ಗುಬ್ಬಚ್ಚಿಗಳಿಲ್ಲದ ಮತ್ತೆದೇ ಬೇಸರದ ಬೆಳಗು


ನಾನು ನಿರ್ದೇಶಿಸಿದ ‘ಗುಬ್ಬಚ್ಚಿಗಳು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂತು. ಅನೇಕ ಕಡೆ ಚಿತ್ರಪ್ರದರ್ಶನಗಳಾದವು, ಸನ್ಮಾನಗಳಾದವು, ಜನ ಮಾತನಾಡಿದರು, ತಮ್ಮ ಮನೆಗಳಲ್ಲಿ ಇದ್ದ ಗುಬ್ಬಚ್ಚಿಗಳನ್ನು ನೆನೆದರು, ಅವುಗಳೊಂದಿಗಿನ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಎಲ್ಲಾ ಆದರೂ ಎಲ್ಲೋ ಒಂದೆಡೆ ನಮ್ಮ ಚಿತ್ರ ಗುಬ್ಬಚ್ಚಿಗಳ ಅಳಿವಿನ ನಂತರದ ಸಂತಾಪಸೂಚಕ ಸಭೆಗೆ ಕಾರಣವಾಗುತ್ತಿದೆಯೇ ಎಂಬ ಆತಂಕವೂ ನನಗಾಗುತ್ತಿತ್ತು. ಇದೇ ಸಂದರ್ಭದಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ (ಮಾರ್ಚ್ ೨೦) ಸಂದರ್ಭಕ್ಕೆ ಒಂದು ಬರವಣಿಗೆ ಕೊಡಲು ಗುರುಗಳಾದ ಜಿ.ಎನ್. ಮೋಹನ್ನರು ಹೇಳಿದಾಗ ಗುಬ್ಬಚ್ಚಿಗಳು ಚಿತ್ರದ ಹಿನ್ನೆಲೆಯನ್ನು ಬರೆಯುವ ಮನಸ್ಸಾಯಿತು.

ಈ ಇಡೀ ಪಯಣ ಆರಂಭವಾಗಿದ್ದು ಒಂದು ಸಂಜೆ ಹಿರಿಯ ಸ್ನೇಹಿತರಾದ ಇಸ್ಮಾಯಿಲ್ ಹಾಗೂ ಪರಮೇಶ್ ಗುಂಡ್ಕಲ್ ಜೊತೆ ಅದೇನೋ ಮಾತನಾಡುತ್ತಿದ್ದಾಗ. ಇಸ್ಮಾಯಿಲರು ಸ್ವಲ್ಪ ಸಮಯ ಹಿಂದೆಯೇ ಬೆಂಗಳೂರಿನಲ್ಲಿ ಇರುವ ಹಕ್ಕಿಗಳ ಬಗ್ಗೆ ಅದೇನೋ ಲೇಖನ ಮಾಡಲು ಹೊರಟವರಿಗೆ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿರುವ ಗುಬ್ಬಚ್ಚಿಗಳ ಸಂಖ್ಯೆಯ ಅರಿವಾಯಿತು. ಅದನ್ನು ಒಂದು ಕಥೆಯಾಗಿ ಬರೆಯಬೇಕೆಂದು ಅವರು ಅಂದುಕೊಂಡಿದ್ದರು. ಅಂದು ಆ ಕಥೆಯನ್ನು ಇಸ್ಮಾಯಿಲ್ ನನಗೆ ಹೇಳಿದರು. ಆ ಕಥೆಯನ್ನು ಚಿತ್ರಕಥೆಯನ್ನಾಗಿಸಿ ಒಂದು ಚಿತ್ರವನ್ನು ಮಾಡಬೇಕು ಎಂದು ನಾವು ನಿರ್ಧರಿಸಿದೆವು.

ಬಹಳ ಕಾಲ ಹಿಂದಿನ ಮಾತಲ್ಲ ಇದು. ನಾನೇನೂ ಹಳ್ಳಿಯ ಹುಡುಗನಲ್ಲ. ಆ ಪರಿಸರ ನನಗೆ ಸಿಗಲೇ ಇಲ್ಲ. ಮಂಗಳೂರು ಮೊದಲಿನಿಂದಲೂ ಪೇಟೆ ಎಂದೇ ಕರೆಸಿಕೊಂಡರೂ, ಅದನ್ನು ಮುಂದುವರೆದ ಹಳ್ಳಿ ಎಂದು ಕರೆಯುತ್ತಿದ್ದುದು ಸುಮ್ಮನಲ್ಲ. ನಾನು ಮಂಗಳೂರಿನಲ್ಲಿ ಶಾಲೆಗೆ ಹೋಗುತ್ತಿದ್ದಾಗಿನ ಮಾತು. ಅಂದರೆ ಸುಮಾರು ಹತ್ತು ವರ್ಷದ ಹಿಂದಿನ ಮಾತು. ಮನೆಯಿಂದ ಶಾಲೆಯ ನಡುವೆ ಎರಡು ದಿನಸಿ ಅಂಗಡಿಗಳು ಸಿಗುತ್ತಿದ್ದವು. ಆ ಅಂಗಡಿಗಳು ಈಗಲೂ ಇವೆಯಾದರೂ, ಅವೆರಡರದ್ದೂ ರೂಪ ಬಹಳ ಬದಲಾಗಿವೆ. ಆಗೀಗ ಅಮ್ಮನೊಡನೆ ಆಕಡೆಯಿಂದ ಹೋಗುವಾಗ ಅಮ್ಮ ಅಲ್ಲಿ ದಿನಸಿ ತೆಗೆದುಕೊಳ್ಳಲು ನಿಲ್ಲುತ್ತಿದ್ದಳು. ಆಗ ಅಲ್ಲೆಲ್ಲ ಹಾರಾಡಿಕೊಂಡು ಗಲಭೆ ಎಬ್ಬಿಸುತ್ತಿದ್ದ ಗುಬ್ಬಚ್ಚಿಗಳು ನೀಡುತ್ತಿದ್ದ ಮೋಜು ಅಷ್ಟಿಷ್ಟಲ್ಲ. ಇನ್ನು ಶಾಲೆಯಿಂದ ಬರುವಾಗ ಒಂದು ಆಸ್ಪತ್ರೆಯನ್ನು ದಾಟಿಕೊಂಡು ಬರುತ್ತಿದ್ದೆವು. ಆ ಆಸ್ಪತ್ರೆಯ ಎದುರಿನಲ್ಲೇ ಒಂದು ಮಾಂಸಾಹಾರೀ ಹೋಟೇಲ್ ಇತ್ತು. ಅದರ ಎದುರಿನಲ್ಲಿ ದಿನವೂ ಒಂದು ಕೋಳಿಯನ್ನು  ಸತ್ತು ಹೋಗಿದ್ದ ಒಂದು ಮರಕ್ಕೆ ಕಟ್ಟಿ ಹಾಕಿರುತ್ತಿದ್ದರು. ಅದೇ ಮರದ ಮೇಲೆ ಒಂದು ಸಣ್ಣ ಪೊಟರೆ. ಅದರೊಳಗೆ ಅದ್ಯಾವುದೋ ಒಂದು ಪಕ್ಷಿ ಮತ್ತೆ ಮತ್ತೆ ಗೂಡು ಕಟ್ಟಿ ಮರಿ ಮಾಡುತ್ತಿತ್ತು. ನಮಗೆ ಶಾಲೆಯಿಂದ ಬರುವ ಸಂದರ್ಭದಲ್ಲಿ ಅದನ್ನು ನೋಡುವುದು ಬಹಳ ಮೋಜಿನ ವಿಚಾರವಾಗಿತ್ತು. ತಾಯಿ ಹಕ್ಕಿ ಆಹಾರ ತಂದು ಗುಟುಕು ಕೊಡುವುದು ಇತ್ಯಾದಿ ಬಹಳ ಚೆನ್ನಾಗಿರುತ್ತಿತ್ತು. ಶಾಲೆಯಿಂದ ಮನೆಗೆ ಹೋಗುವ ದಾರಿಯಲ್ಲಿ ಹತ್ತು ನಿಮಿಷ ಈ ಪಕ್ಷಿಗಳಿಗೇ ಮೀಸಲಾಗುತ್ತಿತ್ತು.

ಮನೆಯ ಹಿಂದಿನ ಜಗಲಿಯಲ್ಲಿ ಕುಂಡೆಕುಸುಕ  ಎಂದು ನಾವು ಕರೆಯುತ್ತಿದ್ದ ಹಕ್ಕಿ (ಮತ್ತೆ ಮುಂದೆಂದೋ ಅದರ ಹೆಸರು ಮೆಕ್-ಪೈ-ರಾಬಿನ್ ಎಂದು ಗೊತ್ತಾಯಿತು. ಅದೇ… ಕಪ್ಪು-ಬಿಳಿ ಹಕ್ಕಿ ಬಾಲವನ್ನು ಸದಾ ಕುಣಿಸುತ್ತಿರುತ್ತಲ್ಲಾ)ಮತ್ತೆ ಮತ್ತೆ ಬರುತ್ತಿದ್ದದನ್ನು ನೋಡಿದ್ದೆ. ಅದಕ್ಕೆ ಗೂಡು ಮಾಡುವುದೆಂದು ಮನೆಗೆ ಫ್ಯಾನ್ ತಂದಿದ್ದ ರಟ್ಟಿನ ಡಬ್ಬಿಯಲ್ಲಿ ಒಂದು ಸಣ್ಣ ರಂಧ್ರಕೊರೆದು ಜಗಲಿಯ ಮಾಡಿಗೆ ತಾಗಿಸುವಂತೆ ಕಟ್ಟಿದ್ದೆ. ನನ್ನ ಅಚ್ಚರಿಗೆ ಒಂದು ವಾರದೊಳಗೇ, ರಾಬಿನ್ ಅದನ್ನು ತನ್ನದನ್ನಾಗಿಸಿಕೊಂಡು ಅಲ್ಲಿ ಗೂಡು ಕಟ್ಟಲಾರಂಭಿಸಿತ್ತು! ಜಗಲಿಯಲ್ಲಿಡೀ ಅದು ಗೂಡು ಕಟ್ಟಲು ತರುತ್ತಿದ್ದ ಕಸ-ಕಡ್ಡಿ, ಜಗಲಿಯಲ್ಲಿ ಒಣಗಲು ಹಾಕಿದ ಬಟ್ಟೆಗಳಲ್ಲಿ ಅದರ ಹಿಕ್ಕೆ! ಆದರೆ ಅದು ಕೊಡುತ್ತಿದ್ದ ಸಂತೋಷ ಇಂದಿಗೂ ನನ್ನ ಮನಸ್ಸಲ್ಲಿ ಹಸಿಯಾಗಿದೆ. ಇವೆಲ್ಲವುಗಳ ಮಧ್ಯೆ ತಾಯಿ ಹಕ್ಕಿ ನಮ್ಮ ಜಗಲಿಯಲ್ಲಿ ತಲೆ ಬಾಚಿಕೊಳ್ಳಲೆಂದು ಇಟ್ಟಿದ್ದ ಕನ್ನಡಿಯೆದುರು ಕುಳಿತು, ಕನ್ನಡಿಯೊಳಗೆ ಇನ್ನೊಂದು ರಾಬಿನ್ ಇದೆ ಎಂದು ಭಾವಿಸಿ ಅದನ್ನು ಕುಟುಕುತ್ತಿದ್ದುದನ್ನು ನಾನು ಹೇಳಲೇ ಬೇಕು. ಇದರಿಂದ ದಿನದ ಬೇರೆ ಬೇರೆ ಹೊತ್ತಲ್ಲಿ, ಟಕ-ಟಕ ಎಂದು ತಾಯಿ ಹಕ್ಕಿಯ ಮೋರ್ಸ್ ಕೋಡ್ ಸಂದೇಶ ನಮ್ಮ ಕಿವಿಗೆ ಬೀಳುತ್ತಲೇ ಇತ್ತು.ಮುಂದೆ ಅದೇ ಗೂಡಿನಲ್ಲಿ ನಾಲ್ಕೈದು ಬಾರಿ ರಾಬಿನ್ ಸಂಸಾರ ನಡೆಸಿ ಹೊಸ ಮರಿಗಳನ್ನು ಈ ಪ್ರಪಂಚಕ್ಕೆ ತಂದಿತು. ಗೂಡಲ್ಲಿ ಮರಿಯಾದ ಹಕ್ಕಿಗಳಿಗೆ ತಾಯಿಯ ‘ಫ್ಲೈಯಿಂಗ್ ಕ್ಲಾಸ್’ ಆರಂಭವಾಗುತ್ತಿದ್ದದು ಮನೆಯ ಹಿಂದಿನ ಕ್ರೋಟನ್ ಗಿಡಗಳಲ್ಲಿ. ಮತ್ತೆ ಅಲ್ಲಿ ಅವುಗಳು ತೇರ್ಗಡೆಯಾದರೆ ಮನೆಯ ಮುಂದಿನ ದೊಡ್ಡ ಗಿಡಗಳಿಗೆ ತಾಯಿ ಕರೆದುಕೊಂಡು ಹೋಗುತ್ತಿತ್ತು. ಮನೆಯ ಆವರಣದಲ್ಲಿ ಸುತ್ತಾಡುತ್ತಿದ್ದ ದೊಡ್ಡದಾಗಿದ್ದ ಕೇರೇ ಹಾವು (Rat snake) ಮರಿಗಳಿಗಿದ್ದ ಒಂದು ದೊಡ್ಡ ಅಪಾಯ. ಬೀಡಾಡೀ ನಾಯಿ, ಬೆಕ್ಕು ಇದ್ದದ್ದೇ ಬಿಡಿ. ಆಗ ಸಣ್ಣವರಾಗಿದ್ದ ನಮಗೆಲ್ಲಾ ಈ ಹಕ್ಕಿ ಮರಿಗಳನ್ನು ಕಾಯುವುದು ನಮ್ಮದೇ ಜವಾಬ್ದಾರಿ ಎನ್ನುವ ಭಾವ ಇತ್ತು.

ಮತ್ತೆ ವರ್ಷಾಂತ್ಯದ ಪರೀಕ್ಷೆ ಹತ್ತಿರ ಬರುತ್ತಿದೆ ಎಂದರೆ, ಮತ್ತದೇ ಬೇಸರದ ಮಧ್ಯಾಹ್ನಗಳು. ಚೆನ್ನಾಗಿ ಉಂಡು, ತೂಕಡಿಸುವ ಸಮಯದಲ್ಲಿ ಪರೀಕ್ಷೆಗೆ ಓದುವ ಗೋಳು ಯಾರಿಗೆ ಬೇಕು?! ಕೋಣೆಯ ಕಿಟಕಿಯಾಚೆಗೆ ಸರಿಯಾಗಿ ಎರಡು ಗಂಟೆಯ ಹೊತ್ತಿಗೆ ಜೇನುಕುಡುಕ ಹಕ್ಕಿಗಳು ಗಾಳಿಯಲ್ಲೇ ನಿಲ್ಲುತ್ತಾ, ಕೂರುತ್ತಾ ತಮ್ಮ ಅಷ್ಟುದ್ದದ ಕೊಕ್ಕುಗಳನ್ನು ಹೂವುಗಳೊಳಗೆ ತೂರುತ್ತಾ ಜೇನು ಕುಡಿಯುವ ಮೋಜು ಪರೀಕ್ಷೆಯ ಭಯ ನಿವಾರಿಸಲು ಸಹಕಾರಿಯಾಗಿದ್ದವು. ಮತ್ತೆ ಚಿಕ್ಕಿನ ಮರದ ಅಡಿಯಲ್ಲಿ ಕುಳಿತ ಕುಪ್ಪುಳು ತನ್ನ ಹುಳ ಹಿಡಿಯುವ ಕೆಲಸದಲ್ಲಿ ವ್ಯಸ್ತವಾಗಿರುತ್ತಿತ್ತು. ದೂರ‍ದಲ್ಲೆಲ್ಲೋ ಕೋಗಿಲೆ ಮತ್ತೆ ಮನೆಯೆದುರಿನ ಅಲಂಕಾರಿಕ ಹುಲ್ಲಿನಲ್ಲಿನ ಕಾಳು ತಿನ್ನಲು ಗುಬ್ಬಚ್ಚಿಗಳ ದಂಡು ಇದ್ದೇ ಇರುತ್ತಿದ್ದವು. ಹೂದಾನಿಗಳಿಗೆ ನೀರು ಹಾಕುವಾಗ ನೆಲಕ್ಕೆ ಚೆಲ್ಲಿದ ನೀರು ಎಲ್ಲಾದರೂ ಸಣ್ಣ ಗುಂಡಿಯಲ್ಲಿ ನಿಂತಿದ್ದರೆ ಅದರಲ್ಲಿ ಜಳಕವಾಡುತ್ತಿದ್ದ ಹಕ್ಕಿಗಳು ಇವುಗಳೆಲ್ಲಾ “ಇಕಾಲಜಿಯ ಒಂದು ಭಾಗ” “ಎಂಡೇಂಜರ್ಡ್ ಸ್ಪೀಶೀಸ್” ಎಂದೆಲ್ಲಾ ಗೊತ್ತಿಲ್ಲದೇ ಇದ್ದ ಕಾಲ ಅದು. ನಿತ್ಯಜೀವನದೊಳಗೆ ಈ ಹಕ್ಕಿಗಳು ಒಂದು ಅನನ್ಯ ಭಾಗವೇ ಆಗಿದ್ದವು.

ಶಾಲೆಗೂ ಮನೆಗೂ ಮಧ್ಯೆ ಹಕ್ಕಿಗಳು, ಬೀಡಾಡೀ ನಾಯಿಗಳು, ರೋಡ್ ಬ್ರೇಕರುಗಳಂತೆ ಹಾಯಾಗಿ ರಸ್ತೆ ಮಧ್ಯದಲ್ಲೇ ಕೂರುತ್ತಿದ್ದ ದನಗಳು ಇವೆಲ್ಲವೂ ನನ್ನ ಬಾಲ್ಯದ ಆತ್ಮೀಯ ನೆನಪುಗಳು. ಶಾಲೆಗೂ ಮನೆಗೂ ದೂರ ಇದ್ದುದು ಸುಮಾರು ಹದಿನೈದು ನಿಮಿಷ ನಡಿಗೆಯ ದಾರಿ ಅಷ್ಟೇ. ಈ ದಾರಿಯಲ್ಲಿ ದಿನ-ದಿನ ನಡೆಯುತ್ತಾ, ಮತ್ತೆ ಸೈಕಲ್ಲಿನಲ್ಲಿ ಸಾಗುತ್ತಾ ಪದವಿಯನ್ನೂ ಮುಗಿಸಿ ನಾನು ಮಂಗಳೂರನ್ನು ಬಿಟ್ಟೆ, ಸಿನೆಮಾ ಅಧ್ಯಯನಕ್ಕಾಗಿ ಪೂನಾ ಸೇರಿದೆ. ಮುಂದಿನ ನಾಲ್ಕು ವರ್ಷ ಮಂಗಳೂರಿನಿಂದ ಸಾಕಷ್ಟು ದೂರ‍ದಲ್ಲೇ ಇದ್ದೆ. ಆಗೊಮ್ಮೆ ಈಗೊಮ್ಮೆ ಊರಿಗೆ ಹೋದರೂ, ಗೆಳೆಯರ ಭೇಟಿ, ಮನೆಯಲ್ಲಿನ ವಾಸ ಇವುಗಳಲ್ಲೇ ಕಾಲ ಮುಗಿದು ಮತ್ತೆ ಪೂನಾ ಬಸ್ಸ್ ಏರಿರುತ್ತಿದ್ದೆ.

ಮತ್ತೆ ಶಿಕ್ಷಣ ಮುಗಿಸಿ ಮಂಗಳೂರಿಗೆ ಬಂದೆ. ಆಗ ಮಂಗಳೂರು ಬದಲಾಗಿತ್ತು. ಇದ್ದ ಹಳೆಯ ಕಟ್ಟಡಗಳನ್ನೆಲ್ಲಾ ಬಕಾಸುರ ಹಸಿವಿನಲ್ಲಿ ಕೊಳ್ಳುತ್ತಾ ಅವುಗಳನ್ನು ಕೆಡಹಿ ಅಲ್ಲಿ ಹೊಸದಾದ ಕಟ್ಟಡಗಳನ್ನು ಕಟ್ಟುತ್ತಾ ಸಾಗಿದ್ದರು ಉದ್ಯಮಶೀಲರು. ದಿನಸಿ ಅಂಗಡಿಯವರೂ ತಾವೂ ಬದಲಾಗಬೇಕು ಎಂದುಕೊಂಡು ತಮ್ಮ ಅಂಗಡಿಗಳನ್ನೂ ನವೀನ ಶೈಲಿಗೆ ಬದಲಿಸಿಕೊಂಡಿದ್ದರು. ಮೊದಲಿನಂತೆ ಬಾಯಿ ತೆರೆದ ಅಕ್ಕಿ, ಗೋಧಿ ಚೀಲಗಳಿರಲಿಲ್ಲ ಈಗ ಅವರ ಅಂಗಡಿಗಳಲ್ಲಿ. ಮಂಗಳೂರಿಗೆ ಅಂದದ ಪ್ಲಾಸ್ಟಿಕ್ಕಿನಲ್ಲಿ ಅಕ್ಕಿ-ಗೋಧಿ ತುಂಬಿ ಮಾರುವ ದೊಡ್ಡ ದೊಡ್ಡ ಅಂಗಡಿಗಳು ಬಂದವು. ಕಿಟಕಿಗಳೇ ಇಲ್ಲದ ಕಟ್ಟಡಗಳು ಬಂದವು! ಚಿತ್ರ-ವಿಚಿತ್ರ ಭಾಷೆಗಳನ್ನು ಮಾತನಾಡುವವರೆಲ್ಲಾ ಮಂಗಳೂರಿನಲ್ಲಿ ಸೇರುತ್ತಾ ಸಾಗಿದರು. ತನ್ನೊಳಗೇನೋ ರಹಸ್ಯವನ್ನಿಟ್ಟುಕೊಂಡಿದ್ದೇನೆ ಎನ್ನುವಂತೆ ನಿಗೂಢವಾಗಿ ಹರಿದಾಡುತ್ತಿದ್ದ ಮಂಗಳೂರಿನ ಸಣ್ಣ ಸಣ್ಣ ಗಲ್ಲಿಗಳೆಲ್ಲ ಅಷ್ಟಗಲವಾಗಿ ಬಣ್ಣ ಬಳೆಸಿಕೊಂಡು ಬಣ್ಣ ಕಳೆದುಕೊಂಡವು.

ನಮ್ಮೂರಲ್ಲಿ ನಮಗೇ ದಾರಿ ತಪ್ಪುವಂತೆ ಬೆಳವಣಿಗೆಗಳು ಸಾಗಿದವು. ಇವೆಲ್ಲವುಗಳ ನಡುವೆ ಕಾಣೆಯಾಗಿದ್ದು ಗುಬ್ಬಚ್ಚಿಗಳು ಮತ್ತೆ ಬುಲ್ ಬುಲ್, ಜೇನುಕುಡುಕ ಹಕ್ಕಿ, ಕುಪ್ಪುಳು ಹಕ್ಕಿ ಇತ್ಯಾದಿ! ಇವುಗಳಿಗೆ ಹೊಸ ಕಟ್ಟಡಗಳಲ್ಲಿ ಜಾಗವನ್ನು ನಿರಾಕರಿಸಲಾಗಿತ್ತು. ‘ಫೈಯಿಂಗ್ ಕ್ಲಾಸ್’ ನಡೆಸಲು ಬೇಕಾಗ ಗಿಡ-ಮರಗಳು ಕಡಿಮೆಯಾಗುತ್ತಾ ಸಾಗಿ ಬಿಸಿಲ ಧಗೆ ಹೆಚ್ಚಾಗಿತ್ತು. ಹಕ್ಕಿಗಳಿಗೆ ನೀರಾಟವಾಡಲು ನೀರಿಲ್ಲವಲ್ಲ ಎಂದಾಯಿತು. ಗುಬ್ಬಚ್ಚಿಗಳು ಕಡಿಮೆಯಾಗುತ್ತಾ ಬಂದವು. ಇಸ್ಮಾಯಿಲ್ ತಮ್ಮ ಗುಬ್ಬಚ್ಚಿಗಳ ಕಥೆಯನ್ನು ಹೇಳಿದಾಗ ಮೇಲಿನ ಇಡೀ ಚಿತ್ರಸರಣಿ ಮನಸ್ಸಲ್ಲಿ ಮತ್ತೊಮ್ಮೆ ಸಾಗಿ ಹೋಯಿತು. ಇದರ ಕುರಿತಾಗಿ ಮಾತನಾಡುವುದು ಅಗತ್ಯ ಎನಿಸುತ್ತು ನನಗೆ. ನನ್ನದೇ ಭಾವಗಳು ಇಸ್ಮಾಯಿಲರದ್ದೂ ಆಗಿತ್ತು. ಈ ಒತ್ತಡ ನಮ್ಮನ್ನು ಕುಳಿತು ಕಥೆಯನ್ನು ಬೆಳೆಸುವಲ್ಲಿ, ಚಿತ್ರಕಥೆ ನಿರ್ಮಿಸುವಲ್ಲಿ ಕೆಲಸ ಮಾಡಲಾರಂಭಿಸಿತು. ಚಿತ್ರ ಆದ ನಂತರ ಯಾರೋ ಗೆಳೆಯರು ತಮಾಷೆಗಾಗಿ ಕೇಳಿದರು, “ಏನು ಅಭಯ್, ನಿಮ್ಮ ಮುಂದಿನ ಚಿತ್ರ ‘ಕಾಗೆಗಳು’ ಎಂದಾ? ಅವೂ ಕಡಿಮೆಯಾಗ್ತಾ ಇವೆಯಲ್ಲಾ?” ಹೌದು, ಕಾಗೆಗಳು ಮಾತ್ರ ಯಾಕೆ, ಪೇಟೆಗಳಲ್ಲಿ ನಮ್ಮ ಜೀವನದ ಭಾಗವಾಗಿದ್ದ ಎಲ್ಲಾ ಬಗೆಯ ಇತರ ಪ್ರಾಣಗಳಿಂದ ನಾವು ನಿಧಾನಕ್ಕೆ ದೂರವಾಗುತ್ತಾ ಸಾಗಿದ್ದೇವೆ. ಪರಿಸರ ರಕ್ಷಣೆ ಎಂದರೆ ಎಲ್ಲೋ ದೂರದ ಪಶ್ಚಿಮ ಘಟ್ಟದಲ್ಲಿ ಕಾಡು ಉಳಿಸುವುದು ಮಾತ್ರವಲ್ಲ. ನಮ್ಮ ಮನೆಯೆದುರಿನ ಮರ-ಗಿಡವೂ ಪರಿಸರದ ಒಂದು ಭಾಗವೇ ಎನ್ನುವುದನ್ನು ನಾವು ಮರೆಯುತ್ತಿದ್ದೇವೆ! ಇನ್ನು ನಮ್ಮ ಚಿತ್ರ ಕಾಣೆಯಾಗುತ್ತಿರುವ ಗುಬ್ಬಚ್ಚಿಗಳ ಬಗ್ಗೆ ಮಾತನಾಡಿದರೂ, ಚಿತ್ರ ಅದರೊಂದರ ಬಗ್ಗೆ ಮಾತ್ರ ಅಲ್ಲ. ಅದು ಕಳೆದು ಹೋಗುತ್ತಿರುವ ಪಟ್ಟಣದ ಹಕ್ಕಿಗಳ ಒಟ್ಟು ನೆನಪಿನ ಕುರಿತ ಕೊರಗು.

ಇಂದು ನಾನು ಮತ್ತೆ ಕುಳಿತಿದ್ದೇನೆ ಮಂಗಳೂರಿನ ನನ್ನ ಮನೆಯ ಕಿಟಕಿಯ ಬಳಿ, ಮಧ್ಯಾಹ್ನದ ಬುಲ್ ಬುಲ್ ಹಕ್ಕಿಗಳ ‘ಫೈಯಿಂಗ್ ಕ್ಲಾಸ್’ ನೋಡಲು, ಜೇನು ಕುಡುಕ ಹಕ್ಕಿಯ ರೆಕ್ಕೆ ಬಡಿತ ಕೇಳಲು, ಗುಬ್ಬಚ್ಚಿಗಳ ನೀರಾಟ ನೋಡಲು, ಕೆಂಭೂತದ ‘ಗೂಕ್’ ಧ್ವನಿ ಕೇಳಲು, ಕೋಗಿಲೆಯ ಹಾಡು ಕೇಳಲು, ಕಾಗೆಯ ಬುದ್ಧಿವಂತಿಗೆ ನೋಡಲು. ಆದರೆ ಎಲ್ಲವೂ ಖಾಲಿ ಖಾಲಿ. ಮತ್ತದೇ ಬೇಸರದ ಬೆಳಗು…!

This entry was posted in Daily Blog, Society. Bookmark the permalink.

8 Responses to ಗುಬ್ಬಚ್ಚಿಗಳಿಲ್ಲದ ಮತ್ತೆದೇ ಬೇಸರದ ಬೆಳಗು

  1. ಚಿನ್ನಸ್ವಾಮಿ ವಡ್ಡಗೆರೆ ಹೇಳುತ್ತಾರೆ:

    ಅಭಯ್ ಬಾಲ್ಯದ ನೆನಪು ತರುವ ಸುಖಕ್ಕೆ ಸಮ ಮತ್ತಾವುದು ಇಲ್ಲ.ಬಾಲ್ಯದಲ್ಲಿ ಪರಿಸರದೊಂದಿಗಿನ ನಮ್ಮ ನಂಟು ಈಗ ಬರಿ ನೆನಪು.ಗುಬ್ಬಚ್ಚಿ, ಹರಿವ ನೀರು,ಕಣ್ತುಂಬಿಕೊಳ್ಳುತ್ತಿದ್ದ ಹಸಿರು ಬೇಲಿಗಳು,ಆಟಗಳು….ಹೀಗೆ. ಮನೆಯ ಮುಂದೆ ಬತ್ತ,ಜೋಳ,ರಾಗಿ,ಶೇಂಗಾ ಕಾಳುಗಳನ್ನು ಬಿಸಿಲೆಗೆ ಒಣಹಾಕಿದಾಗ ಅದನ್ನು ಕಾಯುವ
    ಕೆಲಸ ನಮ್ಮದಾಗಿರುತಿತ್ತು. ಆಗ ಕಂಡ ಗುಬ್ಬಚ್ಚಿಗಳ ಕಲರವವನ್ನು ನೆನೆದರೆ ರೋಮಾಚನವಾಗುತ್ತದೆ.ನಾಯಿಗಳಿಗೆ ಗುಬ್ಬಚ್ಚಿಗಳ ಮೊಟ್ಟೆ ಹುಡುಕಿ ತಿನ್ನಿಸಿದ್ದು ನೆನಪಾಗಿ ಬೇಸರವಾಗುತ್ತದೆ. ನಿಮ್ಮ ಲೇಖನ ಬಾಲ್ಯವನ್ನು ನೆನಪಿಗೆ ತಂತು ಮತ್ತು ಖುಶಿ ನೀಡಿತು.ಅದಕ್ಕಾಗಿ ಥ್ಯಾಂಕ್ಸ್…

  2. ಅನು ಪಾವ೦ಜೆ ಹೇಳುತ್ತಾರೆ:

    ನನ್ನ ಊರಿನ ಬಾಲ್ಯದ ಎಲ್ಲಾ ಹಳೆಯ ನೆನಪನ್ನ ಕೆದಕಿದ್ದಿಕ್ಕೆ ಧನ್ಯವಾದಗಳು…

    ಬೋಳು ಕಿಟಿಕಿಯ ಹೊರಗೆ
    ಚೆಲ್ಲಿದ ಒ೦ದಷ್ಟು ಕಾಳುಗಳು
    ಮು೦ಜಾನೆ ಕತ್ತಲು ಹರಿಯೋ ಮು೦ಚೆಯೇ
    ಚಿಲಿಪಿಲಿಗುಟ್ಟಿ ನನ್ನ ಎಬ್ಬಿಸೋ ಗುಬ್ಬಚ್ಚಿಗಳು
    ಕಾಳು ಹಾಕಲು ಮರೆತ ದಿನ
    ನಾ ಮಲಗೋ ಕೋಣೆ ಕಿಟಿಕಿಯಲ್ಲಿ
    ಬ೦ದು ಜೋರಾಗಿ ಕಿಚಗುಟ್ಟುತ್ತಾ
    ನನ್ನನ್ನೆಬ್ಬಿಸುವ ಪಾಪಚ್ಚಿಗಳು
    ಪೇಟೆ ಸದ್ದಿನ ಗಲಗಲದ ನಡುವೆಯೂ
    ಕಿವಿಗಿ೦ಪಾಗಿ ಹಾಡುಕ್ಕಿಸೋ ನುಲಿವ ಗೆಜ್ಜೆಗಳು
    ಉದ್ದುದ್ದ ಮಲಗಿದ ಖಾಲಿ ದಿನದ ತು೦ಬಾ
    ನಿ೦ತಲ್ಲಿ ನಿಲದೆ ಕುಪ್ಪಳಿಸೋ ನಲಿವ ಹೆಜ್ಜೆಗಳು
    ಪಯಣದ ಹಾದಿಯಲ್ಲಿ ಮೈ ತು೦ಬಾ ಹೊದ್ದುಕೊ೦ಡ
    ಹಳೆಯ ಶಾಲಿನ ಕಚಗುಳಿ ಇಡೋ ಕುಚ್ಚುಗಳು.

  3. ಸಿಂಧೂ ಹೇಳುತ್ತಾರೆ:

    ನಾನು ಬೆಂಗಳೂರಿನಲ್ಲಿ ಹಕ್ಕಿಗಳನ್ನು ಕಂಡ ಒಂದೇ ಜಾಗವೆಂದರೆ ಮಲ್ಲೇಶ್ವರಂ ಇರಬೇಕು. ನಮ್ಮ ಮನೆ ಬಳಿ ಕಾಗೆಗಳೂ ಇಲ್ಲ. ಕಳ್ಳ ಬೆಕ್ಕುಗಳು ಮಾತ್ರ ಇವೆ. ಪಕ್ಕದ ತಾರಸಿಯೊಂದರಲ್ಲಿ ಅನ್ನ ಹಾಕಿಡುತ್ತಿದ್ದುದಕ್ಕೆ ಅಳಿಲು ಬರುವುದು ಕಂಡಿದ್ದೆ. ಆದರೆ ಆ ತಾರಸಿ ಮೇಲೆ ಇನ್ನೊಂದು ಮನೆಯಾದ ಮೇಲೆ ಅದೂ ಕಂಡಿಲ್ಲ.

    ನನ್ನ ತಾಯಿ ಮನೆಯಲ್ಲಿ ಇನ್ನೂ ಕೆಂಭೂತ, ಮೈನಾ, ನೀವು ಹೇಳುವ ಕುಂಡೆಕುಸುಕ ಮತ್ತು ಹೇರಳವಾಗಿ ಕಾಗೆಗಳಿವೆಯೆಂಬುದು ಸಮಾಧಾನ.

  4. ಅನುಪಮಾಪ್ರಸಾದ್ ಹೇಳುತ್ತಾರೆ:

    ಬಾಲ್ಯದ ದಿನಗಳು ಮತ್ತೊಮ್ಮೆ ಹಸಿಯಾಯ್ತು ಅಭಯ್.

    ಮಠ ಮಠ ಮಧ್ಯಾಹ್ನ ಮನೆಯ ಹಿರಿಯರು ವಿಶ್ರಾಂತಿ ಪಡೆಯುವ ಹೊತ್ತು. ಒಂತರಾ ನಿಶ್ಯಬ್ದ ವಾತಾವರಣ. ಮನೆಯೆದುರಿನ ಜಗಲಿಯಲ್ಲಿ ಕುಳಿತು ಅಂಗಳದಲ್ಲಿ ಚಿಲಿಪಿಲಿ ಹರಟೆ ಹೊಡೆಯುತ್ತ ಕಾಲು ಹೆಕ್ಕುತ್ತಿದ್ದ ಬೇರೆ ಬೇರೆ ಜಾತಿಯ ಹಕ್ಕಿಗಳನ್ನು ನೋಡುತ್ತಾ ಮೈ ಮರೆಯುತ್ತಿದ್ದ ನೆನಪು ಉಕ್ಕುಕ್ಕಿ ಬಂತು. ಇಂದಿಗೂ ತವರಿಗೆ ಹೋದಾಗ ತಕ್ಕ ಮಟ್ಟಿಗೆ ಅವುಗಳ ದರ್ಶನ ಭಾಗ್ಯವಿದೆ. ಆದರು ಗುಬ್ಬಚ್ಚಿಗಳೆಲ್ಲ ಬರುವುದು ಕಡಿಮೆಯಾಗಿದೆ ಅಂತ ಅಚ್ಚರಿಯಿಂದ ಹೇಳ್ತಾಳೆ. ಆದರೆ ಅಂದು ಬರದಿದ್ದ ನವಿಲು,ಜಿಂಕೆಗಳು ಈಗ ತೋಟದೊಳಗೆ ಕಾಣ ಸಿಗುವುದು ವಿಪರ್ಯಾಸ! ಅವುಗಳಿಗೆ ಈಗ ತೋಟಗಳೇ ಕಾಡಿನಂತೆ ಕಾನುತ್ತಿರಬೇಕಲ್ಲವೇ?
    ವಂದನೆಗಳು, ಅನುಪಮಾಪ್ರಸಾದ್.

  5. Srinivasan Nandagopal ಹೇಳುತ್ತಾರೆ:

    Remembered you and Ismail and our meeting at the Times of India office, during my recent visit to a small village called Sonai in Maharastra. we were told that there is a beautiful temple of Renuka Matha build totally in glass. however what fascinated me most there was numerous sparrows chirping all around…

  6. Raghuram Rao ಹೇಳುತ್ತಾರೆ:

    Abhay, I should have done this long back, congratulations. remember me, I was with The Hindu in Mangalore and a good friend of your dad. it is so good to hear about the heights you have scaled!

  7. VINAYAKA.H.D ಹೇಳುತ್ತಾರೆ:

    ABHAYANNA THIS IS REALLY TRUE….
    NOT ONLY IN MANGALORE…

    “GUBBACHHIS”
    HAVE GONE OUT FROM MY CUTE VILLAGE MOVVAR TOO…

  8. santosh naik ಹೇಳುತ್ತಾರೆ:

    MANSSIGE APFTVAAGUV VISHEYA ONDU BESARVENDRE NNGE INNU SKRKRA SEZ NILLISLILLAVALLA ANTA.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s