ಸಬರ್ಮತಿಯ ತೀರದಲ್ಲಿ ಒಂದು ದಿನ


ಅಪರಿಚಿತ ನೆಲ, ಅಪರಿಚಿತ ಜನರು, ಒಮ್ಮೆ ಭೇಟಿ ಮಾಡಿ ನಡುವೆ ಒಂದಷ್ಟು ಸಮಯ ಹರಿದು ಹೋದ ನಂತರ ಮತ್ತೆ ಭೇಟಿಯಾದಾಗ ಬರುವಂಥಾ ಒಂದು ಆಪ್ತತೆ ನನ್ನನ್ನು ಇತ್ತೀಚೆಗೆ ಆವರಿಸಿತ್ತು. ಅಹ್ಮದಾಬಾದಿನಲ್ಲಿ ‘ಗುಬ್ಬಚ್ಚಿಗಳು’ ಚಿತ್ರವನ್ನು ಪ್ರದರ್ಶಿಸಲು ಒಂದು ಶಾಲೆಯವರು ಕೇಳಿಕೊಂಡಿದ್ದರು. ಈ ಹಿಂದೆ ಅಹ್ಮದಾಬಾದಿಗೆ ನಾನು ಒಮ್ಮೆ ಹೋಗಿದ್ದೆ. ಯೂತ್ ನೆಕ್ಸ್ಟ್ ಎನ್ನುವ ಪ್ರಾಜೆಕ್ಟಿಗಾಗಿ ಅಹ್ಮದಾಬಾದಿನಲ್ಲಿ ಚಿತ್ರೀಕರಣ ಮಾಡಿದ್ದೆ. ಈಗ ಮತ್ತೆ ಅಲ್ಲಿಗೆ ಹೋಗುವುದು ಸಂತಸ ತಂದಿತ್ತು. ೨೫ನೇ ತಾರೀಕಿನ ಆದಿತ್ಯವಾರ ನನ್ನ ಚಿತ್ರ ಅಹ್ಮದಾಬಾದಿನ ಸ್ಯಾಟಲೈಟ್ ಸ್ಥಳದಲ್ಲಿರುವ ಆನಂದ್ ನಿಕೇತನ್ ವಿದ್ಯಾಲಯವು ತೋರಿಸುವುದಾಗಿ ನಿಶ್ಚಯವಾಯಿತು.

ಪ್ರದರ್ಶನದ ಹಿಂದಿನ ದಿನ ಸಂಜೆ ಏಳಕ್ಕೆ, ಬೆಂಗಳೂರಿನ ಮೇಲೆ ಆವರಿಸಿದ್ದ ಮಳೆಯ ಮೋಡಗಳನ್ನು ಚೀರಿ ಹಾರಿತ್ತು ನಾನು ಕುಳಿತಿದ್ದ ವಿಮಾನ. ಈ ವಿಮಾನ ಎನ್ನುವ ವಿಷಯ ಸದಾ ನನ್ನ ಕಲ್ಪನೆಗೆ ವಿಚಿತ್ರ ಯೋಚನೆಗಳನ್ನು ಕೊಡುವಂಥಾದ್ದು. ಸಾವಿರಾರು ಅಡಿ ಎತ್ತರದಲ್ಲಿ ಹಾರುವ ಈ ಹಕ್ಕಿಯ ಉದರದೊಳಗೆ ಕುಳಿತ ನಾವು, ಯಾವುದೇ ಸಣ್ಣ ತಾಂತ್ರಿಕ ತೊಂದರೆಯಿಂದ ಏನಾದರೂ ಆಗಬಹುದು ಎಂಬಂಥಾ ಸ್ಥಿತಿಯಲ್ಲಿದ್ದಾಗಲೂ, ವಿಮಾನದೊಳಗೆ ಮಾರುವ ಹಳಸಲು ಬ್ರೆಡ್ಡು, ತಣ್ಣನೆ ಕಾಫಿಯ ಬಗ್ಗೆ ಯೋಚಿಸುವುದು, ಅದನ್ನು ಕೊಂಡು ಪ್ರತಿಷ್ಟೆಯ ಸುಳ್ಳು ಕಾವನ್ನು ಅನುಭವಿಸುವುದು ನನಗೆ ಸದಾ ಸೋಜಿಗ ಅನಿಸುತ್ತದೆ. ಹಾಗೆ ಕೊಂಡದ್ದನ್ನು ಗಂಟಲಿಗಿಳಿಸುತ್ತಿರಬೇಕಾದರೆ, ಹವಾ ವೈಪರಿತ್ಯದಿಂದ ವಿಮಾನ ಒಮ್ಮೆ ಓಲಾಡಿದರೆ, ಎರಡು ತುತ್ತುಗಳ ನಡುವೆ ಒಮ್ಮೆ ‘ಕಿಟಾರ್!’ ಎಂದು ಪ್ರಾಣ ಭಯದಲ್ಲಿ ಅರಚಿಕೊಂಡು ಮತ್ತೆ ತಿನ್ನುವುದರಲ್ಲಿ ಮಗ್ನರಾಗುವುದು ನಿಜಕ್ಕೂ ಸೋಜಿಗವಲ್ಲವೇ? ನಾನು ಇವನ್ನೆಲ್ಲ ಮಾಡಿಲ್ಲ ಎಂದಲ್ಲ. ಆದರೆ ಜೀವನ ಏನು ಎನ್ನುವುದರ ನಿಜವಾದ ಅರ್ಥ ಇಲ್ಲಿ ಸುಲಭವಾಗಿ ಕಾಣುತ್ತದೆ ಅನಿಸುತ್ತದೆ. ಅದಂತಿರಲಿ. ರಾತ್ರಿ ಹನ್ನೊಂದಕ್ಕೆ ಅಹ್ಮದಾಬಾದಿಗೆ ತಲುಪಿದ ಮೇಲೆ ಕಾಯುತ್ತಿದ್ದ ವಾಹನವನ್ನು ಹತ್ತಿ ಹೋಟೇಲಿಗೆ ಹೋದದ್ದಾಯಿತು.

ಹೋಟೇಲಿನಲ್ಲಿ ಗೆಳೆಯ ಉಮೇಶ್ ಕುಲ್ಕರ್ಣಿ ವಾಸವಿದ್ದ. ಅವನ ಚಿತ್ರವನ್ನು ಅದೇ ದಿನ ಬೆಳಗ್ಗೆ ಅದೇ ಶಾಲೆಯಲ್ಲಿ ತೋರಿಸಲಾಗಿತ್ತು. ಇದೇ ಉಮೇಶನ್ನು ನಾನು ಹಿಂದಿನ ಬಾರಿ ಭೇಟಿಯಾಗಿದ್ದು, ರಾಷ್ಟ್ರಪ್ರಶಸ್ತಿ ಪಡೆಯಲೆಂದು ದೆಹಲಿಗೆ ಹೋಗಿದ್ದಾಗ. ಅವನ ಚಿತ್ರಕ್ಕೂ ಇನ್ನೊಂದು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿತ್ತು. ಅದಕ್ಕೂ ಮೊದಲು ಭೇಟಿಯಾಗಿದ್ದು ಬರ್ಲಿನ್ ಚಿತ್ರೋತ್ಸವದಲ್ಲಿ. ಮತ್ತೆ ಎಪ್ರಿಲ್ ಇಪ್ಪತ್ತನಾಲ್ಕರ ರಾತ್ರಿ ಅಹ್ಮದಾಬಾದಿನ ಅಜ್ಞಾತ ಹೋಟೇಲ್ ಒಂದರ ಕೋಣೆಯಲ್ಲಿ ಭೇಟಿ. ಮತ್ತೆ ಎಂಥಾ ಸೋಜಿಗದ ವಿಚಾರ ಇದಲ್ಲವೇ? ಇಂಥಾ ಪರಿಸ್ಥಿತಿ ಜಗತ್ತಿನಾದ್ಯಂತ ಇರುವಾಗ, ಮಾನವ ನಿಜಾರ್ಥದಲ್ಲಿ ವಿಶ್ವ ಮಾನವನಾಗುತ್ತಿರುವಾಗ, ಧರ್ಮದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಹೋರಾಡುವುದು ಎಂಥಾ ಮೂರ್ಖತನ ಎಂದು ನಾನೇ ಅಚ್ಚರಿಪಡುತ್ತಾ ಅಂದು ರಾತ್ರಿ ಎರಡು ಗಂಟೆಗೆ ನಿದ್ರಾವಶನಾದೆ.

ಇಪ್ಪತ್ತೈದರ ಬೆಳಗ್ಗೆ ಆನಂದ್ ನಿಕೇತನ್ ವಿದ್ಯಾಲಯದಲ್ಲಿ ಚಿತ್ರ ಪ್ರದರ್ಶನ ಸಾಂಗವಾಗಿ ಸಾಗಿತು. ಚಿತ್ರ ಪ್ರದರ್ಶನಕ್ಕೆ ಮೊದಲು ಅಲ್ಲಿನ ಉಪನ್ಯಾಸಕರು, ಶಾಲಾ ಪ್ರಮುಖರನ್ನು ಭೇಟಿ ಮಾಡಿದ್ದಾಯ್ತು. ಗುಜರಾತಿನಲ್ಲಿ ಇರುವ ಶಿಕ್ಷಣದ ಕೊರತೆ, ಅದನ್ನು ತುಂಬುವಲ್ಲಿ ಈಗಿನ ಸರಕಾರ ನಡೆಸುತ್ತಿರುವ ಸಕಾರಾತ್ಮಕ ಕೆಲಸಗಳ ಕುರಿತಾಗಿ ಒಂದಷ್ಟು ಮಾಹಿತಿ ದೊರೆಯಿತು. ಆನಂದ್ ನಿಕೇತನ್ ವಿದ್ಯಾಲದ ಅಹ್ಮದಾಬಾದಿನಲ್ಲಿ ಹಲವು ಶಾಖೆಗಳನ್ನು ಹೊಂದಿದ್ದು, ಜನಪ್ರಿಯ ಶಾಲೆಗಳಲ್ಲಿ ಪ್ರಮುಖವಾಗಿದೆ. ಅಲ್ಲಿನ ಮಕ್ಕಳು ಚಿತ್ರವನ್ನು ನೋಡಿದ ನಂತರ ಸಂವಾದದಲ್ಲಿ ಬಹಳ ಆಸಕ್ತಿಯಿಂದ ಪಾಲ್ಗೊಂಡರು. ಮಧ್ಯಾಹ್ನದ ವೇಳೆಗೆ ಚಿತ್ರ ಪ್ರದರ್ಶನ, ಸಂವಾದ ಕಾರ್ಯಕ್ರಮ ಮುಗಿಯಿತು. ಮತ್ತೆ ಸಂಜೆಯವರೆಗೆ ಅಹ್ಮದಾಬಾದಿನ ೪೫ ಡಿಗ್ರಿ ಒಣ ಬೇಗೆಯಲ್ಲಿ ಹೊರಗೆ ಕಾಲಿಡುವ ಧೈರ್ಯ ಮಾಡದೇ, ಹೋಟೇಲಿನ ಕೋಣೆಯ ತಂಪಿನಲ್ಲೇ ಸಮಯ ಕಳೆದೆ. ಸಂಜೆ ಅಶ್ಪಾಕ್ ಭಾಯಿ ನನ್ನನ್ನು ಅಹ್ಮದಾಬಾದ್ ತೋರಿಸಲು ಕರೆದೊಯ್ಯುವವರಿದ್ದರು.

ಸಂಜೆ ಸರಿಯಾಗಿ ನಾಲ್ಕುಗಂಟೆಗೆ ಬಂದ ಅಶ್ಫಾಕ್ ಭಾಯಿ ಮೊದಲು ಕರೆದುಕೊಂಡು ಹೋದದ್ದು ಗಾಂಧೀಜಿಯವರ ಸಬರ್ಮತಿ ಆಶ್ರಮಕ್ಕೆ. ಇದನ್ನು ಹಿಂದೆಯೇ ನೋಡಿದ್ದೆನಾದರೂ, ನಾನು ಮುಂದಿನ ತಿಂಗಳಿಂದ ಆರಂಭಿಸಲಿರುವ ಚಿತ್ರ ಶಿಕಾರಿಯ ಹಿನ್ನೆಲೆಯಲ್ಲಿ ಒಂದಷ್ಟು ಸಹಕಾರೀ ವಿಚಾರಗಳು, ವಿಷಯಗಳು ದೊರೆತಾವು ಎಂದು ಆಸಕ್ತಿಯಿಂದ ಮತ್ತೆ ಇಡೀ ಆಶ್ರಮವನ್ನು ನೋಡಿದೆ. ಆಶ್ರಮದಲ್ಲಿ ಹಿಂದಿನ ಬಾರಿ ನಾನು ಹೋದಾಗ ಕಂಡ ಅಳಿಲುಗಳನ್ನು, ಅನೇಕ ಹಿರಿಯ ಜೀವಗಳನ್ನು ಮತ್ತೆ ಕಂಡೆ, ಹಿಂದಿನ ಬಾರಿಯೂ ಅವರ ಪರಿಚಯ ನನಗೆ ಇರಲಿಲ್ಲ, ಈ ಬಾರಿಯೂ ಪರಿಚಯ ಇರಲಿಲ್ಲ. ಆದರೂ, ಅದೇನೋ ಆಪ್ತತೆ ಹುಟ್ಟಿತ್ತು ನನ್ನಲ್ಲಿ ಈ ಎರಡನೇ ಭೇಟಿಯಲ್ಲಿ. ಆಶ್ರಮ ಸರಳತೆಯೇ ಮೈವೆತ್ತಂತಿದೆ.

ಆದರೆ ಗಾಂಧೀ ಆಶ್ರಮದ ಹಿಂದೆ ಸಬರ್ಮತಿ ನದಿಯ ತೀರದಲ್ಲಿ, ಆಧುನಿಕ ಕಾಮಗಾರಿಗಳು ದೈತ್ಯಪ್ರಮಾಣದಲ್ಲಿ ನಡೆಯುತ್ತಿದ್ದುದನ್ನು ಕಂಡು ಬೇಸರವಾಯಿತು. ಅಲ್ಲಿ, ನದಿಯಲ್ಲಿ ಕೃತಕ ಆಳವನ್ನು ಸೃಷ್ಟಿಸಿ ದೋಣಿವಿಹಾರವನ್ನು ಏರ್ಪಡಿಸುವುದು, ಶಾಪಿಂಗ್ ಮಾಲ್ ತಯಾರಿಸುವುದು ಸರಕಾರದ ಯೋಜನೆಯಂತೆ. ಗಾಂಧೀಜಿಯವರಿಗೆ ಅವರ ಹುಟ್ಟೂರು ಕೊಡುವ ಕೊಡುಗೆ ಇದು ಎಂದು ಮನಸ್ಸಿನಲ್ಲೇ ನಕ್ಕೆ ನಾನು. ಅಲ್ಲೇ ಕಬ್ಬಿಣದ ಕೈತಾಂಗೊಂದರಲ್ಲಿ ಕುಳಿತ ಮೈನಾ ಹಕ್ಕಿ ತನ್ನ ಬಾಯಿತೆರೆದು ಅಚ್ಚರಿಯಿಂದ ಕಾಲನ ಮಹಿಮೆಯನ್ನು ನೋಡುತ್ತಿತ್ತು.

ಮತ್ತೆ ಅಲ್ಲಿಂದ ಮುಂದೆ ನೋಡಲು ಹೋದದ್ದು ತೀನ್ ದರ್ವಾಜಾ ಹೆಸರಿನ ಸಣ್ಣ ಮಸೀದಿಯೊಂದನ್ನು. ಅಲ್ಲಿನ ವಿಶೇಷವೆಂದರೆ, ಅಲ್ಲಿ ಇರುವ ಮೂರು ಬಾಗಿಲುಗಳಲ್ಲಿ ಹಾಕಿರುವ ಕಲ್ಲಿನ ಜಾಲರಿಗಳನ್ನು ಒಂದೇ ಶಿಲೆಯಲ್ಲಿ ಕೆತ್ತಲಾಗಿದೆ. ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಭಕ್ತರು ಕುಳಿತು ನಮಾಜ್ ಮಾಡುವುದನ್ನು ನೋಡುವುದೇ ಒಂದು ಅಂದ. ಅಲ್ಲಿ ಪ್ರಾರ್ಥನೆಗೆ ಮೊದಲು ಕಾಲುತೊಳೆಯಲೆಂದು ಸಣ್ಣದೊಂದು ನೀರ ತೊಟ್ಟಿ ಇದೆ. ಅಲ್ಲಿ ನೀರು ಕುಡಿಯಲು ಅನೇಕ ಪಾರಿವಾಳಗಳು ಬರುತ್ತವೆ. ಅಲ್ಲೇ ಪಕ್ಕದಲ್ಲಿ ಯಾರೋ ಪುಣ್ಯಾತ್ಮರು ಒಂದಷ್ಟು ಕಾಳುಗಳನ್ನೂ ಸುರಿವಿಟ್ಟಿರುತ್ತಾರೆ ಈ ಪಕ್ಷಿಗಳಿಗೆಂದು. ಕಾಳುಗಳನ್ನು ತಿನ್ನುತ್ತಾ, ಕೊಳದಲ್ಲಿ ನೀರು ಕುಡಿಯುತ್ತಾ, ಉಳುಕಿ ಹೋಗುವಂಥಾ ತೀವ್ರತೆಯಲ್ಲಿ ಕತ್ತು ಕುಣಿಸುತ್ತಾ ಇರುವ ಪಾರಿವಾಳಗಳನ್ನು ನೋಡುವುದೇ ಒಂದು ಸೋಜಿಗ. ಅಲ್ಲಿ ಒಂದಷ್ಟು ಚಿತ್ರಗಳನ್ನು ನನ್ನ ಬುಟ್ಟಿಗಿಳಿಸಿಕೊಂಡು ಮುಂದುವರೆದೆ.

ಮುಂದಿನ ತಾಣ ರೋಜಾ ಮಸೀದಿ. ಅಯ್ಯೋ! ಇನ್ನೊಂದು ಮಸೀದಿ ಎಂದು ಒಳಗೇ ನಿಟ್ಟುಸಿರಿಟ್ಟು ಹೋದರೂ, ಅಲ್ಲಿನ ದೃಶ್ಯಾವಳಿಗಳು ನನ್ನನ್ನು ತೀವ್ರವಾಗಿ ಆವರಿಸಿಕೊಂಡು ಬಿಟ್ಟವು. ಅಂದು ರವಿವಾರ. ರಜಾದಿನ. ರಜಾ ದಿನಗಳಲ್ಲಿ ಒಂದು ಪೇಟೆಯ ಜನರು ವಿರಾಮವನ್ನಾಚರಿಸಲು ಎತ್ತ ಹೋದಾರು? ಮಸೀದಿಗೆ?! ಹೌದು. ಮಸೀದಿಯ ಆವರಣ ಸಾಕಷ್ಟು ದೊಡ್ಡದಾಗಿದೆ. ಅದರ ತುಂಬ ಜನ ಸಂದಣಿ. ಸಣ್ಣ ಮಕ್ಕಳು ಚೆಂಡಾಟವಾಡುತ್ತಿದ್ದರೆ, ಹಿರಿಯರು ನೆಲಕ್ಕೆ ಹಾಸಿಕೊಂಡು ಕುಳಿತು ಕಡ್ಲೇಪುರಿ ತಿನ್ನುತ್ತಿದ್ದರು. ನವ ಪ್ರೇಮಿಗಳು ಸರಸಸಲ್ಲಾಪದಲ್ಲಿ ತೊಡಗಿರಲು, ಹಳೆ ದಂಪತಿಗಳು ಕುಳಿತು ನಾಳೆಯ ಬಗ್ಗೆ ಗಾಢರಾಗಿದ್ದರು. ನನಗೆ ಇದು ಸಂಪೂರ್ಣ ಕುತೂಹಲಕರ ದೃಶ್ಯವಾಗಿತ್ತು. ಹಿರಿಯರಾದ ಜಯಂತ್ ಕಾಯ್ಕಿಣಿಯವರು ಹೇಳಿದ ಮಾತೊಂದು ನೆನಪಾಯಿತು. ಅವರ ಹುಟ್ಟೂರಾದ ಗೋಕರ್ಣದಲಿ ಸಮುದ್ರ ಸಮೀಪದಲ್ಲೇ ಇರುವ ಕಾರಣ ಜನರ ಕೆಟ್ಟ ಯೋಜನೆಗಳ ಮೇಲೆ ಸಮುದ್ರದ ಒಳ್ಳೆಯ ಗಾಳಿ ಬೀಸಿ ಅವರ ಪ್ರಜ್ಞೆಯನ್ನು ಸ್ವಸ್ಥವಾಗಿಡುವುದಂತೆ. ಬೆಂಗಳೂರಿನಲ್ಲಿ ಸಮುದ್ರವಿಲ್ಲ, ಇಲ್ಲಿ ಅದಕ್ಕೇ ಒಂದು ತರಹದ ಮಾನಸಿಕ ತೊಳಲಾಟ ಎಂದಿದ್ದರು ಅವರೊಮ್ಮೆ ಹೀಗೇ ಚಿತ್ರಗೀತೆಯೊಂದಕ್ಕೆಂದು ಅವರನ್ನು ಭೇಟಿ ಮಾಡಿದ್ದಾಗ.

ಈ ಜನ ವೈಯಕ್ತಿಕ ತಾಣದ ಕೊರತೆಯಿಂದಾಗಿ ಸಮೂಹದಲ್ಲೇ ಏಕಾಂತೆತೆ ಪಡೆಯುತ್ತಿದ್ದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥಾದ್ದಾಗಿತ್ತು. ಅಲ್ಲಿನ ನೋಟಗಳನ್ನೆಲ್ಲಾ ಕಣ್ಣಲ್ಲೂ, ಕನ್ನಡಿಯಲ್ಲೂ (ಕ್ಯಾಮರಾ) ಸೆರೆಹಿಡಿದು ಮುಂದೆ ಸಾಗಿದೆ ನಾನೂ ಹಾಗೂ ಅಶ್ಪಾಕ್ ಭಾಯಿ. ಈ ಕೊನೆಯ ಕ್ಷೇತ್ರದರ್ಶನ ನಿಜಕ್ಕೂ ನನ್ನ ಪಾಲಿಗೆ ಅಧ್ಬುತವಾಗಿತ್ತು.

ಮತ್ತೆ ಸಂಜೆ ಆನಂದ್ ನಿಕೇತನ್ ಶಾಲೆಯವರು ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಕ್ಕೆ ಕರೆದಿದ್ದರು. ಮಕ್ಕಳಾಟ ಎಂತಿದ್ದರೂ ಚೆನ್ನ. ಅದನ್ನು ತಪ್ಪಿಸಲು ಮನಸಾಗದೇ ಮತ್ತೆ ಶಾಲೆಗೆ ಹೋದೆ. ಎಂಥಾ ಶಕ್ತಿ ಆ ಮಕ್ಕಳಲ್ಲಿ, ಮುಗ್ಧ ಮುಖಗಳಲ್ಲಿ ಎದುರಿನ ಸಭೆಯಲ್ಲಿ ಕುಳಿತ ತಮ್ಮ ಹೆತ್ತವರು ತಮ್ಮ ಪ್ರತಿಭೆಯನ್ನು ನೋಡುತ್ತಿರುವುದರ ಕುರಿತಾಗಿ ಹೆಮ್ಮೆ, ತಾವು ಮಾಡುತ್ತಿರುವ ಕೆಲಸದ ಕುರಿತಾಗಿ ಅಪಾರವಾದ ನಂಬಿಕೆ, ಸಂಗೀತ, ಹಾಡು, ಮಕ್ಕಳ ಕುಣಿತ ನೋಡಿದಷ್ಟೂ ಮನಸ್ಸು ತಣಿಯದು. ನನಗೆ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕಳೆದ ನನ್ನ ಬಾಲ್ಯದ ದಿನಗಳು, ನಾಟಕ ಅಭ್ಯಾಸ, ಪ್ರದರ್ಶನಗಳು, ಹಾಡು, ಕುಣಿತಗಳು ನೆನಪಾಗಿ ನಾನು ನೆನಪದೋಣಿಯಲ್ಲಿ ವಿಹರಿಸಲಾರಂಭಿಸಿದ್ದೆ. ಅಷ್ಟರಲ್ಲಿ ಅಶ್ಪಾಕ್ ಭಾಯಿ ನನ್ನನ್ನು ಮುಂದೆ ಇನ್ನೊಂದು ಭೇಟಿ ಇರುವುದರ ಕುರಿತಾಗಿ ಎಚ್ಚರಿಸಿದರು. ಸಮಯ ಆಗಲೇ ಏಳೂವರೆ ಸಂಜೆಯಾಗಿತ್ತು. ಆದರೆ ಆನಂದ್ ನಿಕೇತನ್ ವಿದ್ಯಾಲಯದವರೇ ನಡೆಸುವ ಇನ್ನೊಂದು ಶಾಲೆಯಲ್ಲಿ ನಾಸಿಕ್ಕಿನಿಂದ ಬಂದಿರುವ ಆದಿವಾಸಿ ಮಕ್ಕಳಿಗೆ ನನ್ನನ್ನು ಭೇಟಿ ಮಾಡುವ ಆಸೆಯಿತ್ತು ಎಂದು ಹೇಳಿದರು. ಇದೂ ಒಂದು ಅಪರೂಪದ ಅವಕಾಶವಾದ್ದರಿಂದ ತಪ್ಪಿಸುವ ಮನಸ್ಸಾಗದೇ ಹೊರಟೆ.

ಐದಾರು ಕಿಲೋಮೀಟರ್ ಪ್ರಯಾಣದ ನಂತರ ಶಿಲಜ್ ಎಂಬ ಹಳ್ಳಿಯಲ್ಲಿ ಇರುವ ಆ ಇನ್ನೊಂದು ಶಾಲೆಯನ್ನು ತಲುಪಿದೆ. ಅಲ್ಲೊಂದು ರಂಗಮಂಚ ಅದರ ತುಂಬಾ ಮಕ್ಕಳು ನಡುವೆ ಒಬ್ಬ ತೇಜಸ್ವೀ ಯುವಕ. ಅವನ ಹೆಸರು ವಾಲ್ಟರ್ ಪೀಟರ್. ಮೂಲತಃ ದೆಹಲಿಯವನಾದ ಇವನು ಅಧ್ಯಯನದಲ್ಲಿ ರಂಗಭೂಮಿ ಬಗ್ಗೆ ಅಧ್ಯಯನ ಮಾಡಿ, ಇಲ್ಲಿ ಮಕ್ಕಳಿಗೆ ಬೇಸಗೆಯಲ್ಲಿ ಅದನ್ನೇ ಶಿಬಿರರೂಪದಲ್ಲಿ ಕಲಿಸುತ್ತಾರೆ. ಸಧ್ಯದ ಮಕ್ಕಳು ಹಿಂದಿನ ಒಂದು ತಿಂಗಳಲ್ಲಿ ಇವನ ಕೈಕೆಳಗೆ ಕಲಿತದ್ದನ್ನು ತೋರಿಸಲು ಉತ್ಸುಕರಾಗಿದ್ದರು. ಆದಿವಾಸಿ ಮಕ್ಕಳಿಗೆ ಇಂಗ್ಲೀಶ್ ಪಾಠವನ್ನು ನಾಟಕದ ರೂಪದಲ್ಲಿ ಕಲಿಸಿದ್ದ ವಾಲ್ಟರ್. ಮಕ್ಕಳು ಇದು ನಾಟಕ ಎನ್ನುವ ಧೈರ್ಯದಲ್ಲಿ, ಇಂಗ್ಲೀಶ್ ವಾಕ್ಯಗಳನ್ನು ಧೈರ್ಯದಲ್ಲಿ ಉಚ್ಚರಿಸುತ್ತಾ, ಆಡುತ್ತಿದ್ದರು. ಅವರನ್ನು, ಅವರ ಅಭಿನಯ, ವಾಕ್ಚಾತುರ್ಯವನ್ನು ಸವಿಯುವುದೇ ಬಹಳ ಮುದ ನೀಡುವ ವಿಷಯವಾಗಿತ್ತು. ಕೇವಲ ಒಂದು ಗಂಟೆಯ ವ್ಯತ್ಯಾಸದಲ್ಲಿ ಸಮಾಜದಲ್ಲಿನ ಶ್ರೀಮಂತರ ಮಕ್ಕಳ ಆಟವನ್ನೂ, ಅತಿ ಬಡವ ಆದಿವಾಸೀ ಮಕ್ಕಳನ್ನೂ ರಂಗಮಂಚದಲ್ಲಿ ನೋಡಿದ ಅನುಭವವನ್ನೇನ ಬಣ್ಣಿಸಲಿ? ಮಕ್ಕಳ ಅಭಿವ್ಯಕ್ತಿ ಅಷ್ಟೇ ಮುಗ್ಧ, ಅಷ್ಟೇ ನೈಜ. ಅವುಗಳನ್ನು ಅವರು ಹಾಗೇ ಕಾಯ್ದುಕೊಳ್ಳುವಂತಿದ್ದರೆ? ನಮ್ಮ ತಲೆಗಳಲ್ಲಿ ಬಿಳಿ ಕೂದಲುಗಳು ಮೂಡದೇ ಇರುವಂತಿದ್ದರೆ?!

ಮತ್ತೆ ಮನಸ್ಸಿಲ್ಲದ ಮನಸ್ಸಿನಲ್ಲಿ ಮಕ್ಕಳಿಗೆ ವಿದಾಯ ಹೇಳಿ ಹೋಟೇಲ್ ತಲುಪಿದೆ. ಮರುದಿನ ಬೆಳಗ್ಗೆ ಆರುಗಂಟೆಗೇ ನಾನು ಉಕ್ಕಿನ ಹಕ್ಕಿಯನೇರಿ ಬೆಂಗಳೂರಿಗೆ ಹೋಗಲೇ ಬೇಕಿತ್ತು. ಅಹ್ಮದಾಬಾದಿನಲ್ಲಿ ಮತ್ತೊಂದು ರಾತ್ರಿಯಾಗಿತ್ತು. ನಾನು ದಿನಪ ನೀಡಿದ ಅನುಭವಗಳ ಭಾರವನ್ನು ಕಣ್ಣೆವೆಯ ಮೇಲೆ ತಡೆಯಲಾರದೇ ನಿದ್ರಾವಶನಾದೆ…

ಈ ಪ್ರವಾಸದ ಎಲ್ಲಾ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

This entry was posted in Society, Travelogue. Bookmark the permalink.

7 Responses to ಸಬರ್ಮತಿಯ ತೀರದಲ್ಲಿ ಒಂದು ದಿನ

  1. shailaja s bhat ಹೇಳುತ್ತಾರೆ:

    Abhaya,
    It was excellent, I liked the picture of goats very much. After reading your experience of Sabarmathi and Ahmedabad I want to go there.Who has arranged this film show of Gubbacchigalu ?
    Shailakka

  2. Chetan Hosaktoe ಹೇಳುತ್ತಾರೆ:

    ನಿಮ್ಮ ಲೇಖನ ಮತ್ತು ನೀವು ಕ್ಲಿಕ್ಕಿಸಿದ ಚಿತ್ರಗಳು ನನ್ನನ್ನೂ ಅಲ್ಲಿಗೇ ಕರೆದೊಯ್ಯಿತು….

    ಚೇತನ್

  3. Pradeep Pai H ಹೇಳುತ್ತಾರೆ:

    ….ಗುಜರಾತಿನಲ್ಲಿ ಇರುವ ಶಿಕ್ಷಣದ ಕೊರತೆ, ಅದನ್ನು ತುಂಬುವಲ್ಲಿ ಈಗಿನ ಸರಕಾರ ನಡೆಸುತ್ತಿರುವ ಸಕಾರಾತ್ಮಕ ಕೆಲಸಗಳ…..

    ….ನದಿಯಲ್ಲಿ ಕೃತಕ ಆಳವನ್ನು ಸೃಷ್ಟಿಸಿ ದೋಣಿವಿಹಾರವನ್ನು ಏರ್ಪಡಿಸುವುದು, ಶಾಪಿಂಗ್ ಮಾಲ್ ತಯಾರಿಸುವುದು ಸರಕಾರದ ಯೋಜನೆಯಂತೆ. ಗಾಂಧೀಜಿಯವರಿಗೆ ಅವರ ಹುಟ್ಟೂರು ಕೊಡುವ ಕೊಡುಗೆ ಇದು ಎಂದು ಮನಸ್ಸಿನಲ್ಲೇ ನಕ್ಕೆ ….

    ಒ೦ದೇ ಸರಕಾರದ ವಿಭಿನ್ನ ಯೋಚನೆ ಮತ್ತು ಯೋಜನೆಗಳು!!! ಹಾಗಾದರೆ ಅಭಿವೃದ್ದಿ ಅ೦ದರೆ ……. ದಿಕ್ಕು ತೋಚದ ಕಡೆ ನುಗ್ಗುವ ಪ್ರಕ್ರಿಯೆಯೆ?

  4. Nagashree sriraksha ಹೇಳುತ್ತಾರೆ:

    Abhay,

    Baravanige, adake poorakavaada chithragalu.. nammade anubhava ennuvanthe bhaasavayithu…

  5. Sindhoo ಹೇಳುತ್ತಾರೆ:

    ಚೆನ್ನಾಗಿದೆ.

  6. Laxminarayana Bhat P ಹೇಳುತ್ತಾರೆ:

    Dear Abhaya,

    The travel-narrative is excellent. ukkina hakkige vEga oMdE aasti; uLidaMte gagana-yaana bOru!

    muduka mudukiyara photos tuMbaa cennaagi baMdide. khushi aayitu.

  7. mala ಹೇಳುತ್ತಾರೆ:

    chitra hagu lekhana kushi ayitu.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s