ಚಿತ್ರ ಹಾಗೂ ಧ್ವನಿ (ಭಾಗ – ೪)


ಧ್ವನಿಯನ್ನು ಮೆದುಳು ಗ್ರಹಿಸುವ ರೀತಿ ಹೇಗಿದೆಯೆಂದರೆ, ಕಿವಿಯ ಮೂಲಕ ಹಾದು ಬರುವ ಶಬ್ದ ರಾಶಿಯಲ್ಲಿ ಮೆದುಳು ಅದಕ್ಕೆ ಬೇಕಾದದ್ದನ್ನು ಮಾತ್ರ ಆಯ್ದು ಅರ್ಥೈಸಿಕೊಳ್ಳುತ್ತದೆ. ಅನೇಕ ಬಾರಿ ಕಿವಿಗೆ ಸರಿಯಾಗಿ ಕೇಳಿಸದೇ ಇರುವಂಥದ್ದು, ಸಂದರ್ಭದ, ಸನ್ನಿವೇಶ ಆಧರಿಸಿ, ಅಥವಾ ಹಿಂದೆ ಕೇಳಿರುವ ಪ್ರಯೋಗವನ್ನು ಆಧರಿಸಿ ಮೆದುಳು ಅರ್ಥೈಸಿಕೊಳ್ಳುತ್ತದೆ. ಇದೆಲ್ಲವೂ ನಮ್ಮ ಅರಿವಿಗೆ ಬರದೇ ನಡೆಯುವ ಕೆಲಸಗಳು. (ಇದನ್ನು psycho acoustics ಎಂದೂ ಕರೆಯುತ್ತಾರೆ) ಆದರೆ ಮತ್ತೆ ದಡ್ಡ ತಂತ್ರಜ್ಞಾನಕ್ಕೆ ಬಂದರೆ, ಅದಕ್ಕೆ ಪರಿಚಯ ಇರುವ ಧ್ವನಿಗಳೆಲ್ಲವೂ ಬೇರೆಬೇರೆ ಪ್ರಮಾಣದ ಕಂಪನಗಳು ಮಾತ್ರ (frequency) ಹಾಗಾಗಿ ಅದು ತನ್ನ ಮೇಲೆ ಬಿದ್ದ ಎಲ್ಲಾ ಕಂಪನಗಳನ್ನು ನಿಷ್ಟೆಯಿಂದ ದಾಖಲೀಕರಿಸಿಕೊಳ್ಳುತ್ತದೆ. ಮತ್ತೆ ನಾವು ಬೇಕೆಂದಾಗ ಮರಳಿ ಕೇಳಿಸುತ್ತದೆ. ಹಾಗಾದರೆ ಒಂದು ಸ್ಥಳದಲ್ಲಿ ನಿಂತಾಗ ಕೇಳಿ ಬರುವ ಶಬ್ದರಾಶಿಯಲ್ಲಿ ನಮಗೆ ಬೇಕಾಗಿರುವ ಶಬ್ದವನ್ನು ಮಾತ್ರ ದಾಖಲೀಕರಿಸಿಕೊಳ್ಳುವುದು ಅದರಿಂದ ಸಾಧ್ಯವಿಲ್ಲದ ಮಾತು. ಹಾಗಾಗಿ ಭಾರತದಲ್ಲಿನ ಅಗಾಧ ಜನ ಸಾಂದ್ರತೆಯಿಂದಾಗಿ, ವಾಹನ ದಟ್ಟಣೆಯಿಂದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಸ್ಥಳದಲ್ಲಿ ಧ್ವನಿ ಮುದ್ರಿಸಿಕೊಳ್ಳುವುದು ಕಷ್ಟದ ಕೆಲಸವಾಗಿರುತ್ತದೆ. ಇಲ್ಲಿ ಒಂದು ಶಬ್ದದ ಕಂಪನಾಂಕಕ್ಕೂ ಇನ್ನೊಂದು ಶಬ್ದದ ಕಂಪನಾಂಕಕ್ಕೂ ವ್ಯತ್ಯಾಸ ತೀರಾ ಕಡಿಮೆ ಇರುತ್ತದೆ. ಇದರಿಂದ ದಾಖಲಾದ ಶಬ್ದ ತೀರಾ ಗೊಂದಲ ಹುಟ್ಟುಸಿವಂತಿರುತ್ತದೆ. ಹೊರದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲದ ಕಾರಣ ಹೆಚ್ಚಿನ ಕಡೆಗಳಲ್ಲಿ ಸ್ಪಷ್ಟ ಧ್ವನಿಯನ್ನು ದಾಖಲಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮೇಲೆ ವಿವರಿಸಿದ ವಿಷಯಗಳಿಂದ, ಧ್ವನಿ ಸಂಯೋಜನೆ ಎಂದರೆ ಸ್ಪಷ್ಟವಾದ ಧ್ವನಿಯನ್ನು ದಾಖಲಿಸಿಕೊಳ್ಳುವುದೆಂದು ಮಾತ್ರ ಅರ್ಥವಲ್ಲ. ಕೆಲವೊಮ್ಮೆ ಅದು ಅಸ್ಪಷ್ಟ ಧ್ವನಿಯನ್ನು ದಾಖಲಿಸಿಕೊಳ್ಳುವುದೂ ಆಗಿರಬಹುದು. ಅಥವಾ ಸ್ಪಷ್ಟ ಧ್ವನಿಗೆ ಇನ್ನೇನೋ ಮಿಶ್ರಮಾಡುವುದಾಗಿರಬಹುದು. ಹೀಗೆ ಧ್ವನಿಯ ಎಲ್ಲಾ ಸಾಧ್ಯತೆ-ಅಸಾಧ್ಯತೆ, ಕೇಳಿಸುವ ಧ್ವನಿಗೂ ಮೆದುಳು ಅದಕ್ಕೆ ಪ್ರತಿಕ್ರಿಯೆ ಕೊಡುವ ವಿಧಾನಕ್ಕೂ ಇರುವ ಸಂಬಂಧ ಇವೆಲ್ಲವನ್ನೂ ಬಳಸಿಕೊಂಡು ಕೊಡುವ ಅನುಭವವನ್ನು ಧ್ವನಿ ಸಂಯೋಜನೆ ಎನ್ನಬಹುದಾಗಿದೆ.

ಇಂದು ಕೃತ್-ಶಬ್ದಗಳು (ಇದನ್ನು ಇಂಗ್ಲೀಷಿನಲ್ಲಿ Folly ಎಂದು ಕರೆಯುತ್ತಾರೆ. ಕನ್ನಡದ ಪದವನ್ನು ನಾನೇ ಸೃಷ್ಟಿಸಿಕೊಂಡಿದ್ದೇನೆ. ಇದಕ್ಕೆ ಚಾಲ್ತಿಯಲ್ಲಿ ಬೇರೆ ಕನ್ನಡ ಶಬ್ದವಿದ್ದರೆ ಯಾರಾದರೂ ತಿಳಿಸಬೇಕು) ಎನ್ನುವ ವಿಷಯದ ಬಗ್ಗೆ ಒಂದಿಷ್ಟು ಮಾತುಗಳು. ಧ್ವನಿ ಸಂಯೋಜನೆಯ ಒಂದು ಮಹತ್ತರ ಅಂಗ ಈ ಕೃತ್-ಶಬ್ದಗಳು. ಚಿತ್ರದಲ್ಲಿ ಕಾಣಿಸುವ ಯಾವುದೇ ಶಬ್ದಗಳನ್ನು ಕೃತಕವಾಗಿ ಸೃಷ್ಟಿಸುವ ಪ್ರಕ್ರಿಯೆಯೇ ಇದು. ಉದಾಹರಣೆಗೆ ಚಿತ್ರವೊಂದರಲ್ಲಿ ಪಾರಿವಾಳ ಹಾರುತ್ತಿದೆ ಎಂದುಕೊಳ್ಳಿ. ಇದರ ಶಬ್ದವನ್ನು ಸ್ಥಳದಲ್ಲಿ ದಾಖಲಿಸಿಕೊಳ್ಳದಿದ್ದರೆ, ಮತ್ತೆ ಹೇಗೆ ಸೃಷ್ಟಿಸುವುದು? ಇದಕ್ಕೆ ಎರಡು ವಿಧಾನ ಇದೆ. ಒಂದನೆಯದಾಗಿ ಸಾವಿರಗಟ್ಟಲೆ ಇಂಥಾ ಶಬ್ದಗಳನ್ನೊಳಗೊಂಡ ಸಿ.ಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. (ರಸೂಲ್ ಎಂಬ ಧ್ವನಿ ಸಂಯೋಜಕ ದಾಖಲಿಸಿದ ಶಬ್ದ ಭಂಡಾರ ಭಾರತದಲ್ಲಿ ಅತ್ಯಂತ ಹೆಚ್ಚು ಚಾಲ್ತಿಯಲ್ಲಿರುವುದು. ಇದಲ್ಲದೆ ೬೦೦೦ ಸೀರೀಸ್ ಎಂಬ ಹೆಸರಿನ ಅಮೇರಿಕನ್ ಶಬ್ದ ಭಂಡಾರವೂ ಚಾಲ್ತಿಯಲ್ಲಿದೆ) ಇದರಲ್ಲಿ ಹಕ್ಕಿ ಹಾರುವುದು, ಟ್ರಾಫಿಕ್, ಕಾಲ್ನಡಿಗೆಯ ಶಬ್ದ, ವಾಹನಗಳ ಶಬ್ದ ಇತ್ಯಾದಿ ಅಕಾರಾದಿ ಪಟ್ಟಿಮಾಡಿ ಶಬ್ದಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. ಇದರಿಂದ ಸೂಕ್ತವಾದ ಶಬ್ದವನ್ನು ಹೆಕ್ಕಿ, ಅದಕ್ಕೆ ಬೇಕಾದಂಥಾ ಚಿಕಿತ್ಸೆ ಕೊಟ್ಟು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು. ಎರಡನೆಯ ವಿಧಾನವೆಂದರೆ, ಕೃತಕವಾಗಿ ಸ್ಟುಡಿಯೋದಲ್ಲಿ ಈ ಶಬ್ದಗಳನ್ನು ಸೃಷ್ಟಿಸುವುದು. ಪಾರಿವಾಳ ಹಾರುವುದನ್ನು ಮೈಕಿನ ಮುಂದೆ ಹಳೆಯ ಹವಾಯಿ ಚಪ್ಪಲ್ಲುಗಳನ್ನು ಪರಸ್ಪರ ಹೊಡೆಯುವುದರ ಮೂಲಕವೋ, ದಪ್ಪದ ಬಟ್ಟೆಯನ್ನು ಮೈಕ್ ಮುಂದೆ ಝಾಡಿಸುವುದರ ಮೂಲಕವೋ ಸೃಷ್ಟಿಸುತ್ತಾರೆ. ಈ ಪ್ರಕ್ರಿಯೆಯನ್ನು ನೋಡಿದರೆ ನಗುಬರುವಷ್ಟು ತಮಾಷೆಯಾಗಿರುತ್ತದೆ. ಆದರೆ ಅಲ್ಲಿ ಸೃಷ್ಟಿಯಾಗುವ ಧ್ವನಿಗಳನ್ನು ಪರದೆಯ ಮೇಲೆ ಚಿತ್ರದೊಂದಿಗೆ ನೋಡಿದಾಗ ನಂಬಲಾರದಷ್ಟು ನೈಜವಾಗಿ ಅವು ಮೂಡಿ ಬಂದಿರುತ್ತದೆ. ಇಂಥಾ ಕೃತಕ ಶಬ್ದಗಳನ್ನು ರೂಪಿಸುವ ಅನೇಕ ತಂತ್ರಜ್ಞರು ಪ್ರತಿಯೊಂದು ಚಿತ್ರೋದ್ಯಮದಲ್ಲೂ ಇದ್ದಾರೆ. ಸುಮಾರು ಎರಡು ಗಂಟೆ ಚಿತ್ರದಲ್ಲಿ ಇಂಥ ಸುಮಾರು ೩೦೦ ಶಬ್ದಗಳಿರುತ್ತವೆ. ಪ್ರತಿಯೊಂದನ್ನೂ ಈ ತಂತ್ರಜ್ಞರು ಸೃಷ್ಟಿಸಿ, ಅದನ್ನು ಸಂದರ್ಭಕ್ಕೆ ತಕ್ಕಂತೆ ಹದಬರಿಸಿ ನಮ್ಮ ಅನುಭವವನ್ನು ಕಟ್ಟಿಕೊಡುವಲ್ಲಿ ತಮ್ಮ ಕೊಡುಗೆ ನೀಡುತ್ತಾರೆ.

ಇಲ್ಲಿ ಇನ್ನೊಂದು ವಿಷಯ ಇದೆ. ಚಿತ್ರದಲ್ಲಿ ಕಣ್ಣಿಗೆ ಕಂಡ ಎಲ್ಲಾ ಶಬ್ದಗಳನ್ನು ಸೃಷ್ಟಿ ಮಾಡಬೇಕೇ? ಮತ್ತೆ ಅವೆಲ್ಲವೂ ನಮಗೆ ಕೇಳಿಸಲೇ ಬೇಕೇ? ನಿಜ ಜೀವನದಲ್ಲಿ ಹೀಗೆ ಆಗುವುದಿಲ್ಲವಲ್ಲಾ? ಹೌದು. ನಿಮ್ಮ ಅನಿಸಿಕೆ ಸರಿ. ನಿಜ ಜೀವನದಲ್ಲಿ ಹೀಗೆ ಆಗುವುದಿಲ್ಲ. ಇದೇ ಸೂತ್ರವನ್ನು ಕೃತ್-ಶಬ್ದ ತಂತ್ರಜ್ಞ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಮತ್ತೆ ಸಮಯ- ಸಂದರ್ಭಗಳಿಗೆ ಅನುಸಾರವಾಗಿ ಧ್ವನಿ ಸೃಷ್ಟಿ ಮಾಡಬೇಕಾಗುತ್ತದೆ. ಚಿತ್ರದಲ್ಲಿ ಕೆಲವೊಮ್ಮೆ ತುಂಬಾ ಚಟುವಟಿಕೆಗಳಿದ್ದರೂ, ನಾಯಕನ ಮನೋಸ್ಥಿತಿ ಬೇಸರದಿಂದಿದ್ದರೆ, ಅಥವಾ ಆತ ಒಂಟಿಯಾಗಿದ್ದರೆ, ಅಂತರ್ಮುಖಿಯಾಗಿದ್ದರೆ, ಇಂಥಾ ಸಂದರ್ಭಗಳಲ್ಲಿ ಇತರ ಧ್ವನಿಗಳೆಲ್ಲವೂ ಮಾಯವಾಗಿ ಆತನಿಗೆ ಮತ್ತು ಪ್ರೇಕ್ಷಕರಿಗೆ ಕೇಳಲೇ ಬೇಕಾದ ಒಂದೇ ಧ್ವನಿ ಮಾತ್ರ ಕೇಳಿಸಿಬರಬಹುದು. ಅಥವಾ ಆ ಒಂದು ಧ್ವನಿ ಇತರ ಧ್ವನಿಗಳನ್ನು ಎಳೆದು ಮುಂದೆ ತರಬಹುದು. ಅಥವಾ ಯಾವುದೋ ಶಬ್ದವು ನಮ್ಮನ್ನು ಇತರ ಧ್ವನಿಗಳಿಂದ ದೂರ ಕೊಂಡೊಯ್ಯಬಹುದು. ಈ ಎಲ್ಲಾ ಕಾರಣಗಳಿಂದಾಗಿ ಮತ್ತೆ ಈ ಕೃತ್-ಧ್ವನಿ ಎನ್ನುವುದೂ ಒಂದು ಸೃಜನಾತ್ಮಕ ಪ್ರಕ್ರಿಯೆಯಾಗಿದೆ.

– ಮುಂದುವರೆಯಲಿದೆ.

This entry was posted in Film Craft. Bookmark the permalink.

4 Responses to ಚಿತ್ರ ಹಾಗೂ ಧ್ವನಿ (ಭಾಗ – ೪)

 1. ಬೇತಾಳ ಹೇಳುತ್ತಾರೆ:

  Follyಗೆ ಮೈಸೂರು ವಿಶ್ವ ವಿದ್ಯಾನಿಲಯದ ನಿಘಂಟಿನಲ್ಲಿ ಇರುವ ಬಃವರ್ಥಳಲ್ಲಿ ಅಣಕು ನಾಟಕವೆಂಬುದೂ ಒಂದು. ಆ ಆಧಾರದಲ್ಲಿ ಅಣಕುಧ್ವನಿ (ಮೂಲವಲ್ಲದ್ದೆಲ್ಲಾ ಅಣಕವೇ ಅಲ್ಲವೇ?) ಹೆಚ್ಚು ಸರಿಯಾದೀತು ಎಂದು ನನ್ನ ಅನಿಸಿಕೆ. ನೀಚಾರ್ಥ ಕಳೆಯುವುದಾಗಿದ್ದರೆ ಕಳ್ಳಧ್ವನಿ ಎಂದೂ ನಡೆಯುತ್ತಿತ್ತು. ಕೃತ್-ಧ್ವನಿಕರ್ತನಿಗೆ ಮೂಲವೊಂದಿರುತ್ತದೆ. ಆದರೆ ಅದನ್ನು ಚಿತ್ರದಲ್ಲಿ ಅನುಭವಿಸುವವರಿಗೆ ಇದೇ ಮೂಲವಾಗುತ್ತದೆ ಎಂಬರ್ಥದಲ್ಲಿ ಇದು ನಿಜಕ್ಕೂ ಸೃಜನಾತ್ಮಕ ಕ್ರಿಯೆ ಸರಿ. ವೈಣಿಕನೊಬ್ಬ ಕೀರವಾಣಿ ರಾಗದಲ್ಲಿ ಒಂದು ಸಂಗೀತದ ನಡುವೆ ಕೋಗಿಲೆಯ ಕೃತ್-ಧ್ವನಿ ಮೂಡಿಸುತ್ತಾನೆ. ಇದನ್ನೇ ಅನುಕರಿಸುವ ಇನ್ನೊಂದೇ ಕಲಾವಿದ ಕೋಗಿಲೆಯ ನಾದವನ್ನು ವೀಣೆಯ ತಂತಿ ಗುಂಜನಕ್ಕೆ ಕಳೆದುಕೊಳ್ಳುವ ಅಪಾಯವಿದೆ. ಕಾರ್ಬನ್ ಪ್ರತಿಗಳಾ ಮಿತಿ ಇಲ್ಲೂ ಹೀಗೆ ಗುರುತಿಸಬಹುದು. ದೇಶೀಯ ಧ್ವನಿಕರ್ತನೋ, ೬೦೦೦ ಧ್ವನಿಗಳ ಜನಕನೋ ಇನ್ನೊಬ್ಬರೋ ನಮ್ಮಸಿನೆಮಾಗಳಿಗೆ ಅನಿವಾರ್ಯವಾಗದಿರಲಿ ಎಂದು ಹಾರೈಸುತ್ತೇನೆ. ಮನೆಯಲ್ಲೇ ದನ, ಕೊಟ್ಟಿಗೆ ಇದ್ದರೂ ಆರೈಕೆ, ಸಂಗ್ರಹಗಳೆಲ್ಲ ಯಾಂತ್ರೀಕೃತಗೊಂಡಲ್ಲಿ ಬೆಳೆದ ಮಗುವೊಂದಕ್ಕೆ ಪ್ರಶ್ನೆ ಮೂಡಿತಂತೆ – ಕರು ಹಾಲು ಕುಡಿಯುವುದು ಹೇಗೆ? ಸಮಯ ಕಳೆದು ಅದರದೇ ಸೃಜನಶೀಲತೆ ಸಮಾಧಾನಿಸಿತಂತೆ – ಒಂದು ಲೀಟರಿನ ತೊಟ್ಟೆಯನ್ನು ಒಟ್ಟೆ ಮಾಡಿ ಚೀಪುತ್ತದೆ/ ಸ್ಟ್ರಾ ತುರುಕಿ ಹೀರುತ್ತದೆ!

 2. shreenidhids ಹೇಳುತ್ತಾರೆ:

  ನಮಸ್ತೇ ಅಭಯ್ ಸಿಂಹ,

  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

  ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: ೧೬ ಮಾರ್ಚ್ ೨೦೦೮
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ.
  ಶ್ರೀನಿಧಿ.ಡಿ.ಎಸ್

 3. Manjunatha swamy ಹೇಳುತ್ತಾರೆ:

  Inthi ninna preethiya cinema neevu nodiddare ondu vimarshe madabhudall?

 4. abhayaftii ಹೇಳುತ್ತಾರೆ:

  ನಾನು ಆ ಚಿತ್ರವನ್ನು ನೋಡಿದ್ದೇನೆ. ಸಧ್ಯಕ್ಕೆ ನನ್ನದೇ ಚಿತ್ರ ಮುಗಿಸುವ ತುರಾತುರಿಯಲ್ಲಿ ನಾನು ಇರುವುದರಿಂದ ಒಂದಿಷ್ಟು ಸಮಯ ಕೊಡಿ… ಬರೆಯಲು ಪ್ರಯತ್ನ ಮಾಡುತ್ತೇನೆ ಸಾಧ್ಯವಾದಷ್ಟು ಬೇಗ…

  ಇಂತಿ ನಿಮ್ಮ ಪ್ರೀತಿಯ
  ಅಭಯ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s