ಚಿತ್ರ ಧ್ವನಿ ಎಂಬ ಹೆಸರಿನಲ್ಲಿ ಬಹಳ ಹಿಂದೆ ಚಿತ್ರ ತಂತ್ರಜ್ಞಾನದ ಕುರಿತಾಗಿ ಒಂದಷ್ಟು ಬರೆದಿದ್ದೆ. ಈಗ ಮತ್ತೆ ಒಂದಿಷ್ಟು ಮುಂದುವರೆಸೋಣ ಎಂದು ಭಾವಿಸಿದ್ದೇನೆ. ಸಂಕಲನದ ಕುರಿತಾಗಿ ಬರವಣಿಗೆ ಆರಂಭಿಸಬೇಕು ಎಂದು ಇದ್ದಾಗಲೇ, ನನ್ನ ಕಾಲೇಜಿನ ಜೂನಿಯರ್ ಒಬ್ಬಾಕೆ ಧ್ವನಿ ಸಂಯೋಜನೆಯ ಕುರಿತಾಗಿ ಏನೋ ಪ್ರಶ್ನೆ ಕೇಳಿದಳು. ಅದನ್ನು ಉತ್ತರಿಸಲೆಂದು ಧ್ವನಿ ಸಂಯೋಜನೆಯ ಕುರಿತಾಗಿ ಚರ್ಚಿಸಲಾರಂಭಿಸಿದೆವು. ಧ್ವನಿ ಸಂಯೋಜನೆ ಎಂದರೇನು? ಇದರ ಬಗ್ಗೆ ನಾವೀಗಾಗಲೇ ಒಂದಷ್ಟು ಮಾತನಾಡಿದ್ದೇವೆ. ಸಾಧ್ಯ ಧ್ವನಿಗಳು ಹಾಗೂ ಸಾಧಿತ ಧ್ವನಿಗಳ ಮಿಶ್ರಣದಿಂದ ತಯಾರಿಸುವ ಒಂದು ಧ್ವನಿಯ ಲೋಕವೇ ಧ್ವನಿ ಸಂಯೋಜನೆ ಎನ್ನುವುದನ್ನು ನಾವೀಗಾಗಲೇ ಮಾತನಾಡಿರುವುದು. ಇದು ಇಷ್ಟೆಯೇ? ಅಲ್ಲ! ಸಿನೆಮಾದಲ್ಲಿ ಬಳಸುವ ಭಾಷೆ ಧ್ವನಿ ಸಂಯೋಜನೆಯ ಭಾಗವೇ? ಇದು ಸಂಕಲನಕ್ಕೆ ಮೊದಲು ಧ್ವನಿಯ ಕುರಿತಾಗಿ ಮತ್ತೊಂದಿಷ್ಟು ಯೋಚನೆಗೆ ಹರಿಸಿತು…
ಯಾವುದೇ ಸಿನೆಮಾದಲ್ಲೂ ಸಿನೆಮಾ ಭಾಷೆಯಲ್ಲದೆ ಅದರಲ್ಲಿನ ಜನರು ಆಡುವ ಒಂದು ಭಾಷೆಯೂ ಒಂದಿರುತ್ತದಲ್ಲಾ. ಕುಂದಾಪುರದ ಕನ್ನಡ, ಧಾರವಾಡ ಕನ್ನಡ, ಮಂಗಳೂರು ಕನ್ನಡ, ಬೆಂಗಳೂರು ಕನ್ನಡ, ಮಂಡ್ಯ ಕನ್ನಡ ಹೀಗೆ ಹೆಜ್ಜೆ ಹೆಜ್ಜೆಗೂ ನಮ್ಮಲ್ಲಿಯೇ ಅನೇಕ ವಿಧದ ಕನ್ನಡಗಳಿವೆ. ಸಿನೆಮಾದಲ್ಲಿ ಬಳಸುವ ಇಂಥಾ ಭಾಷೆಗಳಿಂದ ಸಿನೆಮಾ ನಡೆಯುತ್ತಿರುವ ಸ್ಥಳಾದ ಅರಿವು ನಮಗಾಗುತ್ತದೆ. ಇದರಿಂದಾಗಿ ಪಾತ್ರಗಳೊಂದಿಗೆ ಗುರುತಿಸಿಕೊಳ್ಳುವುದು ಸುಲಭ. ಆದರೆ ಪ್ರತಿಯೊಬ್ಬ ನಟನಿಗೂ ತನ್ನದೇ ಆದ ಪ್ರೊಜೆಕ್ಷನ್ ಇರುತ್ತದೆ. ಅವನು ಎಂಥಾ ಧ್ವನಿಯನ್ನು ಯಾವ ರೀತಿಯಲ್ಲಿ ಹೊರತೆಗೆಯುತ್ತಾನೆ, ಅದನ್ನು ಹೇಗೆ ಪ್ರೇಕ್ಷಕರಿಗೆ ತಲುಪಿಸುತ್ತಾನೆ ಎನ್ನುವುದೂ ಮುಖ್ಯವಾಗುತ್ತದೆ. ಇದರಿಂದಾಗಿ ಒಬ್ಬ ಕಲಾವಿದ ತನ್ನ ಪ್ರೇಕ್ಷಕರನ್ನು ತಟ್ಟುವ ರೀತಿಯೇ ಬದಲಾಗುತ್ತದೆ. ನಮ್ಮಲ್ಲಿ ಬಿಡುಗಡೆಯಾದ ಮನಸಾರೆ ಚಿತ್ರವನ್ನು ಗಮನಿಸಿ. ಅದರಲ್ಲಿ ತಮ್ಮದೇ ಒಂದು ವಿಶಿಷ್ಟ ಛಾಪುಮೂಡಿಸಿದ ರಾಜೂ ತಾಳಿಕೋಟೆಯವರ ಭಾಷೆ ಎಷ್ಟು ವಿಶಿಷ್ಟವಾಗಿತ್ತೋ ಅವರ ಧ್ವನಿಯೂ ಅಷ್ಟೇ ವಿಶೇಷವಾಗಿತ್ತು ಎನ್ನುವುದು ಗಮನಿಸಬೇಕಾದ ವಿಷಯ. ಅವರಾಡುತ್ತಿದ್ದ ಭಾಷೆಗೆ, ಅವರ ಧ್ವನಿಯಲ್ಲಿದ್ದ ಒಂದು ಪದರವೂ ಸಹಕಾರಿಯಾಗಿತ್ತು. ಹೀಗಾಗಿ ಒಬ್ಬ ಕಾಲಾವಿದ ಹೇಗೆ ತನ್ನ ಭಾಷೆಯನ್ನೂ ಧ್ವನಿಯನ್ನೂ ಬಳಸುತ್ತಾನೆ ಎಂಬುದರಿಂದಾಗಿ ನಾವು ಅವನು ತನ್ನ ಪ್ರೇಕ್ಷಕರನ್ನು ತಲುಪುವ ವಿಧಾನವನ್ನು ಅರಿಯಬಹುದಾಗಿದೆ. ಹಾಗಾಗಿ ಭಾಷೆಯಂತೆಯೇ, ಕಲಾವಿದನ ಕಂಠದನಿಯೂ ಧ್ವನಿ ಸಂಯೋಜನೆಯ ಒಂದು ಮಹತ್ವದ ಭಾಗವಾಗಿರುತ್ತದೆ.
ನಾವು ಪಾತ್ರಧಾರಿಯ ಧ್ವನಿಯ ಕುರಿತಾಗಿ, ಭಾಷೆಯ ಕುರಿತಾಗಿ ಇಷ್ಟೆಲ್ಲಾ ಮಾತನಾಡುತ್ತಿದ್ದರೂ, ನಮ್ಮಲ್ಲಿನ ಹೆಚ್ಚಿನ ಚಿತ್ರಗಳು, ದಾರವಾಹಿಗಳು ಬೆಂಗಳೂರು ಕನ್ನಡವನ್ನೇ ಬಳಸುವುದನ್ನು ಗಮನಿಸಿದ್ದೀರಾ? ಇದು ಯಾಕೆ ಹೀಗೆ? ಇದಕ್ಕೆ ಉತ್ತರ ಹುಡುಕುತ್ತಾ ನೀವು ಸಾಗಿದರೆ, ಆ ದಾರಿ ನಮ್ಮ ಉದ್ಯಮದಲ್ಲಿನ ಮಾರುಕಟ್ಟೆ ವಲಯಗಳ ಕಡೆಗೆ ಹೊರಳುತ್ತದೆ! ಆ ಕುರಿತಾಗಿ ಇನ್ನೊಮ್ಮೆ ಮಾತನಾಡೋಣ ಬಿಡಿ.
ಇನ್ನು ಸಂಕಲನದ ಕುರಿತಾಗಿ ಮಾತುಕಥೆ ಆರಂಭಿಸೋಣ. ನಾನಿನ್ನೂ ಧ್ವನಿಯ ಗುಂಗಿನಲ್ಲಿರಬೇಕಾದರೆ, ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಯಾವುದೋ ಸಿನೆಮಾದ ವಿಮರ್ಷೆ ಓದಿದೆ, ಅದರಲ್ಲಿ “ಸಂಕಲನಕಾರ ಚಿತ್ರವನ್ನು ಇನ್ನೂ ಅರ್ಧ ಗಂಟೆ ಕತ್ತರಿಸಿ ತೆಗೆಯಬಹುದಾಗಿತ್ತು” ಎಂದು ಬರೆದಿತ್ತು. ಏನು ನಿಜವಾದ ಸಂಕಲನಕಾರನ ಕೆಲಸ? ಹೇಗಿರಬೇಕು ಒಂದು ಚಿತ್ರದ ಸಂಕಲನ ಪ್ರಕ್ರಿಯೆ? ಸಿನೆಮಾದ ಉಗಮದಲ್ಲಿ ತಮಗೆ ಗೊತ್ತೇ ಇರುವಂತೆ ಸಂಕಲನ ಇರಲಿಲ್ಲ. ಕ್ರಮೇಣ ಎರಡು ಚಿತ್ರಗಳನ್ನು ಬೆನ್ನುಬೆನ್ನಿಗೆ ತೋರಿಸಿದಾಗ ಅದರಲ್ಲಿ ಒಂದು ಹೊಸ ಅರ್ಥವನ್ನು ಹುಟ್ಟುಹಾಕಬಹುದು ಎಂದು ಚಲನ ಚಿತ್ರ ಪ್ರಯೋಗಶೀಲರು ಕಂಡುಕೊಂಡರು. ಇದರಿಂದಾಗಿ ಚಲನಚಿತ್ರವು ಕಥೆಯೊಂದನ್ನು ಹೇಳಲು ಹೊಸದೊಂದು ತಂತ್ರವನ್ನು ತನ್ನದನ್ನಾಗಿಸಿಕೊಂಡಂತಾಯಿತು. ಮುಂದೆ ಇದರ ಬೆಳವಣಿಗೆಯಾಗುತ್ತಾ ಹೋದಂತೆ, ಸಂಕಲನಕ್ಕೆ ಅನೇಕ ಶಾಸ್ತ್ರಗಳು ಸೇರುತ್ತಾ ಹೋದವು. ಇಂದು ಗ್ರಾಫಿಕ್ಸ್, ಡಿ.ಐ ಇತ್ಯಾದಿಗಳ ಪರಿಚಯವಾಗಿರುವ ಮುನ್ನೆಲೆಯಲ್ಲಿ, ಸಂಕಲನ ಎನ್ನುವುದು ಭಿನ್ನ ಆಯಾಮವನ್ನು ಪಡೆದುಕೊಂಡಿದೆ.
ನಿತ್ಯ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ ನಾವಿದ್ದಾಗಲೂ, ನಮ್ಮ ಸುತ್ತಮುತ್ತಲಿನ ಚಿತ್ರಗಳನ್ನು ಭಿನ್ನ ಭಿನ್ನವಾಗಿ ನಾವು ಗ್ರಹಿಸಿ ಮತ್ತೆ ಅವುಗಳನ್ನೆಲ್ಲಾ ಪರಸ್ಪರ ಹೋಲಿಸಿ, ಜೋಡಿಸಿ ಇಡೀ ಸಂದರ್ಭದ ಅರಿವನ್ನು ನಾವು ಮೂಡಿಸಿಕೊಳ್ಳುತ್ತೇವೆ ತಾನೇ? ಹಾಗೆ ಸಿನೆಮಾದಲ್ಲಿ, ಸಂಕಲನವೂ ಕೆಲಸ ಮಾಡುತ್ತದೆ. ಸಂಕಲನಕಾರ ಅನೇಕ ಚಲಿಸುವ ಚಿತ್ರ ತುಣುಕುಗಳನ್ನು ಒಂದಕ್ಕೊಂದು ಜೋಡಿಸುತ್ತಾ ಒಂದು ಅರ್ಥವನ್ನು ಹೊರಹೊಮ್ಮಿಸುವ ಕೆಲಸವನ್ನು ಮಾಡುತ್ತಾನೆ. ಈ ಅರ್ಥದ ಮೂಲ ಕತೃ ನಿರ್ದೇಶಕನೇ ಆದರೂ, ಅದನ್ನು ಸಾಕಾರಗೊಳಿಸುವಲ್ಲಿ ಛಾಯಾಗ್ರಾಹಕ, ಧ್ವನಿ ತಜ್ಞರಂತೆಯೇ, ಸಂಕಲನಕಾರನೂ ಪ್ರಮುಖನಾಗಿರುತ್ತಾನೆ.
ಸುಮಾರು ಹತ್ತರಿಂದ ಹನ್ನೆರಡು ಸಾವಿರ ಅಡಿ ಉದ್ದದ ರೀಲುಗಳು ಸಂಕಲನಕಾರನ ಮೇಜಿನ ಮೇಲೆ ಬಿದ್ದಾಗ ಅದು ಹತ್ತು ಮಹಡಿ ಕಟ್ಟಡವನ್ನು ಕಟ್ಟಲು ಬಂದು ಬಿದ್ದ ಇಟ್ಟಿಗೆ, ಸಿಮೆಂಟು, ಮರಳಿನಂತೆಯೇ ಅಗಾಧ ಹಾಗೂ ಅರ್ಥರಹಿತವಾಗಿರುತ್ತದೆ. ಸಂಕಲನಕಾರ, ನಿರ್ದೇಶಕನ ಆಶಯವನ್ನು ಅರಿತು, ತನ್ನೆದುರಿರುವ ದೃಶ್ಯಸಾಗರದಿಂದ ಸುಂದರವಾದ ಕಲಾಕೃತಿಯನ್ನು ಕಟ್ಟುತ್ತಾನೆ. ಇಂದು ತಂತ್ರಜ್ಞಾನದ ಅಭಿವೃದ್ಧಿಯಾಗಿ ಯಂತ್ರವನ್ನು ಸಮರ್ಥವಾಗಿ ಬಳಸಬಲ್ಲವನೇ ಒಳ್ಳೆಯ ಸಂಕಲನಕಾರ ಎನ್ನುವ ಭಾವನೆ ಬಂದುಬಿಟ್ಟಿದೆ. ಇದರಿಂದಾಗಿ ಉತ್ತಮ ಸಂಕಲನಕಾರರು ನಮ್ಮಲ್ಲಿ ಕಡಿಮೆಯಾಗುತ್ತಾ ಸಾಗಿದ್ದಾರೆ. ನನ್ನ ನೇಪಾಳೀ ಗೆಳೆಯನೊಬ್ಬ ದುಃಖದಲ್ಲಿ ಹೇಳುತ್ತಿದ್ದ, ನೇಪಾಳದಲ್ಲಿ ಇಂದು ಯಾರಿಗೆ ಮ್ಯಾಚ್ ಕಟ್ (ಇದರ ಕುರಿತಾಗಿ ಮುಂದೆ ಮಾತನಾಡುವೆ) ಮಾಡೋದಕ್ಕೆ ಬರುತ್ತೋ ಅವನೇ ಸಂಕಲನಕಾರ ಎನಿಸಿಕೊಂಡು ಬಿಟ್ಟಿದ್ದಾನೆ ಎಂದು. ಅಂದರೆ, ಸಂಕಲನಕಾರರು ಕಥೆಗಾರರಾಗದೆ, ಕೂಲಿಗಳಾಗುತ್ತಿದ್ದಾರೆ!
ಅಭಯಣ್ಣ,
ಪ೦ಡಿತಜ್ಜ ಬಿಟ್ಟರೆ ಆನು ನಿನ್ನ ಅಭಯಣ್ಣ ಎ೦ದು ಸ೦ಭೋದಿಸುವುದು ಅಪ್ಪೊ? ಇರಲಿ, ಈ ತರಹದ ಚರಿತ್ರೆ, ಛಾಯಾಚಿತ್ರ ನಡೆದು ಬ೦ದ ದಾರಿ ತರಹದ ಮೂಲಭೂತ ಲೇಖನ ಬರೆಯುವುದರಲ್ಲಿ ನಿಜವಾಗಿ ಓದುಗರಿಗಿ೦ತ ಲಾಭ ಬರೆದ ಮಾಣಿಗೆ. ನಮ್ಮ ಕಲ್ಪನೆಗಳು, ನಿಲುವುಗಳು, ವಿಶಯದ ತಾ೦ತ್ರಿಕಾ೦ಶಗಳು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗುತ್ತದೆ. ಅಲ್ಲದ? ಒಳ್ಳೆ ಕೆಲಸ ಬರೀತಾ ಇರು ದಾನೆ?
ಮತ್ತೆ ರಶ್ಮಿಗೂ ಬರೆವಲೆ ಹೇಳು. ನಟನೆ ಓಡಿಬ೦ದ ದಾರಿ.
ಶುಭಮಸ್ತು
ಆನ೦ದ ಅಪ್ಪಚ್ಚಿ
Hi 🙂
Superb Article Abhay, Very Informative.
Abhay, ನಿಮ್ಮ ನೇಪಾಳಿ ಸ್ನೇಹಿತ ಹೇಳಿರೊ ಸ್ಥಿತಿಯಲ್ಲೇ ನನ್ನಂತಹಾ ಬಹಳ ಜನ ಇದ್ದಾರೆ.
Its an unfortunate situation.
Editor-ಗಳಿಗೆ editing sense ಮುಖ್ಯ, ಆದರೆ ಇಂದು software-ಗಳಲ್ಲಿರೊ EFFECTS-ಗಳನ್ನ ಹಾಕಿ editing ಮಾಡಿದ್ರೆ ‘ super editing’ ಅಂತ ಹೊಗಳ್ತಾರೆ . ಆದರೆ effects-ಗಳು ಕೇವಲ cinema-ಗಳ ಅಲಂಕಾರಕ್ಕೆ ಮಾತ್ರ ಅಂತ ಯಾಕೆ ಯಾರಿಗೂ ಅರ್ಥವಾಗೊಲ್ಲ. ಈ ಹಿಂದೆ ಚಿತ್ರರಂಗದ ಹಿರಿಯ ಸಂಕಲನಗಾರರು computer/softwares ಅಥವ ಯಾವುದೇ equipments ಇಲ್ಲದೇ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದದ್ದು ಯಾರಿಗೂ ಗೊತ್ತೇ ಇಲ್ಲವಾ. ಜನಗಳ ಮಾತು ಹಾಗಿರಲಿ, ಮೊದಲು ನಮ್ಮ ಚಿತ್ರರಂಗದಲ್ಲಿರೊರು ” EDiTiNG ಅಂದರೆ ಬರಿ CUT & PASTE ಅಷ್ಟೆ ” ಅಂತ ಹೇಳೊದನ್ನ ಬಿಡಬೇಕು.
“Acting, Cinematography, story, screenplay, direction, Muisc… ಇವೆಲ್ಲದರ ಸೂಕ್ಷ್ಮಗಳ ಬಗ್ಗೆ ತಿಳಿದು Editor-ಗಳಾದರೆ… ಚಿತ್ರದ ಇನ್ನೊಂದು ಸುಂದರ script-ಅನ್ನು editing-ಅಲ್ಲೇ ಸಿದ್ದಪಡಿಸಬಹುದು”,. ಹೀಗಂತ ನಾನು EDiTiNG ಕಲಿಯುವಾಗ ನಮಗೆ ಇವೆಲ್ಲದರ importance ತಿಳಿಸಿದ ನಮ್ಮ ಗುರುಗಳ ಮಾತನ್ನು ನಾನು ಎಂದೂ ಮರೆಯೋಲ್ಲಾ,.
(ನಾನು ಎನಾದ್ರು ತಪ್ಪು ಬರೆದಿದ್ದರೆ ಕ್ಷಮಿಸಿ Abhay)
Regards,
Arun Kashyap (Your Facebook Friend)
ಲೇಖನ ಓದಿದೆ, ಧ್ವನಿ ಸಂಯೋಜನೆ, ಭಾಷಾಗುಣ ಸಿನೆಮಾ ತಂತ್ರಕ್ಕೆ ಎಷ್ಟು ಮುಖ್ಯ ಎಂದು ತಿಳಿದೆ……ಈಗಿನ ಪೀಳಿಗೆಯ ಸಂಕಲನ ಕಥೆಗೆ ಪೂರಕವಾಗಿರದೇ ಕಥೆಯನ್ನೇ ತಿರುಚುವಷ್ಟು ದಾರಿತಪ್ಪಿರುವುದು ಖೇದದ ಸಂಗತಿ….