ಪೋಪರಿಗೊಂದು ಶೌಚಾಲಯವ ಕಟ್ಟಿ


ಒಂದಾನೊಂದು ಕಾಲದಲ್ಲಿ ಅಂದರೆ ೧೯೮೮ರಲ್ಲಿ ಬ್ರೆಜಿಲ್ಲಿನಲ್ಲಿ ಒಂದು ಪುಟ್ಟ ಹಳ್ಳಿಯಿತ್ತು. ಕಾರುಗಳು ಬಹಳವಾಗಿ ಇಲ್ಲದ, ಸ್ಥಿತಿವಂತರೇ ಹೆಚ್ಚೇನೂ ಇಲ್ಲದ ಸ್ಥಳ ಅದು. ಎಲ್ಲಿದೆ ಎಂದು ಕೇಳಿದರೆ ಬಹುಷಃ ಭೂಪಟದಲ್ಲಿ ತೋರಿಸಲೂ ಕಷ್ಟವಾಗುವಂಥಾ ಹಳ್ಳಿ ಅದು. ಅದಕ್ಕೂ ಪೇಟೆಗೂ ನಡುವೆ ಅದ್ಯಾವುದೋ ಒಂದು ಗಡಿ. ಅಲ್ಲಿ ಯಾವುದೋ ದೇಶಕ್ಕೆ ಸಂಬಂಧಿಸಿದ ಸೈನ್ಯದವರ ಪಾರ. ಆ ಊರಲ್ಲಿ ಎಲ್ಲಾ ಊರಿನಂತೆ ಒಬ್ಬ ಹುಚ್ಚ ಒಂದಷ್ಟು ಕೇಡಿಗರು, ಮತ್ತೊಂದಷ್ಟು ಬಡವರು ಮತ್ತೆ ಮತ್ತಷ್ಟು ಬಡವರು. ಹೀಗೆ ಹೇಳಿಕೊಳ್ಳಲು ವಿಶೇಷವೇನೂ ಇಲ್ಲದ ಒಂದೂರು ಅದು. ಅಲ್ಲಿ ನಮ್ಮ ಕಥಾ ನಾಯಕ ಬೆಟೋ ಹಾಗೂ ಅವನ ಹೆಂಡತಿ ಹಾಗೂ ಒಬ್ಬ ಮಗಳು ಬದುಕುತ್ತಿದ್ದಾರೆ. ಅವರದು ತೀರಾ ಕಷ್ಟದ ಬದುಕು. ಬೆಟೋನಿಗೆ ತನ್ನ ಯೋಚನಾ ಸರಣಿಯ ಬಗ್ಗೆ ಅಭಿಮಾನ ಹಾಗೂ ಅವನ ಕುಟುಂಬ ಅವನ ನಿಷ್ಟಾವಂತ ಅನುಯಾಯಿಗಳು. ಮಗಳು ಅಪ್ಪನಂತೆಯೇ ಕನಸುಗಾತಿ. ಆಕೆಗೆ ರೇಡಿಯೋದಲ್ಲಿ ಕೆಲಸ ಮಾಡುವ ಆಸೆ. ಬಡತನವಾದರೂ ಬೆಟೋ ನಡೆಸುತ್ತಿದ್ದ ಸಣ್ಣ ಮಟ್ಟದ ಕಳ್ಳಸಾಗಣೆಯಿಂದ ಅವರ ಜೀವನ ಸಾಕಷ್ಟು ಶಾಂತಿಯುತವಾಗಿಯೇ ನಡೆಯುತ್ತಿತ್ತು. ಹೀಗಿರಲು ೧೯೮೮ನೇ ಇಸವಿಯ ಒಂದು ದಿನ…

ಆ ಊರಿಗೆ ಪೋಪ್ ಜಾನ್ ಪೌಲ್ ಬರುತ್ತಾರೆಂದು ರೇಡಿಯೋದವರು ಘೋಷಿಸುತ್ತಾರೆ. ಊರಿನವರಲ್ಲಿ ಅದೇನೋ ಉತ್ಸಾಹ. ಅದ್ಯಾರೋ ಜಗತ್ತಿನಾದ್ಯಂತ ಕ್ರೈಸ್ತರ ಮಟ್ಟಿಗೆ ರಾಕ್ ಸ್ಟಾರಂತೆ ಇವರು. ಬಹಳ ದೊಡ್ಡ ಮನುಷ್ಯರಂತೆ. ಇವರನ್ನು ನೋಡಲೆಂದೇ ಎಂಭತ್ತು ಸಾವಿರಕ್ಕೂ ಮಿಕ್ಕಿ ಜನರು ಆ ದಿನ ಈ ಊರಿಗೆ ಬಂದಿಳಿಯಲಿದ್ದಾರೆ ಎಂದೆಲ್ಲಾ ಮಾಧ್ಯಮಗಳು ಬಣ್ಣಿಸಲಾರಂಭಿಸುತ್ತವೆ. ಊರಿನವರಿಗೆ ಅಚ್ಚರಿ. ಕೈಸ್ತರಿಗೆ ಭಯ ಭಕ್ತಿ. ಇವರು ದೇವರೇ ನಮ್ಮ ಮಟ್ಟಿಗೆ ಕಳಿಸಿಕೊಟ್ಟ ವರ ಎಂದು ಊರವರೆಲ್ಲಾ ಸಂಭ್ರಮ ಪಡುತ್ತಾರೆ. ಎಂಭತ್ತು ಸಾವಿರಕ್ಕೂ ಮಿಕ್ಕು ಜನ ನಮ್ಮೂರಿಗೆ ಬಂದರೆ ಅದರಿಂದ ಆಗಬಹುದಾದ ವ್ಯಾಪಾರವನ್ನು ಯೋಚಿಸಿಯೇ ಆ ಊರವರ ಮೈನವಿರೇಳುತ್ತದೆ. ಕೂಡಲೇ ಊರವರೆಲ್ಲಾ ಸೇರಿ ಆ ಮಹತ್ವದ ದಿನಕ್ಕೆ ತಯಾರಿ ಆರಂಭಿಸುತ್ತಾರೆ. ಅನೇಕರು ಮನೆ ಅಡ ಇಡುತ್ತಾರೆ. ಇನ್ನೂ ಅನೇಕರು ತಮ್ಮ ಕೃಷಿ ಭೂಮಿಯನ್ನು ಅಡ ಇಡುತ್ತಾರೆ. ಮತ್ತಿನ್ನು ಅನೇಕರು ತಮ್ಮ ಸೈಕಲ್ಲು ಇತ್ಯಾದಿಗಳನ್ನು ಅಡ ಇಟ್ಟು ಮಾಂಸ, ಬನ್ನು ಹೀಗೆ ತಿನ್ನುವ ಸಾಮಗ್ರಿಗಳ ದಾಸ್ತಾನು ಆರಂಭಿಸುತ್ತಾರೆ. ಮುನ್ನೂರಕ್ಕೂ ಹೆಚ್ಚಿನ ಸ್ಟಾಲುಗಳು ಕಟ್ಟಲ್ಪಡುತ್ತವೆ. ಬಂದ ಜನರು ಬನ್ನು ಕೊಳ್ಳಬಹುದು, ಜೂಸ್ ಕೊಳ್ಳಬಹುದು ಹೀಗೆ ಹಾಗೆ ಎಂದು ಜನರ ಲೆಕ್ಕಾಚಾರ ಆರಂಭವಾಗುತ್ತದೆ. ಅದು ಟಿ.ವಿ ಮತ್ತು ರೇಡಿಯೋಗಳಲ್ಲಿ ಪ್ರಚಾರವೂ ಪಡೆಯುತ್ತದೆ.

ಇಷ್ಟೆಲ್ಲಾ ಲೆಕ್ಕಾಚಾರಗಳು ನಡೆಯುತ್ತಿರಬೇಕಾದರೆ, ಅಷ್ಟರಲ್ಲಿ ನಮ್ಮ ಬೆಟೋ ಸುಮ್ಮನಿದ್ದಾನೆಯೇ? ಅವನು ತನ್ನ ಚಾತುರ್ಯ ಮೆರೆದೇ ಬಿಡುತ್ತಾನೆ. ಇಷ್ಟೆಲ್ಲಾ ಜನರು ತಿನ್ನುವ ಸಾಮಗ್ರಿಗಳನ್ನು ತಯಾರಿಸುತ್ತಿರಲು ನಾನು ಯಾಕೆ ಒಂದು ಶೌಚಾಲಯವನ್ನು ಕಟ್ಟಬಾರದು ಎಂದು ಅವನಿಗೆ ಅನಿಸುತ್ತದೆ! ಊರವರು ಮೊದಲು ನಗುತ್ತಾರೆ, ಶೌಚಾಲಯ?! ಆದರೆ ಬೇಗನೇ ಅವರಿಗೆ ಅದರ ಮಹತ್ವ ಅರ್ಥವಾಗುತ್ತದೆ. ಎಂಭತ್ತು ಸಾವಿರ ಜನ ಬಂದಾಗ ಒಂದೇ ಶೌಚಾಲಯ ಇದ್ದರೆ ಆಗಬಹುದಾದ ವ್ಯಾಪಾರದ ಕುರಿತು ಅವರಿಗೆ ಅರಿವಾಗುತ್ತದೆ. ಆದರೆ ಬೆಟೋನಿಗೆ ಶೌಚಾಲಯ ಕಟ್ಟುವ ಆರ್ಥಿಕ ಸಾಮರ್ಥ್ಯ ಎಲ್ಲಿಂದ ಬಂದೀತು? ಆದರೂ ಅವನು ತನ್ನ ಕೆಲವು ಗೆಳೆಯರನ್ನು ಕಟ್ಟಿಕೊಂಡು ತಾನೇ ಪೋಪ್ ಭೇಟಿಯ ಸಂದರ್ಭಕ್ಕಾಗಿ ಶೌಚಾಲಯ ಕಟ್ಟಲಾರಂಭಿಸುತ್ತಾನೆ. ದಿನಗಳುರುಳಲು ತಯಾರಿ ಗಂಭೀರವಾಗುತ್ತಾ ಸಾಗುತ್ತದೆ.

ಇನ್ನೇನು ಪೋಪ್ ಬರುವ ಹಿಂದಿನ ದಿನ ಅದು. ಆದರೆ ಬೆಟೋನ ಶೌಚಾಲಯ ಇಡೀ ತಯಾರಾದರೂ, ಅದಕ್ಕೆ ಬೇಕಾದ ಪಿಂಗಾಣಿಯ ಪೀಠವೇ ಇರುವುದಿಲ್ಲ. ಅದನ್ನು ಕೊಳ್ಳಲು ಅವನ ಬಳಿ ಹಣ ಇರುವುದಿಲ್ಲ. ಪತ್ನಿಯು ಮಗಳನ್ನು ರೇಡಿಯೋ ಕೆಲಸಕ್ಕೆ ಅಗತ್ಯ ಶಿಕ್ಷಣಕ್ಕೆ ಎಂದು ಹಣ ಎತ್ತಿಟ್ಟಿರುವುದು ಅವನಿಗೆ ಬೆಟೋನಿಗೆ ಗೊತ್ತಿರುತ್ತದೆ. ಅದನ್ನು ಈ ಶೌಚಾಲಯದ ಮೇಲೆ ಜೂಜಾಡೋಣ. ಇದು ಖಂಡಿತಾ ಗೆಲ್ಲುವ ಕುದುರೆ ಎಂದು ಆಕೆಯನ್ನು ಪರಿಪರಿಯಾಗಿ ವಿನಂತಿಸುತ್ತಾನೆ. ಆದರೆ ಆಕೆ ಒಪ್ಪುವುದೇ ಇಲ್ಲ. ಬೆಟೋ ಸ್ತಬ್ಧನಗುತ್ತಾನೆ. ತನ್ನೆಲ್ಲಾ ಶ್ರಮ ಮಣ್ಣುಪಾಲಾಗುವುದು ಅವನಿಗೆ ಖಚಿತವಾಗುತ್ತದೆ.

ಆದರೆ ಅವನ ಪತ್ನಿಯ ಮನಸ್ಸು ಕರಗುತ್ತದೆ. ಹಣವನ್ನು ಎತ್ತಿಕೊಡುತ್ತಾಳೆ ಆಕೆ. ಆಗಲೇ ಬೆಳಗ್ಗಿನ ಜಾವವಾಗುತ್ತಾ ಬಂದಿದೆ. ಬೆಟೋ ಹಣ ತೆಗೆದುಕೊಂಡು ದೂರದ ಪೇಟೆಗೆ ಸೈಕಲ್ ತುಳಿಯುತ್ತಾನೆ. ಇತ್ತ ಜನರು ಪೋಪ್ ಭೇಟಿಗಾಗಿ ಈ ಹಳ್ಳಿಯಲ್ಲಿ ಸೇರಲಾರಂಭಿಸುತ್ತಾರೆ. ಬೆಟೋ ಪೇಟೆ ತಲಪುತ್ತಾನೆ. ಅಲ್ಲಿ ಪಿಂಗಾಣಿಯ ಪೀಠ ಕೊಳ್ಳುತ್ತಾನೆ. ವೇಗವಾಗಿ ಸೈಕಲ್ ತುಳಿಯುತ್ತಾ ಊರಿನೆಡೆಗೆ ಹೊರಡುತ್ತಾನೆ… ಅಷ್ಟರಲ್ಲಾಗಲೇ ಪೋಪ್ ಊರನ್ನು ತಲಪುತ್ತಿರುತ್ತಾರೆ… ಸುಮಾರು ನಲವತ್ತು ಸಾವಿರ ಜನ ಸೇರಿರುತ್ತಾರೆ… ಇಲ್ಲಿಂದ ಮುಂದಿನ ಭಾಗವನ್ನು ವಿವರಿಸಲು ಹೋಗುವುದಿಲ್ಲ ನಾನು. ನೀವು ಅಂದುಕೊಳ್ಳಲು ಕಷ್ಟವಾಗುವಂಥ ನಾಟಕ ತೆರೆದುಕೊಳ್ಳುತ್ತಾ ಹೋಗುತ್ತೆ ಇಲ್ಲಿಂದ ಮುಂದೆ.

ಒಂದು ಮದುವೆಯಾದಾಗ ಪಾತ್ರೆ ತೊಳೆಯುವವರ ಕಥೆಯನ್ನು ಯಾರು ನೆನಪಿಡುತ್ತಾರೆ? ಮಂತ್ರಿಯ ಕಾರ್ಯಕ್ರಮವಾದಾಗ ಟ್ರಾಫಿಕ್ ಪೋಲೀಸನ್ನು ಯಾರು ನೆನಪಿಡುತ್ತಾರೆ? ಮಾನವ ಚಂದ್ರನ ಮೇಲಿಳಿದಾಗ ಅವನನ್ನು ಅಲ್ಲಿಗೆ ಕರೆದೊಯ್ದ ರಾಕೇಟಿನ ಸ್ಕ್ರೂ ಟೈಟ್ ಮಾಡಿದವನನ್ನು ಯಾರು ನೆನಪಿಟ್ಟಿದ್ದಾರೆ? ಇಂಥಾ ಒಂದು ಎಳೆಯನ್ನು ತೆಗೆದುಕೊಂಡು ಮನೋಜ್ಞ ಕಥೆ ಕಟ್ಟಿದ್ದಾರೆ ಇಲ್ಲಿ ನಿರ್ದೇಶಕದ್ವಯರಾದ César Charlone ಹಾಗೂ Enrique Fernández. ಹೇಗೆ ನಮ್ಮ ಮಾಧ್ಯಮಗಳು ಒಂದು ಕಾರ್ಯಕ್ರಮವನ್ನು ರೂಪಿಸುವಲ್ಲಿ ಅಥವಾ ಕೆಡಿಸುವಲ್ಲಿ ಪಾತ್ರವಹಿಸಬಹುದು, ಜನರ ಮನಸ್ಸನ್ನು ಒಂದು ವಿಷಯದಿಂದ ಇನ್ನೊಂದು ವಿಷಯದೆಡೆಗೆ ಹೇಗೆ ಸೆಳೆಯಬಹುದು, ಮಿಥ್ಯೆಗಳನ್ನು ರೂಪಿಸಬಹುದು ಇತ್ಯಾದಿ ವಿಷಯಗಳ ಕುರಿತಾಗಿಯೂ ಈ ಚಿತ್ರ ಮಾತನಾಡುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಪೋಪ್ ಜಾನ್ ಪೌಲರ 1988ರಲ್ಲಿ ನಿಜವಾಗಿಯೂ ನಡೆದ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಈ ಚಿತ್ರ ನಡೆಯುತ್ತದೆ. ಅಲ್ಲಿ ಅನೇಕ ಕಡೆ ಪೋಪರ ಕುರಿತಾಗಿ ವಿಮರ್ಷಾತ್ಮಕ ಹೇಳಿಕೆಗಳು ಬರುತ್ತವೆ. ಆದರೆ ಆಶ್ಚರ್ಯಕರವಾಗಿ ನಾನು ಅಂತರ್ಜಾಲದಲ್ಲಿ ಹುಡುಕಿದಾಗ ಈ ಚಿತ್ರದ ಬಹಿಷ್ಕರಣೆಯ ಬೇಡಿಕೆಯಾಗಲೀ, ವಿವಾದಗಳಾಗಲೀ ಕಾಣಲಿಲ್ಲ! ಸಿನೆಮಾ ಬ್ರೆಜಿಲ್ ಪ್ರಶಸ್ತಿ, ಸಾವೋಪೌಲೋ ಪ್ರಶಸ್ತಿ ಸೇರಿದಂತೆ ಹತ್ತಕ್ಕೂ ಮಿಕ್ಕು ಪ್ರಶಸ್ತಿಗಳನ್ನೂ, ಅಭಿನಂದನೆಗಳನ್ನೂ ಪಡೆದ 2007ನೇ ಇಸವಿಯಲ್ಲಿ ತಯಾರಾದ ಈ ಚಿತ್ರ, ’El baño del Papa’ ಅಥವಾ ಪೋಪ್ಸ್ ಟಾಯ್ಲೆಟ್ ಖಂಡಿತಾ ನೋಡಬೇಕಾದ ಚಿತ್ರಗಳಲ್ಲಿ ಒಂದು.

This entry was posted in Film reviews. Bookmark the permalink.

1 Response to ಪೋಪರಿಗೊಂದು ಶೌಚಾಲಯವ ಕಟ್ಟಿ

  1. ಅಶೋಕ ವರ್ಧನ ಜಿ.ಎನ್ ಹೇಳುತ್ತಾರೆ:

    ಈ ಮೂಲಕ ‘ತಿರುವಳ್ಳುವರ್’ ಅನಾವರಣಗೊಳ್ಳುತ್ತದೆ ಎನ್ನುವಾಗ ಗೃಹಬಂಧಿಗಳಾದ ಇಬ್ಬರನ್ನಾದರೂ ಕೆಲವು ಜಾಲಿಗರು ನೋಡುತ್ತಾರೆ ಎಂದು ಸಮಾಧಾನ ಪಡಬಹುದಲ್ಲವೇ?
    ಚೆನ್ನಾಗಿದೆ.
    ನಿನ್ನಪ್ಪ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s