ಅಗ್ಯಾತವಾಗಿರುವ ರಾಜ್‍ಕೀಯಗಳು


ಅಬ್ಬಾ! ಒಂದು ವಿಚಿತ್ರ ಸನ್ನಿವೇಷದಲ್ಲಿ ಸಿಕ್ಕಿ ಪ್ರಿಯಾಂಕಾ ಕೊಠಾರಿಯ ಎರಡು ಸಿನೆಮಾಗಳನ್ನು ಸತತ ಎರಡು ದಿನ ನೋಡಬೇಕಾಯಿತು ನನಗೆ. ಮೊದಲನೆಯ ಚಿತ್ರ ಕನ್ನಡದ್ದೇ ಚಿತ್ರ, ರಾಜ್ the show man! ಎರಡನೆಯದು ಮರುದಿನ ನೋಡಿದ ಚಿತ್ರ, ರಾಮ್ ಗೋಪಾಲ್ ವರ್ಮಾರ ಅಗ್ಯಾತ್. ಎರಡೂ ಚಿತ್ರಗಳು ಸಾಕಷ್ಟು ತಲೆ ತಿಂದವು ಹಾಗೂ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಒಂದು ಚಿತ್ರ ನಿರ್ಮಿಸಬೇಕಾದರೆ ಅನೇಕ ತಂತ್ರಜ್ಞಾನ, ಕಲಾವಿದರು ಒಟ್ಟಾಗಿ ಕೆಲಸ ಮಾಡುವುದು ಅನಿವಾರ್ಯ. ಆದರೆ ಇವುಗಳ ನಡುವೆ ಒಂದು ಸಾಮರಸ್ಯ ಅಗತ್ಯ. ಹೀಗಿರುವಾಗ, ಈ ಸಾಮರಸ್ಯ ಹಾಳಾದರೆ ಏನಾಗುತ್ತದೆ? ಮನುಷ್ಯನ ದೇಹದಲ್ಲಿ ಎಡಗಾಲು ತಾನು ಬಲಗಾಲಿಗಿಂತ ಶ್ರೇಷ್ಟ ಎಂದು ಕೊಂಡರೆ ಹೇಗಿರುತ್ತದೆ? ಇನ್ನು ಇಡೀ ಚಿತ್ರವನ್ನು ಪ್ರಚಾರ ಮಾಡಲಿಕ್ಕೆಂದು ಅದರ ಒಂದು ಭಾಗವನ್ನು ಹೇಳಿ ಆಡಿಕೊಳ್ಳುವುದರಲ್ಲಿ ಎಂಥಾ ರಾಜಕೀಯ ಇದೆ?! ಇನ್ನು ನೂರು ಜನ ಬೆತ್ತಲಿರುವಾಗ ಒಬ್ಬನ ಬೆತ್ತಲೆಯ ಕುರಿತಾಗಿ ಮಾಧ್ಯಮಗಳು ಮಾತನಾಡುವುದರ ಹಿಂದಿನ ರಾಜಕೀಯ ಏನು? ಹೀಗೆ ಪ್ರಶ್ನೆಗಳು ನನ್ನ ತಲೆಯಲ್ಲಿ. ಅದನ್ನು ನಿಮ್ಮ ತಲೆಗೆ ದಾಟಿಸಲು ಕುಳಿತಿದ್ದೇನೆ ಇಲ್ಲಿ.

ಮೊದಲಿಗೆ ರಾಜ್ ಚಿತ್ರದ ಬಗ್ಗೆ ಕೆಲವು ಮಾತುಗಳು. ಮಂಗಳೂರಿನ ಸೆಂಟ್ರಲ್ ಸಿನೆಮಾ ಮಂದಿರದಲ್ಲಿ ಅಂದು ಮಧ್ಯಾಹ್ನದ ಈ ಚಿತ್ರ ನೋಡಿದ ಸುಮಾರು ೪೦ ಜನರಲ್ಲಿ ನಾನೂ ಒಬ್ಬ. ಚಿತ್ರ ಬಿಡುಗಡೆಗೆ ಮೊದಲು ಮಾಡಿದ ಭಾರೀ ಪ್ರಚಾರ, ಬಿಡುಗಡೆಯಾದೊಡನೆ ಬಂದ ಭಾರೀ ಅಪಪ್ರಚಾರಗಳು ನನ್ನನ್ನು ಈ ಚಿತ್ರ ನೋಡುವಂತೆ ಮಾಡಿತ್ತು. ಒಬ್ಬ ಜೂನಿಯರ್ ಕಲಾವಿದ ಹೇಗೆ ತನ್ನ ಕನಸುಗಳ ಬೆನ್ನಟ್ಟುತ್ತಾನೆ, ಆ ಕನಸುಗಳು ಹೇಗೆ ಭಗ್ನವಾಗುತ್ತಾ ಭಗ್ನವಾಗುತ್ತಾ ಸಾಕಾರಗೊಳ್ಳುತ್ತವೆ ಎನ್ನುವ ಕಥೆಗೆ ಅಲ್ಲಲ್ಲಿ ಮಚ್ಚು, ಕೊಚ್ಚು, ಬಿಚ್ಚು ಮಸಾಲೆಗಳನ್ನು ಹಾಕುತ್ತಾ ಹೇಳಿರುವ ಕಥೆ ಇದು. ಭಾರೀ ಖರ್ಚಿನಲ್ಲಿ ಮಾಡಿದ ಚಿತ್ರ ಎಂದು ಹೆಸರಾಗಿರುವ ಈ ಚಿತ್ರ ಅನೇಕ ಕಡೆ ತಾಂತ್ರಿಕವಾಗಿ ದುರ್ಭಲವಾಗಿ ಕಾಣುವಾಗ ಹಾಗಾದರೆ ದುಡ್ಡು ಎಲ್ಲಿಗೆ ಹೋಯಿತು ಎಂದು ಪ್ರಶ್ನೆಯನ್ನು ಏಳಿಸುತ್ತದೆ. ಕೆಲವು ಉದಾಹರಣೆಗಳು ಹೀಗೆವೆ ನೋಡಿ… ಚಿತ್ರದ ಆರಂಭದಲ್ಲಿ ಇರುವ ಹೊಡೆದಾಟದ ದೃಶ್ಯವನ್ನೇ ನೋಡಿ. ಅಲ್ಲಿ ಭರ್ಜರಿ ಮಳೆ ಸುರಿಯುತ್ತಿದೆ. ಆದರೆ ಆಕಾಶದಲ್ಲಿ ಒಂದೇ ಒಂದು ಕಪ್ಪು ಮೋಡ ಇಲ್ಲ! ಅಲ್ಲದೆ ಭರ್ಜರಿ ಬಿಸಿಲು ದೃಶ್ಯದಲ್ಲಿ ಅಭಿನಯಿಸುತ್ತಿರುವವರೆಲ್ಲರ ನೆರಳನ್ನು ಧಾರಾಳವಾಗಿ ತೋರಿಸುತ್ತಿದೆ. ಇದೆಂಥಾ ಮಳೇ ಅನ್ನುತ್ತೀರೋ? ಅದಿರಲಿ.. ಮುಂದುವರೆಯೋಣ… ಇನ್ನೊಂದು ಸನ್ನಿವೇಶದಲ್ಲಿ ಪೋಲಿ ಸಿನೆಮಾದ ನಿರ್ದೇಶಕರನ್ನು ಅವರ ಮನೆಯ ಮುಂದೆ ಚಿತ್ರ ನಿರ್ಮಾಣ ಮುಂದುವರೆಸಲು ಕೇಳಿಕೊಳ್ಳುವ ಸನ್ನಿವೇಷದಲ್ಲಿ ಒಂದು ಶಾಟಿನಲ್ಲಿ ಬೆಳಕಾಗಿದ್ದದು ಮತ್ತೊಂದು ಶಾಟಿಗಾಗಿವಾಗ ರಾತ್ರಿಯಾಗಿರುವುದು ಕಾಣ ಬಹುದು. ಹೀಗೆ ಅನೇಕ ಕಡೆ ಚಿತ್ರದಲ್ಲಿನ ತಾಂತ್ರಿಕ ಗೊಂದಲಗಳನ್ನು ಕಾಣಬಹುದು. ಮತ್ತೆ ಇಡೀ ಚಿತ್ರವನ್ನು Super 35mmನಲ್ಲಿ ಚಿತ್ರೀಕರಿಸಿ DI ತಂತ್ರದ ಮೂಲಕ ಹಾಯಿಸಿರುವುದಾಗಿ ಚಿತ್ರ ತಂಡ ಹೇಳಿಕೊಳ್ಳುತ್ತದೆ. ಆದರೆ ಚಿತ್ರಕ್ಕೆ ಇದರ ಅಗತ್ಯ ಏನಿತ್ತು? ಚಿತ್ರ ಎಲ್ಲೂ ಇದಕ್ಕೆ ಉತ್ತರ ಕೊಡುವುದಿಲ್ಲ. ಧ್ವನಿ ಸಂಯೋಜನೆಯಲ್ಲಿ ಮಳೆ, ವಾಹನಗಳ ಸದ್ದು, ಕಾಲು ಸಪ್ಪಳ ಇಂಥಾ ಪ್ರಾಥಮಿಕ ವಿಷಯಗಳಿಗೇ ಸಾಕಷ್ಟು ಗಮನ ಕೊಟ್ಟಿಲ್ಲದೇ ಇರುವುದು ಕಾಣಿಸುತ್ತದೆ. ಹಾಡುಗಳ ಚಿತ್ರಣಕ್ಕೆ ಯಾವುದೋ ವಿದೇಶಿ ತಾಣಕ್ಕೆ ಹೋಗಿರುವುದು ಗಾಂಧೀನಗರದ ಮತ್ತೊಂದು ಕ್ಲೀಷೆಯಾಗಿ ಕಾಣಿಸುತ್ತದೆ ಅಷ್ಟೇ. ಹೀಗೆ ಈ ಚಿತ್ರದ ಕುರಿತಾದ ನನ್ನ ತೊಂದರೆಗಳು ಮುಂದುವರೆಯುತ್ತವೆ. ಆದರೆ ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಚಿತ್ರಗಳನ್ನು ನೋಡಿದರೆ, ಈ ಚಿತ್ರವನ್ನು ವಿಮರ್ಷಕರು ಹೀಗೇಕೆ ಬೈಯುತ್ತಿದ್ದಾರೆ? ಇತರ ಚಿತ್ರಗಳಿಗಿಂತ ಇದು ಯಾವ ರೀತಿ ಕೀಳಾಗಿದೆ? ಎಂಬ ಪ್ರಶ್ನೆ ಬರುತ್ತದೆ. ಇಲ್ಲಿ ಮಾಧ್ಯಮಗಳಿಗೆ ಬೇರೇನಾದರೂ ಆಸಕ್ತಿಗಳಿವೆಯೇ?

ನಾನು ನೋಡಿದ ಎರಡನೇ ಚಿತ್ರ ರಾಮ್ ಗೋಪಾಲ್ ವರ್ಮಾರ ಅಗ್ಯಾತ್ ಎಂಬ ಭಯಾನಕ ಚಿತ್ರ. ನಿಜಕ್ಕೂ ಕೇವಲ ಒಂದೂವರೆ ಗಂಟೆಯ ಈ ಚಿತ್ರದಲ್ಲಿ ನಿಜಕ್ಕೂ ಅಗ್ಯಾತವಾಗಿರುವುದು ಕಥೆ! ಒಂದು ಚಿತ್ರ ತಂಡ ಅದ್ಯಾವುದೋ ಕಾಡಿಗೆ ಚಿತ್ರೀಕರಣಕ್ಕೆ ಎಂದು ಹೋಗುತ್ತದೆ. ಅಲ್ಲಿ ಅದ್ಯಾವುದೋ ಅಜ್ಞಾತ ವಿಷಯದ ಕಾರಣ ಒಬ್ಬೊಬ್ಬರೇ ಸಾಯುತ್ತಾ ಹೋಗುತ್ತಾರೆ ಎನ್ನುವುದೇ ಇಲ್ಲಿ ಕಥೆಯಂತೆ! ನೂರಾರು ಹಾಲಿವುಡ್ ಚಿತ್ರಗಳಲ್ಲಿ ಬಂದು ಹೋಗಿರುವ ಈ ಎಳೆಯನ್ನು ಇಟ್ಟುಕೊಂಡು ಎಲ್ಲಿಯೂ ಹೊಸತನ ತೋರಿಸದ ಚಿತ್ರ ಇದು. ಪ್ರಿಯಾಂಕಾ ಕೊಠಾರಿಯ ಮೈಮಾಟವನ್ನು ಮೆರೆಯಲೆಂದೇ ರೂಪಿಸಿದಂತಿದೆ ಇಡೀ ಚಿತ್ರ. ಧ್ವನಿ ಸಂಯೋಜನೆಯಲ್ಲಾಗಲೀ, ಚಿತ್ರ ಕಥೆಯಲ್ಲಾಗಲೀ, ಸಂಕಲನದಲ್ಲಾಗಲಿ ಯಾವುದೇ ಕ್ಷೇತ್ರದಲ್ಲೂ ಹೊಸತನವೇ ಇಲ್ಲದ ಮತ್ತೊಂದು ಚಿತ್ರ ಇದು. ಒಂದೂವರೆ ಗಂಟೆಯಲ್ಲಿ ನೀವು ಒಮ್ಮೆಯಾದರೂ ಹೆದರಿದಲ್ಲಿ, ನೀವು ನಿಜಕ್ಕೂ ಮಹಾನ್ ಹೆದರು ಪುಕ್ಕರೇ ಇರಬೇಕು. ಇಲ್ಲವಾದರೆ ಚಿತ್ರ ಯಾವುದೇ ರೀತಿಯಲ್ಲೂ ತಮ್ಮನ್ನು ಹೆದರಿಸುವಲ್ಲಿ ಸಫಲವಾಗುವುದಿಲ್ಲ. ಇನ್ನು ಇಡೀ ಚಿತ್ರವನ್ನು ಶ್ರೀಲಂಕಾದ ಅದ್ಯಾವುದೋ ಕಾಡಿನಲ್ಲಿ ಚಿತ್ರೀಕರಿಸಿದ್ದಾರೆ ಎಂದು ರಾಂಗೋಪಾಲ್ ವರ್ಮಾ ಭಾರೀ ಪ್ರಚಾರಗಿಟ್ಟಿಸಿಕೊಂಡರು. ಆದರೆ ಅವರೊಮ್ಮೆ ನಮ್ಮ ಮಲೆನಾಡಿಗೆ ಬಂದಿದ್ದರೆ, ಅನೇಕ ಎಸ್ಟೇಟುಗಳಲ್ಲಿನ ಮನೆಯ ಹಿಂದಿನ ಕಿರು ಕಾಡುಗಳೇ ಇದಕ್ಕಿಂತ ಎಷ್ಟೋ ಸುಂದರವಾಗಿ ಇರುತ್ತವೆ ಎನಿಸುವಷ್ಟು ಮಾಮೂಲಿ ಕಾಡು ಅಲ್ಲಿ ಕಂಡು ಬರುವುದು. ಹಾಗಾದರೆ ಚಿತ್ರ ತಂಡ ಶ್ರೀಲಂಕಾಕ್ಕೆ ಏಕೆ ಹೋಯಿತು? ಮೊದಲೆಲ್ಲಾ ಚಿತ್ರಕ್ಕೆ ಪೂರಕವಾಗಿ ಚಿತ್ರೀಕರಣ ತಾಣಗಳಿರುತ್ತಿದ್ದವು, ನಟ, ನಟಿಯರಿರುತ್ತಿದ್ದರು ಇತ್ಯಾದಿ. ಆದರೆ ಇಂದು Super 35mmನಲ್ಲಿ ಚಿತ್ರೀಕರಿಸುವುದು, DI ಮಾಡಿಸುವುದು, ವಿದೇಶೀ ತಾಣದಲ್ಲಿ ಚಿತ್ರೀಕರಣ ನಡೆಸುವುದು ಇತ್ಯಾದಿಗಳು ಕೇವಲ ಪ್ರಚಾರ ತಂತ್ರಗಳಾಗುತ್ತಿರುವುದು ನಿಜಕ್ಕೂ ಶೋಚನೀಯ.

ಹೀಗೆ ಎರಡು ಚಿತ್ರಗಳನ್ನು ನೋಡಿ ಪಡೆದ ತಲೆನೋವನ್ನು ನಿಮ್ಮ ತಲೆಗೆ ದಾಟಿಸಿ ಹಗುರಾಗಿದ್ದೇನೆ. ನಿಮ್ಮ ಅನಿಸಿಕೆಗಳನ್ನು ಕೇಳಲು ಕಾತುರನಾಗಿದ್ದೇನೆ.

This entry was posted in Film reviews. Bookmark the permalink.

4 Responses to ಅಗ್ಯಾತವಾಗಿರುವ ರಾಜ್‍ಕೀಯಗಳು

 1. ಅಶೋಕ ವರ್ಧನ ಹೇಳುತ್ತಾರೆ:

  ಇಂಥವುಗಳಿಂದಲೇ ‘ಮಂತ್ರಕ್ಕಿಂಥಾ ಉಗುಳೇ ಹೆಚ್ಚು’ ಎಂಬ ಗಾದೆ ಹುಟ್ಟಿದ್ದು. ಸ್ವಂತ ಯೋಗ್ಯತೆಯಿಲ್ಲದವರು “ಇಂಥವರ ಸಂಬಂಧಿ” ಎಂದು ಹೇಳಿ ಕಾರ್ಯಸಾಧಿಸಲು ಪ್ರಯತ್ನಿಸುವ ಹಾಗೇ ಇವರ ಸ್ಥಿತಿ.
  ಅಶೋಕವರ್ಧನ

 2. rajendra prasad ಹೇಳುತ್ತಾರೆ:

  ಹೇಳುವುದೇನು… ಸಿನಿಮಾ ನೋಡುವುದು ನಿಲ್ಲಿಸಿ ಸುಮಾರು ಆರೇಳು ವರ್ಷವೇ ಆಯಿತು ಮಾರ್ರೆ….! ಕನ್ನಡ ಸಿನಿಮಾಗಳನ್ನ ನೋಡಬೇಕೆನಿಸುವುದೇ ಇಲ್ಲ. ಆಗಾಗ್ಗೆ ಫಿಲಂ ಸೊಸೈಟಿಗಳಲ್ಲಿ ನೋಡಿದ ಚಿತ್ರಗಳ ಹೊರತುಪಡಿಸಿ!

 3. Prasanna ಹೇಳುತ್ತಾರೆ:

  Nannalli kannada da lipi ellade eruvudarinda englishnalle kannada bareyuthene kshamisi. Agantukada bagge bareyudakkinata bareyade vulivyudu olledu adare bareyale beku yekendere agale avaru AGANTHUK – 2, bagge mataduttiddare. Ramagopal varma chitragalannu nodade eruvude volleyadu avaru innu Rangeeladinda horage banda hagilla.

 4. Nagabhushana ಹೇಳುತ್ತಾರೆ:

  ಈ ಎರಡೂ ಚಿತ್ರ’ರತ್ನ’ಗಳನ್ನು ನಾನೂ ನೋಡಿದ್ದು, ನಮಗಾಗಲೇ ತಲೆ ನೋವು ಇದ್ದು, ನಿಮ್ಮ ತಲೆನೋವಿಗೆ ನಮ್ಮಲ್ಲಿಲ್ಲ ಜಾಗ. ಹಾಗಾಗಿ ನಿಮ್ಮ ತಲೆ ನೋವನ್ನು ನೀವೇ ಇಟ್ಟುಕೊಳ್ಳಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s