ಅದೊಂದು ೨೦೦೩ರದ ಮಳೆಗಾಲದ ದಿವಸ. ಪೂನಾದ ಫಿಲ್ಮ್ ಆಂಡ್ ಟೆಲಿವಿಷನ್ ಇಂಸ್ಟ್ಯೂಟ್ ಆಫ್ ಇಂಡಿಯಾದಲ್ಲಿ (ಎಫ್.ಟಿ.ಐ.ಐ) ಯಾವುದೋ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ಹೆಸರು ಸರ್ಹದ್ ಪಾರ್ ಎಂದು. ಸಂಜಯ್ ದತ್ ಇದರಲ್ಲಿ ನಾಯಕ ನಟ. ನದೀಂ ಖಾನ್ ಅವರು ಕ್ಯಾಮರಾ ನಡೆಸುತ್ತಿದ್ದರು. ದಿನ ನಿತ್ಯ ಚಿತ್ರೀಕರಣ ನಡೆಯುತ್ತಿರುತ್ತದೆ, ನಾವೇ ಎಷ್ಟೋ ಬಾರಿ ಕ್ಯಾಮರಾ ಹಿಂದೆ ಮುಂದೆ ಕೆಲಸ ಮಾಡಿರುತ್ತೇವೆ. ಹಾಗೂ ಚಿತ್ರೀಕರಣದ ಸಂಸ್ಥೆಯಲ್ಲಿ ಚಿತ್ರೀಕರಣದ ಬಗ್ಗೆ ಕುತೂಹಲ ತುಂಬಾ ಜಾಸ್ತಿ ಇರುವುದಿಲ್ಲ. ಹಾಗಾಗಿ ನಾವೆಲ್ಲಾ ನಮ್ಮ ನಮ್ಮ ತರಗತಿಗೆಳಿಗೆ ಓಡುವ, ತರಗತಿ ಇಲ್ಲದವರು ಮುಂದಿನ ಅವರ ಅಭ್ಯಾಸ ಚಿತ್ರೀಕರಣದ ತಯಾರಿಯಲ್ಲೂ ನಿರತರಾಗಿದ್ದೆವು. ಇನ್ನು ಕೆಲವರು ಕ್ಯಾಂಟೀನಿನಲ್ಲಿ ಕುಳಿತು ದಿನದ ನಾಲ್ಕನೇ ಚಾ ಆಗಲೇ ಇಳಿಸುತ್ತಿದ್ದರು. ಸಮಯ ಇನ್ನೂ ಸುಮಾರು ಹತ್ತು ಗಂಟೆ ಆಗಿತ್ತಷ್ಟೇ.
ನನ್ನ ರೂಂ ಮೇಟ್ ವಿಕ್ರಂಗೆ ನದೀಂ ಖಾನ್ ಮೊದಲೇ ಪರಿಚಯ. ನದೀಂ ಖಾನ್ ಮುಂಬೈನ ಮುಖ್ಯ ಕ್ಯಾಮರಾಮನ್‍ಗಳಲ್ಲಿ ಒಬ್ಬರು. ಡೇವಿಡ್ ಧವನ್ ಇತ್ಯಾದಿ ಹಳೇ ಹುಲಿಗಳ ನೆಚ್ಚಿನ ಕ್ಯಾಮರಾ ಮನ್. ಎಫ್.ಟಿ.ಐ.ಐನಲ್ಲೇ ಕ್ಯಾಮರಾ ಕಲಿತವರು. ಮಧ್ಯಾಹ್ನದ ಊಟದ ಸಮಯದಲ್ಲಿ ವಿಕ್ರಮ್ ಅವರನ್ನು ಮಾತನಾಡಿಸಲು ಹೋದ. ಮಾತನಾಡುತ್ತಾ ಸರ್, ನೀವು ಇಲ್ಲಿ ಕಲಿಯುತ್ತಿದ್ದಾಗ ಹಾಸ್ಟೆಲಿನ ಯಾವ ಕೋಣೆಯಲ್ಲಿದ್ದಿರಿ ಎಂದು ಕೇಳಿದ. ಅವರು ಡಿ-೧೪ ಎಂದರು. ವಿಕ್ರಂಗೆ ಅಚ್ಚರಿಯಾಯಿತು. ನಾನು-ಅವನು ಇದ್ದದ್ದೂ ಅದೇ ಕೋಣೆಯಲ್ಲಿ! ಸರ್ ಬನ್ನಿ ನಮ್ಮ ಕೋಣೆಗೆ ಎಂದು ಕರೆದ. ನದೀಂ ಖಾನರಿಗೆ ಏನನ್ನಿಸಿತೋ, ಕೆಲಸಕ್ಕೆ ಸ್ವಲ್ಪ ಬ್ರೇಕ್ ಸಿಕ್ಕಿದ್ದೇ, ನಡಿ ವಿಕ್ರಂ ನನ್ನ ಕೋಣೆ ತೋರಿಸು ಎಂದರು.
ನಾನು ಇದ್ಯಾವುದರ ಪರಿವೆಯೂ ಇಲ್ಲದೆ ಕೋಣೆಯಲ್ಲಿದ್ದೆ. ಹೌ ಟು ರೀಡ್ ಅ ಫಿಲ್ಮ್ ಅನ್ನೋ ಪುಸ್ತಕ ತೆಗೆದುಕೊಂಡು ಅದರ ಪುಟಗಳಲ್ಲಿ ಮುಳುಗಿ ಅರ್ಥೈಸಲು ತಿಣುಕುತ್ತಿದ್ದೆ. ಅಷ್ಟರಲ್ಲಿ ವಿಕ್ರಂ ಕೋಣೆಗೆ ಬಂದ. “ವಿಕ್ರಂ, ಮಧ್ಯಾಹ್ನದ ಫೋಟೋಗ್ರಫಿ ಕ್ಲಾಸಿಗೆ ತಯಾರಿ ಆಯ್ತಾ?” ಎಂದು ಕೇಳುವಷ್ಟರಲ್ಲಿ ಅವನ ಹಿಂದಿನಿಂದ ನದೀಂ ಖಾನ್! ನಾನು ಒಂದು ಕ್ಷಣಕ್ಕೆ ಕೋಣೆ ಚೆನ್ನಾಗಿದೆಯೇ ಅತ್ತಿತ್ತ ನೋಡಿದೆ. ಕೋಣೆಯ ಒಂದು ಮೂಲೆಯಲ್ಲಿ ವಿಕ್ರಂನ ಮಂಚ ಇನ್ನೊಂದು ಮೂಲೆಯಲ್ಲಿ ನನ್ನ ಮಂಚ, ಪಕ್ಕದಲ್ಲಿ ಒಂದು ಟೇಪ್ ರೆಕಾರ್ಡರ್, ನನ್ನ ಕಂಪ್ಯೂಟರ್. ನದೀಂ ಖಾನ್‍ರಿಗೆ ನಮಸ್ಕಾರ ಹೇಳಲೂ ಆ ಗಡಿಬಿಡಿಯಲ್ಲಿ ಮರೆತೆ. ಅವರೇ ಒಂದು ಹೆಜ್ಜೆ ಒಳಗೆ ಬಂದು “ಕ್ಯಾ ಮೆ ಅಂದರ್ ಆಸಕ್ತಾಹೂಂ ಬೇಟಾ?” ಎಂದು ಕೇಳಿದರು. ಸರ್ ದಯವಿಟ್ಟು ಬನ್ನಿ ಎಂದು ಕರೆದೆ. ಅವರು ವಿಕ್ರಂ ಮಂಚದ ಮೇಲೆ ಕುಳಿತರು. ನಾನು ನನ್ನ ಮಂಚದ ಮೇಲೆ ಕೂರಲು ವಿಕ್ರಂ ನಾನು ಸರ್‍ಗೆ ಒಂದು ಟೀ ತರ್ತೇನೆ ಎಂದು ಕೋಣೆಯಿಂದ ಹೊರಗೆ ಹೋದ. ನನಗೋ ಮಾತನಾಡಲು ಮಾತೇ ತೋಚುತ್ತಿಲ್ಲ. ನದೀಂ ಖಾನ್ ಮೌನವಾಗಿ ಕುಳಿತಿದ್ದರು. ಸ್ವಲ್ಪ ಹೊತ್ತು ಹಾಗೇ ಕಳೆಯಿತು. ನಾನು ಮತ್ತೆ ಅವರನ್ನು ಮಾತನಾಡಿಸೋಣ ಎಂದು ಬಾಯಿ ತೆರೆದರೆ, ಅವರ ಕಣ್ಣಲ್ಲಿ ಸಣ್ಣಕೆ ನೀರು ಜಿನುಗುತ್ತಿರುವುದು ಕಂಡೆ! ಅರೆ! ನದೀಂ ಸರ್ ಅಳುತ್ತಿದ್ದರು. ನಾನೂ ಹೆಡ್ಡನಂತೆ, “ಸರ್! ಏನಾಯ್ತು?” ಎಂದೆ. ಏನಿಲ್ಲ ಮಗ, ನಾನು ಈ ಕೋಣೆಗೆ ಬಂದು ೨೮ ವರ್ಷ ಆಯ್ತು ಎಂದರು. ಇನ್ನಷ್ಟು ಮೌನ, ಇನ್ನಷ್ಟು ಕಣ್ಣೀರು. ಅವರು ಆ ಮಂಚವನ್ನು ಮೃದುವಾಗಿ ಸವರಿದರು. ಅಷ್ಟರಲ್ಲಿ ವಿಕ್ರಂ ಬಂದ. ಅವನಿಗೂ ಕಸಿವಿಸಿ. ಇಬ್ಬರೂ ಪಕ್ಕಪಕ್ಕದಲ್ಲಿ ಕುಳಿತು ನದೀಂ ಸರ್ ನೆನಪಿನ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆವು.
ಇವತ್ತು ನಾನು ಮನೆಯಲ್ಲಿದ್ದೇನೆ. ಮಳೆ ಸುರಿಯುತ್ತಿದೆ. ಕಾಲ ಸಂದಿದೆ, ನಾನೂ ಎಫ್.ಟಿ.ಐ.ಐ ಬಿಟ್ಟು ವರ್ಷ ಒಂದು ದಾಟಿ ಸಾಗಿದೆ. ನೆನಪುಗಳು ಆ ಜಾಗದಲ್ಲೇ ಇವೆ… ಇವತ್ಯಾಕೋ ಆ ಜಾಗ ತುಂಬಾ ನೆನಪಾಗುತ್ತಿದೆ. ಅದಕ್ಕೇ ಇದನ್ನು ಬರೆದೆ…