ಪ್ಯಾಕೇಜ್ ಟೂರ್!


ಕೂತು ಕೆಲಸ ಮಾಡಿ ಹೊಟ್ಟೆ ಬರ್ತಾ ಇದೆ. ಕಂಪ್ಯೂಟರ್ ಮಾನಿಟರಿಗೆ ನನ್ನ ಮುಖ ಕಂಡು ಬೇಜಾರಾಗ್ತಿದೆ. ಮದುವೆಯಾಗಿ ಒಂದು ವರುಷವಾದರೂ ಹೆಂಡತಿಯೊಡನೆ ಎಲ್ಲೂ ಸುತ್ತಾಡಿಲ್ಲ. ಹಿಡಿದ ಕೆಲಸ ಮನಸಿಗಿಷ್ಟ ಇಲ್ಲ. ಮನಸಿಗಿಷ್ಟವಾಗೋ ಕೆಲಸಕ್ಕೆ ನಾನಿಷ್ಟ ಇಲ್ಲ ಎಂದಾಗಿ ತಲೆ ಹಾಳಾಗ್ತಿದೆ. ಹೀಗೆಲ್ಲಾ ಕಾರಣಗಳಿಂದಾಗಿ ಅಮೇರಿಕನ್ನರ ಸ್ಟೈಲಿನಲ್ಲಿ let me go one vacation! ಅಂತ ಯೋಚನೆ ಮಾಡಿದೆ. ಪತ್ನಿ ರಶ್ಮಿ ಸದಾ ಉತ್ಸಾಹದ ಬುಗ್ಗೆ. ಕೂಡಲೇ ತಯಾರಿ ನಡೆಸಿದೆವು. ಎಲ್ಲಿಗೆ ಹೋಗೋಣ? ಮೂನಾರಿಗೆ ಹೋಗೋಣ. ಹೇಗೆ ಹೋಗೋಣ? ಪ್ಯಾಕೇಜ್ ಟೂರ್ ಮಾಡೋಣ. ಯಾವಾಗಲೂ ಚಿತ್ರೀಕರಣಕ್ಕೆಂದೇ ಚಿತ್ರೀಕರಣದ ವ್ಯವಸ್ಥೆಯೊಳಗೆ ಬೇಕಾದಷ್ಟು ತಿರುಗಾಡಿದ್ದ ನನಗೆ ಈ ಪ್ಯಾಕೇಜ್ ಟೂರ್ ಹೇಗಿರುತ್ತೆ ಎಂದು ನೋಡಿಯೇ ಬಿಡೋಣ ಎನಿಸಿತು. ಸರಿ… ಮತ್ತೆ ಕಂಪ್ಯೂಟರ್ ಕೀಲಿ ಕುಟ್ಟಿ ಫೋನ್ ರಿಂಗಣಾಯಿಸಿ ಮೂನಾರಿಗೆ ಟೂರ್ ಬುಕ್ ಮಾಡಿಸಿಯೇ ಬಿಟ್ಟೆವು. ರೀ… ಬ್ಲಾಗ್ ಒಂದೇ ರೀತಿ ಬರೆದು ಬೇಸರ ಆಗಿದ್ದಕ್ಕೆ ಈ ಶೈಲಿಯಲ್ಲಿ ಬರೀತಿದ್ದೇನೆ ಅಷ್ಟೇ ಹೊರತು ಮುಂದೆ ಯಾವುದೇ ಒಂದು ಜೋಕಿಗಾಗಿ ಕಾಯ್ಬೇಡಿ… This is a serious travelogue.

[Click the image to view it clearly]

ಬೆಂಗಳೂರಿನಿಂದ ಸರಕಾರಿ ವಾಲುವ ಬಸ್ಸ್ (Volvo) ಹಿಡಿದು ಕೊಚ್ಚಿನ್ನಿಗೆ ಹೊರಟೆವು. ಅಲ್ಲಿ ಮುಂದಿನ ಚಿತ್ರಕ್ಕೆ ಸಂಬಂಧಿಸಿದ ಒಂದು ದಿನದ ಕೆಲಸ ಇತ್ತು. ಅದನ್ನು ಮುಗಿಸಿ ಮರುದಿನದಿಂದ ನಮ್ಮ ಪ್ರಯಾಣ ಆರಂಭ ಎಂದು ನಿಶ್ಚಯವಾಗಿತ್ತು. ಸರಿ ಕೊಚ್ಚಿನ್ನಿಗೆ ತಲುಪಿ ಸೆನೆಟ್ ಎಂಬ ಹೋಟೇಲಿನಲ್ಲಿ ಉಳಿದೆವು. ಸಾಕಷ್ಟು ಚೆನ್ನಾಗಿತ್ತು ಆ ಹೋಟೇಲ್. ರಾತ್ರಿ ಊಟಕ್ಕೆಂದು ಅವರ ಊಟದ ಮನೆಗೆ ಹೋದರೆ, ವಾಃ! ಬಹಳ ಸುಂದರವಾದ ಪರಿಸರ. ಅಲ್ಲಿ ಮೂರು ಜನ ಸಂಗೀತಕಾರರಿದ್ದಾರೆ. ಉದ್ದ ಜಡೆಯ ಗಂಡಸೊಬ್ಬ ತಲೆದೂಗುತ್ತಾ ತಬಲಾ ತಲೆ ಮೊಟಕುತ್ತಿದ್ದರೆ, ಗಿಡ್ಡನೊಬ್ಬ ಹಾರ್ಮೋನಿಯಂ ಕೂಗಿಸುತ್ತಿದ್ದ. ಮತ್ತೊಬ್ಬ ಗಂಭೀರವದನನಾಗಿ ಅಪ್ಪಟ ಮಲೆಯಾಳದಲ್ಲಿ ಹಿಂದೀ ಗೀತೆಗಳನ್ನು ಹಾಡಿ ವಿಚಿತ್ರ ಅನುಭವ ಕೊಡುತ್ತಿದ್ದ. “ಥು ಮೆ ಬನ ಆಯಾ ಗಯಾ ಹೈ ಮೈ ರೈಲೆಯೆ…” ಎಂದೆಲ್ಲಾ ಹಾಡುತ್ತಿದ್ದರೆ ಮೇಜಿನ ಮೇಲೆ ವೆಜ್ ಹಾಂಡಿ ಹೆಸರಿನಲ್ಲಿ ಇನ್ನೇನೋ ಒಂದು ಬಂದು ಬಿದ್ದಿತ್ತು. ಅಂತೂ ಇಂತೂ ಊಟ ಮುಗಿಸಿ ಕೋಣೆಗೆ ಬಂದು ಮಲಗಿದೆವು ಅನ್ನಿ… ಮರುದಿನ ನಮ್ಮ ಮೂನಾರ್ ಪಯಣ ಆರಂಭವಾಗಲಿತ್ತು.

ನಾನೂ ರಶ್ಮಿ ಸಾಕಷ್ಟು ಹುರುಪಿನಿಂದ ಬೆಳಗಿನ ತಿಂಡಿ ಮುಗಿಸಿದೆವು. ಬಾಬು ನಮ್ಮ ವಾಹನ ಚಾಲಕ. ಹತ್ತು ವರುಷ ಮುಂಬೈ ಪೂನೆ ಸರಕಾರಿ ಬಸ್ಸ್ ಓಡಿಸಿ ಅನುಭವ ಇದ್ದುದರಿಂದ ಬಾಬುಗೆ ಮುಂಬೈ ಹಿಂದಿ ಬರುತ್ತಿತ್ತು. ಹಾಗಾಗಿ ಅವನೊಂದಿಗೆ ವಾರ್ತಾಲಾಪ ಸುಲಭವಾಯಿತು. ಹೋ! ನಿಮ್ಮ ಹನಿಮೂನ್ ಟ್ರೀಪ್ಪಾ.. ಅಚ್ಚಾ ಕಿಯಾ ಸಾಬ್ ಎಂದು ಕಾರು ಓಡಿಸಿದ ಬಾಬು. ಮದುವೆಯಾಗಿ ಒಂದು ವರುಷಕ್ಕೂ ಹೆಚ್ಚು ಸಮಯವಾಗಿದ್ದರೂ ಹನಿಮೂನ್ ಪಯಣ ಎಂದಾಗ ಸಿಗುವ ವಿಶೇಷ ಸವಲತ್ತೇನಾದರೂ ಇದ್ದರೆ ಸಿಗಲಿ ಎಂದು ನಾವೂ ಸುಮ್ಮನಾದೆವು. ಮುಂದಿನ ಎರಡು ರಾತ್ರಿ ಮೂರು ಹಗಲು ನಮ್ಮೆದುರು ಕಾಯುತ್ತಿತ್ತು. ಮೂನಾರಿಗೆ ಕೊಚ್ಚಿನ್ನಿನಿಂದ ಕಾರಿನಲ್ಲಿ ಸುಮಾರು ಐದು ಗಂಟೆಯ ಪ್ರಯಾಣ ( ಸುಮಾರು ೧೫೦ ಕಿ.ಮಿ) ಉದ್ದಕ್ಕೂ ವಿಶೇಷ ಎನ್ನುವಂತದ್ದೇನೂ ನೋಡಲು ಸಿಗಲಿಲ್ಲ. ಮೂನಾರಿಗೆ ಹತ್ತಿರವಾಗುತ್ತಿದ್ದಂತೆಯೇ ದಾರಿ ಬದಿಯ ಒಂದು ಜಲಪಾತದ ಬಳಿ ಕಾರು ನಿಲ್ಲಿಸಿ ಬಾಬು ಫೋಷಿಸಿದ, “ಸಾರ್.. ಫಾಲ್ಸ್” ಕಾರು ನಿಲ್ಲಿಸಿದ ಕ್ರಮಕ್ಕೆ ನಾವು ಇಳಿಯ ಬೇಕು ಎನ್ನುವ ಸೂಚನೆ ಖಚಿತವಾಗಿತ್ತು. ಹೊಸದಾಗಿ ಕೊಂಡಿದ್ದ ಕ್ಯಾಮರಾ (Cannon 500D) ಪ್ರಯೋಗಕ್ಕೆ ನಾನೂ ಕಾತುರನಾಗಿದ್ದೆ. ರಶ್ಮಿಯನ್ನು ಜಲಪಾತದ ಬಳಿ ನಿಲ್ಲಿಸಿ ಫೋಟೋ ತೆಗೆದೆ. ಆದರೆ ಚಾರ್ಮಾಡಿಯಲ್ಲೋ ಬಿಸಿಲೆಯಲ್ಲೋ ಹೋಗುವಾಗ ಕಾಣುವ ದಾರಿ ಬದಿಯ ಜಲಪಾತದಂತೆಯೇ ಇತ್ತು ಇದು. ವಿಶೇಷವೇನೂ ಇರಲಿಲ್ಲ ಬಿಡಿ.

ಮುಂದೆ ನಮ್ಮ ಕಾರು ನಿಂತಿದ್ದು. ಒಂದು ಎಲಿಫೆಂಟ್ ಸಫಾರಿ ಬಳಿ. ‘ಎಲಿಫೆಂಟ್ ಸಫಾರಿ’ ಎಂದು ಹೆಸರಿದ್ದರೂ ಸಫಾರಿ ಮಾಡುವುದು ನಾವು ಆನೆಯ ಮೇಲೆ. ಆನೆ ಪಾಪ ವಾಹನ ಅಷ್ಟೇ. ಅದೂ ಅಲ್ಲದೇ ಆನೆಯ ಮೈ ಏರಿದ್ದಕ್ಕೆ ಭಾರೀ ದಂಡ (ಶುಲ್ಕ) ಇದ್ದಿದ್ದರಿಂದ ನಾವು ಆ ಆನೆಯನ್ನು ನಮ್ಮನ್ನು ಎತ್ತಿ ನಡೆಯುವ ಕಷ್ಟದಿಂದ ಪಾರು ಮಾಡಿದೆವು. ಆನೆ ಕಡೆಗಣ್ಣಲ್ಲಿ ನನ್ನ ನೋಡಿ ನಕ್ಕಾಗ ಅದು ಕೃತಜ್ಞತೆಯಿಂದಲೋ ಅಥವಾ ನಾನು ಹತ್ತು ವರುಷದವನಾಗಿದ್ದಾಗ ಮೈಸೂರು ಝೂವಿನಲ್ಲಿ ಕಂಡ ಆನೆ ಇದುವೇ ಇರಬಹುದೇ ಎಂಬ ಸಂಶಯ ಕಾಡಿತು. ಎಷ್ಟಿದ್ದರೂ ಆನೆಯ ನೆನಪಿನ ಬಗ್ಗೆ ಕಥೆಗಳೇ ಇವೆಯಲ್ಲ.

ಅದಂತಿರಲಿ. ಮುಂದೆ ಮೂನಾರ್ ಇನ್ನೇನು ತಲುಪಿದೆವು ಎಂದಾಗ ಬಲ ಬದಿಗೆ ಒಂದು ಸ್ಪೈಸ್ ಗಾರ್ಡನ್ ಎದುರು ಬಾಬು ಬ್ರೇಕ್ ಹಾಕಿದ. ಸರಿ. ಮೂನಾರ್ ಮಲಾಸಾ ತೋಟಗಳ ಬಗ್ಗೆ ಸಾಕಷ್ಟು ಕೇಳಿದ್ದರಿಂದ ನೋಡೋಣ ಎಂದು ರಶ್ಮಿಯೂ ನಾನೂ ಹೊರಟೆವು. ಅಲ್ಲಿದ್ದ ಅನೇಕ ಮೂಗುರಿಸುವ ಸಂಭಾರ ಗಿಡಗಳು ಪರಿಚಿತವೇ ಆಗಿದ್ದರೂ, ವ್ಯವಸ್ಥಿತವಾಗಿ ಜೋಡಿಸಿಟ್ಟು ತೋರಿಸಿದ ಅವುಗಳೂ ಇನ್ನೂ ಕೆಲವೂ ನೋಡಲು ಅಂದವಾಗಿದ್ದವು. ನಮ್ಮ ಜೊತೆಗೆ ಆಫ್ರಿಕಾದಿಂದ ಬಂದಿದ್ದ ವೃದ್ಧ ದಂಪತಿಗಳೂ ಇದ್ದರು. ಆ ಗಿಡ, ಈ ಗಿಡ ಮಧ್ಯೆದಲ್ಲಿ ಒಂದಿಷ್ಟು ಫೋಟೋ ಹಿಡಿದು, ನೋಡಿ. ಮತ್ತೆ ಮೂನಾರ್ ಕಡೆಗೆ ಕಾರ್ ಹತ್ತಿದೆವು.

ಮೂನಾರಿಗೆ ಹೋಗಿ ಮೂರುಗಂಟೆಗೆ ಊಟ ಮಾಡಿ ಅಲ್ಲಿಂದ ನೇರ ಹೋದದ್ದು ‘ರಾಜ ಮಲ’ ನೋಡಲಿಕ್ಕೆ. ಅಯ್ಯೋ! (ರಾಜರ ಮಲವನ್ನೂ ಪ್ರದರ್ಶನಕ್ಕಿಟ್ಟಿದ್ದಾರಾ ಎಂದು ಸಂಶಯ ಬೇಡ.) ಅಲ್ಲಿ ನೀಲಗಿರಿ ಥಾರ್ ಎಂಬ ಬೆಟ್ಟದ ಆಡು ಪ್ರಸಿದ್ಧ. ಅದನ್ನು ನೋಡಲು ಕರೆದೊಯ್ದರು. ಇರವಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿ ವಾಸವಾಗಿರುವ ಬೆಟ್ಟದ ಆಡುಗಳು ನೀಲಗಿರಿ ಥಾರ್. ಅವು ಮೇಯ್ದುಕೊಂಡು ಇಂದು ಎಲ್ಲಿರುತ್ತವೆಯೋ! ನಮಗೆ ನೋಡಲು ಸಿಗಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿಕೊಳ್ಳುತ್ತಿದ್ದೆ. ನಮ್ಮ ಕಾರು ನಿಂತ ಜಾಗದಿಂದ ರಾಷ್ಟ್ರೀಯ ಉದ್ಯಾನದವರದ್ದೇ ಒಂದು ವಾಹನದಲ್ಲಿ ಸುಮಾರು ಮೂರು – ನಾಲ್ಕು ಕಿಲೋಮೀಟರ್ ಕರೆದೊಯ್ಯುತ್ತಾರೆ. ಅಲ್ಲಿ ಹೋದ ಮೇಲೆ ವಾಹನ ಸಂಚಾರ ನಿಶಿದ್ಧ. ಸ್ವಚ್ಛವಾಗಿಟ್ಟಿರುವ ಕಾಡಿನಲ್ಲಿ ಒಂದು ಕಿಲೋ ಮೀಟರ್ ನಡಿಗೆಗೆ ಅವಕಾಶ ಇಲ್ಲಿಂದ. ಅಲ್ಲಿ ಆಡು ಸಿಗಬಹುದು ಎಂಬ ಆಸೆ. ಸಾಕಷ್ಟು ಪ್ರವಾಸಿಗರು ಬಂದು ಹೋಗುತ್ತಿದ್ದರೂ, ಸಾಕಷ್ಟು ಸ್ವಚ್ಛವಾಗಿಯೇ ಇಟ್ಟಿದ್ದರು ಈ ಸ್ಥಳವನ್ನು. ನಾನು ಕೈಯಲ್ಲಿ ಕ್ಯಾಮರಾ ಹಿಡಿದು ಯಾವುದೇ ಕ್ಷಣದಲ್ಲೇ ಆದರೂ ನೀಲಗಿರಿ ಥಾರ್ ಕಂಡರೆ ಫೋಟೋ ಹಿಡಿಯುವ ಉತ್ಸಾಹದಲ್ಲಿದ್ದೆ.

ಅಷ್ಟರಲ್ಲಿ ನನ್ನಿಂದ ಸುಮಾರು ಇನ್ನೂರಡಿ ದೂರದಲ್ಲಿ ನೀಲಗಿರಿ ಥಾರ್ ಕಾಣಿಸಿಕೊಂಡಿತು!!! ಅದು ಬೆಟ್ಟದಲ್ಲಿ ನನ್ನಿಂದ ಎತ್ತರದ ಸ್ಥಳದಲ್ಲಿ ನಿಂತಿತ್ತು. ಸರಿ! ನಾನು ಬಂದದ್ದು ಸಾರ್ಥಕವಾಯಿತು ಎಂದು ಫೋಟೋ ಹೊಡೆದೆ. ರಶ್ಮಿ ನಾನು ಇಬ್ಬರೂ ಅಲ್ಲಿ ನಿಂತು ಅದನ್ನೇ ನೋಡುತ್ತಾ ಸ್ವಲ್ಪ ಹೊತ್ತು ಕಳೆದೆವು. ಭಾರೀ ಸಂತೋಷವಾಯಿತು. ನಮ್ಮ ಕುದುರೇ ಮುಖದಲ್ಲಿ ಮನುಷ್ಯರ ಮುಖ ಕಂಡರೆ ಸಾಕು ಹರಿದು ಬಿದ್ದು ಓಡುವ ಕಾಟಿಗಳಂತಲ್ಲ ಇವು ಎಂದು ಸಂತೋಷ ಪಟ್ಟೆವು. ಸರಿ ಮುಂದೆ ಹೆಜ್ಜೆ ಹಾಕಿದೆವು. ತುಸು ದೂರದಲ್ಲಿ ನೀಲಗಿರಿ ಥಾರ್ ಮಂದೆ ಮಂದೆಯಾಗಿ ದಾರಿಯಲ್ಲೇ ನಮ್ಮೆಡೆ ನಡೆದು ಬಂದಾಗ ಮಾತ್ರ ನಮ್ಮ ಕಲ್ಪನೆಗಳಿಗೆ ತೂತ ಬಿದ್ದದ್ದು. ಅವು ನಮ್ಮ ಕಾಲ ಬುಡಕ್ಕೇ ಬಂದು ಮೂಸಿ ನೋಡಿ ಹೋದವು. ಸಾಕಷ್ಟು ಚಿತ್ರ ಹೊಡೆದೆ. ಆದರೆ ಅದೇನೋ… ಅವು ಇಷ್ಟು ಸರಳವಾಗಿ ಕೈಗೆ ಸಿಕ್ಕಿದ್ದರಿಂದ ಅದರ ಬಗ್ಗೆ ಹೆಚ್ಚೇನೂ ಗೌರವವೇ ಬರಲಿಲ್ಲ! ಆದರೆ ಅಲ್ಲಿನ ಸ್ವಚ್ಛತೆ, ಶಿಸ್ತು ನೋಡಿ ಸಂತೋಷದಿಂದಲೇ ರಾಜಮಲದಿಂದ ಹೊರಟೆವು. ಅಲ್ಲಿಂದ ನಾವು ಹೋಗಿದ್ದು ಸೀದಾ ಕಾಶ್ಮೀರಂ ಎಂಬ ನರಕಕ್ಕೆ!

ಪ್ಯಾಕೇಜ್ ಡೀಲ್ ಮಾಡುವ ಸಂದರ್ಭದಲ್ಲಿ ಅತ್ಯಂತ ಕಡಿಮೆ ಎಂದರೆ ಗುಣಮಟ್ಟದ ಕಡಿತ ಎನ್ನುವುದರ ಅರಿವಿಗೆ ಬಂದದ್ದು ನಾವು ಇರಬೇಕಾಗಿದ್ದ ಹೋಟೇಲ್ ಪ್ರವೇಶಿಸಿದಾಗಲೇ. ಲೆಕ್ಕಕ್ಕೆ ಹೋಂ ಸ್ಟೇ. ಆದರೆ ಕೋಣೆ ವಾಸನೆ ಹೊಡೆಯುತ್ತಿತ್ತು. ಸ್ನಾನದ ಮನೆಯಲ್ಲಿ ನೀರು ಸೋರುತ್ತಿತ್ತು. ಇಬ್ಬರು ವ್ಯಕ್ತಿಗಳಿದ್ದ ಕೋಣೆಗೆ ಒಂದೇ ಹೊದಿಕೆ ಇತ್ಯಾದಿ ಇತ್ಯಾದಿ ಸಮಸ್ಯಾ ಸಾಗರ ಅದು. ಆದರೆ ಕೋಣೆಯಲ್ಲಿ ಕಾಲು ಚಾಚಿ ಮಲಗಲು ಅಲ್ಲ ನಾವಿಲ್ಲಿಗೆ ಬಂದದ್ದು ನಾಳೆಗೆ ತಯಾರಾಗೋಣ ಎಂದು ಕಾಶ್ಮೀರ ಪುರನಿವಾಸಿ ಬೇಯಿಸಿ ಹಾಕಿದ ಊಟವೆಂಬ ವಸ್ತುವನ್ನು ಗಂಟಲಿಗಿಳಿಸಿ ಮಲಗಿದೆವು. ಗುಡ್ ನೈಟ್! ಇಂದಿದ್ದು ಇಂದಿಗೆ… ಉಳಿದದ್ದು ಮುಂದಿನ ಬಾರಿಗೆ!

[Click the image to view it clearly]

This entry was posted in Daily Blog, Society, Travelogue. Bookmark the permalink.

6 Responses to ಪ್ಯಾಕೇಜ್ ಟೂರ್!

 1. ಅಶೋಕವರ್ಧನ ಜಿ.ಎನ್ ಹೇಳುತ್ತಾರೆ:

  ಪ್ರಿಯ ಅಭಯಾ
  ನಿನಗ್ಗೊತ್ತು ನಾವೂ ಮೂನಾರಿಗೆ ಹೋಗಿದ್ದೆವು (ಸುಮಾರು ೧೯೮೪). ಆ ಕಾಲಕ್ಕೆ ಪ್ರವಾಸಿಗಳ ಬಾಯಲ್ಲಿ ಅಪೂರ್ವಕ್ಕೆ ಮೂನಾರ್ ಹೆಸರು ಕೇಳಿಬರುತ್ತಿತ್ತು. ಅಲ್ಲಿ ಪ್ರವಾಸಿ ವ್ಯವಸ್ಥೆ ಬಿಟ್ಟು ಎಲ್ಲಾ ವ್ಯವಸ್ಥೆಯೂ ಟಾಟಾ ಟೀ ಕೃಪೆಯಲ್ಲಿತ್ತು. ಆಗ ನಾವು ದಕ್ಷಿಣ ಭಾರತದ ಎರಡನೇ ಉನ್ನತ ಶಿಖರವಾದ ಅಣೈಮುಡಿಯನ್ನು ಹತ್ತಿದ್ದೆವು. (ಅದು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಎರುವಿಮಲ ರಾಷ್ಟ್ರೀಯ ಉದ್ಯಾನವನದೊಳಗೇ ಇತ್ತು) ನೀಲಗಿರಿ ಥಾರ್ ಆಗ ನಿಜಕ್ಕೂ ವನ್ಯವಾಗಿತ್ತು; ಅದರ ಒಂದು ಝಲಕ್ ನಮಗೆ ತೀರಾ ದೂರದಿಂದ ಸಿಕ್ಕಿದ್ದು ನೆನಪಿಗೆ ಬರುತ್ತಿದೆ. ಹೀಗೇ ನಿನ್ನ ಪ್ರವಾಸಕಥನದುದ್ದಕ್ಕೆ ನನ್ನ ನೆನಪಿನ ಯಾತ್ರೆ ಅವಶ್ಯ ಆಗುತ್ತಿದೆ; THANKS. ಆದರೆ ಬೆಟ್ಟದಾಡುಗಳು ಪಳಗಿರುವುದು, ಹೋಂ ಸ್ಟೇ ಮಾತ್ರವಲ್ಲ, ಕೊಳಚೆ ಸೇವೆಯೂ ಬಂದಿರುವ ಸೂಚನೆಗಳು ನೋಡಿದರೆ ಮುಂದಿನ ನಿನ್ನ ಕಂತುಗಳಿಂದ (?) ನನ್ನನುಭವ ದೂರವುಳಿಯುವುದು ಖಂಡಿತ. ಏನೇ ಇರಲಿ ಕಾದಿರುತ್ತೇನೆ.
  ನಿನ್ನಪ್ಪ

 2. Sharath P S ಹೇಳುತ್ತಾರೆ:

  “ಹಿಡಿದ ಕೆಲಸ ಮನಸಿಗಿಷ್ಟ ಇಲ್ಲ. ಮನಸಿಗಿಷ್ಟವಾಗೋ ಕೆಲಸಕ್ಕೆ ನಾನಿಷ್ಟ ಇಲ್ಲ ಎಂದಾಗಿ ತಲೆ ಹಾಳಾಗ್ತಿದೆ.” – ಇದು ಅರ್ಥನೇ ಆಗ್ತಿಲ್ವಲ್ಲ ಸಾರ್ !

 3. ಶೆಟ್ಟರು (Shettaru) ಹೇಳುತ್ತಾರೆ:

  Munduvaresi….

  nimma anubhavada mUseyalli nAnu package tour confirm madla illa cancel madla deside madtini

  -shettaru

 4. Pallavi ಹೇಳುತ್ತಾರೆ:

  ಆಭಯ,
  ಬರಹ ಬಹಳ ಸ್ವಾರಸ್ಯಕರವಾಗಿದೆ. ಮುನ್ದಿನ ಕನ್ತಿಗಾಗಿ ಕಾಯುತ್ತಿದ್ದೆನೆ.

 5. sharanu ಹೇಳುತ್ತಾರೆ:

  sir
  pravasa kathana channagide. mundina kantu hegide kaayuve..

 6. sathwik rao ಹೇಳುತ್ತಾರೆ:

  biss!sakkataagide

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s