ಹೊಸ ಆಯಾಮ ನೀಡದ ಅವತಾರ್!


ಇತ್ತೀಚೆಗೆ ಅವತಾರ್ ಎಂಬ ಸಿನೆಮಾವನ್ನು ನೋಡಿದೆ. ಈ ಕುರಿತು ಸ್ವಲ್ಪ ಚರ್ಚೆ ಮಾಡೋಣ ಎಂದು ಬರೆಯುತ್ತಿದ್ದೇನೆ. ಈ ಮೂರು ಆಯಾಮದ ಅಥವಾ ಸ್ಟೀರಿಯೋಸ್ಕೋಪಿಕ್ ಎಂದು ಕರೆಯಲ್ಪಡುವ ಚಿತ್ರದ ರಹಸ್ಯ ಏನು? ಈ ತಂತ್ರದ ಬಳಕೆ ಹಾಗೂ ಅವತಾರ್ ಚಿತ್ರದ ಕುರಿತಾಗಿ ಒಂದಷ್ಟು ಮಾತುಗಳು ಇಲ್ಲಿ. ನೀವು ಚಿತ್ರ ನೋಡಿದ್ದೀರಾ? ಇಲ್ಲವಾದರೆ, ಬೇಗನೇ ನೋಡಿ. ಇದು ಖಂಡಿತಾ ಒಂದು ಒಳ್ಳೆಯ ಅನುಭವ. ನನ್ನ ಪ್ರಾಯದ ಅನೇಕರಿಗೆ ಮೈ ಡಿಯರ್ ಕುಟ್ಟಿಚ್ಚಾತನ್ ಚಿತ್ರವನ್ನು ನೋಡಿದ ಅಸ್ಪಷ್ಟ ನೆನಪಾದರೂ ಇರಬಹುದು. ಆದರೆ ನನಗಿಂತ ಸಣ್ಣ ಪ್ರಾಯದವರಿಗೆ ಈ ಮಜಾ ಸಿಗದಿರುವ ಸಾಧ್ಯತೆಯೇ ಹೆಚ್ಚು.

ಮೊದಲಿಗೆ ಏನಿದು ಈ ಮೂರು ಆಯಾಮದ ಚಿತ್ರ? ನಾವು ಸಾಮಾನ್ಯವಾಗಿ ಎರಡು ಆಯಾಮದ ಚಿತ್ರಗಳನ್ನೇ ಸ್ವಾಭಾವಿಕ ಎಂದು ಚಲನ ಚಿತ್ರದ ಮಟ್ಟಿಗೆ ಒಪ್ಪಿಕೊಂಡು ಬಿಟ್ಟಿದ್ದೇವೆ. ಆದರೆ ನಾವು ನಿತ್ಯ ಜೀವನದಲ್ಲಿ ವ್ಯವಹರಿಸುವಾಗ ಒಂದು ವಸ್ತು ನಮ್ಮಿಂದ ಎಷ್ಟು ದೂರದಲ್ಲಿದೆ, ಯಾವ ಗಾತ್ರದಲ್ಲಿ ಕಾಣಿಸುತ್ತಿದೆ ಮತ್ತು ನಮ್ಮ ನಡುವಿನ ದೂರದಿಂದಾಗಿ ಅದರ ನಿಜ ಗಾತ್ರ ಎಷ್ಟಿರಬಹುದು ಎಂದೆಲ್ಲಾ ಲೆಕ್ಕ ಹಾಕುತ್ತೇವೆ. ಇದು ನಮ್ಮ ನಿತ್ಯ ಜೀವನದಲ್ಲಿ ನಡೆಯುವುದು, ವ್ಯವಹರಿಸುವುದು ಇತ್ಯಾದಿಗಳಿಗೆ ಸಹಕಾರಿಯಾಗಿರುತ್ತದೆ. ಆದರೆ ಎರಡು ಆಯಾಮದ ಚಿತ್ರಗಳಲ್ಲಿ ಈ ಸೌಲಭ್ಯ ನಮಗೆ ಇಲ್ಲ. ಏಕೆಂದರೆ, ಅಲ್ಲಿ ಎಲ್ಲಾ ಚಿತ್ರಗಳೂ ಒಂದೇ ಚಪ್ಪಟೆ ಪರದೆಯ ಮೇಲೆ ಕಾಣಿಸುತ್ತವೆ. ಈ ಕೊರತೆಯನ್ನು ನೀಗಲು ಕಣ್ಣಿನ ವಿಧಾನವನ್ನೇ ಅನುಕರಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದರ ಫಲವೇ ಈ ಮೂರು ಆಯಾಮದ ಚಿತ್ರಗಳು.

ಮೂಲತಃ ಕಣ್ಣು ಈ ಮೂರು ಆಯಾಮವನ್ನು ಪಡೆಯುವುದು ಎರಡು ಕಣ್ಣುಗಳ ನಡುವಿನ ಅಂತರದಿಂದಾಗಿ. ಈ ಅಂತರದಿಂದಾಗಿ ಎರಡೂ ಕಣ್ಣುಗಳು ಸಣ್ಣ ಮಟ್ಟಿನ ಭಿನ್ನ ಕೋನಗಳಿಂದ ಒಂದೇ ವಸ್ತುವನ್ನು ನೋಡುತ್ತವೆ. ಈ ಭಿನ್ನ ಬಿಂಬಗಳನ್ನು ಮೆದುಳು ಸಂಸ್ಕರಿಸುವಾಗ ವಸ್ತುವಿನ ಮೂರನೇ ಆಯಾಮದ ಕಲ್ಪನೆಯನ್ನು ಮೂಡಿಸುತ್ತದೆ. ಮೂರನೇ ಆಯಾಮದ ಚಲನಚಿತ್ರಗಳನ್ನು ನೋಡಲು ಬಳಸುವ ಕನ್ನಡಕಗಳೂ ಇದೇ ವಿಧಾನವನ್ನು ಅನುಕರಿಸುತ್ತವೆ. ಆ ಕನ್ನಡಕವನ್ನು ಒಮ್ಮೆ ತೆಗೆದು ಚಿತ್ರವನ್ನು ನೋಡಿದರೆ ನಿಮಗೆ ತೆರೆಯ ಮೇಲೆ ಕಾಣಿಸುವುದು ಒಂದು ಮಬ್ಬಾದ, ವಿಚಿತ್ರ ಚಿತ್ರವಾಗಿರುತ್ತದೆ. ಚಿತ್ರದ ಎರಡು ಬಿಂಬವನ್ನು ಪರದೆಯ ಮೇಲೆ ಸಣ್ಣದಾದ ಭಿನ್ನ ಕೋನದಲ್ಲಿ ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಭಿನ್ನ ವರ್ಣಗಳನ್ನೂ ಬಳಸಿಕೊಳ್ಳಲಾಗುತ್ತದೆ. ನಾವು ಧರಿಸುವ ವಿಶೇಷ ಕನ್ನಡಕಕ್ಕೆ ಈ ಭಿನ್ನ ವರ್ಣವನ್ನು ಸೋಸುವ ಗುಣ ಇರುತ್ತದೆ. ಹೀಗಾಗಿ ಒಂದು ಕೋನದ ಬಿಂಬ ಒಂದು ಕಣ್ಣನ್ನಷ್ಟೇ ಪ್ರವೇಶಿಸುವಂತೆ ಮಾಡುತ್ತದೆ. ಹೀಗಾಗಿ ಎರಡೂ ಕಣ್ಣುಗಳಿಗೆ ಸಣ್ಣ ಅಂತರದಿಂದ ತೋರಿಸಲ್ಪಡುತ್ತಿರುವ ಭಿನ್ನ ಬಿಂಬಗಳೇ ಕಾಣಿಸಿಕೊಂಡು ಇದರಿಂದಾಗಿ ಮೂರನೇ ಆಯಾಮದ ಕಲ್ಪನೆ ನಮ್ಮ ಮೆದುಳಿನಲ್ಲಿ ಉಂಟಾಗುತ್ತದೆ. (ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವಿಕಿ ಪೀಡಿಯಾದ ಈ ಪುಟವನ್ನು ನೋಡಿ)

ಒಮ್ಮೆ ನಮ್ಮ ಕೈಯಲ್ಲಿ ಒಂದು ಹೊಸಾ ಸಾಧ್ಯತೆ ಬಂದ ಮೇಲೆ ಅದರ ಬಳಕೆಯ ಬಗ್ಗೆ ಮಾತಾಡೋಣ. ಮೂರನೇ ಆಯಾಮದಿಂದ ಚಿತ್ರ ಮಾಧ್ಯಮಕ್ಕೆ ಉಂಟಾಗುವ ಒಂದು ಪ್ರಮುಖ ಉಪಯೋಗ ಎಂದರೆ, ಈ ವಿಧಾನವು ಪ್ರೇಕ್ಷಕನನ್ನು ನೇರ ಘಟನಾ ಸ್ಥಳಕ್ಕೇ ಕರೆದೊಯ್ದ ಅನುಭವವನ್ನು ಕೊಡುತ್ತದೆ. ಇದರಿಂದಾಗಿ ಚಿತ್ರ ನಿರ್ಮಿಸಲು ಪ್ರಯತ್ನಿಸುತ್ತಿರುವ ಭ್ರಮೆ ಇನ್ನಷ್ಟು ಸುಲಭವಾಗಿ ರೂಪುಗೊಳ್ಳುತ್ತದೆ. ಹಾಗಾದರೆ ಈ ತಂತ್ರವನ್ನು ಸಿನೆಮಾಕ್ಕೆ ಬಳಸಿಕೊಳ್ಳುವುದು ಹೇಗೆ? ಕಥೆ ಹೇಳುವ ಹೊಸ ಸಾಧನವೊಂದರ ಸಾಧ್ಯತೆಯನ್ನು ಚೆನ್ನಾಗಿ ಬಳಸಿಕೊಳ್ಳುವಂಥಾ ಕಥೆಯನ್ನು ಆಯ್ಕೆ ಮಾಡುವಲ್ಲಿ ಜಾಣ್ಮೆಯನ್ನು ತೋರಿಸಬಹುದು ಅಲ್ವಾ? ಅವತಾರ್ ಅಂಥಾ ಒಂದು ಕಥೆಯನ್ನು ತೆಗೆದುಕೊಳ್ಳುವಲ್ಲಿ ತಕ್ಕ ಮಟ್ಟಿಗೆ ಸಫಲವಾಗಿದೆ ಎನ್ನಬಹುದು. ನಿಜವಾದ ಜನರ ಒಡನೆ ಇರುತ್ತಲೇ, ಫಕ್ಕನೇ ಇನ್ನೊಂದು ಅಜ್ಞಾತ ಜಗತ್ತಿಗೆ ಕರೆದೊಯ್ಯುವ ಮತ್ತೆ ಅಲ್ಲೂ ಅಷ್ಟೇ ನಂಬಿಕರ್ಹವಾಗಿ ಪ್ರಪಂಚವನ್ನು ರೂಪಿಸುವಲ್ಲಿ ಮೂರನೇ ಆಯಾಮದ ಬಳಕೆಯನ್ನು ಸಾಕಷ್ಟು ಚೆನ್ನಾಗಿಯೇ ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಅನೇಕ ಬಾರಿ ಪರದೆಯಿಂದ ಪುಟಿದೇಳುವ ಕಲ್ಲಿನ ಚೂರೋ… ಬಾಂಬೋ ನಮ್ಮೆಡೆಗೆ ನುಗ್ಗಿ ಬಂದು ನಮ್ಮನ್ನು ಸೀಟಿನಿಂದ ಹಾರುವಂತೆ ಮಾಡುವಲ್ಲೂ ಸಫಲವಾಗುತ್ತದೆ. ‘ಥ್ರಿಲ್’ಕೊಡುತ್ತದೆ.

ಆದರೆ ಈ ಮೂರನೇ ಆಯಾಮದ ಬಳಕೆ ಮಾಡಿಕೊಳ್ಳುತ್ತಿರುವಾಗ ಎರಡು ಆಯಾಮದ ಸಿನೆಮಾ ನಿರ್ಮಾಣದ ವ್ಯಾಕರಣವನ್ನೇ ಬಳಸುವುದು ಸರಿಯೇ ಎಂಬ ಪ್ರಶ್ನೆ ನನ್ನನ್ನು ಸಿನೆಮಾದುದ್ದಕ್ಕೂ ಕಾಡುತ್ತಿತ್ತು. ಸಾಧಾರಣವಾಗಿ ಹಾಲಿವುಡ್ ಚಿತ್ರಗಳಲ್ಲಾಗಲೀ ಭಾರತೀಯ ಚಿತ್ರಗಳಲ್ಲಾಗಲೀ (ಸಾಮಾನ್ಯವಾಗಿ ಎಂದರೆ ಪ್ರತಿ ಬಾರಿ ಅಲ್ಲ ಎನ್ನುವುದನ್ನು ಗಮನಿಸಿ) ನಾವು ನೋಡುವ ನಾಟಕಗಳಂತೆ ಕ್ಯಾಮರಾ ಪ್ರೇಕ್ಷಕರ ಸ್ಥಾನದಲ್ಲಿ ಇದ್ದು ಎದುರಿನಲ್ಲಿ ಇರುವ ವೇದಿಕೆಯ ಮೇಲೆ ಒಂದಿಷ್ಟು ದೂರದಲ್ಲಿ ನಾಟಕವಾಗುತ್ತಿರುವುದನ್ನು ನೋಡುವಂತೆ ಚಿತ್ರಿಸಿರುವುದನ್ನು ನೋಡುವುದು ನಮಗೆ ಅಭ್ಯಾಸ. ಇನ್ನು ಓಝೂವಿನಂಥವರ ಚಿತ್ರಗಳನ್ನು ನೋಡಿದವರಿಗೆ ಅವನ ಭಿನ್ನವಾದ ಚಿತ್ರೀಕರಣ ವಿಧಾನದ ಅರಿವೂ ಇರಬಹುದು. ಇಲ್ಲೆಲ್ಲ ಕಡೆಯಲ್ಲೂ ನಾವು ಇರುವುದು ಕೇವಲ ಎರಡು ಆಯಾಮದ ಚಿತ್ರಗಳೊಂದಿಗೆ ಮಾತ್ರ. ಆದರೆ ಈಗ ನಾವು ವ್ಯವಹರಿಸುತ್ತಿರುವುದು ಮೂರನೇ ಆಯಾಮವನ್ನೂ ಹೊಂದಿರುವ ಮಾಧ್ಯಮದೊಂದಿಗೆ. ಹೀಗಾಗಿ… ಪ್ರೇಕ್ಷಕನಿಗೆ ತಾನೂ ವೇದಿಕೆಯ ಮೇಲೆ ನಿಂತು ನಟರೊಡನೆ ಇದ್ದುಕೊಂಡೇ ಇಡೀ ಕಥನವನ್ನು ಗಮನಿಸುವಂಥಾ ಅನುಭವವನ್ನು ಈ ಮಾಧ್ಯಮ ಕೊಡುತ್ತಿರುವಾಗ ಅಲ್ಲಿ ಚಿತ್ರೀಕರಣ ವಿಧಾನ, ಸಂಕಲನ ವಿಧಾನ ಹೇಗೆ ಭಿನ್ನವಾಗಿರಬೇಕು ಎನ್ನುವುದರ ಕುರಿತಾಗಿ ಸಾಕಷ್ಟು ಯೋಚನೆಗಳು ನಡೆದಿಲ್ಲ ಎಂದು ನನಗೆ ಅವತಾರ್ ಚಿತ್ರವನ್ನು ನೋಡಿದಾಗ ಅನಿಸಿತು.

ಇನ್ನು ಚಿತ್ರದ ಕಥೆಯ ಕಡೆಗೆ ಬಂದರೆ, ಮೂಲ ಅಮೇರಿಕನ್ನರನ್ನು ದಮನಿಸಿ ಅಭಿವೃದ್ಧಿಯ ಹೆಸರಿನಲ್ಲಿ ಅಮೇರಿಕಾವನ್ನು ಕಟ್ಟಿದ ಕಥೆಯದ್ದೇ ಅಥವಾ ಮತ್ತೆ ಅಭಿವೃದ್ಧಿಯ ಹೆಸರಿನಲ್ಲಿ ಆಫ್ರಿಕಾವನ್ನು ದಮನಿಸಿದ, ಅಭಿವೃದ್ಧಿಯ ಹೆಸರಿನಲ್ಲಿ ಹುಚ್ಚಾಪಟ್ಟೇ ಕಾಡನ್ನು ಕಡಿಯುವ ಕಥೆಯ ಒಂದು ರೂಪ ಈ ಚಿತ್ರದ ಕಥೆ. ಜಗತ್ತಿನಲ್ಲಿ ಎಲ್ಲದರಲ್ಲೂ ಒಂದು ಸಮತೋಲನವಿದೆ, ಅದೊಂದು ದೊಡ್ಡ ಜಾಲ ನಾವು ಇದರ ಒಂದು ಭಾಗ ಅಷ್ಟೇ ಎನ್ನುವ ಅರಿವಿರುವ ಮೂಲನಿವಾಸಿಗಳನ್ನು ತಮ್ಮ ಯಂತ್ರಶಕ್ತಿಯ ಮೇಲೆ ಭರವಸೆಯಿರುವ ಇನ್ನೊಂದು ಆಧಿನಿಕ (!) ಜನಾಂಗ ನಾಶ ಮಾಡುವ ಕಥೆ ಹಾಗೂ ಅದರ ನಡುವೆ ಒಂದು ಪ್ರೇಮ ಸಂಬಂಧ, ಅದರ ಮೂಲಕ ಸಮತೋಲನದ ಪ್ರಯತ್ನ… ಮತ್ತೆ ಅದೇ ಅಮೇರಿಕನ್ ಸಿನೆಮಾದ ಹಳಸಲು ಫಾರ್ಮ್ಯುಲಾ! ತುಂಬಾ ಬಾಂಬು, ಕೋವಿಗಳ ನಡುವೆ ಒಂದು ಕಥೆ ಇದು. ತಂತ್ರಜ್ಞಾನದ ದರ್ಪವನ್ನು ಉದ್ದಕ್ಕೂ ಮೆರೆಯುವ ಚಿತ್ರ ಕೊನೆಗೆ ಎಲ್ಲೂ ತಟ್ಟದೇ ಸುಳಿದು ಹೋಗುವುದು, ಇಂಥಾ ಚಿತ್ರಗಳ ಕಥಾವಸ್ತುವಿನ ಪುನರಾವರ್ತನೆಯ ದೋಷ ಎಂದು ನನಗೆ ಅನಿಸುತ್ತದೆ.

ಒಟ್ಟಿನಲ್ಲಿ ಇದೊಂದು ಸಾಧಾರಣ ಸಿನೆಮಾ. ಆದರೆ ಮೂರನೇ ಆಯಾಮದಲ್ಲಿ ಚಿತ್ರವನ್ನು ನೋಡಿ ಅರಿವಿಲ್ಲದವರು ಖಂಡಿತಾ ಆ ಅನುಭವಕ್ಕಾಗಿಯಾದರೂ ಚಿತ್ರವನ್ನು ನೋಡಲೇ ಬೇಕು.

This entry was posted in Film Craft, Film reviews. Bookmark the permalink.

17 Responses to ಹೊಸ ಆಯಾಮ ನೀಡದ ಅವತಾರ್!

 1. ಜಯಲಕ್ಷ್ಮಿ ಹೇಳುತ್ತಾರೆ:

  ಮೂರು ಆಯಾಮದ ಬಗ್ಗೆ ವಿವರಣೆ ಸರಳವಾಗಿ ನನ್ನಂಥ ಜನಸಾಮಾನ್ಯರಿಗೂ ಅರ್ಥವಾಗುವಂತಿದೆ,ಧನ್ಯವಾದ:)

 2. badekkila ಹೇಳುತ್ತಾರೆ:

  ಮೂರು ಆಯಾಮದ ಚಿತ್ರಗಳ ಬಗ್ಗೆ ಗೊತ್ತಿಲ್ಲದವರಿಗೆ ಅದರ ಬಗ್ಗೆ ಪರಿಚಯ ಖಂಡಿತಾ ಆಯಿತು… ಅದರ ಜೊತೆಗೇ ನಮ್ಮಂಥವರಿಗೆ, ಅಂದರೆ, ಇನ್ನೂ ಅವತಾರವನ್ನು ನೋಡದವರಿಗೆ ಅದನ್ನು ನೀವು ನೋಡಿದ ಆಯಾಮ ಗೊತ್ತಾದಂತಾಯಿತು.
  ಅದರ ಜೊತೆಗೇ ಈ ಚಿತ್ರದ ಕಥೆ ಮೂರು ಆಯಾಮದಲ್ಲಿ ಹೇಳಿದರೂ ಅದೇ ಆಯಾ-ರಾಮ, ಗಯಾ-ರಾಮದಂತಹ ಕಥೆ ಅಂತ ಕೇಳಿ ಬೇಸರವಾಯಿತು…

 3. sumathi ಹೇಳುತ್ತಾರೆ:

  I did watch this movie and thought that I shouldn’t see it for the second time. I agree with yout that its plot is stale.

 4. ಚೇತನ್ ಹೊಸಕೋಟೆ ಹೇಳುತ್ತಾರೆ:

  ಪ್ರಿಯ ಅಭಯ್ ಅವರೇ,

  “ಅವತಾರ್” 3D ಚಿತ್ರದ ಬಗ್ಗೆ ನಿಮ್ಮ ಮಾಹಿತಿ ತುಂಬ ಚೆನ್ನಾಗಿದೆ. ನನ್ನ ತಾಯಿ ಇದುವರೆಗೂ “ಚಿನ್ನಾರಿ ಚೇತನ್” ಅಂತ, ಕಾಡಿನ ರಹಸ್ಯವೋ ಅಥವಾ ಕಾಡಿನ ರಾಜ ಅಂತಲೋ ಮತ್ತೊಂದು ಚಲನಚಿತ್ರ 3D ಯಲ್ಲಿ ಮೂಡಿಬಂದಿತ್ತು ಎಂದು ಅವರ ಅನುಭವ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅದು ಅಲ್ಲದೇ ಮೊದಲು ಹೆಸರಿಸಿದ ಚಿತ್ರ ನೋಡಿಯೇ ನನಗೆ ಹೆಸರಿಟ್ಟದ್ದು ನನಗೆ ನೆನಪಾಗುತ್ತದೆ. ನಾನು ಅವತಾರ್ ಚಿತ್ರವನ್ನು 3D ಯಲ್ಲಿ ನೋಡಿದೆ. ನನಗೆ ನಿಮಗಿಂತ ಭಿನ್ನ ಅನುಭವ ಅನಿಸಿಕೆ ಉಂಟಾಯಿತು. ನನ್ನ ಅನಿಸಿಕೆ ಕೆಳಗಿನಂತಿದೆ…..
  “ಏನ್ರೀ ಅವತಾರ್ ಅಂತಹ ಚಿತ್ರವನ್ನು “ಒಟ್ಟಿನಲ್ಲಿ ಇದೊಂದು ಸಾಧಾರಣ ಸಿನೆಮಾ” ಅಂದುಬಿಟ್ರಿ…….!!! ”
  ಹೀಗೆ ನಿಮ್ಮ ಮಾತು ನನಗೆ ಹುಬ್ಬೇರಿಸುತ್ತಿದೆ. ನೀವು ನಿಮ್ಮ ಲೇಖನದಲ್ಲಿ 3D ತಾಂತ್ರಿಕತೆ ಮತ್ತದರ ಅನುಭವದ ಬಗ್ಗೆ ಮಾತ್ರ ಉಲ್ಲೇಖಿಸಿದ್ದೀರಿ ಮತ್ತು “ಅದೇ ಅಮೇರಿಕನ್ ಸಿನೆಮಾದ ಹಳಸಲು ಫಾರ್ಮ್ಯುಲಾ!” ಎಂದು ಅದರ ಕಥಾವಸ್ತುವನ್ನು ಹೀಯಾಳಿಸಿರುವುದು ನಿಜ. ಅಲ್ಲದೇ “ತಂತ್ರಜ್ಞಾನದ ದರ್ಪವನ್ನು ಉದ್ದಕ್ಕೂ ಮೆರೆಯುವ ಚಿತ್ರ” ಎಂದೂ ಟೀಕಿಸಿದ್ದೀರಿ.
  ನೀವೆಲ್ಲೋ ಅವತಾರ್ ಸಿನೆಮಾವನ್ನು ಎಲ್ಲಾ ದೃಷ್ಟಿಕೋನಗಳಿಂದ ವಿಮರ್ಶಿಸಿಲ್ಲವೆಂಬುದೇ ನನ್ನ ಭಾವನೆ. ನನ್ನ ಕೆಲ ಅನಿಸಿಕೆಗಳು ಹೀಗಿವೆ. ಅವತಾರ್ ಚಲನಚಿತ್ರದ ಕಥಾವಸ್ತು ಸಾಧಾರಣ ಹಾಗು ಮತ್ತದೇ ಹಳಸು ಕಥಾಹಂದರ ಅದು ನಿಜವೇ. ಆದರೇ ಆ ಸಾಧಾರಣವಾದ ಕಥೆಯನ್ನೇ ಅದ್ಭುತವಾಗಿ ನಿರೂಪಿಸಿದ್ದಾರೆ ಎನ್ನುವುದು ನನ್ನ ಅನಿಸಿಕೆ. ಹಾಗೆ ನೋಡಿದರೆ ಜೇಮ್ಸ್ ಕ್ಯಾಮರನ್ ಅವರ “ಟೈಟಾನಿಕ್” ಕಥೆಯೂ ಅಷ್ಟೇ ಸಾಧಾರಣ…ಅದೇ ಕೆಳ ಮತ್ತು ಮೇಲ್ವರ್ಗದ ಹುಡುಗ ಹುಡುಗಿಯ ಪ್ರಣಯದ ಕಥಾಹಂದರ…..ಆದರೇ ಅವರು ನಿರೂಪಿಸಿದ ರೀತಿ, ಪ್ರಣಯದ ಹಿಂದಿನ ಚಾರಿತ್ರಿಕ ಹಿನ್ನಲೆ ಇವೆಲ್ಲವೂ ಅದೊಂದು ಅದ್ಭುತ ಕಥೆಯನ್ನಾಗಿಸುತ್ತದೆ. ಸಿನೆಮಾದಲ್ಲಿ ಎಂಥದೇ ಒಳ್ಳೆಯ ಕಥೆಯಾಗಿರಲಿ ಅದನ್ನು ಪ್ರೇಕ್ಷಕರಿಗೆ ನಿರೂಪಿಸುವ ವಿಧಾನವೇ ಸಾಧಾರಣ ಮತ್ತು ಅಸಾಧಾರಣ ಚಿತ್ರಗಳಲ್ಲಿನ ವ್ಯತ್ಯಾಸವೆಂದು ನನಗನಿಸುತ್ತದೆ. ಹೀಗೆ ನೋಡಿದಾಗ ಅವತಾರ್ ನಿರೂಪಣೆ ಅದ್ಭುತವಾಗಿದೆ ಹಾಗು ಇದುವರೆಗೂ ಯಾವಚಿತ್ರವೂ ಪರಿಸರ ಕಾಳಜಿ ಸಂರಕ್ಷಣೆ ಅದರ ನಾಶದಿಂದಾಗುವ ಅನಾಹುತಗಳ ಬಗೆಗೆ ಇಷ್ಟು ಚೆನ್ನಾಗಿ ನಿರೂಪಿಸಿರುವ ನೆನಪು ನನಗಿಲ್ಲ (ಮರೆತಿರಬೇಕು!! ಅಥಾವ ಅಂತಹ ಇನ್ನೊಂದು ಚಿತ್ರವನ್ನು ಇದುವರೆಗೂ ನೋಡಿರದೇ ಇರಬಹುದು!!). ಮತ್ತೊಂದು ಗ್ರಹದ ಕಲ್ಪನೆ ಮನುಷ್ಟನಿಗಿದೆ ಆದರೇ ಆ ಕಾಲ್ಪನಿಕ ಗ್ರಹವನ್ನು ಪ್ರೇಕ್ಷಕ ನಂಬುವಂತೆ ಕಟ್ಟಿಕೊಟ್ಟಿರುವುದು ಅಸಾಧಾರಣ. ನಮ್ಮೆಲ್ಲರ ಕಲ್ಪನೆಗೆ ಮೀರಿ ಅದ್ಭುತ ಲೋಕವೊಂದನ್ನು ಅವತಾರ್ ಸೃಷ್ಟಿಸಿದೆ ಎಂದೆನಿಸುತ್ತದೆ.
  ನೀವು ಚಲನಚಿತ್ರದಲ್ಲಿನ 3D ತಂತ್ರಜ್ಞಾನ ಮತ್ತದರ ಅನುಭವದ ಬಗ್ಗೆ ಮಾತ್ರ ಬೆಳಕು ಚೆಲ್ಲಿದಿರಿ. ಆದರೇ ಚಲನಚಿತ್ರದಲ್ಲಿ ಅದೆಷ್ಟೋ ಕಂಡರಿಯದ ತಂತ್ರಜ್ಞಾನಗಳನ್ನು ಜೇಮ್ಸ್ ಮತ್ತವರ ತಂಡದವರು ಹಲವು ವರ್ಷಗಳು ಸಂಶೋಧಿಸಿ ಸೃಷ್ಟಿಸಿ ಅದನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಅದರ ಎಫೆಕ್ಟ್ ನಮಗೆ ಪ್ರತಿ ಫ್ರೇಮ್ ನಲ್ಲೂ ಕಾಣಿಸುತ್ತದೆ. ಅಂತಹ ಪ್ರಯತ್ನವನ್ನು ನಾವು ಶ್ಲಾಘಿಸಬೇಕಲ್ಲವೇ?.
  “ಮೈನ್ ಸ್ಟ್ರೀಮ್” ಸಿನೆಮಾಕ್ಕೆ ಹೆಸರಾದ ಜೇಮ್ಸ್ ಕ್ಯಾಮರನ್ ಪ್ರತಿ ಸಾರಿಯೂ ಪ್ರೇಕ್ಷಕನಿಗಿಂತ ಒಂದು ಹೆಜ್ಜೆ (ಒಂದೇನು ಹಲವು ಹೆಜ್ಜೆ) ಮುಂದಿದ್ದು ಹೊಸ ಹೊಸ “ಅವತಾರ” ಗಳಲ್ಲಿ ಸಿನೆಮಾ ತೋರಿಸುತ್ತಾ….ಪ್ರೇಕ್ಷಕರನ್ನ ಥೀಯೇಟರ್ ನತ್ತ ಮುಖಮಾಡಿಸುತ್ತಾ……ಹಣಗಳಿಸುತ್ತಾ…..ಬಾಕ್ಸ್ ಆಫೀಸ್ ನಲ್ಲಿ ಹೊಸ ಚರಿತ್ರೆ ಸೃಷ್ಟಿಸುತ್ತಾ ಇರುವುದೂ ಒಂದು ಕಲೆಯೇ ಎಂದು ಭಾವಿಸುತ್ತೇನೆ. ಆ ಕಲೆಯನ್ನು ಓಜೋ,ಫೆಲಿನಿ,ಬರ್ಗ್ ಮನ್, ಕುರೋಸಾವ ರವರ ಕಲಾತ್ಮಕ ಚಿತ್ರಗಳಿಗೆ ಖಂಡಿತ ಹೋಲಿಸಲಾಗುವುದಿಲ್ಲ. ಹೀಗೆ ಕಮರ್ಶಿಯಲ್ ಕಲಾತ್ಮಕ ಪದ್ದತಿಯನ್ನು ನದಿಯ ಎರಡು ದಡಗಳೆಂದು ಯೋಚಿಸಿ ನೋಡಿದರೆ ಕ್ಯಾಮರನ್ ರವರ “ಅವತರ್” ನನಗೆ ಅಸಾಧಾರಣ, ಅದ್ಭುತ ಮತ್ತು ಮೈಲಿಗಲ್ಲು ಚಿತ್ರವೆಂದು ಭಾಸವಾಗುತ್ತದೆ.

  ನಾನು ನಿಮ್ಮ ಜೊತೆ ಜಗಳವಾಡುತ್ತಿಲ್ಲ ಅಲ್ಲವೇ?!! ಖಂಡಿತ ಇಲ್ಲ ಎಂದು ಹೇಳುತ್ತಾ ನನ್ನ ಇಲ್ಲಿಗಿಷ್ಟು ಅನಿಸಿಕೆ ಹೇಳಿದ್ದೇನೆ.

  {ಜೇಮ್ಸ್ ರವರು ಬರೆದಿರುವ ಅವತಾರ್ ಚಿತ್ರದ Scriptement ಮತ್ತು Screenplay ಕಳುಹಿಸಿಕೊಡುತ್ತೇನೆ ದಯವಿಟ್ಟು ಓದಿ. Scriptement ಸಿನೆಮಾದಲ್ಲಿ ಹೇಳದ ಅದೆಷ್ಟೋ details ಅನ್ನ ಒಳಗೊಂಡಿದೆ.}

  ಧನ್ಯವಾದಗಳು,
  ಚೇತನ್

 5. Abhaya Simha ಹೇಳುತ್ತಾರೆ:

  ಪ್ರಿಯ ಚೇತನ್, ಚರ್ಚೆಗೆ ಒಂದಷ್ಟು ಹೊಸ ನೋಟಗಳನ್ನು ತಂದದ್ದಕ್ಕೆ ಧನ್ಯವಾದಗಳು. ನಿಮ್ಮ ಅಭಿಪ್ರಾಯಗಳು ಚೆನ್ನಾಗಿವೆ. ಅವಕ್ಕೆ ನನ್ನ ವಿವರಣೆಗಳು ಹೀಗಿವೆ ನೋಡಿ:

  ಮೊದಲನೆಯದಾಗಿ ಅವತಾರ್ ಖಂಡಿತವಾಗಿಯೂ ಒಂದು ಒಳ್ಳೆಯ ಪ್ರಯತ್ನ. ಆದರೆ ಅದಕ್ಕೆ ಸಿಗುತ್ತಿರುವಂಥಾ ಅಭೂತಪೂರ್ವ ಪ್ರತಿಕ್ರಿಯೆಯ ಮಟ್ಟದಲ್ಲಿ ಅದು ಇಲ್ಲ ಎನ್ನುವುದಷ್ಟೇ ನನ್ನ ಕೊರಗು. ಇನ್ನು ತಂತ್ರಜ್ಞಾನದ ಕುರಿತಾಗಿ ಮಾತನಾಡುವುದಿದ್ದರೆ, ಹಿಚ್ ಕಾಕ್ ಮಾಡಿದ ವರ್ಟಿಗೋ (೧೯೫೮) ಚಿತ್ರವನ್ನೇ ಅವನು ಮೂರು ಆಯಾಮದಲ್ಲಿ ಚಿತ್ರಿಸಿ, ಪ್ರದರ್ಶಿಸಿ, ಬಿಟ್ಟಿದ್ದ (ಆ ಕುರಿತು ಅವನಿಗೆ ತಿರಸ್ಕಾರವಿತ್ತು ಎಂದು ಎಲ್ಲೋ ಓದಿದ ನೆನಪು) ಹೀಗಾಗಿ ತಂತ್ರಜ್ಞಾನ ಬಹಳ ಹೊಸತೇನಲ್ಲ. ಇನ್ನು ಅವತಾರ್ ಬಂದಾಗ ಕೇಳಿ ಬಂದ ಇನ್ನೊಂದು ಸುದ್ದಿ ಎಂದರೆ, ಈಗ ಅನೇಕರು ಈ ಮೂರು ಆಯಾಮದ ಚಿತ್ರಗಳ ಕಡೆಗೆ ಹೆಚ್ಚಿನ ಒಲವನ್ನು ತೋರಿಸುತ್ತಿರುವುದು ಇದನ್ನು ಸುಲಭದಲ್ಲಿ ಪೈರಸಿ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ! ಅದೇನೇ ಇರಲಿ. ತಂತ್ರಜ್ಞಾನ ತೀರಾ ಹೊಸತಲ್ಲವಾದ್ದರಿಂದ ಈ ತಂತ್ರಜ್ಞಾನದಲ್ಲಿ ಹೆಚ್ಚಿನ ಸಾಧ್ಯತೆಗಳ ಶೋಧನೆ ಮಾಡಿಲ್ಲ ಎಂಬುದು ನನಗಿರುವ ಆಕ್ಷೇಪ. ಮೂಲತಃ ಮೂರನೇ ಆಯಾಮದ ಬಳಕೆಯ ಸಂದರ್ಭದಲ್ಲಿ ಸಿನೆಮಾ ವ್ಯಾಕರಣ ಮಾರ್ಪಾಡಾಗುವುದು ಅನಿವಾರ್ಯವಾಗಿತ್ತು ಎಂದು ನನ್ನ ಅಭಿಪ್ರಾಯ. ಒಂದು ಸಣ್ಣ ಉದಾಹರಣೆ ಕೊಡುವುದಾದರೆ, ಚಿತ್ರದುದ್ದಕ್ಕೂ ಅಲ್ಲಲ್ಲಿ ಸಬ್ ಟೈಟಲ್ಸ್ ಬರುತ್ತಲ್ಲವೇ? ಅದನ್ನು ಮೇಲಿನ ಪದರದಲ್ಲಿ ತೋರಿಸಿದ್ದಾರೆ. ಅದನ್ನು ಎರಡನೇ ಪದರದಲ್ಲಿ, ಮೂರನೇ ಪದರದಲ್ಲಿ ತೋರಿಸಿದ್ದರೆ ಏನಾಗುತ್ತಿತ್ತು? ಅಥವಾ ಆಳದ ಕಲ್ಪನೆಗೆ ಫ್ರೋರ್ಗೌಂಡಿಂಗ್ ತಂತ್ರವನ್ನು ಸಾಮಾನ್ಯವಾಗಿ ಚಿತ್ರಗಳಲ್ಲಿ ಬಳಸುತ್ತಾರೆ (ಸೂಪರ್ ೧೬ಎಂ.ಎಂ ಚಿತ್ರ ಬಳಸಿದವರಿಗೆ ಇದು ಒಂದು ಮೆಚ್ಚಿನ ತಂತ್ರ) ಇದನ್ನು ಮೂರು ಆಯಾಮದ ಚಿತ್ರಕ್ಕೂ ಬಳಸಿದ್ದರೆ ಅದರಿಂದ ಏನು ವ್ಯತ್ಯಾಸವಾಗಬಹುದಾಗಿತ್ತು? ಇತ್ಯಾಗಿ ಪ್ರಯೋಗಗಳನ್ನು ಮಾಡಬಹುದಿತ್ತು ಚಿತ್ರದಲ್ಲಿ ಎಂದು ನನಗೆ ಅನಿಸಿದ್ದು.

  ಇನ್ನು ಪರಿಸರದ ಕುರಿತಾಗಿರುವ ಚಿತ್ರಗಳ ಬಗ್ಗೆ. ಕುರೋಸಾವಾನ ದರ್ಜು ಉಜಾಲದಂಥಾ (ನೋಡಿ: http://www.imdb.com/title/tt0071411/) ಅನೇಕ ಚಿತ್ರಗಳು ಪರಿಸರ ರಕ್ಷಣೆಯ ಕುರಿತಾಗಿ ಮೂಡಿ ಬಂದ ಅಪೂರ್ವ ಚಿತ್ರಗಳು. ಕನ್ನಡದಲ್ಲೂ ಅನೇಕ ಬಂದಿವೆ. (ನನಗೆ ಅಸ್ಪಷ್ಟವಾಗಿ ನೆನಪಿರುವಂತೆ ‘ಚೆಲುವಿ’ ಎಂದೇನೋ ಒಂದು ಚಿತ್ರ ನಮ್ಮ ಜನಪದ ಕಥೆಯನ್ನು ಇಟ್ಟುಕೊಂಡು ಬಂದಿತ್ತು. ಅದೂ ತುಂಬಾ ಚೆನ್ನಾಗಿದ್ದ ನೆನಪು ನನಗೆ) ಹಾಗಂತ ‘ಅವತಾರ್’ ಈ ಬಗ್ಗೆ ಕೆಟ್ಟ ಚಿತ್ರ ಅಲ್ಲ. ಆದರೆ ಅದು ಕೇವಲ ಒಂದು ಎಳೆಯಾಗಿದೆ ಮತ್ತು ಅದನ್ನು ಸಾಕಷ್ಟು ಸಾಧಾರಣವಾಗಿಯೇ ಬಳಸಿಕೊಳ್ಳಲಾಗಿದೆ.

  ಕಥಾ ಹಂದರವನ್ನು ತೆಗೆದು ಕೊಂಡು ನೋಡಿ. ಕೆಲವು ಸಮೀಕರಣಗಳು ಹೀಗಿವೆ: ಇಂಡಿಪೆಂಡೆನ್ಸ್ ಡೇ ಎಂಬ ಚಿತ್ರ ಬಂತು. ಕಥೆ: ಪರಗ್ರಹದಿಂದ ಒಂದು ನೌಕೆ ಬಂತು. ಅದರಲ್ಲಿ ಬಂದವರು ಭೂಮಿಗೆ ತೊಂದರೆ ಕೊಡಲಾರಂಭಿಸಿದರು. ಅಮೇರಿಕನ್ನರು ಹೋಗಿ ಆ ನೌಕೆಯನ್ನು ಹಾಳು ಮಾಡಿ ಭೂಮಿಯನ್ನು ಉಳಿಸಿದರು. ಜುರಾಸಿಕ್ ಪಾರ್ಕ್ ಕಥೆ: ಡೈನೋಸರಸ್ಗಳು ಒಂದೆಡೆ ಇದ್ದವು. ಅಲ್ಲಿಗೆ ಮನುಷ್ಯ ಹೋದ. ಅಲ್ಲಿ ಡೈನೋಸರಸ್ಗಳು ಅವನನ್ನು ಕೊಲ್ಲಲು ಬಂದವು. ಮನುಷ್ಯ ಅವುಗಳನ್ನು ಸೋಲಿಸಿ ಬಂದ. ಈ ಚಿತ್ರಗಳಂತೆ ಇನ್ನೂ ಅನೇಕ ಚಿತ್ರಗಳನ್ನು ಹೆಸರಿಸುತ್ತಾ ಹೋಗಬಹುದು. ಇಲ್ಲೆಲ್ಲಾ ‘ಹ್ಯೂಮನ್ ಡ್ರಾಮ’ ಅಂತೇನು ಕರೀತೇವೋ ಅದು ರೂಪುಗೊಳ್ಳುವ ವಿಧಾನ ಒಂದೇ ಆಗಿದೆ. ಇನ್ನೇನು ಸತ್ತ ಎಂದಾಗ ಫಕ್ಕನೇ ಏನೋ ಟರ್ನ್ ಬರುವುದು ಇತ್ಯಾದಿ. ಇದೇ ಮಸಾಲೆಯಲ್ಲಿ ಅವತಾರ್ ಕೂಡಾ ಇದೆ ಎನ್ನುವುದನ್ನು ಗಮನಿಸಿದ್ದೀರಾ?

  ಇನ್ನು ಹಣಗಳಿಸುವುದು ನೀವು ಹೇಳಿರುವಂತೆ ಖಂಡಿತಾ ಒಂದು ಕಲೆಯೇ. ಆದರೆ, ನಾನು ಇಲ್ಲಿ ಚರ್ಚಿಸಲು ಹೊರಟಿದ್ದು ಒಂದು ಮಾಧ್ಯಮದ ಸಾಧ್ಯತೆಗಳ ಕುರಿತಾಗಿ. ಚಿತ್ರ ಮಾಧ್ಯಮವಾಗಿ ಈ ಚಿತ್ರ ಏನು ಹೊಸತನ್ನು ಸಾಧಿಸುತ್ತಿದೆ ಎಂದರೆ ನನಗೆ ಏನೂ ಹೊಳೆಯುತ್ತಿಲ್ಲ! ಇದಿಷ್ಟೇ ನನ್ನ ಅಭಿಪ್ರಾಯಗಳು. ಮತ್ತೆ ನೀವು ನನ್ನೊಡನೆ ಜಗಳವಾಡಿತ್ತಿದ್ದೀರಾ ಎಂಬ ಸಂಶಯ ಖಂಡಿತಾ ಬೇಡ… ಪರಸ್ಪರ ಅಭಿಪ್ರಾಯ ಬದಲಾವಣೆ, ಮತ್ತು ಅದರಿಂದ ಪರಸ್ಪರರ ಬೆಳವಣಿಗೆಯಷ್ಟೇ ಇಲ್ಲಿ ನಮ್ಮ ಉದ್ದೇಶ. ಹೀಗಾಗಿ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ ಮತ್ತು ಧನ್ಯವಾದ… ಮತ್ತೆ ಬರೆಯಿರಿ ಚೇತನ್… ಮಾತಾಡೋಣ… ನಾವು ಸೇರಿಕೊಂಡು ಮಾಧ್ಯಮವನ್ನು ಇನ್ನಷ್ಟು ಅರಿಯೋಣ. 🙂

 6. asv3 ಹೇಳುತ್ತಾರೆ:

  I agree all your opinions, the technology is not new, but until somebody proves that you can make money from this technology, technology will not grow. James did the same thing, since money is the pivot and motivating for all developments in the world. This applies for every technology on the board.

 7. Sindhoo (sindhakka) ಹೇಳುತ್ತಾರೆ:

  First time I visited your blog and found a very interesting info. I have not yet watched the movie, reason being simple non availability of tickets.
  Well, after reading this I am enthusiastic to know more above 3D technology usage in movies. Thanks for the wikipedia link you have provided.
  Keep blogging. Movies are one of the areas which I am totally ignorant of. 🙂

 8. ಇಸ್ಮಾಯಿಲ್ ಹೇಳುತ್ತಾರೆ:

  ಪ್ರಿಯ ಅಭಯ
  ನೀವಿಲ್ಲಿ ಮಾಧ್ಯಮದ ಸಾಧ್ಯತೆಗಳ ಕುರಿತು ಚರ್ಚಿಸಿದ್ದೀರಿ. ಈ ಲೇಖನದಲ್ಲಿ ನನ್ನ ಮಟ್ಟಿಗೆ ಬಹಳ ಮುಖ್ಯವಾದ ಅಂಶ ಅದುವೇ. ತ್ರಿ-ಆಯಾಮದ ಚಿತ್ರವೂ ದ್ವಿ-ಆಯಾಮದ ಚಿತ್ರದಂತೆಯೇ ಇದ್ದರೆ ಏನು ಪ್ರಯೋಜನ ಎಂಬ ಪ್ರಶ್ನೆ ಬಹಳ ಸರಿಯಾಗಿದೆ. ದ್ವಿ -ಆಯಾಮದ ಚಲನಚಿತ್ರಗಳೂ ಆರಂಭದ ದಿನಗಳಲ್ಲಿ ಈಗಿನಂತೆ ಇರಲಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ.
  ಇಸ್ಮಾಯಿಲ್

 9. Pramod ಹೇಳುತ್ತಾರೆ:

  3D ಚಿತ್ರ ಅನ್ನೋದೇ ಇದರ ಫೋಕಸ್, ಅದು ಬಿಟ್ರೆ ಕಥೆ ಏನೂ ಇಲ್ಲ. ಗ್ಲೋಬಲ್ ಆಡಿಯನ್ಸ್ ಸಿಗಬೇಕು ಅ೦ತಾ ಕಥೆಯಲ್ಲಿ ಎಲ್ಲಾ ದೇಶಗಳ ಒ೦ದೊ೦ದು ಕ್ಯಾರೆಕ್ಟರ್ ತ೦ದು ಹಾಕಿದ್ದಾನೆ ಕ್ಯಾಮರಾನ್. ಭಾರತ, ಚೀನ ಈಗ್ ಹಾಲಿವುಡ್ ನ ಪೊಟೆನ್ಷಿಯಲ್ ಮಾರ್ಕೆಟ್. ಅದ್ಕೆ ಅ೦ತಹುದೇ ಕ್ಯಾರೆಕ್ಟರ್ ಸೃಷ್ಟಿಸಿದ್ದಾನೆ. ಅವನೊಬ್ಬ ಗ್ರಾ೦ಡ್ ನಿರ್ದೇಶಕ. ಏಲಿಯನ್ಸ್, ರಾ೦ಬೋ, ಟರ್ಮೀನೇಟರ್ ಒಳ್ಳೆಯ ಚಿತ್ರಗಳು. ಟೈಟಾನಿಕ್ ಸಾಧಾರಣ. ಅವತಾರ್ ಕೂಡ ಅಷ್ಟೇ.

 10. shailaja s bhat ಹೇಳುತ್ತಾರೆ:

  ಅಭಯ,
  ಉಳಿದವರ ಅಭಿಪ್ರಾಯಗಳನ್ನು ನೋಡಿ ನನಗೆ ನನ್ನದನ್ನು ವ್ಯಕ್ತಪಡಿಸಬೇಕೆನ್ನಿಸಿತು. ನಾನು ಈ ಸಿನೇಮಾಕ್ಕೆ ಸಾಹಸದಿಂದ ಟಿಕೇಟು ಪಡೆದು ನೋಡಿಬಂದೆ, ನಂತರ ನನಗಾದುದು ನಿರಾಸೆ.ನನಗೆ ಟೈಟಾನಿಕ್ ಸಿನೇಮಾ ಇಷ್ಟವಾಗಿತ್ತು.ಆದರೆ ಅವತಾರ್ ಕಥೆ ಇಷ್ಟವಾಗಿಲ್ಲ, ಮತ್ತು ನನಗನಿಸಿದ್ದು ಅನಾವಶ್ಯಕ ಎನಿಸುವಷ್ಟು ಉದ್ದ, ಕಲಾತ್ಮಕವಾದ ಸಿನೇಮಾ ಎಂದನಿಸಲಿಲ್ಲ, ಹಾಗೂ ಮುಗಿದಾಗ ನನಗೆ ಯೋಚಿಸುವಂತೆಯೂ ಮಾಡಲಿಲ್ಲ,ತಾಂತ್ರಿಕವಾಗಿ ಮುಂದುವರಿದಿರಬಹುದು, ಆದರೆ ಅದು ಜೀವವನ್ನು ಕೊಟ್ಟಿದೆ ಎಂದನಿಸಲಿಲ್ಲ. ತಂತ್ರಗಳ ಬಳಕೆಗೋಸ್ಕರ ಮಾಡಿದಂತನಿಸಿದು ಮತ್ತು ಅದು ನನಗಂತೂ ಕಣ್ಣಿಗೆ ತ್ರಾಸದಾಯಕವನ್ನಿಸಿ ಅವರಿತ್ತ ಕನ್ನಡಕವನ್ನು ಬಳಸಲಿಲ್ಲ, ನಾನು ನೋಡಿದುದು ಐ ಮಾಕ್ಸ್ ಹೈದರಾಬಾದಿನಲ್ಲಿ.(ಪ್ರಸಾದ್ಸ್).ನನ್ನೊಂದಿಗೆ ನೋಡಿದ ಇನ್ನಿಬ್ಬರಲ್ಲಿ ನಾನು ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ನನಗೆ ಇನ್ನೊಮ್ಮೆ ಟಿಕೇಟು ಕೊಟ್ಟರೆ ಖಂಡಿತವಾಗಿಯೂ ನಾನು ತಪ್ಪಿಸಿಕೊಳ್ಳುತ್ತೇನೆ.ಇದು ನನ್ನದೆ ದೋಷವಿರಬಹುದು, ಆದರೆ ಇದು ನನ್ನ ಅಭಿಪ್ರಾಯ.
  ಶೈಲಜ

 11. Shylaja Nag ಹೇಳುತ್ತಾರೆ:

  I haven’t yet watched the film. Interesting analysis.

 12. abhayaftii ಹೇಳುತ್ತಾರೆ:

  Thanks for taking out time to read and react madam. would love to hear your views once you watch the film.

 13. Sharath P S ಹೇಳುತ್ತಾರೆ:

  I saw the movie some times back and was totally in awe for long time because of the experience I had watching it. The story may be like any other hollywood commercial movie or even hindi movie kind(But not as dumb as Transformers.Far better). But the 3-D experience was so overwhelming that everything else didn’t concern me much. It succeeded in transporting me into the world of Pandora within few minutes after it started.
  Story had enough drama to engage me. I think that the main emphasis was on visuals rather than the story. Even if you consider many theories that the movie talks about Iran war, race, identity etc, you will have to admit to the loopholes too. But it really didn’t hamper the movie viewing experience in any way.

  Even the animated movies that have come till now didn’t look as gorgeous as this one . But this isn’t an animation film either. This has to look real. And it succeeded in that also in my view. And 3-D was not ‘in-your-face’ but it feel as if you are standing along with the characters watching the proceedings.

  These are my views on the film . Since this is the first proper 3-D movie I have seen, I can’t comment on your observations on the technicalities used/could have been used.

 14. abhayaftii ಹೇಳುತ್ತಾರೆ:

  Dear Sharat,

  It’s a very honest observation. You are very right. The technology is so aw-inspiring and thus engaging. However, we need to see how this medium can evolve in to a full fledge medium. Thanks for sharing your views Sharat.

  – Abhaya

 15. Sharath P S ಹೇಳುತ್ತಾರೆ:

  Many film makers, reviewers said that cinema will be divided into pre-avatar and post-avatar.I think that it will take a lot of time to see post-avatar film.
  As you say, it can be evolved into much more sophisticated technology in the time to come.
  Cameron is using the same technology in his next- Battle Angel. Hoping to see even better visual style in that one.

 16. ಅಪ್ಪಚ್ಚಿ ಹೇಳುತ್ತಾರೆ:

  ಪ್ರಿಯ ಅಭಯಣ್ಣ,
  ನಿನ್ನ ಲೇಖನ ಲಾಯಕಿದ್ದು!! ಅದಕ್ಕೆ ಬ೦ದ ಟೀಕೆ ಟಿಪ್ಪಣಿಗಳೂ ಚೆನ್ನಾಗಿದೆ. ನನ್ನ ಸಿನೆಮದ ನ೦ಟು ಅಷ್ಟಕಷ್ಟೆ ನಿನಗೆ ಗೊ೦ತಿದ್ದನ್ನೆ? ಆದರೆ ನಿನ್ನ ಲೇಖನ ಅದಕ್ಕೆ ಬ೦ದ ಪ್ರತಿಕ್ರಿಯೆ ನೊಡಿ ಆನೂ ನೋಡಿದರೆ ಅಕ್ಕೋ ಹೇಳಿ ಆನಿಸಿತು. ಹುಡುಕಿದೆ, ಈ ಕೆಳಗಿನ ಯು.ಅರ್.ಲ್ ನೋಡು
  http://www.fandango.com/regalcinemasbridgeportvillagestadium1826imax_aatjc/theaterpage?location=97224

  ಅಲ್ಲಿ ಐಮಾಕ್ಸ್ ೩-ಡಿ ಮತ್ತು ಡಿಜಿಟ್ಲ್ ೩-ಡಿ ಅ೦ತ ಎರಡು ಇದೆ ಕಣೋ ಯಾವುದು ಉತ್ತಮ? ನಿನ್ನ ಲೇಖನದಲ್ಲಿ ಐಮಾಕ್ಸ ಬಗ್ಗೆ ಓದಿದಾಗೆ ಕಾಣಲಿಲ್ಲ. ಮತ್ತೆ ಇನ್ನೊ೦ದು ಪ್ರಶ್ನೆ ತ್ರಿ ಮೂರ್ಖರು (ಅತ್ರಿ ಸಹೋದರರು ಅಲ್ಲ, ಜಾಗ್ರತೆ!!) ಎ೦ಬ ಸಿನೆಮ ನಮ್ಮ ಸ್ಲಮ್ ಡಾಗನ ಕೀರ್ತಿ ಪ್ರಶ೦ಸೆ ಗಳಿಸುತ್ತಿದೆ. ಮಾಮೂಲಿ ಟಾಕೀಸ್ ನಲ್ಲೂ ತೋರಿಸುತ್ತಿದ್ದಾರೆ. ಅದರ ಬಗ್ಗೆ ನಿನ್ನ ಅಭಿಪ್ರಾಯವೇನು?
  ಇನ್ನೊ೦ದು ಪ್ರಶ್ನೆ. ಕ್ರಿಯೇಟಿವ್ ತಿಯೇಟರ್ ಅ೦ತ ಬೆ೦ಗಳೂರಿನಲ್ಲಿ ಒ೦ದು ಊ೦ಟು ಅವರು ನಮ್ಮಲ್ಲಿಗೆ ಬ೦ದು ಹಾಸ್ಯನಾಟಕ ಮಾಡುತ್ತಾರ೦ತೆ. ನಿನಗೆ ಇಲ್ಲಾ ರಶ್ಮಿಗೆ ಅವರ ಬಗ್ಗೆ, ಅವರ ನಾಟಕದ ಬಗ್ಗೆ ಎನಾದರು ಅಭಿಪ್ರಾಯ ಇದ್ದರೆ ಅದನ್ನೂ ಬರಿ ದಾನೆ?
  ಮತ್ತೆ ಕಾ೦ಬ
  ಆಪ್ಪಚ್ಚಿ

 17. abhayaftii ಹೇಳುತ್ತಾರೆ:

  ಪ್ರಿಯ ಆನಂದಪ್ಪಚ್ಚಿ,

  ಈ ತ್ರಿ ಆಯಾಮದ ಚಿತ್ರವನ್ನು ರೂಪಿಸುವಲ್ಲಿ ಎರಡು ವಿಧಾನವಿದೆ. ಈ ಕುರಿತು ವಿಕಿ ಪೀಡಿಯಾದ ಒಂದು ಲೇಖನವನ್ನು ನಕಲಿಸಿ ಇಲ್ಲಿ ಅಂಟಿಸಿದ್ದೇನೆ.. ನೋಡಿ.. ಸ್ವಪ್ಟವಾಗಿ ವಿವರಣೆ ಇದೆ ಆ ಕುರಿತು. ಮತ್ತೆ ನಾನು ಐ-ಮ್ಯಾಕ್ಸ್ ತ್ರೀಡಿ ಚಿತ್ರ ನೋಡಿಲ್ಲ. ಹಾಗಾಗಿ ಯಾವುದು ಒಳ್ಳೆಯದು ಎನ್ನುವುದನ್ನು ತಿಳಿಸುವುದು ನನಗೆ ಸ್ವಲ್ಪ ಕಷ್ಟ. ನೀವು ನೋಡಿದರೆ ನನಗೆ ತಿಳಿಸುತ್ತೀರಾ? ಈಗ ವಿಕಿ ಪೀಡಿಯಾ ವಿವರಣೆ: “There are two methods to creating the 3D illusion in the theatre. The first involves polarization. During projection, the left and right eye images are linearly polarized perpendicular to one another (or right-hand and left-hand circular polarization is used) as they are projected onto the IMAX screen. By wearing special eyeglasses with lenses polarized in their respective directions to match the projection, the left eye image can be viewed only by the left eye since the polarization of the left lens will cancel out that of the right eye projection, and the right eye image can be viewed only by the right eye since the polarization of the right lens will cancel out that of the left eye projection. Another method for 3D projection involves LCD shutter glasses. These glasses contain LCD panels which are synchronised to the projector which alternates rapidly at 96 frames per second between displaying the left and right images which are momentarily viewed by the appropriate eye by allowing that eye’s panel to become transparent while the other remains opaque. While the panels within these active-shutter 3D glasses alternate at 96 frames per second, the actual film is displayed at 24 frames per second.”

  ಮತ್ತೆ ಮೂರು ಮುಠಾಳರ ಕಥೆಯ ಕುರಿತು ಸಧ್ಯದಲ್ಲೇ ಬರೆಯುತ್ತೇನೆ. ಬಹುಷಃ ಮುಂದಿನವಾರಕ್ಕೆ ಬರೆದೇನು. ಕ್ರಿಯೇಟಿವ್ ಥ್ಯೇಟರ್ ಬೆಂಗಳೂರಲ್ಲಿ ರಂಗಶಂಕರದಲ್ಲಿ ಬಹಳ ನಾಟಕ ಮಾಡಿದ್ದಾರೆ. ಆದರೆ ನನಗೆ ಅಷ್ಟು ನೋಡಲಾಗಿಲ್ಲ. ಅವರ ಕುರಿತು ಒಳ್ಳೆ ಅಭಿಪ್ರಾಯ ಕೇಳಿದ್ದೇನೆ.

  – ಅಭಯ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s