ಇತ್ತೀಚೆಗೆ ಆದಿತ್ಯನ ಮೇಲಿನ ಪ್ರೀತಿಯಿಂದ ರಬ್ ದೇ ಬನಾದಿ ಜೋಡಿ ಸಿನೆಮಾವನ್ನು ನೋಡಿದೆ. ಅದೇನೋ ಅಂತಾರಲ್ಲ ವಿಲ್ಲಿಂಗ್ ಸಸ್ಪೆನ್ಷನ್ ಆಫ್ ಡಿಸ್‍ಬಿಲೀಫ್ ಅದರೊಂದಿಗೇ ನೋಡಿದೆ. ಆದರೂ ಅದು ಒಂದಿಷ್ಟೂ ಹಿಡಿಸಲಿಲ್ಲ. ಒಬ್ಬ ಗಂಡ ಮೀಸೆ ಬೋಳಿಸಿಕೊಂಡು ಬಂದಾಕ್ಷಣ ಅವನ ಹೆಂಡತಿಗೇ ಗುರುತು ಸಿಗುವುದಿಲ್ಲ ಎನ್ನುವುದನ್ನು ನಂಬುವುದಾದರೂ ಹೇಗೆ? ಒಂದೋ ಇಡೀ ಮಾಯಾಲೋಕದಲ್ಲಿ ಚಲಿಸುವ ಇಲ್ಲವೇ ಸಂಪೂರ್ಣ ವಾಸ್ತವ ಲೋಕದಲ್ಲಿ ಸಂಚರಿಸುವ ಚಿತ್ರಗಳ ಕಾಲದಲ್ಲಿ ಇವೆರಡರ ಮಿಶ್ರಣ ಒಂದು ಉತ್ತಮ ಪ್ರಯೋಗವಾಗಬಹುದಿತ್ತು. ಆದರೆ ಇಲ್ಲಿ ಅದು ಸೋಲುತ್ತದೆ. ಕಾರಣಗಳೇನು…?
ಮೊದಲನೆಯದಾಗಿ ರಬ್ ದೇಯಲ್ಲಿ ನಿತ್ರಾಣಗೊಂಡಿರುವುದು ಅದರಲ್ಲಿನ ಪಾತ್ರಪೋಷಣೆ. ನಾನು ನಟನೆಯ ಬಗ್ಗೆ ಮಾತನಾಡುತ್ತಿಲ್ಲ. ಪಾತ್ರಗಳನ್ನು ಯೋಚಿಸಿಕೊಳ್ಳುವಾಗ ಅವುಗಳ ಹಿನ್ನೆಲೆ ಮುನ್ನೆಲೆಗಳ ಕುರಿತಾಗಿ ಒಂದಿಷ್ಟೂ ವಿವರಿಸದೇ ಅಥವಾ ಊಹಿಸಿಕೊಳ್ಳಲು ಅವಕಾಶವನ್ನೂ ಕೊಡದೆ ಕಥೆಯನ್ನು ಹೇಳಿದಾಗ ಆ ಪಾತ್ರಗಳು ನಮ್ಮವಾಗುವುದಿಲ್ಲ. ಅಮೃತ್‍ಸರಿನಲ್ಲಿ ವಾಸಿಸುವ ಪಂಜಾಬ್ ಪವರ್ ವಿದ್ಯುತ್ ಸಂಸ್ಥೆಯ ಕಾರ್ಮಿಕನೊಬ್ಬ ಭಾರೀ ದೊಡ್ಡ ಹವೇಲಿಯಲ್ಲಿ ತನ್ನ ಹೆಂಡತಿಯೊಂದಿಗೆ ಬದುಕುವುದು ಮೊದಲಿಗೆ ಸಂಶಯ ಹುಟ್ಟಿಸುತ್ತದೆ. ಅವನು ಯಾರು? ಇವರ ಮದುವೆ ಯಾಕಾಗಿದೆ? ಆ ಹುಡುಗಿಗೆ ಆಗಿರುವ ಸಮಸ್ಯೆ ಏನು? ಇತ್ಯಾದಿಗಳನ್ನು ಉತ್ತರಿಸದೇ ಶಾರುಖ್ ಖಾನ್ ಅಳುವವರನ್ನು ನಗಿಸುವ ನಾಯಕನಾಗಿ ಇರುವ ತನ್ನ ಇಮೇಜಿಗೆ ಸರಿಯಾಗಿ ನಟಿಸಲಾರಂಭಿಸಿದರೆ ಆ ಪಾತ್ರದೊಂದಿಗೆ ಎಲ್ಲೂ ಸಿಂಪಥಿ ಬರುವುದಿಲ್ಲ. ಅದಾಗದಿದ್ದಾಗ ಮುಂದಿನ ಕಥೆ ಮನಸ್ಸಿಗೆ ಇಳಿಯುವುದೇ ಇಲ್ಲ.
ಇನ್ನು ಪತ್ನಿಯನ್ನು ಸಂತೋಷಪಡಿಸಲು ಅವಳ ಮುಖದಲ್ಲಿ ಕಾಣೆಯಾಗಿರುವ ನಗುವನ್ನು ಮರಳಿ ತರಲು ವೇಷ ಬದಲಿಸಿ ಬರುವ ಗಂಡ ಬಳಸುವ ತಂತ್ರಗಳಾದರೋ ತೀರಾ ಬಾಲಿಶ ಎನಿಸುವಂತಿವೆ. ಇಡೀ ಪೇಟೆಯಲ್ಲಿ ದೀಪಗಳನ್ನು ಬಳಸಿ ಐ ಲವ್ ಯೂ ಬರೆಯುವುದು, ಡಾನ್ಸ್ ಕ್ಲಾಸಿನಲ್ಲಿ ಮಂದಬುದ್ಧಿಯವನಂತೆ ತುಟಿ ತಿರುಚಿ ಕೆಟ್ಟ ಬಟ್ಟೆಗಳಲ್ಲಿ ಅಶ್ಲೀಲವಾಗಿ ವರ್ತಿಸುವುದು ಇತ್ಯಾದಿಗಳಿಗಿಂತ ಭಾರತೀಯ ಸಿನೆಮಾ ಎಷ್ಟೋ ಮುಂದೆ ಹೋಗಿದೆ ಎಂದು ಅಂದುಕೊಂಡಿದ್ದೆ. ಆಗಲೇ ಬಂದದ್ದು ಈ ರಬ್ ದೇ ಬನಾದಿ!!! ಆದಿತ್ಯ ಜೋಪ್ರಾ ಬೇರೆ ನಿರ್ದೇಶಕರ ಚಿತ್ರಗಳನ್ನು ನೋಡುವುದೇ ಇಲ್ಲವೇ? ನೋಡಿದರೂ ಏನೂ ಕಲಿಯುವುದೇ ಇಲ್ಲವೇ? ಶೋಚನೀಯ!
ಇನ್ನು ಕಳೆದ ಅನೇಕ ಚಿತ್ರಗಳಿಂದ ಯಶ್ ರಾಜ್ ಚಿತ್ರಗಳಲ್ಲಿ ಕಾಣಿಸಿ ಬರುವ ಒಂದು ಸಾಮಾನ್ಯ ಸಮಸ್ಯೆಯೆಂದರೆ, ಗಡಿಬಿಡಿಯ ಅಡುಗೆ. ಈ ಸಿನೆಮಾದಲ್ಲೂ ಅದೇ ಸಮಸ್ಯೆ ಕಾಣಿಸುತ್ತಿದೆ. ಹಾಕಿರುವ ಸೆಟ್ಟಿನಲ್ಲಿ ಬಣ್ಣ ಒಣಗುವ ಮೊದಲೇ ಚಿತ್ರೀಕರಣ ಮಾಡಲಾಗಿದೆ, ಎಷ್ಟೋ ಸೆಟ್ಟಗಳಲ್ಲಿ ಬಣ್ಣ ಸಂಯೋಜನೆ, ವಸ್ತು ಸಂಯೋಜನೆ ತೀರಾ ಹೊಲಸಾಗಿದೆ. ಸಂಗೀತ ಎಲ್ಲೂ ತಾಗುವುದೇ ಇಲ್ಲ. ಅನಗತ್ಯ ಸಂಗೀತದ ಮೂಲಕ ಭಾವನೆಗಳ ಪ್ರಚೋದನೆಗೆ ವಿಫಲ ಪ್ರಯತ್ನ ಇತ್ಯಾದಿಗಳು ಧಾರಾಳವಾಗಿವೆ.
ಒಟ್ಟಿನಲ್ಲಿ ಆದಿತ್ಯ ಚೋಪ್ರಾ ಮೇಲಿನ ಭರವಸೆ ಹಾಗೂ ಶಾರುಖ್ ಖಾನ್ ಬಗ್ಗೆಗಿನ ಪ್ರೀತಿಯಿಂದ ಚಿತ್ರ ನೋಡಲು ಹೋಗಿ ಏನೋ ಕಳೆದುಕೊಂಡ ಭಾವದೊಂದಿಗೆ ಹೊರಬಂದೆ.
ಏನದು….? ಹಾ! ನೆನಪಾಯಿತು. ಕಳೇದುಕೊಂಡದ್ದು ದುಡ್ಡು!
ಸಿನೆಮಾ ನೋಡುವಿಕೆಯ ವಿವಿಧ ಆಯಾಮಗಳು ನಿಮ್ಮ ಬರವಣಿಗೆಯಲ್ಲಿ ಸಿಗುತ್ತವೆ. ಕೊನೆಗೆ ಕಳೆದು ಕೊಳ್ಳಲು ಸಿನೆಮಾ ಉಳಿಸಿದ್ದಾದರೂ ಏನು ಎ೦ಬೊದು ಪ್ರಷ್ನೆ ಹುಟ್ಟಿಕೊಳ್ಳುತ್ತಲೇ ಉತ್ತರವೂ ಸಿಕ್ಕಿತ್ತು. ಓದಿದವಳಿಗೆ ಬೆಪ್ಪಾದ ಭಾವ – ಕಾಸು ಕಳಕೊ೦ಡ ನಿಮ್ಮ೦ತೆಯೇ.. ಕೊನೆ ಹನಿ ಚೆನ್ನಾಗಿತ್ತು.
someone suggested me”rab ne..” as an interesting movie!!
had to endure 205 min of torture.
Yaako , oppige aaglilla……
Yash Chopra banner has traditionally been showcasing the different facets of Love in real life…. be it a Sil -Sila or DDLJ or Hum – Tum, etc. They have always tried to touch upon those aspects of Love that we are probably unaware of. I see ” Rab ne Bana di Jodi” …..as a thread that has been drawn out of DDLJ. Lets imagine what happens if a Raj from DDLJ gets into the life of simple “Taani” of Rab ne bana di…who thinks marriage for her is nothing but a compromise. The dilemma has been portrayed well & all Nataks of both the Sharukhs have come out well. Most of the stupid acts are tolerable if you understand the message finally.
Aadi scores a 4/5 according to me.
ಹೇಮಶ್ರೀಯವರೇ,
ಕೊನೆಯಲ್ಲಿ ಒಂದು ಸಂದೇಶವನ್ನು ಅರಿಯಲು ಉಳಿದದ್ದೆಲ್ಲವನ್ನೂ ಸಹಿಸಿಕೊಳ್ಳಬಹುದು ಎನ್ನುವ ವಾದವನ್ನು ನಾನು ಅಷ್ಟಾಗಿ ಒಪ್ಪುವುದಿಲ್ಲ. ವ್ಯಾನ್ ಗೋಗ್ ಬರೆದ ಪೊಟ್ಯಾಟೋ ಈಟರ್ಸ್ ಚಿತ್ರದಲ್ಲೂ ಹುಡುಗಿಯೊಬ್ಬಳು ಇದ್ದಳು, ಲಿಯಾನಾರ್ದೋನ ಮೊನಾಲಿಸಾದಲ್ಲೂ ಹುಡುಗಿ ಇದ್ದಳು ಎಂದ ಮಾತ್ರಕ್ಕೆ ಇವೆರಡೂ ಸಮನಾಗುತ್ತವೆಯೇ? ಅಲ್ಲಿನ ಕುಂಚದ ಚಳಕಗಳು, ಭಾವನೆಗಳು, ವರ್ಣಗಳು ಮುಖ್ಯವಾಗುತ್ತಲ್ಲವೇ? ಸ್ವತಃ ಕಲಾವಿದರಾದ ನಿಮಗೆ ನಾನೇನೂ ಇದನ್ನು ಹೇಳಬೇಕಾಗಿಲ್ಲ ನನಗೆ ಗೊತ್ತು. 🙂
ನನಗೆ ರಬ್ ದೇ ಬನಾದೀ ಜೋಡಿ ಚಿತ್ರದಲ್ಲಿ ಸಮಸ್ಯೆ ಆರಂಭವಾಗುವುದೇ ಇಲ್ಲಿ. ನಿರ್ದೇಶಕ ತನ್ನ ಒಂದು ಯಶಸ್ವೀ ಚಿತ್ರ ದಿಲ್ವಾಲೇ ದುಲ್ಹನಿಯಾದಿಂದ ಮೇಲೆ ಎದ್ದೇ ಇಲ್ಲ, ತನ್ನ ಯಶಸ್ಸಿನ ಮೂಲವನ್ನರಿಯದೆ ಅದನ್ನೇ ಪುನರಾವರ್ತಿಸಲು ಅದೇ ಕಥೆಯ ಸುತ್ತ ಗಿರಕಿಹೊಡೆಯುತ್ತಿರುವುದೇ ಆತನ ಸೋಲು ಎಂದು ನನಗೆ ಅನಿಸುತ್ತದೆ. ಪ್ರೀತಿಯ ಭಿನ್ನ ಮೈಗಳನ್ನು ವಿಮರ್ಶೆ ಮಾಡುತ್ತಾರೆ ಯಶ್ ಚೋಪ್ರಾ ಗುಂಪಿನವರು ಎಂದು ನೀವು ಹೇಳಿದ್ದೀರಿ. ಆದರೆ, ಚಿತ್ರರಂಗದಲ್ಲಿ ೯೯ ಶೇಕಡಾ ಜನ ಮಾಡುವುದು ಇದೇ ಅಲ್ಲವೇ? ಹಾಗಾದರೆ ಇವರದ್ದೇನು ವಿಶೇಷ?
ಇನ್ನು ಸರಳ ತಾನಿಯ ಜೀವನದಲ್ಲಿ ದಿಲ್ವಾಲೇಯ ರಾಜ್ ಬಂದರೆ ಏನಾಗುತ್ತದೆ ಎಂದು ಊಹಿಸುವ ಪ್ರಶ್ನೆಗೆ ಬರೋಣ. ಮೊದಲನೆಯದಾಗಿ, ಈ ಪ್ರಶ್ನೆ ದಿಲ್ ವಾಲೇ ಚಿತ್ರವನ್ನು ನೋಡಿದ ವೀಕ್ಷಕರಿಗಷ್ಟೇ ಅನ್ವಯವಾಗುತ್ತದೆ. ಹಾಗಾದರೆ ಈ ಚಿತ್ರಕ್ಕೆ ಸ್ವಂತ ಅಸ್ತಿತ್ವವೇ ಇಲ್ಲವೇ? ಈ ಚಿತ್ರದ ಪಾತ್ರಗಳಿಗೆ ನೀವು ನನ್ನ ಆ ಸಿನೆಮಾವನ್ನು ನೋಡಿ ಬನ್ನಿ ಎನ್ನುವ ನಿರ್ದೇಶಕನ ನಿಲುವು ಎಷ್ಟರ ಮಟ್ಟಿಗೆ ಸರಿ? ಇಲ್ಲಿ ಪಾತ್ರ ಪೋಷಣೆ ಎಲ್ಲಿದೆ? ಅದರ ಬೆಳವಣಿಗೆ ಎಲ್ಲಿದೆ? ದಿಲ್ ವಾಲೇ ನನ್ನ ಪ್ರಕಾರ ಹೆಚ್ಚಿನ ಅಂಕ ಎಲ್ಲಿ ಗಳಿಸುತ್ತದೆ ಎಂದರೆ, ಅದರಲ್ಲಿ ಎಂಥದ್ದೇ ಕಥೆಯನ್ನೂ , ಸಂದೇಶವನ್ನೂ ನಂಬಲರ್ಹ ಘಟನೆಗಳ ಜೋಡಣೆಯ ಮೂಲಕ ಸಾಧಿಸಲಾಗುತ್ತದೆ. ನಾಯಕ ಸೋಲುತ್ತಾ ಸೋಲುತ್ತಾ ಗೆಲ್ಲುತ್ತಾನೆ. ಆದರೆ ರಬ್ ದೇ…ಗೆ ಬರುವಾಗ ಶಾರುಖ್ ಖಾನ್ ಹಿಂದೀ ಚಿತ್ರ ರಂಗದ ಚಕ್ರವರ್ತಿಯಾಗಿಬಿಟ್ಟಿದ್ದಾನೆ. ಇವನಿಗೆ ಸೋಲು ಸಾಧ್ಯವೇ ಇಲ್ಲ. ರಬ್ ದೇ ನೋಡುವ ವೀಕ್ಷಕನೂ ಇದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಚಿತ್ರ ನೋಡುತ್ತಿದ್ದಾನೆ. ಒಂದಷ್ಟು ಹಾಡು… ಕುಣಿತ… ಮಂಗಾಟ… ಎಲ್ಲವೂ ಕೊನೆಗೆ ನಿರರ್ಥಕ!
ಇದೆಲ್ಲ ಇಂತಿದ್ದೂ… ನಿಮಗೆ ಚಿತ್ರ ಇಷ್ಟ ಆಗಿದೆ. ಲೋಕೋ ಭಿನ್ನರುಚಿಃ ಅದಕ್ಕೇನೂ ಬೇಸರವಿಲ್ಲ ಬಿಡಿ. ಈ ಕಾರಣಕ್ಕೇ ಒಂದು ಚಿತ್ರದ ಬಗ್ಗೆಯಾದರೂ ಸೃಜನಾತ್ಮಕ ಚರ್ಚೆ ಆರಂಭಿಸಿದ್ದಕ್ಕೆ ಧನ್ಯವಾದ. ಸಂತೋಷ. 🙂
– ಅಭಯ ಸಿಂಹ
ಹೌದು ಅಭಯ, ಮೊತ್ತ ಮೊದಲ ಶಾಟ್ ನಲ್ಲೆ (ಅಂದರೆ ‘ಅಮ್ರತಸರ್’ ರೈಲ್ವೆ ಸ್ಟೇಷನ್ ನೆ ‘ಅಮ್ರತಸರ್’ ಎಂದು ಬರೆದ ಹಳದಿ ಬಣ್ಣದ ಟಿಪಿಕಲ್ ಬೋರ್ಡು) Flexi ಶೀಟಿನ ಹಾವಳಿ ಕಂಡು ಬಂತು! ಈ ಹಾವಳಿ ಇಡೀ ಚಿತ್ರದಲ್ಲಿ ಕಂಡು ಬಂತು! ಯಶ್ ರಾಜ್ ರಂಥ ದೊಡ್ಡ ನಿರ್ಮಾಪಕರೂ ಇಂಥ ಕಂಜೂಸಿಯನ್ನು ತೋರಿಸಿದರೆ ಬೇರೆ ಚಿಕ್ಕ ಪುಟ್ಟ ನಿರ್ಮಾಪಕರ ಗತಿಯೇನು?
ಅಬ್ಬ! ಸರ್… ನಿಮ್ಮ ಮಾತು ಅಕ್ಷರಶಃ ಸರಿ. ಮತ್ತು ನಿಮ್ಮ ಸೂಕ್ಷ್ಮ ದೃಷ್ಟಿಗೆ ನಾನು ಬೆರಗಾಗಿದ್ದೇನೆ!!!
NANGE THUMBA ESHTA AYTU
ಎಲ್ಲ ಓಕೆ ಆದರೆ ಮೀಸೆ ಯಾಕೆ? ಅಲ್ಲ ಎಂಥ ಚಿಕ್ಕ ಮಗೂಗೇ ಎರಡು ಪಾತ್ರಗಳನ್ನು ತೋರಿಸಿದರೆ ಎರಡು ಒಂದೇ ಎಂದು ಹೇಳುತ್ತೆ. ನಾನು ನಮ್ಮ ಅಕ್ಕನ ಮಗಳ ಜೊತೆಗೆ (೫ ವರ್ಷ) ಚಿತ್ರ ನೋಡಿದೆ… ಅವಳು ಚಿತ್ರ ಮುಗಿಯುವವರೆಗೂ ನಾಯಕಿಗೆ ಬಯ್ಯುತ್ತ ಇದ್ದಳು, “ಅಯ್ಯೋ ಅದು ನಿನ್ನ ಗಂಡನೆ ಅದು ಕೂಡ ನನಗೆ ಗೊತ್ತಿಲ್ಲವ ಅಂತ”. ಮಕ್ಕಳೇ ಹೀಗೆ ಅಂದ ಮೇಲೆ ಬೇರೆಯವರ ಕಥೆ ಅಧೋ ಗತಿ!