ಸಂಕಲನಕಾರ in ಸಂಕಟ!


ಪ್ರತಿಯೊಂದು ಚಿತ್ರಕ್ಕೂ ಒಬ್ಬ ಸಂಕಲನಕಾರನ ಅಗತ್ಯವಿರುತ್ತದೆ. ಏನಿವನ ಕೆಲಸ? ಒಟ್ಟಾರೆಯಾಗಿ ಚಿತ್ರೀಕರಿಸಿ ತಂದ ಸರಕನ್ನು ಕತ್ತರಿಸಿ, ಅಂಟಿಸಿ, ಜೋಡಿಸಿ ಒಂದು ಸಿನೆಮಾವನ್ನು ತಯಾರಿಸುವುದೇ ಇವನ ಕೆಲಸವೇ? ಹಾಗಿದ್ದರೆ, ಇದೊಂದು ಯಾಂತ್ರಿಕವಾದ ಕೆಲಸವೇ? ಇದಕ್ಕೆ ಒಬ್ಬ ನುರಿತ ಕಲಾವಿದ ಹಾಗೂ ತಂತ್ರಜ್ಞ ಇವರಿಬ್ಬರಲ್ಲಿ ಯಾರು ಬೇಕಾಗಿರುವುದು? ಹೀಗೆ ಅನೇಕ ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಒಂದು ಚಿತ್ರದ ರೂಪುಗೊಳ್ಳುವಿಕೆಯಲ್ಲಿ ಅತಿ ಮಹತ್ವದ ಅನೇಕ ಹುದ್ದೆಗಳಲ್ಲಿ ಸಂಕಲನಕಾರನದ್ದೂ ಒಂದು. ಈ ಬಾರಿ ಸಂಕಲನಕಾರನ ಕೆಲಸ, ಕಾರ್ಯಗಳ ಕುರಿತಾಗಿ ಒಂದಿಷ್ಟು ಮಾತು.

ಕಥೆ, ಚಿತ್ರಕಥೆಗಳೆಲ್ಲಾ ಸಿದ್ಧವಾದ ಮೇಲೆ, ಸಿನೆಮಾ ಚಿತ್ರೀಕರಣದ ಹಂತಕ್ಕೆ ಬರುತ್ತದೆ. ಅಲ್ಲಿ ಚಿತ್ರೀಕರಣದ ಅನುಕೂಲಕ್ಕೆ ತಕ್ಕಂತೆ, ಹಣ, ಸಮಯ, ಶ್ರಮದ ಉಳಿತಾಯಕ್ಕಾಗಿ ಚಿತ್ರಕಥೆಯ ಭಿನ್ನ ಭಿನ್ನ ಭಾಗಗಳನ್ನು ಅವುಗಳ ಕಾಲಕ್ರಮಣಿಕೆಗೆ ವ್ಯತಿರಿಕ್ತವಾಗಿ ಚಿತ್ರೀಕರಿಸಿಕೊಳ್ಳಲಾಗುತ್ತದೆ. ಇಡೀ ಚಿತ್ರದ ಅನೇಕ ಬಿಡಿ ಭಾಗಗಳನ್ನು ಹೀಗೆ ಚಿತ್ರೀಕರಿಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಶಾಟ್ ಚಿತ್ರೀಕರಿಸಿಕೊಳ್ಳುವಾಗಲೂ ಅದು ಯಾವ ದೃಶ್ಯದ ಯಾವ ಶಾಟ್, ದಿನವೇ ರಾತ್ರಿಯೇ, ಇತ್ಯಾದಿ ವಿವರಗಳನ್ನು ಬರೆದಿರುವ ಕ್ಲಾಪ್ ಕೂಡಾ ಚಿತ್ರೀಕರಿಸಿಕೊಳ್ಳಲಾಗುತ್ತದೆ. ಇದನ್ನು ನೀವು ಗಮನಿಸಿಯೇ ಇರುತ್ತೀರಿ. ಹೀಗೆ ಒಟ್ಟಿನಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಿ, ಅದನ್ನು ಸಂಸ್ಕರಣೆ ಮಾಡಿಯಾದಾಗ ಒಂದು ಗೊಂದಲಮಯ ದೈತ್ಯ ರಾಶಿಯಾಗಿ ಚಿತ್ರೀಕರಿಸಲ್ಪಟ್ಟ ಒಟ್ಟು ಶಾಟ್ಸ್ ತಯಾರಿರುತ್ತವೆ. ಅವುಗಳೆಲ್ಲವೂ ಭಿನ್ನ ಭಿನ್ನ ಡಬ್ಬಿಗಳಲ್ಲಿ ಅಡಗಿದ್ದು ಸರಿಯಾದ ಜೋಡಣೆಗೆ ಸಿದ್ಧವಿರುತ್ತವೆ. ಇನ್ನು ಆರಂಭವಾಗುವುದೇ ಇವೆಲ್ಲವನ್ನೂ ಜೋಡಿಸಿ, ನಿರ್ದೇಶಕನ ಮನಸ್ಸಿನಲ್ಲಿ ಮೂಡಿದ್ದ ಚಿತ್ರಕ್ಕೆ ಹತ್ತಿರದ ಒಂದು ಜೋಡಣೆಯನ್ನು ಮಾಡುವ ಕೆಲಸ. ಅದು ಸಂಕಲನಕಾರನ ಕೆಲಸ.

ಹಾಗಾದರೆ, ಸಂಕಲನಕಾರ ಕೇವಲ ನಿರ್ದೇಶಕನ ಮನಸ್ಸಿನನುಸಾರ ಕೆಲಸ ಮಾಡುವ ತಂತ್ರಜ್ಞನೇ? ಅಲ್ಲ. ಚಿತ್ರೀಕರಣ ಮಾಡುವಾಗ ಹೇಗೆ ಕ್ಯಾಮರಾಮನ್ ಸಹಾಯದಲ್ಲಿ ನಿರ್ದೇಶಕ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿರುತ್ತಾನೋ, ಹಾಗೇ ಸಂಕಲನಕಾರ ತನ್ನೆದುರಿನಲ್ಲಿರುವ ಅಗಾಧ ಶಾಟ್ಸ್ ಸರಣಿಯನ್ನು ನೋಡಿಕೊಂಡು, ಕೇವಲ ಅದನ್ನೇ ಆಧರಿಸಿಕೊಂಡು ಒಂದು ಕಥೆಯನ್ನು ಹೇಳುವ ಪ್ರಯತ್ನವನ್ನು ಮಾಡುತ್ತಿರುತ್ತಾನೆ. ಹೀಗೆ ತನ್ನ ಕೈಸೇರಿದ ಶಾಟ್ಸಗಳನ್ನೇ ಬಳಸಿಕೊಂಡು ಒಂದು ಕಥೆಯನ್ನು ಇಡಿಯಾಗಿ ಹೇಳುವ ಪ್ರಯತ್ನವನ್ನು ಸಂಕಲನಕಾರ ಮಾಡಬೇಕಾಗಿರುತ್ತದೆ. ಇಲ್ಲಿ ಅವನೊಳಗಿನ ಉತ್ತಮ, ಸೃಜನಶೀಲ ಕಥೆಗಾರ, ಪರಿಣತ ತಂತ್ರಜ್ಞ ಈ ಎರಡೂ ಮಗ್ಗುಲುಗಳು ಕೆಲಸ ಮಾಡಬೇಕಾಗುತ್ತವೆ.

ಚಿತ್ರೀಕರಣದ ಸಂದರ್ಭದಲ್ಲಿ ಬಿಸಿಲು, ಮಳೆ ಚಳಿಗಳನ್ನೆದುರಿಸುತ್ತಾ, ಕ್ಷಣ ಕ್ಷಣಕ್ಕೂ ಎದುರಾಗುತ್ತಿರುವ ಸಮಸ್ಯೆಗಳನ್ನು ಎದುರಿಸುತ್ತಾ ಚಿತ್ರ ತಂಡವು ಚಿತ್ರೀಕರಿಸಿ ತರುವ ದ್ರವ್ಯವನ್ನು, ಹವಾನಿಯಂತ್ರಿತ ಕೋಣೆಯೊಳಗಡೆಯೇ ಕುಳಿತು, ಕೇವಲ ಪ್ರೇಕ್ಷಕನಂತೆ ವೀಕ್ಷಿಸುತ್ತಾ, ಅದರಲ್ಲೇ ಒಂದು ಕಥೆಯನ್ನು ಕಾಣುವುದು, ಕಟ್ಟುವುದು ನಿಜಕ್ಕೂ ಒಂದು ಅನುಭವವೇ ಸರಿ. ಚಿತ್ರೀಕರಣಕ್ಕೆ ಹೋದ ತಂಡ ಅನೇಕ ಬಾರಿ ಅನೇಕ ಶಾಟ್ಸ್ ಬಗ್ಗೆ ಅತಿಯಾದ ವ್ಯಾಮೋಹವನ್ನೇ ಹೊಂದಿದ್ದರೂ, ಚಿತ್ರದ ಒಟ್ಟಂದದಲ್ಲಿ ಅದು ಸೇರಿಕೆಯಾಗುವುದಿಲ್ಲ ಎನಿಸಿದರೆ ಅದನ್ನು ಕಿತ್ತೊಗೆಯುವ ಮಾನಸಿಕ ಸಿದ್ಧತೆ ಸಂಕಲನಕಾರನಿಗಿರಬೇಕಾಗುತ್ತದೆ. ಹೀಗೆ ನಿರ್ದೇಶಕನ ವಸ್ತು ನಿಷ್ಟ ಮನಸಾಗಿ, ಸಂಕಲನಕಾರ ಚಿತ್ರತಂಡದಲ್ಲಿ ಶಾಮೀಲಾಗುತ್ತಾನೆ.

This entry was posted in Film Craft. Bookmark the permalink.

7 Responses to ಸಂಕಲನಕಾರ in ಸಂಕಟ!

  1. Chetan Hosaktoe ಹೇಳುತ್ತಾರೆ:

    ನಮಸ್ತೆ ಅಭಯ ಅವರೇ,

    ಸಂಕಲನಕಾರನ ಕಾರ್ಯವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೀರಿ.
    ಸಂಕಲನಕಾರನ ಕೆಲಸ ಚಿತ್ರೀಕರಣ ನಂತರದ ಮೇಲಷ್ಟೇ (Post Production) ಶುರುವಾಗುವುದು ತಿಳಿದಿರುವ ವಿಷಯ.
    ಚಿತ್ರೀಕರಣ ಸಮಯದಲ್ಲಿ ಸಾಕಷ್ಟು “Coverage” ಆಗದೇ ಇದ್ದರೆ ಅಥವಾ ಇನ್ನಿತರ Continuity, Matching issues ಇದ್ದಾಗ ಸಂಕಲನಕಾರನಿಗೆ ಕಥೆಯನ್ನು ಯಾವುದೇ ಭಂಗವಿಲ್ಲದೇ ಸರಾಗವಾಗಿ ತೋರಿಸುವುದು ತುಸು ಕಷ್ಟವಾಗಬಹುದು.
    ಈ ಸಮಸ್ಯೆ ಎದುರಾಗದಿರಲಿ ಎಂದು ಚಲನಚಿತ್ರ ತಯಾರಿಕೆಯಲ್ಲಿ “Script/Continuity Supervisor” ನ ಕೆಲಸ ಬಹು ಮುಖ್ಯವಾಗುವುದು. ಆದರೇ ಈ ಕೆಲಸವನ್ನು ಸಂಕಲನಕಾರನಲ್ಲದೇ ಬೇರೊಬ್ಬ ವ್ಯಕ್ತಿ ಕೈಗೊಳ್ಳುವುದು ಸರಿಯೇ? ಸಂಕಲನಕಾರನೇ Production ಸಮಯದಲ್ಲಿ ನಿರ್ದೇಶಕನ, ಛಾಯಾಗ್ರಾಹಕನ ಜೊತೆಗೆ Script/Continuity Supervisor ಆಗಿ ಕೆಲಸಮಾಡಿದರೆ ಅವನ ಕಾರ್ಯಕ್ಷೇತ್ರ ಇನ್ನೂ ವಿಸ್ತಾರವಾಗುವುದಾಲ್ಲದೇ ಅವನಿಗೆ ಸಂಕಲಿಸಲು ಬೇರೆ ಆಯಾಮ ಸೃಷ್ಟಿಯಾಗುವುದೆಂದು ನನ್ನ ಅನಿಸಿಕೆ.
    ಹೀಗಾದರೆ ಸಂಕಲನಕಾರ ಚಲನಚಿತ್ರದ ಮೂರೂ ಹಂತಗಳಲ್ಲಿ ಕಾರ್ಯನಿರತನಾಗಿ ಚಿತ್ರಕಥೆ ಮತ್ತು ಅದರ ಚಿತ್ರೀಕರಣದ ಮೇಲೆ ಸಾಕಷ್ಟು ಹಿಡಿತ ಸಾಧಿಸಬಹುದಾಗಿ ಕೊನೆಗೆ ಸಿನೆಮಾವನ್ನು ಇನ್ನಷ್ಟೂ ಕ್ಷಮತೆಯಿಂದ ಸಂಕಲಿಸಬಹುದಲ್ಲವೇ?
    ಈ ವಿಧಾನ ಕೆಲವು ಹಾಲಿವುಡ್ ಚಿತ್ರಗಳಲ್ಲಿ ಚಾಲ್ತಿಯಲ್ಲಿತ್ತು ಎಂದು ಓದಿದ್ದೆ. ಹಾಗಾಗಿ ದಯವಿಟ್ಟು ಇದರ ಸಾಧ್ಯ ಅಸಾಧ್ಯಗಳನ್ನು ತಿಳಿಸಿ.

    ಚೇತನ್ ಹೊಸಕೋಟೆ

  2. Sindhoo ಹೇಳುತ್ತಾರೆ:

    ಒಳ್ಳೆಯ ಮಾಹಿತಿ. ಚಿತ್ರ ತಯಾರಿಕೆಯ ಬಗ್ಗೆ ಸಂಪೂರ್ಣ ಅಜ್ಙಾನಿಯಾಗಿರುವ ನನಗೆ ನಿಮ್ಮ ಬರಹ ಬಹಳ ಒಳ್ಳೆಯ ಹಾಗೂ ಕುತೂಹಲಕರವಾದ ವಿಷಯಗಳನ್ನು ತಿಳಿಸುತ್ತದೆ. ಒಂದು ಚಿತ್ರದ ಹಿಂದೆ ಅಡಗಿರುವ ಶ್ರಮದ ಅರಿವಾದಾಗ ಚಿತ್ರ ನೋಡುವ ದೃಷ್ಟಿಕೋನವೂ ಬದಲಾಗುತ್ತದೆ. ಚೆನ್ನಾಗಿರದ ಚಿತ್ರಗಳನ್ನೂ ಕೆಟ್ಟದೆಂದು ಹೇಳಲು ಮನಸು ಬರುವುದಿಲ್ಲ. ನನಗೆ ಹಿಡಿಸಲಿಲ್ಲ ಎಂದಷ್ಟೇ ಹೇಳಿ ಸುಮ್ಮನಾಗುತ್ತೇನೆ.

  3. Sindhoo ಹೇಳುತ್ತಾರೆ:

    ನಿಮ್ಮ ಬರಹಳಿಂದ ನನಗೆ ನೀವು ನಿಮ್ಮ ವೃತ್ತಿಯನ್ನು ಬಹಳ ಪ್ರೀತಿಸುತ್ತೀರಿ ಎನಿಸುತ್ತದೆ… ಒಳ್ಳೆಯದು 🙂

  4. Abhaya Simha ಹೇಳುತ್ತಾರೆ:

    @ ಚೇತನ್, ನಿಮ್ಮ ಪ್ರಶ್ನೆ ಸಮಯೋಚಿತವಾದದ್ದು. ಸಂಕಲನಕಾರ ಚಿತ್ರವೊಂದರ ಎಲ್ಲಾ ಹಂತಗಳಲ್ಲೂ ಭಾಗಿಯಾಗುವುದು ಒಳ್ಳೆಯದೇ. ಆದರೆ, ಅವನು ಚಿತ್ರೀಕರಣದ ಹಂತದಲ್ಲಿ ಭಾಗಿಯಾಗದಿರುವುದರಿಂದ ಆಗುವ ಒಂದು ಪ್ರಮುಖ ಉಪಯೋಗವೆಂದರೆ, ಅವನಿಗೆ ಆ ಚಿತ್ರದ ಚಿತ್ರಿತ ಭಾಗದ ಮೇಲಿರುವ ನಿರ್ಭಾವುಕತನ. ಅವನು ಸಂಕಲನಕ್ಕೆ ಕುಳಿತಾಗ ಕೇವಲ ತನಗೆ ಒದಗಿ ಬಂದಿರುವ ಕಚ್ಚಾ ವಸ್ತುವಿನಿಂದ ಕಥೆಯೊಂದನ್ನು ಹೇಳಲು ಪ್ರಯತ್ನಿಸುತ್ತಾನೆ. ಇಲ್ಲಿ ಕಂಟಿನ್ಯುಟಿ ಸರಿಯಿದೆಯೇ ಇತ್ಯಾದಿ ಮೂಲಭೂತ ವಿಷಯಗಳ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳದೇ, ಕಥೆಯ ಕಥಾನಕದ ಕುರಿತಾಗಿ ಯೋಚಿಸುವ ಒಬ್ಬ ಕ್ರಿಯಾತ್ಮಕ ವ್ಯಕ್ತಿಯಾಗಿ ಸಂಕಲನಕಾರನ ಕೊಡುಗೆ ಯಾವುದೇ ಸಿನೆಮಾಕ್ಕೆ ತುಂಬಾ ಅಗತ್ಯವಾಗಿರುತ್ತದೆ. ಇದರಿಂದಾಗಿ ಸಿನೆಮಾಕ್ಕೆ ಚಿತ್ರ ಕಥನಕಾರನೋ, ನಿರ್ದೇಶಕನೋ ಯೋಚಿಸದ ಹೊಸದೊಂದು ಆಯಾಮ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಅವನನ್ನು ಮೂಲಭೂತ ವಿಷಯಗಳ ಗೋಜಲಿನಿಂದ ಹೊರಗಿಡುವ ಸಲುವಾಗಿ ಚಿತ್ರೀಕರಣದ ಸಂದರ್ಭದಲ್ಲಿ ಕಂಟಿನ್ಯುಟಿ ಇತ್ಯಾದಿ ಮೂಲ ವಿಷಯಗಳನ್ನು ನೋಡಿಕೊಳ್ಳಲು ಇತರ ಜನರಿರುತ್ತಾದೆ. ಸಂಕಲನಕಾರ ಸ್ವತಃ ಈ ಕೆಲಸವನ್ನೇ ಮಾಡಿದರೆ, ಮತ್ತು ಸಂಕಲನಕ್ಕೆ ತಕ್ಕಂತೆ ಚಿತ್ರೀಕರಣವನ್ನೇ ನಿರ್ದೇಶಿಸಿದರೆ, ಅದು ನಿರ್ದೇಶಕನ ಅಭಿವ್ಯಕ್ತಿಯಾಗದೇ, ಒಂದು ಕಥಾನಕವಷ್ಟೇ ಆಗಿ ಉಳಿಯುವ ಅಪಾಯ ಇರುತ್ತದೆ.

    @ Sindhoo: Thanks for the comments. good to know that there are people reading and appreciating my efforts. 🙂
    – ಅಭಯ

  5. Chetan Hosaktoe ಹೇಳುತ್ತಾರೆ:

    ನಿಜ ಸಂಕಲನ ಒಂದು ತಾಂತ್ರಿಕ ಕ್ರಿಯೆಯಾಗಿ ಉಳಿಯದೇ ಸೃಜನಾತ್ಮಕ ಕಲಾತ್ಮಕವಾಗಿಯೂ ಮಾರ್ಪಾಡಾಗಿದೆ. ನೀವು ಹೇಳಿದಂತೆ ಸಂಕಲಕಾರನ ಕೆಲಸ ಚಲನಚಿತ್ರದ ಕೊನೆಯ ಹಂತದಲ್ಲಿ ಮಾತ್ರ, ಅದು ಜಗತ್ತಿನ ನಿಯಮ ಹಾಗು ಒಂದು ಸಿದ್ಧ ಸಂಪ್ರದಾಯವಾಗಿದೆ, ಅದನ್ನೇ ನಾನು ಇಲ್ಲಿ ಪ್ರಶ್ನಿಸುತ್ತಿರುವುದು. ಸಂಕಲನಕಾರ ತನ್ನ ಮೇಜಿನ ಹೊರತಾಗಿಯೂ ಸಿನೆಮಾಕ್ಕೆ ತನ್ನ ಕೊಡುಗೆ ನೀಡಬಲ್ಲನೇ?

    ಸಂಕಲನಕಾರ ತನ್ನ ಮೇಜಿನಮೇಲೆ ಇರುವ ಕಚ್ಚಾವಸ್ತುವನ್ನು ಉಪಯೋಗಿಸಿ ತನ್ನ ಸೃಜನಶೀಲತೆಯನ್ನೂ ಬಳಸಿ ಒಂದು ಕಥೆಯನ್ನಾಗಿ ಮಾರ್ಪಡಿಸುತ್ತಾನೆ, ಇಲ್ಲಿ ಸಂಕಲನಕಾರ ಎಷ್ಟೇ ಸೃಜನಶೀಲನಾದರೂ ಅವನು ಅದಾಗಲೇ ಚಿತ್ರೀಕರಿಸಿದ ಕಚ್ಚಾವಸ್ತುವಿನ ಪರಿಧಿಯೊಳಗೇ ಕಾರ್ಯನಿರ್ವಹಿಸಬೇಕು, ಅವನ ಕಾರ್ಯಕ್ಷೇತ್ರವೂ ಅಲ್ಲಿಗೇ ಸೀಮಿತ. ಹೀಗಿದ್ದಾಗ ಈ ಘಟ್ಟದಲ್ಲಿ ಅವನು ಕಥೆಯ ಕಥನಕ್ಕೆ ಜೀವತುಂಬಬಲ್ಲ ಮತ್ತೊಂದು ಆಯಾಮ ಒದಗಿಸಬಲ್ಲ “Shots” ಅಗತ್ಯವಾದರೂ ಅದನ್ನು ಚಿತ್ರೀಕರಿಸುವ ಸಾಧ್ಯತೆ ಇರುವುದಿಲ್ಲ. ಅದೇ ಸಂಕಲನಕಾರ ಚಿತ್ರೀಕರಣದ ಮೊದಲ ಎರಡು ಹಂತಗಳಲ್ಲಿ ಭಾಗಿಯಾದರೇ ಚಿತ್ರೀಕರಣದ ಹಲವು ಪ್ರಮುಖ ನಿರ್ಧಾರಗಳಲ್ಲಿ ಭಾಗಿಯಾಗಿ ಇನ್ನಷ್ಟೂ ಸೃಜನಶೀಲನಾಗಬಹುದು, ಇದು ಒಂದು ಉದಾಹರಣೆಯಷೇ.

    ಸಾಮಾನ್ಯವಾಗಿ ಸಂಕಲನಕ್ಕೆ ಮೀಸಲಿಟ್ಟ ಸಮಯ ಚಲನಚಿತ್ರದ ಒಟ್ಟೂ ಸಮಯಕ್ಕೆ ಹೋಲಿಸಿದರೆ ತುಸು ಕಡಿಮೆ. ಇದ್ದ ಸಮಯದಲ್ಲಿ ಸಂಕಲನಕಾರ ತನ್ನ ತಾಂತ್ರಿಕ ಕೆಲಸವನ್ನು ಮಾಡಿಯೂ ಕಥೆಯ ಒಟ್ಟೂ ಆಶಯವನ್ನು ಗ್ರಹಿಸಿ ಪ್ರತಿ ಪಾತ್ರ ಸನ್ನಿವೇಶದ ಒಳ ಹೊರವು ಗಳನ್ನು ಅರಿತು ಸಂಕಲನ ಮಾಡಬೇಕು, ಸಮಯ ಅಭಾವದಿಂದ ಸಂಕಲನಕಾರ ಕಥೆಯ ನಿಜವಾದ ತಿರುಳು ಅರಿಯುವಲ್ಲಿ ವಿಫಲನಾಗಿ ನಿರ್ದೇಶಕನ ಕೈಗೊಂಬೆಯಾಗಿ ಬರೀ ತಾಂತ್ರಿಕನಾಗುವ ಸಾಧ್ಯತೆಯೂ ಇರುವುದು. ಆದ್ದರಿಂದ ಪೂರ್ವ ಸಿದ್ಧತಾ ಹಂತದಲ್ಲಿ ಭಾಗಿಯಾಗಿ ಚಿತ್ರಕಥೆಯನ್ನು ಸಂಪೂರ್ಣವಾಗಿ ಅರ್ಥೈಸಿ ಅದನ್ನು ಚಿತ್ರೀಕರಿಸುವ ವಿಧಾನ ನಿರ್ಧರಿಸುವ ಸಮಯದಲ್ಲಿ ನಿರ್ದೇಶಕ ಹಾಗೂ ಛಾಯಾಗ್ರಾಹಕನೊಂದಿಗೆ ಪಾಲ್ಗೊಂಡು ಸಂಕಲನಕಾರನ ದೃಷ್ಟಿಕೋನದಿಂದ ಹಲವು ಪ್ರಮುಖ ಸಲಹೆ ಬಿನ್ನಹಗಳನ್ನು ವ್ಯಕ್ತಪಡಿಸಬಹುದಲ್ಲದೇ ಚಿತ್ರೀಕರಣದಲ್ಲಾಗಬಹುದಾದ ಪ್ರಮುಖ ತಾಂತ್ರಿಕ ದೋಷಗಳನ್ನೂ ತಡೆಯಬಹುದು.

    ಒಬ್ಬ ವಕ್ತಿಯೇ ಚಲನಚಿತ್ರ ತಯಾರಿಕೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವಾಗ ಸಂಕಲನಕಾರ ಚಲನಚಿತ್ರದ ವಿವಿಧ ಹಂತಗಳಲ್ಲಿ ಭಾಗಿಯಾಗಿ ಅದಕ್ಕೆ ತಕ್ಕಂತೆ ತನ್ನ ಮಾನಸಿಕತೆಯನ್ನು ಹೊಂದಿಸಿ ನಿರ್ಭಾವುಕನಾಗಿ ಸಂಕಲನ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ವೃತ್ತಿಪರ ಸಂಕಲನಕಾರನಿಗೆ ಕಷ್ಟವಾಗಲಾರದು ಎಂದು ನನ್ನ ಅನಿಸಿಕೆ.

    ಈಗಿನ ಪರಿಸ್ಥಿತಿಯಲ್ಲಿ ಸಂಕಲನಕಾರ ತನ್ನ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮವಾಗಿಯೆ ಕಾರ್ಯನಿರ್ವಹಿಸುತ್ತಿರುವನು. ಅವನ ಕಾರ್ಯದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲದೇ ಇದ್ದರೂ, ಅದರ ಸಾದ್ಯತೆ ಮತ್ತು ಉಪಯೋಗಳನ್ನು ನಾವು ಉಪೇಕ್ಷಿಸಬಾರದಲ್ಲವೇ?

    ಚೇತನ್

  6. Thejaswi Bhat ಹೇಳುತ್ತಾರೆ:

    @ Abhay, It was an interesting thing to know about Editors. However, the thing that crossed my mind was, wont there be conflict of interest between directors and editors? Director would have perceived the movie from some angle and if the eDitor perceives it from different angle…. In that case why a director himself cannot edit the movie? ( i know editing is a huge task.. but just curious to know this…)

  7. Nona Mills ಹೇಳುತ್ತಾರೆ:

    @ Abhay, It was an interesting thing to know about Editors. However, the thing that crossed my mind was, wont there be conflict of interest between directors and editors? Director would have perceived the movie from some angle and if the eDitor perceives it from different angle…. In that case why a director himself cannot edit the movie? ( i know editing is a huge task.. but just curious to know this…)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s