ಚಿತ್ರ ಧ್ವನಿ (ಭಾಗ – ೫ )


ನಿಜ ಜೀವನದಲ್ಲಿ ಅನೇಕ ಬಾರಿ ನಾವು ತುಂಬಾ ಸಂತೋಷಗೊಂಡಾಗ, ಹೆಮ್ಮೆಯಿಂದ ಹೆಜ್ಜೆ ಹಾಕುವಾಗ ಮನಸ್ಸಿನಲ್ಲಿ ಯಾವುದೋ ಒಂದು ಹಾಡು ಗುನುಗುತ್ತೇವೆ ನೆನಪಿದೆಯಾ? ಕೆಲವೊಂದು ಬಟ್ಟೆಹಾಕಿ ನಡೆಯುವಾಗ ನಾವು ತುಂಬಾ ಅಂದವಾಗಿ ಕಾಣುತ್ತಿದ್ದೇವೆ ಎಂದು ನಮಗೇ ಅನ್ನಿಸಿ ಯಾವುದೋ ಸಿನೆಮಾ ಹೀರೋನಿಗೆ ಹೋಲಿಸಿ ಹಿನ್ನೆಲೆ ಸಂಗೀತವನ್ನು ನಾವೇ ಕೊಟ್ಟು ಸ್ಟೈಲ್ ಮಾಡುತ್ತೇವೆ ನೆನಪಿದೆಯಾ? ಹಾಗಾದರೆ ಈ ಹಿನ್ನೆಲೆ ಸಂಗೀತ ಎಂಬ ವಿಷಯ ಕುತೂಹಲಕರ ಅಲ್ಲವೇ? ಇವತ್ತಿನ ಭಾಗದಲ್ಲಿ ಅದರ ಬಗ್ಗೆ ಒಂದಷ್ಟು ಯೋಚನೆಗಳು, ಒಂದಷ್ಟು ಒದರುವಿಕೆಗಳು.

ಹಿನ್ನೆಲೆ ಸಂಗೀತ ಯಾಕೆ ಚಿತ್ರಗಳಿಗೆ ಅಗತ್ಯ? ಅದರ ಕೆಲಸವೇನು? ಯಾವುದೇ ಸಂಗೀತಕ್ಕೂ ಅದರದೇ ಆದ ಒಂದು ಲಯ ಇರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಚಿತ್ರವೊಂದಕ್ಕೆ ಈ ಲಯ ಕೂಡಿದಾಗ, ನಮಗೆ ಚಿತ್ರದಲ್ಲೂ ಒಂದು ಲಯದ ಅನುಭವ ಬರುತ್ತದೆ. ಸಂಗೀತಕಾರನೊಬ್ಬ ಹಾಡುಹೇಳುವಾಗ ತಾಳ ಹಾಕುವುದರಿಂದ ಸಂಗೀತ ಶಾಸ್ತ್ರದ ಗಂಧ-ಗಾಳಿ ಇಲ್ಲದವರಿಗೂ ತಾಳದ ಅನುಭವ ಆಗುತ್ತದೆ. ಇಲ್ಲಿ ದೃಶ್ಯದಿಂದ ನಾವು ಶಬ್ದದಲ್ಲಿ ಲಯವನ್ನು ಕಂಡುಕೊಳ್ಳುತ್ತಿರುತ್ತೇವೆ. ಸಿನೆಮಾದಲ್ಲಿ ಇದರ ವಿರುದ್ಧ ಪ್ರಕ್ರಿಯೆ ನಡೆಯುತ್ತದೆ. ಅಲ್ಲಿ ಒಂದು ಚಿತ್ರಕ್ಕೆ ಶಬ್ದದಿಂದಾಗಿ ಲಯ ಕಂಡು ಬರುತ್ತದೆ. ಇದನ್ನು ಹಿನ್ನೆಲೆ ಸಂಗೀತದ ಮೊದಲ ಉಪಯೋಗ ಎನ್ನಬಹುದು. ಮುಂದಿನ ಚಿತ್ರವನ್ನು ನೀವು ನೋಡುವಾಗ ಹಿನ್ನೆಲೆ ಸಂಗೀತಕ್ಕೆ ಒಂದಿಷ್ಟು ಗಮನ ಕೊಟ್ಟು ಅದಿಲ್ಲದಿದ್ದರೆ ಈ ದೃಶ್ಯ ಹೇಗೆ ಕಾಣಿಸುತ್ತಿತ್ತು ಎಂದು ಕಲ್ಪಿಸಿಕೊಳ್ಳಿ ಆಗ ಈ ಲಯದ ವಿಷಯ ಇನ್ನಷ್ಟು ವಿಷದವಾಗುತ್ತದೆ.

ದೃಶ್ಯದಲ್ಲಿ ಇರುವ ಭಾವನೆಗಳು ಅನೇಕ ಬಾರಿ ಸೂಕ್ಷ್ಮವಾಗಿ ತೋರಿಸಲ್ಪಟ್ಟಿರುತ್ತವೆ. ಪ್ರೇಕ್ಷಕನಿಗೆ ತಾನು ಚಿತ್ರ ನೋಡುತ್ತಿರುವ ಸಂದರ್ಭದಿಂದಾಗಿ ಆ ದೃಶ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಕೆಲವೊಮ್ಮೆ ಅರ್ಥವಾಗದೇ ಹೋಗಬಹುದು. ಇಂಥಾ ಸಂದರ್ಭದಲ್ಲಿ ಸಂಭಾಷಣೆ ಹಾಕಿ ದೃಶ್ಯದ ಅರ್ಥ ವಿವರಿಸಿದರೆ ಅದು ಸಿನೆಮಾ ಮಾಧ್ಯಮಕ್ಕೆ ದ್ರೋಹ ಬಗೆದಂತೆಯೇ ಸರಿ. ಇಂಥಾ ಸಂದರ್ಭದಲ್ಲಿ ಹಿನ್ನೆಲೆ ಸಂಗೀತ ನಿಧಾನಕ್ಕೆ ಪ್ರೇಕ್ಷಕರನ್ನು ಸರಿಯಾದ ಹಳಿಗೆ ತಳ್ಳುವಲ್ಲಿ ಸಹಾಯ ಮಾಡುತ್ತದೆ. ಅಥವಾ ಕೆಲವೊಮ್ಮೆ ಇರುವಂಥಾ ಭಾವನೆಯನ್ನು ಒಂದು ಮಟ್ಟ ಮೇಲಕ್ಕೆ ಕರೆದೊಯ್ಯಲು ಸಹಾ ಹಿನ್ನೆಲೆ ಸಂಗೀತ ಸಹಕಾರಿಯಾಗಿರಬಹುದು. ಇಲ್ಲಿ ಇದು ಬರೆದ ವಾಕ್ಯಕ್ಕೆ ಅಡಿಗೆರೆ ಹಾಕಿದಂಥಾ ಕೆಲಸ ಮಾಡುತ್ತದೆ. ಅಥವಾ ಕೆಲವೊಮ್ಮೆ ಚಿತ್ರದ ಭಾವನೆಗೆ ವಿರುದ್ಧವಾದ ಹಿನ್ನೆಲೆ ಸಂಗೀತ ಪ್ರೇಕ್ಷಕನನ್ನು ಯೋಚನೆಗೆ ಹಚ್ಚುವಲ್ಲೂ ಸಹಕಾರಿಯಾಗಿರುತ್ತದೆ.

ಹಿನ್ನೆಲೆ ಸಂಗೀತ ಇಡೀ ಚಿತ್ರದಲ್ಲಿ ಒಂದು ವಿಶಿಷ್ಟ ಪಾಕ ಹೊಂದಿರುತ್ತದೆ. ಹಿನ್ನೆಲೆ ಸಂಗೀತದ ಆಯ್ಕೆ ಮಾಡುವಾಗಲೇ ನಿರ್ದೇಶಕ ಹಾಗೂ ಸಂಗೀತಕಾರ ಒಂದಷ್ಟು ನಿರ್ಧಾರಗಳನ್ನು ಮಾಡಿಕೊಳ್ಳುತ್ತಾರೆ. ಇದರಲ್ಲಿ ಒಂದು ಸಂಗೀತದ ಬಳಕೆಯ ಪ್ರಮಾಣದ ಬಗ್ಗೆ. ಇಡೀ ಚಿತ್ರದುದ್ದಕ್ಕೂ ಹಿನ್ನೆಲೆ ಸಂಗೀತ ಯಾವಯಾವ ಸ್ಥಳಗಳಲ್ಲಿ ಬರಬೇಕು, ಅದರ ಆಗಮನ-ನಿರ್ಗಮನ ಸ್ಥಳಗಳು ಹೇಗಿರಬೇಕು ಇತ್ಯಾದಿ ವಿಷಯಗಳನ್ನು ಪ್ರಮಾಣ ಎಂದು ನಾನು ಕರೆಯುತ್ತಿರುವುದು. ಚಿತ್ರವೊಂದನ್ನು ಇಡಿಯಾಗಿ ಪರಿಗಣಿಸದೆ ಪ್ರತ್ಯೇಕ ದೃಶ್ಯಗಳಾಗಿ ನೋಡಿದಾಗ ಸಂಗೀತ ಸೂಕ್ತವೆಂದನಿಸಿದರೂ, ಪ್ರೇಕ್ಷಕನು ಚಿತ್ರವನ್ನು ಇಡಿಯಾಗಿ ನೋಡಲಿದ್ದಾನೆ ಎನ್ನುವುದನ್ನು ಮರೆಯದೇ ಸಂಗೀತದ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ಇಲ್ಲವಾದರೆ, ಚಿತ್ರವಿಡೀ ಹಿನ್ನೆಲೆ ಸಂಗೀತ ತುಂಬಿ ಅವು ಪರಸ್ಪರ ಸ್ಪರ್ಧಿಸಿ ರಸಾಭಾಸ ಉಂಟುಮಾಡಬಹುದು. ಕೆಲವೊಮ್ಮೆ ಮೌನವೂ ಸಂಗೀತವೇ ಎನ್ನುವುದನ್ನು ಮರೆಯದಿರುವುದು ತೀರಾ ಅಗತ್ಯವಾಗಿರುತ್ತದೆ. ಎರಡು ಉತ್ತಮ ಹಿನ್ನೆಲೆ ಸಂಗೀತ ತುಣುಕುಗಳ ನಡುವೆ ಬರುವ ಮೌನ ಪ್ರೇಕ್ಷಕನಿಗೆ ಹಿಂದಿನ ತುಣುಕಿನಿಂದ ಮುಂದಿನ ತುಣುಕಿಗೆ ಮನಸ್ಸನ್ನು ಕರೆದೊಯ್ಯಲು ಅವಕಾಶಕೊಡುವುದಲ್ಲದೆ, ಹಿಂದಿನ ತುಣುಕನ್ನು ಮೆಲುಕು ಹಾಕಿ ಅನುಭವಿಸಲು ಸಮಯಾವಕಾಶವನ್ನು ಕೊಟ್ಟಂತೆಯೂ ಆಗುತ್ತದೆ.

ಮುಂದಿನ ಅತಿ ಮುಖ್ಯ ನಿರ್ಧಾರ ಬಳಸುತ್ತಿರುವ ಸಂಗೀತ ಶೈಲಿಯ ಬಗ್ಗೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಬಳಸುತ್ತೇವೋ? ಉತ್ತರಾದಿಯೋ? ಸಿನೆಮೀಯ ಸಂಗೀತವೋ? ಜಾಸ್ ಸಂಗೀತವೋ? ಪಾಪ್? ರಾಕ್? ವೆಸ್ಟರ್ನ್ ಕ್ಲಾಸಿಕಲ್? ಇತ್ಯಾದಿ ಅನೇಕ ಪ್ರಬೇಧಗಳಿಂದ ನಮ್ಮ ಚಿತ್ರಕ್ಕೆ ಅನುಗುಣವಾದ, ಚಿತ್ರದ ಆತ್ಮದಲ್ಲೇ ತನ್ನ ಆತ್ಮವನ್ನೂ ಹೊಂದಿರುವ ಸಂಗೀತದ ಆಯ್ಕೆ ಅಗತ್ಯ. ಕೆಲವೊಮ್ಮೆ ವಿರುದ್ಧ ಆಯ್ಕೆಯೂ ವಿಶಿಷ್ಟವಾಗಿರುತ್ತದೆ. ಇದರಿಂದ ಪ್ರೇಕ್ಷಕನಲ್ಲಿ ತಾನು ನೋಡುತ್ತಿರುವ ಚಿತ್ರದ ನೆಲೆಯನ್ನು ಕಂಡುಕೊಳ್ಳುವಲ್ಲಿ ಸಹಕಾರ ಸಿಗುತ್ತದೆ. ಚಿತ್ರಮಂದಿರದ ಹೊರಗಿನ ಅಧ್ವಾನ ಪ್ರಪಂಚದಿಂದ ನಿರ್ದೇಶಕ ತೋರಿಸಲಿರುವ ಪ್ರಪಂಚ ನೋಡಲು ಬಂದ ನೂರಾರು ಜನರ ಮನಸ್ಸನ್ನೆಲ್ಲಾ ನಮ್ಮ ಪ್ರಪಂಚಕ್ಕೆ ಎಳೆತರಲು ಈ ಸಂಗೀತದ ಆಯ್ಕೆ ಮುಖ್ಯವಾಗುತ್ತದೆ. ಹೀಗೆ ಹಿನ್ನೆಲೆ ಸಂಗೀತವು ಸಿನೆಮಾವೊಂದರ ಸಂಪೂರ್ಣ ಅನುಭವವನ್ನು ರೂಪಿಸುವಲ್ಲಿ ಸಹಕಾರಿಯಾಗಿರುತ್ತದೆ.

– ಮುಂದುವರೆಯಲಿದೆ.

This entry was posted in Film Craft. Bookmark the permalink.

1 Response to ಚಿತ್ರ ಧ್ವನಿ (ಭಾಗ – ೫ )

  1. ಇಸ್ಮಾಯಿಲ್ ಹೇಳುತ್ತಾರೆ:

    ಟಾಕಿ ಚಿತ್ರಗಳು ಬರುವುದಕ್ಕೆ ಮೊದಲಿದ್ದ ಮೂಕಿ ಚಿತ್ರಗಳಲ್ಲೂ ಹಿನ್ನೆಲೆ ಸಂಗೀತ ಬಳಕೆಯಾಗುತ್ತಿತ್ತು. ಚಾರ್ಲಿ ಚಾಪ್ಲಿನ್ ನ ಚಿತ್ರಗಳ ಉದಾಹರಣೆಗಳ ಮೂಲಕ ಹಿನ್ನೆಲೆ ಸಂಗೀತವನ್ನು ವಿವರಿಸಬಹುದು ಎನಿಸುತ್ತದೆ. ಟಾಕಿ ಯುಗದ ಸಂಗೀತಕ್ಕಿಂತಲೂ ಭಿನ್ನವಾದ ಈ ಹಿನ್ನೆಲೆ ಸಂಗೀತದ ಬಗ್ಗೆಯೂ ಚರ್ಚಸುವುದು ಅಗತ್ಯ ಎನಿಸುತ್ತದೆ. ಹಾಗಾದಾಗ ಈ ಲೇಖನ ಮಾಲೆ ಹೆಚ್ಚು ಅರ್ಥಪೂರ್ಣವಾಗುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s