‘Slam’ dog millionaire


ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಬಂತು ಹಾಗೂ ಈಗ ಆಸ್ಕರ್ ಓಟದಲ್ಲೂ ಹನ್ನೊಂದು ಕ್ಷೇತ್ರಗಳಿಗೆ ಅದು ಆಯ್ಕೆಯಾಗಿದೆ. ಇತ್ತೀಚೆಗೆ ಈ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. (ಹೇಗೆ ಅಂತ ಕೇಳಬೇಡಿ… 😉 ಅದೆಲ್ಲಾ ಹೇಳಲಿಕ್ಕಾಗುವುದಿಲ್ಲ ಹ… ಹ್ಹ… ಹ್ಹ… ) ಎ.ಆರ್. ರೆಹಮಾನಿಗೆ ಗೋಲ್ಡನ್ ಗ್ಲೋಬ್ ಬಂದದ್ದು ಸಂತೋಷ. ಅವರ ಸಂಗೀತ ಮೊದಲು ಕೇಳಿದಾಗ ನನಗೆ ಅದು ಚೆನ್ನಾಗಿದೆ ಎನಿಸಿತು. ಆದರೆ ಅಧ್ಭುತ ಎಂದು ಅನಿಸಿರಲಿಲ್ಲ. ಆದರೆ ಚಿತ್ರದಲ್ಲಿ ಅದನ್ನು ನೋಡಿದಾಗ ಆ ಸಂಗೀತವೂ ಅದರ ಚಿತ್ರೀಕರಣವೂ ಸೇರಿ ಸಂಗೀತಕ್ಕೆ ಹೊಸ ಬೆಲೆ ಬಂದಿತ್ತು. ಚಿತ್ರಕ್ಕೆ ಇಷ್ಟು ನಿಷ್ಟನಾಗಿ ಸಂಗೀತ ಕೊಡುವುದು ಎ.ಆರ್. ರೆಹಮಾನ್ ಎಂಬ ಮಹಾನುಭಾವನಿಂದ ಮಾತ್ರ ಸಾಧ್ಯ ಎನಿಸಿತು. ಏನೇ ಇರಲಿ ಅವರಿಗೆ ಗೋಲ್ಡನ್ ಗ್ಲೋಬ್ ಬಂದಿದ್ದಂತೂ ಸಂತೋಷದ ವಿಷಯ ಹಾಗೂ ಅದಕ್ಕೆ ಅವರು ಸಂಪೂರ್ಣ ಅರ್ಹರೂ ಕೂಡಾ. ಇನ್ನು ಈ ಚಿತ್ರದ ಕುರಿತಾಗಿ ಅನೇಕ ಪರ-ವಿರೋಧ ಮಾತುಗಳು ಎದ್ದಿದ್ದಾವೆ. ಭಾರತವನ್ನು ಕೀಳಾಗಿ ತೋರಿಸಿದಾಗಲೆಲ್ಲಾ ಕೃತಿಗಳಿಗೆ ವಿದೇಶೀ ಬಹುಮಾನ ಬರುತ್ತೆ ಎಂದು ಅನೇಕರು ಹೇಳಿಕೊಂಡರು. ಅರವಿಂದ ಅಡಿಗರ ಪುಸ್ತಕ ಬಂದಾಗಲೂ ಅನೇಕರು ಇಂಥದ್ದೇ ಮಾತುಗಳನ್ನು ಆಡಿದರು. ಅದರ ಸತ್ಯಾಸತ್ಯತೆಯ ಶೋಧಕ್ಕೆ ನಾನು ಇಲ್ಲಿ ಇಳಿಯುತ್ತಿಲ್ಲ. ಕೇವಲ ಇದನ್ನು ಒಂದು ಚಿತ್ರವಾಗಿ ಪರಿಗಣಿಸಿ ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸಬೇಕೆಂದಿದ್ದೇನೆ. ಆದರೂ… ಮುಂದುವರೆಯುವ ಮೊದಲು… ಗಿರೀಶ್ ಕಾಸರವಳ್ಳಿ, ಅಡೂರು ಗೋಪಾಲ ಕೃಷ್ಣ ಇತ್ಯಾದಿ ಭಾರತದ ಒಂದು ದೊಡ್ಡ ಗುಂಪು ಚಿತ್ರ ನಿರ್ದೇಶಕರ ಚಿತ್ರಗಳು ವಿದೇಶಗಳಲ್ಲಿ ಭಾರೀ ಮಾನ್ಯತೆ ಪಡೆದಿದೆ. ಅವರ ಚಿತ್ರಗಳ ಕುರಿತಾಗಿ ಹೊರದೇಶಗಳಲ್ಲಿ ಗಂಭೀರ ಅಧ್ಯಯನಗಳು ನಡೆದಿವೆ. ಆದರೆ ಇವರ್ಯಾರೂ ಭಾರತವನ್ನು ಕೀಳಾಗಿ ತೋರಿಸಿ ಈ ಅರ್ಹತೆಯನ್ನು ಪಡೆದವರಲ್ಲ. ಅನಂತ ಮೂರ್ತಿಯಂಥ ಕೆಲ ಗಣ್ಯ ಕನ್ನಡ ಲೇಖಕರ ಪುಸ್ತಕಗಳು ಯೂರೋಪಿನ ನಾಲ್ಕೈದು ಭಾಷೆಗಳಿಗೆ ಭಾಷಾಂತರವಾಗಿ ಅನೇಕ ಮುದ್ರಣವನ್ನು ಕಂಡಿದೆ… ಅವರೂ ಭಾರತವನ್ನು ಕೀಳಾಗಿ ತೋರಿಸಲಿಲ್ಲ. ಇಷ್ಟಾಗಿಯೂ ಸ್ಲಂ ಡಾಗ್ ಮಿಲಿಯನೇರಿನಲ್ಲಿ ತೋರಿಸಿದ ಸ್ಲಂಗಳು, ಭೂಗತ ಜಗತ್ತು ನಮ್ಮಲ್ಲಿ ಇರುವುದೇ ತಾನೆ? ಗೋಲ್ಡನ್ ಗೋಬ್ ಬರದೇ ಇರುತ್ತಿದ್ದರೆ ಆ ಸಿನೆಮಾ ಒಳ್ಳೆಯ ಸಿನೆಮವಾಗಿರುತ್ತಿತ್ತೇ ಹಾಗಾದರೆ? ಈ ವಾದ ನನಗೆ ಅಷ್ಟು ಸಮಂಜಸವೆನಿಸುವುದಿಲ್ಲ… ಏನೇ ಇರಲಿ… ಈಗ ಸಿನೆಮಾಕ್ಕೆ ಬರುವ.

ಸ್ಲಂ ಡಾಗ್ ಮಿಲಿಯನೇರಿನಲ್ಲಿ, ಮುಂಬೈಯ ಸ್ಲಂಗಳಲ್ಲಾಡುವ ಅಲ್ಲಿನ ಕೊಚ್ಚೆಯಲ್ಲಿ ಈಜು ಹೊಡೆಯುವ ಪೋರನೊಬ್ಬ ‘ಕೋನ್ ಬನೇಗಾ ಕರೋಡ್ ಪತಿ’ ಎಂಬ ಒಂದು ಟೆಲಿವಿಷನ್ ಆಟದಲ್ಲಿ ಆಡಿ ಗೆಲ್ಲುವ ಕಥೆ ಇದೆ. ಇದು ಕಥೆಯ ಬೆನ್ನುಹುರಿ ಎನ್ನಬಹುದು. ಆ ಆಟದಲ್ಲಿ ಕೇಳುವ ಪ್ರತಿಯೊಂದು ಪ್ರಶ್ನೆಯೂ ಪರಸ್ಪರ ಸಂಬಂಧವಿಲ್ಲದವುಗಳಾದರೂ, ಹೇಗೆ ಆ ಸಂಗತಿಗಳು ವಿಚಿತ್ರ ಕಾರಣಗಳಿಂದಾಗಿ ಈ ಸ್ಲಂ ಒಡನಾಡಿಗೆ ತಿಳಿಯಿತು ಎನ್ನುವುದು ಚಿತ್ರದ ಜೀವಾಳ. ಇಲ್ಲಿ ಸ್ಲಮ್ ಜೀವನದ ನಿಗೂಢ ಮಗ್ಗುಲುಗಳನ್ನು ಪರಿಚಯಿಸುತ್ತಲೇ ಜೀವನದಲ್ಲಿ ಒಂದು ಆಸೆಯನ್ನು ಹುಟ್ಟಿಸುವ ಪ್ರಯತ್ನ ನಡೆಯುತ್ತದೆ. ಇದಿಷ್ಟು ಸಿನೆಮಾದ ಕಥಾ ಭಾಗ.

ಆದರೆ ಚಿತ್ರದ ಕಥೆಯು ಒಟ್ಟಾರೆಯಾಗಿ ಒಂದು ಕಾಲ್ಪನಿಕ ಜಗತ್ತಿನಲ್ಲಿ ನಡೆದಂತೆ ಭಾಸವಾಗುತ್ತದೆ. ಇದಕ್ಕೆ ಭಾರತೀಯರಾದ ನಾವು ನಂಬಲಾರದ ವಿಷಯಗಳು ಈ ಚಿತ್ರದ ಕಥೆಯ ತಿರುವುಗಳನ್ನು ಕೊಡುವಲ್ಲಿ ಗಮನಾರ್ಹ ಭಾಗಗಳಾಗಿರುವುದು ಮುಖ್ಯ ಕಾರಣವಾಗಿರಬಹುದು. ಕಥೆಯಲ್ಲಿ ಮೂಲಭೂತ ಅನೇಕ ದೋಶಗಳಿವೆ. ಮೊದಲನೆಯದಾಗಿ ‘ಕೋನ್ ಬನೇಗಾ ಕರೋಡ್ ಪತಿ’ ಎಂಬ ಆಟದಲ್ಲಿ ಈ ಹುಡುಗ ಆಡುತ್ತಿರುತ್ತಾನೆ. ಅದನ್ನು ದೇಶದಾದ್ಯಂತ ಜನರು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಮೂಲತಃ ಈ ಆಟವು ಎಂದೂ ನೇರ ಪ್ರಸಾರದಲ್ಲಿ ನಡೆಯುವುದೇ ಇಲ್ಲ. ಅವೆಲ್ಲವೂ ಮೊದಲೇ ಚಿತ್ರೀಕರಿಸಿಕೊಂಡು ತೋರಿಸಲ್ಪಡುವ ಕಾರ್ಯಕ್ರಮಗಳು. ಈ ಗೇಮ್ ಶೋ ಪ್ರಪಂಚದ ೬೪ ದೇಶಗಳಲ್ಲಿ ಯಶಸ್ವಿಯಾಗಿ ನಡೆದಿದೆಯಂತೆ! ಎಲ್ಲೂ ನೇರಪ್ರಸಾರ ನಡೆದಿಲ್ಲ… ಇಲ್ಲಿಗೆ ಚಿತ್ರದಲ್ಲಿ ಟೆನ್ಶನ್ ಕಟ್ಟಲು ಬಳಸಿರುವ ಅತಿ ದೊಡ್ಡ ಪರಿಕರವೇ ಸುಳ್ಳು ಎಂದಂತಾಗುತ್ತದೆ. ಅದಂತಿರಲಿ… ಅದನ್ನು ಪೊಯೆಟಿಕ್ ಫ್ರೀಡಂ ಎನ್ನೋಣ ಎನ್ನುತ್ತೀರಾ? ಆದರೆ ಅಂಥಾ ಅನೇಕ ಪೊಯೆಟಿಕ್ ಫ್ರೀಡಂ ಬಳಸಿಕೊಂಡು ಇಲ್ಲಿ ಕಥೆ ಬೆಳೆಯುತ್ತಾ ಹೋಗುತ್ತದೆ. ಮತ್ತೆ ಅಲ್ಲಿ ಹೇಳಲಿಕ್ಕೆ ಹೊರಟಿರುವ ಕಥೆ ವಾಸ್ತವದ ಹತ್ತಿರದ್ದು ಎನ್ನುವ ಪ್ರಯತ್ನವನ್ನು ಚಿತ್ರ ಮಾಡುತ್ತದೆ. ಇಲ್ಲಿಯೇ ಈ ಪೊಯೆಟಿಕ್ ಫ್ರೀಡಂ ತೊಂದರೆ ಕೊಡುವುದು.

ಇನ್ನು ಕಥೆಯಲ್ಲಿನ ಅತಿ ದೊಡ್ಡ ತೊಂದರೆ ಎಂದರೆ ಅದರಲ್ಲಿ ಬಳಸಿರುವ ಭಾಷೆ. ಅನೇಕ ಪಾತ್ರಗಳು ಹಿಂದಿಯಲ್ಲಿ ಮಾತನಾಡುತ್ತವೆ. ಮತ್ತೆ ಕೆಲವು ಭಾರತೀಯ ಇಂಗ್ಲೀಷಿನಲ್ಲಿ ಮಾತನಾಡುತ್ತವೆ. ಆದರೆ ಕಥಾ ನಾಯಕ, ಕಾಲ್ ಸೆಂಟರಿನಲ್ಲಿ ಟೀ ಕೊಡುತ್ತಿದ್ದ ಹುಡುಗ ಬ್ರಿಟೀಷ್ ಇಂಗ್ಲೀಷಿನಲ್ಲಿ ಮಾತನಾಡುತ್ತಾನೆ. ಅವರ ಉಚ್ಚರಣೆ ಸಹಿತವಾಗಿ! ಇದು ಮತ್ತೆ ಆ ಹುಡುಗನೊಂದಿಗೆ ಸಹೃದಯರಾಗುವಲ್ಲಿ ನಮಗೆ ತೊಂದರೆಯನ್ನು ತಂದುಕೊಡುತ್ತದೆ. ಹಾಗೆ ನೋಡಿದರೆ ಈ ಹುಡುಗನ ಬಾಲ್ಯವನ್ನು ತೋರಿಸುವಾಗ ನಿಜವಾದ ಸ್ಲಂ ಹುಡುಗನೊಬ್ಬನನ್ನು ಬಳಸಿಕೊಂಡಿದ್ದಾರೆ. ಅವನು ಅಸಾಧ್ಯ ನೈಜತೆಯೊಂದಿಗೆ ನಟಿಸಿದ್ದಾನೆ. ಆದರೆ ಹುಡುಗ ದೊಡ್ಡವನಾಗುತ್ತಾ ಅವನಿಂದ ನಮ್ಮ ಮನಸ್ಸು ಇನ್ನೊಂದೆಡೆಗೆ ಹೋಗಿಬಿಡುತ್ತದೆ.

ಚಿತ್ರದಲ್ಲಿ ಹುಡುಗನಿಗೆ ಅವನ ಬಾಲ್ಯದ ಘಟನಾವಳಿಗಳಿಂದಾಗಿ ‘ಕೋನ್ ಬನೇಗಾ ಕರೋಡ್ ಪತಿ’ ಆಟದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿರುತ್ತವೆ ಎನ್ನುವುದು ಕಥೆಯ ಸಾರ. ಆದರೆ ಆ ಸನ್ನಿವೇಷಗಳಲ್ಲಿ ಅವನಿಗೆ ಉತ್ತರ ಗೊತ್ತಾಗುವ ಪ್ರಕ್ರಿಯೆ ಮತ್ತಷ್ಟು ಜಾಳಾಗಿವೆ. ಮತೀಯ ಗಲಭೆಗಳ ನಡುವೆ ಒಬ್ಬ ಹುಡುಗ ರಾಮನ ವೇಷ ಧರಿಸಿ ಯಾಕೆ ನಿಂತಿರುತ್ತಾನೆ? ಇದು ಕನಸೇ ವಾಸ್ತವವೇ? ಒಬ್ಬ ಕೇವಲ ಸ್ಲಂ ಹುಡುಗನ ಕೈಯಲ್ಲಿ ಕೋಲ್ಟ್ ೪೫ ಎಂಬ ಆಧುನಿಕ ರಿವಾಲ್ವರ್ ಹೇಗೆ ಬರುತ್ತದೆ? (ಯಾವುದೇ ಲೋಕಲ್ ರೌಡಿಯ ಕೈಯಲ್ಲಿ ರಿವಾಲ್ವರ್ ಬರುವುದು ಸುಲಭವಲ್ಲ. ಹಾಗೆ ಬಂದರೂ ಅದು ಮೊದಲು ಯಾವುದೋ ದೇಸೀ ಮೇಕ್ ಆಗಿರುವುದು ಸಹಜ ಅಲ್ಲವೇ? ಅಷ್ಟಕ್ಕೂ ಇವನು ಬರೇ ಒಬ್ಬ ಸಣ್ಣ ಹುಡುಗ!) ಕಾಲ್ ಸೆಂಟರಿನಲ್ಲಿ ಟೀ ಕೊಡುವ ಹುಡುಗ ಬ್ರಿಟೀಷ್ ಇಂಗ್ಲೀಷ್ ಕಲಿಯಲು ಹೇಗೆ ಸಾಧ್ಯ? ಅಮೇರಿಕನ್ ದಂಪತಿಗಳು ಎಷ್ಟೇ ಕರುಣಾ ಮಯಿಗಳಾಗಿದ್ದರೂ, ಭಾರತದಲ್ಲಿ ಒಬ್ಬ ಹುಡುಗನಿಗೆ ದಾನ ಕೊಡುವಾಗ ನೂರು ಡಾಲರ್ ನೋಟು ಕೊಟ್ಟಾರೇ? (ಅದೂ ಡಾಲರ್! ಹುಡುಗ ಪಾಪ ಅದನ್ನು ಹೇಗೆ ರೂಪಾಯಿಗೆ ಪರಿವರ್ತಿಸಿಕೊಳ್ಳುವುದು ಎನ್ನುವ ಪರಿವೆಯಾದರೂ ಅವರಿಗೆ ಬೇಡವೇ?!) ತಾಜ್ ಮಹಲ್ ನೋಡಲು ಬರುವ ವಿದೇಶೀಯರು ಅಲ್ಲಿನ ಒಬ್ಬ ಹುಡುಗನಿಂದ ಇದೊಂದು ಪಂಚತಾರಾ ಹೋಟೇಲ್ ಎಂದು ನಂಬುವಷ್ಟು ಮುಠಾಳರೇ? ಗೇಮ್ ಶೋ ನಡೆಸುತ್ತಿರುವ ಅನಿಲ್ ಕಪೂರಿಗೆ ಯಾಕೆ ಈ ಹುಡುಗನ ಮೇಲೆ ದ್ವೇಷ? ಹೀಗೆ ಕಥೆಯ ತುಂಬಾ ನಮ್ಮಲ್ಲಿಯ ರಸ್ತೆಗಳಂತೆ ಗುಂಡಿಗಳಿವೆ.

ಚಿತ್ರಕ್ಕೆ ರೆಹಮಾನ್ ಸಂಗೀತ ಮೆರುಗನ್ನು ಕೊಟ್ಟಿದೆ ಸಂಶಯವಿಲ್ಲ. ಆದರೆ ಇದಕ್ಕಿಂತ ಉತ್ತಮ ಕೆಲಸವನ್ನು ಇದೇ ರೆಹಮಾನ್ ಮೊದಲು ಭಾರತೀಯ ಚಿತ್ರಗಳಿಗೇ ಮಾಡಿದ್ದಾರೆ. ಆಗ ಯಾಕೆ ಗೋಲ್ಡನ್ ಗ್ಲೋಬ್ ಅವರಿಗೆ ಬಂದಿಲ್ಲ?! ಆಸ್ಕರಿಗೆ ಯಾಕೆ ಹೆಸರು ಸೂಚಿತವಾಗಿಲ್ಲಾ?! ಗೊತ್ತಿಲ್ಲ. ಹೀಗೆ ಈ ಚಿತ್ರ ಅನೇಕ ಸಂಶಯಗಳನ್ನು ಹುಟ್ಟು ಹಾಕಿಸುತ್ತಾ, ಚೆನ್ನಾಗಿ ಚಿತ್ರೀಕರಿಸಿರುವ ಮಾಮೂಲು ಹಿಂದೀ ಚಿತ್ರದಂತೆ ಉಳಿದು ಬಿಡುತ್ತದೆ. ಇದಕ್ಕೆ ಆಸ್ಕರ್ ಸಿಕ್ಕುವುದು ನನಗೆ ಸಂಶಯದ ವಿಷಯ. ಸಿಕ್ಕಿದರೆ, ಆ ಪ್ರಶಸ್ತಿಯ ನಿಜ ರೂಪ ಅರಿವಿಗೆ ಬಂದಂತೆ!

ಹಿಂದೆ ಒಮ್ಮೆ ಮೂರು ಬಾರಿ ಆಸ್ಕರ್ ಪಡೆದಿರುವ ವಾಲ್ಟರ್ ಮರ್ಚ್ ಎನ್ನುವ ಸಂಕಲನಕಾರರನ್ನು ಭೇಟಿಯಾಗಿದ್ದೆ. ಅವರು ಗಾಡ್ ಫಾದರ್ ಎನ್ನುವ ಕ್ಲಾಸಿಕ್ ಸಿನೆಮಾದ ಸಂಕಲನಕಾರರು ಹಾಗೂ ಧ್ವನಿ ಸಂಯೋಜಕರು! ಅವರನ್ನು ಸರ್, ಆಸ್ಕರ್ ಸಿಗುವುದು ಎಂಥಾ ಅನುಭವ ಎಂದು ಕೇಳಿದೆ. ಅವರು ಸಣ್ಣಕೆ ನಕ್ಕರು.
“ಮೊದಲ ಬಾರಿ ನಂಬಲಾರದಷ್ಟು ಸಂತಸವಾಯಿತು. ಎರಡನೇ ಬಾರಿ ಬಹಳ ಸಂತೋಷವಾಯಿತು. ಮೂರನೇ ಬಾರಿ ಸಂತೋಷವಾಯಿತು…. ಮತ್ತೆ…. ಹ… ಹ್ಹ….”
“ಮತ್ತೆ ಏನಾಯ್ತು ಸಾರ್?”
“ಮತ್ತೆ ಮುಂದಿನ ಬಾರಿ ನಾನು ಆಯ್ಕೆ ಸಮಿತಿಯಲ್ಲಿದ್ದೆ. ಅಲ್ಲಿ ಅವರು – ಇವನಿಗೆ ಕಳೆದ ವರ್ಷ ಕೊಟ್ಟಿದ್ದೇವೆ. ಈ ವರ್ಷ ಬೇಡ… ಅವನು ಪಾಪ ಸುಮಾರು ವರ್ಷಗಳಿಂದ ಕಾಯುತ್ತಿದ್ದಾನೆ. ಅವನಿಗೆ ಕೊಡೋಣ – ಹೀಗೆ ಮಾತನಾಡಿಕೊಂಡು ಪ್ರಶಸ್ತಿಗಳನ್ನು ನಿರ್ಧರಿಸುತ್ತಿದ್ದರು. ಇದನ್ನು ಕಂಡು ನನಗೆ ಬಂದ ಪ್ರಶಸ್ತಿಗಳ ಬಗ್ಗೆ ಗೌರವವೇ ಹೋಯಿತು”
ನಾನು ಬೆಕ್ಕಸ ಬೆರಗಾಗಿ ನಿಂತಿದ್ದೆ! ಆಸ್ಕರ್ ಅಂದರೆ ಇಷ್ಟೇನಾ? ಮತ್ತೆ ಯಾಕೆ ನಮ್ಮಲ್ಲಿ ಈ ಆಸ್ಕರ್, ಗೋಲ್ಡನ್ ಗ್ಲೋಬ್ ಬಗ್ಗೆ ಇಷ್ಟೊಂದು ವ್ಯಾಮೋಹ? ಬೂಕರ್ ಬಗ್ಗೆ ವ್ಯಾಮೋಹ? ಇವೆಲ್ಲವೂ ಒಂದು ವಿಷ ವೃತ್ತ. ಅಲ್ಲಿ ಗುಣ ಮಟ್ಟ ಇಲ್ಲ, ಬರೇ ರಾಜಕೀಯ ಎಂದಲ್ಲ ನಾನು ಹೇಳುತ್ತಿರುವುದು. ಆದರೆ ಅಲ್ಲಿ ಗುಣ ಮಟ್ಟ ಮಾತ್ರ ಅಲ್ಲ ರಾಜಕೀಯವೂ ಇದೆ ಎನ್ನುವುದು ನನ್ನ ಮಾತಿನ ಅರ್ಥ. ಅದರ ಕುರಿತಾಗಿ ಇನ್ನೊಮ್ಮೆ ಎಂದಾದರೂ ಬರೆಯುತ್ತೇನೆ. ಇಂದಿಗೆ ಇಷ್ಟೇ ಗೆಳೆಯರೇ…

This entry was posted in Film reviews. Bookmark the permalink.

11 Responses to ‘Slam’ dog millionaire

 1. Pramod ಹೇಳುತ್ತಾರೆ:

  ಆಸ್ಕರ್ ಅತ್ಯುನ್ನತ ಅಲ್ಲ. ಈ ವರ್ಷದ ಡಾರ್ಕ್ ನೈಟ್ ಚಿತ್ರದ ಎದುರು ಸ್ಲಮ್ ಡಾಗ್ ಸುಮಾರಾಗಿದೆ. ಆದ್ರೂ ಪ್ರಶಸ್ತಿ ಲಾಬಿ ಅಲ್ಲೂ ಇದ್ದದ್ದರಿ೦ದ ಸೊ ಕಾಲ್ಡ್ ಇ೦ಡಿಯನ್ ಸಿನೆಮಾಕ್ಕೆ ಆಸ್ಕರ್ ಬರಬಹುದು..ಆದ್ರೆ ರೆಹಮಾನ್ ಗೆ ಕಷ್ಟ ಸಾಧ್ಯ. ಅವರು ಭಾರತದವ್ರು ಅಲ್ವಾ ಅದ್ಕೆ..

 2. chetana chaitanya ಹೇಳುತ್ತಾರೆ:

  “ಆದರೆ ಅಲ್ಲಿ ಗುಣ ಮಟ್ಟ ಮಾತ್ರ ಅಲ್ಲ ರಾಜಕೀಯವೂ ಇದೆ ಎನ್ನುವುದು ನನ್ನ ಮಾತಿನ ಅರ್ಥ. ಅದರ ಕುರಿತಾಗಿ ಇನ್ನೊಮ್ಮೆ ಎಂದಾದರೂ ಬರೆಯುತ್ತೇನೆ. ” – Neewu bareyuvudanne kAdiruttEne. taDavAdare, matte nenapisuttEne!
  – Chetana Teerthahalli

 3. abhayaftii ಹೇಳುತ್ತಾರೆ:

  ಯಾಕೆ ನಿಮಗೆ ಅದರ ಬಗ್ಗೆ ಆ ಕುತೂಹಲ ಎಂದು ಕೇಳಬಹುದೇ ಚೇತನ-ಚೈತನ್ಯ? (ನಿಮ್ಮ ಹೆಸರು ಚೇತನವೇ ಚೈತನ್ಯವೇ ಎಂದು ಸ್ವಲ್ಪ ಗೊಂದಲ ಇದೆ.) ಹಾಗೇ ತಮ್ಮ ಪರಿಚಯ ಮಾಡಿಕೊಟ್ಟರೆ ಸಂತೋಷ…. 🙂

 4. chetana chaitanya ಹೇಳುತ್ತಾರೆ:

  ಕುತೂಹಲಕ್ಕೆ ಕಾರಣವಿದೆ. ನನಗೆ ಸಿನೆಮಾ ಇಷ್ಟವಾಗಿದ್ದರೂ ಪ್ರಶಸ್ತಿ ಬಂದುದರ ಹಿಂದೆ ರಾಜಕಾರಣವಿಲ್ಲದೆ ಇಲ್ಲ ಎಂಬ ಅನಿಸಿಕೆ ಬಲವಾಗಿದೆ. ಆದರೆ ನಾನು ಅಂದುಕೊಂಡಿದ್ದೇ ಸರಿಯಿರಬೇಕೆಂದೇನೂ ಇಲ್ಲವಲ್ಲ? ನೀವು ಸಿನೆಮಾ ಜಗತ್ತಿಗೆ ಹತ್ತಿರವಿರೋರು (ಅಥವಾ ಒಳಗೆ…) . ನಿಮಗೆ ಇದರ ಒಳಸುಳಿವು ಅರ್ಥವಾಗಿರುತ್ತದೆ, ಮತ್ತು ನೀವು ಹೇಳುವ ಸಂಗತಿ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿರುತ್ತೆ ಅಂತ ಕೇಳಿದೆ ಅಷ್ಟೆ.
  ~
  ಬಹುಶಃ ನೀವು ಕಮೆಂಟಿನ ಕೆಳಗೆ ಬರೆದ ನನ್ನ ಹೆಸರು ಗಮನಿಸಿಲ್ಲ. ಗಮನಿಸಿದ್ದರೆ ನನ್ನ ಹೆಸರು ಚೈತನ್ಯ ಅಲ್ಲ ಎಂದು ತಿಳಿದಿರುತ್ತಿತ್ತು.
  ನನ್ನ ಪರಿಚಯ, ಬಿಡಿ. ಹೇಳಿಕೊಂಡರೂ ತಿಳಿಯುವಂಥದ್ದಲ್ಲ. ನನ್ನದೊಂದು ಬ್ಲಾಗ್ ಇದೆ- ‘ಓ ನನ್ನ ಚೇತನಾ…’ ಅಂತ. http://chetanachaitanya.wordpress.com
  ಅಷ್ಟೇ…

  ವಂದೇ,
  ಚೇತನಾ ತೀರ್ಥಹಳ್ಳಿ

 5. HEMASHREE ಹೇಳುತ್ತಾರೆ:

  ವಿಮರ್ಶೆ ಚೆನ್ನಾಗಿದೆ.
  ಅಭಯ ಯಾಕೆ ಇನ್ನೂ ಏನೂ ಈ ಚಿತ್ರದ ಬಗ್ಗೆ ಬರೆದಿಲ್ಲ ಅಂತ ಅಂದುಕೊಂಡಿದ್ದೆ.
  ಒಂದು ಚಿತ್ರವನ್ನು ಬರಿಯ ಚಿತ್ರವನ್ನಾಗಿ ಯಾಕೆ ನಮಗೆ ನೋಡಲಾಗುವುದಿಲ್ಲ ಅಂತ ಅನ್ನಿಸುತ್ತದೆ. ಎಷ್ಟೊಂದು ಇಲ್ಲೋಜಿಕಲ್ ಇಂಟರ್ಪ್ರಿಟೇಶನ್‍ಗಳಿದ್ದರೂ ಅದೆಷ್ಟು ಚಿತ್ರಗಳು ಆಸ್ಕರ್ ಪಡೆಯುತ್ತವೆ ಅಲ್ವಾ.
  ತಾರೆ ಜಮೀನ್ ಪರ್‍ಗೆ, ಲಗಾನ್‍ಗೆ ಯಾಕೆ ಸಿಕ್ಕಿಲ್ಲ – ಎರಡು ಚಿತ್ರಗಳನ್ನು ಪ್ರಶಸ್ತಿಯ ನೆಲೆಯಲ್ಲಿ ಹೋಲಿಕೆ ಮಾಡುವ ಪ್ರಕ್ರಿಯೆ – ಪ್ರಶ್ನೆಗಳನ್ನು ಬಿಟ್ಟು, ಪ್ರಶಸ್ತಿಗಳನ್ನು ಬದಿಗಿರಿಸಿ ಚಿತ್ರವನ್ನು ನೋಡುವ ಹವ್ಯಾಸ ಮತ್ತು ಅದನ್ನು ಆಸ್ವಾದಿಸುವ ಕಲೆಯನ್ನು ನಾವು ಬೆಳೆಸಿಕೊಳ್ಳೋದು ಮುಖ್ಯ ಅಲ್ವಾ.
  thanks abhay.

 6. abhayaftii ಹೇಳುತ್ತಾರೆ:

  ನಿಜ ಹೇಮಶ್ರೀಯವರೇ

  ಇತ್ತೀಚಿನವರೆಗೆ ಜನರು ಕಮರ್ಶಿಯಲ್ ಸಿನೆಮಾ ಹಾಗೂ ಆರ್ಟ್ ಸಿನೆಮಾ ಎಂದು ಮಾತನಾಡುತ್ತಿದ್ದರು. ಆದರೆ ಇತ್ತೀಚೆಗೆ ಕನ್ನಡದ ಚಿತ್ರೋದ್ಯಮದಲ್ಲಿ ಜನರು ‘ಕಮರ್ಶಿಯಲ್ ಪಿಚ್ಚರ್’ ಹಾಗೂ ‘ಅವಾರ್ಡ್ ಪಿಚ್ಚರ್’ ಎಂದು ಮಾತನಾಡುತ್ತಿದ್ದಾರೆ! ಅಂದರೆ ಜನ ನೋಡುವ ಸಿನೆಮಾ ಹಾಗೂ ಜನ ನೋಡದ, ಬರೇ ಅವಾರ್ಡು, ಸಬ್ಸೀಡೀ ಹಣದಲ್ಲೇ ಬದುಕುವ ಸಿನೆಮಾ ಎಂದು ಅರ್ಥ!!!

  ಆದರೆ ದೊಡ್ಡ ಮಟ್ಟದಲ್ಲಿ ಇಂಥಾ ಅವಾರ್ಡುಗಳಿಗೆ nominate ಆಗುವುದು ಹಾಗೂ ಗೆಲ್ಲುವುದು ಎರಡೂ ಕೂಡಾ marketing technique ಅಂತ ಬಹಳ ಜನರಿಗೆ ಗೊತ್ತಿಲ್ಲ.

 7. Rajesh N Naik ಹೇಳುತ್ತಾರೆ:

  Hey Abhaya…

  I liked what u said. We had discussed it before too… What is more hurting, more than the film winning the awards is, the way it’s been looked at in our own country. People, at least the critics should have approached the film beyond ‘underbelly’ debate! As a film, it has lot of faults- characterization is very poor. These guys never seemed like the one from Mumbai slums! Rather looked more like from US/European slums. I had been referring to some Indian reviews- most of them were either out-right rejection or out-right praise! Even the scene, where the little Jamal, drops into a pile of shit, just to get an autograph from Amitabh Bachan, has been looked at as something outstanding! This blunt attitude of our own people, mindlessness and un-critical approach hurts me more than anything.

  And about Rehman, it’s true he is true master. Its equaly true that, he hasn’t been recognized for his far better works. But I do appreciate the music, probably the strongest element in the film.

 8. B.S. Venktalakshmi ಹೇಳುತ್ತಾರೆ:

  Don’t you think the Kannada film `Chinnari Mutha’ also tried to high light how an ordinary boy could achieve higher things?

 9. abhayaftii ಹೇಳುತ್ತಾರೆ:

  ಹೌದು ವೆಂಕಟಲಕ್ಷ್ಮಿಯವರೇ… ಆದರೆ ಈ ಚಿತ್ರಕ್ಕೂ ಆ ಚಿತ್ರಕ್ಕೂ ಹೋಲಿಕೆ ಸ್ವಲ್ಪ ಕಷ್ಟಸಾಧ್ಯ…

 10. Dattatri ಹೇಳುತ್ತಾರೆ:

  ನಾನು ಗಮನಿಸಿದಂತೆ, ಈ ಚಿತ್ರದ ಭಾರತೀಯ ಪಾತ್ರಗಳೆಲ್ಲಾ ವಿಲನ್ ಗಳು. ಕ್ವಿಜ್ ಮಾಸ್ಟರ್, ಪೊಲಿಸ್ ಎಲ್ಲಾ ವಿಲನ್ಗಳು. ಇರೋ ಒಂದೇ ಒಳ್ಳೆ ಪಾತ್ರ ಆ ಹುಡುಗಂದು. ಅವನೂ ಯಾಕೆ ಗೆಲ್ತಾನೆ ಅಂದ್ರೆ “it was written”. ಸ್ಲಮ್ ಹುಡುಗನಿಗೆ ಹೊಡೆಯುವ ಸನ್ನಿವೇಶದಲ್ಲಿ ಆ ಹುಡುಗ “Real India” ಬಗ್ಗೆ ಮಾತಾಡುತ್ತಾನೆ. ಪ್ರವಾಸಿಗ “real American” ಅಂತ ದುಡ್ಡು ಕೊಡುತ್ತಾನೆ. Ugly mindset. ಎಲ್ಲಾರೂ ಕೊಳಕರು ಇಲ್ಲಾ ಕಳ್ಳರು ಇಲ್ಲಾ ಭ್ರಷ್ಟರು. ಅದೆ India. ಅದಕ್ಕೆ ಆಸ್ಕರ್ರು ಟೆಲ್ಲರ್ರು.

 11. abhayaftii ಹೇಳುತ್ತಾರೆ:

  interesting observation.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s