ಸರಕಾರೀ ಧೂಳು


ಕನ್ನಡ ಸಿನೆಮಾ ಕ್ಷೇತ್ರ ಇತರ ಕಡೆಗಿಂತ ಅನೇಕ ವರ್ಷ ಹಿಂದೆ ಇದೆ ಎಂದು ಅನೇಕರು ಮಾತನಾಡುತ್ತಾರೆ. ಇದನ್ನು ಕೇಳಿ… ಕೇಳಿ… ಸಾಕಾಗಿ ಹೋಗಿತ್ತು ನನಗೆ ಇಲ್ಲಿ ಒಂದು ಸಿನೆಮಾ ಮಾಡುವ ಮೊದಲು. ಅಂದರೆ ಸಿನೆಮಾ ಮಾಡಿ ಕನ್ನಡ ಸಿನೆಮಾ ರಂಗವನ್ನೇ ಉದ್ದಾರ ಮಾಡಿದೆಯೋ ಎಂದು ಕಟಕಿ ಆಡಬೇಡಿ ಸ್ವಾಮಿ. ಇಲ್ಲ! ನಾನು ಅಂಥದ್ದೇನೂ ಮಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ಆದರೆ ಸಿನೆಮಾ ಮಾಡುವ ಉದ್ದಕ್ಕೂ ಅನೇಕ ಪ್ರತಿಭಾನ್ವಿತರನ್ನು ಭೇಟಿಯಾದೆ. ಅವರೆದುರು ಕಿರಿಯನಾಗಿ ಕಲಿಯಲು ಪ್ರಯತ್ನಿಸಿದೆ. ಆದರೆ ಉದ್ದಕ್ಕೂ ನನ್ನನ್ನು ಕಾಡಿದ ಪ್ರಶೆಯೆಂದರೆ, ಇಷ್ಟೆಲ್ಲಾ ಅಧ್ಬುತ ಜನರಿದ್ದರೂ ನಮ್ಮ ಸಿನೆಮಾಗಳು ಬಡವಾಗಿರುವುದರಲ್ಲಿ ಸಂಶಯವಿಲ್ಲ. ಯಾಕೆ ಈ ವಿರೋದಾಭಾಸ ಎಂದು. ಆದರೆ, ನಿಧಾನಕ್ಕೆ ಸಿನೆಮಾ ನಿರ್ಮಾಣದ ಹಂತಗಳಲ್ಲಿ ಇದಕ್ಕೆ ಕಾರಣವೂ ನನಗೇ ಅರಿವಾಗುತ್ತಾ ಬಂತು.

ಒಂದು ಉದಾಹರಣೆ. (ಹೆಸರುಗಳು ಬೇಡ ಇಲ್ಲಿ. ದಯವಿಟ್ಟು ಕ್ಷಮಿಸಿ.) ಸರಕಾರಿ ಸಂಸ್ಥೆಯೊಂದಕ್ಕೆ ಹಿರಿಯ ಲೇಖಕರೊಬ್ಬರ ಬಗ್ಗೆ ಒಂದು ಸಾಕ್ಷ್ಯಚಿತ್ರ ನಿರ್ಮಿಸಲು ನನಗೆ ಸುಮಾರು ಎಂಟು ತಿಂಗಳ ಹಿಂದೆ ಅವಕಾಶ ದೊರೆಯಿತು. ಅದನ್ನು ನಿಗದಿತ ಕಾಲದೊಳಗೆ ನಿರ್ಮಿಸಿ ಕೊಟ್ಟೆ. ಇದಕ್ಕೆ ನಿಗದಿತವಾಗಿದ್ದ ಅರ್ಧ ಹಣ ಸುಮಾರು ಒಂದು ತಿಂಗಳ ಕಾಯುವಿಕೆಯ ನಂತರ ಸಿಕ್ಕಿತು. ಮುಂದಿನ ಕಂತು ಸಾಕ್ಷ್ಯ ಚಿತ್ರ ನಿರ್ಮಾಣದ ನಂತರ ಎಂದು ಒಪ್ಪಂದವಾಗಿತ್ತು. ಈಗ ಸಾಕ್ಷ್ಯ ಚಿತ್ರ ಎಂದರೆ ಹತ್ತು ಹಲವು ದಾರಿಗಳಿರುವ ಬಾಗಿಲು ತಾನೇ? ಸರಿ, ಆ ಹಿರಿಯ ಲೇಖಕರನ್ನು ನಿಗದಿತ ಕಾಲಾವಕಾಶದೊಳಗೆ ಸಮರ್ಪಕವಾಗಿ ಪರಿಚಯಿಸುವ ಪ್ರಯತ್ನ ಮಾಡಿದ್ದೆ. ಆ ಅಗಾಧ ವ್ಯಕ್ತಿತ್ವವನ್ನು ಕೇವಲ ಇಪ್ಪತ್ತು ನಿಮಿಷಗಳಲ್ಲಿ ಹಿಡಿದಿಡಲು ನಾನು ಪಟ್ಟ ಪಾಡು ಅಂತಿಂಥದ್ದಲ್ಲ. ಆಗಲಿ, ಕೆಲಸ ತೃಪ್ತಿಕೊಟ್ಟಿತು, ಮುದ ನೋಡಿತ್ತು. ಆದರೆ ಸಮಸ್ಯೆ ಈ ಚಿತ್ರವನ್ನು ಮಾಡುವುದರಲ್ಲಿ ಅಲ್ಲ! ಅದನ್ನು ಸರಕಾರೀ ಕ್ಷುದ್ರ ಬುದ್ಧಿಯಿಂದ ಒಪ್ಪಿಗೆ ಪಡಿಸಿಕೊಳ್ಳುವುದು! ಮೊದಲ ಸುತ್ತಿನ ನೋಟದಲ್ಲಿ, ಹಿರಿಯ ಸಾಹಿತಿಗಳು ತಮ್ಮ ಜೀವನದ ಬಗ್ಗೆ ವಿವರಿಸುತ್ತಾ ಒಂದೆಡೆ ‘ದಲಿತ’ ಎಂಬ ಶಬ್ದವನ್ನು ಬಳಸುತ್ತಾರೆ. ಇಲ್ಲಿ ದಲಿತರಿಗೆ ಹೇಗೆ ಶೋಷಣೆ ನಡೆಯುತ್ತಿತ್ತು, ಅದು ತನ್ನಲ್ಲಿ ಹೇಗೆ ಒಂದು ರಾಜಕೀಯ ಪ್ರಜ್ಞೆಯನ್ನು ಹುಟ್ಟಿಸಿತು ಎಂಬುದರ ಬಗ್ಗೆ ಲೇಖಕರು ಮಾತನಾಡುತ್ತಾರೆ. ಆದರೆ ಸಾಕ್ಷ್ಯ ಚಿತ್ರ ನೋಡಲು ಕುಳಿತ ಸರಕಾರಿ ಅಧಿಕಾರಿ, ಆ ‘ದಲಿತ’ ಶಬ್ದ ಕೇಳಿಸುತ್ತಲೇ ಹೌಹಾರಿ ಬಿದ್ದರು! No… No.. you cant use that word ‘Dalita’ ಎಂದು ಅಪ್ಪಣೆ ಕೊಟ್ಟರು. “ಸರ್, ದಯವಿಟ್ಟು ಕೇಳಿ… ಅವರು ದಲಿತರಿಗೆ ಅವಮಾನ ಮಾಡುತ್ತಿಲ್ಲ. ಅವರಿಗೆ ಆಗುತ್ತಿರುವ ಅವಮಾನಕ್ಕೆ ಪ್ರತಿಭಟನೆಯ ಅಗತ್ಯದ ಕುರಿತು ಮಾತನಾಡುತ್ತಿದ್ದಾರೆ” ಎಂದು ನಾನು ಅನೇಕ ಬಾರಿ ಅರಿಕೆ ಮಾಡಿಕೊಂಡ ಮೇಲೆ ಅದು ಪಾಸ್ ಆಯಿತು (ನನ್ನ ಮೇಲೆ ಕರುಣೆ ಬಂದು ಅಷ್ಟೆ. ಸಂದರ್ಭದ ಅರಿವಾಗಿ ಎಂದು ನಾನು ಇವತ್ತಿನವರೆಗೆ ಅಂದುಕೊಂಡಿಲ್ಲ!) ಸರಿ ಇನ್ನು ಕೊನೆಗೆ ಇದು ನನ್ನ ಮೇಲಧಿಕಾರಿಗೂ ತೋರಿಸಿ ಎಂದರು.

ಸುಮಾರು ಒಂದು ತಿಂಗಳು ಒದ್ದಾಡಿ ಅವರಿಗೂ ತೋರಿಸಿ ಆಯಿತು. ಅವರು, ಇಲ್ಲಿ ಸಂಗೀತ ಇನ್ನಷ್ಟು ಲವಲವಿಕೆಯದ್ದಿರಬೇಕು, ಸಾಕ್ಷ್ಯಚಿತ್ರ ನೋಡುವವರಿಗೆ ಮುದ ನೀಡಬೇಕು ಎಂದರು. ದಲಿತರು ಸಾಯುತ್ತಿದ್ದಾರೆ ಎಂದು ಲೇಖಕರು ಹೇಳುವಾಗ, ನಾನು ಲವಲವಿಕೆಯ ಸಂಗೀತವನ್ನು ಹೇಗೆ ಹಾಕಲಿ? ಸಂದರ್ಭದ ಮೇಲೆ ವಿವೇಚನೆ ಇಲ್ಲದಿದ್ದರೆ ಹೋಗಲಿ, ಚಿತ್ರ ನಿರ್ಮಾಣದ ಮೂಲಭೂತಗಳಾದರೂ ತಿಳಿಯಬಾರದೇ? ಹೋಗಲಿ ಅದನ್ನೂ ಮಾಡಿಕೊಟ್ಟೆ. ಆದರೆ ಇದು ಇಲ್ಲಿಗೆ ಮುಗಿಯಲಿಲ್ಲ. ನನ್ನ ಸಾಕ್ಷ್ಯ ಚಿತ್ರದಲ್ಲಿ ‘ವಾಯ್ಸ್ ಓವರ್’ ತಂತ್ರ ಬಳಸಿರಲಿಲ್ಲ. ಅದು ಬೇಕು ಎಂದರು. ಹೆಚ್ಚಿನ ಸ್ಥಿರ-ಚಿತ್ರಗಳು ಬೇಕು, ಹೆಚ್ಚು ಸಂದರ್ಶನ ಬೇಕು… ಹೀಗೆ ಸಮಸ್ಯೆಗಳ ಸರಣಿ ನನ್ನ ಮುಂದೆ ವಿಸ್ತಾರವಾಗುತ್ತಾ ಹೋಯಿತು.

ಇವೆಲ್ಲದರ ನಡುವೆ ಮೂಲ ಸಾಕ್ಷ್ಯ ಚಿತ್ರವನ್ನು ಸ್ವತಃ ಲೇಖಕರಿಗೇ ತೋರಿಸಿದಾಗ ಅವರು, ನನ್ನ ಮೇಲೆ ಬಂದಿರುವ ಚಿತ್ರಗಳಲ್ಲೇ ಇದು ಅತ್ಯಂತ ಶ್ರೇಷ್ಟವಾದದ್ದು ಎಂದು ಸಂತೋಷ ಪಟ್ಟರು. (ಅದು ಅವರ ದೊಡ್ಡಗುಣ ಬಿಡಿ.) ಚಿತ್ರ ಮುಗಿಸಲು ನಿಗದಿತ ಕಾಲಾವಧಿ ಕಳೆದು ಆಗಲೇ ನಾಲ್ಕು ತಿಂಗಳು ಆಗಿದ್ದರೂ, ಇಂದಿಗೂ ನಾನು ಸರಕಾರೀ ಕಛೇರಿಗೆ ಹೋಗುವುದು, ಅವರಿಗೆ ವಿವರಿಸುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದ್ದೇನೆ… ಅವರ ತಿದ್ದುಪಡಿಗಳನ್ನು ಹಾಕುತ್ತಾ ಹೋಗಿ, ನನ್ನ ಸಾಕ್ಶ್ಯ ಚಿತ್ರವನ್ನು ನಾನೇ ನೋಡಲಾರದ ಸ್ಥಿತಿಗೆ ಬಂದಿದ್ದೇನೆ. ಇತರರಿಗೆ ತೋರಿಸಲು ಖಂಡಿತಾ ನಾನು ಹಿಂಜರಿಯುತ್ತಿದ್ದೇನೆ.

ಇನ್ನು ನಮ್ಮಲ್ಲಿನ ನನಗಿಂತ ಅನೇಕಪಟ್ಟು ಹೆಚ್ಚಿನ ಪ್ರತಿಭಾನ್ವಿತ ಚಿತ್ರ ನಿರ್ದೇಶಕರಿಗೆ, ನಿರ್ಮಾಪಕರಿಗೆ ಇರಬಹುದಾದ ತೊಂದರೆಗಳೇನು? ಅವರು ಹೇಗೆ ಒದ್ದಾಡುತ್ತಿರಬಹುದು, ತಮ್ಮನ್ನು ತಾವೇ ಕ್ಷಮಿಸಲಾರದೇ ಪಡುತ್ತಿರುವ ಪಾಡು ಏನು ಎಂದು ಯೋಚಿಸಿಯೇ ನಾನು ಇಲ್ಲಿಂದಲೇ ಅವರವರ ಪಾದಗಳಿಗೆ ನಮಿಸುತ್ತಿದ್ದೇನೆ. ಇಂಥಾ ಒಂದು ವ್ಯವಸ್ಥೆಯಿಂದ ದೂರ ಉಳಿಯುವುದೇ ಕ್ಷೇಮ ಎಂದು ಅನಿಸುತ್ತದಾದರೂ, ನಾವೇ ಕಟ್ಟಿ ಬೆಳೆಸುತ್ತಿರುವ ಸಮಾಜದ ಒಂದು ಭಾಗ ಅದು ಎಂದು ಅರಿವಿಗೆ ಬಂದಾಗ ಎಲ್ಲೋ ಸೋತು ಹೋದ ಅನುಭವ…

This entry was posted in Daily Blog. Bookmark the permalink.

5 Responses to ಸರಕಾರೀ ಧೂಳು

  1. ಸುಮ್ಮಕಿರ್ಲ್ ಹೇಳುತ್ತಾರೆ:

    “ಕಾಲವೇ ಎಲ್ಲಾ ಗಾಯಕ್ಕೂ ಮದ್ದು ” ಅನ್ನೋ ಮಾತ್ತಾಲ್ಲಿ ನಂಬಿಕೆ ಇಡೀ.

  2. Sree ಹೇಳುತ್ತಾರೆ:

    ಎಲ್ಲ ಕ್ಷೇತ್ರಗಳಲ್ಲಿ ಈ ಗುದ್ದಾಟಗಳಿಗೆ ನಾವು ಒಡ್ಡಿಕೊಳ್ಳಬೇಕಿದೆ, ಎಷ್ಟೊ ಸಲ ಸಾಕಪ್ಪ ನಮಗ್ಯಾಕೆ ಉಸಾಬರಿ ಅಂತ ಓಡಿಹೋಗಬೇಕನ್ನಿಸಬಹುದು, ಸೋತ ಭಾವನೆ ಬರಬಹುದು, ಆದ್ರೆ ನಾವು ಗುದ್ದಾಟ ಬಿಟ್ಟುಬಿಟ್ರೆ ಇನ್ನೂ ಕೆಡತ್ತೆ ಅಲ್ವಾ… my best wishes to you to keep the spirit alive and kicking!:)

  3. abhayaftii ಹೇಳುತ್ತಾರೆ:

    ಶ್ರೀ…. ಗುದ್ದಾಟ ಬಿಟ್ರೆ ಇನ್ನೂ ಕೆಡತ್ತಾ? ನನ್ನನ್ನು ಅನೇಕ ದಿನದಿಂದ ಈ ಯೋಚನೆ ಕಾಡುತ್ತಿದೆ. ಬಹುಷಃ ಇಲ್ಲ. ಈ ದಾರಿಯಲ್ಲಿರುವ ಹೋಟೇಲಿನ ಕಾಫಿಯಲ್ಲಿ ಯಾವಾಗಲೂ ನೋಣ ಬಿದ್ದಿರುತ್ತೆ ಅಂತ ಅವನತ್ರ ಜಗಳವಾಡಿ ಸಾಕಾದಾಗ ಮುಂದೆ ನಡೆದು ಇನ್ನೊಂದು ಹೋಟೇಲ್ ಕಟ್ಟಿ ಅಲ್ಲಿ ಬಂದವರಿಗೆ ಶುಚಿ-ರುಚಿಯಾದ ಕಾಫಿ ಕುಡಿಸಬಹುದಲ್ವಾ ಅಂತ ಯೋಚಿಸುತ್ತಿದ್ದೇನೆ.

    ನಾವೊಂದಷ್ಟು ಜನ ನಿಮಗೆ ನಾವು ಕೆಲಸ ಮಾಡುವುದಿಲ್ಲ ಎಂದು ನಿಂತರೆ, ನಮ್ಮ ಜೀವನವೇನೂ ಖಂಡಿತಾ ನಿಲ್ಲುವುದಿಲ್ಲ. ಮುಂದೆ ಒಂದು ದಿನ ತನ್ನದೇ ದರಿದ್ರತೆಯಿಂದ ಈ ವ್ಯವಸ್ಥೆ ಕುಸಿದು ಆಗ ಒಳ್ಳೆ ಕಾಫಿಗೆ ಹಪ ಹಪಿಸುತ್ತಾ ಇವರೇ ನಮ್ಮ ಬಳಿಗೆ ಬರಲೇ ಬೇಕಾಗುತ್ತೆ. ಆಗ ಅವರಿಗೆ ಒಳ್ಳೆಯ ಕಾಫಿ ಕೊಟ್ಟರಾಯ್ತು. ಆಗ ಅದಕ್ಕೆ ಬೆಲೆಯೂ ಇರುತ್ತೆ, ಗೌರವವೂ ಇರುತ್ತೆ ಎಂಬ ನಿಲುವಿಗೆ ನಾನು ಬಂದಿದ್ದೇನೆ.

    ಸಮಯ ಯಾರಿಗೂ ಕಾಯುವುದಿಲ್ಲ… ಹಾಗೆಯೇ ಕಾಲವಾವನ ಕೀಳು ಮಾಡದು ಕೂಡಾ! ಅಲ್ವಾ?

  4. ಶ್ರೀ ಹೇಳುತ್ತಾರೆ:

    ಒಂದೇ ಡಾಕ್ಯುಮೆಂಟರಿಗೆ ಹೀಗೆ ಸೋತು ಸುಣ್ಣ ಆದ್ರೆ ಹೇಗೆ? 🙂 cheer up!

  5. Sree ಹೇಳುತ್ತಾರೆ:

    ಗೊತ್ತಿಲ್ಲ,.. ಇನ್ನೊಂದು ಹೊಟೆಲ್ ಮಾಡೋದಿದ್ರೂ ಕಳಪೆ ಕಾಫಿ ಕೊಟ್ಟವ್ನ ಹತ್ರ ಜಗಳ ಆಡಿಯೇ ಮುಂದೆ ಹೋಗೋ ಜಾಯಮಾನ ನಂದು:)) ನಮ್ಮ ಗುದ್ದಾಟಗಳಿಂದ ಇನ್ನೇನಲ್ಲದಿದ್ರೂ voice of dissent ಆ ಕಡೆಗೆ ಕೇಳುತ್ತೇನೋ ಅಂತನ್ನಿಸುತ್ತೆ. ಅದು ಆ ಕಡೆಗೆ ಕೇಳಿಸೋದು ಅವಶ್ಯ ಅಂತಲೂ ಅನ್ನಿಸುತ್ತೆ:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s