ಸಾಹಸಮಯ ಜೀವನದ ಸಾಹಸೀ ಚಿತ್ರೀಕರಣ


ಚಲನಚಿತ್ರ ಕ್ಯಾಮರಾ ತಯಾರಕರಲ್ಲಿ ಪ್ರಮುಖರಾದ ಲ್ಯುಮಿಯರ್ ಸಹೋದರರು, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದರು. ಮೊದಲು ಲ್ಯುಮಿಯರ್ ಸಹೋದರರು ತಮ್ಮ ಕ್ಯಾಮರಾವನ್ನು ದಾಖಲೀಕರಣ ಉಪಕರಣವಾಗಿ ಬಳಸಲಾರಂಭಿಸಿದರು. ಕ್ಯಾಮರಾ ಮಾರಟಕ್ಕೆ ಸಹಾಯವಾಗಲಿ ಎಂದು ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಕೆಲವು ದೃಶ್ಯಗಳನ್ನು ಸೆರೆಹಿಡಿದು ಅಲ್ಲಿನ ಜನಕ್ಕೆ ತೋರಿಸಿದರು. ಮೊತ್ತ ಮೊದಲಿನ ಸಾಕ್ಷ್ಯಚಿತ್ರಗಳು ಹೀಗೆ ನಿರ್ಮಾಣವಾದುವು!

ಇಂದು ಚಲನಚಿತ್ರ ಉದ್ಯಮ ದೈತ್ಯಾಕಾರದಲ್ಲಿ ಬೆಳೆದು ನಿಂತಿದೆ. ಸಾಕ್ಷ್ಯ ಚಿತ್ರಗಳು ಇಂದಿಗೂ ಒಂದು ದೃಶ್ಯ ಮಾಧ್ಯಮದ ಪ್ರಮುಖ ಅಂಗವಾಗಿವೆ. ಸಾಕ್ಷ್ಯಚಿತ್ರ ಎನ್ನುವುದರ ಸರಿಯಾದ ವಿವರಣೆ ಏನು ಎನ್ನುವುದು ಇಂದಿಗೂ ಚರ್ಚೆಯಲ್ಲಿದೆಯಾದರೂ ವಾಸ್ತವದ ಚಿತ್ರಣ ವಾಸ್ತವಕ್ಕೆ ಅತಿ ಹತ್ತಿರವಾಗಿ ಎಂದು ಸುಮಾರಾಗಿ ಸಾಕ್ಷ್ಯಚಿತ್ರಗಳನ್ನು ಗುರುತಿಸಲಾಗುತ್ತದೆ. ಕಥಾಚಿತ್ರ ಎನ್ನುವುದು ಕಲ್ಪನೆಯ ಕೂಸು ಎನ್ನುವುದಾದರೆ, ಸಾಕ್ಷ್ಯ ಚಿತ್ರಗಳು ವಾಸ್ತವದ ದೃಶ್ಯಗಳನ್ನು ಒಂದು ನಿರ್ದಿಷ್ಟ ಕ್ರಮದಿಂದ ಜೋಡಿಸಿ ಕಥೆಯನ್ನು ಹೇಳುವ ಕ್ರಮ ಎನ್ನಬಹುದು. ಆದರೆ ಈ ಕ್ರಮದಿಂದ ಜೋಡಿಸುವ ಪ್ರಕ್ರಿಯೆಯಿಂದಾಗಿ ಸಾಕ್ಷ್ಯಚಿತ್ರಗಳಲ್ಲೂ ಚಿತ್ರಕಾರನ ಬೇಕು-ಬೇಡಗಳು ಸೇರಿ ಅವೂ biased ಕಥನವೇ ಆಗುತ್ತವೆ. ಹಾಗಾಗಿ ಇವುಗಳೂ ಸತ್ಯದಿಂದ ದೂರವಾದವು ಎನ್ನುವ ವಾದವೂ ಇದೆ. ಈ ಸಂದರ್ಭದಲ್ಲಿ ೧೯೨೨ರಲ್ಲಿ ತಯಾರಾದ ನಾನೂಕ್ ಆಫ್ ದಿ ನಾರ್ತ್ (Nanook of the North) ಎನ್ನುವ ಚಿತ್ರದ ಕಥೆ ಬಹಳ ಸ್ವಾರಸ್ಯಕರವೂ ಸಾಹಸಮಯವೂ ಆಗಿದೆ.

ಆರ್ಕಟಿಕ್ ಪ್ರದೇಶದ ಎಸ್ಕಿಮೋ ಜನಗಳ ಬಗ್ಗೆ ಅತಿಕಡಿಮೆ ತಿಳುವಳಿಕೆ ಇರುವಂಥಾ ಸಂದರ್ಭದಲ್ಲಿ ರಾಬರ್ಟ್ ಫ್ಲಹರ್ಟಿ ಎಂಬ ಸಾಹಸಿ ಚಿತ್ರನಿರ್ದೇಶಕ ಸತತ ಒಂದು ವರ್ಷ ಎಸ್ಕಿಮೋಗಳೊಂದಿಗೆ ಜೀವಿಸಿ ಅವರ ನಿತ್ಯಜೀವನವನ್ನು ದಾಖಲಿಸುತ್ತಾ ಹೋದರು. ಫ್ಲಹರ್ಟಿ ಮತ್ತೆ ಮತ್ತೆ ಸಂಕಲನ ಮಾಡುತ್ತಾ ತಮ್ಮ ದಾಖಲೀಕರಣದಲ್ಲಿ ಒಂದು ಕಥೆಯನ್ನು ಕಾಣುತ್ತಾ ಹೋದರು. ಜೀವಿಸಲು ಅತಿ ಕಠಿಣ ಪ್ರದೇಶದಲ್ಲಿ ಜನಜೀವನ, ಬದುಕುವ ಅದಮ್ಯ ಉತ್ಸಾಹ, ಬದುಕಲು ಎಸ್ಕಿಮೋಗಳ ಹೋರಾಟ ಇವುಗಳೇ ಈ ಕಥನದ ಸಾರ. ಫ್ಲಹರ್ಟಿ ನಾನೂಕ್ ಹಾಗೂ ಆತನ ಕುಟುಂಬವನ್ನು ಕೇಂದ್ರವಾಗಿರಿಸಿಕೊಂಡು ಇಡೀ ಎಸ್ಕಿಮೋ ಜನಾಂಗದ ಬಗ್ಗೆ ಸಂಪೂರ್ಣ ಎನ್ನುವಂಥಾ ಕಥನವನ್ನು ತಯಾರಿಸಿದರು. ಇಲ್ಲಿ ಅವರ ನಿತ್ಯಜೀವನವೇ ಕಥೆ. ನಾಯಕ, ನಾಯಕಿ ಅಥವಾ ನಿರ್ದಿಷ್ಟ ಕಥಾ ಸಂಚಾರ ಇಲ್ಲ ಎನ್ನುವುದರಿಂದ ಇದು ಕಥಾ ಚಿತ್ರಗಳಿಂದ ದೂರ ಸರಿಯಿತು. ಅಂತೆಯೇ ಇದು ಕೇವಲ ದಾಖಲೀಕರಣ ಆಗಿರದೆ, ಫ್ಲಹರ್ಟಿ ಚಿತ್ರದಲ್ಲಿ ಬರುವ ಹೆಚ್ಚಿನ ದೃಶ್ಯಗಳನ್ನು ಮರುಸೃಷ್ಟಿಸಿ ಚಿತ್ರೀಕರಿಸಿದ್ದರಿಂದ, ನಾನೂಕ್‌ನ ಕುಟುಂಬ ಕಥನದ ಕೇಂದ್ರ ಬಿಂದುವಾದ್ದರಿಂದ ಅಂದು ಚಾಲ್ತಿಯಲ್ಲಿದ್ದ ನಿರೂಪಣೆಯನ್ನೊಳಗೊಂಡ ನ್ಯೂಸ್ ರೀಲ್ ದಾಖಲೀಕರಣದಿಂದ ಈ ಚಿತ್ರ ದೂರಸರಿದಿತ್ತು. ಇದು ಒಂದು ಹೊಸ ದೃಶ್ಯ ಮಾಧ್ಯಮ ಪ್ರಬೇಧವನ್ನು ಸೃಷ್ಟಿಸಿತ್ತು! ಈ ಮರುಸೃಷ್ಟಿಯಲ್ಲಿ ಜನ ಅವರದ್ದೇ ಪಾತ್ರವನ್ನು ನಟಿಸುತ್ತಿದ್ದರು! ಇದು ಸಾಕ್ಷ್ಯಚಿತ್ರ ಪ್ರಬೇಧದ ಬಗ್ಗೆ, ಚಿತ್ರೀಕರಣದ ನೈತಿಕತೆಯ ಕುರಿತಾಗಿ ಅನೇಕ ಪ್ರಶ್ನೆಗಳಿಗೆ ದಾರಿಮಾಡಿತು.

ಎಸ್ಕಿಮೋಗಳ ಜೀವನ ಅತಿ ಕಠಿಣವಾದದ್ದು. ಆದರೆ ಅದನ್ನು ನಿಜ ಪರಿಸ್ಥಿತಿಗಳಲ್ಲಿ ಚಿತ್ರೀಕರಿಸುವುದು ಕಠಿಣತಮ ಕೆಲಸ. ತಂತ್ರಜ್ಞಾನ ಇಂದಿನಂತೆ ಬೆಳೆದಿರದ ಸಮಯದಲ್ಲಿ, ಶೂನ್ಯಕ್ಕಿಂತ ಅದೆಷ್ಟೋ ಡಿಗ್ರಿ ಕಡಿಮೆ ತಾಪಮಾನದಲ್ಲಿ ಕೆಲಸ ಮಾಡುವ ಕ್ಯಾಮರಾ (Carl Akeley gyroscope camera), ಅದರಲ್ಲಿ ಬಳಕೆಯಾಗುವ ರೀಲುಗಳು, ಬ್ಯಾಟರಿ, ಸ್ವತಃ ಚಿತ್ರನಿರ್ದೇಶಕನ ವಾಸ, ಆಹಾರ ಇತ್ಯಾದಿಗಳನ್ನು ನಿರ್ವಹಿಸುವುದು ಎಷ್ಟು ದೊಡ್ಡ ಸಾಹಸವಾಗಿರಬಹುದು ಯೋಚಿಸಿನೋಡಿ. ಫ್ಲಹರ್ಟಿ, ಇಂಥಾ ಸನ್ನಿವೇಷದಲ್ಲೂ ನಾನೂಕ್ ಹಾಗೂ ಆತನ ಕುಟುಂಬವನ್ನು ತನ್ನ ಚಿತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಅವರಿಗೆ ತನ್ನ ಚಿತ್ರೀಕರಣದ ಪರಿಣಾಮಗಳನ್ನು ತೋರಿಸುವುದು ಅಗತ್ಯ ಎಂದು ಭಾವಿಸಿ ತನ್ನೊಂದಿಗೆ ಸಣ್ಣದೊಂದು ಚಿತ್ರ ಸಂಸ್ಕರಣ ವಿಭಾಗವನ್ನೂ, ಚಿತ್ರ ಪ್ರದರ್ಶಿಸುವ ಸೌಕರ್ಯವನ್ನೂ ತನ್ನ ಜೊತೆಗೆ ಒಯ್ದಿದ್ದರಂತೆ! ಒಂದಷ್ಟು ಚಿತ್ರೀಕರಣದ ನಂತರ ಅದನ್ನು ಅಲ್ಲೇ ಸಂಸ್ಕರಿಸಿ ಪ್ರದರ್ಶಿಸುತ್ತಿದ್ದರಂತೆ! ಇದರಿಂದ ನಾನೂಕ್ ಹಾಗೂ ಆತನ ಕುಟುಂಬಕ್ಕೆ ಫ್ಲಹರ್ಟಿಯ ಪ್ರಯತ್ನ ಏನು ಎನ್ನುವುದು ಅರ್ಥವಾಗಿ ಅವರು ಮುಂದೆ ತಮ್ಮ ಕೆಲಸವನ್ನು ಬಹಳ ಪ್ರೀತಿಯಿಂದ, ಮುತುವರ್ಜೆಯಿಂದ ನಡೆಸಿದರಂತೆ!

ನಾನೂಕ್ ಆಫ್ ದಿ ನಾರ್ತ್ ಚಿತ್ರ ಆರಂಭವಾಗುವುದು ನಾನೂಕ್ ಹಾಗೂ ಆತನ ಪತ್ನಿಯ ಮುಖಗಳನ್ನು ಕ್ಲೋಸಪ್‌ನಲ್ಲಿ ತೋರಿಸುವುದರೊಂದಿಗೆ. ನಂತರ ಅವರ ಇಡೀ ಕುಟುಂಬವನ್ನು ಪರಿಚಯಿಸುವ ಕ್ರಮ ಮುಂದೆ ಬರಲಿರುವ ದೃಶ್ಯಾವಳಿಗಳ ಬಗ್ಗೆ ಅತಿಶಯ ಕುತೂಹಲ ಕೆರಳಿಸುತ್ತದೆ. ದೋಣಿಯೊಂದರಲ್ಲಿ ನಾನೂಕ್ ದಡಸೇರುವ ದೃಶ್ಯವದು. ಮೊದಲಿಗೆ ನಾನೂಕ್ ಒಬ್ಬನೇ ಕಾಣುತ್ತಿರುತ್ತಾನೆ. ಆತ ದೋಣಿಯಿಂದ ಇಳಿದ ಮೇಲೆ ದೋಣಿಯೊಳಗಿನಿಂದ ಒಬ್ಬೊಬ್ಬರೇ ಆಗಿ ಆತನ ಕುಟುಂಬದ ೫ ಜನ ಹೊರಬರುತ್ತಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಮುಚ್ಚಿದ ದೋಣಿಯೊಳಗೆ ಒತ್ತೊತ್ತಾಗಿ ಕುಳಿತ ಜನ ಒಬ್ಬೊಬ್ಬರಾಗಿ ಹೊರಬರುತ್ತಾ ಅಚ್ಚರಿ ಹುಟ್ಟಿಸುತ್ತಾರೆ. ನಾನೂಕ್‌ನ ಜೀವನಾವಶ್ಯಕ ವಸ್ತುಗಳನ್ನು ಪರಿಚಯಿಸುತ್ತಾ ಈತನಿಗೆ ಡಾಲರ್‌ಗಿಂತ ಒಳ್ಳೆಯ ನಾಯಿಯ ಅಗತ್ಯ ಇದೆ, ಈತನ ದಿನ ನಿತ್ಯದ ಏಕೈಕ ಉದ್ದೇಶ ಆಹಾರ ಸಂಪಾದನೆ ಆಗಿದೆ ಎಂದು ನಿಧಾನಕ್ಕೆ ನಾನೂಕನ ಜೀವನವೃತ್ತಾಂತ ಬಿಚ್ಚುತ್ತಾ ಹೋಗುತ್ತದೆ. ಎಸಿಮೋಗಳ ಬೇಟೆಯ ಕ್ರಮ, ಅವರ ಆಹಾರ ಕ್ರಮ, ಚಳಿಯಿಂದ ಅವರು ತಮ್ಮನ್ನು ರಕ್ಷಿಸಿಕೊಳ್ಳುವ ಕ್ರಮ, ಅವರ ಸಂಚಾರ ಕ್ರಮ ಇತ್ಯಾದಿ ಎಸ್ಕಿಮೋಗಳ ದಿನಚರಿಯನ್ನೂ ಜೀವನ ಶೈಲಿಯನ್ನೂ ಫ್ಲಹರ್ಟಿ ಯಶಸ್ವಿಯಾಗಿ ಪರಿಚಯಿಸುತ್ತಾರೆ. ನಾನೂಕ್ ತನ್ನ ಕುಟುಂಬಕ್ಕಾಗಿ ಈಗ್ಲೂ (ಎಸ್ಕಿಮೋಗಳ ಮನೆ) ರಚಿಸುವ ದೃಶ್ಯ ಈ ಚಿತ್ರದ ಒಂದು ಮಹತ್ತರ ಅಂಗ. ಇದರ ಕುರಿತಾಗಿ ಹೆಚ್ಚೇನೂ ವಿವರಣಾತ್ಮಕವಾಗಿಲ್ಲವಾದರೂ ಈ ಪ್ರಕ್ರಿಯೆ ತುಂಬಾ ಆಸಕ್ತಿದಾಯಕವಾಗಿ ಮೂಡಿ ಬರುತ್ತದೆ. ಚಿತ್ರದುದ್ದಕ್ಕೂ ಫ್ಲಹರ್ಟಿಯ ಹಾಸ್ಯ ಪ್ರಜ್ಞೆ, ಜೀವನ ಶೈಲಿಯ ಕುರಿತಾಗಿ ಫ್ಲಹರ್ಟಿಗೆ ಇದ್ದ ಅಪರಿಮಿತ ಆಸಕ್ತಿ ಕಂಡುಬರುತ್ತದೆ. ಚಿತ್ರದಲ್ಲಿ ನಾನೂಕ್ ಒಬ್ಬನೇ ನಾಯಕನಾಗಿನಿಲ್ಲದೆ, ಅವನ ಹೆಂಡತಿ, ಮಗು, ಕುಟುಂಬದ ನಿರಂತರ ಜೊತೆಗಾರರಾದ ನಾಯಿಗಳು ಎಲ್ಲರೂ, ಎಲ್ಲವೂ ಮುಖ್ಯವಾಗುತ್ತದೆ. ಎಸ್ಕಿಮೋಗಳು ಈಗ್ಲೂ ಕಟ್ಟಿದಾಗ ನಾಯಿಗಳಿಗೆಂದು ಪ್ರತ್ಯೇಕ ಈಗ್ಲೂ ಕಟ್ಟುವುದು, ಮರಿಗಳನ್ನು ತಮ್ಮೊಂದಿಗೆ ಬೆಚ್ಚಗೆ ಕಾಯುವುದು ಇತ್ಯಾದಿಗಳನ್ನು ತೋರಿಸುವುದರ ಮೂಲಕ ಫ್ಲಹರ್ಟಿ ಎಸ್ಕಿಮೋಗಳ ಜೀವನದ ಸೂಕ್ಷ್ಮಗಳನ್ನು ಅತಿ ಪರಿಣಾಮಕಾರಿಯಾಗಿ ತೋರಿಸುತ್ತಾರೆ.

ಒಂದು ಕುಟುಂಬದ ಕಥನದ ಮೂಲಕ ಇಡೀ ಒಂದು ಜನಾಂಗದ ಬಗ್ಗೆ ನಿರ್ಮಿಸಿದ ಸಾಕ್ಷ್ಯಚಿತ್ರ ಆ ಸಮಯದಲ್ಲಿ ಒಂದು ಮೈಲಿಗಲ್ಲಾಗಿತ್ತು. ಅನೇಕ ಆತಂಕಗಳೊಂದಿಗೆ ಈ ಚಿತ್ರ ೧೯೨೨ರಲ್ಲಿ ಬಿಡುಗಡೆಯಾಯಿತು. ಎಲ್ಲಾ ಆತಂಕಗಳಿಗೆ ವ್ಯತಿರಿಕ್ತವಾಗಿ ಜನ ಈ ಚಿತ್ರವನ್ನು ಬಹಳವಾಗಿ ಮೆಚ್ಚಿಕೊಂಡರು. ಬೇಗನೇ ಈ ಚಿತ್ರಕ್ಕೆ ಪ್ರಪಂಚದಾದ್ಯಂತ ಪ್ರದರ್ಶಕರೂ ಸಿಕ್ಕಿದರು. ಚಿತ್ರ ಬಹಳ ಪ್ರಸಿದ್ಧಿಯನ್ನು ಪಡೆಯಿತು. ತಮಾಷೆಯೆಂದರೆ ಅಂದು ಯಾರೂ ಇದನ್ನು ಸಾಕ್ಷ್ಯಚಿತ್ರ ಎಂದು ಪರಿಗಣಿಸಲೇ ಇಲ್ಲ. ಬಿಡುಗಡೆಯಾದಾಗ ನಾನೂಕ್ ಆಫ್ ದಿ ನಾರ್ತ್ ಒಂದು ಮೂಕಿ ಚಿತ್ರವಾಗಿತ್ತು. ಮುಂದೆ ೧೯೪೭ರಲ್ಲಿ ನಿರೂಪಣೆ ಹಾಗೂ ಹಿನ್ನೆಲೆ ಸಂಗೀತದೊಂದಿಗೆ ಈ ಚಿತ್ರ ಮತ್ತೆ ತೆರೆಗಂಡಿತು. ಮುಂದೆ ಮತ್ತೊಮ್ಮೆ ೧೯೭೬ರಲ್ಲಿ ಕೇವಲ ಸಂಗೀತದೊಂದಿಗೆ ಈ ಚಿತ್ರ ತೆರೆಗಂಡಿತು. ಪ್ರತಿಬಾರಿಯೂ ಈ ಚಿತ್ರ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸುತ್ತಾಹೋಯಿತು.

ಫ್ಲಹರ್ಟಿಯ ಈ ಚಿತ್ರ ವಾಸ್ತವದಿಂದ ದೂರದ್ದು ಎಂದು ಅನೇಕರು ಹೀಗಳೆದರು. ನಾನೂಕ್ ಚಿತ್ರೀಕರಣದ ಸಮಯದಲ್ಲಿ ಬೇಟೆಯಾಡಲು ಕೋವಿ ಬಳಸುತ್ತಿದ್ದರೂ, ಚಿತ್ರದಲ್ಲಿ ಸಂಪ್ರದಾಯಿಕ ಭರ್ಚಿ ಬೇಟೆಯನ್ನು ತೋರಿಸಲಾಗಿದೆ. ನಾನೂಕ್ ಕುಟುಂಬಕ್ಕೆ ಕೆಲವು ಸಮಯದಲ್ಲಿ ವಸತಿ ಏರ್ಪಾಡಾಗದಿದ್ದರೆ ಇಡೀ ಕುಟುಂಬ ನಾಶವಾಗಬಹುದು ಎಂದು ತೋರಿಸಿದ ಸಂದರ್ಭದಲ್ಲಿ ಅದು ನಿಜವಾಗಿರಲಿಲ್ಲ. ಚಿತ್ರದಲ್ಲಿ ನಾನೂಕನ ಪತ್ನಿ ಎಂದು ತೋರಿಸಿದ ಮಹಿಳೆ ನಾನೂಕನ ನಿಜವಾದ ಪತ್ನಿಯಾಗಿರಲಿಲ್ಲ ಎಂದೆಲ್ಲಾ ವಿಮರ್ಷಕರು ಆರೋಪ ಮಾಡುತ್ತಾರೆ. ಫ್ಲಹರ್ಟಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ, ಒಂದು ಕಥನದ ನಿಜ ಭಾವನೆಯನ್ನು ಸೆರೆಹಿಡಿಯುವ ಪ್ರಯತ್ನದಲ್ಲಿ ದೃಶ್ಯಗಳ ಮರುಸೃಷ್ಟಿ ತಪ್ಪಲ್ಲ ಎನ್ನುತ್ತಾರೆ. ಆ ಕಾಲದಲ್ಲಿ ದೊರೆಯುತ್ತಿದ್ದ ಭಾರೀ ಕ್ಯಾಮರಾಗಳನ್ನು ಬಳಸಿ ಎಲ್ಲಾ ದೃಶ್ಯಗಳನ್ನು ಸೆರೆಹಿಡಿಯುವುದು ಸಾಧ್ಯವಿರಲಿಲ್ಲ. ಹಾಗಾಗಿ ದೃಶ್ಯಗಳ ಮರುಸೃಷ್ಟಿ, ಚಿತ್ರೀಕರಣದ ಅನುಕೂಲಕ್ಕಾಗಿ ಮೂರೇ ಗೋಡೆಯಿದ್ದ ಈಗ್ಲೂ ನಿರ್ಮಾಣ ಇವೆಲ್ಲವೂ ಸಮರ್ಥಿಸಲ್ಪಟ್ಟಿವೆ. ಹೀಗೆ ಆರೋಪ-ಸಮರ್ಥನೆಗಳ ಹೊರತಾಗಿಯೂ ಸಾಕ್ಷ್ಯಚಿತ್ರ ಪ್ರಪಂಚಕ್ಕೆ ಅಪೂರ್ವವಾದ ಕೊಡುಗೆಯಾಗಿ ನಾನೂಕ್ ಆಫ್ ದಿ ನಾರ್ತ್ ಸೇರ್ಪಡೆಯಾಯಿತು. ಒಂದು ಮೈಲುಗಲ್ಲಾಗಿ ನಿಂತಿತು. ಇಂದು ಪ್ರಪಂಚದಲ್ಲಿ ಲಕ್ಷಾಂತರ ಸಾಕ್ಷ್ಯಚಿತ್ರಗಳು ನಿರ್ಮಾಣವಾಗಿವೆ, ನಿರ್ಮಾಣವಾಗುತ್ತಲೂ ಇವೆ. ಆದರೂ ನಾನೂಕ್ ಆಫ್ ದಿ ನಾರ್ತ್ ಒಂದು ಕ್ಲಾಸಿಕ್ ಸಾಕ್ಷ್ಯಚಿತ್ರವಾಗಿ ಇಂದೂ ಪ್ರಸ್ತುತವಾಗಿದೆ.

This entry was posted in Film reviews. Bookmark the permalink.

2 Responses to ಸಾಹಸಮಯ ಜೀವನದ ಸಾಹಸೀ ಚಿತ್ರೀಕರಣ

  1. apkrishna ಹೇಳುತ್ತಾರೆ:

    ಅಭಯ, ಭಲೇ, ತುಂಬ ತುಂಬ ಚೆನ್ನಾಗಿದೆ. ಲವಲವಿಕೆಯ ಬರವಣಿಗೆ.

    ದೃಶ್ಯ ತಂತ್ರಜ್ಞಾನ ಇನ್ನೂ ಅಂಬೆಗಾಲಿಡಲು ತೊಡಗುತ್ತಿದ್ದ ದಿನಗಳಲ್ಲಿ ನಾನೂಕ್ ಆಫ್ ದಿ ನಾರ್ತ್ ನಂಥ ಸಾಕ್ಷ್ಯ ಚಿತ್ರ ತೆಗೆಯುವಲ್ಲಿ ನಿರ್ದೇಶಕ ಪಟ್ಟ ಸಾಹಸವನ್ನು ನಿನ್ನ ಬರವಣಿಗೆ ಕಟ್ಟಿಕೊಟ್ಟು ಆ ಚಿತ್ರವನ್ನು ನೋಡಲೇಬೇಕೆಂಬ ಕುತೂಹಲವನ್ನು ಪ್ರೇರೇಪಿಸುತ್ತದೆ. ಇದು ಆ ಕಾಲದ ಮಾತ್ರವಲ್ಲ ಎಲ್ಲಕಾಲದ ಮನುಷ್ಯನ ಕಥೆಯೋ ಏನೋ. ವರ್ತಮಾನವನ್ನು ದಾಟಿ ಭವಿಷ್ಯಕ್ಕೆ ಚಾಚುವ ಹವಣಿಕೆ, ಪ್ರಯತ್ನ.
    ಚಲನ ಚಿತ್ರದ ಇತಿಹಾಸ, ಸಾಗಿ ಬಂದ ಹಾದಿಯ ರೋಚಕ ವಿವರಗಳು ಕಥಾಮಾಲೆಯಾಗಿ ಮೂಡಿ ಬರಲಿ – ಲೇಖನಗಳಾಗಿ – ಮತ್ತೆ ಪುಸ್ತಕವಾಗಿ. ಕಾಯುತ್ತಿದ್ದೇವೆ.

    ರಾಧಾಕೃಷ್ಣ

  2. rajendra prasad ಹೇಳುತ್ತಾರೆ:

    tumbaa thanx… intha olleya lekhana kottidakke..**

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s