ಯಕ್ಷೋತ್ತಮನಿಗೆ ನಮಸ್ಕಾರ


SYMBOLಗುರು ಬನ್ನಂಜೆ ಸಂಜೀವ ಸುವರ್ಣರ ಕುರಿತಾಗಿ ಮಂಜುನಾಥ ಭಟ್ ಇವರು ಇತ್ತೀಚೆಗೆ ಉದಯವಾಣಿಯಲ್ಲಿ ಅಂದದ ಲೇಖನವೊಂದನ್ನು ಬರೆದಿದ್ದಾರೆ. ಈ ಮಹಾನ್ ಕಲಾವಿದರ ಬಗ್ಗೆ ನನ್ನದೊಂದೆರಡು ಮಾತು. ನಾನು ಹುಟ್ಟಿದ್ದು ಬೆಳೆದದ್ದು ಎಲ್ಲಾ ಮಂಗಳೂರಿನಲ್ಲೇ. ಯಕ್ಷಗಾನದ ಆಸಕ್ತಿ ನನ್ನ ತಂದೆಗೆ ಬಹಳ. ಹಾಗಾಗಿ ಸಣ್ಣವನಿದ್ದಾಗ ಬಹುತೇಕ ಅಪ್ಪನ ಒತ್ತಾಯಕ್ಕೇ ಯಕ್ಷಗಾನ ನೋಡಿದ್ದು. ಆದರೆ ಮುಂದೆ ಅದರ ಕುರಿತಾದ ಚರ್ಚೆಗಳು, ಮಹಾನ್ ಕಲಾವಿದರು ಕೆಲವರ ಸಂಪರ್ಕ ಒದಗಿ ಬಂದಾಗ ಯಕ್ಷಗಾನದ ಕುರಿತಾಗಿ ನನ್ನಲ್ಲಿ ಕುತೂಹಲ ಮೂಡಿತ್ತು. ಮುಂದೆ ಸಿನೆಮಾ ನಿರ್ದೇಶನ ಕಲಿಯಲೆಂದು ಪೂನಾದಲ್ಲಿನ ಸಂಸ್ಥೆ ಸೇರಿದಾಗ, ಅಲ್ಲಿನ ಸಣ್ಣ ಸಣ್ಣ ಪ್ರಯೋಗಗಳಿಗೆ ಕಥೆಗಳನ್ನು ಹುಡುಕುವ ಸಂದರ್ಭ ಬಂದಾಗ ನನಗೆ ಅರಿವಾದದ್ದು ಯಕ್ಷಗಾನ ನನ್ನನ್ನು ಆವರಿಸಿದ್ದ ಪರಿ. ಯಕ್ಷಗಾನದ ಕುರಿತಾಗಿ ನನ್ನ ಜ್ಞಾನ ಸೀಮಿತವೇ. ನೋಡಿದ್ದು ಬಿಟ್ಟರೆ ಇನ್ನೇನೂ ಅನುಭವ ಇಲ್ಲವೆಂದೇ ಹೇಳಬೇಕು. ಆದರೆ ಗುರು ಸಂಜೀವರ, ಹೇರಂಜೆ ಕೃಷ್ಣ ಭಟ್ಟರ ಪ್ರೋತ್ಸಾಹದಿಂದ ಅನೇಕ ಸಣ್ಣಪುಟ್ಟ ಕೆಲಸಗಳನ್ನು ಅವರು ನಡೆಸುತ್ತಿರುವ ದೊಡ್ಡ ಕೆಲಸಕ್ಕೆ ಪೂರಕವಾಗಿ ಮಾಡುವ ಅವಕಾಶ ನನಗೆ ಈ ಹಿಂದೆ ಸಿಕ್ಕಿತ್ತು.

THESETಪೂನಾದಲ್ಲಿ ದ್ವಿತಿಯ ವರುಷದ ಕೊನೆಯಲ್ಲಿ ಒಂದು ಹತ್ತು ನಿಮಿಷದ ಕಿರುಚಿತ್ರ ನಿರ್ಮಾಣ ಮಾಡುವ ಅವಕಾಶ ನಿರ್ದೇಶನ ವಿದ್ಯಾರ್ಥಿಗಳಿಗಿರುತ್ತದೆ. ಇದಕ್ಕೆ ಕಥೆ ಹುಡುಕುತ್ತಾ ಇದ್ದ ಸಂದರ್ಭದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಕಥೆಯೊಂದನ್ನು ನಾನು ಕೆಲಕಾಲ ಹಿಂದೆ ಹೆಣೆದಿದ್ದು ನೆನಪಾಯಿತು. ಅದನ್ನೇ ಏಕೆ ಪ್ರಯೋಗಿಸಬಾರದು ಎಂದನಿಸಿತಾದರೂ ಅಯ್ಯೋ! ಪೂನದಲ್ಲಿ ಎಲ್ಲಿಂದ ಯಕ್ಷಗಾನ? ಇಲ್ಲಿ ಯಾವ ಕಲಾವಿದರು ಸಿಗುತ್ತಾರೆ? ಅದೆಲ್ಲಾ ಹೇಗೆ ಸಾಧ್ಯ ಎಂದು ಸುಮ್ಮನಾದೆ. ಆದರೂ ಆಗೀಗ ಮನೆಗೆ ಫೋನ್ ಮಾಡಿದಾಗ ಅಪ್ಪನತ್ರ ಇದನ್ನು ಹೇಳಿಕೊಳ್ಳುತ್ತಿದ್ದೆ. ಒಮ್ಮೆ ಇಂಥಾ ಸಂದರ್ಭದಲ್ಲಿ ನೀನ್ಯಾಕೆ ಗುರು ಸಂಜೀವರನ್ನು ಒಂದು ಮಾತು ಕೇಳಬಾರದು ಎಂದರು. ಸರಿ, ಮುಂದಿನ ಬಾರಿ ಮಂಗಳೂರಿಗೆ ಬಂದಾಗ ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಹೋಗಿ ಗುರುಗಳನ್ನು ಭೇಟಿಯಾದೆ. ಆಗಿನ್ನೂ ಯಕ್ಷಗಾನ ಕೇಂದ್ರ ಈಗಿನ ಅಂದದ ಕಟ್ಟಡಕ್ಕೆ ಸ್ಥಳಾಂತರಗೊಂಡಿರಲಿಲ್ಲ. ಅಂದು ಜೋರಾಗಿ ಮಳೆ ಸುರಿಯುತ್ತಿತ್ತು. ಅವರ ಹಳೆಯ ಕಟ್ಟಡದ ಹೊರಗೆ ವಿದ್ಯಾರ್ಥಿಗಳ ರಾಶಿ ರಾಶಿ ಚಪ್ಪಲಿಗಳು ಮಳೆಯಲ್ಲಿ ತೊಪ್ಪೆಯಾಗುತ್ತಾ ಬಿದ್ದಿದ್ದವು. ಗುರುಗಳು ಒಳಗೆ ಕರೆದು ನನ್ನ ಕಥೆಗೆ ಪೂರಕವಾದ ಇನ್ನಷ್ಟು ಕಥೆಗಳನ್ನು ತಮ್ಮ ನೆನಪಿನ ಪೆಟ್ಟಿಗೆಯಿಂದ ಬಿಚ್ಚಿಟ್ಟರು. ಅಷ್ಟೇ ಅಲ್ಲದೆ ತಾವೇ ಸ್ವತಃ ಬಂದು ಚಿತ್ರೀಕರಣಕ್ಕೆ ಸಹಾಯ ಮಾಡುವುದಾಗಿ ಭರವಸೆ ಇತ್ತರು. ದೇಶ ವಿದೇಶಗಳಲ್ಲಿ ಯಕ್ಷಗಾನದ ಕುರಿತಾಗಿ ಪ್ರಾತ್ಯಕ್ಷಿಕೆಗಳನ್ನು ಕೊಟ್ಟಿರುವ, ಯಕ್ಷಗಾನದ ಕೆಲವೇ ಜೀವಂತ ಶಾಸ್ತ್ರಜ್ಞರುಗಳಲ್ಲಿ ಒಬ್ಬರಾಗಿರುವ, ಒಂದು ಯಕ್ಷಗಾನ ಶಾಲೆಯ ಪ್ರಾಚಾರ್ಯರೂ ಆಗಿರುವ ಇಂಥಾ ಮೇಧಾವಿ ನನ್ನ ಕಿರುಚಿತ್ರಕ್ಕಾಗಿ ಪೂನಾದವರೆಗೆ ಬರುತ್ತಾರೆಯೇ ಎಂಬ ಕಲ್ಪನೆಯೇ ನನಗೆ ವಿಸ್ಮಯ ನೀಡಿತು. ಆದರೆ ಅವರ ಬೆಂಬಲ ಸಿಕ್ಕಿದ್ದು ನನಗೆ ಯೋಚಿಸಿದ್ದಕ್ಕಿಂತಲೂ ಹೆಚ್ಚಿನದ್ದನ್ನು ಪಡೆದಂತಾಗಿತ್ತು.

beauty of yakshaganaಸರಿ, ಪೂನಾಕ್ಕೆ ಹಿಂದೆ ಹೋದವನೇ, ಗುರು ಸಂಜೀವರು ಹೇಳಿದ್ದ ಅಸಂಖ್ಯ ಕಥೆಗಳಲ್ಲಿ ಅನೇಕವನ್ನು ಬಳಸಿಕೊಂಡು ನನ್ನ ಕಥೆಯನ್ನು ಇನ್ನಷ್ಟು ಬಲಗೊಳಿಸಿದೆ. ಚಿತ್ರೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡೆ. ಗುರು ಸಂಜೀವರು ತಮ್ಮ ಪತ್ನಿ, ಮಗನೂ ಸೇರಿದಂತೆ ಸುಮಾರು ಒಂಭತ್ತು ಜನರ ತಂಡದೊಡನೆ ಪೂನಾಕ್ಕೆ ಬಂದರು. (ಇಲ್ಲಿ ನಾನು ಈ ಇಡೀ ಪ್ರಕ್ರಿಯೆಯಲ್ಲಿ ನನ್ನ ತಂದೆಯ ಸಹಕಾರ, ಉಡುಪಿಯ ಹೇರಂಜೆ ಕೃಷ್ಣ ಭಟ್ಟರ ಸಹಕಾರ ಮರೆಯುವಂತಿಲ್ಲ) ಅವರ ಪತ್ನಿ ಹಾಗೂ ಮಗನೂ ಸೇರಿದಂತೆ ನನ್ನ ಕಿರಿಚಿತ್ರದಲ್ಲಿ ಪಾತ್ರವಹಿಸಿದರು. ಪೂನಾದ ಸಂಸ್ಥೆಯಲ್ಲಿ ಅತಿಥಿಗಳನ್ನು ಇರಿಸಿಕೊಳ್ಳಲು ಭಾರೀ ಏನೂ ವ್ಯವಸ್ಥೆ ಇರಲಿಲ್ಲ. ಇರುವ ವ್ಯವಸ್ಥೆಯಲ್ಲೇ ಸುಧಾರಿಸಿಕೊಂಡು ಇಡೀ ತಂಡ ಪೂನಾದಲ್ಲಿ ಮೂರು ದಿನ ಕಳೆಯಿತು.

Yakshottamaಗುರು ಸಂಜೀವರೂ ಸೇರಿದಂತೆ ಇಬ್ಬರು ಕಲಾವಿದರು ಚಿತ್ರೀಕರಣದ ದಿನ ವೇಷ ಕಟ್ಟಲು ಆರಂಭಿಸಿದರು. ಈ ಸುಳಿವು ನಮ್ಮ ಇಡೀ ಸಂಸ್ಥೆಯಲ್ಲಿ ಹರಡಿತು. ವಿದ್ಯಾರ್ಥಿಗಳಿಗೆಲ್ಲವೂ ಈ ಅಧ್ಬುತವನ್ನು ನೋಡುವ ಸಡಗರ. ಕ್ಯಾಂಪಸ್ಸಿನೆಲ್ಲೆಡೆ ಅಂದು ಇದರದೇ ಮಾತು. ಅತ್ತಿತ್ತ ಸುಳಿದಾಡುವವರೆಲ್ಲರೂ ಚೌಕಿಯೊಳಗೆ ಇಣುಕಿ ನೋಡಿ ಈ ಕಲಾವಿದರಿಗೆ ಕೊಟ್ಟ ತೊಂದರೆ ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಚಿತ್ರೀಕರಣ ಎಂಬುದು ಭಾರೀ ನಿಧಾನದ ಪ್ರಕ್ರಿಯೆ ಹಾಗೂ ಇದರಲ್ಲಿ ನೇರ ಭಾಗಿಗಳಾಗದವರಿಗೆ ಹೊತ್ತು ಸರಿಯುವುದು ಭಾರೀ ಕಷ್ಟವೇ ಸರಿ. ಇಂಥಾ ಸಂದರ್ಭದಲ್ಲಿ ಯಕ್ಷಗಾನ ವೇಷ ಧರಿಸಿ ತಮ್ಮ ಶಾಟ್ ತಯಾರಾಗುವವ ವರೆಗೆ ಸುಮ್ಮನೆ ಕೂರುವುದು ಭಾರೀ ಕಷ್ಟವೇ ಸರಿ. ಪೂನಾದ ಬಿಸಿಲ ಧಗೆ, ಚಿತ್ರೀಕರಣಕ್ಕೆ ಬಳಸುವ ಪ್ರಖರ ಬೆಳಕಿನ ಝಳ ಎಲ್ಲವನ್ನೂ ಸಹಿಸುತ್ತಾ ಗುರು ಸಂಜೀವರು ಹಾಗೂ ಅವರ ತಂಡ (ಅವರ ಪುಟಾಣಿ ಮಗನೂ ಸೇರಿದಂತೆ) ಮೂರು ನಿರಂತರ ದಿನ ಚಿತ್ರೀಕರಣದಲ್ಲಿ ಪಾಲುಗೊಂಡರು. ಚಿತ್ರದ ಒಂದು ದೃಶ್ಯಕ್ಕೆ ಅನೇಕ ಸಹ ಕಲಾವಿದರು ಪ್ರೇಕ್ಷಕರಾಗಿ ನಟಿಸಬೇಕಿತ್ತು. ನಮ್ಮಲ್ಲಿ ಬೇಕಾದಷ್ಟು ಜನ ಇರಲಿಲ್ಲ. ಆಗ ಪಾತ್ರ ಮಾಡದೇ ಇದ್ದ ಗುರು ಸಂಜೀವರು ಸ್ವತಃ ಕಂಬಳಿಯೊಂದನ್ನು ಹೊದ್ದು ಬದಿಯಲ್ಲಿ ಕುಳಿತದ್ದು ಇನ್ನೂ ನನಗೆ ನೆನಪಿದೆ. ಅವರೊಡನೆ ಕೆಲಸ ಮಾಡುತ್ತಾ, ಇವರು ಇಂಥಾ ಹಿರಿಯ, ಮೇಧಾವಿ ಕಲಾವಿದ ಎನ್ನುವುದು ಮರೆತೇ ಹೋಗುವಂಥಾ ಸರಳ ವ್ಯಕ್ತಿ ಈ ಗುರು ಸಂಜೀವ ಸುವರ್ಣರು.

before the claimax shotಚಿತ್ರೀಕರಣದ ಮೂರು ದಿನಗಳನ್ನು ಮುಗಿಸಿ ಗುರು ಸಂಜೀವರು ಹಾಗೂ ಅವರ ತಂಡ ಉಡುಪಿಗೆ ಹಿಂದಿರುಗುವಾಗ ಕೇವಲ ನಾನು ಮಾತ್ರ ಅಲ್ಲ, ನನ್ನ ಇಡೀ ಚಿತ್ರೀಕರಣ ತಂಡಕ್ಕೆ ಕಣ್ಣಂಚಲ್ಲಿ ನೀರಿತ್ತು. ಅವರ ಉಪಕಾರವನ್ನು ನಾವೆಂತು ಮರೆಯುವುದು ಸಾಧ್ಯ? ಯಾವುದೇ ಧನಾಪೇಕ್ಷೆಯಿಲ್ಲದೇ, ತಮ್ಮ ಎಲ್ಲಾ ಕೆಲಸಗಳ ಒತ್ತಡದಲ್ಲಿಯೂ, ನನ್ನ ಪ್ರೀತಿಯ ಕರೆಗೆ ಓ ಗೊಟ್ಟು ಪೂನದವರೆಗೆ ಬಂದು ನನಗಿತ್ತ ಸಹಾಯ ಹಸ್ತಕ್ಕೆ ನಾನೆಂತು ಧನ್ಯವಾದ ತಿಳಿಸಲಿ ಈ ಮಹನೀಯರಿಗೆ?

ಗುರು ಸಂಜೀವ ಸುವರ್ಣರ ತಂಡ ಭಾಗಿಯಾಗಿದ್ದ ನನ್ನ ಕಿರುಚಿತ್ರ ‘ಯಕ್ಷೋತ್ತಮ’ ನಿಮಗಾಗಿ ಇಲ್ಲಿದೆ.

ಯಕ್ಷೋತ್ತಮಕ್ಕಿಂತ ಹಿಂದೆ ನಾನು ಮಾಡಿದ ‘ಗುರು ಸಂಜೀವ ಸುವರ್ಣರ ಪೂರ್ವರಂಗ ಪುನರುತ್ಥಾನ ಪ್ರಯೋಗದ’ ದಾಖಲೀಕರಣ ಇಲ್ಲಿ ನಿಮಗಾಗಿ ಕೊಟ್ಟಿದ್ದೇನೆ.

This entry was posted in Daily Blog, Society. Bookmark the permalink.

5 Responses to ಯಕ್ಷೋತ್ತಮನಿಗೆ ನಮಸ್ಕಾರ

 1. apkrishna ಹೇಳುತ್ತಾರೆ:

  ಅಭಯ, ಪೂನಾದ ತನಕ ಸುವರ್ಣರು ತಮ್ಮ ತಂಡದೊಂದಿಗೆ ಬಂದದ್ದು ಮತ್ತು ಅವರು ಸಾಕ್ಷ್ಯ ಚಿತ್ರಕ್ಕೆ ಕೊಟ್ಟ ನೆರವು ಅವರ ದೊಡ್ಡತನದ ದ್ಯೋತಕ ಹೇಗೋ, ಅದೇ ರೀತಿ ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು ಮತ್ತು ಅದನ್ನು ಸಾಧಿಸಿದ್ದು ನಿನ್ನ ಹಿರಿ ಸಾಮರ್ಥ್ಯದ ಕಿರು ದ್ಯೋತಕ. ಇನ್ನಷ್ಟು ಇಂಥ ಯಶಸ್ವೀ ಸಾಹಸ ನಿನ್ನದಾಗಲಿ.

  – ರಾಧಾಕೃಷ್ಣ

 2. ಜಯಲಕ್ಷ್ಮಿ ಹೇಳುತ್ತಾರೆ:

  Guru Bannanje Sanjeeva Suvarnara bagge odide…avarannu great enisitu,haageye udayavaniyalli prakatavaada lekhanavannuu odide,ashtu dodda kalaavida,thanage akshara jnaana illa anta vinayadinda,praamaaNikavaagi heLikondaddu nijakkuu doddadu!!

 3. ಸಂತೋಷ ಹೆಚ್ಚಳ ಹೇಳುತ್ತಾರೆ:

  ಜಯಕ್ಕಾ ಬನ್ನಂಜೆ ಸಂಜೀವ ಸುವರ್ಣರ ದೊಡ್ಡತನದೊಂದಿಗೆ ನಾಲ್ಕಕ್ಷರ ಕಲಿಯುವುದೇ ಜೀವನದ ಯಶಸ್ಸಿಗೆ ದಾರಿ ಎಂದು ಭ್ರಮಿಸಿದ ನಮಗೂ ಒಂದು ಪಾಠ ಇಲ್ಲುಂಟಲ್ವಾ? ಅಲ್ಲದೇ ಚಿಲ್ಲರೇ ಲೆಕ್ಕಗಳಿಗೆ ಕ್ಯಾಲ್ಕುಲೇಟರ್, ಪುಟಕೋಸಿ ನೆನಪುಗಳಿಗೆ ಮೊಬೈಲ್, ಮಸಿಷ್ಕದ ಪೂರ್ಣ ಶಕ್ತಿಯನ್ನು ಹಡಬೇ ಬಿಟ್ಟು ಗಣಕವೋ ಅಂತರ್ಜಾಲದ ಮಹಿಮೆಯಲ್ಲೋ ಕಳೆದುಹೋಗಿರುವವರಿಗೆ ಮೌಖಿಕ ಪರಂಪರೆಯ ಮಹತ್ವವನ್ನು ಸಾರುವಂತೆಯೂ ಇದೆ ಎನ್ನಬಹುದಲ್ಲವೇ?
  ಸಂತೋಷ ಹೆಚ್ಚಳ

 4. jayalakshmi ಹೇಳುತ್ತಾರೆ:

  agreed Ashokanna:)

 5. dattatri ಹೇಳುತ್ತಾರೆ:

  ತುಂಬಾ ಚನ್ನಾಗಿ ನಿರೂಪಿಸಿದ್ದೀರಿ. ದೊಡ್ಡವರು ದೊಡ್ಡವರೆನಿಸಿಕೊಳ್ಳುವುದೇ ಹೀಗೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s