೋಸಿಕೊಳ್ಳುತ್ತದೆ. ಆದರೆ ತಾಂತ್ರಿಕವಾಗಿ ಧ್ವನಿಯನ್ನು ಮುದ್ರಿಸಿಕೊಳ್ಳುವಾಗ ದಡ್ಡ ತಂತ್ರಜ್ಞಾನಕ್ಕೆ ಈ ಗುಣವಿಲ್ಲವೇ… ಹಾಗಾಗಿ ಇತರ ಧ್ವನಿಗಳನ್ನು ಅಗತ್ಯ ಪ್ರಮಾಣಕ್ಕನುಗುಣವಾಗಿ ಜೋಡಿಸಿಕೊಳ್ಳಬೇಕಾಗುತ್ತದೆ. ಅದು ಹಿಂದೆ ಎಲ್ಲೋ ಹರಿಯುತ್ತಿರುವ ನೀರು ಇರಬಹುದು ಅಥವಾ ಮಹಡಿ ಮನೆಯಲ್ಲಿ ಮನೆಗೆಲಸ ಮಾಡದ ಸಣ್ಣ ಹುಡುಗನಿಗೆ ಅವನ ಅಮ್ಮ ಬಯ್ಯುತ್ತಿರುವ ಶಬ್ದವೇ ಇರಬಹುದು. ಸ್ಟುಡಿಯೋದಲ್ಲಿ ಮಾತು ಜೋಡಣೆ ಮಾಡಿದರೆ ಇಂಥಾ ಎಲ್ಲಾ ಶಬ್ದಗಳನ್ನು ಧ್ವನಿ ಸಂಯೋಜಕ ಬುದ್ದಿ ಪೂರ್ವಕವಾಗಿ ಆಯ್ದು ಹಾಕಿ ಅದನ್ನು ಹದವಾಗಿ ಮಿಶ್ರಮಾಡಬೇಕಾಗುತ್ತದೆ. ಇದು ಖಂಡಿತಾ ಒಂದು ಸೃಜನಾತ್ಮಕ ಪ್ರಕ್ರಿಯೆ. ಆದರೆ ನಿಸರ್ಗವನ್ನು ಮೀರಿಸಿಯಾನೇ ಈ ಹುಲು ಮಾನವ? ಹಾಗಾಗಿ ನಿಸರ್ಗದಲ್ಲಿ ಸಿಗುವಂಥಾ, ಧ್ವನಿ ಸಂಯೋಜನೆಯನ್ನು ಸೆರೆಹಿಡಿಯಲು ಚಿತ್ರೀಕರಣ ಸ್ಥಳದಲ್ಲಿ ಮುದ್ರಿಸಿಕೊಂಡ ಧ್ವನಿಯಿಂದ ಮಾತ್ರ ಸಾಧ್ಯವಾಗುತ್ತದೆ. ಇಲ್ಲಿ ಧ್ವನಿ ಮುದ್ರಿಸಿಕೊಳ್ಳುವಾಗ ಮುದ್ರಣದಲ್ಲಿ ಧ್ವನಿ ಪ್ರಾಮುಖ್ಯತೆಯನ್ನು ನೋಡಿಕೊಂಡರೆ ಕೆಲಸ ಆದಂತೆಯೇ ಸರಿ.

ಹಾಗಾದರೆ ನಮ್ಮಲ್ಲಿ ಈ ವಿಧಾನ ಯಾಕೆ ಹೆಚ್ಚು ಬಳಕೆಯಲ್ಲಿ ಇಲ್ಲ ಎಂದು ನೀವು ಕೇಳಬಹುದು. ಅದಕ್ಕೆ ಹಲವಾರು ಕಾರಣಗಳಿವೆ. ಭಾರತದಲ್ಲಿನ ಧ್ವನಿ ಪ್ರಮಾಣ ಇದರಲ್ಲಿ ಪ್ರಮುಖವಾದ ಕಾರಣ. ಬೆಂಗಳೂರಿನ ಯಾವುದೇ ಒಂದು ಸುಮಾರಾಗಿ ಅಥವಾ ಕಡಿಮೆ ಸಂಚಾರ ಇರುವ ದಾರಿಗೇ ನೀವು ಇಳಿಯಿರಿ. ಒಂದು ಐದು ನಿಮಿಷ ನಿಮಗೆ ಕೇಳಿಸುವ ಶಬ್ದಗಳನ್ನೇ ಬರೆಯುತ್ತಾ ಹೋಗಿ. ಮತ್ತೆ ಯೂರೋಪಿನ ಯಾವುದೇ ದೇಶಕ್ಕೆ ಹೋಗಿ ಅಲ್ಲಿ ಇಂಥದ್ದೇ ಒಂದು ದಾರಿ ಹಿಡಿದು, ಅಲ್ಲಿನ ಶಬ್ದಗಳ ಪಟ್ಟಿ ಮಾಡಿ. ಆಗ ಗೊತ್ತಾಗುತ್ತೆ ನಾನು ಧ್ವನಿ ಪ್ರಮಾಣ ಎಂದಂದದ್ದು ಏನು ಅಂತ. ಅಯ್ಯೋ ನಿನ್ನ ಪ್ರಯೋಗ ಮಾಡಲಿಕ್ಕೆ ನಾವು ಯೋರೋಪ್ ಪ್ರಯಾಣ ಮಾಡಬೇಕಾ? ಎಂದು ಕೇಳ್ತೀರಾ? ಬಿಡಿ ಇದನ್ನು ಮುಂದಿನ ವಿಭಾಗದಲ್ಲಿ ವಿವರಿಸಿ ಹೇಳುತ್ತೇನೆ.

– ಮುಂದುವರೆಯಲಿದೆ.

This entry was posted in Film Craft. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s