ಒಳ್ಳೆ ಸಿನೆಮಾ ಎನ್ನುವ ಕನಸು


ಮೇ ಮೂವತ್ತಕ್ಕೆ ಮಂಡ್ಯದಲ್ಲಿ, ಮಂಡ್ಯ ಚಿತ್ರ ಸಮುದಾಯವು ‘ಗುಬ್ಬಚ್ಚಿಗಳು’ ಪ್ರದರ್ಶನವನ್ನು ಏರ್ಪಡಿಸಿತ್ತು. ನಿರ್ಮಾಪಕ ಬಿ. ಸುರೇಶ್, ಚಿತ್ರದ ಬಾಲ ನಟಿ ಪ್ರಕೃತಿ, ನಾಗತಿಹಳ್ಳಿ ಚಂದ್ರ ಶೇಖರ್ ಹಾಗೂ ನನ್ನನ್ನು ಸೇರಿದಂತೆ ಸುಮಾರು ೧೫೦ ಜನ ಮಂಡ್ಯದ ಸಭಾಂಗಣವೊಂದರಲ್ಲಿ ಕುಳಿತು ಚಿತ್ರವನ್ನು ಮತ್ತೊಮ್ಮೆ ನೋಡಿ ಸಂವಾದದಲ್ಲಿ ಭಾಗಿಗಳಾದೆವು. ಮಂಡ್ಯದ ಜನ ೧೫೦ರಷ್ಟು ಸಂಖ್ಯೆಯಲ್ಲಿ ಇಪ್ಪತ್ತು ರೂಪಾಯಿ ಟಿಕೇಟ್ ಕೊಟ್ಟು ಬಂದು ಚಿತ್ರವನ್ನು ನೋಡಿದರು. ಇದು ನಿಜಕ್ಕೂ ಅಚ್ಚರಿಯ ವಿಷಯವೇ ಆಗಿತ್ತು ನನ್ನ ಮಟ್ಟಿಗೆ. ಪ್ರದರ್ಶನದ ನಂತರ ಒಂದಷ್ಟು ಹೊತ್ತು ಸಂವಾದ ನಡೆಯಿತು. ಸಂವಾದದಲ್ಲಿ ಮತ್ತದೇ ಹಲವು ಕಡೆ ಕೇಳಿರುವಂಥದ್ದೇ ಮಾತು ಕೇಳಿ ಬಂತು. ಇಂಥಾ ಸಿನೆಮಾ ನಿಜಕ್ಕೂ ಜನ ನೋಡಬೇಕು. ಇಂಥಾ ಸಿನೆಮಾ ಯಾಕೆ ರಿಲೀಸ್ ಆಗೋದಿಲ್ಲ? ಇಂಥಾ ಸಿನೆಮಾಗಳನ್ನು ಶಾಲಾ ಮಕ್ಕಳಿಗೆ ಶಿಕ್ಷಣದ ಭಾಗವಾಗಿ ತೋರಿಸಬೇಕು. ಇಂಥಾ ಸಿನೆಮಾವನ್ನು… ಆದರೆ ಯಾಕೆ ಇದ್ಯಾವುದೂ ಆಗುತ್ತಿಲ್ಲ?

ಇದಕ್ಕೆ ಉತ್ತರವಾಗಿ ನಮ್ಮಲ್ಲಿನ ಪ್ರದರ್ಶಕರಲ್ಲಿ ಇಚ್ಛಾ ಶಕ್ತಿಯಿಲ್ಲ, ನಿರ್ಮಾಪಕರಿಗೆ ಆಸಕ್ತಿ ಇಲ್ಲ, ಜನರಿಗೆ ಬೇಕಿಲ್ಲ, ಜನರಿಗೆ ಒಳ್ಳೆಯದನ್ನು ಗ್ರಹಿಸುವ ಶಕ್ತಿ ಇಲ್ಲ ಹೀಗೆ ನಿರ್ಮಾಪಕರು, ಪ್ರದರ್ಶಕರ ಮೇಲೂ, ಪ್ರದರ್ಶಕರು ಪ್ರೇಕ್ಷಕರ ಮೇಲೂ ಪ್ರೇಕ್ಷಕರು ನಿರ್ಮಾಪಕ – ಪ್ರದರ್ಶಕರ ಮೇಲೂ ಆರೋಪ ಮಾಡಿಕೊಂಡು ಕನ್ನಡ ಚಿತ್ರೋದ್ಯಮದ ದುರ್ಗತಿಗೆ ಮರುಗುವುದು ಸಾಮಾನ್ಯ. ಆದರೆ ಇದರ ಮೂಲ ಇನ್ನೆಲ್ಲೋ ಇದೆಯೇ?

‘ಕಮರ್ಷಿಯಲ್ ಸಿನೆಮಾ’ ಎನ್ನುವುದು ಒಂದು ಧಂದೆ ಎನ್ನುವಷ್ಟರ ಮಟ್ಟಿಗೆ ಹೀಗಳೆಯುತ್ತಿರುವ ಸಂದರ್ಭದಲ್ಲಿ ‘ಆರ್ಟ್ ಸಿನೆಮಾ’ ಎನ್ನುವುದೂ ಒಂದು ಧಂಧೆಯಾಗುತ್ತಿದೆಯೇ? ಗಾಂಧೀ ನಗರದ ಜನರ ಮಾತಿನಲ್ಲಿ ಈ ಚಿತ್ರಗಳು ‘ಅವಾರ್ಡ್ ಪಿಚ್ಚರ್’ಗಳು. ಇವಕ್ಕೆ ಅವಾರ್ಡ್ ಬಂದಿದೆಯೇ ಇಲ್ಲವೇ ಎನ್ನುವುದು ನಗಣ್ಯ. ಆದರೆ ಗಂಭೀರ ಸಿನೆಮಾಕ್ಕೆ ಗಾಂಧೀನಗರದ ಪರ್ಯಾಯ ಶಬ್ದವೇ ‘ಅವಾರ್ಡ್ ಪಿಚ್ಚರ್’ ಎಂದು ಇರುವುದು ಈ ಸೀರಿಯಸ್ ಸಿನೆಮಾವನ್ನೂ ಧಂಧೆಯಾಗಿ ಕಾಣುವ ಪ್ರಯತ್ನ ಎಂದು ನನಗೆ ಅನಿಸುತ್ತಿದೆ. (ಗಾಂಧೀನಗರ ಎನ್ನುವ ಪ್ರಯೋಗದ ಅರ್ಥ ಆಗದಿದ್ದವರಿಗೆ: ಗಾಂಧೀನಗರ ಕನ್ನಡದ ಹಾಲಿವುಡ್ ಎನ್ನಲಡ್ಡಿ ಇಲ್ಲ. ಇಲ್ಲಿ ಕಮರ್ಷಿಯಲ್ ಸಿನೆಮಾ ತಯಾರಿಕೆಯ ಕೇಂದ್ರವಿದೆ ಎನ್ನಬಹುದು. ಹಾಗಾಗಿ ಕಮರ್ಷಿಯಲ್ ಸಿನೆಮಾದವರನ್ನು ಸಾಮಾನ್ಯವಾಗಿ ಗಾಂಧೀನಗರದವರು ಎಂದು ಪರಿಚಯ ಹಿಡಿಯುವುದು ಸಾಮಾನ್ಯ!)

ಕರ್ನಾಟಕ ಸರಕಾರ ಉತ್ತಮ ಚಿತ್ರಗಳಿಗೆ ಪ್ರೋತ್ಸಾಹ ಕೊಡಲೆಂದೇ ಅನೇಕ ಸವಲತ್ತುಗಳನ್ನು ಕೊಡುತ್ತಿದೆ. ತೆರಿಗೆ ವಿನಾಯಿತಿ, ಸಹಾಯ ಧನದ ಕೊಡುಗೆ ಇತ್ಯಾದಿಗಳು ಕರ್ನಾಟಕ ಸರಕಾರದಿಂದ ಬಹಳ ಕಾಲದಿಂದ ಚಿತ್ರೋದ್ಯಮಕ್ಕೆ ಇರುವ ಉದಾರ ಕೊಡುಗೆಗಳಾಗಿವೆ. ಇದರಿಂದ ಇಲ್ಲಿ ಗಂಭೀರ ಚಿತ್ರ ನಿರ್ಮಾಣ ಒಂದು ಮಟ್ಟಿಗೆ ಜೀವ ಹಿಡಿದು ನಿಲ್ಲಲು ಸಾಧ್ಯವಾಗಿರುವುದು. ಇಲ್ಲವಾದರೆ, ಇಲ್ಲಿ ಗಂಭೀರ ಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರಿಗೆ ಆರ್ಥಿಕವಾಗಿ ಬೇರೆ ಯಾವುದೇ ರೀತಿಯ ಸಹಾಯ ಇಲ್ಲ. ಆದರೆ ಈ ಸಹಾಯ ಹಸ್ತ ನಿಜಕ್ಕೂ ಸಮರ್ಥನೀಯವೇ ಎನ್ನುವುದು ನನ್ನ ಪ್ರಶ್ನೆ. ಏಕೆಂದರೆ, ತೆರಿಗೆ ವಿನಾಯಿತಿ ಸಿಗುತ್ತದೆ, ಎನ್ನುವ ಕಾರಣಕ್ಕಾಗಿಯೇ ಇಂದು ಕನ್ನಡ ಚಿತ್ರೋದ್ಯಮದಲ್ಲಿ ರೀಮೇಕ್ ಚಿತ್ರಗಳನ್ನು ಸ್ವಮೇಕ್ ಎಂದು ಸಾಧಿಸುವ, ಸಹಾಯ ಧನ ಪಡೆಯಲೇಂದೇ ಸಿನೆಮಾ ಮಾಡಿಸುವ ನಿರ್ಮಾಪಕರು ಹುಟ್ಟಿಕೊಂಡಿದ್ದಾರೆ. ಈ ಇಡೀ ಜಾಲ ಕನ್ನಡ ಚಿತ್ರರಂಗದ ನಿಯತ ಪ್ರದರ್ಶನಗಳನ್ನು ಕಾಣುವುದೇ ಇಲ್ಲ ಎನ್ನುವ ಪರಿಸ್ಥಿತಿ ಎದ್ದಿದೆ! ಇಲ್ಲಿ ಇಪ್ಪತ್ತೈದು ಲಕ್ಷ ಸಹಾಯ ನಿಧಿ ಸಿಗುವ ಅವಕಾಶಕ್ಕಾಗಿ ಕೇವಲ ಹತ್ತು-ಹದಿನೈದು ಲಕ್ಷದಲ್ಲೇ ಸಿನೆಮಾ ಎಂದು ಹತ್ತೋ ಹನ್ನೊಂದೋ ರೀಲು ತೋರಿಸುವ ನಿರ್ಮಾಪಕರಿಗೆ ಏನೂ ಕಡಿಮೆ ಇಲ್ಲ! ಇದರ ನಡುವೆ, ಕಾಸರವಳ್ಳಿ, ಶೇಷಾದ್ರಿಯಂಥಾ ಕೆಲವು ನಿಜವಾದ ಗಂಭೀರ ಸಿನೆಮಾ ನಿರ್ದೇಶಕರು ಸಿನೆಮಾ ಮಾಡುವಂಥಾ ಪರಿಸ್ಥಿತಿ ನಮ್ಮಲ್ಲಿದೆ. ಇಂಥಾ ಗೊಂದಲದ ಗೂಡಿನಲ್ಲಿ ಜನರು ಒಳ್ಳೆಯ ಚಿತ್ರಗಳನ್ನೂ ಸಂಶಯದಲ್ಲಿ ನೋಡುವಂತಾಗಿರುವುದು ಶೋಚನೀಯ.

…ಹೀಗಾಗಿ ನಮ್ಮಲ್ಲಿನ ಸಹಾಯಧನ, ಪ್ರೋತ್ಸಾಹಕ ನಿಧಿ ಇತ್ಯಾದಿಗಳ ಇರುವಿಕೆ ಸರಿಯೇ ಎಂದು ನನ್ನ ಯೋಚನೆ. ಇಂಥವ್ಯಾವವೂ ಇಲ್ಲದ ಪರಿಸರದಲ್ಲಿ ಇಂಥದ್ದೊಂದನ್ನು ಮಾಡಲೇ ಬೇಕು ಎಂದು ಮಾಡುವ ನಿರ್ಮಾಪಕ ನಿರ್ದೇಶಕರಿಂದ ವರ್ಷಕ್ಕೆ ಕೇವಲ ಎರಡೋ ಮೂರೋ ಚಿತ್ರವೇ ಬಂದರೂ ಯಾವುದೇ ಸಹಾಯ ಧನದ ಸಹಕಾರವಿಲ್ಲದೇ ಜನರಿಗೆ ಅವು ತಲುಪಿದರೆ ಆಗ ಜನರೂ ಇಂಥದ್ದನ್ನೇ ನೋಡಿ ಪ್ರೋತ್ಸಾಹಿಸಲಾರರೇ? ಆಗ ಕೇವಲ ಆಯ್ದ ಪ್ರೇಕ್ಷಕರಿಗೆ ಸಿನೆಮಾ ತೋರಿಸಿ ಅವರಿಂದ ಅಪೇಕ್ಷಿತ ಪ್ರತಿಕ್ರಿಯೆಯನ್ನೇ ಪಡೆಯುವ ನಮ್ಮ ಪಾಡೂ ತಪ್ಪದೇ? ಮತ್ತೆ ಇಂಥಾ ಸಿನೆಮಾ ಯಾಕೆ ಜನರಿಗೆ ತಲುಪುವುದಿಲ್ಲ? ಇವ್ಯಾಕೆ ರಿಲೀಸ್ ಆಗುವುದಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಈ ರಾಜ-ಮಹಾರಾಜರ ಕಾಲದಂತೆ ಪ್ರಜಾಪ್ರಭುತ್ವದ ದಿನದ ಸರಕಾರವೂ ಉಂಬಳಿ, ದಾನ ನೀಡುತ್ತಿರುವುದು ಕಾರಣವಾಗಿರಬಹುದೇ? ಯೋಚಿಸಿ, ಪ್ರತಿಕ್ರಿಯಿಸಿ… ನಿಮ್ಮ ಅನಿಸಿಕೆಗಳಿಗೆ ಕಾದಿರುವೆ…

This entry was posted in Film Craft, Society. Bookmark the permalink.

2 Responses to ಒಳ್ಳೆ ಸಿನೆಮಾ ಎನ್ನುವ ಕನಸು

 1. ಅಶೋಕವರ್ಧನ ಹೇಳುತ್ತಾರೆ:

  ಪ್ರಜಾಸತ್ತಾತ್ಮಕವಾಗಿ ಶುದ್ಧ ಸಾಮಾಜಿಕ ಆಡಳಿತಕ್ಕೆ ನಿಯೋಜಿತವಾದವರು ಹುಟ್ಟಿನ ಆಕಸ್ಮಿಕದ ರಾಜಸತ್ತೆಗೆ ಪರ್ಯಾಯ ಎಂದು ಭ್ರಮಿಸಿ ಸೃಜನಾತ್ಮಕ ಭಾವನಾತ್ಮಕ ವಿಭಾಗಗಳಾದ ಕಲೆ, ಸಾಹಿತ್ಯ, ಧರ್ಮಗಳಲ್ಲಿ ಇನ್ನಿಲ್ಲದಂತೆ ತೊಡಗಿಕೊಂಡಿರುವುದರ ಪರಿಣಾಮವಿದು. ಯಾವುದೇ ಉದ್ದಿಮೆಗಳಲ್ಲಿ ನೇರ ತೊಡಗುವುದಲ್ಲ. ಎಲ್ಲಾ ಉದ್ದಿಮೆಗಳಿಗೆ ಪ್ರಶಸ್ತವಾದ ಆದರೆ ಸಾಮಾಜಿಕ ದ್ರೋಹವಾಗದ ವಾತಾವರಣ ಮಾತ್ರ ಕಲ್ಪಿಸಬೇಕಾದವರು ತಾವು ಎಂಬ ವಿವೇಚನೆ ಸರಕಾರಕ್ಕೆ ಬರುವವರೆಗೆ ಈ ಅಂಧಕಾರದಿಂದ ಬಿಡುಗಡೆಯಿಲ್ಲ. ಪುಸ್ತಕೋದ್ಯಮದ ಗಾಢ ಅನುಭವದಿಂದ ಬಂದ ನನ್ನ ಬಹುಕಾಲದ ಈ ವಾದಕ್ಕೆ ಅಭಯನ ಬರಹ ಇನ್ನೊಂದು (ಪೂರಕ) ಉದಾಹರಣೆ.
  ಅಶೋಕವರ್ಧನ

 2. apkrishna ಹೇಳುತ್ತಾರೆ:

  ಅಭಯ,

  ಬೇಲಿಯನ್ನು ನಮಗೆ ನಾವೇ ಕಟ್ಟಿಕೊಳ್ಳಬೇಕು. ಸರಕಾರದ ಸಹಾಯಧನ ಅಸಾಹಯಕರಿಗೆ ಅಶಕ್ತರಿಗೆ ಸರಿ. ಆದರೆ ಇವುಗಳ ದುರುಪಯೋಗ ಸಾರ್ವತ್ರಿಕವಾಗುತ್ತಿದೆ – ಸರಕಾರೀ ಕೃಪಾಕಟಾಕ್ಷದಲ್ಲಿಯೇ. ಅಷ್ಟಕ್ಕೂ ಸರಕಾರ ಅಂದರೆ ಯಾರು? ನಮ್ಮದೇ ಪ್ರತಿರೂಪ.

  ಹೈನುಗಾರಿಕೆಗೆ ಇರುವ ಸಹಾಯಧನ ಹಟ್ಟಿ ಇಲ್ಲದವ ಹೊಡೆದುಕೊಂಡು ಹೆಚ್ಚು ಬಡ್ಡಿ ಬರುವ ಬ್ಯಾಂಕಿನಲ್ಲಿಟ್ಟು ಮತ್ತಷ್ಟು ಹಣ ವೃದ್ಧಿಸಿಕೊಂಡ. ತನ್ನ ಸಾಹಸವನ್ನು ಎಲ್ಲರೆದುರು ಹೇಳಿಕೊಂಡು ಖುಷಿ ಪಡುವುದನ್ನು ಮತ್ತು ಸೇರಿದ ಮಂದಿ ಆತನ ಜಾಣ್ಮೆಯನ್ನು ಮೆಚ್ಚಿಕೊಂಡದ್ದನ್ನು ಕಂಡಿದ್ದೇನೆ. ಸಹಾಯಧನದ ವಿಷಯದಲ್ಲಿ ಇಂಥವು ಹಲವಿವೆ. ಇದರ ಒಂದು ರೂಪವನ್ನು ನೀನು ನಿರೂಪಿಸಿದ್ದಿ.

  ಕಲಾ ಸಿನೆಮಾ (?) ಅಂದರೆ ಉತ್ತಮ ಸಿನೆಮಾಕ್ಕೆ ಸರಕಾರದ ಪ್ರೋತ್ಸಾಹಕ್ಕಿಂತ ಬೇಕಾದದ್ದು ಪ್ರೇಕ್ಷಕರ ಪ್ರೋತ್ಸಾಹ. ನನಗನ್ನಿಸುವ ಹಾಗೆ ಪ್ರೇಕ್ಷಕರಿದ್ದಾರೆ. ಆದರೆ ಇಲ್ಲವೆನ್ನುವ ಮಂದಿ ಮಾತ್ರ ಬೇರೆ. ಅವರೇ ಪ್ರೇಕ್ಷಕರ ಆಸಕ್ತಿ/ರುಚಿ ಶುದ್ಧಿಯನ್ನು ನಿರ್ಧರಿಸುವುದು ದುರಂತ. ಪತ್ರಿಕೆಗಳಲ್ಲಿ ಸಂಪಾದಕ ವರ್ಗ ನಿರ್ಧರಿಸುವ ಹಾಗೆ. ನಿಧಾನವಾಗಿ ಇದುವೇ ಸಮುದಾಯದ ಅಭಿಪ್ರಾಯವಾಗಿ ಬಿಡುತ್ತದೆ.

  ಕಲೆ-ಸಂಸ್ಕೃತಿಯನ್ನು ಮೆಚ್ಚುವ ಸವಿಯುವ ಮನಸ್ಸು ಬೆಳೆಯಿಸುವತ್ತ ಗಮನ ಕೊಡಬೇಕಾಗಿದೆ.

  ರಾಧಾಕೃಷ್ಣ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s