ಎಲ್ಲರೂ ಮಾತನಾಡುವುದನ್ನೇ ನಾನೂ ಮಾತನಾಡುತ್ತಿದ್ದೇನೆ ಅನ್ನಿಸುತ್ತಿದೆ. ಆದರೂ ಯಾಕೋ ಒಳಗೇ ಎಲ್ಲೋ ಏನೋ ಚುಚ್ಚುತ್ತಿದೆ. ಹಾಗಾಗಿ ಒಮ್ಮೆ, ಮತ್ತೊಮ್ಮೆ ಬರೆಯುತ್ತಿದ್ದೇನೆ. ಆದರೆ ಯಾಕೆ ನಮಗೆಲ್ಲರಿಗೂ ಹೀಗೇ ಅನಿಸಿದರೂ ನಾವು ಯಾಕೆ ಇಷ್ಟು ಅಸಹಾಯಕರಾಗಿದ್ದೇವೆ? ನೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬರೆಯುತ್ತಿದ್ದೇನೆ. ಇವತ್ತು ಯಾವುದೋ ಕೆಲಸದ ಮೇಲೆ ಬೆಂಗಳೂರಿನ ಆರ್. ಟಿ. ನಗರದ ಕಡೆಗೆ ಹೋಗಿದ್ದೆ. ಹಿರಿಯರೂ ಗೆಳೆಯರೂ ಆದ ಇಸ್ಮಾಯಿಲ್ ಇದ್ದರು ಜೊತೆಗೆ. ನಮ್ಮ ಕೆಲಸ ಮುಗಿಸಿಕೊಂಡು ಎಮ್.ಜಿ. ರೋಡ್ ಕಡೆಗೆ ವಾಹನ ಓಡಿಸುತ್ತಿದ್ದೆವು. ಏನೋ ಹಳೇ ಜೋಕ್ ಹೇಳಿ ಜೋರಾಗಿ ನಗುತ್ತಾ ವಾಹನ ಓಡಿಸುತ್ತಿದ್ದೆವು. ಅಚಾನಕ್ಕಾಗಿ… ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಒಂದು ಐದಾರು ಹುಡುಗರು ಓಡುತ್ತಾ ಬರುತ್ತಿದ್ದರು. “ಸಾರ್… ಹಿಂದೆ ಹೋಗಿ. ಈ ದಾರಿಯಲ್ಲಿ ಜನ ಬರ್ತಾ ಇದಾರೆ. ಹೊಡೀತಾರೆ!” ಏನು?! ಹೊಡೆಯುತ್ತಾರಾ?! ಯಾಕೆ ನಾವೇನು ಮಾಡಿದೆವು? ಏನು ವಿಷಯ? ಕೇಳಬೇಕೆಂದುಕೊಂಡೆವು ಅಷ್ಟರಲ್ಲಿ ಎದುರಿನಲ್ಲಿ ಒಂದು ದೊಡ್ಡ ಗುಂಪು ನಮ್ಮೆಡೆಗೇ ನಡೆದುಕೊಂಡು ಬರುತ್ತಿತ್ತು. ಅವರಲ್ಲಿ ಅನೇಕರು ಗಲಾಟೆ ಎಬ್ಬಿಸಿಕೊಂಡು ಬರುತ್ತಿದ್ದರು. ವಿಷಯ ಅರ್ಥ ಆಯಿತು. ಇಲ್ಲೇನೋ ದೊಂಬಿ ಏಳುತ್ತಿದೆ. ಕೂಡಲೇ ನಮ್ಮ ವಾಹನಗಳನ್ನು ತಿರುಗಿಸಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆವು. ಒಂದಷ್ಟು ದೂರ ಹೋದಾಗ ಒಂದು ಮಸೀದಿಯ ಎದುರು ಒಂದಷ್ಟು ಜನ ಸೇರಿದ್ದರು. ಸುಮಾರು ಪೋಲೀಸರೂ ಇದ್ದರು. ಏನಾಯ್ತು ಅಂತ ಕೇಳಿದರೆ, “ಯಾರೋ ಹಂದಿ ತಲೆ ತಂದು ಮಸೀದಿಗೆ ಹಾಕಿಬಿಟ್ಟಿದಾರೆ ಸಾರ್”
ಛೆ! ಮತ್ತೆ ಇದೇ ಅವಸ್ಥೆ ಎಂದು ಕೊಂಡು ಸ್ವಲ್ಪ ಮುಂದೆ ಹೋದ ನಮಗೆ ಮನಸ್ಸು ಕೇಳಲಿಲ್ಲ. ಮತ್ತೆ ಹಿಂದೆ ಹೋಗಿ ವಿಷಯದ ಆಳಕ್ಕೆ ಇಳಿಯುವ ಪ್ರಯತ್ನ ಮಾಡೋಣ ಎಂದು ಹಿಂದಿರುಗಿದೆವು. ನನ್ನ ಕೈಯಲ್ಲಿ ಕ್ಯಾಮರಾ ಇತ್ತು. ‘ಮೀಡಿಯಾ’ ಅಂತ ಹೇಳಿ ಒಂದೆರಡು ಕಡೆ ನಮ್ಮನ್ನು ಮುಂದೆ ಹೋಗಲು ಬಿಟ್ಟರು. ಆದರೆ ಅಷ್ಟರಲ್ಲಿ ದಾರಿ ಬದಿಯಲ್ಲಿ ನಿಂತಿದ್ದ ಒಂದು ನಾಲ್ವರು ಯುವಕರು ನಮ್ಮನ್ನು ಅಡ್ಡ ಹಿಡಿದರು. ನಾವು ಮತ್ತೆ “ಮೀಡಿಯಾ” “ಬೆಳಗ್ಗೆ ಅವರು ಹಂದಿ ತಲೆ ಹಾಕುವಾಗ ಎಲ್ಲಿದ್ರೀ..? ಈಗ ಬಂದ್ರಾ? ಕ್ಯಾಮರಾ ತೆಗದರೆ ಹುಷಾರ್! ಕ್ಯಾಮರಾ, ಸ್ಕೂಟರ್ ಎಲ್ಲಾ ಪುಡಿ! ಹೋಗಿ ವಾಪಾಸ್!”
ಅರೆ! ಏನಿದು? ಏನಾಗ್ತಿದೆ ಇದೆಲ್ಲಾ? ನಾವು ಒಂದಷ್ಟು ಸುತ್ತು ಬಳಸಿ ಕೊನೆಗೂ ಏನೂ ನೋಡಲಾಗದೇ, ಯಾರೊಡನೆಯೂ ಮಾತನಾಡಲಾಗದೆ ಮರಳಿದೆವು. ಎಷ್ಟೋ ವರ್ಷಗಳಿಂದ ನಾವು ಮತ್ತೆ ಮತ್ತೆ ನೋಡುತ್ತಿರುವ ಸಿನೆಮಾ ಇದು. ಮಸೀದಿಗೆ ಹಂದಿಯ ತಲೆ ಬಂದು ಬೀಳುವುದು, ಗಲಾಟೆ. ಅಂಬೇಡ್ಕರರಿಗೆ ಚಪ್ಪಲಿ ಹಾರ ಬಂದು ಬೀಳುವುದು, ಗಲಾಟೆ. ದೇವಸ್ಥಾನಕ್ಕೆ ಅಪವಿತ್ರವಾದದ್ದು ಏನೋ ಬಂದು ಬೀಳುವುದು, ಗಲಾಟೆ! ಏನಾಯ್ತು ಎಂದು ಯಾರಾದರೂ ಕೇಳಿದರೆ, ಹಾ! ಅದಾ…? ಅದು ಹಿಂದೂ ಮುಸ್ಲಿಂ ಗಲಾಟೆ. ಅದಾ…? ಅದು ಹಿಂದುಳಿದವರ ಗಲಾಟೆ. ಹಾಗಾದರೆ, ಈ ಹಂದಿ ತಲೆ, ಚಪ್ಪಲಿ ಹಾರ ಎಲ್ಲಾ ತಂದು ಹಾಕುವವರು ಯಾರು? ಮತ್ತೆ ಯಾಕೆ ಎಂದು ಈ ಗಲಾಟೆ ಮಾಡುವವರು ಒಮ್ಮೆಯೂ ಯೋಚಿಸುವುದಿಲ್ಲವೇ?
ಡಿಗ್ರಿ ಓದುತ್ತಿರುವಾಗ ನನ್ನ ಸಹಪಾಠಿ ಸೈಕಾಲಜಿ ವಿದ್ಯಾರ್ಥಿಯಾಗಿದ್ದ ರೇಷ್ಮಾಳಿಗೆ ಪರೀಕ್ಷಾ ಸಹಾಯಕನಾಗಿ ನಾನು ಹೋಗುತ್ತಿದ್ದೆ. ಅಲ್ಲಿ ಒಂದು ಪ್ರಯೋಗ ಆಗ ನನ್ನ ಗಮನ ಸೆಳೆದಿತ್ತು. ಅದಕ್ಕೆ ‘ರಷ್ಯನ್ ಡಾಗ್ ಪ್ರಯೋಗ’ ಎಂದು ಅವಳು ಹೆಸರಿಸಿದ್ದ ನನಪು ನನಗೆ. ಒಂದು ನಾಯಿಯನ್ನು ಗೂಡಿನಲ್ಲಿ ಹಾಕಿಟ್ಟು ನಿಗದಿತ ಸಮಯಕ್ಕೆ ಸರಿಯಾಗಿ ಒಂದು ಗಂಟೆಯನ್ನು ಬಾರಿಸಿ ಅದಕ್ಕೆ ಆಹಾರವನ್ನಿತ್ತರೆ, ಇದೇ ಪ್ರಕ್ರಿಯೆಯನ್ನು ಕೆಲವು ದಿವಸ ಪುನರಾವರ್ತಿಸಿದರೆ, ಮತ್ತೆ ಗಂಟೆ ಬಾರಿಸಿದರೆ ಸಾಕು ನಾಯಿಗೆ ತನ್ನ ಆಹಾರ ಬಂತು ಎಂಬ ಸೂಚನೆ ಸಿಗುತ್ತದಂತೆ. ಈ ಘಟನಾವಳಿಗಳನ್ನು ನೋಡುವಾಗ ನಮ್ಮ ಬೌದ್ಧಿಕ ಮಟ್ಟವೂ ಪಾಪದ ಆ ನಾಯಿಗಿಂತ ಏನೂ ಮೇಲಿಲ್ಲ ಎನಿಸುತ್ತಿದೆ. ಯಾವುದೇ ಒಂದು ಮತೀಯ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಮ್ಮಲ್ಲಿ ನಡೆದಾಗ, ಅದರ ಪ್ರಕ್ರಿಯೆಯನ್ನು ನಾವು ಗಮನಿಸಿದರೆ, ಅದರಲ್ಲಿ ಒಂದು ಕ್ರಮಬದ್ಧತೆಯನ್ನು ಕಾಣಬಹುದು. ಪ್ರಚೋದನೆ ಒಂದೇ ರೀತಿಯಾಗಿರುತ್ತದೆ, ಅದಕ್ಕೆ ಪ್ರತಿಕ್ರಿಯೆಯೂ ಒಂದೇ ರೀತಿಯಾಗಿರುತ್ತದೆ. ಮತ್ತೆ ನಾಲ್ವರು ಮೌಲ್ವಿಗಳು, ನಾಲ್ವರು ಸ್ವಾಮೀಜಿಗಳು ಕುಳಿತು ಶಾಂತಿ ಬೋಧಿಸುತ್ತಾರೆ, ನಾಲ್ವರು ರಾಜಕಾರಿಣಿಗಳು ಇದು ಇನ್ನೊಂದು ಪಕ್ಷದ ಕುತಂತ್ರ ಎಂದು ಸಮಯದ ಸದ್ವಿನಿಯೋಗ ಮಾಡಿಕೊಳ್ಳುತ್ತಾರೆ. ನಾಲ್ಕಾರು ಸಾಹಿತಿಗಳು, ದೇಶ ಏನಾಗಿದೆ ಎಂದು ಚಿಂತಿಸುತ್ತಾರೆ. ಅನೇಕ ಸಜ್ಜನ ನಾಗರಿಕರು ಹೌದಾ! ಹಿಂದೂ ಮುಸ್ಲಿಮ್ಮಾ? ಎಷ್ಟು ಜನ ಸತ್ತರು? ಅಯ್ಯೋ! ಪಾಪ ಎಂದು ಮತ್ತೆ ಮರುದಿನ ಆಫೀಸಿನಲ್ಲಿನ ಯಾವುದೋ ಫೈಲ್-ಮೀಟಿಂಗ್ ಬಗ್ಗೆ ಯೋಚಿಸುತ್ತಾರೆ. ಎಲ್ಲವೂ ಬರೇ ವ್ಯಾಪಾರ, ಬದುಕು. ಯಾರಾದರೂ ಯಾಕೆ ಸತ್ತರು ಎಂದು ಬದುಕಿದವರಿಗೆ ಬೇಕಾಗಿಲ್ಲ. ಸತ್ತವರಿಗೆ ಗೊತ್ತಾಗುವುದಿಲ್ಲ! ಜೀವನ ಮುಂದುವರೆಯುತ್ತದೆ…. ಮುಂದೆ ಮತ್ತೊಮ್ಮೆ ಅದು ನಡೆಯುವವರೆಗೆ. ಮತ್ತದೇ ನಾಟಕ ಎಲ್ಲಾ ಪುನರಾವರ್ತನೆ!
ನನಗೆ ನನ್ನೂರು ಮಂಗಳೂರು ನೆನಪಾಗುತ್ತಿದೆ. ನಾನು ಸಣ್ಣವನಾಗಿದ್ದಾಗಿನ ಒಂದು ಘಟನೆ ನೆನಪಾಗುತ್ತಿದೆ. ಸಣ್ಣ ತರಗತಿ ಯಾವುದರಲ್ಲೋ ಓದುತ್ತಿದ್ದಾಗಿನ ನೆನಪು ಅದು. ಬೆಂಚಿನ ಇನ್ನೊಂದು ತುದಿಯಲ್ಲಿ ಕೂರುತ್ತಿದ್ದವನ ಹೆಸರು ಉಮ್ಮರ್ ಫಾರೂಕ್. ಒಳ್ಳೆ ಗೆಳೆಯ. ನನ್ನ ಮನೆಯಲ್ಲಿ ಧರ್ಮದ ಯಾವ ಒಲವುಗಳಿಲ್ಲದಿದ್ದರೂ ನಾನು ಎಲ್ಲೋ ಬ್ಯಾರಿ (ಮುಸ್ಲಿಮರು) ಎಂಬುದು ಏನೋ ಬೈಗುಳದ ಪದ ಎಂದುಕೊಂಡು ಬಿಟ್ಟಿದ್ದೆ! ಅದು ಧರ್ಮ ಸೂಚಕ ಹೆಸರು ಎಂದೂ ಗೊತ್ತಿಲ್ಲದ ಮುಗ್ಧ ದಿನಗಳು! ಅಂದು ಮಧ್ಯಾಹ್ನದ ಊಟದ ಸಮಯದಲ್ಲಿ ಯಾಕೋ ನಮ್ಮಿಬ್ಬರ ನಡುವೆ ಜಗಳವಾಯಿತು. ನನಗೆ ಸಿಟ್ಟೇರಿ ಅವನಿಗೆ ಬೈದೆ, “ಬ್ಯಾರಿ!” ಅವನಿಗೂ ಅದರ ಅರ್ಥ ಗೊತ್ತಿಲ್ಲ! ಆದರೆ ನನ್ನ ಮುಖಭಾವದಿಂದ, ಕೈಕರಣದಿಂದ, ಇದೇನೋ ಬೈಗುಳವೇ ಇರಬೇಕು ಎಂದನಿಸಿ ಅವನು ನನಗೆ ಹೊಡೆಯಲು ಓಡಿಸಿಕೊಂಡು ಬಂದ. ನಾನು ಪುಕ್ಕಲ! ಓಡಿದೆ, ಮನೆ ತಲುಪಿದೆ. ಅವನು ಮನೆವರೆಗೂ ಬಂದ.
ಅಮ್ಮ ಸಹಜವಾಗಿ “ಏನೋ ಉಮ್ಮರ್? ಏನಿವತ್ತು ಈ ಕಡೆ?”
“ಆಂಟಿ ಅಭಯ ನನ್ನನ್ನು ಬ್ಯಾರಿ ಅಂತ ಬೈದ!”
ಅಮ್ಮ ನಕ್ಕಳು. “ಹೌದಾ? ಸರಿ… ಹಾಗೆ ಹೇಳಬಾರದೂ ಅಂತ ನಾನು ಅವನಿಗೆ ಹೇಳ್ತೇನೆ. ಊಟ ಆಯ್ತಾ?”
“ಇಲ್ಲ ಆಂಟಿ”
ಇಬ್ಬರೂ ಪಟ್ಟಾಗಿ ಕುಳಿತು ಊಟ ಮಾಡಿ ಮತ್ತೆ ಶಾಲೆಗೆ ನಗುತ್ತಾ, ಆಡುತ್ತಾ ಹೋದೆವು. ಮತ್ತೆ ಅನೇಕ ವರ್ಷ ಒಟ್ಟಿಗೇ ಕಲಿತೆವು. ಜೀವನದ ಹಳಿಗಳು ಬದಲಾದಾಗ ನಮ್ಮ ನಮ್ಮ ರೈಲು ಹತ್ತಿ ಮುಂದೆ ಹೋಗಿದ್ದೇವೆ. ಈಗ ನನ್ನ ಪ್ರೀತಿಯ ಗೆಳೆಯ ಉಮ್ಮರ್ ಎಲ್ಲಿದ್ದಾನೆ ಗೊತ್ತಿಲ್ಲ. ಇವತ್ತು ಆ ದಿನಗಳು, ಅಂದು ನಮ್ಮ ಸುತ್ತ ಇದ್ದ ಒಳ್ಳೆಯ ಜನರು, ಜಾತಿಯ ಸುದ್ದಿಯೇ ಇಲ್ಲದ ಮಂಗಳೂರು, ವಿಧಾನ ಸೌದವೇ ಆಗಿದ್ದ ಬೆಂಗಳೂರು ಇವೆಲ್ಲವೂ ಮತ್ತೆ ನೆನಪಾಗುತ್ತಿವೆ.
ಗೆಳೆಯ ಇಸ್ಮಾಯಿಲರು ಈಗಷ್ಟೇ ದೂರವಾಣಿಸಿದ್ದರು… ಸೆಕ್ಷನ್ ೧೪೪ ಹಾಕಿ ಗಲಾಟೆ ಹಬ್ಬದಂತೆ ಪೋಲೀಸರು ಪ್ರಯತ್ನಿಸುತ್ತಿದ್ದಾರಂತೆ. ಸಬ್ ಕೋ ಸನ್ ಮತಿ ದೇ ಭಗವಾನ್!
nija. heegella hasu kadidu, handi kadidu kOmu dveshada kichchige tuppa suriyuvudu yAva maTTada vikrutiyO?
hE bhagavaan… sabko sanmati de…
ನನಗೆ ನನ್ನ ಸ್ನೇಹಿತೆ ಯಾಸ್ಮಿನ್ ನೆನಪಾದಳು… ಅವಳ ಮನೆಯಲ್ಲಿ ಅನ್ನ, ಟೊಮ್ಯಾಟೋ ಸಾರು, ಹಪ್ಪಳ ತಿಂದದ್ದು… ಜಾತಿ, ಧರ್ಮ ಇತ್ಯಾದಿ ನಮ್ಮ ಗೆಳೆತನಕ್ಕೆ ಅಡ್ಡಿಯಾಗದಿದ್ದದ್ದು, ಚೌತಿಗೆ ನಮ್ಮ ಮನೆಯಿಂದ ಅವರ ಮನೆಗೆ ತಿಂಡಿಗಳು ಪ್ರತಿ ವರ್ಷ ಹೋಗುತ್ತಿದ್ದದ್ದು… ಹೀಗೆ. ನಿನ್ನೆಯ ಘಟನೆಯ ಹಿಂದಿನ ಕೊಳಕು ಮನಸ್ಸಿಗೆ ಧಿಕ್ಕಾರ.
ee designed matheeya galabhegaLu naDeyadiddare dESa eShTO sudhArisuttittu.
ಈಗಷ್ಟೇ ಸೆಜ್ ಅಥವಾ ವಿಶೇಷ ವಿತ್ತ ವಲಯದ ಅಣ್ಣ ಪಿ.ಸಿ.ಪಿ.ಐ.ಆರ್ ಅಭಿವೃದ್ಧಿಯ ಕಳ್ಳ ಮುಸುಕಿನಲ್ಲಿ ನೆಲನುಂಗಲು ನೊಣೆಯುತ್ತಿರುವುದರ ವಿರುದ್ಧ ಜನ ಜಾಗೃತಿಗಾಗಿ ‘ನಿಲೆ’ ಮಂಗಳೂರು ವ್ಯವಸ್ಥೆ ಮಾಡಿದ್ದ ಛಾಯಚಿತ್ರ ಪ್ರದರ್ಶನವನ್ನು ನೋಡಿ ಬಂದೆ. ಪ್ರದರ್ಶನದ ಉದ್ಘಾಟಕರು ಶ್ರೀ ರಾಘವೇಶ್ವರ ಸ್ವಾಮಿಗಳು. ಪ್ರದರ್ಶನದಲ್ಲಿ ಮಂದಿರ, ಮಸೀದಿ, ಇಗರ್ಜಿಗಳು ಒಟ್ಟಾಗಿದ್ದವು. ಪ್ರೇಕ್ಷಕರಲ್ಲಿ ಅಷ್ಟೂ ಸಮುದಾಯದವರು, ಮತಾಚಾರಗಳನ್ನು ಅಲ್ಲಗಳೆದರೂ ಮನುಜಮತವನ್ನು ಒಪ್ಪಿದವರೂ ಸೇರಿದ್ದರು. ಕ್ಷುಲ್ಲಕತನಕ್ಕೆ ಸಮುದಾಯಗಳನ್ನು ಬಲಿಗೊಡುವ ಆಚಾರಗಳನ್ನು ಎಲ್ಲರೂ ಮೀರಬೇಕು. ಸುಂದರ ವಿಶ್ವಪಥ ದರ್ಶನಕ್ಕೆ ಬೆಂಗಳೂರೂ ಜಾಗೃತವಾಗಲಿ, ಒಂದಾಗಲಿ.
when there is a mass hysteria … a handful of people can not dare to react …
communal violence … is such a situation , when people like me and you get to feel … ashamed of ourseves for not being able to do anything … other than …. write … discuss… make movies…
and other people … for whom its … just another passing by event …
and for media … well … its a merry time.
transforming the mindsets … is a slow process.and with each of these kind events … the process gets slower … and slower… i feel .
but the silence never means … an acceptance…