ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ


ಅತ್ತ ನನ್ನ ತಂದೆಯ (ಅಶೋಕ ವರ್ಧನ) ಬ್ಲಾಗಿನಲ್ಲಿ ಯಕ್ಷಗಾನ ಪ್ರದರ್ಶನವೊಂದಕ್ಕೆ ‘ಕೇಳಿ’ ಹೊಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ದಾಖಲೀಕರಣದ ಕುರಿತಾಗಿ ಒಂದಿಷ್ಟು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು ಅದಕ್ಕೇ ಇಲ್ಲಿ ಬಂದೆ ನಾನು. ಇಂದು, ಅನೇಕ ಸಂದರ್ಭಗಳಲ್ಲಿ ನೃತ್ಯ ಪ್ರದರ್ಶನಗಳನ್ನು, ವೀಡಿಯೋದಲ್ಲಿ ದಾಖಲಿಸುವುದನ್ನು ನಾವು ಕಾಣುತ್ತೇವೆ. ನಾನೂ ಈ ಹಿಂದೆ ಸಾಲಿಗ್ರಾಮ ಮಕ್ಕಳ ಮೇಳ, ಯಕ್ಷಗಾನ ಕೇಂದ್ರ, ಉಡುಪಿ ಹೀಗೆ ಅನೇಕ ತಂಡಗಳ ಅಧ್ಬುತ ಪ್ರದರ್ಶನವನ್ನು ದಾಖಲೀಕರಿಸುವ ಭಾಗ್ಯ ಪಡೆದಿದ್ದೆ. ಪ್ರತಿಪ್ರದರ್ಶನದ ದಾಖಲೀಕರಣದಲ್ಲೂ ಒಂದಷ್ಟು ಸಮಸ್ಯೆಗಳನ್ನು ಅನುಭವಿಸಿದ್ದೆ ಮತ್ತೆ ಒಂದಷ್ಟು ಕಲಿತಿದ್ದೆ. ಸಧ್ಯದಲ್ಲೇ ಮತ್ತೊಂದು ಇಂಥಾ ಪ್ರದರ್ಶನದ ದಾಖಲೀಕರಣ ನಡೆಸಲಿದ್ದೇನೆ, ಆ ಸಂದರ್ಭದಲ್ಲಿ ವೀಡಿಯೋ ಕಣ್ಣಿನ ಕುರಿತಾಗಿ ಒಂದಿಷ್ಟು ಮಾತುಗಳು.

ಸಿನೆಮಾದ ಆರಂಭದ ದಿನಗಳಲ್ಲಿ, ಸಿನೆಮಾದ ಮೂಲಕ ಕಥೆ ಹೇಳುವುದು ಎಂದರೆ ಅವರು ವೇದಿಕೆಯ ಮೇಲೆ ನಡೆಯುತ್ತಿದ್ದ ನಾಟಕವನ್ನೋ, ನೃತ್ಯವನ್ನೋ ನೇರ ದಾಖಲೀಕರಿಸಿ ಅದನ್ನೇ ಪರದೆಯ ಮೇಲೆ ತೋರಿಸಲು ಮಾಡಿದ ಪ್ರಯತ್ನಗಳಾಗಿದ್ದುವು. ಆದರೆ ಅಲ್ಲಿ ಸಿನೆಮಾ ಮಾಧ್ಯಮ ಕೇವಲ ದಾಖಲೀಕರಣ ಉಪಕರಣವಾಗಿ ಬಳಕೆಯಾಗುತ್ತಿತ್ತು. ಹಾಗಾದರೆ ಈ ಮಾಧ್ಯಮದ ಶಕ್ತಿ ಇಷ್ಟೆಯೇ? ಎಂದು ಸಂಶಯ ಪಡುವಷ್ಟರಲ್ಲಿ, ಸಂಕಲನದ ಆವಿಷ್ಕಾರವಾಯಿತು. ಇದರಿಂದ ಸಿನೆಮಾ ಮಾಧ್ಯಮದ ಮೂಲಕ ಕಥೆ ಹೇಳುವ ಹೊಸ ವಿಧಾನ ಆರಂಭವಾಯಿತು. ಕ್ಯಾಮರಾವನ್ನು ವಿಷಯದಿಂದ ಬೇರೆ ಬೇರೆ ದೂರದಲ್ಲಿ, ಬೇರೆ ಬೇರೆ ಕೋನದಲ್ಲಿ ಇಡುವುದರಿಂದ ವಿಭಿನ್ನ ಅರ್ಥಗಳನ್ನು ಹುಟ್ಟಿಸುವುದು ಸಾಧ್ಯ ಎಂದು ಜನರು ಶೋಧಿಸುತ್ತಾ ಸಿನೆಮಾ ಮಾಧ್ಯಮವನ್ನು ಬಳಸಿಕೊಳ್ಳಲಾರಂಭಿಸಿದರು. ಇವೆಲ್ಲವುಗಳ ಕೊನೆಗೆ ಒಂದು ವಿಷಯ ದಿಟವಾಗುವುದೇನೆಂದರೆ, ಕ್ಯಾಮರಾ ಕಣ್ಣು ಪ್ರೇಕ್ಷಕರ ಕಣ್ಣೇ ಆಗಿದೆ. ನಿರ್ದೇಶಕನಾದವನು ಅದನ್ನು ಎತ್ತ ಕೊಂಡೊಯ್ಯುತ್ತಾನೋ ಪ್ರೇಕ್ಷಕರೂ ಅವನೊಂದಿಗೇ ಪಯಣಿಸುತ್ತಾ ಕಥೆಯನ್ನು ನೋಡುತ್ತಾರೆ ಎಂದಾಯಿತು.

ನಾಟಕದ ಸಂದರ್ಭವನ್ನೇ ಮತ್ತೆ ತೆಗೆದುಕೊಳ್ಳೋಣ. ವೇದಿಕೆಯ ಮೇಲೆ ನಟರು, ಅವರೆದುರು ಪ್ರೇಕ್ಷಕರು. ವೇದಿಕೆಯ ಮೇಲೆ ಬೇರೆ ಬೇರೆ ನಟರು ಏನೇನೋ ಅಭಿನಯ ಮಾಡುತ್ತಿರುತ್ತಾರೆ. ಇಲ್ಲಿ ಪ್ರೇಕ್ಷಕನಿಗೆ ಯಾವ ನಟನನ್ನು ನೋಡಬೇಕು, ಎಷ್ಟು ಹೊತ್ತಿನವರೆಗೆ ನೋಡಬೇಕು, ಮತ್ತೆ ಆ ನಟನ ನಂತರ ಇನ್ನೆಲ್ಲಿ ನೋಡಬೇಕು ಎನ್ನುವ ಸ್ವಾತಂತ್ರ್ಯ ಇರುತ್ತದೆ. ನಟನನ್ನು ಲಾಂಗ್ ಶಾಟಿನಲ್ಲಿ ನೋಡಬೇಕೇ? ಮಿಡ್ ಶಾಟ್? ಕ್ಲೋಸಪ್? ಇದೂ ಪ್ರೇಕ್ಷಕನದ್ದೇ ನಿರ್ಧಾರವಾಗಿರುತ್ತದೆ. ನಟ ಅಭಿನಯಿಸುತ್ತಾ ಸಾಗುತ್ತಾನೆ. ಹೀಗಾಗಿ ಪ್ರೇಕ್ಷಕರ ಮನಸಿನಲ್ಲಿ ಒಂದು ಕಥನ ನಡೆಯುತ್ತಾ ಸಾಗುತ್ತದೆ, ಅವರಿಗೆ ಬೇಕಾದಂತೆಯೇ ಇಲ್ಲಿ ದೃಶ್ಯ ಸಂಯೋಜನೆ ನಡೆಯುತ್ತಾ ಹೋಗುತ್ತದೆ.

ಆದರೆ ಸಿನೆಮಾದ ಸಂದರ್ಭದಲ್ಲಿ, ಯಾವ ನಟನನ್ನು, ಎಷ್ಟು ಹೊತ್ತು, ಯಾವ ಕೋನದಿಂದ, ಯಾವ ಶಾಟ್ ಮೂಲಕ (ಲಾಂಗ್, ಮಿಡ್, ಕ್ಲೋಸ್ ಇತ್ಯಾದಿ) ನೋಡಬೇಕು ಎನ್ನುವುದನ್ನು ನಿರ್ದೇಶಕನೇ ನಿರ್ಧರಿಸುತ್ತಾನೆ. ಆತನ ಈ ನಿರ್ಧಾರಗಳು ಅವನು ಒಂದು ಕಥೆಯನ್ನು ನೋಡುತ್ತಿರುವ ರೀತಿಯ ಮೇಲೆ ಅವಲಂಬಿಸಿರುತ್ತದೆ. ಹೀಗಿರುವಾಗ ಪ್ರೇಕ್ಷಕನ ಸ್ವಾತಂತ್ರ್ಯ ಭಾರೀ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆಯಷ್ಟೇ? ಹೀಗಿರುವಾಗ ಪ್ರೇಕ್ಷಕನಲ್ಲಿ ಯೋಚನೆಗಳನ್ನು ಪ್ರಚೋದಿಸುವ ವಿಸ್ತರಣೆಯ ಅಂಶ ಹೇಗೆ ಹುಟ್ಟಿಸುವುದು? ಇದು ಸಿನೆಮಾದ ಸಮಸ್ಯೆಗಳಲ್ಲಿ ಒಂದು. ಸಮಸ್ಯೆ ಎಂದರೆ, ಋಣಾತ್ಮಕ ಎಂದುಕೊಳ್ಳಬೇಡಿ, ಸಿನೆಮಾ ಇದಕ್ಕೆ ಉತ್ತರವನ್ನು ಕಂಡುಕೊಂಡಿದೆ. ಅದು ತನ್ನ ಪ್ರಮುಖ ಸಾಧನವಾದ ಸಂಕಲನವನ್ನೇ ತನ್ನ ಶಕ್ತಿಯನ್ನಾಗಿಸಿಕೊಂಡು ಈ ಸಮಸ್ಯೆಗೆ ಉತ್ತರ ನೀಡುತ್ತದೆ.

ಈಗ ಹೇಳಿದ ವಿವರಣೆಗಳೆಲ್ಲವೂ ಕಥಾ ಚಿತ್ರೀಕರಣದ ಮಟ್ಟಿಗೆ ಸರಿಯಾಯಿತು. ಆದರೆ ಈ ಹೊಸ ಹೊಳಹುಗಳೊಂದಿಗೆ ಮತ್ತೆ ನೃತ್ಯವನ್ನೇ (ಅಥವಾ ನಾಟಕವನ್ನೇ – ಮೂಲತಃ ವೇದಿಕೆಯ ಮೇಲೆ ನಟನೆ, ಎದುರಿಗೆ ಕ್ಯಾಮರಾ ಸಂದರ್ಭ) ಚಿತ್ರೀಕರಣ ಮಾಡಲು ಹೊರಟಾಗ ಹೊಸ ಸಮಸ್ಯೆಗಳು ಉದ್ಭವವಾಗುತ್ತವೆ. ಇಲ್ಲಿ ‘ಕಟ್’ಅಥವಾ ಸಂಕಲನದ ಪಾತ್ರವೇನು? ಇದು ಅಗತ್ಯವೇ? ಅಥವಾ ಇಡೀ ಪ್ರದರ್ಶನವನ್ನು ‘ವೈಡ್’ ಅಥವಾ ‘ಲಾಂಗ್’ಶಾಟ್ ಮೂಲಕವೇ ತೋರಿಸಬೇಕೇ? ನೃತ್ಯವೆಂಬ ಸ್ಥಳದಲ್ಲೇ ವಿಸ್ತಾರಗೊಳ್ಳುತ್ತಾ ಸಾಗುವ ಅಭಿವ್ಯಕ್ತಿಗೆ ‘ಕಟ್’ ಎನ್ನುವುದು ಸಾಧ್ಯವೇ? ಹಾಗೆ ನಿಲ್ಲಿಸಿ, ಭಿನ್ನ ಕೋನಗಳಿಂದ ಚಿತ್ರೀಕರಿಸಿದರೆ, ಅದು ನೃತ್ಯಪ್ರಕಾರಕ್ಕೆ ನ್ಯಾಯ ಒದಗಿಸೀತೇ? ಹೀಗೆ ಪ್ರಶ್ನೆಗಳು ಅನೇಕ. ನಿಮ್ಮ ಅಭಿಪ್ರಾಯ ತಿಳಿಯಲು ಉತ್ಸುಕನಾಗಿರುವೆ.

This entry was posted in Film Craft. Bookmark the permalink.

18 Responses to ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ

 1. Prashanth ಹೇಳುತ್ತಾರೆ:

  I have been for a long intrigued by this question and it is a pleasant feeling for you to have given a forum to discuss this.

  Like most things in art and its associate forms, subjectivity is the essence of appreciation. I am of the opinion that, this vital aspect of freedom that a viewer has should never be taken away if the director is trying to shoot a live stage performance as a means of documenting it. I think that a long (wide) shot is the optimal way to capture a group performance where each individual has his own role to play simultaneously with all other artistes present on stage. A medium shot would be ideal for a solo performance (of course it depends on what you refer to as the medium shot. If you mean it to be above the waist, it wouldn’t be ideal for dance forms which lays great emphasis on feet movement), but if there is anything to be avoided, it should be the close up. This opinion is personal because in my experience of watching a stage performance, I have never craved for a close up and it’s my firm opinion that close up is very intrusive for the artistes freedom. Because I think an artiste performs with the thought that the viewer is at a certain distance from him and would accordingly try to optimize his expressions. A close up shot intrudes into this privacy of the artist by depicting something which the artist didn’t want to convey to his audience, but didn’t try to hide with the belief that audience at the given distance wouldn’t be able to notice it. This may not be true in all cases but since close up is something the normal viewer of a live performance wouldn’t experience and it’s better left that way if the purpose is just to document a stage performance.

  I suppose we have made a clear distinction between a documentary and documentation. While the former is a conscious attempt at highlighting a particular issue, art form or something similar the latter has purely the value of a documented court case. There aren’t opinions, ideas of how it could have been or otherwise. Documenting should be a very impersonal pursuit because it’s not the directors creation. The director here is just a means to the larger end of documentation and his role here is limited to that of a scribe. And when it comes to the documenting of an art form, it’s even more important because any form of bias on the part of the director would cause for the final viewer to see it through the eyes of the director rather than those of the camera.

  In conclusion art forms involving portrayal and motion are spatially and temporally dependent. And the optimization of viewing pleasure will wholly depend on the viewers ability to match the spatial and temporal co-ordinates of the performer. The camera must just provide for the re-creation of a situation ideal for the viewer to pursue these co-ordinates without inhibition and bias. I have written these few lines with my limited knowledge and zilch practical experience of cinematography. Hopefully they are well received.

 2. ಚೇತನ್ ಹೊಸಕೋಟೆ ಹೇಳುತ್ತಾರೆ:

  ಪ್ರಿಯ ಅಭಯ್ ಅವರೇ,

  ದಾಖಲೀಕರಣ ಅಥವಾ ಚಿತ್ರೀಕರಣದ ವಿಚಾರವಾಗಿ ನೀವು ಹೇಳಿದಂತೆ ಸಮಸ್ಯೆ ಎದುರಾಗುವುದು ಯಾವಾಗ ಎಂದರೇ…ಒಂದೇ ಕ್ಯಾಮರಾದ ಮೊರೆ ಹೋದಾಗ….Live ಚಿತ್ರೀಕರಣವನ್ನು ಒಂದಕ್ಕಿಂತ ಹೆಚ್ಚಿನ ಕ್ಯಾಮರಾ ಬಳಸಿ ಸಿನೆಮಾದಂತೆ online ಅಥವಾ offline ಸಂಕಲನ ಮಾಡಿ ನಿರ್ದೇಶಕ ತನ್ನ ಪಾತ್ರವನ್ನು ತೋರ್ಪಡಿಸಬಹುದು. ಈ ರೀತಿ ಅನೇಕ ಕ್ಯಾಮರಾಗಳಿಂದ ಚಿತ್ರಿಕರಿಸುವುದು ನೃತ್ಯ ಪ್ರಕಾರಕ್ಕೆ ನ್ಯಾಯ ಒದಗಿಸಬಹುದೆಂಬುದು ನನ್ನ ಅಭಿಪ್ರಾಯ… ಏಕೆಂದರೇ ಅನೇಕ ಬಾರಿ ನೃತ್ಯದಲ್ಲಿ ಮುಖ ಅಥವಾ ಕಣ್ಣಿನ ಭಾವವೇ ಪ್ರಮುಖವಾದುದರಿಂದ… ದೂರದಲ್ಲಿ ಕೂತಿರುವ ಅಥವಾ ದೂರದರ್ಶನದಲ್ಲಿ ವೀಕ್ಷಿಸುತ್ತಿರುವ ಪ್ರೇಕ್ಷಕನಿಗೆ ಆ ಸೂಕ್ಷ್ಮವಾದ ಭಾವ ಕಾಣದೇ ಹೋಗಬಹುದು ಅಥವಾ ಅದರ ಮಹತ್ವ ತಿಳಿಯದೇ ಹೋಗಿ ನೃತ್ಯದ ಆಶಯವನ್ನೇ ಗ್ರಹಿಸದಾಗಿ ಅರ್ಥಹೀನವಾಗಬಹುದು… ಆದ್ದರಿಂದ ಮೇಲಿನ ತಾಂತ್ರಿಕತೆ ಈ ಸಮಸ್ಯೆಗೆ ತನ್ನದೆ ಉತ್ತರ ನೀಡುವುದೆಂಬುದು ನನ್ನ ಅಭಿಪ್ರಾಯ…

  ಚೇತನ್ ಹೊಸಕೋಟೆ.

 3. Abhaya Simha ಹೇಳುತ್ತಾರೆ:

  ಪ್ರಿಯ ಪ್ರಶಾಂತ್,

  ತಮ್ಮ ವಿಸ್ತಾರವಾದ ಅಭಿಪ್ರಾಯಕ್ಕೆ ಮೊದಲಿಗೆ ಧನ್ಯವಾದ ತಿಳಿಸುತ್ತೇನೆ. ತಮ್ಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲೇ ಮತ್ತೊಂದಿಷ್ಟು ಮಾತು ಸೇರಿಸಬಯಸುತ್ತೇನೆ. ತಾವು ಹೇಳಿದಂತೆ ಕೇವಲ ವೈಡ್ ಆಂಗಲ್ಲಿನಿಂದಲೇ ಇಡೀ ಪ್ರದರ್ಶನವನ್ನು ಚಿತ್ರೀಕರಿಸುವುದನ್ನು ದಕ್ಷ ದಾಖಲೀಕರಣ ಎಂದರೆ ಅದರಲ್ಲಿ ಇನ್ನೂ ಕೆಲವು ಸಮಸ್ಯೆಗಳಿವೆ. ಸಾಮಾನ್ಯ ವೇದಿಕೆ ಮತ್ತು ಪ್ರೇಕ್ಷಕ ಎಂಬಂಥಾ ಸ್ಥಿತಿಯಲ್ಲಿ ಗಾತ್ರಗಳು (ನಟ, ವೇದಿಕೆ, ಹಿನ್ನೆಲೆ, ಪ್ರೇಕ್ಷಕ ಇತ್ಯಾದಿಗಳದ್ದು) ನಿಜವಾಗಿರುತ್ತವೆ. ಆದರೆ, ಚಿತ್ರೀಕರಣ ನಡೆಸಿದೊಡನೆ, ಅಲ್ಲೊಂದು ಅಸಹಜ ಗಾತ್ರ ಹುಟ್ಟಿಕೊಳ್ಳುತ್ತದೆ. ಐದುವರೆ ಅಡಿ ಎತ್ತರದ ನಟನೊಬ್ಬ ಇಪ್ಪತ್ತು ಗುಣಿಸು ಇಪ್ಪತ್ತು ಅಡಿಯ ವೇದಿಕೆಯ ಮೇಲೆ ನಟಿಸುವುದನ್ನು ನಾವು Low angleನಲ್ಲಿ ಚಿತ್ರೀಕರಿಸಿ ಇಪ್ಪತ್ತೊಂದು ಇಂಚಿನ ಚಪ್ಪಟೆಯಾಗಿರುವ ಪರದೆಯಲ್ಲಿ ನೋಡಿದಾಗ, ಅನೇಕ ವಿವರಗಳು ಮಾಯವಾಗುತ್ತವೆ. ಇದು deal ವೇದಿಕೆ-ಪ್ರೇಕ್ಷಕ ಸಂದರ್ಭಕ್ಕೆ ವ್ಯತಿರಿಕ್ತವಾಗಿದೆ ಎಂಬುದನ್ನು ಗಮನಿಸಿ.

  ಇನ್ನು closeup shots ಬಗ್ಗೆ ತಾವು ಹೇಳಿರುವ ವಿಚಾರದಲ್ಲೂ ಇದೇ ಭಿನ್ನತೆಯನ್ನು ನಾವು ಗಮನಿಸಬಹುದು. close up shotsನಲ್ಲಿ ಅದು ಕಲಾವಿದನ ವಯಕ್ತಿಕ ವಲಯವನ್ನು ಹೊಕ್ಕು ಬಿಡುತ್ತದೆ ಎನ್ನುವ ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಗಮನಿಸೋಣ. ನಟ ವೇದಿಕೆಯ ಮೇಲೆ ಇದ್ದಾಗ ಅವನಿಗೆ ಪಾತ್ರದ್ದಲ್ಲದ ಇನ್ನೊಂದು ವೈಯಕ್ತಿಕ ಇರುತ್ತದೆಯೇ? ನಟನ ಕಾಲು ಆ ಸಂದರ್ಭದಲ್ಲಿ ಪಾತ್ರದ ಕಾಲು ಅಲ್ಲವೇ? ನಟನ ಕೈ ಪಾತ್ರದ ಕೈ. ನಟನ ಮುಖ, ಕಣ್ಣು ಇವೆಲ್ಲವೂ ಪಾತ್ರದ್ದೇ ಆಗಿರುವಾಗ ನಟನಿಗೆ ನಟನೆಯ ಸಂದರ್ಭದಲ್ಲಿ ‘ವೈಯಕ್ತಿಕ’ ಎಂಬುದು ಯಾವುದು? ಅಂಥಾದ್ದೊಂದು ಇಲ್ಲ ಎಂದಾದ ಮೇಲೆ ಕ್ಯಾಮರಾ ಅಂಥಾ ಸ್ಥಳಕ್ಕೆ ನುಗ್ಗುವುದರಲ್ಲೇನು ತಪ್ಪು?

  ಇನ್ನು ದಾಖಲೀಕರಣ ಮತ್ತು ಸಾಕ್ಷ್ಯಚಿತ್ರದ ಭಿನ್ನತೆಯ ಕುರಿತಾಗಿ ತಾವು ಹೇಳಿರುವ ವಿಷಯವೂ ಸರಿಯಾಗಿದೆ. ಆದರೆ ಅಲ್ಲಿಯೂ, ಮೇಲಿನ ವಿಷಯಗಳಂತೆಯೇ ಇರುವ ಇನ್ನೊಂದು ಚೋದ್ಯವನ್ನು ಗಮನಿಸಿರುವಿರೇ? ಸಾಕ್ಷ್ಯಚಿತ್ರಗಳು, ಸತ್ಯ ಶೋಧಕಗಳು ಎನ್ನುತ್ತಾರೆ. ಆದರೆ, ನಿಜವಾಗಿಯೂ ಹೇಳುವುದಾದರೆ, ಅವುಗಳು ನಿರ್ದೇಶಕನ ಗ್ರಹಿಕೆಯ ಪ್ರಕಾರ ಸತ್ಯವಾಗಿರುವುದರ ಮರು ಸೃಷ್ಟಿ ಅಷ್ಟೆ. ಇನ್ನು ದಾಖಲೀಕರಣ ಎನ್ನುವುದು ಅಭಿಪ್ರಾಯವಲ್ಲ ಎಂದಿದ್ದೀರಿ. ಆದರೆ, ಕ್ಯಾಮರಾವನ್ನು ಎಲ್ಲಿ ಇಡಬೇಕು (ಒಂದೇ ಕ್ಯಾಮರಾವೇ ಆಗಿದ್ದರೂ) ಮತ್ತೆ ಹೇಗೆ ತೋರಿಸಬೇಕು ಎನ್ನುವುದು ನಿರ್ದೇಶಕನ ಸೃಷ್ಟಿಯೇ ಅಲ್ಲವೇ? ರಂಗ ಮಂದಿರವನ್ನು ಹೊಕ್ಕಾಗ ನೀವು ಯಾವ ಕುರ್ಚಿಯಲ್ಲಿ ಕೂರಲು ಇಷ್ಟಪಡುತ್ತೀರೋ, ನಾನು ಎಲ್ಲಿ ಕೂರಲು ಇಷ್ಟ ಪಡುತ್ತೇನೋ ಎಂಬುದರ ಸಾಧ್ಯತೆ-ಸಂಭವನೀಯತೆಯನ್ನೇ ಲೆಕ್ಕ ಹಾಕಿ ನೋಡಿ. ಹೀಗಿರುವಾಗ ‘ಕೇವಲ ದಾಖಲೀಕರಣ’ ಎಂದರೂ ಅದೂ ಒಂದು ಅರ್ಥ ಸೃಷ್ಟಿಯೇ ಅಲ್ಲವೇ?

  ಈ ನಿಟ್ಟಿನಲ್ಲಿ ಒಮ್ಮೆ ಯೋಚಿಸಿ ನೋಡಿ… ಮತ್ತೆ ಬರೆಯಿರಿ. ತಮ್ಮ ಅಭಿಪ್ರಾಯದಿಂದ ಚರ್ಚೆ ಮತ್ತಷ್ಟು ಮುಂದೆ ಹೋಗುತ್ತಿರುವುದು ಬಹಳ ಸಂತೋಷದ ವಿಷಯ. ಅದಕ್ಕೆ ಮತ್ತೊಮ್ಮೆ ತಮಗೆ ಧನ್ಯವಾದಗಳು.

 4. Abhaya Simha ಹೇಳುತ್ತಾರೆ:

  ಪ್ರಿಯ ಚೇತನ್,

  ಅಭಿಪ್ರಾಯಕ್ಕೆ ಧನ್ಯವಾದಗಳು. ದಾಖಲೀಕರಣಕ್ಕೆ ಮೂರು ಕ್ಯಾಮರಾ ಬಳಕೆ ಮಾಡುವುದು ಸಾರ್ವರ್ತಿಕವಾಗಿದೆ ಮತ್ತು ಗೊತ್ತಿರುವಂಥಾ ವಿಚಾರವೇ? ಆದರೆ ನಾನಿಲ್ಲಿ ಚರ್ಚೆ ಮಾಡಲಾರಂಭಿಸಿರುವುದು ಅಂಥಾ ಮೂರು ಕ್ಯಾಮರಾ ಬಳಕೆಯ ಸರಿ-ತಪ್ಪುಗಳ ಬಗ್ಗೆ. ವೇದಿಕೆಯ ಪ್ರಸ್ತುತಿಗೆ ಅದರದೇ ಆದ ಒಂದು ರೂಪ ಇರುತ್ತದೆಯಷ್ಟೇ. ದೂರದಲ್ಲಿ ಕುಳಿತವನಿಗೆ ನಟನ ಒಂದಷ್ಟು ಹಾವಭಾವ ಕಾಣದೇ ಹೋದರೆ ಎಂಬ ಕಾರಣಕ್ಕೆ ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡೇ, ರಂಗ ತಂತ್ರಗಳು ರೂಪಗೊಂಡಿರುತ್ತವೆ. ಅಂಥಲ್ಲಿ ಕ್ಯಾಮರಾ ಚಳಕದ ಬಳಕೆ ಮಾಡಿ ಅನವಶ್ಯ ಒತ್ತುಕೊಟ್ಟರೆ, ನಟನೆ ಅದರ ನಿಜ ಬಲದಲ್ಲಿ ಕಾಣದೆ ಹೋಗುವ ಸಂದರ್ಭವೂ ಇದೆಯಲ್ಲಾ? ಇದರ ಕುರಿತಾಗಿ ಯೋಚಿಸಿ ನೋಡಿ… ಮತ್ತೆ ಹೊಸ ಹೊಳಹುಗಳೊಂದಿಗೆ ಚರ್ಚೆಯನ್ನು ಬೆಳೆಸೋಣ…

 5. Rajesh N Naik ಹೇಳುತ್ತಾರೆ:

  Abhay,
  Do watch a musical IBERIA- its about spanish dance styles.
  I think visual media- like TV or Films- is essentially different from certain forms of live media [like stage performances].
  i agree with the use of cuts and shots for any video production. i am not a learned man in this field- but as a lay viewer , all that matters for me is the end product. How convincing it is, that alone counts. The question or justification of cuts or editing, should be considered in this light. the issue of director deciding the whole thing- is in a way more of an ‘ethical’ concern than a practical one. to give a vague analogy, while traveling in a public transport, we cant decide whether it is right on the part of the driver to decide the way as he wishes; but what matters for us is the destiny! whether we reach safely or not, that alone counts!
  hope u r getting wht i am trying to say!

 6. keshav ಹೇಳುತ್ತಾರೆ:

  ಅಭಯ,
  ನೀವು ಸಿನೆಮಾ ಕಲಿತು ಸಿನೆಮಾ ಮಾಡಿದವರು. ಇಬ್ಬರು ನಿಮ್ಮ ಬ್ಲಾಗನ್ನು ಓದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರ. ಆ ಎರಡೂ ಅನಿಸಿಕೆಗಳು ನಿಮಗೆ ಆಗಲೇ ಗೊತ್ತೆಂದೂ, ಇನ್ನೂ ಬೇರೇನಿದ್ದರೂ ಹೇಳಿರೆಂದು ಬರೆದಿರುವುದನ್ನು ಓದಿ, ತುಂಬಾ ಸಿನೆಮಾ ನೋಡುವ (ಗುಲಾಬಿ ಟಾಕೀಜಿನಿಂದ ಹಿಡಿದು ವೇಕಪ್ ಸಿದ್ ವರೆಗೆ) ಆದರೆ ಯಾವತ್ತೂ ಸಿನೆಮಾ ಕ್ಯಾಮರಾ ಹಿಡಿಯದ ನಾನು ಕೂಡ ನನ್ನ ಎರಡು ಮಾತು ಬರೆಯೋಣ ಅಂದುಕೊಂಡೆ, ನಿಮ್ಮ ಬ್ಲಾಗ್ ಓದಿ. ಆದರೆ ನಿಮ್ಮ ಬ್ಲಾಗಿಗೆ ಬಂದ ಪ್ರತಿಕ್ರಿಯೆಗಳಿಗೆ ನಿಮ್ಮ ಉತ್ತರಗಳನ್ನು ಓದಿ ಇಷ್ಟೇ ಬರೆದು ಸುಮ್ಮಾನಾಗುತ್ತೇನೆ.

  ಶುಭಂ!

 7. Abhaya Simha ಹೇಳುತ್ತಾರೆ:

  ಪ್ರಿಯ ಕೇಶವರೇ,

  ದಯವಿಟ್ಟು ನನ್ನ ಉತ್ತರಗಳನ್ನು ದಾರ್ಷ್ಟ್ಯ ಎಂದು ಭಾವಿಸಬೇಡಿ. ನನಗೆ ಗೊತ್ತು ಎಂದು ನಾನು ಹೇರಿರುವುದು ಖಂಡಿತಾ ಅಲ್ಲ. ದಯವಿಟ್ಟು ತಮ್ಮ ಅಭಿಪ್ರಾಯವನ್ನು ಬರೆದು ತಿಳಿಸಿ. ಆರೋಗ್ಯಪೂರ್ಣ ಚರ್ಚೆಯಿಂದ ಹೊಸ ಸಾಧ್ಯತೆಗಳ ಶೋಧನೆಯಲ್ಲಿ ಮುಂದಡಿ ಇಡೋಣ ಸರ್… ನೀವು ಕ್ಯಾಮರಾ ಹಿಡಿದಿಲ್ಲ, ಕೇವಲ ಸಿನೆಮಾ ನೋಡುವವರು ಎಂದಾಕ್ಷಣ, ಪ್ರತಿಕ್ರಿಯೆ ಕೊಡಲು ಯೋಗ್ಯರಲ್ಲ ಎಂದು ಯಾರು ಹೇಳಿದವರು? in fact, ಪ್ರೇಕ್ಷಕರ ಅಭಿಪ್ರಾಯವೇ ಅಲ್ಲವೇ ಒಂದು ಮಾಧ್ಯಮದ ಬೆಳವಣಿಗೆಗೆ ಕಾರಣ? ಸಿನೆಮಾ ಮಾಧ್ಯಮದಲ್ಲಿ ನಾನು ಈಗಷ್ಟೇ ಹುಟ್ಟಿರುವ ಶಿಶು. ಹಾಗಾಗಿ ನನಗೆ ನೀವು ಹೇಳಿರುವುದು ಆಗಲೇ ಗೊತ್ತಿದೆ ಎನ್ನುವ ಹುಂಬತನ ಖಂಡಿತಾ ನನ್ನ ಉತ್ತರಗಳಲ್ಲಿ ಇರಲಿಲ್ಲ. ಪ್ರಶಾಂತ್ ಮತ್ತು ಚೇತನ್ ತಮ್ಮ ಅಭಿಪ್ರಾಯಗಳ ಮೂಲಕ ಎಷ್ಟು ಉಪಯುಕ್ತ ಚರ್ಚೆ ಮಾಡಿದ್ದಾರೆ ಎಂಬುದನ್ನು ನೀವೇ ಗಮನಿಸಿದ್ದೀರಿ. ಅದರ ಬಗ್ಗೆ ಕೊಂಕು ಮಾತನಾಡುವ ಉದ್ದೇಶ ನನ್ನಲ್ಲಿರಲಿಲ್ಲ. ನಿಮಗೆ ಹಾಗೆ ಅನಿಸಿದ್ದರೆ ಕ್ಷಮೆ ಇರಲಿ. (ಪ್ರಶಾಂತ್ ಹಾಗೂ ಚೇತನರು ಅನ್ಯಥಾ ಭಾವಿಸಿಲ್ಲ ಎಂದು ಅಂದುಕೊಂಡಿರುವೆ) ನಿಮ್ಮ ಅಭಿಪ್ರಾಯಕ್ಕಾಗಿ ಕಾತುರದಿಂದ ಕಾದಿರುವೆ ಕೇಶವರೇ… ನಿರ್ದಾಕ್ಷಿಣ್ಯವಾಗಿ ಬರೆಯಿರಿ.

 8. ಚೇತನ್ ಹೊಸಕೋಟೆ ಹೇಳುತ್ತಾರೆ:

  ಪ್ರಿಯ ಅಭಯ ಅವರೇ,

  ಧನ್ಯವಾದಗಳು ನಿಮ್ಮ ಉತ್ತರಕ್ಕೆ. Difference of Opinionನಿಂದ ಅನ್ಯಥಾ ಭಾವಿಸಿದರೆ, ಅದು ಅರ್ಥಪೂರ್ಣ ಚರ್ಚೆ ಎಲ್ಲಾಗುತ್ತದೆ. ಇದೊಂದು ಅರ್ಥಪೂರ್ಣ ಚರ್ಚೆಯಾಗಿದೆ… ಭೋಧನೆಗಿಂತ ಚರ್ಚೆಯೇ ಹೆಚ್ಚು ಕಲಿಸುತ್ತದೆ ಎನ್ನುವುದು ನನ್ನ ನಂಬಿಕೆ… ನಿಮ್ಮ ಉತ್ತರವನ್ನು ಓದಿದೆ. ನಿಮ್ಮ ಸಿನೆಮಾ ಜ್ಞಾನವನ್ನು ಪ್ರಶ್ನಿಸುವ ಸಾಹಸ ನಾನು ಖಂಡಿತ ಮಾಡಿಲ್ಲ.

  ಬ್ಲಾಗ್ ಗೆ ವ್ಯಕ್ತವಾದ ಅನಿಸಿಕೆಗಳು ಮತ್ತು ಅದಕ್ಕೆ ನಿಮ್ಮ ಉತ್ತರಗಳನ್ನು ಓದಿದ ನಂತರ ನನಗೆಲ್ಲೋ ನಾವು ವಿಷಯವಸ್ತುವಿನಿಂದ ಸ್ವಲ್ಪ ದೂರ ಸರಿಯುತ್ತಿದ್ದೀವೆನಿಸುತ್ತದೆ. ಇಲ್ಲಿ ಚರ್ಚಾ ವಿಷಯ ವಸ್ತು Live performance ಆದ ನಾಟಕ ಅಥವಾ ನೃತ್ಯವನ್ನೋ ಚಿತ್ರಿಕರಿಸುವುದು ಅಥವಾ ದಾಖಲಿಸುವುದು ಮತ್ತು ಅಲ್ಲಿ ಎದುರಾಗಬಹುದಾದ ಸಮಸ್ಯೆಗಳು. ಅದಲ್ಲದೇ ರಂಗಮಂದಿರದಲ್ಲಿ ಕೂತಿರುವ ಪ್ರೇಕ್ಷಕನ ಕಣ್ಣನ್ನು ಕ್ಯಾಮರಾ ಕಣ್ಣಿಗೆ ಹೋಲಿಸುವುದು ಅಲ್ಲವೇ ಅಲ್ಲ… ಅಲ್ಲವೇ? ನಿಮ್ಮ ಬ್ಲಾಗಿನ ಶೀರ್ಷಿಕೆ “ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ”… ಆ ಪ್ರೇಕ್ಷಕನ ಕುರ್ಚಿ ಎಲ್ಲೋ ದೂರದಲ್ಲಿ ಕೂತು ದೂರದರ್ಶನದಲ್ಲಿ ನೋಡುತ್ತಿರುವ ಪ್ರೇಕ್ಷಕನೇ ಹೊರತು ರಂಗಮಂದಿರದಲ್ಲಿ ಕೂತಿರುವ ಪ್ರೇಕ್ಷಕ ಅಲ್ಲವೇ ಅಲ್ಲ ಎಂದು ನನ್ನ ಭಾವನೆ.

  ಎರಡನೇ ವಿಷಯ ವಸ್ತುವಾದರೆ ನನ್ನುತ್ತರ ರಂಗಮಂದಿರದಲ್ಲಿ ಪ್ರೇಕ್ಷಕನ ಕಣ್ಣೇ ಶ್ರೇಷ್ಟ… ದೂರದರ್ಶನದಲ್ಲಿ ಕ್ಯಾಮರಾ ಕಣ್ಣೇ ಶ್ರೇಷ್ಟ… ಯಾಕೆಂದರೇ ರಂಗಮಂದಿರದಲ್ಲಿ ಪ್ರೇಕ್ಷಕನಿಗೆ ಕ್ಯಾಮರಾ ಕಣ್ಣಿನ ಅವಶ್ಯಕತೆ ಇಲ್ಲ… ದೂರದರ್ಶದ ಪ್ರೇಕ್ಷಕನಿಗೆ ಕ್ಯಾಮರಾ ಕಣ್ಣು ಅನಿವಾರ್ಯ…

  ನಿಮ್ಮ ಉತ್ತರದಲ್ಲಿ ನೀವು ಬರೆದಿದ್ದೀರಿ “ದಾಖಲೀಕರಣಕ್ಕೆ ಮೂರು ಕ್ಯಾಮರಾ ಬಳಕೆ ಮಾಡುವುದು ಸಾರ್ವರ್ತಿಕವಾಗಿದೆ ಮತ್ತು ಗೊತ್ತಿರುವಂಥಾ ವಿಚಾರವೇ? ಆದರೆ ನಾನಿಲ್ಲಿ ಚರ್ಚೆ ಮಾಡಲಾರಂಭಿಸಿರುವುದು ಅಂಥಾ ಮೂರು ಕ್ಯಾಮರಾ ಬಳಕೆಯ ಸರಿ-ತಪ್ಪುಗಳ ಬಗ್ಗೆ” ಎಂದು… ಇದರಲ್ಲಿ ಸರಿ ತಪ್ಪುಗಳ ಪ್ರಶ್ನೆಯೇ ಇಲ್ಲ….ಕ್ಯಾಮರಾ ಬಳಕೆ ಚಿತ್ರೀಕರಣಕ್ಕೆ ಅನಿವಾರ್ಯ ಅಲ್ಲವೇ?…ಅನಿವಾರ್ಯವೆಂದು ಒಪ್ಪಿದಾಗ ಕ್ಯಾಮರಾ ತಂತ್ರಗಳಾದ close up, wide shot ಇನ್ನಿತ್ಯಾದಿಗಳನ್ನು ಬಳಸುವುದು ನೃತ್ಯ ರೂಪಕಕ್ಕೆ ನ್ಯಾಯ ಒದಗಿಸಬಲ್ಲದೇ ಮತ್ತು ಅದು ದೂರದರ್ಶನದ ಪ್ರೇಕ್ಷಕನ ಸ್ವಾತಂತ್ರವನ್ನು ಕಸಿಯುವುದೇ ಎಂಬುದು ನಮ್ಮ ಮುಂದಿರುವ ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ನನ್ನುತ್ತರ… ಕ್ಯಾಮರಾ ಬಳಕೆ ಶುರುವಾದಾಗ ಅಲ್ಲಿ ಕಲಾವಿದ ಮತ್ತು ಪ್ರೇಕ್ಷಕನ ಸಂಬಂಧದ ಹೊರತಾಗಿ ಮತ್ತೊಂದು ಸಂಬಂಧ ಹುಟ್ಟುತ್ತದೆ ಅದು ನಿರ್ದೇಶಕ ಮತ್ತು ಪ್ರೇಕ್ಷಕನ ಸಂಬಂಧ… ಆದರೇ ನಿರ್ದೇಶಕ ಒಂದು ಮಾದ್ಯಮವಾಗಿ ಅದ್ರುಶ್ಯವಾಗಿರುತ್ತಾನೆ. ಕ್ಯಾಮರಾ ತಂತ್ರಗಳನ್ನು ನಿರ್ದೇಶಕ ನೃತ್ಯ ರೂಪಕವನ್ನು ಅರ್ಥಮಾಡಿಕೊಂಡು ಕಲಾವಿದನ ಭಾವಕ್ಕೆ ತಕ್ಕಂತೆ ಕ್ಯಾಮರಾ ಕಣ್ಣುಗಳಿಂದ ಚಿತ್ರೀಕರಿಸಿ ಸಂಕಲನ ಮಾಡಿ ನೃತ್ಯ ರೂಪಕದ ಒಟ್ಟೂ ಆಶಯವನ್ನು ಸಮರ್ಥವಾಗಿ ತೋರಿಸಿ ಅದಕ್ಕೆ ನ್ಯಾಯ ಒದಗಿಸಬಹುದು. ಅಷ್ಟೇ ಅಲ್ಲದೇ ಏನೂ ಅಲ್ಲದ ಸಾಮಾನ್ಯ ಪ್ರದರ್ಶನವನ್ನೂ ಸಹ ಚೆನ್ನಾಗಿಯೇ ತೋರಿಸುವ ಸಾಧ್ಯತೆಯೂ ಇರುವುದು, ಅಂದರೇ ಪ್ರದರ್ಶನದ ಧನಾತ್ಮಕ ಅಂಶಗಳನ್ನು ತೋರಿಸುವ ಮೂಲಕ. ನಿರ್ದೇಶಕ ರೂಪಕವನ್ನು ವಿಮರ್ಶನಾತ್ಮಕವಾಗಿಯೂ ನೋಡಬಹುದು ಮತ್ತು ರೂಪಕದಲ್ಲಿನ ಬಲ ಮತ್ತು ದುರ್ಬಲ ಅಂಶಗಳನ್ನು ಎತ್ತಿ ಹಿಡಿಯಬಹುದು, ಈ ಅಂಶಗಳು ಸಾಮಾನ್ಯ ಪ್ರೇಕ್ಷಕನ ಗಮನಕ್ಕೆ ಬಾರದೇ ಹೋಗಬಹುದು. ಅದೇ ಅಲ್ಲದೇ ಕಲಾವಿದನ ಅಭಿವ್ಯಕ್ತಿಯನ್ನು ವಿವಿಧ ಕೋನದಿಂದ ಚಿತ್ರಿಸಿ ಸಂಕಲಿಸಿ ನಿರ್ದೇಶಕ ಮತ್ತೊಂದು ಅರ್ಥ ನೀಡಬಹುದು ಅಲ್ಲವೇ? ಹಾಗೇ ವಿವಿಧ ನಿರ್ದೇಶಕರು ವಿವಿಧ ಅರ್ಥವನ್ನು ಹುಡುಕಬಹುದು ಅಲ್ಲವೇ? ಹೇಗೆ ಒಂದು ಕಲಾಕೃತಿ ನೋಡಿ ವಿವಿಧ ಅರ್ಥಗಳನ್ನು ಹುಡುಕಿದ ಹಾಗೆ.

  ಮತ್ತೊಂದು ಪ್ರಶ್ನೆ ಕ್ಯಾಮರ ಬಳಕೆ ಪ್ರೇಕ್ಷಕನ ಸ್ವಾತಂತ್ರ ಕಸಿಯುವುದೇ? ಖಂಡಿತ ಇಲ್ಲ… ಐವತ್ತು ಅಡಿಗಳಲ್ಲಿ ನಡೆದ ನಾಟಕವನ್ನು ಇಪ್ಪತ್ತೊಂದು ಇಂಚಿನ ಪರದೆಯಲ್ಲಿ ತೋರಿಸುವುದೇ ಪ್ರೇಕ್ಷಕನ ಸ್ವಾತಂತ್ರ ಕಸಿದ ಹಾಗೆ… ಮೊದಲೇ ಸ್ವಾತಂತ್ರ ಇಲ್ಲದ ಪ್ರೇಕ್ಷಕನಿಗೆ ಕ್ಯಾಮರಾ ತಂತ್ರಗಳ ಬಳಕ್ಕೆ ನಿಜ ಅರ್ಥದಲ್ಲಿ ಬಹು ಮಟ್ಟಿಗೆ ಸ್ವಾತಂತ್ರ ನೀಡುವುದು.

  ನಿಮ್ಮ ಬ್ಲಾಗಿನ ಕೊನೆಯ ಪ್ಯಾರಾದಲ್ಲಿ ಕೆಲವು ಸಮಸ್ಯೆಗಳ ಬಗ್ಗೆ ಪ್ರಶ್ನೆ ಹಾಕಿದ್ದೀರಿ…ಅದಕ್ಕೆ ನನ್ನ ಅಭಿಪ್ರಾಯದ ಉತ್ತರಗಳು ಕೆಳಕಂಡಂತಿದೆ….

  ೧. ಇಲ್ಲಿ(ನೃತ್ಯ/ನಾಟಕವನ್ನು ಚಿತ್ರೀಕರಿಸುವಾಗ) ‘ಕಟ್’ಅಥವಾ ಸಂಕಲನದ ಪಾತ್ರವೇನು? ಇದು ಅಗತ್ಯವೇ? ನೃತ್ಯವೆಂಬ ಸ್ಥಳದಲ್ಲೇ ವಿಸ್ತಾರಗೊಳ್ಳುತ್ತಾ ಸಾಗುವ ಅಭಿವ್ಯಕ್ತಿಗೆ ‘ಕಟ್’ ಎನ್ನುವುದು ಸಾಧ್ಯವೇ? ಹಾಗೆ ನಿಲ್ಲಿಸಿ, ಭಿನ್ನ ಕೋನಗಳಿಂದ ಚಿತ್ರೀಕರಿಸಿದರೆ, ಅದು ನೃತ್ಯಪ್ರಕಾರಕ್ಕೆ ನ್ಯಾಯ ಒದಗಿಸೀತೇ?
  ನನ್ನ ಅಭಿಪ್ರಾಯ – ವಿವಿಧ ಕ್ಯಾಮರಾ ಬಳಕೆಯಿಂದ ಕಟ್ ನ ಅಗತ್ಯವಿರುವುದಿಲ್ಲ ಆದರೇ ಸಂಕನದ ಅಗತ್ಯವಿರುತ್ತದೆ. ಸಂಕಲನದ ಪಾತ್ರ ಬಹು ಮುಖ್ಯ.

  ೨.ಇಡೀ ಪ್ರದರ್ಶನವನ್ನು ‘ವೈಡ್’ ಅಥವಾ ‘ಲಾಂಗ್’ಶಾಟ್ ಮೂಲಕವೇ ತೋರಿಸಬೇಕೇ?
  ನನ್ನ ಅಭಿಪ್ರಾಯ – ಇಲ್ಲ… ಹೀಗೆ ಮಾಡಿದರೇ ಪ್ರೇಕ್ಷಕನ ಸ್ವಾತಂತ್ರವನ್ನು ಬಹುಪಾಲು ಕಿತ್ತುಕೊಂಡಂತೆಯೇ ಸರಿ… ಚಿಕ್ಕ ದೂರದರ್ಶನದ ಪರದೆಯಲ್ಲಿ ಪ್ರೇಕ್ಷಕ ಹೇಗೆತಾನೆ ಕಣ್ಣಿನ ಆವಭಾವಗಳನ್ನು ಗಮಸಿಸಲು ಸಾಧ್ಯ ಆಗ Close up ಪ್ರೇಕ್ಷಕನಿಗೆ ಸ್ವಲ್ಪ ಸ್ವಾತಂತ್ರ ನೀಡುವುದಲ್ಲವೇ?

  ನಾನು ನನ್ನದೇ ಅಭಿಪ್ರಾಯ, ವಾದ ಮಂಡಿಸಿದ್ದೇನೆ, ವಿಷಯವಸ್ತುವಿನ ಸರಿಯಾದ ಗ್ರಹಿಕೆ ನನದಲ್ಲವೆಂದು ನಿಮಗನಿಸಿದರೆ ದಯವಿಟ್ಟು ನಿಮ್ಮ ಉತ್ತರವೆಂಬ ಬೆಳಕು ಚೆಲ್ಲಿ ನನಗೆ ದಾರಿ ತೋರಿಸಿ…..

  ಮತ್ತು ಕೇಶವ್ ಅವರೇ,
  ನೀವು ನಿಮ್ಮ ಅನಿಸಿಕೆ ತಿಳಿಸದೇ ನುಣುಚಿಕೊಂಡಿದ್ದೀರಿ, ಈ ಚರ್ಚೆಯು ಮುಂದುವರೆಯಲು ನಿಮ್ಮ ಕಾಣಿಕೆಯೂ ಇರಲಿ… ಅಭಯ್ ಅವರೇ ಹೇಳಿರುವಂತೆ ನಿರ್ದಾಕ್ಷಿಣ್ಯವಾಗಿ ಬರೆಯಿರಿ…ಹ…ಹ..ಹಾ…

  ಚೇತನ್ ಹೊಸಕೋಟೆ.

 9. ಇಸ್ಮಾಯಿಲ್ ಹೇಳುತ್ತಾರೆ:

  ಯಾವುದೇ ಬಗೆಯ ದಾಖಲೀಕರಣವಾದರೂ ಅದು ನೂರಕ್ಕೆ ನೂರರಷ್ಟು ಮೂಲ ಪ್ರತಿಯ ನಕಲಾಗಿರುವುದಿಲ್ಲ. ವಿಡಿಯೋ ದಾಖಲೀಕರಣವೂ ಹಾಗೆಯೇ. ಇದು ರಂಗ ಕೃತಿಯ ವಿಡಿಯೋ ಅನುವಾದ. ಹೀಗೆ ಅನುವಾದಿಸುವ ಕೆಲಸದಲ್ಲಿ ‘ಮೂಲ’ ಮಾಧ್ಯಮದಲ್ಲಿದ್ದ ಸೂಕ್ಷ್ಮ ಹೊಳಹುಗಳನ್ನು ‘ಗಮ್ಯ’ ಮಾಧ್ಯಮದಲ್ಲಿ ಹೇಳಲು ಸಾಧ್ಯವಾದರೆ ಅದು ಯಶಸ್ವೀ ದಾಖಲೀಕರಣ ಎಂದು ಹೇಳಬಹುದು.

 10. Abhaya Simha ಹೇಳುತ್ತಾರೆ:

  ಪ್ರಿಯ ಚೇತನರೇ,

  ಸಾಕಷ್ಟು ಹೊಸ ಹೊಳಹುಗಳನ್ನು ಎಳೆದು ತಂದಿದ್ದೀರ. ಚೆನ್ನಾಗಿದೆ ನೀವು ಹೇಳಿದ ವಿಚಾರಗಳು. ಇಲ್ಲಿ ಇನ್ನೊಂದು ವಿಚಾರವನ್ನು ಸೇರಿಸಬಯಸುತ್ತೇನೆ. ನಾವು ಪ್ರೇಕ್ಷಕನ ಕಣ್ಣು ಮತ್ತು ಕ್ಯಾಮರಾ ಕಣ್ಣಿನ ನಡುವಿನ ಚರ್ಚೆ ಆರಂಭಿಸಿರುವುದೇ, ರಂಗಪ್ರಸ್ತುತಿಯ ವಿಧಾನವನ್ನು ಈ ಎರಡೂ ಪ್ರಕಾರಗಳು ಬದಲಿಸುವುದರಿಂದಾಗಿಯೇ ಹುಟ್ಟುವಂಥಾದ್ದು. ಹೀಗಾಗಿ ಆ ಕುರಿತು ಚರ್ಚೆ ಅಷ್ಟೇ. ರಂಗಮಂದಿರದಲ್ಲಿ ಪ್ರೇಕ್ಷಕನ ಕಣ್ಣೇ ಶ್ರೇಷ್ಟ ಹಾಗೂ ದೂರದರ್ಶನದಲ್ಲಿ ಕ್ಯಾಮರಾ ಕಣ್ಣೇ ಶ್ರೇಷ್ಟ ಇದರಲ್ಲಿ ಎರಡು ಮಾತಿಲ್ಲ. ಆದರೆ ರಂಗಮಂದಿರದಲ್ಲಿ ಕುಳಿತಿರುವ ಕ್ಯಾಮರಾ ಕಣ್ಣು ರಂಗಪ್ರಸ್ತಿತಿಯನ್ನು ಹೇಗೆ ನೋಡಬೇಕು ಎನ್ನುವುದು ಪ್ರಸ್ತುತ ಸಮಸ್ಯೆ. ಮತ್ತೆ ಮೂರು ಕ್ಯಾಮರಾ ತಂತ್ರದ ಬಳಕೆಯ ಸರಿ-ತಪ್ಪುಗಳ ಕುರಿತಾಗಿ ಮಾತನಾಡುವ ಪ್ರಮೇಯವೇನೆಂದರೆ, ರಂಗ ಪ್ರಸ್ತುತಿಗೆ ಬದ್ಧವಾಗಿ ದಾಖಲೀಕರಣ ಮಾಡುವುದೇ ಆದರೆ, ಮೂರು ಕೋನದಿಂದ ಚಿತ್ರೀಕರಿಸುವ ಕ್ಯಾಮರಾ ಕಣ್ಣು ಅವನ್ನು ಮಿಶ್ರ ಮಾಡಿ ಟಿ.ವಿ ಪರದೆಯನ್ನು ನೋಡುತ್ತಿರುವ ವೀಕ್ಷಕನಿಗೆ ಉಣಬಡಿಸಿದಾಗ ಅದು ರಂಗಪ್ರಸ್ತುತಿಯ ಮೂಲಕ್ಕೇ ಧಕ್ಕೆ ಮಾಡಿದಂತಲ್ಲವೇ?

 11. Abhaya Simha ಹೇಳುತ್ತಾರೆ:

  ಇಸ್ಮಾಯಿಲ್ ಸರ್,

  ನೀವು ಹೇಳಿದ ವಿಚಾರ ತಾತ್ವಿಕವಾಗಿ ಒಪ್ಪುತ್ತೇನೆ. ಆದರೆ, ಸಧ್ಯಕ್ಕೆ ನನ್ನನ್ನು ಯೋಚನೆಗೆ ಹಚ್ಚಿರುವುದು, ಈ ಅನುವಾದದ ಕಾರ್ಯ ಹೇಗೆ ನಡೆಯಬೇಕು ಎನ್ನುವ ಕುರಿತಾಗಿ. ನಿಮಗೆ ಚೆನ್ನಾಗಿ ಗೊತ್ತಿರುವಂತೆ, ಮೂರು ಕ್ಯಾಮರಾ ಬಳಸುವುದು ಸಾಮಾನ್ಯ ಬಳಕೆಯಲ್ಲಿ ಇರುವ ತಂತ್ರ. ಆದರೆ, ನಾನು ಈಗ ಯೋಚಿಸುತ್ತಿರುವುದೆಂದರೆ, ರಂಗಪ್ರಸ್ತುತಿಗೆ ಅತ್ಯಂತ ಸನಿಹದ (ಅಥವಾ ನಿಷ್ಟ ಅನುವಾದ ಮಾಡಲು) ಈ ಕ್ಯಾಮರಾದ ಕೋನ ಏನಿರಬೇಕು? ಸಂಕಲನದ ಕ್ರಮ, ವೇಗ ಏನಿರಬೇಕು ಇತ್ಯಾದಿಗಳು. ಮೂರು ಕ್ಯಾಮರಾಗಳು ಮೂರು ಕೋನದಲ್ಲಿ ರಂಗ ಸ್ಥಳವನ್ನು ನೋಡುತ್ತಿದ್ದರೆ, ಅದು ರಂಗಮಂದಿರದಲ್ಲೇ ಕುಳಿತ ಅನುಭವಕ್ಕೆ ಸನಿಹ ಬರಲು ಸಾಧ್ಯವಿಲ್ಲವಲ್ಲಾ? ಈ ಕುರಿತು ತಮ್ಮ ಯೋಚನೆಗಳೇನು ಸರ್?

 12. ಇಸ್ಮಾಯಿಲ್ ಹೇಳುತ್ತಾರೆ:

  ರಂಗಮಂದಿರದಲ್ಲಿ ಕುಳಿತಂಥದ್ದೇ ಅನುಭವ ಟಿ.ವಿ.ಯ ಎದುರು ಕುಳಿತಾಗಲೂ ಸಿಗಬೇಕೆಂದು ನೀವು ಹೇಳುತ್ತಿದ್ದೀರಿ. ತಂತ್ರಜ್ಞಾನ ಬೆಳೆಯುತ್ತಿರುವ ವೇಗ ನೋಡಿದರೆ ಇದು ಅಸಾಧ್ಯವಾದುದೇನೂ ಅಲ್ಲ. ನಮ್ಮ 3D ಸಿನಿಮಾಗಳು ಹುಟ್ಟಿಕೊಂಡದ್ದೇ ಈ ಕಾರಣಕ್ಕಾಗಿ ಅಲ್ಲವೇ. ಆದರೆ ಇಲ್ಲೊಂದು ವಿಪರ್ಯಾಸವಿದೆ. ನಾವೊಂದು ಕಡೆ ಕುಳಿತು ನಮ್ಮದೆರು ನಡೆಯುತ್ತಿರುವುದನ್ನು ನೋಡುವುದಕ್ಕೂ ತೆರೆಯ ಮೇಲೆ ಮೂಡುತ್ತಿರುವ ಏನೋ ಒಂದನ್ನು ನೋಡುವುದಕ್ಕೂ ಬಹಳ ವ್ಯತ್ಯಾಸಗಳಿವೆ. ನಮ್ಮ 3D ಸಿನಿಮಾ ಮಾಡುವವರಿಗೆ ಅದು ನೀಡುವ ತ್ರಿ ಆಯಾಮದ ಚಿತ್ರದ ಅನುಭವ ಮುಖ್ಯವಾಗಿದೆಯೇ ಹೊರತು ಆ ಚಿತ್ರಗಳ ಸೃಜನಾತ್ಮಕ ಬಳಕೆ ಅಂದರೆ ಸಿನಿಮಾದಲ್ಲಿ ಬಳಕೆಯಾಗುವ ಬಗೆ ಬಗೆಯ ಶಾಟ್ ಗಳು ಭಾವನೆಗಳನ್ನು ವ್ಯಕ್ತಪಡಿಸುವಂತೆ ಈ ತ್ರಿ ಆಯಾಮದ ಚಿತ್ರಗಳು ಈ ತನಕ ಬಳಕೆಯಾಗಲಿಲ್ಲ. ಅದಕ್ಕೇನು ತಾಂತ್ರಿಕ ಸಮಸ್ಯೆಗಳಿವೆಯೋ ನನಗೆ ಗೊತ್ತಿಲ್ಲ. 3Dಯ ಎಲ್ಲಾ ಸಾಧ್ಯತೆಗಳನ್ನು ನಾವಿನ್ನೂ ಬಳಸಿಲ್ಲ ಎಂಬುದಂತೂ ನಿಜ. ಈ ಕುರಿತಂತೆ ಒಂದು ಲೇಖನ ಬರೆಯುವಷ್ಟು ವಿಷಯಗಳಿವೆ. ಅದನ್ನು ಮತ್ತೊಮ್ಮೆ ಬರೆಯುತ್ತೇನೆ. ಇದೊಂದು quick response ಅಷ್ಟೇ.

 13. manohara upadhya ಹೇಳುತ್ತಾರೆ:

  ನಮಸ್ಕಾರ.

  ಚರ್ಚೆಗಿತ್ತ ವಿಚಾರಕ್ಕೆ ಎಷ್ಟು ಪೂರಕವೋ ಗೊತ್ತಿಲ್ಲ. ಹೀಗೊಂದು ಹರಿವು.

  ಸಿನೆಮಾಕ್ಕಾಗಿ ಕ್ಯಾಮರಾಗಳನ್ನು ಊರು/ ಪ್ರಪಂಚವಿಡೀ ಸುತ್ತಿಸಿ ದಾಖಲಿಸುವ ಸ್ವಾತಂತ್ರ್ಯ ಇದೆ. ರಂಗಕಲೆಗಳಲ್ಲಿ ಮುಮ್ಮೇಳ, ಹಿಮ್ಮೇಳದವರು ಒಟ್ಟು ಸೇರಿ ನಿರ್ಮಿಸುವ ಭಾವ, ಅಭಿನಯ, ವಾದ್ಯಗಳ ಸಂಭ್ರಮ, ಹಾಡು, ಮಾತು, ವೇಷದ ವೈವಿಧ್ಯತೆಗಳ ‘ಕೂಡು ಕಲೆ’ ಇಂದ ಒದಗುವ ವಾತಾವರಣದ (ಪ್ರಪಂಚ), ಅದೂ ೧೫ – ೨೦ ಚದರಡಿಯಲ್ಲಿ ದಾಖಲಿಸುವ ಸವಾಲು ಬೇರೆ. ಇಲ್ಲೊಂದು ಕುತೂಹಲ ನೋಡಿ. ಯಕ್ಷಗಾನದಲ್ಲಿ ಪ್ರವೇಶದ ಮೊದಲು ಭಾಗವತರ ಹಿಂದಿರುವ ತೆರೆಯ ಹಿಂದೆ ರಾಕ್ಷಸನ “ಹೋ…” ಎಂದು ೨-೩ ನಿಮಿಷ ಬೊಬ್ಬೆ [ಶ್ರುತಿಬದ್ಧವಾದ ಕೂಗು ಎನ್ನಿ.] ಹೊಡೆಯುವ ಸಂಪ್ರದಾಯ ಇದೆ. ಬೊಬ್ಬೆ ನಿಲ್ಲುವಾಗ ಹಿಮ್ಮೇಳದವರ ೨-೩ ನಿಮಿಷದ ಕಸರತ್ತು. ಪುನಹ ಬೊಬ್ಬೆ- ಪುನಃ ಕಸರತ್ತು. ಹೀಗೆ ೩-೪ ಬಾರಿ ಆಗಿ ರಂಗದ ಕಾವು ಏರಿದ ನಂತರ ವೇಷ ಪ್ರವೇಶ. ಆಟಕ್ಕೊಂದು ತಿರುವು. ನಿದ್ದೆಗೆ ಜಾರದಂತೆ ಒಂದು ಬಿಗಿಯಾದ ವಾತಾವರಣದ ಸೃಷ್ಟಿ. ಇಲ್ಲಿ ಕ್ಯಾಮೆರಾ ಎಂಬ ಕಣ್ಣು ಪ್ರೇಕ್ಷಕನಾಗಿ ಕುರ್ಚಿಯಲ್ಲಿ ಕೂತಂತೆ ಕೆಲಸ ಮಾಡಿದರೆ ಮಾಮೂಲಿ ಪ್ರದರ್ಶನ ನೋಡಿದ ಹಾಗಾಯ್ತು. ಇನ್ನೊದು ಕ್ಯಾಮೆರಾ (ಬೇಕಾದರೆ ಮೂರನೇ ಕಣ್ಣು ಎಂದು ಹೇಳಿ) ತೆರೆಯ ಹಿಂದೆ ಬೊಬ್ಬೆ ಹೊಡೆಯುವುದನ್ನೂ ದಾಖಲಿಸಿ ಸಂಕಲನದಲ್ಲಿ ಸೇರಿಸಿದಾಗ ದ್ರಶ್ಯ ಮಾಧ್ಯಮವನ್ನು ಪೂರ್ಣ ಬಳಸಿಕೊಂಡಂತೆ. ಪುನಃ ಕುತೂಹಲ.(ಸಮಸ್ಯೆ ಅಲ್ಲ.) ಬೊಬ್ಬೆ ಹೊಡೆಯುವಾಗ ವೇಷವನ್ನು ದಾಖಲಿಸದೆ (ವೇಷವನ್ನು ನೋಡುವ ಕೌತುಕ ಹೆಚ್ಚಾಗಲಿ ಎಂಬಂತೆ) ಬರೇ ಹಿಮ್ಮೇಳ ಅಥವಾ ರಂಗಸ್ಥಳವನ್ನು ಮಾತ್ರ ದಾಖಲಿಸಿದರೆ ಹೇಗೆ?

  ಯಕ್ಷಗಾನದಲ್ಲಿ ಹೆಚ್ಚಾಗಿ ಕ್ರಮ ಹೇಗೆಂದರೆ ಭಾಗವತರು ಪದ್ಯದ ಸಾಹಿತ್ಯ ಹೇಳುವಾಗ ನಟ ಅಭಿನಯಿಸುತ್ತಾನೆ, ಆಗ ಕ್ಯಾಮರಾದ ಕಣ್ಣು – ನಟನ ಕಣ್ಣು, ಬಾಯಿ, ಮುಖ, ಕೈ, ದೇಹದ ಬಾಗು ಇತ್ಯಾದಿ ಸ್ಥಳಗಳಿಗೆ ಕೇಂದ್ರೀಕರಿಸಬಹುದು (ಕ್ಲೋಸ್ ಅಪ್ ಬೇಕಾಗಬಹುದು.) ಪದ್ಯ ಮುಗಿದು ಕುಣಿಯಲು ಅನುವು ಮಾಡಿಕೊಟ್ಟಾಗ ನಟನ ಇಡೀ ದೇಹ, ಇಡೀ ರಂಗಸ್ಥಳದ ವ್ಯಾಪ್ತಿ, ಹಿಮ್ಮೆಳದವರ ತೊಡಗುವಿಕೆಯನ್ನು ದಾಖಲಿಸಬಹುದು. ಕುಣಿತ ನಿಂತು ಮಾತು ಪ್ರಾರಂಭವಾಗುವಾಗ ಎದುರು ವೇಷದ ಪ್ರತಿಕ್ರಿಯೆಯೋ “ಹೂಂ” ಹೇಳುವುದನ್ನೂ ದಾಖಲಿಸಬಹುದು. ಒಳ್ಳೆಯ ಹಾಡು ಬಂದಾಗ ಅಥವಾ ಭಾವಪೂರ್ಣ ಹಾಡುವಾಗ ಪ್ರೇಕ್ಷಕನ ಕಣ್ಣು ಭಾಗವತರ ಮೇಲೆ ಬಿದ್ದರೆ ಅದು ರಸಿಕನ ದೃಷ್ಟಿ. ಕ್ಯಾಮೆರಾದ ಕಣ್ಣು ಏನು ಮಾಡಬಹುದು?

  ರಂಗಭೂಮಿಯ ಸಾಧ್ಯತೆಗಳನ್ನು ಚೌಕಟ್ಟುಗಳ ಹೊಂದಾಣಿಕೆಯಲ್ಲಿ ದೃಶ್ಯ ಮಾಧ್ಯಮಕ್ಕೆ (ಚಲನಚಿತ್ರ) ಅಳವಡಿಸುವಾಗ ಸಂಕಲನವೆ ನಿರ್ದೇಶನ ಎನ್ನಬಹುದೇ?

 14. keshav ಹೇಳುತ್ತಾರೆ:

  ಅಭಯಸಿಂಹ,

  ನಿಮ್ಮ ಉತ್ತರ ಓದಿ ಸಮಾಧಾನವಾಯಿತು. ನೀವು ಬರೆದಿರುವ ಪ್ರತಿಕ್ರಿಯೆಯನ್ನು ಓದಿ ನಾನು ಹಾಗೆ ಬರೆಯಬೇಕಾಯಿತು.
  ವೇದಿಕೆ ಮೇಲೆ ನಡೆಯುವ ಯಾವುದೇ ಕಾರ್ಯಕ್ರಮವನ್ನು ಕ್ಯಾಮರಾದಲ್ಲಿ ಹಿಡಿಯುವುದು ತುಂಬ ಕಷ್ಟದ ಕೆಲಸ.
  ಇಲ್ಲೊಂದು ಯುಟ್ಯೂಬಿನ ಕೊಂಡಿ ಕೊಟ್ಟಿದ್ದೇನೆ, ನೋಡಿ:

  ಇದೊಂದು ಆರ್ಕೆಸ್ಟ್ರಾದ ವಿಡಿಯೋ. ಬಹುಷಃ ಮೂರು ಅಥವಾ ನಾಕು ಕ್ಯಾಮರಾಗಳನ್ನು ಉಪಯೋಗಿಸಿ ಈ ವೀಡಿಯೋ ಮಾಡಿದ್ದಾರೆ ಎಂದು ನನ್ನ ಅನಿಸಿಕೆ. ಈ ವೀಡಿಯೋವನ್ನು ೪೨ ಇಂಚು ಎಲ್ಸಿಡಿಗೆ ಹಾಕಿ ಫುಲ್ ವಾಲ್ಯುಮಿನಲ್ಲಿ ನೋಡಿದೆ. ನಾನು ನಿಜವಾಗಿ ಇದನ್ನು ಲೈವ್ ನೋಡುತ್ತಿರುವ ಭಾವನೆ ಬಂತು.
  ಇದೇ ತಂತ್ರವನ್ನು ಉಪಯೋಗಿಸಿ ನಾಟಕವನ್ನು, ಯಕ್ಷಗಾನವನ್ನು ಸೆರೆಹಿಡಿಯುವುದು ಸಾಧ್ಯ ಎಂದು ನನ್ನ ಅನಿಸಿಕೆ. ಆದರೆ ಕ್ಯಾಮರಾ ಹಿಡಿದಿರುವವನಲ್ಲಿ ನಾಟಕವನ್ನು ಅಥವಾ ಯಕ್ಷಗಾನವನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ತಾಕತ್ತಿರಬೇಕು. ಬರೀ ಕ್ಯಾಮರಾದ ಭಾಷೆ ಅರ್ಥವಾದರೆ ಸಾಲದು ಎಂದು ನನ್ನ ಅಂಬೋಣ.

  ಇನ್ನೊಂದು ವಿಡಿಯೋ ಇಲ್ಲಿದೆ. ಎಷ್ಟು ಚಂದದ ಲೈವ್ ಹಾಡು. ಆದರೆ ಕ್ಯಾಮರಾ ಹಿಡಿದವರಿಗೆ ಕ್ಯಾಮರಾವನ್ನು ಮೇಲಿಂದ ಕೆಳಗೆ, ಬಲದಿಂದ ಎಡಕ್ಕೆ ಓಡಿಸುವುದನ್ನೇ ಕಲೆ ಎಂದುಕೊಂಡಿದ್ದಾರೆ. ಇನ್ನು ಎಡಿಟ್ ಮಾಡುವವನಿಗೆ ಸಂಗೀತದ ಗಂಧವೇ ಇಲ್ಲ ಎನಿಸುವಂತೆ ಇದೆ. ವೇದಿಕೆ ಮೇಲಿನ ಕಾರ್ಯಕ್ರಮವನ್ನು ಹೇಗೆ ವಿಡಿಯೊ ಮಾಡಬಾರದು ಎನ್ನುವುದಕ್ಕೆ ಇಲ್ಲಿದೆ ಈ ಉದಾಹರಣೆ:

  – ಕೇಶವ

 15. ಚೇತನ್ ಹೊಸಕೋಟೆ ಹೇಳುತ್ತಾರೆ:

  ಪ್ರಿಯ ಅಭಯ್ ಅವರೇ,

  ಚರ್ಚೆಯನ್ನು ಮುಂದುವರೆಸುತ್ತಾ ನನ್ನ ಇನ್ನೊಂದು ಮಾತು…

  ರಂಗಪ್ರಸ್ತುತಿ ಕೇವಲ ರಂಗಮಂದಿರದ ಪ್ರೇಕ್ಷಕರಿಗೆ ಸೀಮಿತವಾಗಿರದೇ ಎಲ್ಲಾ ವರ್ಗದ ಪ್ರೇಕ್ಷಕರಿಗೆ ತಲುಪುವ ಸದುದ್ದೇಶವೇ ದಾಖಲೀಕರಣ. ಹಾಗಾದಲ್ಲಿ ನಾವು ರಂಗ ಪ್ರದರ್ಶನವನ್ನು ದೂರದರ್ಶನದಲ್ಲಿ ತೋರಿಸುವಾಗ ದೂರದರ್ಶನ ಮಾದ್ಯಮಕ್ಕೂ ಶಾಸ್ತ್ರ, ವ್ಯಾಕರಣವೆಂಬುದಿರುವುದಲ್ಲವೇ ಅದಕ್ಕೂ ನಾವು ಧಕ್ಕೆ ತರಬಾರದಲ್ಲವೇ? ಆದ್ದರಿಂದ ಇಡೀ ಚರ್ಚೆ ಗಮನಿಸಿದಾಗ ನನಗನಿಸುತ್ತದೆ… ಚಿತ್ರ ನಿರ್ದೇಶಕ ಎರಡೂ ಶಾಸ್ತ್ರಗಳನ್ನು ಗಮನದಲ್ಲಿಟ್ಟುಕೊಂಡು ಸಮತೋಲನ ಕಾಯ್ದುಕೊಳ್ಳುವ ಮೂಲಕ ಎರಡರ ಆಶಯವನ್ನು ಕಾಪಾಡಬೇಕು.

 16. Abhaya Simha ಹೇಳುತ್ತಾರೆ:

  ಪ್ರಿಯ ಚೇತನ್,

  ನೀವು ಹೇಳಿರುವುದು ಬಹಳ ಸರಿಯಾಗಿದೆ. ಈ ಸಮತೋಲನವನ್ನು ಕಾಯ್ದುಕೊಳ್ಳುತ್ತಾ ದಾಖಲೀಕರಣವನ್ನು ಮಾಡುವ ರೀತಿಗಳ ಕುರಿತು ನಾವು ಯೋಚಿಸಬೇಕು. ಚರ್ಚೆಯಲ್ಲಿ ಈಗಾಗಲೇ ನಾವು ಬಳಸುವ ವಿಧಾನಗಳ ಕುರಿತಾಗಿ ಮಾತನಾಡಿದ್ದೇವೆ. ಮೂರು ಕ್ಯಾಮರಾ ತಂತ್ರ, ಅಥವಾ ಕ್ರಿಕೆಟ್ ಪ್ರದರ್ಶನದ ರೀತಿಯಲ್ಲಿ ಅನೇಕ ಕ್ಯಾಮರಾ ಬಳಕೆ ಇತ್ಯಾದಿಗಳು ಸರಿ. ಆದರೆ ಇಲ್ಲಿ ಕ್ಯಾಮರಾ ಕೋನ, imaginary line ಇತ್ಯಾದಿಗಳು ತೊಂದರೆ ಕೊಡುತ್ತವಲ್ಲಾ… ಆ ಕುರಿತು ನನ್ನ ಸಧ್ಯದ ಯೋಚನೆ ಹರಿದಿದೆ. ಮುಂದಿನ ಬ್ಲಾಗ್ ಬರಹದಲ್ಲಿ ಆ ಸಮಸ್ಯೆಯ ಕುರಿತು ಇನ್ನಷ್ಟು ವಿವರ ಕೊಡುತ್ತೇನೆ. ಆ ಕುರಿತಾಗಿಯೂ ನಿಮ್ಮೆಲ್ಲರ ಅಭಿಪ್ರಾಯಗಳನ್ನು ತಿಳಿಯಲು ಕಾತುರನಾಗಿದ್ದೇನೆ.

  – ಅಭಯ

 17. Dr Ramaraj Pundikai ಹೇಳುತ್ತಾರೆ:

  Dear Abhay ,

  I know that I am very late to comment anything about videographic documentation of live folk arts,as you have already finished filming the Yakshagana [I heard great comments about the performance,though I missed it on 28/11/09].However ,I wished bring your kind attention to the sad state of commertially available Yakshagana VCDs .Most of them torture the viewvers with bad performances by the artists while more intriguing /shocking is the shoddy camerawork,poor stage set-up,and excessive use of close up shots .Some even resort to gimmicks such as picture-in -picture,3-4 images rotating !etc to highlight the sequence.

  I feel,a good quality video of Yakshagana[I am being specific here,not sure about other art forms]should always be
  1.shot outdoors in traditional RANAGASTHALA,not indoors in a studio .
  2.should keep close up shots to minimum.
  3.make the viewer feel as if he is watching the show live [I dont know further technical details to achieve this feeling]

  Well,in the end ,just a crazy thought !Given a chance,I would love to collect most of the vcds of Yakshaganas avai;able today,dump them in the pot-holes of Managalore city roads and run my car over them !Unfortunately,I dont have the time for the same.

  Looking forward to the DVDof 28/11/09 .

 18. ಮರುಕೋರಿಕೆ (Pingback): ಎಣ್ಣೆ ಬೇಕು ದೀವಟಿಗೆಗೆ! « Athree Book Center

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s