ನೀನು ಇದನ್ನು ಓದುತ್ತಿದ್ದರೆ ಇದು ನಿನಗಾಗಿ…


Richard (2)ಅದೇನೇನೋ ಕೆಲಸದಲ್ಲಿ ಮುಳುಗಿದ್ದರಿಂದ ಅನೇಕ ದಿನಗಳಿಂದ ಬ್ಲಾಗ್ ತುಂಬಿರಲಿಲ್ಲ. ಅಥವಾ ಹಂಚಿಕೊಳ್ಳಲು ಯೋಗ್ಯ ವಿಷಯವೂ ಇರಲಿಲ್ಲವೇನೋ. ಹೀಗಿದ್ದಾಗಲೇ ಒಂದು ಘಟನೆ ನಡೆದಿದೆ. ಅದ್ಯಾವುದೋ ಸಾಕ್ಷ್ಯ ಚಿತ್ರಕ್ಕಾಗಿ ನಾನು ಕೆಲವು ದಿನಗಳ ಹಿಂದೆ ನಾನು ಮಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದೆ. ಒಂದು ಸ್ಥಳದಲ್ಲಿ ಚಿತ್ರೀಕರಣ ಮುಗಿಸಿ ಮುಂದಿನ ಸ್ಥಾನವನ್ನು ತಲುಪಲು ರಿಕ್ಷಾ ಹತ್ತಿದೆ. ಮುಂದಿನ ಜಾಗದಲ್ಲಿ ಏನು ಚಿತ್ರೀಕರಿಸಿಕೊಳ್ಳಬೇಕು, ಹೇಗೆ ಎಂದಿತ್ಯಾದಿಯಾಗಿ ಯೋಚಿಸುತ್ತಾ ರಿಕ್ಷಾದ ಸುತ್ತ ಹಾದು ಹೋಗುತ್ತಿರುವ ಮಂಗಳೂರಿನ ಪೇಟೆಯನ್ನೇ ಅಲ್ಲಿನ ಅನೇಕ ಜನರನ್ನೇ ನೋಡಿತ್ತಾ ಮೌನವಾಗಿ ಕುಳಿತಿದ್ದೆ. ನಾನು ಹುಟ್ಟಿ ಬೆಳೆದ ಊರು ಇದು. ಐದು ವರುಷಗಳ ಹಿಂದೆ ನಾನೂ ಇಲ್ಲೇ ಇದ್ದೆ. ನನ್ನ ಕನಸುಗಳು, ಕಷ್ಟಗಳು ಇಲ್ಲೇ ಇದ್ದುವು ಎಂದು ಒಂದು ಕ್ಷಣಕ್ಕೆ ಅನಿಸಿತು. ಹೀಗೆ ಸುಮ್ಮನಿರುವ ಕಾಲದಲ್ಲಿ ಮನಸ್ಸಿನಲ್ಲಿ ಅಸಂಬದ್ಧ ಯೋಚನಾ ಸರಣಿ ಓಡುತ್ತಿತ್ತು ಮನಸ್ಸಲ್ಲಿ ಒಮ್ಮೊಮ್ಮೆ. ಆಗ ಒಂದು ಟ್ರಾಫಿಕ್ ಸಿಗ್ನಲ್ ಎದುರಾಯಿತು. ನಾನಿದ್ದ ರಿಕ್ಷಾವೂ ನಿಂತಿತು. ಹಾ! ಈ ಐದು ವರುಷಗಳಲ್ಲಿ ಇಲ್ಲಿ ಟ್ರಾಫಿಕ್ ಎಷ್ಟು ಹೆಚ್ಚಾಗಿದೆ! ಇಷ್ಟೊಂದು ಜನ ಎಲ್ಲಿಂದ ಬಂದರು ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ನಾನು ಕುಳಿತಿದ್ದ ರಿಕ್ಷಾದ ಚಾಲಕ ಹಿಂದಿರುಗಿ ನನ್ನನ್ನು ನೋಡಿ ಅದೇನೋ ತೊದಲಿದ…

ನನ್ನದೇ ಯೋಚನೆಗಳಲ್ಲಿ ಮುಳುಗಿದ್ದವನಿಗೆ ಮೊದಲಿಗೆ ಅವನು ಹೇಳುತ್ತಿರುವುದು ಏನು ಎಂದು ಕೇಳಲಿಲ್ಲ, ಅರಿಯಲಿಲ್ಲ. ಏನು ಎಂದು ಮತ್ತೆ ಕೇಳಲು, ಅವನಿಗೆ ಗಂಭೀರ ತೊದಲು ಇರುವುದು ತಿಳಿಯಿತು. ಅಷ್ಟರಲ್ಲಿ ಟ್ರಾಫಿಕ್ ಸಿಗ್ನಲ್ ಹಸಿರು ದೀಪ ತೋರಿತು. ರಿಕ್ಷಾ ಮುಂದಕ್ಕೆ ಓಡಿಸುತ್ತಾ ಅವನು ಮತ್ತೆ ತೊದಲುತ್ತಾ ತನ್ನ ಮಾತನ್ನು ಮುಂದುವರೆಸಿದ. “ನನ್ನ ಮಗ… ಬಿ.ಇ ಓದುತ್ತಿದ್ದಾನೆ, ಅವನು ಎರಡನೇ ರಾಂಕ್ ಪಡೆದಿದ್ದಾನೆ!” ಹಾ! ಎಂಥಾ ಸುದ್ದಿ! ಆದರೆ ಇದನ್ನು ನನಗೆ ಏಕೆ ಹೇಳುತ್ತಿದ್ದಾನೆ ಈತ ಎಂದು ಸ್ವಲ್ಪ ಗಲಿಬಿಲಿಯಿಂದಲೇ ಮತ್ತೆ ಅವನನ್ನು ನೋಡಿದೆ. ಸುಮಾರು ಐವತ್ತರಿಂದ ಐವತ್ತೈದು ವರುಷ ಆತನಿಗೆ. ಕೂದಲು ಒಂದಷ್ಟು ಉದುರಿಗೆ ಮತ್ತೊಂದಷ್ಟು ಹಣ್ಣಾಗಿವೆ. ಕಣ್ಣು ತುಸು ಕೆಂಪಾಗಿದ್ದು, ಸಧ್ಯಕ್ಕೆ ಸ್ವಲ್ಪ ತೇವಗೊಂಡಿವೆ. ಮಗ ಮಾಡಿದ ಈ ಸಾಧನೆಯ ಹೆಮ್ಮೆ ಅವನ ಮುಖದಲ್ಲಿ ಕಾಣುತ್ತಿತ್ತು ಹಾಗೂ ಕೃತಾರ್ಥಭಾವ ಅವನ ಮಾತುಗಳಲ್ಲಿ ತುಂಬಿತ್ತು. ಪಾಪ ಈ ಸುದ್ದಿಯನ್ನು ಹಂಚಿಕೊಳ್ಳಲೂ ಅವನಿಗೆ ಯಾರೂ ಇರಲಿಲ್ಲವೋ ಏನೋ! ಒಂದೆಡೆ ರಿಕ್ಷಾ ಹತ್ತಿ ಮತ್ತೊಂದೆಡೆ ಇಳಿದು ದುಡ್ಡು ಕೊಟ್ಟು ಹೋಗುವ ನನ್ನಂಥಾ ಅಪರಿಚಿತರೇ ಅವನ ಬಂಧು ಬಳಗವೋ ಏನೋ. ಹಾಗಾಗಿ ಅಚಾನಕ್ಕಾಗಿ ಅವನಿಂದ ಈ ಮಾತುಗಳು ಹೊರಟವು.

Richard (1)ಒಂದು ಕ್ಷಣ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ಅರ್ಥವಾಗಲಿಲ್ಲ. ಮತ್ತೆ ಸುಧಾರಿಸಿಕೊಂಡು, ನನ್ನ ಕಡೆಯಿಂದ ಅವನಿಗೆ ಅಭಿನಂದನೆಗಳನ್ನು ತಿಳಿಸಿರಿ ಎಂದೆ. ಮತ್ತೆ ಕುತೂಹಲದಿಂದ ಇನ್ನಷ್ಟು ವಿವರಗಳನ್ನು ಕೇಳಿದೆ. ಅವನ ಹೆಸರು ರಿಚರ್ಡ್ ಎಂದು, ಅವನ ಮಗ ಅಮಿತ್. ಏಕೈಕ ಮಗ. ರಿಚರ್ಡ್ ಯು.ಎ.ಇಯಲ್ಲಿ ಅದ್ಯಾವುದೋ ಕಂಪನಿಯಲ್ಲಿ ಸೇಲ್ಸ್ ಕೆಲಸದಲ್ಲಿದ್ದನಂತೆ. ಅಲ್ಲಿ ಅಕಸ್ಮತ್ತಾಗಿ ಕೆಲಸದ ವೇಳೆಯಲ್ಲಿ ಅದೇನೋ ಭಾರೀ ವಸ್ತು ತಲೆಗೆ ಬಿದ್ದು ಈತನಿಗೆ ಲಕ್ವಾ ಹೊಡೆದಿದೆ. ಕೈ, ಕಾಲುಗಳು ಊನಗೊಂಡದ್ದಲ್ಲದೇ ತೀವ್ರ ತೊದಲುವಿಕೆಯೂ ಆರಂಭವಾಗಿದೆ. ಮತ್ತೆ ಪರಿಹಾರಕ್ಕಾಗಿ ವಿಫಲ ಹೋರಾಟ ನಡೆಸಿ ಸೋಲಲು, ಕುಟುಂಬ ಸಮೇತ ಭಾರತಕ್ಕೆ ಬಂದು ಇಲ್ಲಿ ರಿಕ್ಷಾ ಓಡಿಸಲಾರಂಭಿಸಿದ್ದಾನೆ. ಇಂಥಾ ದುಃಖದ ಕಥಾನಕದಲ್ಲಿ ಮಗ ಅಮಿತ್ ಈ ಅಪರೂಪದ ಸಾಧನೆ ಮಾಡಿದ್ದಾನೆ, ನಮ್ಮ ರಿಚರ್ಡ್ ಜೀವನದಲ್ಲಿ ಸಾರ್ಥಕತೆ ಕಾಣಲು ಮಗನ ಈ ಸಾಧನೆ ಎಷ್ಟು ಮಹತ್ವದ್ದು ಎನಿಸಿತು ನನಗೆ.

ಅಂದು ನನಗೆ ತುರ್ತಾಗಿ ಮುಂದಿನ ಚಿತ್ರೀಕರಣದ ಸ್ಥಳ ತಲುಪಲೇ ಬೇಕಿತ್ತು. ಹಾಗಾಗಿ ರಿಚರ್ಡ್‍ನ ಕಥೆಯನ್ನು ಮುಂದೆ ಕೇಳಲು ಸಾಧ್ಯವಾಗಲಿಲ್ಲ. ಆದರೂ ಅಲ್ಲಿಂದ ಹೊರಡುವಾಗ ಅವನ ಒಂದೆರಡು ಚಿತ್ರಗಳನ್ನು ತೆಗೆದುಕೊಂಡೆ. ಮಹಾನಗರದ ಗೌಜಿ-ಗೊಂದಲಗಳ ನಡುವೆ ರಿಚರ್ಡ್‍ ರಿಕ್ಷಾ ಹಾಗೂ ನಾನು ಮಾಯವಾದೆವು, ನಮ್ಮ ನಮ್ಮ ದಾರಿ, ಕನಸುಗಳ ಬೆನ್ನತ್ತಿ. ಆದರೆ ಅವನು ಇವತ್ತಿನವರೆಗೆ ಮತ್ತೆ ಮತ್ತೆ ಕಾಡುತ್ತಿರುತ್ತಾನೆ. ಅದ್ಯಾವುದೋ ಮರೆಯಲಾಗದ ಸಿನೆಮಾ ಕಥೆಯಂತೆ, ರಿಚರ್ಡ್ ಹಾಗೂ ನಾನು ಕಾಣದ ಅವನ ಮಗ ಅಮಿತ್ ಕಾಡುತ್ತಾರೆ.

ಅಮಿತ್… ನಿನಗೆ ಅಭಿನಂದನೆಗಳು. ತಂದೆಯ ಕಷ್ಟಪರಂಪರೆಯ ನಡುವೆ ಸಂತೋಷ ತಂದ ನೀನೇ ಧನ್ಯ.

This entry was posted in Daily Blog, Society. Bookmark the permalink.

8 Responses to ನೀನು ಇದನ್ನು ಓದುತ್ತಿದ್ದರೆ ಇದು ನಿನಗಾಗಿ…

 1. ರುಕ್ಮಿಣಿಮಾಲಾ ಹೇಳುತ್ತಾರೆ:

  ಚೆನ್ನಾಗಿದೆ. ಅವನ ಹಿನ್ನೆಲೆ ಇನ್ನಷ್ಟು ಮಾತಾಡಿಸಬೇಕಿತ್ತು ಎಂದು ಚಿಂತಿಸುವಾಗ ಕಾಲ ಓಡುತ್ತದೆ ಅದರೊಂದಿಗೆ ನಾವು ಕೂಡ.

 2. ಜಯಲಕ್ಷ್ಮಿ ಹೇಳುತ್ತಾರೆ:

  ಅಮಿತ್ ಗೆ ಅಭಿನಂದನೆಗಳು,ಜೊತೆಯಲ್ಲಿ ಅವನನ್ನು ಈ ಹಂತಕ್ಕೆ ಬೆಳೆಯಲು ಪ್ರೋತ್ಸಾಹಿಸಿದ ರಿಚರ್ಡ್ ಅವರಿಗೂ ಅಭಿನಂದನೆಗಳು

 3. Jayalakshmi ಹೇಳುತ್ತಾರೆ:

  ಪಾಪ!ರಿಚರ್ಡ್-ನಿನ್ನನ್ನು ನೋಡಿ ಇನ್ನೂ ಏನೇನು ಹೇಳಬೇಕೆನಿಸಿತ್ತೋ ಅವರಿಗೆ!ಅಮಿತ್ ಗೆ ನನ್ನದೂ ಅಭಿನಂದನೆ…ಆದರೆ ನಮ್ಮ ಅಭಿನಂದನೆ ಆತನಿಗೆ ತಲುಪೀತೆ?!!

 4. Rajesh Naik ಹೇಳುತ್ತಾರೆ:

  heyy…its touching!!!
  i found ‘my dad’ in richards…. probably all of them would be talking sometimes in their life to strangers about their ‘amit’…!!!
  Hmmmm… dont knw, what more to say!
  i like to be an Amit!

 5. ಗೀತ ಹೇಳುತ್ತಾರೆ:

  ಈ ಬ್ಲಾಗ್ ಚೆನ್ನಾಗಿ ಬರೆದಿದ್ದೀರ. ನಿಮ್ಮ ಚಿತ್ರೀಕರಣದ ತರಾತುರಿಯಲ್ಲೂ ಈ ‘slice of life’ ನ್ನು ಅನುಭವಿಸಿ ಅದರ ಬಗ್ಗೆ ಬರೆಯುವ ಸೆನ್ಸಿಬಿಲಿಟಿ ಇಷ್ಟವಾಯಿತು.

 6. ಚಾಮರಾಜ ಸವಡಿ ಹೇಳುತ್ತಾರೆ:

  ಸೊಗಸಾದ ಗಮನಿಸುವಿಕೆ. ಹುಟ್ಟಿ ಬೆಳೆದ ಊರನ್ನೇ, ಊರ ಜನರನ್ನೇ ಇನ್ನೊಂದು ಕೋನದಿಂದ ನೋಡಿದಾಗ ಸಾಕಷ್ಟು ಹೊಸತನ ಕಾಣುತ್ತದೆ. ಎಷ್ಟೊಂದು ಜನ ಸಾಧಕರಿದ್ದಾರೆ ನಮ್ಮ ಸುತ್ತಮುತ್ತ. ಆದರೆ, ಅವರನ್ನು ಗಮನಿಸುವ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ವ್ಯವಧಾನ ನಮಗಿಲ್ಲ.

  ನೀವು ಆ ಕೆಲಸವನ್ನು ಮಾಡಿದ್ದೀರಿ. ಅಭಿನಂದನೆಗಳು.

 7. shailaja s bhat ಹೇಳುತ್ತಾರೆ:

  Dear Abhaya,

  There are many Richards in this world, but we don’t have enough time to spend to listen them. Your story was (rather narration of him) good.

  Shaila chikkamma

 8. minchulli ಹೇಳುತ್ತಾರೆ:

  Abhay,

  antha esto janakke manada maathu keluva kiviye irolla… neevu keliddoo allade namma varegoo thandiddeeri… thanks. nimma hrudayavanthikege vandane.

  shama, nandibetta
  http://minchulli.wordpress.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s