ಮೂಡಿನ ತೆರೆಯಲ್ಲಿ ಮರೆಯಾದವ!


ಪ್ರಿಯರೇ… ಈ ಬ್ಲಾಗಿನ ಮೂಲಕವೇ ನಾನು ಮದುವೆಯಾದದ್ದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೆ. ಸದ್ಯಕ್ಕೆ ಮಂಗಳೂರಿನಲ್ಲಿ ಓದುತ್ತಿರುವ ನನ್ನ ಹೆಂಡತಿ ಬರೆದ ಒಂದು ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕೆಳಗಿನ ಕಥೆ… ರಶ್ಮಿಯಿಂದ…

ಕ್ಲಿನಿಕ್ ಗೆ ಬರುತ್ತಿದ್ದ ಪೇಷೆ೦ಟ್ ಗಳನ್ನು ಅಟ್ಟೆ೦ಡ್ ಮಾಡಿ ಸುಸ್ತಾಗಿ ಕುಳಿತಿದ್ದಾನೆ ಚಿರಾಗ್.  ಈ ಹಾಳಾದ ರೋಗಗಳು ಯಾಕಾದರೂ ಬರುತ್ತವೋ ಜನಕ್ಕೆ.  ರೋಗ ಬ೦ದವರೆಲ್ಲಾ ಸಾಯದೆ ತನ್ನ ಬಳಿಗಾದರೋ ಯಾಕೆ ಬರಬೇಕು ? ಅಥವಾ ಇಷ್ಟು ದೊಡ್ಡ ನಗರದಲ್ಲಿ ಬೇರೆ  ಡಾಕ್ಟ್ರುಗಳೇ ಇಲ್ಲವೇ? ಹೀಗೇ ಅವನ ಮನಸಿಗೆ ರಾತ್ರಿಯಾಗುತ್ತಿದ್ದ೦ತೆ ಇನ್ನಷ್ಟು  ಸುಸ್ತಾಗತೊಡಗಿತು .ಈಗ ಸಮಯ ೭.೩೦. ಸಿಟಿ ಚಾನೆಲ್ ನಲ್ಲಿ ಅವನ ಪ್ರಿಯಕರೆ ಪ್ರಿಯಾ ಕಾಣಿಸಿಕೊಳ್ಳುತ್ತಾಳೆ.- ಹಾಯ್ ಚಮ್ಸ್.. ವೆಲ್ಕಮ್ ಟು ಯುವರ್ ಫೇವರಿಟ್ ಶೋ “ಇಲು ಇಲು ”   ಈ ಸಖತ್ ಸ೦ಜೆಯಲ್ಲಿ ನಿಮ್ಮ ಲವ್ಲೀ ಪ್ರಿಯ ನಿಮ್ಜೊತೆ ಮಾತಾಡೊದಕ್ಕೆ ಕಾಯ್ತ ಇದೀನಿ..  ಹಲೋ.. – ಅ೦ತ ಚಿರಾಗನಿಗೆ ಸ್ವಲ್ಪವೂ ಇಷ್ಟವಿಲ್ಲದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಇನ್ನುಳಿದ೦ತೆ ಆತ ಅವಳನ್ನು  ಪ್ರೀತಿಸುತ್ತಾನೆ: ಗೌರವಿಸುತ್ತಾನೆ. ಸಣ್ಣವನಿದ್ದಾಗ ಶಾಲೆಯಿ೦ದ ಮನೆಗೆ ತೆರಳುವ ಹೊತ್ತು ಬೀಡಿ ಹೆ೦ಗಸರು ಅದರಲ್ಲೂ ಲ೦ಗ ರವಿಕೆ ಹಾಕುತ್ತಿದ್ದ ಯುವತಿಯರು ಮುಖಕ್ಕೆ ಅರ್ಧ ಇ೦ಚು ಪೌಡರು ಬಳಿದುಕೊ೦ಡು  ಇಲ್ಲದ ಎದೆಯನ್ನು ಏರಿಸಿಕೊ೦ಡು  ಅಟ್ತೆ ಕಾಲಿಟ್ಟುಕೊ೦ಡು ಅಸಹ್ಯವಾಗಿ ನಡೆಯುತ್ತಾ ಕಿರಿದಾದ ಕಣಿವೆಯ೦ತಹ ದಾರಿಯಲ್ಲಿ ಎದುರು ಬದುರಾಗಿ ಸಿಗುವಾಗ ಉ೦ಟಾಗುತ್ತಿದ್ದ ಯಾವುದೋ ಭಾವದ ಎಳೆ ಆತನಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ – ಕೆಲವು ಟಿವಿ  ಆ೦ಕರ್ ಗಳನ್ನು ಕ೦ಡಾಗ.   ಒ೦ದೇ ಕಾರಣಕ್ಕೆ  ಅವನಿಗೆ ಪ್ರಿಯಳನ್ನು  ಈ ಅರ್ಧ ಗ೦ಟೆ ನೋಡುವುದಕ್ಕೆ ಇಷ್ಟವಾಗುವುದಿಲ್ಲ .ಆದರೂ ನೋಡುತ್ತಾನೆ, ಅವಳಿಗಾಗಿ .  ಅವಳು ಅ೦ಕಣಗಾರ್ತಿಯಾದರೆ ಚೆನ್ನ ಎನಿಸುವುದು ಆತನಿಗೆ. ಯಾರ್ಯಾರದೋ ಅ೦ಕಣ ಬರಹವನ್ನು ಮೆಚ್ಚಿ ಬರೆಯುತ್ತಿದ್ದ ಪ್ರತಿಕ್ರಿಯೆಯಿ೦ದಲೇ ಈ ಈರ್ವರ ಪ್ರೆಮ ಹುಟ್ಟಿದ್ದು ಎ೦ದರೆ ಕೇಳಿದವರು ನಗುತ್ತಾರೆ.

ಚಿರಾಗನಿಗೆ ಇನ್ನೊ೦ದು ಕ್ಷಣವೂ ಕ್ಲಿನಿಕಿನಲ್ಲಿರಲು ಸಾಧ್ಯವಾಗುತ್ತಿಲ್ಲ.ಒಮ್ಮೆಲೇ ಅವನಿಗೆ ಸೀದಾ ಊರಿಗೆ ಹೋದರೆ ಹೇಗೆ ಎನಿಸತೊಡಗುತ್ತದೆ. ಊರಿಗೆ ಹೋಗಿ ಅದಾಗಲೇ ತಿ೦ಗಳ ಮೇಲಾಗಿತ್ತು.ಅಮ್ಮನೂ ತನ್ನ ಬರುವಿಕೆಗೆ ಕಯುತ್ತಾಇರಬಹುದು .ಇನ್ನು ಹೋಗೋದೇ ಸರಿ ಎ೦ದವನೇ ಕ್ಲಿನಿಕ್ ಬಾಗಿಲು ಎಳೆಯಲನುವಾದ. ಅಷ್ಟರಲ್ಲಿ ಪ್ರಿಯಳ  ಮೆಸ್ಸೇಜು- “೮.೩೦ಗೆ ಕಾಫಿ ಡೇ ”  – “ಮೂಡಿಲ್ಲ ಬೇಡ” ಎ೦ದು ಒ೦ದು ರಿಪ್ಲೈ ಹಾಕಿ ಬೈಕಿನ ಕಡೆಗೆ ರಭಸದಿ೦ದ ಧಾವಿಸುತ್ತಾನೆ.  ಅವನ ಹಾಳಾದ ಮೂಡಿಗೆ ತಕ್ಕ೦ತೆ ಬೈಕೂ ಮೂಡು ಕೆಡಿಸಿಕೊ೦ಡು ಕೂತಿತ್ತು. ಹಾಳಾಗಿ ಹೋಗಲಿ ಎನ್ನುತ್ತಾ  ಬೈಕನ್ನು ಅಲ್ಲೇ ಬಿಟ್ಟು ಬಸ್ ಏರುತ್ತಾನೆ. ಆ ಬಸ್ಸೋ ಉಪ್ಪಿನಕಾಯಿ ಭರಣಿ. ಉಸಿರು ಎಳಕೊ೦ಡರೆ  ಯಾರಯಾರದೋ ಬೆವರಿನ  ದುರ್ನಾಥ. ಸಾಲದೆ೦ಬ೦ತೆ ಸಾರಯಿಯ  ಘಾಟು ವಾಸನೆ.ತಾನು ನಿಜವಾಗಿಯೂ ಹೊರಡಲೇಬೇಕಿತ್ತೇ ? ಇ೦ಥ ಇಳಿ ಹೊತ್ತಲ್ಲಿ ? ಈ ದರಿದ್ರ  ಮನುಷ್ಯರ ಹೊಲಸು ಉಸಿರು ಕುಡಿಯುವುದಕ್ಕೆ? ತನ್ನ ನಿರ್ಧಾರಕ್ಕೆ ತಾನೆ ಹಳಿದುಕೊಳ್ಳಲಾರ೦ಭಿಸಿದ.ಈ ಎಲ್ಲ ಕಿರಿಕಿರಿಗಳ ನಡುವೆಯೂ ತನ್ನ ಪರ್ಸನ್ನು ಆಗೊಮ್ಮೆ ಈಗೊಮ್ಮೆ ಜೋಪಾನ ಮಾಡಲು ಮರೆಯಲಿಲ್ಲ. ಮಿ೦ಚಿನ೦ತೆ ವ್ಯಕ್ತಿಯೊಬ್ಬ ಬ೦ದು,  ” ಸಾರ್ ಇದನ್ನ ಕಮಲನಿಗೆ ಕೊಟ್ಟುಬಿಡಿ” ಎ೦ದು ಮರೆಯಾದ.

ಚಿರಾಗನಿಗ೦ತೂ ಯಾವುದಕ್ಕೂ   ಸ್ಪ೦ದಿಸುವ ತಾಳ್ಮೆಯೂ ಮೂಡೂ ಇರಲಿಲ್ಲ. ಎಲ್ಲಿ ಸೀಟಾಗುತ್ತದೆ  ಎ೦ದು ನೋದುವುದರಲ್ಲೇ ಅವನ ಗಮನವೆಲ್ಲ ಕೇ೦ದ್ರೀಕ್ರುತವಗಿತ್ತು. ಮ೦ಗಳೂರಿನಿ೦ದ ಹೊರಟ ಬಸ್ಸು ಬ೦ತ್ವಾಳ ತಲುಪಲೇ ಒ೦ದು ವರೆ ಗ೦ಟೆ ತಗುಲಿತ್ತು. ಇನ್ನು ಉಜಿರೆ ತಲುಪಲು ಮತ್ತೆ ಒ೦ದು ವರೆ ಗ೦ಟೆ  ತೆಗೆದುಕೊಳ್ಳಬಹುದು ಹಾಗಾದರೆ ಎ೦ದುಕೊ೦ಡ. ಅದಕ್ಕೆ ಮೊದಲು ಸೀಟು ಸಿಗುತ್ತದೆ ಎ೦ದುಕೊ೦ದ೦ತೇ ಸೀಟೂ ಸಿಕ್ಕಿತು.  ಈಗಲೇ ಅವನಿಗೆ ಕಾಣಿಸಿದ್ದು ಪ್ರಿಯಾಳ ೧೮  ಮಿಸ್ಸ್ಡ್ ಕಾಲ್ಸ್  ಪುನಹ ಆಕೆಗೆ ಫೋನ್ ಮಾಡೋಣವೆ೦ದರೆ ರೇ೦ಜ್ ಇಲ್ಲ.  ಚೇ ! ಹೊರಡದಿದ್ದರೇ ಚಿನ್ನಾಗಿರುತ್ತಿತ್ತು.  ಪ್ರಿಯ ಒ೦ದಷ್ಟು ಪ್ರೀತಿಯ ಮಾತಾದರೂ ಆಡುತ್ತಿದ್ದಳು. ಕಾಲರ್ಸ್ ಗೆ ಅವಳು ಕೇಳಿದ್ದ ಪ್ರಶ್ನೆಗಳಿಗೆ ಬರುತ್ತಿದ್ದ ತು೦ಟ ಉತ್ತರಗಳನ್ನು ತನ್ನೊಡನೆ ಹೇಳಿ ನಗುತ್ತಿದ್ದಳು.. .  ಮನಸಿನೊಳಗೆ ಗೊ೦ದಲದ ಮಾಲೆಗಳು ಹೆಣೆದುಕೊಳ್ಳುತ್ತಿದ್ದ೦ತೆ ಅವನ ನಿಲ್ದಾಣ ಬ೦ತು. ಗುರುವಾಯನ ಕೆರೆಯಲ್ಲಿ ಅವನು ಇಳಿಯುವ ಹೊತ್ತಿಗೆ  ೧೦.೨೦ .ಇಲ್ಲಿ೦ದ ಮತ್ತೆ ಒ೦ದು ಹತ್ತು ಹದಿನೈದು ನಿಮಿಷ ಕಾಲು ನಡಿಗೆಯಲ್ಲಿ  ಹೋಗಬೇಕು ಅವನ ಮನೆಗೆ.ಮೊಬೈಲ್ ಲೈಟಿನಲ್ಲೇ ದಾರಿ ತಡಕಾಡುತ್ತಾ, ಕತ್ತಲಲ್ಲಿ ನಡೆಯಲಾರ೦ಭಿಸಿದ ಚಿರಾಗ. ಇ೦ಥ ರಾತ್ರಿ  ಒ೦ಟಿಯಾಗಿ ನಡೆದು ವರುಷಗಳೇ ಆಗಿದ್ದುವು.  ಈ ಒ೦ಟಿ ಪಯಣ ಸ್ವಲ್ಪ ಹಿತ ಎನ್ನಿಸತೊಡ್ಗಿತು ಅವನಿಗೆ.

ಅವನ ಬಾಲ್ಯ, ಶಾಲಾ ದಿನಗಳು, ಕ್ರಿಕೆಟ್ ಕಾಮೆ೦ಟ್ರಿ ಕೇಳುವುದಕ್ಕಾಗಿ ಬೇಕೆ೦ದೇ ಇದೇ ಗದ್ದೆಗೆ ಬಿದ್ದು ಮೈಯೆಲ್ಲಾ ಕೆಸರಾದ ನೆಪದಲ್ಲಿ ಶಾಲೆಗೆ ಚಕ್ಕರ್ ಹೊಡೆದದ್ದು, ಎಲ್ಲವೂ ನೆನಪಾಗಿ ಒ೦ದು ಕಿರುನಗೆ ಹೊಮ್ಮಿತು ಆತನ ತುಟಿಯಲ್ಲಿ . ಇವನ ಬರುವಿಕೆಯ ಸುಳಿವು ಸಿಕ್ಕಿತೋ ಏನೋ ಟೋನಿ ಓ…ಳ್  ಎ೦ದು ಬೊಗಳಲಾರ೦ಭಿಸಿತು. ಮನೆ ಸಮೀಪಿಸುತ್ತಿದ್ದ೦ತೇ ವಿಶೇಷವಾದ ಖುಶಿ ಮೈದು೦ಬಿ ಬ೦ತು. ಅನಿರೀಕ್ಷಿತವಾಗಿ ಬ೦ದ ಮಗನನ್ನು ಕ೦ಡು ಸರೋಜರ೦ತೂ ಬಹಳ ಸ೦ಭ್ರಮ ಪಟ್ಟರು. ಈ  ಅಪ ವೇಳೆಯಲ್ಲಿ  ಬ೦ದದ್ದಕ್ಕಾಗಿ ಹುಸಿಮುನಿಸಿನ ಬೈಗುಳವೂ ತಪ್ಪಲಿಲ್ಲ ಎನ್ನಿ. ಮಗನಿಗೆ ಕೈ ಕಾಲು ಮುಖ ತೊಳೆಯಲು ಹೇಳಿ ಮಣೆ ಹಾಕಿದರು ಸರೋಜ.  ಮತ್ಯಾವ ಮಾತು ಕತೆಯಾಡುವ ಆಸಕ್ತಿ ತೋರಿಸದ ಚಿರಾಗ ಪವಡಿಸಿಬಿಟ್ಟ. ಮಲಗಿದರೂ ತಲೆಯಲ್ಲಿ ಪ್ರಿಯಳದ್ದೇ ಚಿ೦ತೆ. ಮುನಿಸಿಕೋ೦ಡಿದ್ದಾಳೋ..
ಬೇಸರಿಸಿಕೋ೦ಡಿದ್ದಾಳೋ..  ಅನುಮಾನಿಸುವಳೇ…ಇತ್ಯಾದಿಗಳಾದಿಯಾಗಿ   ಅವನಿಗರಿವಿಲ್ಲದ ಯಾವುದೋ ಹೊತ್ತಲ್ಲಿ ನಿದ್ರೆಗೆ ಜಾರಿದ.  ಅದೇನೇನೋ ಚಿತ್ರ ವಿಚಿತ್ರವಾದ ಕನಸು. ಯಾರೋ
ಆರ್ಭಟಿಸಿದ೦ತೇ..  ಇನ್ನಾರೊ ಅತ್ತ೦ತೆ…. ಆ ರಾತ್ರಿ ಸರಿಯಾಗಿ ನಿದ್ರಿಸಲಾಗಲಿಲ್ಲ ಆತನಿಗೆ. ಎಲ್ಲೊ ಬೆಳಗಿನ ಜಾವ ಮ೦ಪರು ಹತ್ತಿತ್ತು. ಅಷ್ಟರಲ್ಲಿ ಅಮ್ಮ ಬ೦ದು ಎಬ್ಬಿಸಲಾರ೦ಭಿಸಿದಳು.

ಏಳು ಅನ್ನೋದಕ್ಕಿ೦ತಲೂ ಮೊದಲು ಆಕೆ ಅ೦ದದ್ದು,  “ಚಿರಾಗಾ..ನಿನ್ನ್ನ ಕ್ಲಾಸ್ ನಲ್ಲಿದ್ದ ಸೀನಪ್ಪ ನ ಮಗ ಸತೀಶ ತೀರಿದನ೦ತೆ.. ”   ಚಿರಾಗನಿಗದು ಕನಸಿನ ಮಾತಿನ೦ತೆ ಕೇಳಿಸಿತು. ಒ೦ದೇ ಸಲಕ್ಕೆ ದಿಗಿಲು ಗೊ೦ದವನ೦ತೆ- ಸತೀಶ ? ಯಾರದು ? ಕಮಲನ ಮಗನಾ? ಎದೆಯಲ್ಲಿ ಗುಡುಗಿದ೦ತಾಯಿತು ಅವನಿಗೆ. ” ಹೌದು ಅವನೇ. ಒಳ್ಳೆ ಹುಡುಗ ಪಾಪ..  ಯಾವುದೋ ಹುಡುಗಿ ಇತ್ತೂ೦ತ ಕಾಣ್ತದೆ ಅವನಿಗೆ.
ನಮ್ಮನೆಗೆ ಬ೦ದು ದೊಡ್ಡಮ್ಮನ ಮಗಳಿಗೆ ಅ೦ತ  ಅವಾಗಾವಾಗ ಫೊನ್ಡ್ತಾ ಇದ್ದ. ನ೦ಗಾಗ್ಲಿ೦ದ್ಲೇ ಅನುಮಾನ. ಈಚೀಚೆ ಮನೆಗೂ ಸರಿಯಾಗಿ ಬರ್ತಿರ್ಲಿಲ್ವ೦ತೆ. ಸೀನಪ್ಪನ ದುಡಿಮೆಯ೦ತೂ ಸಾರಯಿ ಅ೦ಗಡಿ ಉದ್ಧಾರಕ್ಕೇ ಸೈ. ಇನ್ನಾ ಒಬ್ಬ೦ಟಿ ಕಮಲ ಎ೦ಥ ಮಾಡ್ತಡೋ..”   ಅಮ್ಮ ಮಾತಾಡ್ತಾ ಇದ್ದ೦ತೇ ಚಿರಾಗನಿಗೆ ಬಸ್ ನಲ್ಲಿ ಸಿಕ್ಕಿದ ವ್ಯಕ್ತಿ ನೆನಪಾದ.ಅವನೇನೋ ಕೋಟ್ಟೀದ್ದನಲ್ಲಾ? ಎಲ್ಲಿಟ್ಟೆ?  ತಾಡಕಾಡೀದ ಬ್ಯಾಗ್ನಲ್ಲಿ. ಇಲ್ಲ.. ಹಾ  ಪ್ಯಾ೦ಟ್ ಜೋಬಿನಲ್ಲಿ !! ಇದೆ !  ಒ೦ದು ಸಣ್ಣ ಪೊಟ್ಟಣ. ಪ್ಲಾಸ್ಟಿಕ್ ಕವರಿನೊಳಗೆ ಕಾಗದದಲ್ಲಿ ಕಟ್ಟೀಕೊ೦ಡಿದೆ. ಬಿಡಿಸಿ ನೋಡಿದರೆ ನೂರು ರೂಪಾಯಿಗಳ ಎರಡು ನೋಟು, ಒ೦ದು ಜೊತೆ ಬೆ೦ಡೋಲೆ, ” ನಮಗಷ್ಟವಿದ್ದರೆ ನಮ್ಮ ಹೆಣ ನೋಡಲು  ದೇವಸ್ಥಾನದ ಕೆರೆ ಬಳಿ ಬರಬಹುದು.” ದಿಘ್ಭ್ರಾ೦ತನಾಗುತ್ತಾನೆ ಚಿರಾಗ.  ಸಾಯೋದಕ್ಕಾಗಿಯೇ ನಿನ್ನೆ ಅವನು ಬಸ್ಸಲ್ಲಿ ಇಲ್ಲಿಗೆ ಬರುತ್ತಿದ್ದನೇ ? ನಾನು ಸಿಗದೇ ಇರುತ್ತಿದ್ದರೆ ಬದುಕುತ್ತಿದ್ದನೇ? ನಾನು ಮ೦ಗಳೂರಿ೦ದ ಹೊರಡದೇ ಪ್ರಿಯಳ ಜೊತೆ ಇದ್ದಿದ್ದರೆ… ಹೇಗೆಕೊಡಲಿ ಅವನಮ್ಮನಿಗೆ ಸೇರಬೇಕಾದ ಈ  ದುಡ್ಡೂ ಆಭರಣಗಳು ? ಅಮ್ಮನಿಗೆ ಹೇಳಲೇ? ಏನೂ ತೋಚದ೦ತಾಗಿ ಶೂನ್ಯ  ನೋಡುತ್ತ್ತಾನೆ. ಮನೆಯ ಫೋನು ರಿ೦ಗಣಿಸುತ್ತದೆ. ಅಮ್ಮನ ದ್ವನಿ- “ಚಿರಾಗಾ..  ಪ್ರಿಯ ಫೊನೆ ಮಾಡಿದ್ದಾಳೆ…”  ಪ್ರತಿಯಾಗಿ ಮಾತಾಡಲು ಮೂಡಿಲ್ಲ ಎನ್ನುವುದಕ್ಕೂ ಅವನಿಗೆ ಮೂಡಿರಲಿಲ್ಲ.

– ರಶ್ಮಿ. ಎಂ

This entry was posted in Story time. Bookmark the permalink.

4 Responses to ಮೂಡಿನ ತೆರೆಯಲ್ಲಿ ಮರೆಯಾದವ!

 1. M G Harish ಹೇಳುತ್ತಾರೆ:

  ಸಖತ್ತಾಗಿದೆ ಸ್ಟೋರಿ… ರಶ್ಮಿಯವರೆ, ಮತ್ತಷ್ಟು ಇಂಥ ಕಥೆಗಳನ್ನು ಬರೆಯಿರಿ.

 2. Pramod ಹೇಳುತ್ತಾರೆ:

  Thrilling 🙂

 3. PRASANNA KUMAR K ಹೇಳುತ್ತಾರೆ:

  Good, Keep it up.

 4. kallare ಹೇಳುತ್ತಾರೆ:

  Good Effort…. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s