(‘ದೇಶ ಕಾಲ’ದಲ್ಲಿ ಪ್ರಕಟಿತ ನನ್ನ ಲೇಖನ ಇಲ್ಲಿದೆ. ಇದೇ ವಿಷಯದ ಮೇಲೆ ಅನೇಕ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. ದೇಶಕಾಲವನ್ನು ಕೊಂಡು, ಓದಿ ಪ್ರೋತ್ಸಾಹಿಸಿ)
ಸಿನೆಮಾ ಮಾಧ್ಯಮಕ್ಕೆ ನಾನಿನ್ನೂ ಕಣ್ಣು ತೆರೆಯುತ್ತಿರುವ ಕಿರಿಯ. ನನ್ನ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವುದು, ನನ್ನ ಪ್ರಯೋಗಗಳನ್ನು ಮಾಡುವುದರೊಂದಿಗೆ ಅದರಲ್ಲಿ ಒಂದು ಜೀವನವನ್ನೂ ಕಟ್ಟಿಕೊಳ್ಳುವ ಹೋರಾಟದಲ್ಲಿ ಎದುರಿಸಬೇಕಾಗುವ ಒಂದು ಪ್ರಮುಖ ವಿಚಾರ ಈ ‘ಜನಪ್ರಿಯ’ ಸಿನೆಮಾ. ಹಾಕಿದ ದುಡ್ಡನ್ನು ಮರಳಿ ಪಡೆಯುವ, ನಿರ್ಮಾಪಕನ ಆಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಅವನ ‘ಜನಪ್ರಿಯ’ ಎಂಬುದರ ಕುರಿತಾಗಿ ಇರುವ ಕಲ್ಪನೆಗಳನ್ನು ಅರ್ಥೈಸಿಕೊಂಡು ಚಿತ್ರ ನಿರ್ದೇಶಿಸುವ ಪ್ರಯತ್ನದಲ್ಲಿ ನನ್ನೊಂದಿಷ್ಟು ಯೋಚನೆಗಳನ್ನು ಸವಿನಯ ಚರ್ಚೆಗೆ ತೆರೆದಿಡುತ್ತಿದ್ದೇನೆ.
ಸಿನೆಮಾ ಎನ್ನುವುದು ಭಾರೀ ಹಣ ಹೂಡಿಕೆಯಿರುವ, ಅನೇಕ ಮಂದಿ ಒಟ್ಟಾಗಿ ಸೇರಿ ಸೃಷ್ಟಿಸುವ ಕೃತಿಯಾಗಿದೆ. ಇದರಿಂದಾಗಿ ದಕ್ಕುವ ಯಶಸ್ಸು ಅಥವಾ ಪ್ರತಿಫಲ ಅಷ್ಟೇ ದೊಡ್ಡದಾಗಿರಬೇಕಾಗುತ್ತದೆ. ಹೀಗಾಗಿ ಕೃತಿ ‘ಜನಪ್ರಿಯ’ವಾಗುವುದು ಅಗತ್ಯವಾಗಿರುತ್ತದೆ. ಜನಪ್ರಿಯ ಎಂದರೆ ಅತ್ಯಂತ ಹೆಚ್ಚು ಜನ ವೀಕ್ಷಿಸುವ ಚಿತ್ರ (ಇದರಿಂದಾಗಿ ಹೆಚ್ಚು ಹಣ ಸಂಗ್ರಹಿಸಿದ ಚಿತ್ರ) ಎಂದು ಸಾಮಾನ್ಯವಾಗಿ ಚಿತ್ರೋದ್ಯಮದಲ್ಲಿ ಅರ್ಥೈಸಲಾಗುತ್ತದೆ. ಆದರೆ ಸಿನೆಮಾವನ್ನು ‘ಜನಪ್ರಿಯ’ ಎಂದು ಕರೆಯುವುದು ಹೇಗೆ ಎನ್ನುವುದು ಸ್ವಲ್ಪ ಗೊಂದಲದ ವಿಚಾರ. ಏಕೆಂದರೆ, ಇದನ್ನು ‘ಜನಪ್ರಿಯಗೊಳಿಸುವ’ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವ ಜನ ಸಮುದಾಯ ತುಂಬಾ ಹಿರಿದಾದದ್ದು ಮತ್ತು ಅಷ್ಟೇ ವಿಭಿನ್ನವಾದದ್ದು. ಸಿನೆಮಾದಲ್ಲಿ ಆಡು ಭಾಷೆ, ನೃತ್ಯ, ಗೀತ, ನಾಟಕಗಳೆಲ್ಲವೂ ಇದ್ದರೂ, ಸಿನೆಮಾಕ್ಕೆ ಅದರದೇ ಆದ ಭಾಷೆಯೊಂದು ಇರುವುದರಿಂದ ಅದರ ಪ್ರಭಾವ ಯಾವುದೇ ಗಡಿಗಳಿಲ್ಲದೇ ಎಲ್ಲಾ ಪ್ರೇಕ್ಷಕರ ಮೇಲೆಯೂ ಆಗಲು ಸಾಧ್ಯ. ಹೀಗಾಗಿ ಸಿನೆಮಾ ಕುರಿತಾಗಿ ಮಾತನಾಡುವಾಗ ‘ಜನಪ್ರಿಯ’ ಎನ್ನುವ ಶಬ್ದವೇ ಪ್ರಶ್ನಾರ್ಹವಾಗುತ್ತದೆ. ಒಂದು ಕಾಲದಲ್ಲಿ ಜಪಾನಿನಲ್ಲಿ ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ಅಕಿರಾ ಕುರೋಸಾವಾನ ಅನೇಕ ಚಿತ್ರಗಳನ್ನು ಇಂದು ಜಗತ್ತಿನಾದ್ಯಂತ ಚಿತ್ರ ಪ್ರೇಮಿಗಳು ಒಂದು ‘ಕ್ಲಾಸಿಕ್’ ಎಂದು ನೋಡುತ್ತಾರೆ. ಅಂದು ಅದನ್ನು ವಾಣಿಜ್ಯಿಕ ಚಿತ್ರವೆಂದೇ ಪರಿಗಣಿಸಲಾಗಿದ್ದರೂ ಇಂದು ಜನ ಅದನ್ನು ನೋಡುವ ರೀತಿಯೇ ಭಿನ್ನವಾಗಿದೆ. ಅಂತೆಯೇ ಮುಂದೆ ಆಗಬಹುದಾದ ವಿಚಾರಗಳನ್ನು ಇಂದೇ ಮಾತನಾಡುವ ಚಿತ್ರಗಳನ್ನೂ ಚಿತ್ರೋದ್ಯಮದ ಜನ ‘ಕ್ಲಾಸ್’ ಅಥವಾ ಕಲಾತ್ಮಕ ಎಂದು ಪರಿಗಣಿಸುತ್ತಾರೆ.
ನಮ್ಮ ಚಿತ್ರೋದ್ಯಮದಲ್ಲಿ ಈ ‘ಜನಪ್ರಿಯ’ ಎಂಬ ಕಲ್ಪನೆಗೆ ‘ಕ್ಲಾಸ್’ (ಉತ್ಕೃಷ್ಟ) ಹಾಗೂ ‘ಮಾಸ್’ (ಜನಪ್ರಿಯ) ಎಂಬ ಎರಡು ಪದಗಳನ್ನು ಬಳಸುತ್ತಾರೆ. ‘ಕ್ಲಾಸ್’ ಆಗಿದ್ದು ‘ಮಾಸ್’ ಆಗುವುದಿಲ್ಲ ಹಾಗೂ ‘ಮಾಸ್’ ಆಗಿದ್ದು ‘ಕ್ಲಾಸ್’ ಅಲ್ಲ ಎಂಬ ನೇರ ಮಾತು ನಮ್ಮ ಉದ್ಯಮದಲ್ಲಿ ಇದೆ! ಹಾಗಾದರೆ ಈ ‘ಮಾಸ್’ ಅಥವಾ ಜನಪ್ರಿಯ ಚಿತ್ರದ ಅಂಶಗಳೇನು? ಅವು ಸಾರ್ವಕಾಲಿಕ ಸತ್ಯಗಳೇ? ಜನಪ್ರಿಯತೆಯನ್ನು ಒಂದು ನಿರ್ದಿಷ್ಟ ಮಾನದಂಡದಿಂದ ಅಳೆಯುವುದು ಸಾಧ್ಯವೇ? ಇಲ್ಲ ಎನಿಸುತ್ತದೆ. ಒಂದು ಕಾಲದಲ್ಲಿ ಡಾ| ರಾಜ್ ಕುಮಾರ್ ಅಭಿನಯಿಸುತ್ತಿದ್ದ ಚಿತ್ರಗಳನ್ನು ನೋಡಿದರೆ, ಅವುಗಳು ಸಾಮಾಜಿಕ ಕಳಕಳಿಯನ್ನು ಹೊಂದಿದ್ದ, ಆ ಕಾಲದ ಸಾಮಾಜಿಕ ಮೌಲ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ಚಿತ್ರಗಳಾಗಿದ್ದವು. ದೇಶಭಕ್ತಿ, ಉದಾತ್ತ ಪ್ರೇಮ, ನೆಲದೊಡನೆ ನೇರ ಸಂಪರ್ಕದಲ್ಲಿರುವ ನಾಯಕ ಇತ್ಯಾದಿ ಅಂಶಗಳು ಡಾ| ರಾಜ್ ಕುಮಾರರನ್ನು ಅವರೇರಿದ ಎತ್ತರಕ್ಕೆ ಏರಿಸಿದವು. ಹಾಗಾದರೆ ಈ ಅಂಶಗಳು ಜನಪ್ರಿಯತೆಗೆ ಸೂತ್ರವೇ? ಇಲ್ಲ ಎಂದು ಮತ್ತೆ ಉತ್ತರ ಸಿಗುತ್ತದೆ. ಏಕೆಂದರೆ, ಈ ಸೂತ್ರಗಳನ್ನು ಡಾ| ರಾಜ್ ಕುಮಾರ್ ನಂತರ ಅನೇಕ ನಾಯಕ ನಟರು ಅನುಸರಿಸಿದರೂ ಹೆಚ್ಚೇನೂ ಸಫಲರಾಗಲಿಲ್ಲ. ಇದರಿಂದ ಸ್ಪಷ್ಟವಾಗುವುದೆಂದರೆ ಚಿತ್ರವನ್ನು ಜನಪ್ರಿಯಗೊಳಿಸುವ ಕಾರಣಗಳು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತಾ ಸಾಗಿವೆ. ಹೀಗಿರುವಾಗ ಸಿನೆಮಾ ಒಂದರ ಜನಪ್ರಿಯತೆಯೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಾಗುವುದೂ ಸಹಜ. ಹಾಗಾದರೆ ಯಾವುದೇ ಸಿನೆಮಾವನ್ನು ‘ಜನಪ್ರಿಯ’ ಎನ್ನುವುದು, ಒಂದು ಕಾಲಘಟ್ಟಕ್ಕೆ ಸಂಬಂಧಿಸಿದಂತೆ, ಒಂದು ನಿರ್ದಿಷ್ಟ ವರ್ಗದ ಜನರಿಗೆ ಸಂಬಂಧಿಸಿದಂತೆ ಮಾತ್ರ ಹೇಳುವ ಹೇಳಿಕೆಯಾಗುತ್ತದೆ ಹಾಗೂ ಇದರಿಂದ ಅನೂರ್ಜಿತ ಎಂದು ನನಗೆ ಅನಿಸುತ್ತದೆ.
ಇಲ್ಲಿ ಸಿನೆಮಾ ಮಾಧ್ಯಮಕ್ಕೆ ಇರುವ ಇನ್ನೊಂದು ಸಮಸ್ಯೆಯನ್ನು ಹೇಳಬೇಕು. ವ್ಯಾನ್ ಗಾಗ್‍ನ ಒಂದು ಕೃತಿಯನ್ನು ನೋಡಿದರೆ, ಅದರಲ್ಲಿನ ಧ್ವನಿಗಳು ನಮಗೆ ಅರ್ಥವಾಗದಿದ್ದರೆ, ಆ ಚಿತ್ರದಲ್ಲಿ ಏನೋ ಗಹನವಾದದ್ದು ಇದೆ, ನನ್ನ ಮಿತಿಗೆ ಅದು ಮೀರಿದ್ದು ಎನ್ನುವ ಭಾವ ನೋಡುಗನಲ್ಲಿ ಮೂಡುತ್ತದೆ. ಸಾಹಿತ್ಯ ಅರ್ಥವಾಗದೇ ಹೋದರೆ, ಅದು ತನ್ನ ಅರಿವಿಗೆ ಮೀರಿದ್ದು ಎಂದು ಓದುಗ ಅಂದುಕೊಳ್ಳುತ್ತಾನೆ. ಸಂಗೀತ, ನಾಟಕಗಳಲ್ಲೂ ಇದು ಸತ್ಯವಾಗುತ್ತದೆ. ನಾಟಕದಲ್ಲಿ ನಟನೊಬ್ಬ ಮೇಜಿನ ಮೇಲೆ ಇಲ್ಲದ ಲೋಟವೊಂದನ್ನು ಎತ್ತಿ ನೀರು ಕುಡಿದಂತೆ ನಟಿಸಿದರೂ ಅಲ್ಲಿ ಲೋಟ ಇದ್ದದ್ದು ಹೌದು ಎಂದು ಒಪ್ಪಿಕೊಳ್ಳಲು ಪ್ರೇಕ್ಷಕ ಸಿದ್ಧನಿರುತ್ತಾನೆ. ಇಲ್ಲೆಲ್ಲಾ ಅಮೂರ್ತಗಳನ್ನು ಒಪ್ಪಿಕೊಳ್ಳುವಂತೆ ಸಿನೆಮಾ ಮಾಧ್ಯಮದಲ್ಲಿ ಜನ ಅಮೂರ್ತಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಏಕೆಂದರೆ ಇಲ್ಲಿ ನಾವು ನೈಜ ಬಿಂಬಗಳನ್ನು ಜೋಡಿಸುತ್ತಾ ಅಮೂರ್ತವನ್ನು ಕಟ್ಟ ಬೇಕಾಗುತ್ತದೆ. ಇದರಿಂದಾಗಿ ಎದುರಾಗುವ ದೊಡ್ಡ ಸಮಸ್ಯೆ ಎಂದರೆ, ಆ ಅಮೂರ್ತ ನೋಡುಗನನ್ನು ತಲುಪದೇ ಹೋದರೆ, ಸಾಹಿತ್ಯದಲ್ಲಿ ಹೇಳುವಂತೆ reading between the lines ಆ ಸಿನೆಮಾದ ಮಟ್ಟಿಗೆ ಆಗುವುದೇ ಇಲ್ಲ! ಅದು ಬರೇ ಒಂದು ಕಥೆಯ ನಿರೂಪಣೆಯಷ್ಟೇ ಆಗಿ ಉಳಿದು ಬಿಡುತ್ತದೆ. ಆದರೆ ಸಿನೆಮಾ ಮಾಧ್ಯಮಕ್ಕೆ ಪ್ರವೇಶವೇ ಇಲ್ಲದವನೂ ಇದು ತನ್ನ ಮಿತಿ ಎಂದು ಭಾವಿಸದೇ ಇದು ಕೃತಿಯ ಮಿತಿ ಎಂದು ದೂರುವ ಅಪಾಯ ಇದೆ. ಹೀಗಾಗಿ ‘ಜನಪ್ರಿಯ’ ಕೃತಿಯ ಸೃಷ್ಟಿಯ ಪ್ರಯತ್ನದಲ್ಲಿ, ಅತ್ಯಂತ ಹೆಚ್ಚು ಜನರಿಗೆ ನನ್ನ ಕಥೆಯಲ್ಲಿನ ಎಲ್ಲಾ ವಿಷಯಗಳನ್ನು ಅರ್ಥ ಮಾಡಿಸಿಯೇ ಸಿದ್ಧ ಎಂಬ ಹಠಕ್ಕೆ ಬೀಳುವ ಚಿತ್ರ ನಿರ್ದೇಶಕ, ವಾಚಾಳಿ, ಅತಿರಂಜಿತ ಕಥೆಗಳನ್ನು ಹೇಳಲು ಹೊರಡುತ್ತಾನೆ. ಇದು ‘ಜನಪ್ರಿಯವಾಗುವ’ ಪ್ರಯತ್ನದಲ್ಲಿ ನಮ್ಮ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆ.
ವಿಚಿತ್ರವೆಂದರೆ, ಇದೇ ಪ್ರೇಕ್ಷಕ ವರ್ಗದಲ್ಲಿ ಒಂದು ಹಿರಿಯದಾಗ ವರ್ಗ ಇತರ ದೇಶಗಳ ಚಿತ್ರಗಳನ್ನು ಬೇರೆಯೇ ಮಾನದಂಡದಲ್ಲಿ ನೋಡುವುದು! ಕರ್ನಾಟಕದ ಪ್ರೇಕ್ಷಕನಿಗೆ, ಹಿಂದಿ ಸಿನೆಮಾದಲ್ಲಿ ಒಪ್ಪಿಗೆಯಾಗುವ (ಹಾಗೂ ಅದರಿಂದ ಜನಪ್ರಿಯವೂ ಆಗುವ) ಎಷ್ಟೋ ವಿಚಾರಗಳು ಕನ್ನಡ ಸಿನೆಮಾದಲ್ಲಿ ತೋರಿಸಿದರೆ ಒಪ್ಪಿಗೆಯಾಗುವುದಿಲ್ಲ. ಒಂದು ಉದಾಹರಣೆಯನ್ನು ಗಮನಿ: ರಾಮಾಯಣ ಮಹಾಭಾರತದಂಥಾ ಕೃತಿಗಳಲ್ಲಿ ಎದುರಾಗುವ Digression ನಮ್ಮ ಸಿನೆಮಾಗಳಲ್ಲೂ ಹಾಡು, ಕುಣಿತ ಅಥವಾ ಹಾಸ್ಯ ಸರಣಿಗಳಲ್ಲಿ ಕಂಡು ಬರುತ್ತವೆ. ಮೂಲ ಕಥೆಯ ಓಟಕ್ಕೆ ನೇರ ಸಂಬಂಧ ಇಲ್ಲದೇ ನಮ್ಮ ಚಿತ್ರಗಳಲ್ಲಿ `Comedy track’ ಇರುತ್ತವೆ. ಆದರೂ ಪ್ರೇಕ್ಷಕನಿಗೆ ಸಿನೆಮಾದ ಅನುಭವದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಇದು ನಮ್ಮ ಚಿತ್ರೋದ್ಯಮದಲ್ಲಿ ಜನಪ್ರಿಯತೆಯ ಒಂದು ಸೂತ್ರವೇ ಆಗಿಬಿಟ್ಟಿದೆ. ಆದರೆ ಇದೇ ಪ್ರೇಕ್ಷಕನಿಗೆ ಹಿಂದಿಯ ರಾಮ್ ಗೋಪಾಲ್ ವರ್ಮಾರ ಹಾಡುಗಳೇ ಇಲ್ಲದ, ಭೂತ-ಪ್ರೇತದ ಕಥೆಗಳಿರುವ, ಹಾಸ್ಯ ತುಣುಕುಗಳಿಲ್ಲದ ಚಿತ್ರಗಳನ್ನು ತೋರಿಸಿದರೆ ಅದೂ ಬೇರೆಯೇ ಕಾರಣಗಳಿಂದ ಒಪ್ಪಿಗೆಯಾಗುತ್ತವೆ. ಇದು ‘ಜನಪ್ರಿಯ’ ಎಂಬ ಕಲ್ಪನೆ ಅಥವಾ ಅದಕ್ಕೆ ಇರುವ ಸಿದ್ಧ ಸೂತ್ರಗಳ ಸುಳ್ಳನ್ನು ಮತ್ತೊಮ್ಮೆ ತೋರಿಸುತ್ತದೆ. ಹಾಗಾದರೆ ‘ಜನಪ್ರಿಯ’ ಎನ್ನುವುದು ನಿಜಕ್ಕೂ ಒಂದು ಸೃಜನಾತ್ಮಕ (Aesthetic) ಗುಣವೇ? ಅಥವಾ ಮಾರುಕಟ್ಟೆ ಪ್ರೇರಿತವೇ?
‘ಜನಪ್ರಿಯ’ ಎನ್ನುವ ಕಲ್ಪನೆಯ ಹುಟ್ಟಿನಲ್ಲಿ ಕೇವಲ ಜನರ ನಿರ್ಧಾರ ಇರುತ್ತದೆಯೇ? ಅತ್ಯಂತ ಪ್ರಜಾಸತ್ತಾತ್ಮಕ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುವ ಅಮೇರಿಕಾದಲ್ಲಿ ಸಾಮಾನ್ಯವಾಗಿ Action ಸಿನೆಮಾಗಳನ್ನು ‘ಜನಪ್ರಿಯ’ ಎಂದು ಗುರುತಿಸುತ್ತಾರೆ. ಇದು ರಾಷ್ಟ್ರ ನಿರ್ಮಾಣದ ಬಗ್ಗೆ ಅಲ್ಲಿನ ಸರಕಾರದ ನೀತಿಯ ಪ್ರತಿಬಿಂಬವಾಗಿಯೂ ಕಂಡು ಬರುತ್ತದೆ. ಅತ್ಯಂತ ಬಲಾಡ್ಯರು, ಅತ್ಯಂತ ಉನ್ನತರು ಹಾಗೂ ಅತ್ಯಂತ ವೇಗವುಳ್ಳವರು ಅಮೇರಿಕನ್ನರು ಎಂದು ಪ್ರತಿಬಿಂಬಿಸುವ ಚಿತ್ರಗಳು ಅಲ್ಲಿ ಜನಪ್ರಿಯತೆ ಪಡೆಯುತ್ತವೆ. Ramboನಂಥಾ ಚಿತ್ರಗಳು, Star warsನಂಥಾ ಚಿತ್ರಗಳು ಇದರಿಂದಾಗಿಯೇ ಮಹತ್ವ ಪಡೆಯುತ್ತವೆ. ಹಾಗಾಗಿ ಒಂದು ಆಡಳಿತವೂ ಈ ‘ಜನಪ್ರಿಯ’ ಎಂದು ಬಿಂಬಿತವಾಗುವ ಚಿತ್ರಗಳ ನಿರ್ಧಾರದಲ್ಲಿ ಪಾಲುದಾರನಾಗುವ ಸಾಧ್ಯತೆ ಇದೆ. ಅಲ್ಲಿಗೆ ಕೇವಲ ಜನರ ಅಭಿರುಚಿ ಅಥವಾ ವಾಣಿಜ್ಯಿಕ ಅಂಶಗಳಲ್ಲದೇ ಇನ್ನೂ ಅನೇಕ ಅಂಶಗಳು ಈ ‘ಜನಪ್ರಿಯ’ ಎನ್ನುವ ಕಲ್ಪನೆಯನ್ನು ಮೂಡಿಸುವಲ್ಲಿ ಕಾರಣಗಳಾಗುವ ಸಾಧ್ಯತೆ ನಮಗೆ ಕಂಡು ಬರುತ್ತವೆ.
ಇಲ್ಲಿ ಸಿನೆಮಾದ ಇತಿಹಾಸವನ್ನೇ ನಾವು ಇನ್ನೊಮ್ಮೆ ನೋಡಬಹುದು ಎನಿಸುತ್ತದೆ. ಲೂಮಿಯರ್ ಸಹೋದರರು ತಮ್ಮ ಚಿತ್ರಗ್ರಹಣ, ಸಂಸ್ಕರಣ, ಪ್ರದರ್ಶನದ ಯಂತ್ರಗಳನ್ನು ತಯಾರಿಸಿದ ಸಮಯದಲ್ಲಿ ಅವರು ಇದು ಕೈಗಾರಿಕಾ ಕ್ರಾಂತಿಯ ಒಂದು ಅನಗತ್ಯ ಅನ್ವೇಷಣೆ. ಇದಕ್ಕೆ ಭವಿಷ್ಯವಿಲ್ಲ ಎಂದು ಹೇಳಿದ್ದರು. ಪರದೆಯ ಮೇಲೆ, ರೈಲು ಬಂದು ರೈಲು ನಿಲ್ದಾಣದಲ್ಲಿ ನಿಲ್ಲುವ ದೃಶ್ಯವನ್ನು ಕಂಡು ಜನ ಬೆರಗಾಗಿದ್ದರು. ಈ ಬೆರಗಿನ ಅಂಶವನ್ನು ಆರ್ಥಿಕ ಲಾಭಕ್ಕೆ ಬಳಸಬಹುದು ಎಂದು ಅರಿವಿಗೆ ಬಂದಾಕ್ಷಣ, ಲೂಮಿಯರ್ ಸಹೋದರರು ತಮ್ಮ ಅನೇಕ ಮಂದಿ ಕೆಲಸದವರನ್ನು ಜಗತ್ತಿನಾದ್ಯಂತ ಕಳುಹಿಸಿ, ಅಲ್ಲಿನ ಚಿತ್ರಗಳನ್ನು ತೆಗೆದು ಅಲ್ಲಿನ ಜನರಿಗೆ ತೋರಿಸಿ, ಬೆರಗು ಉಂಟು ಮಾಡಿ ಅದರಿಂದ ಸಾಧ್ಯವಾದಷ್ಟು ಹಣ ಸಂಪಾದಿಸುವ ಯೋಜನೆ ಮಾಡಿದರು. ಹೀಗಾಗಿ ಅವರ ಯಂತ್ರದ ತಯಾರಿಕೆಯ ಕೆಲವೇ ಕಾಲದೊಳಗೆ ಜಗತ್ತಿನಾದ್ಯಂತ ಈ ಯಂತ್ರದ ಪರಿಚಯವಾಯಿತು. ಚಿತ್ರ ನಿರ್ಮಾಣ ಆರಂಭವಾಯಿತು. ಮುಂದೆ ಈ ಬೆರಗನ್ನು ಪ್ರೇಕ್ಷಕ ಮೀರುವ ಸಮಯಕ್ಕಾಗಲೇ ಸಂಕಲನದ ಉಗಮವಾಯಿತು. ಈಗ ಬೇರೆ ರೀತಿಯ ಬೆರಗು ಪ್ರೇಕ್ಷಕನಿಗೆ ಮೋಡಿ ಮಾಡಿತು. ಮತ್ತೆ ಧ್ವನಿ, ವರ್ಣ ಹೀಗೆ ತಂತ್ರಜ್ಞಾನದ ಜೋಡಣೆಗಳೆಲ್ಲವೂ ಪ್ರೇಕ್ಷಕನ ಬೆರಗನ್ನೇ ಗುರಿಯನ್ನಾಗಿಸಿದವು. ಇದೇ ‘ಜನಪ್ರಿಯ’ವಾಯಿತು. ಆದರೆ ಈ ಉದ್ದಕ್ಕೂ ಈ ಬೆರಗನ್ನು ಮೀರಿದ ಕಲಾತ್ಮಕ ಸಾಧ್ಯತೆಗಳ ಕುರಿತಾಗಿ ಅನೇಕರು ಯೋಚಿಸಿ ಆ ದಾರಿಯಲ್ಲಿ ಕೆಲಸ ಮಾಡುತ್ತಲೇ ಇದ್ದರು. ಹೀಗಾಗಿ ಅಂದಿನಿಂದಲೇ ‘ಜನಪ್ರಿಯ’ ಹಾಗೂ ‘ಕಲಾತ್ಮಕ’ ಅಥವಾ ‘ಗಂಭೀರ’ ಚಿತ್ರ ಎಂಬ ಭೇದ ಆರಂಭವಾಗಿ ಬಿಟ್ಟಿತ್ತು. ವಿಚಿತ್ರವೆಂದರೆ, ಇಂದಿಗೂ ‘ಜನಪ್ರಿಯ’ ಎನಿಸಿಕೊಳ್ಳುವ ಚಿತ್ರಗಳು ಪ್ರೇಕ್ಷಕನ ಬೆರಗನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡಿರುವುದು! ನಮ್ಮ ಚಿತ್ರೋದ್ಯಮದಲ್ಲಿ “ನಮ್ಮ ಚಿತ್ರ ಭಿನ್ನವಾಗಿದೆ” ಎಂದು ಹೇಳಿದಾಗಲೆಲ್ಲಾ ಅವರ ಮಾತಿನ ಹಿಂದಿನ ಅರ್ಥ ಹೊಸ ಬೆರಗನ್ನು ಹೊತ್ತು ತಂದಿರುವ ಭರವಸೆಯೇ ಆಗಿರುತ್ತದೆ. ಇನ್ನು ಈ ಬೆರಗಿನ ಅಂಶದಲ್ಲಿ ಸಾಮಾಜಿಕ ಮೌಲ್ಯಗಳ ಮೂಲಕ ಒದಗುವ ಬೆರಗು, ಹೊಸ ಸಂಸ್ಕೃತಿಯನ್ನು ನೋಡುವುದರಿಂದ ಆಗುವ ಬೆರಗು ಇತ್ಯಾದಿಗಳು ಮೇಳೈಸಿರುವುದರಿಂದ ಸಾಮಾಜಿಕ ಮೌಲ್ಯಗಳಲ್ಲಿ ಬದಲಾವಣೆಗಳನ್ನು, ವಿನಿಮಯವನ್ನೂ ಸಿನೆಮಾ ತಂದಿತು. ಹೀಗಾಗಿ ಒಂದು ರೀತಿಯಲ್ಲಿ ಸಿನೆಮಾ ಆಗಲೇ ಜಾಗತೀಕರಣವನ್ನು ಕಂಡಿತ್ತು ಎನ್ನಬಹುದು.
ಈ ‘ಜನಪ್ರಿಯ’ಗೊಳಿಸುವ ಅಥವಾ ಹೊಸ ಬೆರಗನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಚಿತ್ರ ನಿರ್ಮಾಣದ ಎಲ್ಲಾ ಭಾಗಗಳೂ ತೊಡಗಿಕೊಳ್ಳುತ್ತವೆ. ಮೊದಲನೆಯದಾಗಿ ಚಿತ್ರದ ಕಥೆಯ ಆಯ್ಕೆಯೇ ಎಂಥಾ ಜನ ನಮ್ಮ ಚಿತ್ರವನ್ನು ನೋಡಲಿದ್ದಾರೆ ಎಂದು ಊಹಿಸಿಕೊಂಡು ಆಗುವ ನಿರ್ಧಾರವಾಗಿರುತ್ತದೆ. ಇವತ್ತಿನ ಕನ್ನಡ ಚಿತ್ರರಂಗವನ್ನೇ ನೋಡಿದರೆ, ಕನ್ನಡದ ಸಿನೆಮಾ ವೀಕ್ಷಕನಲ್ಲಿ ಸ್ವಲ್ಪ ದುಡ್ಡಿದ್ದರೆ, ಅವನು ಅಂತಸ್ತಿನ ಕಾರಣಗಳಿಂದಾಗಿ (ಅಥವಾ ಹೆಚ್ಚಿನ ಬೆರಗಿನ ಅಪೇಕ್ಷೆಯಲ್ಲಿ) ಹಿಂದಿ ಅಥವಾ ಇಂಗ್ಲೀಷ್ ಸಿನೆಮಾವನ್ನು ನೋಡಬಯಸುತ್ತಾನೆ. ಇನ್ನು ದೂರದರ್ಶನದಲ್ಲಿ ಹೊಸ ಸಿನೆಮಾಗಳನ್ನು ತೋರಿಸುವ ಪರಿಪಾಠ ಬಂದಾಗಿನಿಂದ, ಚಿತ್ರ ಮಂದಿರಗಳ ದರ ವಿಪರೀತವಾಗುತ್ತಿರುವುದರಿಂದ, ಒಂದು ಚಿತ್ರವನ್ನು ನೋಡಲು ಹೋಗಬೇಕಾದರೆ, ಬೆಂಗಳೂರಿನಂಥಾ ಊರಿನಲ್ಲಿ ಎದುರಾಗುವ ವಾಹನ ಸಂದಣಿಯಂಥಾ ಇತರ ತೊಂದರೆಗಳಿಂದ, ಕನ್ನಡ ಚಿತ್ರರಂಗದ ಮೇಲೆ ಇತರ ಚಿತ್ರರಂಗಗಳಿಂದ ಇರುವ ಒತ್ತಡದಿಂದ – ಹೀಗೆ ಒಟ್ಟಾಗಿ ಕನ್ನಡ ಚಿತ್ರಗಳನ್ನು ಚಿತ್ರ ಮಂದಿರಕ್ಕೇ ಹೋಗಿ (ಪಾರಂಪರಿಕ ಏಕ-ಪರದೆ ಚಿತ್ರಮಂದಿರಗಳಲ್ಲಿ) ವೀಕ್ಷಿಸುವುದು ಶ್ರಮಿಕ ವರ್ಗ ಎನ್ನುವ ಲೆಕ್ಕಾಚಾರ ಹುಟ್ಟಿದೆ. ಇವರಿಗೆ ಒಂದೋ ಅತಿರಂಜಿತ ಪ್ರೇಮ ಕಥೆಗಳನ್ನು ಕೊಡಿ ಇಲ್ಲವೇ ಜನರನ್ನು ಹೊಡೆದು, ಕೊಚ್ಚಿ ಹಾಕುವ ಚಿತ್ರಗಳನ್ನು ಕೊಡಿ ಎಂಬ ಸಿದ್ಧ ಸೂತ್ರ ಸಧ್ಯದಲ್ಲಿ ಚಾಲ್ತಿಯಲ್ಲಿದೆ. ಕೇಳಲು ತೀರಾ ನಂಬಿಕಾರ್ಹ ಸೂತ್ರದಂತೆ ಕಂಡರೂ, ಚಿತ್ರಮಂದಿರಗಳಲ್ಲಿ ಸೋಲುತ್ತಿರುವ ಚಿತ್ರಗಳ ಸಂಖ್ಯೆಯನ್ನು ಗಮನಿಸಿದರೆ ಸೂತ್ರದ ಮೇಲೆ ಸಂಶಯ ಹುಟ್ಟುತ್ತದೆ.
ಮತ್ತೆ ಕಥೆಯ ನಿರೂಪಣೆಯನ್ನೇ ನೋಡಿದರೆ, ಅಮೇರಿಕಾದ ಚಿತ್ರಗಳಲ್ಲಿ ಇರುವಂತೆ ಅಪರಿಮಿತ ವೇಗದ ನಿರೂಪಣೆಯನ್ನು ನಮ್ಮಲ್ಲಿ ‘ಜನಪ್ರಿಯತೆಯ’ ಸೂತ್ರವಾಗಿ ಬಳಸಲಾಗುತ್ತದೆ. ಈ ವೇಗ ನಮ್ಮ ಚಿತ್ರಗಳಲ್ಲಿ ನಿರ್ವಹಿಸಲ್ಪಡುವ ವಸ್ತುಗಳು, ಇಲ್ಲಿನ ಸಾಮಾಜಿಕ ಪರಿಸ್ಥಿತಿಗಳಿಗೆ ಎಷ್ಟೋಬಾರಿ ಹೊಂದಿಕೆಯಾಗದೇ ಚಿತ್ರಗಳು ಸೋಲುತ್ತವೆ. ಇನ್ನು ಸಿನೆಮಾ ನಿರ್ಮಾಣ ನಿರ್ಮಾಣದಲ್ಲಿ ಅಡಕವಾಗಿರುವ ತಾಂತ್ರಿಕ ಅಂಗಗಳೂ ಅಂದರೆ, ಸಂಗೀತ, ಸಂಭಾಷಣೆ, ಛಾಯಾಗ್ರಹಣ ಹೀಗೆ ಇತರ ಅಂಗಗಳೂ ಇಂದು ಪರದೆಯ ಮೇಲೆ ಒಂದು ಕಥೆ ಹೇಳುವುದನ್ನು ಬಿಟ್ಟು ‘ಜನಪ್ರಿಯ’ ಸೂತ್ರಗಳಿಗೆ ನೇತುಬೀಳುವ ಪ್ರಕ್ರಿಯೆಯಲ್ಲೇ ತೊಡಗಿವೆ. ಅಧ್ಬುತವಾದ ದೃಶ್ಯ ವೈಭವವನ್ನು ತೋರಿಸುವುದು, ಪ್ರೇಕ್ಷಕ ನೋಡಿರದ ಅದ್ಯಾವುದೋ ವಿದೇಶೀ ತಾಣಗಳಲ್ಲಿ ಕನಿಷ್ಟ ಬಟ್ಟೆಯಲ್ಲಿ ಕುಣಿಯುವ ತರುಣಿಯರು ಹೀಗೆ ಒಂದು ಮಾಯಾ ಲೋಕಕ್ಕೆ ಪ್ರೇಕ್ಷಕನನ್ನು ತಳ್ಳಿ ಅವನ ಜೋಬಿಗೆ ಕೈಹಾಕುವ ಪ್ರಯತ್ನ ಇಂದು ‘ಜನಪ್ರಿಯ’ವಾಗುವ ಪ್ರಯತ್ನದಲ್ಲಿ ನಮ್ಮ ಚಿತ್ರರಂಗ ಮಾಡುತ್ತಿದೆ. ಇದರಿಂದಾಗಿ ಎದುರಾಗಿರುವ ತೊಡಕು ಎಂದರೆ, ತಾಂತ್ರಿಕ ವಿಷಯಗಳೆಲ್ಲವೂ ಪ್ರತ್ಯೇಕವಾಗಿ ನಿಂತು ಸಿನೆಮಾ ಒಂದು ಸಮಗ್ರ ಅನುಭವವನ್ನು ಕೊಡಲಾರದೇ ಹೋಗುತ್ತಿರುವುದು. ತಲೆಯೇ ಇಲ್ಲದ ದೇಹಕ್ಕೆ ಬಂಗಾರದ ಚಪ್ಪಲಿ ಇದ್ದಂತೆ ನಮ್ಮ ಪರಿಸ್ಥಿತಿಯಾಗಿದೆ! ಇನ್ನು ಚಿತ್ರರಂಗ ಪ್ರೇಕ್ಷಕನ ಎದುರು ಇಡುತ್ತಿರುವುದೇ ಈ ಅಶನವನ್ನಾಗಿರುವುದರಿಂದ ಅವನೂ ಅದನ್ನೇ ಉಣ್ಣುತ್ತಿದ್ದಾನೆ. ಇದರಲ್ಲೇ ಒಂದು ಮಾರುಕಟ್ಟೆ ನಿರ್ಮಾಣವಾಗಿದೆ, ಅದರಲ್ಲೇ ಪರಿಷ್ಕರಣಗಳು ನಡೆಯುತ್ತಾ ಸಾಗುತ್ತವೆ. ಹೀಗಾಗಿ ‘ಜನಪ್ರಿಯ’ ಎನ್ನುವುದು ನಮ್ಮ ಕನ್ನಡ ಚಿತ್ರರಂಗದ ಮಟ್ಟಿಗಂತೂ ‘ಸದಭಿರುಚಿ’ ಆಗದೆ ಕೇವಲ ಒಂದು ತಾಂತ್ರಿಕ ಕಸರತ್ತಾಗುತ್ತಾ ಸಾಗಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಇಷ್ಟೆಲ್ಲಾ ಲೆಕ್ಕಾಚಾರಗಳ ನಂತರವೂ ಯಾವ ಚಿತ್ರವನ್ನು ಯಾವ ಪ್ರೇಕ್ಷಕ ಯಾಕೆ ನೋಡುತ್ತಾನೆ ಎಂಬುದರ ಅರಿವು ಅಥವಾ ಅದನ್ನು ಲೆಕ್ಕ ಹಾಕುವ ಸಾಧ್ಯತೆ ಇರುವುದಿಲ್ಲ. ಸಾಮಾನ್ಯವಾಗಿ ಮುಖ್ಯವಾಹಿನಿಯ ಚಿತ್ರಗಳನ್ನು ದೀಪಾವಳಿ, ಕ್ರಿಸ್ಮಸ್, ದಸರಾ ಸಮಯ ಹೀಗೆ ರಜಾ ಸಮಯಗಳನ್ನು ಹೊಂದಿಸಿಕೊಂಡು ಬಿಡುಗಡೆ ಮಾಡುವುದು, ವಿಧವಿಧ ಪ್ರಚಾರ ಕ್ರಮಗಳನ್ನು ಕೈಗೊಳ್ಳುವುದು ಇಷ್ಟೆಲ್ಲಾ ಮಾಡಿದರೂ, ನಾಡಿನ ಎಲ್ಲಾ ಕಡೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಅದರಿಂದಾಗಿ ಪ್ರಾದೇಶಿಕವಾಗಿ ಸಂಭವಿಸುವ ವಿಕ್ಷಕರ ಮನಪರಿವರ್ತನೆಗಳನ್ನು ಗ್ರಹಿಸುವುದು ಅಸಾಧ್ಯವೇ ಸರಿ. ಹೀಗಾಗಿ ಅನೇಕ ಬಾರಿ ಚಿತ್ರಗಳು ಅನಿರೀಕ್ಷಿತ ಪರಿಣಾಮಗಳನ್ನು ಕೊಡುವುದು ಸಹಜ. ಇಂಥಾ ಯಶಸ್ಸು ಅಥವಾ ಸೋಲು ತಕ್ಷಣ ಉದ್ಯಮಕ್ಕೆ ಸೂತ್ರ ಎನಿಸಿಬಿಡುತ್ತದೆ. ಆರ್ಥಿಕ ಹಿಂಜರಿತ, ಗಣ್ಯರೊಬ್ಬರ ಅನಿರೀಕ್ಷಿತ ಸಾವು, ಕೋಮು ಗಲಭೆಗಳು, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ನೈಸರ್ಗಿಕ ಕಾರಣಗಳು ಹೀಗೆ ಅನೇಕ ಕಾರಣಗಳು ನಮ್ಮಲ್ಲಿ ಚಿತ್ರದ ಯಶಸ್ಸನ್ನು ನಿರ್ಧರಿಸುವಲ್ಲಿ ಪಾತ್ರವಹಿಸುತ್ತವೆ. ಹೀಗಾಗಿ ‘ಜನಪ್ರಿಯ’ ಚಿತ್ರಗಳೂ ಕಾಲದಿಂದ ಕಾಲಕ್ಕೆ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ, ಹೊಸ ಪ್ರೇಕ್ಷಕನ ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ ಸಾಗುತ್ತಿದೆ.
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಗಳ ಧಾಳಿಯಾಗುತ್ತಿರಬೇಕಾದರೆ, ಮೊದಲಿನ ಏಕ-ಪರದೆ ಚಿತ್ರಮಂದಿರಗಳು ಖಾಲಿ ಬೀಳತೊಡಗಿದವು. ಇಂಥಾ ಒಂದು ಚಿತ್ರಮಂದಿರಗಳಿಗಾಗಿ ಸಿದ್ಧವಾಗಿದ್ದ ಚಿತ್ರ-ಹಂಚಿಕಾ ವಿಧಾನ ಅಪ್ರಸ್ತುತವಾಯಿತು. ಅನೇಕ ಹಂಚಿಕೆದಾರರು ಕೆಲಸ ಕಳೆದುಕೊಂಡರು. ಚಿತ್ರಗಳು ಹೀನಾಯ ಸೋಲನ್ನನುಭವಿಸಿದವು. ಆದರೆ ನಮ್ಮ ‘ಜನಪ್ರಿಯ’ ಚಿತ್ರಗಳು ಮತ್ತೆ ಮೈಕೊಡವಿ ಎದ್ದವು. ಅವುಗಳು ತಮ್ಮ ನಿರ್ಮಾಣದ ಹಂತದಿಂದಲೇ, ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಬೇಕಾದ ಮಸಾಲೆಯನ್ನೇ ಅರೆಯಲಾರಂಭಿಸಿದವು. ಚಿತ್ರದಲ್ಲಿ ಬಿಂಬಿತವಾಗುತ್ತಿದ್ದ ಮೌಲ್ಯಗಳೂ, ನೈತಿಕತೆಯೂ ಬದಲಾಯಿತು. ತಂತ್ರಜ್ಞಾನವೂ ಪರಿಷ್ಕೃತವಾಯಿತು. ಅಂದರೆ ‘ಜನಪ್ರಿಯ’ದ ಕಲ್ಪನೆ ಮತ್ತೆ ಬದಲಾಗಿತ್ತು! ಹಾಗೂ ಚಿತ್ರರಂಗ ಅದರಲ್ಲಿ ‘ಜನಪ್ರಿಯತೆಗೆ’ ಹೊಸ ಸೂತ್ರಗಳ ಹುಡುಕಾಟದಲ್ಲಿ ನಿರತವಾಗಿತ್ತು.
ಒಂದೆಡೆ ತಂತ್ರಜ್ಞಾನದ ಹೊಸ ಆವಿಷ್ಕಾರದಿಂದ ಹಿಡಿದು ಪ್ರೇಕ್ಷಕ ವರ್ಗವನ್ನು ಅರಿಯುವ ಪ್ರಯತ್ನದವರೆಗೆ ಪ್ರೇಕ್ಷಕನನ್ನು ಬೆರಗು ಪಡಿಸುವ ಪ್ರಯತ್ನದಲ್ಲೇ ಇರುವ ಚಿತ್ರರಂಗ ‘ಜನಪ್ರಿಯ’ವಾಗುವ ಪ್ರಯತ್ನ ನಡೆಸಿದರೆ, ಇವೇ ವಿಷಯಗಳ ಕಲಾತ್ಮಕ ಸಾಧ್ಯತೆಗಳನ್ನು ಶೋಧಿಸುತ್ತಿರುವ ಚಿತ್ರಗಳನ್ನು ‘ಗಂಭೀರ’ ಅಥವಾ ಕಲಾತ್ಮಕ ಚಿತ್ರಗಳು ಎಂದು ಸಾಮಾನ್ಯವಾಗಿ ಗುರುತಿಸುತ್ತಾರೆ. ಆದರೆ ಇಂದು, ನಮ್ಮಲ್ಲಿ ಕಲಾತ್ಮಕ ಚಿತ್ರಗಳು ಎಂದು ಕರೆಯಲ್ಪಡುವ ಚಿತ್ರಗಳಲ್ಲೂ, ಒಂದು ಸೂತ್ರವನ್ನು ಎಂದು ರೂಪಿಸಿ ಸೂತ್ರ ಬದ್ಧವಾಗಿರುವ ವಿಷಯಗಳೇ ಸಾಧು – ಎನ್ನುವ ಹಂಬಲ ಇಲ್ಲೂ ಕಂಡು ಬರುತ್ತಿದೆ. ಗಂಭೀರ ಚಿತ್ರಗಳು ಹೀಗೇ ಇರಬೇಕು ಎನ್ನುವ ಸಿದ್ಧ ಸೂತ್ರದ ಹುಡುಕಾಟ ಇಲ್ಲೂ ನಡೆದಿದೆ ಎಂದು ನನಗೆ ಅನಿಸುತ್ತಿದೆ. ಇದಕ್ಕೆ ಕಾರಣ, ಸರಕಾರದಿಂದ ‘ಸದಭಿರುಚಿಯ’ ಚಿತ್ರಗಳಿಗೆ ದೊರೆಯುವ ಆರ್ಥಿಕ ಸಹಾಯ, ಪ್ರಶಸ್ತಿ (ಇದರ ಜೊತೆಗಿನ ಧನಾಕರ್ಷಣೆ) ಇಂಥಾ ಚಿತ್ರಗಳಿಗಿರುವ ಇತರ ಸೌಲಭ್ಯ ಇತ್ಯಾದಿಗಳೇ ಮಾರಕವಾಗುತ್ತಿವೆಯೋ ಎಂದು ನನಗನಿಸುತ್ತಿದೆ. ಸಿನೆಮಾದ ‘ಜನಪ್ರಿಯ’ತೆಯ ಕುರಿತಾಗಿ ನಮ್ಮ ಸರಕಾರಕ್ಕೆ ಇರುವ ಕಲ್ಪನೆಯ ಕುರಿತೂ ಇದೊಂದು ಹೇಳಿಕೆ ಎಂದು ನನಗನಿಸುತ್ತದೆ. ಇದರಿಂದಾಗಿ ‘ಜನಪ್ರಿಯ’ ಸಿನೆಮಾ ಎಂದು ಬಿಂಬಿಸುವ ಚಿತ್ರಗಳಲ್ಲಿ ಆಡಳಿತದ ನೀತಿಗಳು ಬಿಂಬಿತವಾದರೆ ಅಚ್ಚರಿಯಿಲ್ಲ. ಅಷ್ಟಕ್ಕೂ ‘ಗಂಭೀರ’ ಚಿತ್ರಗಳು ಎನ್ನುವಲ್ಲೂ ಸಾಕಷ್ಟು ‘ಜನಪ್ರಿಯ’ ಅಂಶಗಳು ಇದ್ದೇ ಇರುತ್ತವೆ. ಒಂದು ಪಾತ್ರ ಸನ್ನಿವೇಶಕ್ಕೆ ಪ್ರತಿಕ್ರಿಯಿಸುವ ಕ್ರಮದಲ್ಲಿ ಅಥವಾ ಯಾವುದೋ ದೃಶ್ಯದಲ್ಲಿ ಚಿತ್ರೀಕರಣ ತಾಣವನ್ನು ತೋರಿಸುವ ವಿಧಾನದಲ್ಲಿ, ಹಾಡುಗಳಲ್ಲಿ ಹೀಗೆ ಅನೇಕ ಅಂಶಗಳಲ್ಲಿ ‘ಜನಪ್ರಿಯ’ ಹಾಗೂ ‘ಗಂಭೀರ’ ಚಿತ್ರಗಳ ನಡುವಿನ ಗೆರೆ ಮಾಯವಾಗುತ್ತವೆ.
ನಾಟಕ, ಸಂಗೀತ, ಚಿತ್ರಕಲೆ ಎಲ್ಲವನ್ನೂ ಒಳಗೊಂಡ ಕಲೆ ಸಿನೆಮಾ ನಿರ್ಮಾಣ ಎಂದು ಚಿತ್ರ ತಯಾರಕರಾದ ನಾವು ಹೆಮ್ಮೆ ಪಡಬಹುದಾದರೂ, ಇದರಿಂದಾಗಿ ‘ಜನಪ್ರಿಯ’ವಾಗಿರಬೇಕಾದ, ‘ಸಾಮಾಜಿಕ ಬದ್ಧತೆ’ಯ ಭಾರವನ್ನು ಹೊರಬೇಕಾಗಿರುವ ಮಾಧ್ಯಮವಾಗಿರುವುದು ಶೋಚನೀಯ. ಇದನ್ನು ಒಂದು ಸ್ವತಂತ್ರ ಕಲಾಪ್ರಕಾರ ಎಂದು ಗುರುತಿಸದೇ, ಮನರಂಜನಾ ಮಾಧ್ಯಮ, ಜನಪ್ರಿಯ ಮಾಧ್ಯಮ ಎಂದು ಪರಿಗಣಿಸುವುದು ನಮ್ಮ ಚಿತ್ರರಂಗದ ಇಂದಿನ ದುಸ್ಥಿತಿಗೆ ಕಾರಣ. ಈ ಕಾರಣದಿಂದಲೇ ಇಂದು ಚಿತ್ರೋದ್ಯಮವು, ಸಿನೆಮಾ ಮಾಧ್ಯಮಕ್ಕೆ ‘ಜನಪ್ರಿಯ’ ಮಾದರಿಗಳನ್ನು ಶೋಧಿಸುತ್ತಾ, ಸೃಷ್ಟಿಸುತ್ತಾ, ಮುರಿಯುತ್ತಾ ಸಾಗಿದೆ.
ಬಹಳ ಅರ್ಥಗರ್ಭಿತವಾದ ವಿಮರ್ಷೆ.
“ಒಂದು ಕಾಲದಲ್ಲಿ ಡಾ| ರಾಜ್ ಕುಮಾರ್ ಅಭಿನಯಿಸುತ್ತಿದ್ದ ಚಿತ್ರಗಳನ್ನು ನೋಡಿದರೆ, ಅವುಗಳು ಸಾಮಾಜಿಕ ಕಳಕಳಿಯನ್ನು ಹೊಂದಿದ್ದ, ಆ ಕಾಲದ ಸಾಮಾಜಿಕ ಮೌಲ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ಚಿತ್ರಗಳಾಗಿದ್ದವು. ದೇಶಭಕ್ತಿ, ಉದಾತ್ತ ಪ್ರೇಮ, ನೆಲದೊಡನೆ ನೇರ ಸಂಪರ್ಕದಲ್ಲಿರುವ ನಾಯಕ ಇತ್ಯಾದಿ ಅಂಶಗಳು ಡಾ…| ರಾಜ್ ಕುಮಾರರನ್ನು ಅವರೇರಿದ ಎತ್ತರಕ್ಕೆ ಏರಿಸಿದವು….”
ಇಲ್ಲ. ಈ ಮಾತುಗಳನ್ನು ಒಪ್ಪಲಾಗುವುದಿಲ್ಲ. ನಮ್ಮ ಜನಪ್ರಿಯ ಸಿನಿಮಾಗಳು ಎಲ್ಲಾ ಕಾಲದಲ್ಲಿಯೂ ಸಮಕಾಲೀನ ಸ್ಥಿತಿಯಿಂದ ಹತ್ತು ವರ್ಷ ಹಿಂದೆ ಇರುತ್ತಿದ್ದವು. ಬಂಗಾರದ ಮನುಷ್ಯ(೧೯೭೪)ದಲ್ಲಿನ ವಿವರಗಳು ಅರವತ್ತರ ದಶಕದ ನೆಹರೂ ಕಾಲದ ಅಭಿವೃದ್ಧಿ ಪ್ರಣಾಲಿಕೆಯನ್ನು ಹೇಳುತ್ತಿತ್ತು. ಹೀಗೇ ಅನೇಕ ಉದಾಹರಣೆಗಳನ್ನು ಹೇಳಬಹುದು. ಮೇಲೆ ತಿಳಿಸಿರುವ ಮಾತು ಕೇವಲ sweeping generalization ಅಷ್ಟೆ.
ಆದರೆ ಅದು ಎಷ್ಟರ ಮಟ್ಟಿಗೆ ಜನರನ್ನು ಮುಟ್ಟಿತ್ತು ಅಥವ ಅರಿವಾಗಿತ್ತು ಎಂಬುದು ಬಹಳ ಮುಖ್ಯ. ವಿಚಾರ ಬಹಳ ಹಳೆಯದಾದರು ಬಂಗಾರದ ಮನುಷ್ಯ ಬಹಳಷ್ಟು ಯುವಕರ ಮನ: ಪರಿವರ್ತನೆಗೆ ನಾಂದಿ ಹಾಡಿತು.
ಹಹ್ಹ… ಆದರ್ಶವಾದಿ ಮಾತು ಇದು. ನಿಮಗೆ ಹಾಗನ್ನಿಸಿದ್ದರೆ ಸಂತೋಷ. ಸಿನಿಮಾ ನೋಡಿ ಮನಃಪರಿವರ್ತನೆ ಆಗೋದಿಲ್ಲ. ಅದು ಪ್ರೇರೇಪಣೆ ಒದಗಿಸಬಹುದು ಅಷ್ಟೆ.
ಕನ್ನಡ ಚಿತ್ರಗಳ ವಿಷಯಕ್ಕೆ ಬಂದಾಗ ಸದಾ ಕೇಳಿ ಬರುವ ಅಪವಾದವೆಂದರೆ ಈಗಿನ ಚಿತ್ರಗಳು ಹಿಂದಿನ ಹಾಗೆ ಬರುತ್ತಿಲ್ಲ, ಪುಟ್ಟಣ್ಣ ಅವರು ಹ್ಯಾಗೆ ತೆಗಿತಾ ಇದ್ರು ಗೊತ್ತ, ಅದಕ್ಕೆ ಕನ್ನಡ ಚಿತ್ರಗಳು ನೆಲ ಕಚ್ಚುತ್ತಿವೆ ಅನ್ನೊ ವಾದ ತೇಲಿ ಬರುತ್ತಿದೆ. ಅದ್ರೆ ಹಾಗೆ ಹೇಳೋ ಜನ ಪುಟ್ಟಣ್ಣನವರ ಅನೇಕ ಚಿತ್ರಗಳು ಗೋತಾ ಹೊಡೆದಿದ್ದು ಮರೆತಿರುತ್ತಾರೆ. ಯಾವುದೇ ಚಿತ್ರರಂಗದಲ್ಲಿ ಯಶಸ್ಸಿನ ಶೇಕಡವಾರು ೬ ರಿಂದ ೧೩ ಅಷ್ಟೆ ಅನ್ನೊದನ್ನು ಯಾರು ಗಮನಿ… Read Moreಸೊಲ್ಲ.
ಸಾಮಜಿಕ ಕಳಕಳಿಯನ್ನು ತಂದ ಚಿತ್ರಗಳನೆಲ್ಲಾ ಪ್ರೇಕ್ಷಕ ತೆಗೆದುಕೊಂಡಿಲ್ಲ. ಇವತ್ತಿನ ಯುಗದಲ್ಲಿ ಅನೇಕ ಮಾಧ್ಯಮಗಳು ಇವೆ, ಅವುಗಳಲ್ಲಿ ದುಡ್ಡು ಕೊಟ್ಟು ಬರುವ ಪ್ರೇಕ್ಷಕ ಅಭಿವೃದ್ಧಿ ಮತ್ತು ಸಮಾಜಿಕ ಕಳಕಳಿಯನ್ನು ನೋಡುತ್ತಾನೆ ಅಥವಾ ಅದನ್ನು ಉದ್ದೇಶದಲ್ಲಿ ಇಟ್ಟುಕೊಂಡು ನೋಡುತ್ತಾನೆ ಅನ್ನುವುದು ಸಂಶಯಾಸ್ಪದ.
ತುಂಬಾ ಸರಿಯಾದ ಅಭಿಪ್ರಾಯ ಪ್ರವೀಣ್ ಅವರೇ…
ನಮ್ಮಲ್ಲಿ ಮಾತ್ರ ಅಲ್ಲ ಜಾಗತಿಕವಾಗಿ ಯಶಸ್ಸಿನ ಪ್ರಮಾಣ ಶೇಕಡ ೨ ಅಷ್ಟೆ.
… ಆದರೂ ಜನಪ್ರಿಯ ಎನ್ನುವ ಒಂದು ಅಂಶ ಇದೆ ಎಂದು ಕೊಂಡು ಅದನ್ನು ಓಡಿಸಿಕೊಂಡು ಹೋಗುತ್ತಿರುವ ವಿಷಯದ ಕುರಿತಾಗಿ ನಾನು ಬರೆದಿದ್ದದ್ದು.
ಮೇಲೆ ಹಾಕಿರುವ ಸಾಲಿನ ಮುಂದುವರಿಕೆ ಹೀಗಿದೆ: …”ಹಾಗಾದರೆ ಈ ಅಂಶಗಳು ಜನಪ್ರಿಯತೆಗೆ ಸೂತ್ರವೇ? ಇಲ್ಲ ಎಂದು ಮತ್ತೆ ಉತ್ತರ ಸಿಗುತ್ತದೆ. ಏಕೆಂದರೆ, ಈ ಸೂತ್ರಗಳನ್ನು ಡಾ| ರಾಜ್ ಕುಮಾರ್ ನಂತರ ಅನೇಕ ನಾಯಕ ನಟರು ಅನುಸರಿಸಿದರೂ ಹೆಚ್ಚೇನೂ ಸಫಲರಾಗಲಿಲ್ಲ. ಇದರಿಂದ ಸ್ಪಷ್ಟವಾಗುವುದೆಂದರೆ ಚಿತ್ರ… Read Moreವನ್ನು ಜನಪ್ರಿಯಗೊಳಿಸುವ ಕಾರಣಗಳು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತಾ ಸಾಗಿವೆ. ಹೀಗಿರುವಾಗ ಸಿನೆಮಾ ಒಂದರ ಜನಪ್ರಿಯತೆಯೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಾಗುವುದೂ ಸಹಜ. ಹಾಗಾದರೆ ಯಾವುದೇ ಸಿನೆಮಾವನ್ನು ‘ಜನಪ್ರಿಯ’ ಎನ್ನುವುದು, ಒಂದು ಕಾಲಘಟ್ಟಕ್ಕೆ ಸಂಬಂಧಿಸಿದಂತೆ, ಒಂದು ನಿರ್ದಿಷ್ಟ ವರ್ಗದ ಜನರಿಗೆ ಸಂಬಂಧಿಸಿದಂತೆ ಮಾತ್ರ ಹೇಳುವ ಹೇಳಿಕೆಯಾಗುತ್ತದೆ ಹಾಗೂ ಇದರಿಂದ ಅನೂರ್ಜಿತ ಎಂದು ನನಗೆ ಅನಿಸುತ್ತದೆ.”
ಅಭಯ… ನಾನು ಲೇಖನವನ್ನು ಇಡಿಯಾಗಿ ಓದಿದೆ. ನಿಮ್ಮ ಅಭಿಪ್ರಾಯದ ಬಗ್ಗೆ ನನ್ನ ಎರಡನೆಯ ಮಾತಿಲ್ಲ. ಆದರೆ ಹರೀಶ್ ಅವರು ಬಳಸಿದ್ದ ಸಾಲುಗಳು ಅರ್ಧ ಸತ್ಯ ಹೇಳುತ್ತಾ ಇದ್ದವು. ಹಾಗಾಗಿ ಚರ್ಚೆಗೆ ಇಳಿದೆ.
ಇಂದು ಬೆಳಿಗ್ಗೆ ‘ದೇಶಕಾಲ’ ಬಂತು. ಅದರಲ್ಲಿ ನಿಮ್ಮ ಲೇಖನವನ್ನು ಪೂರಾ ಓದಿದೆ ಮಾರಯ್ರೇ.
ಧನ್ಯವಾದಗಳು ಸರ್… ನೀವು ಹೇಳಿದ್ದರಲ್ಲಿ ತಪ್ಪಿದೆ ಎಂದಲ್ಲ ನಾನು ವಾದವನ್ನು ಮುಂದುವರೆಸಿದ್ದು. ನಾನು ತಪ್ಪಿದ್ದರೆ ತಿದ್ದಿಕೊಳ್ಳುವ ಉತ್ಸಾಹದಲ್ಲೇ ಇಡೀ ವಾದವನ್ನು ಗಮನಿಸಿದೆ. ನಿಮ್ಮ ಅಭಿಪ್ರಾಯಗಳಿಗೆ ಮತ್ತೊಮ್ಮೆ ಧನ್ಯವಾದ.
ಅಭಯ್,
ಒಳ್ಳೆ ಅಂಶ ಹೇಳಿದ್ದೀರಾ .. ಬೇರೆ ಭಾಷೆಯಲ್ಲಿ ಬರುವುದನ್ನೆ ಕನ್ನಡದಲ್ಲಿ ಬಂದರೆ ತೆಗುಕೊಳ್ಳದ ಪ್ರೇಕ್ಷಕ .. ಇದು ಅವನ ಮಡಿವಂತಿಕೆಯಾ ಇಲ್ಲ , ಅದು ರೀಮೆಕ್ ಅನ್ನುವ ತಾತ್ಸರವಾ ?
ಪ್ರವೀಣ್,
ಕನ್ನಡದಲ್ಲಿ ಬಂದರೆ ತಗೊಳ್ಳೋದಿಲ್ಲ ಎನ್ನುವುದರ ಅರ್ಥ ರೀಮೇಕ್ ಸ್ವೀಕರಿಸೋದಿಲ್ಲ ಅಂತಲ್ಲ. ಏಕೆಂದರೆ ಭಾವನೆಗಳು ಸಾರ್ವತ್ರಿಕ. ಅದರ ಅಭಿವ್ಯಕ್ತಿ ಮಾತ್ರ ಪ್ರಾದೇಶಿಕವಾಗಿ ಭಿನ್ನವಾಗುತ್ತದೆ. ಇನ್ನು ಅದನ್ನು ಮಡಿವಂತಿಕೆ ಎನ್ನುವಂತೆಯೂ ಇಲ್ಲ. ಏಕೆಂದರೆ ಮಡಿವಂತಿಕೆ ಎನ್ನುವುದನ್ನೂ ನಾವು ನಮ್ಮ ತನ ಎಂದೂ ಗೊಂದಲಪಡುವ ಸಾಧ್ಯತೆಗಳಿವೆಯಲ್ಲಾ! ಇದು ಒಂದು ಸನ್ನಿವೇಷ. ಅದರ ಕುರಿತಾಗಿ ನನಗೂ ಗೊಂದಲಗಳಿವೆ.
ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರು ಅದನ್ನ ಸ್ವಾಗತಿಸುವುದು ಒಳ್ಳೆಯದು. ಆದರೆ ಅದನ್ನ ನಮ್ಮ ತನಕ್ಕೆ ಧಕ್ಕೆ ತರುವ ಹಾಗೆ ನಮ್ಮ ಮೇಲೆ ಹೇರುವ ವಿಚಾರ ಎಷ್ಟು ಸರಿ?
ನಮ್ಮ ತನಕ್ಕೆ ಧಕ್ಕೆ ತರುವುದು ತರವಲ್ಲ ಸರಿ. ಆದರೆ ನಮ್ಮ ತನ ಎನ್ನುವುದು ಮಡಿವಂತಿಕೆ ಅಲ್ಲ ಎಂದು ನಾನು ಹೇಳಿದ್ದು.
ಹೌದು. ಇದಕ್ಕೆ ಆಪ್ತಮಿತ್ರ ಹಾಗು ಸವಾರಿ ತರಹದ ಬಹಳಸ್ಟು ರೀಮೇಕ್ ಚಿತ್ರಗಳು ಗೆದ್ದ ಉದಾಹರಣೆ ನಮ್ಮಲ್ಲಿ ಬಹಳಷ್ಟಿವೆ.
ಇಂದು ಬಹಳಷ್ಟು ನಾಯಕ ನಟರು ಬದುಕಿರುವುದೇ ರಿಮೇಕ್ನಿಂದ. ಅವರಿಗೆ ಹೊಸ ಕತೆಗಳನ್ನು ಗುರುತಿಸುವ ಶಕ್ತಿಯೇ ಇಲ್ಲವೇನೋ ಎಂಬ ಅನುಮಾನ ಇದೆ, ನನಗೆ.
ಇದು ನಟರಿಗಷ್ಟೆಯಲ್ಲದೆ ನಿರ್ಮಾಪಕರು ಹಾಗು ನಿರ್ದೇಶಕರಿಗು ಅನ್ವಯಿಸುತ್ತದೆ. ಪೂರ್ವ ತಯಾರಿಯೇ ಇಲ್ಲದೆ ತಯಾರಿಸ ಬಹುದಾದ ರೀಮೇಕುಗಳ ಹಾವಳಿ ಹೀಗೆ ಮುಂದುವರಿಯುವುದು ಒಳಿತಲ್ಲ…
ರಿಮೇಕ್ ಹಾವಳಿಯಲ್ಲ. ಅದು ಕನ್ನಡ ಚಿತ್ರೋದ್ಯಮದಲ್ಲಿ ದುಡಿಯುತ್ತಾ ಇರುವ ಕಾರ್ಮಿಕರಿಗೆ ಅದರಿಂದ ಕೆಲಸ ಸಿಗುತ್ತಿದೆ.
ಆದರೆ ಸೃಜನಶೀಲ ಚಟುವಟಿಕೆ ಸಾಯುತ್ತಿದೆ. ಹಾಗಾಗಿ ರಿಮೇಕ್ ಅಪಾಯಕಾರಿ.
ಆದರೆ ಸಧ್ಯದ ಸಂದರ್ಭದಲ್ಲಿ ಡಬ್ಬಿಂಗ್ ಮಾಡುವ ಬಗ್ಗೆ ಮಾತಾಗುತ್ತಾ ಇದೆಯಲ್ಲಾ ಅದಕ್ಕಿಂತ ರಿಮೇಕೇ ವಾಸಿ.
ಡಬ್ಬಿಂಗ್ ಶುರುವಾದರೆ ಕನ್ನಡದ ಕಲಾವಿದರೂ ನಿರುದ್ಯೋಗಿಗಳಾಗಿ ಕೇವಲ ಕಂಠದಾನ ಮಾಡಬೇಕಾಗುತ್ತದೆ. ಇನ್ನು ಕಾರ್ಮಿಕರು ಚಿತ್ರೀಕರಣವೇ ನಡೆಯದ ಕಾಲಘಟ್ಟದಲ್ಲಿ ಬದುಕು ಮಾಡಲು ಬೇರೆ ಕೆಲಸ ಹುಡುಕಬೇಕಾಗುತ್ತದೆ.
ಕಲಾವಿದರಿಗೆ ಭಾಷೆ ಇಲ್ಲ ಎಂಬ ಅನಕೂಲಸಿಂಧು ಮಾತುಗಳು ಕೇಳೋವಾಗ , ಪ್ರೇಕ್ಷಕರಿಗೆ ಮಾತ್ರವೇ ಭಾಷೆ ಉಂಟಾ ?. ಇವತ್ತು ತೆಲುಗು-ತಮಿಳಿನಲ್ಲಿ ಡಬ್ಬಿಂಗ್ ಬಿಟ್ಟಿದ್ದಕ್ಕೆ ಅಲ್ಲಿನ ಕಾರ್ಮಿಕರು ಬೀದಿಗೆ ಬಂದಿದ್ದಾರೆಯೇ ?
ಕ್ಷಮಿಸಿ.
ತೆಲುಗು-ತಮಿಳು ಸಿನಿಮಾದ ಅರ್ಥವ್ಯವಸ್ಥೆ ಬೇರೆ. ಅವರಿಗೆ ಸಿನಿಮಾ ಎಂಬುದು ಹೇಗಿದ್ದರೂ ನೋಡುವ ‘ಸಂಪ್ರದಾಯ’-‘ಸಂಸ್ಕೃತಿ’ ಇದೆ.
ಕನ್ನಡಿಗರು ಹಾಗಲ್ಲ. ಹಾಗಾಗಿ ಕನ್ನಡದ ಮಾರುಕಟ್ಟೆ ಕರ್ನಾಟಕದ ಆಚೆಗೆ ಬೆಳೆದಿಲ್ಲ. ಇಲ್ಲಿನ ಕನ್ನಡಿಗರಿಗೆ ಸಿನಿಮಾ ಅಂದರೆ ಸಾಕು. ಅದು ಯಾವ ಭಾಷೆಯಾದರೂ ಪರವಾಗಿಲ್ಲ ಎಂಬ ಮನೋಭಾವ ಇದೆ. (ಇದು ವಿಸ್ತರಿಸಬೇಕಾದ ವಿಷಯ. ಇಲ್ಲಿ ಜಾಗ ಸಾಲದು)
ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ಬಂದರೆ ಕನ್ನಡದ್ದಲ್ಲ, ಕರ್ನಾಟಕದ ಚಿತ್ರೋದ್ಯಮಿಗಳು ನಿರುದ್ಯೋಗಿ ಆಗ್ತಾರೆ ಅಂದೆ. ಕಾರ್ಮಿಕರಿಗೆ ಭಾಷೆಯ ಹಂಗಿಲ್ಲ. ಅವರ ಬೆವರಿಗೂ ಭಾಷೆಗೂ ಸಂಬಂಧ ಇಲ್ಲ. ಅವರಿಗೆ ಕೂಲಿ ಬೇಕಷ್ಟೆ.
ಹೌದು.. ಸುರೇಶ್ ಸರ್ ಹೇಳುತ್ತಿರುವುದನ್ನು ಸ್ವಲ್ಪ ವಿಸ್ತರಿಸಿ ಹೇಳುವುದಾದರೆ, (ಇದು ಮತ್ತೆ ಸ್ವಲ್ಪ ಕೆಟ್ಟ ಉದಾಹರಣೆಯೂ ಹೌದು) ಬ್ಯಾನರ್ ಮೇಲೆ ಬೆಯುವವನಿಗೆ ಕಾಗದದಲ್ಲಿ ಬರೆದು ಕೊಟ್ಟರೆ ಅದನ್ನು ಬ್ಯಾನರಿನ ಮೇಲೆ ಪ್ರತಿ ಮಾಡುತ್ತಾನೆ. ಅವನಿಗೆ ಬ್ಯಾನರಿನಲ್ಲಿನ ಭಾಷೆ ಯಾವುದಾದರೇನು? ಆದರೆ ಅದನ್ನು ಓದುವವನಿಗೆ ಭಾಷೆ ಬರಬೇಕಲ್ಲವೇ? ಹಾಗೇ ಚಿತ್ರ ಕಾರ್ಮಿಕರು ಯಾವ ಭಾಷೆಯಲ್ಲಾದರೂ ಕೆಲಸ ಮಾಡಬಲ್ಲರು. ಆದರೆ ಚಿತ್ರ ನೋಡುಗರಿಗೆ ಚಿತ್… Read Moreರದಲ್ಲಿನ ಭಾಷೆ ಅರ್ಥವಾಲೇ ಬೇಕಲ್ಲವೇ?
ಇದಕ್ಕಾಗಿಯೇ ಸುರೇಶ್ ಸರ್ ಹೇಳುತ್ತಿರುವುದು ಡಬ್ಬಿಂಗಿಗಿಂತ ರೀಮೇಕ್ ವಾಸಿ ಎಂದು. ಮತ್ತೆ ಅವರು ರೀಮೇಕ್ ಬೆಂಬಲಿಸುತ್ತಿದ್ದಾರೆ ಎಂದು ಇಲ್ಲಿ ಅರ್ಥ ಮಾಡಿಕೊಳ್ಳಬಾರದು.
ನೀವು ಹೇಳುವ ಪ್ರಕಾರ ಇದು ಕಾರ್ಮಿಕರಿಗೆ ಸಮಸ್ಯೆ ಅಲ್ಲ, ಚಿತ್ರದ್ಯೋಮಿಗಳಿಗೆ ಸಮಸ್ಯೆ ಅಂತ. ಇವತ್ತು ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇರುವರೇ ಪರಭಾಷ ಚಿತ್ರಗಳ ವಿತರಣೆ ಮಾಡುವಾಗ ಅವರನ್ನು ರಕ್ಷಿಸುವ ವ್ಯವಸ್ಥೆ ಬೇಕೆ ?
ಜಗತ್ತಿನ ಚಿತ್ರಗಳು ನಮಲ್ಲಿ ಬರಬಾರದು ಎನ್ನುವುದು ನಮ್ಮ ಪ್ರೇಕ್ಷಕನಿಗೆ ಮಾಡುತ್ತಿರುವ ಮೊಸ. ಇವತ್ತು ಅನೇಕ ಹಾಲುವುಡ್ ಚಿತ್ರಗಳು ಕರ್ನಾಟಕದಲ್ಲಿ ತೆಲುಗು-ತಮಿಳಿನಲ್ಲಿ ಬರುತ್ತಿವೆ ( bKT… Read More ಬಿಟ್ಟು), ಇವುಗಳನ್ನು ನಮ್ಮ ಜನರು ನೋಡುತ್ತ ಇದ್ದಾರೆ, ಇದರಿಂದ ನಮಗೆ ನಷ್ಟ ವಿನಹ ಲಾಭವಿಲ್ಲ. ಅದೇ ಇದು ಕನ್ನಡದಲ್ಲಿ ಬಂದಿದ್ದರೆ ನಮ್ಮ ಕಂಠದಾನ ಕಲಾವಿದರಿಗೆ ಸಹಾಯ ಆಗುತ್ತಿತ್ತು ಅಲ್ಲವೇ ?
ನಮ್ಮ ಹಳ್ಳಿ ಮಕ್ಕಳು ಜುರಾಸಿಕ್ ಪಾರ್ಕ್ ಇಂತಹ ಚತ್ರಗಳನ್ನು ತಮ್ಮ ಭಾಷೆಯಲ್ಲಿ ನೋಡದೆ ಇನ್ನೊಂದು ಪರ ಭಾಷೆ ಕಲಿತುಕೊಂಡು ನೋಡಿ ಅನ್ನುವುದು ಯಾವ ನ್ಯಾಯ.
ಚಿತ್ರ ನಿರ್ಮಾಣದಲ್ಲಿ ಹಾಗು ನಿರ್ದೇಶನದಲ್ಲಿ ತೊಡಗುತ್ತಿರುವ ಬಹಳಷ್ಟುಮಂದಿ ಪರ ರಾಜ್ಯದವರೇ ಆಗಿರುವುದರಿಂದ ಹಾಗು ನಮ್ಮವರು ಎಂದು ತಿಳಿದಿರುವ ಉಳಿದವರಿಗೆ ಇಲ್ಲಿನ ಬಗೆಗಿನ ತಾತ್ಸಾರವು ಮುಖ್ಯ ಕಾರಣ.
ಒಟ್ಟಿನಲ್ಲಿ ನಮಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಅನ್ನೊ ಭಯದಿಂದ ನಾವು ಡಬ್ಬಿಂಗ್ ಬೇಡ ಅನ್ನುವುದು ಇಲ್ಲ ಇವತ್ತು ರೀಮೆಕ್ ಮಾಡುತ್ತಿರುವ ನಿರ್ಮಾಪಕರಿಗೆ ಕಷ್ಟ ಆಗುತ್ತದೆ ಅಂತ ಅದು ಬೇಡ ಅನ್ನುವುದು ಯಾವ ಮಟ್ಟಿಗೆ ಸರಿ ?
ಸಿನೆಮಾ ಮಾಧ್ಯಮದ ‘ಹಿ೦ದಿನ’ ಇತಿಹಾಸ ಹಾಗೂ ಅದರ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಉತ್ತಮವಾದ ಲೇಖನವಿದು. ಕಾಮೆ೦ಟ್ಸ್ ಗಳೂ ಕೂಡ ಸೂಪರ್ .
ಇವತ್ತಿನ ಪರಿಸ್ಥಿತಿ ನೋಡಿದರೆ, ಮಗದೀರ ಅನ್ನುವ ಚಿತ್ರ ಇಲ್ಲಿ ೧೦೦ ದಿನ ಓಡುತ್ತದೆ, ಅದು ನಮಗೆ ಓಕೆ. ಅದರಿಂದ ನಮ್ಮ ಚಿತ್ರೋಧ್ಯಮದವರಿಗೆ ತೊಂದರೆ ಆಗಿಲ್ಲ, ಇನ್ನ ನಮ್ಮ ಕಲಾವಿದರಿಗೆ ಅದರಿಂದ ಕಿಂಚಿತ್ತು ಪ್ರಯೋಜನ ಆಗಿಲ್ಲ. ಅದೇ ಚಿತ್ರ ಕನ್ನಡದಲ್ಲಿ ಬಂದರೆ ನಮಗೆ ಎಲ್ಲಿಲ್ಲದ ಸಮಸ್ಯೆ ಆಗುತ್ತದೆ ಅಂತ ಹೇಳುವುದು ಯಾವ ಮಟ್ಟಿಗೆ ಸರಿ ?
ಸುರೇಶ್,
ಇನ್ನು ಟಿವಿ ನೋಡುವದರಲ್ಲಿ ನೀವು ಹೇಳುವ ಸಂಪ್ರದಾಯ ಪರಭಾಷಿಕರಲ್ಲಿ ಇಲ್ಲವಲ್ಲ, ಒಳ್ಳೆ ಧಾರವಾಹಿ ಕೊಟ್ಟರೆ ಜನ ನೋಡುತ್ತಾರೆ ಇಲ್ಲ ಚೆನ್ನಾಗಿರುವುದರ ಹತ್ತಿರ ಹೋಗುತ್ತಾರೆ ಅಷ್ತೆ ಅಲ್ಲವೇ ?
ರೀಮೇಕ್ ಕಾರ್ಮಿಕರಿಗೆ ಕೆಲಸ ಕೊಟ್ಟರೆ, ಡಬ್ಬಿಂಗ್ ನಿರ್ಮಾಪಕರಿಗೆ ಹಣ ಉಳಿಸುತ್ತದೆ. ಆದರೆ ಸಾಮಾನ್ಯ ಪ್ರೇಕ್ಷಕನಾದ ನನ್ನಂತವನಿಗೆ ನಮ್ಮ ತನವೇ ಇಲ್ಲದ ನಮ್ಮ ಚಿತ್ರರಂಗದ ಬಗ್ಗೆ ಬೇಸರವಾಗುವುದು ಸಹಜ.
ಇಲ್ಲ.. ಸಮಸ್ಯೆ ಅಷ್ಟು ಸರಳವಲ್ಲ ಪ್ರವೀಣರೇ…
ಸಿನೆಮಾವನ್ನು ನೋಡುವ ಪ್ರೇಕ್ಷಕರ ಸಂಖ್ಯೆ, ಬೌಗೋಳಿಕ, ಸಾಮಾಜಿಕ ಅಂಶಗಳೆಲ್ಲವೂ ಇಂಥಾ ಪರಿಸ್ಥಿತಿಗೆ ಕಾರಣವಾಗಿರುತ್ತದೆ. ಮಲಯಾಳಕ್ಕೋ ತಮಿಳಿಗೋ ಸಾಗರದಾಚೆಯ ಮಾರುಕಟ್ಟೆ ಗಮನಿಸಿದರೆ ಇದ ಒಂದು ಸಣ್ಣ ಮಟ್ಟಿನ ಕಲ್ಪನೆ ನಮಗೆ ಸಿಗುತ್ತದೆ. ಇನ್ನೊಂದೇ ಕ್ಷೇತ್ರದ ಉದಾಹರಣೆ ನೋಡಿ, ಇಡೀ ಭಾರತದಲ್ಲಿ ಯಾಕೆ ಬೆಂಗಳೂರಿನಲ್ಲೇ ಸಾಫ್ಟ್ವೇರ್ ಬೂಮ್ ಆಯಿತು? ಅನೇಕ ಕಾರಣಗಳಲ್ಲಿ ಒಂದು ಮಖ್ಯಕಾರಣ, … Read Moreಇಲ್ಲಿನವರು ಇಂಗ್ಲೀಷನ್ನು ಚೆನ್ನಾಗಿ ಮಾನಾಡಬಲ್ಲರು! ಅದೇ ನೀವು ತಮಿಳು ನಾಡಿಗೋ ಇಲ್ಲಾ ಕೇರಳಾಕ್ಕೋ ಹೋಗಿ ನೋಡಿ ಅಲ್ಲಿನವರು ಇಂಗ್ಲೀಷಿನಲ್ಲಿ ಮಾತನಾಡುವುದಿಲ್ಲ ಎಂದಲ್ಲ. ಆದರೆ ಪ್ರಮಾಣ ಕಡಿಮೆ. ನಮ್ಮಲ್ಲಿ ಕನ್ನಡ ಬಂದರೂ ಕನ್ನಡ ಮಾತನಾಡದೇ ಇರುವ ಕ್ರಮ ಇದೆ. ಇದರಿಂದಾಗಿ ಕನ್ನಡ ಸಿನೆಮಾ ನೋಡುವುದು ಸ್ಟೇಟಸ್ಸಿಗೆ ಕೊರತೆ ಎಂಬ ಭಾವನೆಯೂ ನಮ್ಮಲ್ಲಿ ಇದೆ! ಹೀಗೆ ಸಮಸ್ಯೆಗಳು ತೀರಾ ಸರಳವಲ್ಲ. ಹಾಗಾಗಿ ನಮ್ಮ ಚಿತ್ರ ಕಾರ್ಮಿಕರಿಗೆ ಭಯ, ರೀಮೇಕ್ ನಿರ್ಮಾಪಕರ ಹಿತರಕ್ಷಣೆಗೆ ಹೊರಟಿರುವುದು ಇತ್ಯಾದಿ ಆರೋಪಗಳ ಕುರಿತಾಗಿ ನನಗೆ ಅಷ್ಟು ಸಹಮತವಿಲ್ಲ.
ಪ್ರವೀಣ್, ಮಗಧೀರ ಬೆಂಗಳೂರು ಹಾಗು ಇನ್ನಿತರ ಕೆಲವು ಕಡೆಗಳಲ್ಲಿ ಮಾತ್ರ ೫೦-೧೦೦ ದಿನ ಓಡುತ್ತಿದೆ ಆದ್ರೆ ನೀವು ಹೇಳಿದ ಹಾಗೆ ಮಾಡಿದರೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪರಭಾಷಾ ಹಾವಳಿ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
ಅಭಯ ಅವರೇ, ಕನ್ನಡ ಚಿತ್ರ ನೋಡದಿರುವುದಕ್ಕೆ ಬರೆ Statusನ ವಿಚಾರಕಿಂತ ಬರುತ್ತಿರುವ ಸಾಲು ಸಾಲು ಕಳಪೆ ಚಿತ್ರಗಳೇ ಕಾರಣ. ಒಂದು ಕಾಲದಲ್ಲಿ ಸಾಗರದಾಚೆಗು ನಾಗತ್ತಿ ಅವರ ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದರು. ಆದರೆ “ಓಲವೇ ಜೀವನ ಲೆಕ್ಕಾಚಾರ” ದಂತಹ ಲೆಕ್ಕಾಚಾರವಿಲ್ಲದ ಚಿತ್ರಗಳನ್ನ ಕೊಡುತ್ತಾ ಬಂದರೆ ಯಾರು ತಾನೆ ಚಿತ್ರಮಂದಿರದ ಕಡೆ ಹೋಗುತ್ತಾರೆ.
ಕಳಪೆ ಚಿತ್ರಗಳು ಎಲ್ಲಾ ಭಾಷೆಯಲ್ಲೂ ಬರುತ್ತವೆ. ಮತ್ತೆ ಅಷ್ಟಕ್ಕೂ ಇಷ್ಟಕ್ಕೂ ಕಳಪೆಯಲ್ಲೂ ಅನೇಕ ಹಂತಗಳಿರುತ್ತವಲ್ಲಾ? ಅವರವರಕುತಗೆ ಅವರವರ ದರುಶನಕೆ. ಎಲ್ಲಾ ರೀತಿಯ ಪ್ರೇಕ್ಷಕರೂ ಒಟ್ಟಿಗೇ ಕುಳಿತು ಚಿತ್ರ ನೋಡುವುದು. ಹೀಗಾಗಿ ಕಳಪೆ ಚಿತ್ರವೊಂದೇ ನಮ್ಮ ಚಿತ್ರರಂಗದ ದುರ್ಗತಿಗೆ ಕಾರಣವಲ್ಲ.
ಉಣಬಡಿಸುವ ಊಟವೇ ಸರಿ ಇಲ್ಲದಿದ್ದರೆ ಊಟಬಡಿಸುವ ಜಾಗಕ್ಕೆ ಯಾರುತಾನೆ ಬರುತ್ತಾರೆ ಆಭಯ ಅವರೇ?
ಅದನ್ನು ಇಲ್ಲ ಎನ್ನುತ್ತಿಲ್ಲ ನಾನು. ಖಂಡಿತಾ ಊಟ ಚೆನ್ನಾಗಿರಬೇಕು. ಆದರೆ ನಾನು ಹೇಳುತ್ತಿರುವುದು, ಸಮಸ್ಯೆ ಅಷ್ಟೇ ಅಲ್ಲ ಎಂದು. in fact, ಇತರ ಸಮಸ್ಯೆಗಳು ಪರಿಹಾರವಾಗುತ್ತಾ ಬಂದಂತೆ, ಕಳಪೆ ಚಿತ್ರಗಳೂ ತನ್ನಿಂದ ತಾನೇ ಹೊರಟು ಹೋಗುತ್ತವೆ ಎನ್ನಬಹುದು. ಈಗ ಉದಾಹರಣೆಗೆ, ನಮ್ಮ ಚಿತ್ರರಂಗದಲ್ಲಿ ಇತ್ತೀಚೆಗೆ ತುಂಬಿ ತುಳುಕುತ್ತಿರುವ ಹೊಸ ನಿರ್ಮಾಪಕರನ್ನೇ ನೋಡಿ. ಮಗನನ್ನು ಹೀರೋ ಮಾಡಲೆಂದು, ಅದ್ಯಾವುದೋ ರಿಯಲ್ ಎಸ್ಟೇಟ್ ವ್ಯವಹಾರಸ್ಥ ಚಿತ್ರ ನಿರ್ಮಾಣಕ್ಕೆ ಕೈ ಹಾಕುತ್ತಾನೆ. ಅವ ಆಸೆಯಲ್ಲಿ ತಪ್ಪಿಲ್ಲ. ಆದರೆ ಅವನಿಗೆ ಚಿತ್ರನಿರ್ಮಾಣದ ಯಾವುದೇ ಹಿನ್ನೆಲೆ ಇಲ್ಲದೆ ಆತ ದುಡ್ಡು ಸುರಿದು, ಅದ್ಯಾವುದೋ ಒಬ್ಬನಿಂದ ಚಿತ್ರವನ್ನು ಮಾಡಿಸಿಕೊಳ್ಳುತ್ತಾನೆ. ಹೀಗಾದಾಗ ಚಿತ್ರ ಒಳ್ಳೆಯದಾಗಿ ಬಂದರೆ ಸರಿ. ಇಲ್ಲವಾದರೆ?! ಸಮಸ್ಯೆ ಕೇವಲ ಕಳಪೆ ಚಿತ್ರ ಅಲ್ಲ ಅದರ ಹಿಂದೆ ಬಹಳಷ್ಟು ಕಾರಣ ಇದೆ ಎನ್ನೋದಕ್ೆ ಈ ಉದಾಹರಣೆ ಕೊಟ್ಟೆ.
ಹಹ್ಹ…
ವಾದ ಸರಣಿ ಚೆನ್ನಾಗಿದೆ.
ಮುಂದುವರೆಸಬಹುದು.
ರಿಮೇಕ್ – ಡಬ್ಬಿಂಗ್ ಎರಡೂ ಸೃಜನಶೀಲ ಚಟುವಟಿಕೆಗೆ ಅಪಾಯಕಾರಿ. ಡಬ್ಬಿಂಗ್ಗಿಂತ ರಿಮೇಕ್ಮಾರಿ ವಾಸಿ.
ಆದರೆ ಸೃಜನಶೀಲ ಹೊಸ ಚಿತ್ರಗಳ ತಯಾರಿಗೆ ನಿರಂತರ ಪ್ರಯತ್ನ ಆಗಬೇಕು. ಅದು ಆಗುತ್ತಲೇ ಇದೆ. ನೋಡುಗರ ಸಂಖ್ಯೆ ಹೆಚ್ಚಾದಾಗ ಆ ಚಟುವಟಿಕೆಗಳಿಗೆ ಹೊಸ ಶಕ್ತಿ ದೊರೆಯುತ್ತದೆ….
ಈ ಓಟದಲ್ಲಿ ಯಾರು ಗೆಲ್ಲುತ್ತಾರೋ? ಯಾರು ಕೊರಗುತ್ತಾರೋ? ಎಂಬ ಲೆಕ್ಕಾಚಾರಕ್ಕಿಂತ ಅಂತಿಮವಾಗಿ ಒಳ್ಳೆಯದು ಉಳಿಯಬೇಕು ಎಂದಷ್ಟೇ ಹೇಳಬಹುದು.
ಅಭಯ್ ಸಿಂಹ,
ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಬೇಡಿ ಅಂತ ಯಾರು ನಮಗೆ ನಿಬಂಧನೆ ಮಾಡಿಲ್ಲವಲ್ಲ ?,
ಸಾಗರದಾಚೆ ವಿಷಯ ಬಿಡಿ, ನಮ್ಮ ಪರರಾಜ್ಯದಲ್ಲೆ ನಮ್ಮ ಕನ್ನಡ ಚಿತ್ರಗಳನ್ನು ನಾವು ಬಿಡುಗಡೆ ಮಾಡಿದ್ದೇವೆಯೆ ?, ಮುಂಗಾರು ಮಳೆ ಅದನ್ನು ಮಾಡಿದ್ದು ಬಿಟ್ಟರೆ ಅಮೇಲೆ ಬೇರೆ ಯಾವ ಚಿತ್ರವೂ ಆ ಕೆಲಸ ಮಾಡಿಲ್ಲ. ನಾವು ಮತ್ತೆ ಇನ್ನೊಂದು ಮುಂಗಾರು ಮಳೆ ಮಾಡಿದರೆ ಮಾತ್ರ ಸಾಗರದಾಚೆ ಬೇಡ ಇನ್ನೊಂದು ರಾಜ್ಯಕ್ಕೆ ಹೋಗಬಹುದು ಅನ್ನೊ ಕಲ್ಪನೆ ಯಾಕೆ.
ಇಲ್ಲಿ ತೆರೆ ಕಾಣುವ ಚಿತ್ರಗಳು ಎಲ್ಲಾ ಹಿಟ್ ಆಗಿರುತ್ತದೆಯೆ ಅಂತ ನಾವೇಕೆ ಅಂದುಕೊಳ್ಳಬೇಕ ?.
ಕನ್ನಡ ಚಿತ್ರ ಪ್ರದರ್ಶನ ಲಾಭದಾಯಕ ಉದ್ದಿಮೆಯಾಗಬೇಕೂಂದ್ರೆ ಸಹಜವಾಗೇ ಜನರನ್ನು ಸೆಳೆಯೋ ಶಕ್ತಿ ಚಿತ್ರಗಳಿಗೆ ಇರಬೇಕು, ಸುಖಾಸುಮ್ಮನೆ ಪ್ರೇಕ್ಷಕನ ಮೇಲೆ ಎತ್ತಿ ಹಾಕುವುದು ಸರಿ ಅಲ್ಲ.
ಇನ್ನು software ಬೂಮ್ಗೆ ಮತ್ತೆ ಬೆಂಗಳೂರಿಗೆ ನೀವು ಕೊಟ್ಟ ನಂಟು ಒಪ್ಪಕೊಳ್ಳಲು ಆಗುವದಿಲ್ಲ, ಇಂಗ್ಲೀಷ್ ಜ್ಞಾನ ಬಗ್ಗೆ ನೀವು ಹೇಳುವುದು ಕಾಲಸೆಂಟರ್ ಉದ್ಯಮಕ್ಕೆ ಸರಿ ಹೋಗುತ್ತದೆ. ಅಷ್ಟಕ್ಕೂ ಬೆಂಗಲೂರು ಅಂದರೆ ಕರ್ನಾಟಕ ಅಲ್ಲವಲ್ಲ ..
ಗಂಭೀರ ಪ್ರಯತ್ನ ಮಾಡಿದವರಲ್ಲೊಬ್ಬರು. ಆದರೆ ಕನ್ನಡಿಗರ ಪರಿಸ್ಥಿತಿಗಳು ಇತರ ಭಾಷೆಯವರದ್ದಕ್ಕಿಂತ ಭಿನ್ನ. ಇನ್ನು ಆಗಲೇ ಸುರೇಶ್ ಸರ್ ಹೇಳಿದಂತೆ ನಮ್ಮ ಮಾರುಕಟ್ಟೆಯೂ ತೀರಾ ಭಿನ್ನವಾದದ್ದು. ಮತ್ತೆ ಇಂಗ್ಲೀಷ್ ಕುರಿತಾಗಿ ನಾನು ಹೇಳಿದ್ದನ್ನು ಪುನಃ ನೋಡಿ. ಅದು ಒಂದು ಕಾರಣ ಅಷ್ಟೇ. ಅದೇ ಕಾರಣ ಎಂದಲ್ಲ ನಾನು ಹೇಳಿದ್ದು.
ಕನ್ನಡ ಪ್ರೇಕ್ಷಕ ತನ್ನ ಭಾಷೆಯಲ್ಲಿ ಮನರಂಜನೆ ಪಡೆಯಬೇಕಾ ಇಲ್ಲ ಅವನು ಬೇರೆ ಭಾಷೆ ಕಲಿತು ಅದರಲ್ಲಿ ಪಡೆಯಬೇಕಾ ?
ಗುಣಮಟ್ಟದ ಸಿನಿಮಾಗಳಿಗೆ, ಪ್ರಶಸ್ತಿ ವಿಜೇತ ಚಿತ್ರಗಳಿಗೆ, ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳಿಗೆ, ಮಕ್ಕಳ ಚಿತ್ರಗಳಿಗೆ ಅಂತಾ ಒಂದೊಂದಾಗಿ ಶುರುವಾಗಿದ್ದ ಈ ಸಬ್ಸಿಡಿ ಅನ್ನೋದನ್ನು ಒಳ್ಳೇ ಚಿತ್ರಗಳಿಗೆ ಅಂತ ಮಾಡುದ್ರು. ಆಮೇಲೆ ರಿಮೇಕ್ ಅಲ್ಲದ ಚಿತ್ರಗಳಿಗೆ ಅಂದ್ರು, ಈಗ ರಿಮೇಕೋ ಸ್ವಮೇಕೋ ಎಲ್ಲಾ ಕನ್ನಡ ಚಿತ್ರಗಳಿಗೆ … ಇಪ್ಪತ್ತಿಪ್ಪತ್ತು ಲಕ್ಷ ಕೊಡಬೇಕು ಅಂತಾ ಕೇಳ್ತಾರಲ್ಲಾ… ವರ್ಷಕ್ಕೆ ಬರೋ ನೂರು ಚಿತ್ರಗಳಿಗೆ ತಲಾ ಇಪ್ಪತ್ತು ಲಕ್ಷದಂತಾದ್ರೆ ಸರ್ಕಾರಕ್ಕೆ 20 ಕೋಟಿ ಹೊರೆ ಬೀಳುತ್ತೆ.
ಹೀಗೆ ನಾವು ಬರೀ ಸ್ವಂತ ಕಾಲ ಮೇಲೆ ನಿಲ್ಲದೇ ಬರಿ ಊರುಗೋಲನ್ಣೇ ಆಶ್ರಯ ಮಾಡಿಕೋಂಡು ಇದ್ದೀವಲ್ಲ … ಇದಕ್ಕೂ ಪ್ರೇಕ್ಷಕನೇ ಹೊಣೆಯಾ ?
ಪ್ರವೀಣರೇ,
ಮಾರುಕಟ್ಟೇ ವಿಸ್ತರಿಸ ಬೇಡಿ ಅಂತ ಯಾರೂ ಹೇಳಿಲ್ಲ ಎನ್ನುವುದು ಸರಿ. ಆದರೆ ಸುರೇಶರನ್ನೇ ಕೇಳಿ. ಅವರು ಕನ್ನಡ ಚಿತ್ರಗಳಿಗೆ ವಿದೇಶೀ ಮಾರುಕಟ್ಟೆ ಪರೀಕ್ಷೆ ಮಾಡುವಲ್ಲಿ ಗಂಭೀರ ಪ್ರಯತ್ನ ಮಾಡಿದವರಲ್ಲೊಬ್ಬರು. ಆದರೆ ಕನ್ನಡಿಗರ ಪರಿಸ್ಥಿತಿಗಳು ಇತರ ಭಾಷೆಯವರದ್ದಕ್ಕಿಂತ ಭಿನ್ನ. ಇನ್ನು ಆಗಲೇ ಸುರೇಶ್ ಸರ್ ಹೇಳಿದಂತೆ ನಮ್ಮ ಮಾರುಕಟ್ಟೆಯೂ ತೀರಾ ಭಿನ್ನವಾದದ್ದು. ಮತ್ತೆ ಇಂಗ್ಲೀಷ್ ಕುರಿತಾಗಿ ನಾನು ಹೇಳಿದ್ದನ್ನು ಪುನಃ ನೋಡಿ. ಅದು ಒಂದು ಕಾರಣ ಅಷ್ಟೇ. ಅದೇ ಕಾರಣ ಎಂದಲ್ಲ ನಾನು ಹೇಳಿದ್ದು.
ಸರಕಾರದ ಹಣವನ್ನು ಪೋಲು ಮಾಡುವ ಕುರಿತು ನನ್ನದೂ ವಿರೋಧವಿದೆ. ಆದರೆ ಆ ಸಹಾಯ ಯಾಕೆ ಬೇಕಾಯಿತು ಎಂದು ನೋಡಿದರೆ ನಮಗೆ ಸಮಸ್ಯೆಯ ಮೂಲ ಅರ್ಥವಾಗುತ್ತೆ ಪ್ರವೀಣರೇ. ಎರಡು ಕೋಟಿಯಲ್ಲಿ ಸಿನೆಮಾ ಮಾಡಿದ ನಿರ್ಮಾಪಕ ಸರಕಾರ ಕೊಡುವ ಕೇವಲ ಇಪ್ಪತ್ತು ಲಕ್ಷಕ್ಕಾಗಿ ಒದ್ದಾಡುವ ಪರಿಸ್ಥಿತಿ ಯಾಕಿದೆ ನಮ್ಮಲ್ಲಿ? ಯಾಕೆಂದರೆ ಜನ ಸಿನೆಮಾ ನೋಡುತ್ತಿಲ್ಲ. ಹಾಂ! ಒಳ್ಳೇ ಸಿನೆಮಾ ಕೊಡಿ ಪ್ರೇಕ್ಷಕರು ನೋಡ್ತಾರೆ ಅನ್ತೀರಾ? ಆದರೆ ನಮ್ಮಲ್ಲಿ ಗಿರೀಶ್ ಕಾಸರವಳ್ಳಿಯವರದ್ದೇ ಆಗಲೀ ಬಿ. ಸುರೇಶರದ್ದೇ ಆಗಲಿ ಒಳ್ಳೆ ಸಿನೆಮಾಗಳು ಬಂದಾಗ ಅದನ್ನು ಬಿಡುಗಡೆ ಮಾಡಲು ಅವರಿಗೆ ಆಗುವ ತೊಡಕು ನಮ್ಮಲ್ಲಿ ಯಾಕಿದೆ? ಒಮ್ಮೆ ಯೋಚಿಸಿ ನೋಡಿ. ಇನ್ನು ಆಗಲೇ ನೀವು ಹೇಳಿದಿರಲ್ಲಾ, ಬೆಂಗಳೂರು ಎಂದರೆ ಕರ್ನಾಟಕವಲ್ಲ ಎಂದು. ಆದರೆ ಸಿನೆಮಾ ಕಲೆಕ್ಷನ್ ಒಮ್ಮೆ ನೋಡಿ, BKT ಬಿಟ್ಟು ಇತರ ಕಡೆಗಳಲ್ಲಿ ಕನ್ನಡ ಸಿನೆಮಾ ಓಡುತ್ತಿರುವ ಪರಿಯನ್ನೊಮ್ಮೆ ನೋಡಿ. ಆಗ ಯಾಕೆ BKT ಬಗ್ಗೆ ಇಲ್ಲಿನ ನಿರ್ಮಾಪಕರಿಗೆ ಅಷ್ಟು ಆಸಕ್ತಿ ಎಂದು ತಿಳಿಯುತ್ತದೆ. ಸಿನೆಮಾದವರು ಸರಕಾರದ ಹಣ ಪೋಲು ಮಾಡುತ್ತಾರೆ ಎಂದು ದೂರುವುದು ತರವಲ್ಲ. ಇಲ್ಲಿ ಕಾರಣಗಳು ಎರಡೂ ಕಡೆ ಸಾಕಷ್ಟಿವೆ. ಆದರೆ ಸಧ್ಯಕ್ಕೆ ನಮಗೆ ಬೇಕಾಗಿರುವುದು ಕಾರಣಗಳಲ್ಲ, ಉತ್ತರಗಳು.
ಪ್ರವೀಣರು ಕೋಪಾವಿಷ್ಟರಾದಂತಿದೆಯಲ್ಲಾ…?
ಪ್ರವೀಣರೇ… ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೂ ನಿಜವಾಗಿ ಉತ್ತರ ಹೇಳಬೇಕಾದವರು ರಿಮೇಕ್ ಅಥವಾ ನೀವು ಹೇಳುತ್ತಿರುವಂತಹ ಕಳಪೆ ಚಿತ್ರ ಮಾಡುವವರು. ನಾವಲ್ಲ.
ಆದರೂ… ಚರ್ಚೆಗಾಗಿ ಒಂದಷ್ಟು ಮಾತು:
೧. ಯಾವುದೇ ಭಾಷೆಯ ಚಿತ್ರವೊಂದನ್ನು ಕನ್ನಡಕ್ಕೆ ಡಬ್ ಮಾಡಲು ತಗಲುವ ವೆಚ್ಚ ಕೇವಲ ಐದಾರು ಲಕ್ಷಗಳು. ಬರುವ ಲಾಭಗಳು ಕೋಟಿಗಳಲ್ಲಿ ಇರಬಹುದು.
೨. ಯಾವುದೇ ಚಿತ್ರವೊಂದನ್ನು ಕನ್ನಡದಲ್ಲಿ ರಿಮೇಕ್ ಮಾಡಲು ತಗಲುವ ವೆಚ್ಚ ಎರಡು-ಮೂರು ಕೋಟಿಗಳು. ಲಾಭ ಗ್ಯಾರಂಟಿ ಇಲ್ಲ…. Read More
೩. ಸ್ವಮೇಕ್ ಜನಪ್ರಿಯ ಚಿತ್ರ ಮಾಡಲು ತಗಲುವ ವೆಚ್ಚ ೧ರಿಂದ೩ ಕೋಟಿಗಳು. ಆದರೆ ಲಾಭದ ಗ್ಯಾರಂಟಿ ಇಲ್ಲ.
೪. ಗಿರೀಶರು-ಅಭಯ-ನಾನು ಮಾಡುವಂತಹ ಚಿತ್ರಗಳಿಗೆ ತಗಲುವ ವೆಚ್ಚ ೫೦-೬೦ ಲಕ್ಷಗಳು. ಇಲ್ಲಿ ಬಂಡವಾಳಕ್ಕೆ ಮೋಸವಿಲ್ಲ.
ಇದೆಲ್ಲಾ ಮಾತುಗಳನ್ನು ಗಮನಿಸಿದರೆ ಯಾವುದು ಉತ್ತಮ ಎಂಬುದು ತಿಳಿಯುತ್ತದೆ. ಹಣವುಳ್ಳವರು ತೀರ್ಮಾನ ತಗೋಬೇಕು. ನಾವಲ್ಲ. ಅಲ್ವಾ ಪ್ರವೀಣರೇ, ಹರೀಶರೇ…
ಒಂದು ಕೆಲಸ ಮಾಡಿ, ನೀವಿಬ್ಬರೂ ತೀರ್ಮಾನ ತಗಳಿ. ನಾನು-ಅಭಯ ಸಿನಿಮಾ ಮಾಡಿಕೊಡ್ತೇವೆ.
ಹ… ಹ್ಹ… ಅದೊಳ್ಳೇ ಐಡಿಯಾ ಸರ್.. 😉
ದೇಶಿ ಮತ್ತು ವಿದೇಶಿ ಮಾರುಕಟ್ಟೆ ಬಗ್ಗೆ ಮಾತನಾಡುವಕ್ಕಿಂತ ಮುಂಚೆ ನಮ್ಮ ನೆಲದಲ್ಲೇ ನಮ್ಮ ಭಾಷೆಯ ಚಿತ್ರಗಳಿಗೆ ಮಾರುಕಟ್ಟೆ ಇದೇಯಾ ಅಂತ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಅಲ್ಲವೇ ?
ಎಲ್ಲದಕ್ಕೂ ಪ್ರೇಕ್ಷಕನನ್ನೇ ಗುರಿ ಮಾಡುವುದು ವಾಸ್ತವದಿಂದ ದೂರ ಹೋಗುವುದೇ ಆಗಿದೆ. ಇವತ್ತು ಸಬ್ನಿಡಿಗೆ ಚಲನಚಿತ್ರ ಮಾಡುವರಿಗೆ ಮಾರುಕಟ್ಟೆ, ಪ್ರೇಕ್ಷಕ ಗಮನದಲ್ಲಿ ಇರುತ್ತಾನೆಯೆ ?.
ಅಷ್ಟಕ್ಕೂ ಇವುಗಳು ಯಾವುದು ಮೂಲ ವಿಷಯ ಡಬ್ಬಿಂಗ್ ಬೇಡ ಅಂತ ಹೇಳೊಲ್ಲ .. ನಮ್ಮ ನೈತಿಕತೆ ಹಾಳಾಗುತ್ತದೆ, ನಮ್ಮ ಜನರಿಗೆ ಕೆಲ್ಸ ಸಿಕ್ಕುವದಿಲ್ಲ ಅನ್ನುವುದು ಬರಿ ಗುಮ್ಮ ತೋರಿಸುವುದೇ ಆಗಿದೆ ಅಲ್ಲ್ವ….
ಡಬ್ ಮಾಡಕ್ ಅವಕಾಶ ಸಿಕ್ತಿದ್ ಹಾಗೇ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು, ಥಳಕು ಬಳುಕು, ಒಳ್ಳೇ ಸಿನಿಮಾಗಳು ನುಗ್ಗಬಹುದು. ಅದ್ಯಾವ್ದು ನಮ್ಮ ನೆಲದ ಸೊಗಡಿನ, ನಮ್ಮ ಆಚರಣೆ, ನಂಬಿಕೆಗಳನ್ನು ತೋರುಸ್ದಿದ್ರೆ ಹೆಚ್ಚು ಕಾಲ ಉಳಿಯಲಾರವು. ಹಾಗೆ ನಮ್ಮತನಾನ ಬೇರೆ ಸಂಸ್ಕೃತಿಯ ಚಿತ್ರಗಳು ತೋರ್ಸೋದು ಅಸಾಧ್ಯಾನೆ ಅನ್ನಿ. ಒಟ್ಟಿನಲ್ಲಿ ಸ್ಪರ್ಧೆ ಬೇಡ ಅಂತ ನಾವು ಎಷ್ಟು ದಿನ ಸಬ್ಸಿಡಿ ಅಂತ ಪಠಿಸುತ್ತ ಇರುತ್ತೆವೆಯೋ ಅಲ್ಲಿ ತನಕ ನಾವು ಅಲ್ಲೇ ಇರುತ್ತೆವೆ.
ಅಯ್ಯೋ! ಪ್ರವೀಣರೇ,
ತಾವು ಸಮಸ್ಯೆಯನ್ನು ಕೊಂಚ ತಿರುವಾಗಿ ಅರ್ಥೈಸುತ್ತಿದ್ದೀರಿ ಎಂದು ನನ್ನ ಭಾವನೆ. ದೇಶೀ ಮಾರುಕಟ್ಟೆಯ ನಂತರವಷ್ಟೇ ವಿದೇಶೀ ಮಾರುಕಟ್ಟೆಯ ಹುಡುಕಾಟ ನಡೆದಿರುವುದು. ಇಲ್ಲಿಯದ್ದು ಬಿಟ್ಟು ಅಲ್ಲಿಯದ್ದಲ್ಲ. ಮತ್ತೆ ನಾವ್ಯಾರೂ ಪ್ರೇಕ್ಷಕರನ್ನು ದೂರುತ್ತಿಲ್ಲ. ಮತ್ತೆ ಪ್ರೇಕ್ಷಕ ಎಂದರೆ ನನ್ನನ್ನು-ಸುರೇಶರನ್ನು ಹೊರತು ಪಡಿಸಿದ್ದಲ್ಲ. ಇದಕ್ಕೆ ಸಾಮಾಜಿಕ, ಆರ್ಥಿಕ ಕಾರಣಗಳಿವೆ ಎನ್ನುವುದನ್ನೇ ನಾನು ಹೇಳುತ್ತಿರುವುದು. ಇನ್ನು ಸಬ್ಸಿಡಿ ಬೇಕೋ ಬೇಡವೋ ಎನ್ನುವುದಕ್ಕೆ ಎರಡೂ ಕಡೆಯಿಂದ ಸಾಕಷ್ಟು ಸಮರ್ಥವಾದ ಉತ್ತರಗಳೇ ಇವೆ. ಹೆಚ್ಚಿನ ಯುರೋಪಿಯನ್ ಸಿನೆಮಾಗಳು ಸರಕಾರದ ಹಣದಿಂದಲೇ ಆಗುವುದು. ಅಲ್ಲಿ ಖಾಸಗೀ ನಿರ್ಮಾಪಕರೇ ಇಲ್ಲ! ಹಾಗಾದರೆ ಅಲ್ಲಿನ ಸಿನೆಮಾ ಚೆನ್ನಾಗಿರುತ್ತದೆ ಮತ್ತೆ ನಮ್ಮದು ಯಾಕೆ ಕಳಪೆ? ನಮ್ಮಲ್ಲಿನ ಚಿತ್ರಕರ್ಮಿಗಳು ಹೆಡ್ಡರೇ? ಮೋಸಗಾರರೇ? ಪ್ರೇಕ್ಷಕರು ದಡ್ಡರೇ? ಇಲ್ಲ. ಕಾರಣ ಅಷ್ಟು ಸರಳವಲ್ಲ. ಮತ್ತೆ ಡಬ್ಬಿಂಗ್ ಬೇಡ, ರೀಮೇಕ್ ಬೇಡ ಎನ್ನುವುದು ಕೇವಲ ಗುಮ್ಮ ತೋರಿಸುವ ಪ್ರಯತ್ನ ಅಲ್ಲ. ಇಲ್ಲಿ ಕ್ರಿಯಾಶೀಲತೆಯ ಕೊರತೆ, ಅದಕ್ಕಾಗುವ ತೊಂದರೆಯ ಕುರಿತಾದ ಮಾತು ಇರುವುದು.
ಸುರೇಶ್,
ಅಯ್ಯೊ .. ನಾನು ನಿಮ್ಮ ಮೇಲೆ ಯಾಕೆ ಕೋಪ ಮಾಡಿಕೊಳ್ಳಲಿ ಸ್ವಾಮಿ, ಇದು ಒಂದು ಉತ್ತಮ ಚರ್ಚೆ , ನೀವು ನಿಮ್ಮ ಕಡೆಯ ಚಿತ್ರ ಮಂದಿರದ ವಾಸ್ತವಾಂಶಗಳನ್ನು ತೆರೆದಿಡುತ್ತ ಇದ್ದೀರಾ.. ನಮ್ಮೆಲ್ಲರ ಒಮ್ಮತ ಒಂದೆ ಕನ್ನಡ ಚಿತ್ರಗಳು ಹೆಚ್ಚು ಪ್ರಸಿದ್ದಿಯಾಗಬೇಕು ಎನ್ನುವುದು ಅಲ್ಲವೇ ?
ಸ್ಪರ್ಧೆ ಬೇಡ ಅಂದೋರ್ ಯಾರು? ಕನ್ನಡ ಚಿತ್ರಕ್ಕೀಗ ದ್ರೌಪದಿ ಸ್ಥಾನ ಕಣ್ರೀ… ಐದು ಭಾಷೆಗಳ ಗಂಡಂದಿರನ್ನು ಕನ್ನಡ ಸಿನಿಮಾ ಎಂಬ ಹೆಂಡತಿಯು ನಿಭಾಯಿಸುತ್ತಾ ಇದ್ದಾಳೆ. (ಆಂಗ್ಲ, ಹಿಂದಿ, ತಮಿಳು, ತೆಲುಗು, ಮಲೆಯಾಳ) ಆ ಕನ್ನಡಮ್ಮನ ಸಹನಶೀಲತೆಗೆ ನಾವು ಮಾರುಹೋಗಬೇಕಷ್ಟೆ.
ಒಂದು ಅಂಕಿ ಅಂಶ, ನಿಮ್ಮ ಅವಗಾಹನೆಗೆ.
೨೦೦೦ ದಲ್ಲಿದ್ದ ಕನ್ನಡ ಚಿತ್ರಪ್ರದರ್ಶಿಸುತ್ತಾ ಇದ್ದ ಚಿತ್ರಮಂದಿರಗಳ ಸಂಖ್ಯೆ ೧೧೨೦ಕ್ಕು ಹೆಚ್ಚು.
೨೦೦೭ರಲ್ಲಿ ಈ ಸಂಖ್ಯೆ ೭೫೦ರ ಅಂಚಿನಲ್ಲಿತ್ತು.
೨೦೦೯ರಲ್ಲಿ ಈ ಸಂಖ್ಯೆ ೬೦೦ಕ್ಕೆ ಬಂದಿದೆ.
೨೦೧೦ರ ಮಾರ್ಚ್ ಹೊತ್ತಿಗೆ ಇನ್ನೂ ೧೫೦ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ….
ಅಲ್ಲಿಗೆ…
ನಾವು ಹಾಡಬೇಕಾದ್ದು ಒಂದೇ ಹಾಡು…
‘ಉದಯವಾಯಿತು ನಮ್ಮ ಚೆಲುವ ಕನ್ನಡನಾಡು’
ಸುರೇಶ್, ಅಂಕಿ ಅಂಶಕ್ಕೆ ಧನ್ಯವಾದ ..
ನಮ್ಮ ನೆಲದಲ್ಲಿ ಇರುವ ಚಲನಚಿತ್ರ ಮಂದಿರಗಳ ಒಪ್ಪಂದವನ್ನು ಗಾಳಿಗೆ ತೂರಿ ಪರಭಾಷ ಚಿತ್ರಗಳನ್ನು ತೆರೆಗೆ ಕಾಣಿಸುವಾಗ
“ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ” ಅಂತ ನಮ್ಮ ನಟರು ಹೇಳುವುದು laughoo,cryoo you only tell ಅನ್ನೊ ಹಾಡು ಜ್ಞಾಪಕ ಬರುತ್ತದೆ 😉
ಯಾಕೋ ಯಜಮಾನರು ‘ಮಗಧೀರ’ನ ಸ್ಮರಣೆಯಲ್ಲಿದ್ದಂತಿದೆ. ಅದೊಂದು ಕೆಟ್ಟ ಸಿನಿಮಾ. ೫೦ ದಿನ ಓಡಿದೆ. ದುಡ್ಡು ಅಗತ್ಯಕ್ಕಿಂತ ಜಾಸ್ತಿಯೇ ಬಂದಿದೆ, ಗಲ್ಲಾಪೆಟ್ಟಿಗೆಗೆ… ಏನು ಮಾಡೋಣ?
T20 ಯಿಂದ ಲಾಭವಾಯಿತು ಎಂದು ಟೆಸ್ಟ್ ಕ್ರಿಕೆಟ್ ಬಿಡಬೇಕೆ. ಅಥವಾ ವಿದೇಶಿಯರು ಭಾಗವಹಿಸುವ T20 ಯನ್ನೇ ಆಡಿಸಬೇಕೆ? ಎಂಬ ಚರ್ಚೆ ಇದೆಯಲ್ಲಾ ಹಾಗಾಯಿತು ಇದು.
ಯಾವುದೋ ಓಡಿತು. ಇನ್ಯಾವುದೋ ಓಡುತ್ತಿಲ್ಲ.
ಓಡಿದ್ದನ್ನ ಎಲ್ಲರೂ ಹಿಂಬಾಲಿಸುತ್ತಾರೆ. ಓಡದ್ದನ್ನ ಹೀಗಳೆಯುತ್ತಾರೆ. ಈ ಯಾವ ಮಾತಿನಲ್ಲೂ ಸಿನಿಮಾ ಎಂಬುದು ಕಲೆಯಾಗಿಲ್ಲ. ಉದ್ಯಮವಾಗಿದೆ ಎಂಬ ಕಡೆ ನಮ್ಮ ಗಮನ ಹರಿಯುತ್ತಿಲ್ಲ… ಗಲ್ಲಾಪೆಟ್ಟಿಗೆ ತುಂಬಬೇಕೋ? ಒಳ್ಲೆಯ ಸಿನಿಮಾ ಆಗಬೇಕೋ ಎಂಬ ತೀರ್ಮಾನ ಮೊದಲು ಆಗಬೇಕು.
ಒಳ್ಳೆಯ ಸಿನಿಮಾಗಳು (ನಮ್ಮ ಜನಕ್ಕಿಡಿಸುವಂತಹ) ಬಂದರೆ ಗಲ್ಲಾಪೆಟ್ಟಿಗೆ ತಂತಾನೆ ತುಂಬುತ್ತದೆ ಎಂಬುದು ನನ್ನ ಅಭಿಪ್ರಾಯ.
ಒಂದು ಸಿನೆಮಾದ ಯಶ ಜಾಹೀರಾತುಗಳ ಸಹಾಯದಿಂದಲ್ಲ. Theater ನಿಂದ ಹೊರಡುವಾಗ ನೋಡಿದ ಕತೆಯ ಗುಂಗು ಇನ್ನೂ ತಲೆಯಲ್ಲಿ ಸುತ್ತುತ್ತಿರಬೇಕು, ಪ್ರಚಾರ ಒಬ್ಬರಿಂದ ಒಬ್ಬರಿಗೆ ಹರಡ ಬೇಕು. (there ends my Kannada profeciency). Popularity depends on many factors. Paakeeza became a roaring success partly because of the publicity givent to the heroine’s declining health, the family squabble of Amrohi household. Films like Aandi, Megho dhaka Taara are worth seeing one more time. But such movies mightnot have been commercial success. Abhaya, your article is thought provoking, but lay person like me is unable to make positive contribution!