ನೆನಪಿನ ರೀಲಿನಲ್ಲಿ ವೆಂಕಟನ ಲೌ ಸೀನ್!
ಬಹಳ ಕಾಲ ಹಿಂದಿನ ಮಾತು. ಹೈಸ್ಕೂಲಿನಲ್ಲಿ ಓದುತ್ತಿದ್ದೆ ಆಗ. ಕನ್ನಡ ಮಾಧ್ಯಮದ ಬಡ ಮಕ್ಕಳು ನಾವು! ಆದರೆ ಮಂಗಳೂರಿನ ಶಾಂತ-ನಿರ್ಮಲ ವಾತಾವರಣದಲ್ಲಿ ಬೆಳೆಯುತ್ತಿದ್ದೆವು. ಮಂಗಳೂರೇ ನಮಗೆ ಸ್ವರ್ಗ. ಅದೊಂದು ದೊಡ್ಡ ಪಟ್ಟಣ ನಮಗೆ. ಆಗಿನ್ನೂ ನಾನು ಬೆಂಗಳೂರು, ಮುಂಬೈ, ಹೈದರಾಬಾದ್, ಮದರಾಸ್ ನೋಡಿರಲಿಲ್ಲ. ನಾವು ಹತ್ತನೇ ಕ್ಲಾಸಿನಲ್ಲಿ ಇರಬೇಕಾದರೆ ನನ್ನ ಸಹಪಾಠೀ ವೆಂಕಟರಮಣನಿಗೆ (ಹೆಸರು ಬದಲಿಸಿದ್ದೇನೆ) ಒಬ್ಬಾಕೆ ಗರ್ಲ್ ಫ್ರೆನ್ಡ್ ಇದ್ದಳು ಎಂದು ಕ್ಲಾಸಿನಲ್ಲೆಲ್ಲಾ ಗುಸುಗುಸು. ಅವನೋ ಮೂಗು ಮೇಲೆ ಮಾಡಿ ಆ ಸುದ್ದಿಗಳೆಲ್ಲಾ ತೀರಾ ಮಾಮೂಲು ಎನ್ನುವಂತೆ ನಡೆದಾಡುತ್ತಿದ್ದ. ಹುಡುಗಿಯರನ್ನು ಕಂಡರೆ ನಾಚಿ ನೀರಾಗುತ್ತಿದ್ದ ನಾವೆಲ್ಲಾ ಅವನಂತೆ ನಾವಿರಬಾರದಿತ್ತೇ ಎಂದು ನಮ್ಮ ಅದೃಷ್ಟ ಹಳಿದುಕೊಳ್ಳುತ್ತಿದ್ದೆವು. ಅದೊಂದು ದಿನ ವೆಂಕಟರಮಣ ಹೈಸ್ಕೂಲಿನ ಹಿಂದಿನ ಕೆಳಗೆ ಇಳಿಯುವ ಮೆಟ್ಟಿಲುಗಳ ಬದಿಯಲ್ಲಿ ತನ್ನ ಪ್ರೇಮಿಕೆಯೊಂದಿಗೆ ಕುಳಿತಿದ್ದಾನೆ ಎಂದು ನಮ್ಮಲ್ಲಿ ಕೆಲವರಿಗೆ ಸುದ್ದಿ ತಿಳಿಯಿತು. ಕುತೂಹಲ ತಡೆಯಲಾರದೇ ಅತ್ತ ಓಡಿದೆವು. ಅಲ್ಲೇ ಸ್ವಲ್ಪ ದೂರದಲ್ಲಿ ಒಂದಷ್ಟು ಹುಡುಗರು ನಿಂತು ಇಣುಕುತ್ತಿದ್ದದ್ದು ಕಂಡು ಬಂತು. ಅದನ್ನು ನೋಡಿ ನಾವೇ ಇಲ್ಲಿಗೆ ಮೊದಲು ಬಂದವರಲ್ಲ ಎಂದು ಸ್ವಲ್ಪ ಬೇಸರವಾಯಿತು. ಆದರೂ ಕುತೂಹಲದಿಂದ ಅಲ್ಲೇ ನಿಂತು ಕತ್ತು ಉದ್ದ ಮಾಡಿ ದೂರದಲ್ಲಿ ಕುಳಿತಿದ್ದ ಪ್ರೇಮಿಗಳನ್ನು ನೋಡಿದೆವು. ಹೌದು! ಅದು ವೆಂಕಟರಮಣನೇ! ಅವನ ಬಳಿ ಒಬ್ಬ ಸುಂದರ ಹುಡುಗಿ! ಅವಳಿಗೂ ಬಹುಷಃ ಅವನದೇ ಪ್ರಾಯ ಇರಬೇಕು. ನಾವು ನೋಡುತ್ತಿದ್ದೇವೆ ಎಂದು ವೆಂಕಟರಮಣನಿಗೆ ಅರಿವಾಯಿತೋ ಏನೋ ಅವನು ಇನ್ನಷ್ಟು ಆಕೆಯ ಬಳಿಗೆ ಹೋಗಿ ಅವಳ ಹೆಗಲ ಮೇಲೆ ಕೈ ಇಟ್ಟ ತನ್ನ ಆತ್ಮೀಯತೆಯ ಪ್ರದರ್ಶನಕ್ಕೆ. ನಾವೆಲ್ಲಾ ನಿಟ್ಟುಸಿರು ಬಿಡುತ್ತಿರಲು ಅಲ್ಲಿಗೆ ಪ್ರಾಂಶುಪಾಲರು ಬಂದರು. ಅವರು ಈ ದೃಷ್ಯವನ್ನು ಕಂಡು ಕೆಂಡ ಮಂಡಲವಾದರು. ಮುಂದಿನ ಒಂದು ತಿಂಗಳು ವೆಂಕಟರಮಣನ ಹೆತ್ತವರು ಶಾಲೆಗೆ ಬರುವುದು, ಪ್ರಾಂಶುಪಾಲರ ಕಛೇರಿಗೆ ಹೋಗುವುದು ಇತ್ಯಾದಿ ನಡೆದು ಕೊನೆಗೆ ವೆಂಕಟರಮಣನನ್ನು ಶಾಲೆಯಿಂದ ಹೊರಗೆ ಹಾಕಲಾಯಿತು. ಆದರೆ ವೆಂಕಟರಮಣ ತಗ್ಗಿಸಿದ ತಲೆಯನ್ನು ನಮ್ಮತ್ತ ತಿರುಗಿಸಿ ನಕ್ಕ ಹೆಮ್ಮೆಯ ನಗೆಯನ್ನು ಇಂದಿಗೂ ನನಗೆ ಮರೆಯಲಾಗಿಲ್ಲ. ಹೆಳೆಯ ಗೆಳೆಯರು ಸೇರಿದಾಗ ಒಮ್ಮೊಮ್ಮೆ ಈ ಮಾತು ಮತ್ತೆ ಬರುವುದಿದೆ. ಮತ್ತೆ ಮುಂದೆ ವೆಂಕಟರಮಣ ಅನೇಕ ಬಾರಿ ಸಿಕ್ಕಿದ, ತನ್ನ ಹುಡುಗಾಟಿಕೆಗೆ ನಕ್ಕಿದ್ದ… ಆದರೂ ಆ ಘಟನೆ ಇನ್ನೂ ನನ್ನ ನೆನಪಲ್ಲಿ ಹಸಿರಾಗಿದೆ. ಎಲ್ಲಾ ಎಷ್ಟು ಚೆನ್ನಾಗಿತ್ತು. ಮಕ್ಕಳಾಟ ಅವೆಲ್ಲಾ…
ಲೌ in the time of ಕಾಲೇಜ್!
ಮುಂದೆ ಕಾಲೇಜು ದಿನಗಳಲ್ಲಿ ಅನೇಕ ಗೆಳೆಯರು ಪ್ರೇಮದಲ್ಲಿ ಬಿದ್ದರು, ಎದ್ದರು. ಅತ್ತರು, ಅಳಿಸಿದರು. ನಮಗೆ ಪ್ರಾಯ ಬರುತ್ತಲೂ ಸುತ್ತ ಮುತ್ತ ಸಿನೆಮಾ, ಟಿ.ವಿ, ಜಾಹೀರಾತು ಎಲ್ಲವೂ ಗಂಡು ಹೆಣ್ಣಿನ ಸಂಬಂಧದ ಬಗ್ಗೆಯೇ ಇರುವುದು ಎಂದು ಅನಿಸತೊಡಗಿತು. ಯಾವುದೇ ಪ್ರಸಿದ್ಧ ಲೇಖಕರ ಪುಸ್ತಕ ಹಿಡಿದರೂ ಅವರು ಶೃಂಗಾರ ರಸದ ಧಾರಾಳ ಬಳಕೆಯನ್ನು ಮಾಡುತ್ತಿದ್ದದ್ದು ಗಮನಕ್ಕೆ ಬರಲಾರಂಭಿಸಿತು. ಒಂದಷ್ಟು ದಿನ ಕುತೂಹಲ, ಆಸಕ್ತಿ ಮತ್ತೆ ಇದು ಜೀವನದ ಕ್ರಮ. ಬದುಕು ಇರುವುದೇ ಹೀಗೆ ಎಂದು ಅರ್ಥವಾಗುತ್ತಾ ಹೋಯಿತು. ಬಾಲ್ಯಾವಸ್ಥೆಯಿಂದ ತೊಡಗಿ ಬುದ್ಧಿ ಬೆಳೆಯುವವರೆಗೆ ಹೆದರುತ್ತಿದ್ದದ್ದು, ಗೌರವಿಸುತ್ತಿದ್ದದ್ದು ಹೆತ್ತವರಿಗೆ, ಸಮಾಜಕ್ಕೆ ಮತ್ತು ಪೋಲೀಸರಿಗೆ! ಬುದ್ಧಿ ಬೆಳೆದ ನಂತರ ಗೌರವಿಸಿದ್ದು ನಾವೇ ನಂಬಿರುವ ಮೌಲ್ಯಗಳಿಗೆ ಮಾತ್ರ. ನಮ್ಮ ಮನಸ್ಸಿಗೆ ನಾವೇ ತಾನೇ ಮಾಲಿಕರು? ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ, ಇನ್ನೊಬ್ಬರ ಜೀವನಕ್ಕೆ ಯಾವುದೇ ರೀತಿ ಕೆಟ್ಟ ಪ್ರಭಾವ ಬೀರದಂತೆ ನಮ್ಮ ಜೀವನವನ್ನು ಹೇಗೆ ಬೇಕಾದರೂ ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದೇ ತಿಳಿದಿದ್ದ ದಿನಗಳವು…
ಪ್ರಳಯದ ಹಿಂದಿನ ರಾತ್ರಿ
ಅದೊಂದು ದಿನ ಪೂನಾದಲ್ಲಿ ನಾನು ಓದುತ್ತಿದ್ದ ದಿನಗಳಲ್ಲಿ ಒಂದು ರಾತ್ರಿ ಮನೆಗೆ ದೂರವಾಣಿಸಿದ್ದೆ. ಆಗ ಅತ್ತಣಿಂದ (ಮಂಗಳೂರಿನಿಂದ) ಅಮ್ಮ ಸುದ್ದಿ ಹೇಳುತ್ತಿದ್ದಳು. ಇವತ್ತು ಇಲ್ಲಿ ಯಾರೋ ಇಬ್ಬರು ಕಾಲೇಜು ಹುಡುಗ-ಹುಡುಗಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಂದಷ್ಟು ಜನ ಬಂದು ವಿನಾಕಾರಣ ಹೊಡೆದರಂತೆ. ಹುಡುಗನ ಮತ ಮತ್ತು ಹುಡುಗಿಯದ್ದು ಬೇರೆಯಾಗಿದ್ದ ಕಾರಣ ಈ ಧಾಳಿಯಂತೆ ಎಂದರು ಅಮ್ಮ. ಹೌದಾ. ಹೊಡೆದದ್ದು ಅವರ ಸಂಬಂಧಿಗಳೇ ಎಂದು ಕೇಳಿದೆ. ಇಲ್ಲ ಅದ್ಯಾರೋ ಎಂತದ್ದೂ ದಳವಂತೆ ಎಂದರು ಅಮ್ಮ. ಹೌದಾ! ಛೆ! ಎಂಥಾ ಅವಸ್ಥೆ ಎಂದು ಮಾತು ಮುಂದೆ ಬೇರೆ ವಿಷಯಕ್ಕೆ ಹೋಯಿತು. ದಿನಗಳು ಉರುಳುತ್ತಾ ಸಾಗಿತು. ಮಂಗಳೂರಿನಲ್ಲಿ ಹುಟ್ಟಿದ ಅನೇಕರು ಕೇಂದ್ರ ಸರಕಾರದಲ್ಲಿ ಭಾಗಿಗಳಾದರು, ವಿಧಾನ ಸಭೆಯಲ್ಲಿ, ಸಿನೆಮಾದಲ್ಲಿ, ಪೋಲೀಸಿನಲ್ಲಿ ಹೆಸರು ಮಾಡಿದರು. ನಾಟಕ, ಹಾಡುಗಾರಿಕೆ, ಚಿತ್ರಕಲೆಯಲ್ಲಿ ಹೆಸರು ಮಾಡಿದರು. ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದರು. ಮಂಗಳೂರು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಲೇ ಇತ್ತು ಆದರೆ ಅಂದು ಆರಂಭವಾಗಿದ್ದ ವಿಷದ ಹರಿವು ತೊಟ್ಟಿಗೆ ತೊಟ್ಟು ಸೇರುತ್ತಾ ಮಂಗಳೂರಿನಲ್ಲಿ ಮಡುಗಟ್ಟಿತ್ತು. ಅದರ ಇತ್ತೀಚಿನ ಅವತಾರ ಮಂಗಳೂರಿನಲ್ಲಿ ನಡೆದ ‘ಪಬ್’ ಧಾಳಿ.
ಸಂಸ್ಕೃತಿಯ ತವರು ಮನೆ
ತಮ್ಮದೊಂದು ನಿರ್ವಾತದಲ್ಲಿ ಶೇಖರಿಸಿ ಇಡಬಹುದಾದ ಸಂಸ್ಕೃತಿ ಎನ್ನುವ ವಿಷಯವೊಂದುಂಟು ಅದರ ರಕ್ಷಣೆ ಮಾಡಬೇಕು ಎನ್ನುವ ಉಗ್ರಗಾಮಿಗಳು ಹುಟ್ಟಿಕೊಂಡಿದ್ದಾರೆ. ಇಂಥದ್ದೊಂದು ಉಗ್ರ ಧೋರಣೆ ಹೊಂದಿದ ಯುವಕರು-ಯುವತಿಯರು ಮಾನಸಿಕವಾಗಿ ತೀರಾ ಸುಲಭವಾಗಿ ದಕ್ಕುವಂಥಾ ವಸ್ತುಗಳು ಎನ್ನುವುದು ನಮ್ಮಲ್ಲಿನ ರಾಜಕೀಯದವರಿಗೆ, ಮಾಧ್ಯಮಗಳಿಗೆ ಗೊತ್ತಿದೆ. ಅಂಥದ್ದೊಂದು ಬೆಳವಣಿಗೆ ನಡೆಯುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಅದರ ಸಂಪೂರ್ಣ ಲಾಭಪಡೆಯಲು ಅವರು ತಯಾರಿರುತ್ತಾರೆ. ಸಮೂಹ ಸನ್ನಿಯ ಕಾರ್ಯ ಸುಲಭವಾಗಿರುತ್ತದೆ. ಕುರುಡರ ಮೆರವಣಿಗೆಯನ್ನು ದಾರಿತಪ್ಪಿಸಲು ಮುಂಚೂಣಿಯಲ್ಲಿರುವವರನ್ನು ದಾರಿತಪ್ಪಿಸಿದರೆ ಸಾಕೆಂದು ಇವರಿಗೆ ಚೆನ್ನಾಗಿ ಗೊತ್ತಿದೆ. ಇನ್ನು ದರೋಡೆ ಮಾಡಿಯಾದರೂ ಪೇಪರಿನಲ್ಲಿ ಹೆಸರು ಮಾಡಬೇಕು ಎನ್ನುವ ಅನೇಕರು ಸಾಧಾರಣವಾಗಿ ಇಂಥಾ ಮೆರವಣಿಗೆಯ ನೇತೃತ್ವವನ್ನು ವಹಿಸಿರುತ್ತಾರೆ. ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ ಸಮಾಜದೊಳಗೆ ಇಂಥಾ ಕಲ್ಮಶಗಳು ಹುಟ್ಟಿಕೊಳ್ಳುತ್ತವೆ.
ಮುಂದುವರೆದ ನೆನಪುಗಳು…
ಅದ್ಯಾವುದೋ ಚಿತ್ರೀಕರಣಕ್ಕೆ ಎಂದು ಪಾಟ್ನಾಗೆ ಹೋಗಿದ್ದೆ. ಬಿಹಾರದ ರಾಜಧಾನಿ! ಸರಿ… ಇಡೀ ರಾಜ್ಯವೇ ಕೆಟ್ಟ ಆಡಳಿತಕ್ಕೆ, ಅರಾಜಕತೆಗೆ ಹೆಸರಾಗಿದೆ ಆದರೆ ರಾಜಧಾನಿಯಲ್ಲಾದರೂ ಪರಿಸ್ಥಿತಿ ಚೆನ್ನಾಗಿರಬಹುದು ಎಂದು ಕೊಂಡಿದ್ದೆ. ನಮ್ಮ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆದಿತ್ತು. ಸಂಜೆ ಗಂಟೆ ಐದು ಆಗುತ್ತಿರಬೇಕಾದರೆ ಜನ ಸಂದಣೆ ಕಡಿಮೆಯಾಗುತ್ತಾ ಹೋದಂತೆ ಅನಿಸಿತು. ನಮ್ಮೊಂದಿಗೆ ಇದ್ದ ಅಲ್ಲಿನ ಮಿತ್ರನನ್ನು ಇದ್ಯಾಕೆ ಹೀಗೆ ಎಂದು ಕೇಳಿದೆ. ಅಯ್ಯೋ! ಇಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಯಾವುದೇ ಇದ್ದರೂ ಅವರ ಗೂಂಡಾಗಳು ಸಂಜೆಯ ಹೊತ್ತಿಗೆ ಇಲ್ಲೆಲ್ಲಾ ಸುತ್ತಾಡಲಾರಂಭಿಸುತ್ತಾರೆ. ಅವರು ಹುಡುಗಿಯರ ಮೇಲೆ ಕೈ ಮಾಡುವುದು ತೀರಾ ಸಹಜ. ಅವರನ್ನು ಇಲ್ಲಿ ಯಾರೂ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಸ್ತ್ರೀಯರು ಸಂಜೆಯಾಗುತ್ತಲೇ ಮನೆ ಸೇರಿಕೊಳ್ಳುತ್ತಾರೆ. ಇನ್ನು ಮರ್ಯಾದಸ್ತ ಗಂಡಸರು ಇಂಥಾ ಅನ್ಯಾಯವನ್ನು ನೋಡಲೂ ಆರದೇ ತಡೆಯಲೂ ಆರದೇ ಅವರೂ ಮನೆ ಸೇರಿಕೊಂಡು ಬಿಡುತ್ತಾರೆ. ಹೀಗೆ ಇಡೀ ಪಾಟ್ನಾದಲ್ಲೇ ಒಂದೇ ಒಂದು ನೈಟ್ ಕ್ಲಬ್ ಇಲ್ಲ, ರಾತ್ರಿ ಊಟದ ಹೋಟೇಲುಗಳು ತುಂಬಾ ಕಡಿಮೆ ಮತ್ತು ನಾವು ಸಹಾ ಆದಷ್ಟು ಬೇಗ ಹೋಟೇಲ್ ತಲುಪೋಣ ಎಂದ ನಮ್ಮ ಗೆಳೆಯ. ನನಗೆ ಆದ ಅಚ್ಚರಿ ಅಷ್ಟಿಷ್ಟಲ್ಲ. ಒಂದು ರಾಜ್ಯದ ರಾಜಧಾನಿಯಲ್ಲಿ ಈ ಪರಿಸ್ಥಿತಿ ಇದ್ದರೆ ಇನ್ನು ಇತರ ಹಳ್ಳಿಗಳಲ್ಲಿ ಏನು ಪರಿಸ್ಥಿತಿ ಇರಬಹುದು? ಅಬ್ಬಾ! ಸಭ್ಯರ ನಾಡಿನಲ್ಲಿ ಹುಟ್ಟಿ ನಾನು ಬಚಾವಾದೆ ಎಂದು ಒಂದು ಕ್ಷಣ ಅನಿಸಿದ್ದು ಹೌದು.
ಮುಂದೆ ನನಗೆ ಮದುವೆ ನಿಶ್ಚಯವಾದ ಸಂದರ್ಭ. ಮುಂದೆ ಹೆಂಡತಿಯಾಗಲಿರುವವಳನ್ನು ಒಂದೆರಡು ಸಲ ಮದುವೆಗೆ ಮೊದಲೇ ಭೇಟಿ ಮಾಡಿ ಮಾತನಾಡಿದ್ದೆ. ಭೇಟಿಯಾಗಿ ಕುಳಿತು ಮಾತನಾಡಲು ಯಾವುದೋ ಕಾಫೀಡೇಗೆ ಹೋಗಿದ್ದೆವು. ಇನ್ಯಾವುದೋ ಐಸ್ಕ್ರೀಮ್ ಪಾರ್ಲರಿಗೆ ಹೋಗಿದ್ದೆವು. ಆದರೆ ಮನಸ್ಸಿನಾಳದಲ್ಲಿ ಕೆಲವೇ ದಿನಗಳ ಹಿಂದೆ ನಮ್ಮಂತೆಯೇ ಹೊಸ ಜೀವನದ ಕನಸುಗಳನ್ನು ಕಟ್ಟುತ್ತಿದ್ದ ಜೋಡಿಯ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಹುಡುಗ ಸತ್ತೇ ಹೋಗಿದ್ದದ್ದು ಮತ್ತೆ ಮತ್ತೆ ನೆನಪಾಗದೇ ಇರುತ್ತಿರಲಿಲ್ಲ. ನಮ್ಮಿಬ್ಬರನ್ನೂ ಜೊತೆಯಾಗಿ ಕಳಿಸಲು ನಮ್ಮ ಹೆತ್ತವರೇ ಹೆದರುತ್ತಿದ್ದರು. ನನಗೆ ಬಿಹಾರ ನೆನಪಾಗುತ್ತಿತ್ತು…
ಅಲ್ಲ ಇದು ಅಲ್ಲವೇ ಅಲ್ಲ
ಮಧ್ಯಪಾನ ಜೀವನ ಶೈಲಿಯಾಗಿ ಅಥವಾ ಖಯಾಲಿಯಾಗಿ ಯಾರಿಗೂ ಒಳ್ಳೆಯದಲ್ಲ ಇದು ಒಪ್ಪಬಹುದಾದ ಸತ್ಯ. ಆದರೆ ಇದರಿಂದ ಇತರರಿಗೆ ತೊಂದರೆಯಾಗದವರೆಗೆ, ವೈಯಕ್ತಿಕವಾಗಿರುವವರೆಗೆ ದೇವರಂತೆಯೇ ನಿರುಪದ್ರವಿ. ಆಸ್ತಿಕರನ್ನು ಹೇಗೆ ನಾಸ್ತಿಕರು ನಿಕೃಷ್ಟವಾಗಿ ಕಾಣುವುದು ತಪ್ಪೋ ಅಷ್ಟೇ ತಪ್ಪು ಇನ್ನೊಬ್ಬರು ನಂಬಿರುವ, ನೆಚ್ಚಿರುವ ಜೀವನ ಶೈಲಿಯನ್ನು ನಾವು ತಿದ್ದಲು ಹೋಗುವುದು. ಸಮಷ್ಟಿಯಲ್ಲಿ ಒಂದು ಸಮಾಜ ಆಯಾ ಕಾಲದ ನಿಯಮ, ನಂಬಿಕೆ, ಆರ್ಥಿಕತೆ ಇತ್ಯಾದಿಗಳ ಪ್ರೇರಣೆಯಿಂದ ಒಂದು ಹರಿವನ್ನು ಸಹಜವಾಗಿ ಹೊಂದಿಯೇ ಇರುತ್ತದೆ. ಇದರ ದಿಕ್ಕನ್ನು ಬದಲಾಯಿಸುವುದು ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಗಂಗಾನದಿಗೆ ಮಣ್ಣಿನ ಅಣೆಕಟ್ಟೆ ಕಟ್ಟಿದಂತೆಯೇ ಸರಿ. ಸಮಾಜ ಎನ್ನುವುದು ಮಾನವನ ಇತಿಹಾಸದಲ್ಲಿ ಅನೇಕ ವರ್ಷಗಳ ಪ್ರಯೋಗದ ಪರಿಣಾಮ. ಅದು ಎಂದಿಗೂ ನಿಂತ ನೀರಲ್ಲ. ಸದಾ ಬೆಳೆಯುತ್ತಿರುವುದು, ಹೊಸ ಪ್ರಯೋಗಗನ್ನು ಮಾಡುತ್ತಿರುವುದು ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಆಗ ಸಮಾಜದಲ್ಲಿ ಸಮಾಜ ಬಾಹಿರವಾದದ್ದನ್ನು ತ್ಯಜಿಸಲು ಸಮಾಜವೇ ಆಡಳಿತ, ರಾಜ, ಸೈನ್ಯ, ಪೋಲೀಸ್ ಇತ್ಯಾದಿಗಳನ್ನು ರೂಪಿಸುತ್ತಾ ಹೋಯಿತು. ಈ ವ್ಯವಸ್ಥೆಯ ಹೊರತಾಗಿ ಯಾವುದೇ ಕೆಲಸ ಸಮಾಜದ ಒಳಗೆ ನಡೆದರೂ ಅದು ಸಮಾಜ ಬಾಹಿರವೇ ಆಗಿರುತ್ತದೆ ತಾನೆ? ಅದೇ ರೀತಿ ‘ಪಬ್’ನಲ್ಲಿ ಇದ್ದ ಹುಡುಗ ಹುಡುಗಿಯರು ಮಧ್ಯಪಾನ ಮಾಡುತ್ತಿದ್ದದ್ದು ಸಮಷ್ಟಿಯಲ್ಲಿ ಸಮಾಜದ ಹಿತದಲ್ಲಿ ಇಲ್ಲದೇ ಇರಬಹುದು. ಆದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಸಮಾಜ ಅದಕ್ಕಾಗಿಯೇ ನೇಮಕ ಮಾಡಿರುವ ಅಂಗದ್ದು (ಪೋಲೀಸ್, ಮಕ್ಕಳ ತಂದೆ-ತಾಯಿ ಇತ್ಯಾದಿ) ಹಾಗೂ ಆ ಸರಿ ಪಡಿಸುವ ಪ್ರಕ್ರಿಯೆಯೂ ಸಮಯ ಪರೀಕ್ಷೆಯಲ್ಲಿ ಗೆದ್ದಿರುವ ವಿಧಾನಗಳಿಂದ. ಇಲ್ಲವಾದರೆ ಸಮಾಜದ ನಿಯಮಗಳಿಗೇ ಅರ್ಥ ಇಲ್ಲದಾಗಿ ವ್ಯವಸ್ಥೆಯೇ ಕುಸಿಯುವ ಸಂಭವ ಇರುತ್ತದೆ. ಸಮಾಜವು ರೂಪುಗೊಂಡಿರುವುದು ಸಮಾಜದೊಳಗಿನ ಜೀವಿಗಳ ನೆಮ್ಮದಿಗೆ. ಆದರೆ ಅದರ ಸದಸ್ಯರು ಭಯದಲ್ಲಿ ಜೀವಿಸಲಾರಂಭಿಸಿದರೆ ಅಂಥಾ ಸಮಾಜ ತನ್ನ ಕೊನೆಗಾಲವನ್ನು ಎಣಿಸಲಾರಂಭಿಸಿದಂತೆಯೇ ಸರಿ.
ಸಂಸ್ಕಾರವೇ ಸಂಸ್ಕೃತಿಯೇ?
ಯಾವುದು ಈ ಸಂಸ್ಕೃತಿ ನಾವು ಉಳಿಸಲು ಹೊರಟಿರುವುದು? ಹೆಂಗಸಿಗೆ ಅಡುಗೆ ಮನೆ? ಉದ್ದ ಜಡೆ? ಗಂಡಸು ಇಡೀ ದಿನ ಕೆಲಸ ಮಾಡಿ ಸಂಜೆ ಹೆಂಡವನ್ನು ಹೊಟ್ಟೆಗೆ ಸುರಿದು ಮನೆ ಸೇರುವುದು? ಯಾವುದು? ಯಾವುದು? ಸಂಸ್ಕೃತಿ ಎನ್ನುವುದು ಕಾಲದಿಂದ ಕಾಲಕ್ಕೆ ಮಾರ್ಪಡುವ ವಿಷಯವಲ್ಲವೇ? ಆಯಾ ಕಾಲದಲ್ಲಿ ಮನುಷ್ಯ ಬದುಕಿದ ವಿಧಾನ ಅಂದಿನ ಸಂಸ್ಕೃತಿ ಅಲ್ಲವೇ? ಭಾರತೀಯ ಸಂಸ್ಕೃತಿ ಎನ್ನುವುದು ನಿಂತ ನೀರೇ? ಅದು ಚಲನಶೀಲವಲ್ಲವೇ? ಅದು ಲೋಕದ ಇತರರೊಂದಿಗೆ ಬೆರೆತು, ಕಲಿತು, ಕಲಿಸಿ ಬೆಳೆಯುವಂಥಾದ್ದಲ್ಲವೇ? ಸಂಸ್ಕೃತಿ ಹಾಗೂ ಸಂಸ್ಕಾರಗಳಿಗೆ ಈ ಉಗ್ರಗಾಮಿಗಳು ವ್ಯತ್ಯಾಸ ಕಾಣದೇ ಹೋಗುತ್ತಿದ್ದಾರೆಯೆ? ಸಂಸ್ಕಾರಗಳು ಅಂದಿನ ಸಮಾಜದ ಮೌಲ್ಯಗಳಿಂದ ಹುಟ್ಟುವುದಲ್ಲವೇ? ಸಂಸ್ಕೃತಿ ಬೆಳೆಯದೇ, ಬದಲಾಗದೇ ಹೋದರೆ ಆ ಸಮಾಜ ಮುಂದುವರೆಯುವುದಾದರೂ ಹೇಗೆ? ನಾವು ಮುಂದೆ ಹೋಗುವ ಬದಲು ಹಿಂದೆ ಹೆಜ್ಜೆ ಹಾಕುತ್ತಾ ನಡೆಯುತ್ತಿದ್ದೇವೆಯೇ? ಅಥವಾ ಈ ಇಡೀ ಪ್ರಕರಣಕ್ಕೆ ಇನ್ಯಾವುದೋ ದೊಡ್ಡ ಸಾಮಾಜಿಕ ಆಯಾಮ ಇದೆಯೇ ಯೋಚಿಸುತ್ತಾ ಕಳೆದ ಒಂದೆರಡು ದಿನಗಳಿಂದ ತಲೆ ಕೆಡುತ್ತಿದೆ. ದಯವಿಟ್ಟು ಈ ಪ್ರಕರಣದ ಕುರಿತಾಗಿ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಬರೆಯಿರಿ. ಮಂಗಳೂರಿಗೆ ಹಿಡಿಯುತ್ತಿರುವ/ಹಿಡಿದಿರುವ ರೋಗ ಏನು ಎನ್ನುವುದನ್ನು ಇಲ್ಲಿ ಒಂದಿಷ್ಟು ಚರ್ಚಿಸುವ ಬನ್ನಿ…
…ಬರೆದು ಮುಗಿಸುತ್ತಿರಬೇಕಾದರೆ, ಹೈಸ್ಕೂಲಿನ ಹಿಂದಿನ ಮೆಟ್ಟಿಲುಗಳಲ್ಲಿ ವೆಂಕಟರಮಣ ಒಬ್ಬನೇ ಕುಳಿತಿರುವುದು ಕಾಣಿಸುತ್ತಿದೆ. ಅವನ ಮುಂದೆ ಸಮಾಜದ ಮುಗ್ಧತೆ ಸತ್ತು ಮಲಗಿರುವುದು ಕಾಣಿಸುತ್ತಿದೆ…
ಪೂರಕ ಓದು:
ಇವು, ಸ್ತ್ರೀಯನ್ನು ಮತ್ತೆ ಬ೦ಧಿಸುವ ಒ೦ದು ಪ್ರೋಸೆಸ್‍ನಂತೆ ಕಾಣಿಸುತ್ತದೆ. ಯಾವ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಒ೦ಟಿಯಾಗಿಯೋ, ಫ್ರೆ೦ಡ್ಸ್ ಜೊತೆಯೋ ಮನೆಯಿ೦ದ ಹೊರಗೆ ಕಳಿಸುವ ಧೈರ್ಯ ಮಾಡಬಹುದು? ಅರ್ಥವಾಗದು ಪರಿಹಾರ, ಹೀಗೆ ಅನೀತಿಯ, ಅಸಹ್ಯದ ದಾಳಿಕೋರರನ್ನು ಹತ್ತಿಕ್ಕಲು.
ರಾಜಕೀಯ ಚದುರಂಗದಲ್ಲಿ ಅಲ್ಲಿ ಕರಾವಳಿ ಅಲೆ ಪತ್ರಿಕೆಯನ್ನು ದಮನಿಸುವುದು, ಇಲ್ಲಿ ಜಾನುವಾರು ಸಾಗಣೆಯನ್ನು ಭಯೋತ್ಪಾದನೆಯ ‘ಭಾಷೆ’ಯಲ್ಲಿ ವಿರೋಧಿಸುವುದು, ಮತ್ತೆಲ್ಲೋ ಹೋಗುವ ಜೋಡಿಗಳ ಮೇಲೆಲ್ಲಾ ಮತೀಯ ಕಣ್ಣು ಚೂಪಾಗುವುದು, ಶಾಸಕನೇ ಮಾಡಿರಬಹುದಾದ ಕೊಲೆ ಮಾಫ್ ಆಗುವುದು, ಮಂತ್ರಿಗಳ ಗಣಿಗಾರಿಕೆ ಕಾನೂನುಬದ್ಧವಾಗುವುದು, ದರೋಡೆಗಳು ಪಾರ್ಟಿಫಂಡಾಗುವುದು, ದಾನಗಳು ದೇಶದ್ರೋಹವಾಗುವುದು, ಕೊಲೆಗಡುಕರು ನೇತಾರರಾಗುವುದು, ಪ್ರಾಮಾಣಿಕರು ಕಂಬಿ ಎಣಿಸುವುದು… ಪಟ್ಟಿ ಮಾಡಿದಷ್ಟೂ ಮುಗಿಯದು, ಮುಗಿಯದು. ಕೂಡಿತಾದಷ್ಟು ಪ್ರೇಕ್ಷಕರಾಗುವುದು ಬಿಟ್ಟು ತೀವ್ರ ಪ್ರಯೋಗಪಟುಗಳಾಗುವುದು ಒಂದೇ ದಾರಿ. ಮಹಪ್ರವಾಹದಲ್ಲೂ ಮುಳುಗೇಳುತ್ತಾ ಸಾಗುವ ಇರುವೆಯೊಂದು ಜೊತೆಗಾರ ಒಣ ಎಲೆಗೇರಲು ಪ್ರಯತ್ನಿಸುತ್ತಿರುವಂತೆ ದೃಢ ನೆಲವನ್ನೂ ತಲಪಬಹುದಲ್ಲವೇ?
ಅಭಯ,
ಘಟನೆಯ ಬಗೆಗಿನ ಪ್ರತಿಕ್ರಿಯೆ ಬರಹ ತುಂಬಾ ಅರ್ಥಪೂರ್ಣವಾಗಿದೆ.
ರೋಗ ಹಿಡಿದಿದೆ ಎಂದು ತಿಳಿದೂ ಡಾಕ್ಟರ್ ಹತ್ರ ಹೋಗದಿದ್ದರೆ ಹೇಗೆ ?
ಅದೂ ಕಷ್ಟವೇ. ಯಾರು ನಕಲಿ ಯಾರು ಅಸಲಿ ಅಂತಲೂ ಕೆಲವೊಮ್ಮೆ ತಿಳಿಯೋದಿಲ್ಲ. !!!
ಇದಕ್ಕೆ ಪರಿಹಾರ ಅಂತ ನಾವೇ ಕಂಡುಕೊಳ್ಳಬಹುದಾದ ಮಾರ್ಗ ಏನಾದ್ರೂ ಇದ್ಯಾ . ಯಾರೇ ಏನೇ ಹೆಜ್ಜೆ ಇಟ್ಟರೂ, ಅದರಲ್ಲಿ ರಾಜಕೀಯ ಬೆರೆಸುವ ಅಥವಾ ಲೇಬಲ್ ಲಗತ್ತಿಸುವ ಕೆಲಸವನ್ನೇ ಹೆಚ್ಚಿನವರು ಮಾಡುತ್ತಾರೆ. ಹೀಗಿರುವಾಗ ಮಂಗಳೂರಿನಲ್ಲಂತೂ ಹೋರಾಟದ ದನಿಗಳು ಕ್ಷೀಣವಾಗಿಯಾದರೂ ಕೇಳ್ತಾ ಇದ್ಯಾ. ನಂಗಂತೂ ಸಂಶಯ ಇದೆ. !!!
ರೋಗ ಹಿಡಿದ ಮನಸ್ಸುಗಳ ಜತೆಗೆ ಹೋರಾಟವೂ ಕಷ್ಟ ಇದೆ.
ಕಾರಣ :
ಬೆದರಿಕೆ ಪತ್ರಗಳು, ಜೀವ ಬೆದರಿಕೆಗಳಿಗೆ ಲೆಕ್ಕ ಉಂಟಾ ?
ಅದರ ಬದಲು ಸುಮ್ಮನಿರುವುದೇ ಒಳ್ಳೆಯದಲ್ವಾ ಅನ್ನುವ ಅನಿವಾರ್ಯ ಆಯ್ಕೆ.
ತೊಂಬತ್ತರ ದಶಕದಿಂದೀಚೆಗೆ ಎಲ್ಲವೂ ಸರಿಯಾಗಿಲ್ಲ. ಯಾವುದೂ ಸರಿಯಾಗಿಲ್ಲ. ಮೌನವಾಗಿದ್ದ/ಮೌನವಾಗಿರುವ ಮಂಗಳೂರಿನ ಜನ – ಬುದ್ಧಿಜೀವಿಗಳು – ಸಂಘಟನೆಗಳು – ಎಲ್ಲರೂ ಈ ಘಟನೆಗೆ ಪರೋಕ್ಷವಾಗಿ ಕಾರಣಕರ್ತರು. ಅದೂ ಅನಿವಾರ್ಯ ಆಯ್ಕೆ.
ನನಗಂತೂ ಯಾವ ಬಗ್ಗೆ ಬರೆಯುವುದು ಎನ್ನುವುದೇ ಒಂದು ರೀತಿಯ ಸಂಕಟ. ಎಲ್ಲಿಂದ ಶುರು ಮಾಡೋದು?
ಈ ಘಟನೆ ಮಾತ್ರವಲ್ಲ, ಮಂಗಳೂರಿನಲ್ಲಿ ನಡೆಯುವ ಬಹುಶಃ ಹೆಚ್ಚಿನ ಎಲ್ಲ – ಬೆಳಕಿಗೆ ಬಾರದಿರುವ ಘಟನೆಗಳಿಗೂ ದೊಡ್ಡ ಸಾಮಾಜಿಕ ಆಯಾಮ ಖಂಡಿತವಾಗಿಯೂ ಇದೆ.
ಇನ್ನು ಇದೆಲ್ಲಾ ಯಾರಿಗೂ ತಿಳಿಯದೇ ನಡೆಯುತ್ತಿದೆ ಅಂದ್ರೆ ನಮ್ಮನ್ನು ನಾವೇ ಮೂರ್ಖರು ಅನ್ನಬೇಕು.
Timely article. I don’t know how to react to this vandalism in such a civilized times. Good, you did put your feelings in writing 🙂
ಲೇಖನ ಸಮಯೋಚಿತ. ಸಮತೂಕದಿಂದ ಬರೆದಿದ್ದೀರಿ.
ಲೇಖನ ಓದುತ್ತಾ ವೆಂಕಟರಮಣನ ಪ್ರೀತಿಗೆ ಅಡ್ಡ ಬಂದವರೇ ಈಗ ಪ್ರಮೋದು ಮುತಾಲಿಕ್ ಎಂಬ ಹೆಸರು ಹಾಕಿಕೊಂಡು ಬದುಕಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಅಥವಾ ಅವರು ಖೊಮೇನಿಯ ಪುನರವತಾರವೇ? ಏನೂ ಆಗಿರಬಹುದು.
ತಲೆ ತಿಕ್ಕುವ ಕೆಲಸವನ್ನ ಈ ಜನ ಬಹಳ ಚೆನ್ನಾಗಿ ಮಾಡುತ್ತಾರೆ. ಇವರನ್ನೆಲ್ಲಾ ಹೊಗೆನಕಲ್ ಫಾಲ್ಸ್ ನಲ್ಲಿ ತಲೆ ಮಾಲೀಷ್ ಮಾಡುವ ದಿನಗೂಲಿಗಳ ಸಂಘಕ್ಕೆ ಸೇರಿಸುವುದು ಒಳಿತು.
ಆದರೆ ಇವರು ಸೇನೆ ಎಂಬ ಬೋರ್‍ಡ್ ಹಾಕಿಕೊಂಡಿದ್ದಾರೆ. ಸೇನೆ ಎಂದರೆ ಸಾಮ್ರಜ್ಯ ಕಾಯುವವರದ್ದು. ಇವರ ಸಾಮ್ರಜ್ಯ ಯಾವುದು? ಯಾರು ಇವರಿಗೆ ಸಾಮ್ರಜ್ಯ ಕಟ್ಟಲು ಜಾಗ ಮಾಡಿಕೊಟ್ಟವರು?
ಈ ಮೂಲಭೂತವಾದಿಗಳು ಯಾವಾಗಲೂ ಅಪಾಯಕಾರಿ. ಸನಾತನಿಗಳು ಎಂದು ನಾವು ಗುರುತಿಸಿವ ಮಠಗಳಿಗೆ ದುಡಿಯುವ ಜನರಿಗಿಂತ ಈ ಜನ ಅಪಾಯಕಾರಿ.
ಎಚ್ಚರಿಕೆಯಿಂದ ಇರಬೇಕಾದ್ದು ಅಗತ್ಯ. ಮತ್ತು ಎಲ್ಲಾ ಶಾಲಾ ಕಾಲೇಜು ಮಕ್ಕಳಿಗೆ ಇವರಿಗಿಂತ ಮುಂದಾಗಿ ನಾವು ತಲೆ ತೊಳೆಯಬೇಕಾದ್ದು ಅಗತ್ಯ.
Thanks for your comment sir.
Hey Abhaya…
Yes, vandalism…a curse on Mangalore! We had been a part of that city; we know, how rich and meaningful was its culture!!! What’s happening these days…??!!
its occurring repeatedly, first in the name of ‘holy cows’, then came ‘honor- attacks’, there were the church attacks, besides periodic rift surrounding ‘Mosque-Mandir’ controversies and then it was a journalist’s turn just because he didn’t agree with the method and means of self declared ‘guardians of culture’ and finally (hopefully!!) it was a pub, not exactly, but a few innocent girls under the wrath of ‘Vultures’ for the protection of ‘culture’…!!!
What should I say…? Even the political fronts for whom these ‘hooligans’ have worked and earned the berths in Vidhana Soudha, have distanced themselves from the incident. This only indicates how ‘coward’ is their means of defending ‘culture’! Mangalore should wake up. It’s high time to let these things continue unchallenged!
I have something more to add… the way, national media; particularly the English press had reacted to the whole incident. I wonder if the media was equally sensitive towards the church attack or BVS issue! But sure, none of the BJP leaders rushed to Bangalore to advice the CM to take ‘necessary’ action… and of course, there were arrests, of those leaders whose ‘crime’ this time, definitely I would rate as of far lesser degree, if we consider their role in creating outsider-insider divide and successfully turning this into electoral success for their masters. Mutallik was let free, in spite of defending the church attacks openly and also for countless inflammatory speeches intentionally instilling hatred towards particular sections of our society! Why was the law silent then? Is it because those acts of him and his men, secured the much required positions for their masters who now are constitutionally empowered to maintain ‘law and Order’ in our society! One thing, we should not forget, is the nexus between the hooligans and their masters and the electoral/ constitutional means they make use to advance their common cause of ‘Cultural Nationalism’. Let’s not forget Hitler’s ascendance to the supreme authority of Germany was also through election.
Whatever, I wish to see a public march against these things in Mangalore… let people come together to express their solidarity and assert their choice of ‘culture’. At least, let ‘those’ know how to express one’s (or of group’s) concern in a democratic society. Hope Mangalore defends what Mangalore really stands for!
ಅಭಯ,
ರಾಜೇಶರ ಜತೆ ನನ್ನದೂ ಸಹಮತವಿದೆ. ಈಗ ನಮಗೆ ಕಂಡು, ಕೇಳಬರುತ್ತಿರುವ ಮಂಗಳೂರು, ದಶಕವೊಂದರ ಹಿಂದೆ ನಮಗೆ ಕಂಡಿದ್ದ ಮಂಗಳೂರೇ ಅಲ್ಲ ಅನ್ನಿಸುತ್ತ ಇದೆ. ಮಂಗಳೂರೆಂದರೆ ನನಗೇ ಏನೋ ವಿಶೇಷ ಪ್ರೀತಿ. ಅಲ್ಲಿನ ಸಭ್ಯತೆಯ ಎಲ್ಲೆ ಮೀರದ ಯುವಕರು, ಆರಾಮವಾಗಿ ಓಡಾದುವ ಸ್ವಾತಂತ್ರ್ಯ ಹೊಂದಿದ ಯುವತಿಯರು, ವಿದ್ಯಾಭ್ಯಾಸಕ್ಕೆ ಹೆಸರಾದ ಶಾಲಾಕಾಲೇಜುಗಳು, ಚೆಂದದ ಬೀಚುಗಳು, ಬೆಂಗಳೂರಿನಷ್ಟು ಪೊಲ್ಯೂಟೆಡ್ ಅಲ್ಲದ ವಾತಾವರಣ, ಎಲ್ಲದರ ಬಗ್ಗೆ ನಾನು ಗೆಳೆಯರ ಹತ್ತಿರ ಹೆಮ್ಮೆಯಿಂದ ಹೇಳಿಕೊಳ್ಳುವದಿತ್ತು.
ಪಬ್ ದಾಳಿಯ ನಂತರ ಮಂಗಳೂರಿಗರ ಬಾಯಿಂದ ಕೇಳಬರುತ್ತಿರುವ ಇತ್ತೀಚಿನ ಮಂಗಳೂರ ಕೊಳೆಯುತ್ತಿರುವ ವಾತಾವರಣದ ಬಗ್ಗೆ ಕೇಳಿ ಆಘಾತವಾಗುತ್ತ ಇದೆ. ದೇವರೆ, ನನ್ನ ಚೆಂದದ ಮಂಗಳೂರನ್ನ ಈ ಹಾಳು ಧರ್ಮಾಂಧರು ಕೆಡಿಸದಿರಲಿ ಎಂದು ಬೇಡಿಕೊಳ್ಳುತ್ತಿದೇನೆ. ಮಂಗಳೂರ ಯುವಜನತೆ ಎಚ್ಚರಗೊಂಡು ಈಗಲೆ ತಮ್ಮ ಮಂಗಳೂರನ್ನು ವಾಪಾಸು ಪಡೆದುಕೊಂಡರೆ ಒಳಿತು. ಇಲ್ಲದಿದ್ದರೆ ಅಲ್ಲಿಯೂ ನೀವು ಕಂಡ ಪಾಟ್ನಾದ ಸೀನೇ ಕಂಡುಬರುವ ಹಾಗಾಗಬಹುದು!!
ಅಭಯ, ಲೇಖನ ಮಂಗಳೂರು ಎತ್ತ ಸಾಗುತ್ತಿದೆ ಎನ್ನುವ ತಲ್ಲಣಗಳನ್ನು ಬಿತ್ತರಿಸುತ್ತಿದೆ. ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದ್ದೇವೆನ್ನುವ – ಹೇಯ ವ್ಯಾಖ್ಯಾನ ಮೊನ್ನೆಯ ಧಾಳಿ. ಅಷ್ಟಕ್ಕೂ ಇಡೀ ಸಂಸ್ಕೃತಿಯನ್ನು ಕಾಪಾಡುವ ಗುತ್ತಿಗೆಯನ್ನು ಇವರಿಗೆ ಯಾರು, ಎಷ್ಟಕ್ಕೆ ಕೊಟ್ಟರು? ನಾನು ತೊಡುವ ಬಟ್ಟೆ, ಆಡುವ ಮಾತು, ನಡೆದಾಡುವ ಬಗೆ, ಕುಣಿಯುವ ರೀತಿ ಮಾತ್ರ ಸಂಸ್ಕೃತಿ ಮತ್ತೆಲ್ಲವೂ ಅಪಸಂಸ್ಕೃತಿ ಎನ್ನುವ ಮನೋಭಾವ ಇದೆಯಲ್ಲಾ, ದಿಗಿಲು ಹುಟ್ಟಿಸುವಂತಿದೆ. ಅಫಘಾನಿಸ್ಥಾನದ ರೀತಿ ಅದು.
ಪಬ್‍ನಲ್ಲಿ ಎಲ್ಲ ಸರಿ ಇತ್ತೆಂದು ಹೇಳುತ್ತಿಲ್ಲ. ಅದರ ವಿರುದ್ಧ ದನಿ ಎತ್ತಬೇಕಾದದ್ದು ಅಗತ್ಯ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ದನಿ ಎತ್ತಿದ ಬಗೆ ಮಾತ್ರ ಸರಿ ಇಲ್ಲ ಎನ್ನುವುದಕ್ಕೆ ಹೆಚ್ಚು ತರ್ಕ ಬೇಡ. ಎಲ್ಲವನ್ನು ಹೊಡೆದಾಟ, ಹಿಂಸೆಯಿಂದಲೇ ಮಾಡುತ್ತೇನೆ, ಕಾನೂನನ್ನು ನನ್ನ ತೆಜ್ಜೆಗೆ ತೆಗೆದುಕೊಳ್ಳುತ್ತೇನೆ ಎನ್ನುವ ಮನೋಭಾವದ ವಿಷ ಕೆಲವು ದಶಕಗಳಿಂದ ತೊಟ್ಟು ತೊಟ್ಟಾಗಿ ಹನಿಕುತ್ತ ಈಗ ವೇಗವಾಗಿ ಮಂಗಳೂರನ್ನು ಆವಾಹಿಸುತ್ತಿದೆ ಎನ್ನುವ ಅಂಶವನ್ನು ಹೇಳುವ ನಿನ್ನ ಲೇಖನ ಎಲ್ಲರನ್ನು ಎಚ್ಚರಿಸುವಂತಿದೆ. ಶಹಬ್ಬಾಸ್ ಅನ್ನಲೇ- ಆದರೆ ಹಾಗೆ ಹೇಳಲು ಕಾರಣವಾದ ವಿದ್ಯಮಾನ ತಡೆಯುತ್ತದೆ ನನ್ನನ್ನು. ಹೀಗೆ ಸಮಾಜದ ವಿದ್ಯಮಾನಗಳಿಗೆ ತೆರೆದುಕೊಳ್ಳುತ್ತ, ಪ್ರತಿಕ್ರಿಯಿಸುತ್ತ ಇನ್ನಷ್ಟು ಬರೆ. ಇಂಥ ಬರೆಗಳು ಕಾಲದ ಅಗತ್ಯ ಕೂಡ.
ರಾಧಾಕೃಷ್ಣ
ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗುತ್ತದೆ? ಕಳ್ಳನನ್ನೇ ಕಾಯುವ ಕೆಲಸಕ್ಕೆ ನೇಮಿಸಿದರೆ ಏನಾಗಬಹುದು?
ಬೆಂಗಳೂರಿನ ವಾತಾವರಣ ಕಲುಷಿತವಾಗಿರಬಹುದು. ಅದು ಅಧಿಕ ವಾಹನ ಬಳಕೆಯಿಂದ. ಮಂಗಳೂರಿನಲ್ಲಿ ಕಡಿಮೆ ವಾಹನ ಸಂಚಲನದಿಂದಾಗಿ ವಾತಾವರಣ ಬೆಟರ್ ಇರಬಹುದು. ಆದರೆ ಕೇಸರೀಕರಣದಿಂದಾಗಿ ಕಲುಷಿತಗೊಂಡ ವಾತಾವರಣವನ್ನು ಹೇಗೆ ನಿರ್ಮಲಗೊಳಿಸುವುದ? ಸಕಾಲಿಕ ಬರಹ, ಅಭಯ.
ಪಬ್ ದಾಳಿ ಹಾಗೂ ಪಬ್ ಸಂಸ್ಕೃತಿ ಎರಡೂ ಖಂಡನೀಯ…
ಸ್ವಾತಂತ್ಯ್ರ ಹಾಗೂ ಸ್ವೇಚ್ಚೆ ಎರಡಕ್ಕೂ ವ್ಯತ್ಯಾಸ ಇಲ್ಲ ಎನ್ನುವ ರೀತಿಯಲ್ಲಿದೆ ಬರಹ.. ಆದರಿಂದ ಅಭಯರ ಚಿಂತನೆ ಸಮಗ್ರವಾಗಿಲ್ಲ ಎಂಬುದು ನನ್ನ ಅಭಿಪ್ರಾಯ 🙂
ಪ್ರಿಯ ಸಾಯಿ ಗಣೇಶ್, ಇಲ್ಲ ನೀವು ಬಹುಷಃ ನನ್ನ ಬರಹವನ್ನು ಅರ್ಥೈಸಿಲ್ಲ. ನನ್ನ ಅಭಿಪ್ರಾಯವೂ ನಿಮ್ಮದೇ ಅಭಿಪ್ರಾಯ. ಪಬ್ ಧಾಳಿಯೂ ಪಬ್ ಸಂಸ್ಕೃತಿಯೂ ಎರಡೂ ತಪ್ಪೂ ಎಂದೇ ನಾನೂ ಹೇಳಿರುವುದು. ನಾನು ಹೇಳಿರುವುದು ಪಬ್ ಸಂಸ್ಕೃತಿ ಖಂಡನೀಯ. ಆದರೆ ಅದನ್ನು ಸರಿಪಡಿಸಲು ಬಳಸಿರುವ ವಿಧಾನ ಸರಿಯಲ್ಲ ಎಂದೇ ಹೊರತು ಪಬ್ ಸಂಸ್ಕೃತಿಯನ್ನು ನಾನೂ ಬೆಂಬಲಿಸಿಲ್ಲ. ದಯವಿಟ್ಟು ಇನ್ನೊಮ್ಮೆ ಬರಹವನ್ನು ಓದಿನೋಡಿ.
ಪಬ್ ಸಂಸ್ಕೃತಿಯನ್ನು ಸರಿಪಡಿಸುವ ವಿಧಾನ ಅದಲ್ಲ..ಖಂಡಿತ.. ಹಾಗಾದರೆ ಸರಿಪಡಿಸುವುದು ಹೇಗೆ , ಎಂದು ಯೋಚಿಸಿದರೆ..ಪಬ್ ಸಂಸ್ಕೃತಿಯು ನಮ್ಮ ದೇಶದಲ್ಲೇ ಜನಿಸಿದ್ದೇ ಅಥವಾ ಎರವಲು ಪಡೆದುಕೊಂಡಿದ್ದೆ..?(ನನ್ನನ್ನು ಸನಾತನಿ ಎಂದು ಕರೆದು ಬಿಡಬೇಡಿ ಮತ್ತೆ 😉 ).. ಎರವಲು ಎಂತಾದರೆ ಅದನ್ನೇ ತ್ಯಜಿಸಿಬೇಕು..ಆದರೆ ಹೇಗೆ ? ಆಧುನಿಕತೆಯು ಎರವಲು ಸಂಸ್ಕೃತಿ ಯೊಡನೆ ಎಷ್ಟು ವ್ಯವಸ್ಥಿತವಾಗಿ ಬೆರೆತಿದೆಯಲ್ಲವೇ? ಹೇಗೆ ಬೇರ್ಪಡಿಸುವುದು…. ಆಧುನಿಕತೆಯು ಭಾರತೀಯತೆಯೊಡನೆ ಬೆರೆಯಲು ಸಾಧ್ಯವಿಲ್ಲವೇ? ಇವೆಲ್ಲ ಯೋಚಿಸುತ್ತಾ ಹೋದರೆ ಮನಸ್ಸು ವ್ಯಗ್ರವಾಗುವುದಂತೂ ನಿಜ..(ಮುತಾಲಿಕರಂತೆ ದಾಂಧಲೆ ಮಾಡುವ ಮಟ್ಟಿಗೆ ಅಲ್ಲ!)… ಇದಕ್ಕೆ ಕಡಿವಾಣ ಹಾಕುವುದು ಹೇಗೆ? ಪೊಲೀಸರು ಪಬ್ ಮೇಲೆ ಕೇಸು ದಾಖಲಿಸಿದರೆ ಸ್ವಾತಂತ್ರ ಹರಣ ಅನ್ನುತಾರೆ.. ನ್ಯೂಸ್ ಗಳಿಗೆ ಸಮಾಜಿಕ ಪ್ರಜ್ಞೆ ಮರೆತು ದಾಳಿ ಕೋರರೊಡನೆ ಪತ್ರಕರ್ತರು ಕೈ ಜೋಡಿಸಿದ್ದನ್ನು ಖಂಡಿಸಿದರೆ ,ಪತ್ರಿಕಾ ಸ್ವಾತಂತ್ರ ಹರಣ… ಕಾನೂನು ಮಾಡುವ ಹಾಗಿಲ್ಲ.. ಹಾಗಾದರೆ ಏನು ಮಾಡಬಹುದು..!
ಪ್ರಿಯ ಸಾಯಿ ಗಣೇಶರೇ, ನಿಮ್ಮ ಪ್ರತಿಕ್ರಿಯೆಗೆ ನನ್ನ ಉತ್ತರಗಳು ಹೀಗಿವೆ:
ಮೊದಲನೆಯದಾಗಿ ಆಧುನಿಕತೆ ಎನ್ನುವುದು ಎರವಲು ಸಂಸ್ಕೃತಿಯೊಡನೆ ಬರುವಂಥದ್ದು ಎಂದು ನಾವು ತಿಳಿದಿರುವುದೇ ತಪ್ಪಾಗುತ್ತಿರುವುದು. ಗ್ರಾಮೀಣ ಭಾರತದ ಕನಸು ಕಂಡ ಗಾಂಧೀಜಿಯೂ ಆಧುನಿಕರೇ ಆಗಿದ್ದರು. ಆಧುನಿಕತೆ ಎನ್ನುವುದು ಯೋಚನಾ ರೀತಿಯೇ ಹೊರತು ಅದು ಸಂಸ್ಕೃತಿಯ ಭಾಗವಲ್ಲ. ಇವೆರಡನ್ನು ಮೇಳೈಸಿನೋಡುವವರೇ ಈ ಧಾಳಿಕೋರರು. ಈಗ ನಡೆಯುತ್ತಿರುವುದೆಲ್ಲವೂ ರೋಗಕ್ಕೆ ಮದ್ದುಕೊಡುವ ಕ್ರಮಗಳು. ಆಗಬೇಕಾದದ್ದು ರೋಗದ ಮೂಲಕ್ಕೇ ಹೊಡೆಯುವಂಥಾದ್ದು. ಅಂದರ ಮೂಲತಃ ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ಹಾಕಿ ಗಟ್ಟಿ ಮನಸ್ಸಿನ ಮಕ್ಕಳನ್ನು ತಂದೆ ತಾಯಿ ಮನೆಯಿಂದಾಚೆಗೆ ಕಳಿಸಿದರೆ ಸಾಕು ಇಂಥಾ ಯಾವ ಸಮಸ್ಯೆಯೂ ಇರುವುದಿಲ್ಲ. ನಮ್ಮಲ್ಲಿ ಹೆಚ್ಚಿನ ತಂದೆ ತಾಯಿಯರೇ ಇಂಥಾ ಕನ್ಫ್ಯೂಸ್ಡ್ ಲಾಟ್ ಆಗಿರುವುದೇ ನಮ್ಮ ಸಮಸ್ಯೆ. ಇದನ್ನು ಸರಿಪಡಿಸಿದರೆ, ಸುಂದರ, ಸ್ವಚ್ಛ, ಸದೃಢ ಸಮಾಜದ ನಿರ್ಮಾಣ ಸಾಧ್ಯ. ಅದು ಬಿಟ್ಟು ಎಲ್ಲಾ ಹಾಳಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ಬಾರನ್ನು ಮುಚ್ಚಿದರೆ! ಅಥವಾ ಬಾರಿಗೆ ಹೋದವರಿಗೆ ಹೊಡೆದರೆ, ಅವರು ಇನ್ನೆಲ್ಲೋ ಹೋಗಿ ಕುಡಿಯುತ್ತಾರೆ ಅಷ್ಟೇ. ಏನು ಸಾಧಿಸಿದಂತಾಯಿತು ಇದರಿಂದ? ಅಲ್ಲವೇ ಗಣೇಶರೇ?
ನಾನು ಸಹ ಆಧುನಿಕತೆ ಎರವಲು ಸಂಸ್ಕೃತಿ ಯೊಡನೆ ಬೆರೆತಿದೆ ಎಂದು ಹೇಳುತ್ತಿದ್ದೇನೆ ಅಷ್ಟೆ ಹೊರತು ಎರಡು ಒಟ್ಟಿಗೆ ಬಂದಿದೆ ಎಂದಲ್ಲ.. (ನಾನು ಹಾಗೆಯೆ ಬರೆದಿದ್ದೇನೆ ..ಒಮ್ಮೆ ನೋಡಿ 🙂 )… ನೀವು ಹೇಳಿದ್ದು ನಿಜ..ಮನೆಯಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು, ಅದರಿಂದ ಉತ್ತಮ ಸಮಾಜ ಕಟ್ಟುವುದು …ಸರಿ. ಎರಡು ಮಾತಿಲ್ಲ.. ಆದರೆ ಕುಡಿಯುವುದು, ಮಾದಕ ವಸ್ತುಗಳು ಸೇವಿಸುವುದು ತಪ್ಪು ಎಂದು ತಿಳಿದಿದ್ದರೂ ಸಹ ಬಾರ್ ಗಳನ್ನೂ ಅಥವಾ ಅಂತಹ ಕೇಂದ್ರಗಳನ್ನು ಮುಚ್ಚದಿದ್ದರೆ ಹೇಗೆ ? ಅವರು ಇಲ್ಲಿ ಕುಡಿಯದಿದ್ದರೆ ಮತ್ತೊಂದು ಕಡೆ ಹೋಗುತ್ತಾರೆ ಎಂದು ಕೊಂಡರೆ ಸ್ವಲ್ಪ ಉದಾಸೀನತೆ/ಬೇಜವಾಬ್ದಾರಿ ಅನ್ನಿಸುತ್ತದೆ.. (no offense meant 🙂 ).. ಮಕ್ಕಳನ್ನು ತಿದ್ದಿ ಮೌಲ್ಯಗಳನ್ನು ಬೆಳೆಸುವುದು ಸರಿ, ಆದರೆ ಈಗಾಗಲೇ ದಾರಿ ತಪ್ಪಿರುವವರನ್ನು ಸರಿದಾರಿಗೆ ತರುವ ಜವಾಬ್ದಾರಿ ಯಾರದು? (ನಮ್ಮ ಮನಸ್ಸಿಗೆ ನಾವೇ ಮಾಲೀಕರು,ಸರಿ ಆದರೆ ಮನಸ್ಸೇ ನಿಗ್ರಹ ತಪ್ಪಿದ ಮೇಲೆ ಮಾಲಿಕತ್ವ ದ ಅಸ್ತಿತ್ವ ಇನ್ನೆಲ್ಲಿ? ಹಾಗಂತ ಸರಿ ದಾರಿಗೆ ತರುಳ ಪ್ರಸ್ತುತ ಚರ್ಚೆಗೆ ಗ್ರಾಸವಾದ ಮಾರ್ಗ ಸರಿಯಲ್ಲ).. ಇದೇ ಜಿಜ್ಞಾಸೆ.. ದಾಳಿ ಸಂಸ್ಕೃತಿಯನ್ನು ವಿರೋಧಿಸುವವರು , ಪಬ್ ಸಂಸ್ಕೃತಿಯನ್ನು ಅಷ್ಟೆ ತೀಕ್ಷ್ಣವಾಗಿ ವಿರೋಧಿಸಬೇಕಲ್ಲವೇ? ಆ ಬದ್ಧತೆ ನಮ್ಮ ಚಿಂತಕರಲ್ಲಿ (ಬುದ್ಧಿಜೀವಿಗಳಲ್ಲಿ) ಕಂಡು ಬಂದಿಲ್ಲ..
ಹೌದು ಗಣೇಶರೇ ನೀವು ಹೇಳುವುದು ಸರಿ. ಹಾದಿ ತಪ್ಪಿದ ಮನವ ತಿದ್ದುವುದನ್ನೂ ಬಿಡಲಾಗುವುದಿಲ್ಲ. ಅದನ್ನು ತಿದ್ದುವುದು ಅಗತ್ಯವೂ ಸರಿ. ಆದರೆ ನಾನು ಮೇಲೆ ಲೇಖನದಲ್ಲೇ ಹೇಳಿದಂತೆ ಇಂಥವುಗಳನ್ನು ತಿದ್ದಲು, ಸಮಾಜವೇ ರೂಪಿಸಿರುವ ತಂದೆ-ತಾಯಿಯ ಅಧಿಕಾರ, ಗುರುಹಿರಿಯರ ಬೋಧನೆ ಅದನ್ನೂ ಮೀರಿ ಹಾದಿ ತಪ್ಪಿದರೆ, ಪೋಲೀಸ್ ಇದ್ದಾರೆ. ಆದರೆ ಈ moral policing ಸಮಾಜದ ಆಂತರಿಕ ನಿಯಮಗಳನ್ನೇ ಪ್ರಶ್ನಿಸುತ್ತದೆ ಹಾಗೂ ವಿರುದ್ಧವಾಗಿ ನಡೆದುಕೊಳ್ಳುತ್ತದೆ. ಹಾಗಾಗಿ ಪಬ್ ಸಂಸ್ಕ್ರುತಿಯನ್ನು ವಿರೋಧಿಸುವುದಕ್ಕಿಂತ ಹೆಚ್ಚು ದೊಡ್ಡ ದನಿಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿರುವುದು ಹಾಗೂ ಅದು ಸರಿ ಕೂಡಾ… ಪಬ್ ಸಂಸ್ಕ್ರುತಿಯನ್ನು ಬದಲಾಯಿಸುವುದು ಒಂದು ನಿಧಾನಕ್ಕೆ ನಡೆಯಬೇಕಾದ ಸಾಮಾಜಿಕ ಸುಧಾರಣೆಯೇ ಹೊರತು ಶಾಕ್ ಟ್ರೀಟ್‍ಮೆನ್ಟಿನಿಂದ ಸರಿಪಡಿಸಲಾಗುವ ರೋಗವಲ್ಲ. ಇದು ನನ್ನ ಇಡೀ ಬರವಣಿಗೆಯ ತಾತ್ಪರ್ಯ.
ದಾಳಿ ಕೋರ ಸಂಸ್ಕೃತಿಯನ್ನ ಖಂಡಿಸಲೇಬೇಕು… ನೀವು ಹೇಳಿದಿರಿ ” ಈ moral policing ಸಮಾಜದ ಆಂತರಿಕ ನಿಯಮಗಳನ್ನೇ ಪ್ರಶ್ನಿಸುತ್ತದೆ ಹಾಗೂ ವಿರುದ್ಧವಾಗಿ ನಡೆದುಕೊಳ್ಳುತ್ತದೆ. ಹಾಗಾಗಿ ಪಬ್
ಸಂಸ್ಕ್ರುತಿಯನ್ನು ವಿರೋಧಿಸುವುದಕ್ಕಿಂತ ಹೆಚ್ಚು ದೊಡ್ಡ ದನಿಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿರುವುದು ಹಾಗೂ ಅದು ಸರಿ ಕೂಡಾ… ” ಅಂತ. ಹೌದು ನಿಜ..ಆದರೆ ನೀವು ಹೇಳುವ ಸಮಾಜ ನಂಬಿಕೊಂಡು ನಾವು (ನೀವು ಕೂಡ ಎಂದು ಭಾವಿಸುತ್ತೇನೆ)ಬಂದಿರುವ ಮೌಲ್ಯಗಳಿಂದ ಕಟ್ಟಿದಂತಹುದು.. ಈ ಪಬ್ ಸಂಸ್ಕೃತಿ ನಾವು ನಂಬಿರುವ ಮೌಲ್ಯಗಳನ್ನ ಅಣಕಿಸುತ್ತದೆ.. ಆದ್ದರಿಂದ ಸಮಾಜಕ್ಕೆ ಅನಿವಾರ್ಯವಲ್ಲದ ಬದಲಾವಣೆಗಳನ್ನು ಅನಿವಾರ್ಯಗೊಳಿಸುತ್ತದೆ…. ಆದರಿಂದ ದೊಡ್ಡ ದನಿ ಇದಕ್ಕೂ ಬೇಕು…ಏಕೆಂದರೆ ಪಬ್ ಸಂಸ್ಕೃತಿ ಕೂಡ ಸಮಾಜದ ಅಂತರಿಕ ನಿಯಮಗಳನ್ನ ಕೇವಲ ಪ್ರಶ್ನಿಸುತ್ತಿಲ್ಲ, ಬದಲಾಗಿ ಅಣಕಿಸುತ್ತಿದೆ..
ತಿದ್ದುಪಡಿ :
“ನೀವು ಹೇಳುತ್ತಿರುವ ಸಮಾಜ ನಾವು ನಂಬಿಕೊಂಡು ಬಂದಿರುವ ಮೌಲ್ಯಗಳಿಂದ ಕಟ್ಟಿದುದು”