ಶಿಕಾರಿ ಚಿತ್ರೀಕರಣದಲ್ಲಿ ಮಮ್ಮುಟ್ಟಿ ಸಂದರ್ಶನ


ಕಳೆದ ಒಂದು ವರ್ಷದಿಂದ ಸಿದ್ಧವಾಗುತ್ತಿದ್ದ, ಈಗ ಕೊನೆಯ ಹಂತವನ್ನು ತಲುಪಿರುವ ಚಿತ್ರ, ಶಿಕಾರಿ. ಕಥೆ, ಚಿತ್ರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಮಾಡುತ್ತಿರುವವರು ಕನ್ನಡದಲ್ಲಿ `ಗುಬ್ಬಚ್ಚಿಗಳು’ ಎಂಬ ಮಕ್ಕಳ ಚಿತ್ರವನ್ನು ಮಾಡಿದ ಎಫ್.ಟಿ.ಐ.ಐ ಪದವೀಧರ ಅಭಯ ಸಿಂಹ. ಕೆ. ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಶಿಕಾರಿ ಚಿತ್ರಕ್ಕೆ, ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಮದನ್-ಹರಿಣಿ ನೃತ್ಯ ಸಂಯೋಜನೆ, ಅನಲ್ ಅರಸು ಸಾಹಸ ಸಂಯೋಜನೆ, ಎಸ್. ಮನೋಹರ್ ಸಂಕಲನ ಹಾಗೂ ವಿಕ್ರಂ ಶ್ರೀವಾಸ್ತವ ಛಾಯಾಗ್ರಹಣ ಇದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತ ಸಾಹಿತ್ಯವನ್ನು ರಚಿಸಿದ್ದಾರೆ. ಶಿಕಾರಿ ಚಿತ್ರದಲ್ಲಿ ಮಮ್ಮುಟ್ಟಿ, ಪೂನಂ ಬಾಜ್ವಾ, ಇನ್ನೊಸೆಂಟ್, ಸಿಹಿ ಕಹಿ ಚಂದ್ರು, ಅಚ್ಚುತ, ನೀನಾಸಂ ಅಶ್ವತ್, ಟಿನಿ ಟಾಂ, ಸುರೇಶ್ ಕೃಷ್ಣ, ನೀನಾಸಂ ಸತೀಶ, ಶರತ್ ಲೋಹಿತಾಶ್ವ, ನವೀನ್ ಡಿ. ಪಡೀಲ್, ಚಂದ್ರಹಾಸ ಉಳ್ಳಾಲ್, ಅಕ್ಕಿ ಚನ್ನಬಸ್ಸಪ್ಪ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಕನ್ನಡ ಹಾಗೂ ಮಲಯಾಳ ಭಾಷೆಗಳಲ್ಲಿ ಏಕ ಕಾಲದಲ್ಲಿ ಚಿತ್ರೀಕರಣಗೊಂಡಿದ್ದು ಜೊತೆಯಲ್ಲೇ ಬಿಡುಗಡೆಯಾಗಲಿವೆ. ಶಿಕಾರಿ ಚಿತ್ರದ ಮೂಲಕ ಮಲಯಾಳದ ದೈತ್ಯ ಪ್ರತಿಭೆ, ಮಮ್ಮುಟ್ಟಿಯವರು ಕನ್ನಡವನ್ನೂ ಪ್ರವೇಶಿಸುತ್ತಿದ್ದಾರೆ. ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ, ಐದು ಭಾಷೆಗಳಲ್ಲಿ ಅಭಿನಯಿಸಿ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಈ ಮೇರು ನಟ ಶಿಕಾರಿ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿರುವುದು ಈ ಚಿತ್ರದ ಹಿರಿಮೆ. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಕನ್ನಡಕ್ಕೆ ಬಂದು ಅಭಿನಯಿಸಿದ ಬೇರೆ ಭಾಷೆಯ ಮೊದಲನೇ ನಾಯಕ ನಟನೂ ಇವರು. ಶಿಕಾರಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಂಜು ಸುರೇಂದ್ರನ್ ನಡೆಸಿದ ಸಂದರ್ಶನದ ಆಯ್ದ ಭಾಗಗಳು.

ನಿಮಗೆ ಶಿಕಾರಿ ಚಿತ್ರ ಮಾಡಬೇಕು ಎಂದೇಕೆ ಅನಿಸಿತು? ಅದರಲ್ಲಿ ಯಾವ ಅಂಶ ನಿಮ್ಮನ್ನು ಮೊದಲು ಆಕರ್ಷಿಸಿತು?

ಶಿಕಾರಿ ಚಿತ್ರದಲ್ಲಿ ಎರಡು ಕಾಲ ಘಟ್ಟಗಳಲ್ಲಿ ಕಥೆ ನಡೆಯುತ್ತದೆ. ಕಥಾ ನಾಯಕ ಎರಡೂ ಕಾಲ ಘಟ್ಟಗಳಲ್ಲಿ ಸಂಚರಿಸುತ್ತಾ ವರ್ತಿಸುತ್ತಾನೆ. ಈ ಕಥನ ಕ್ರಮ ನನ್ನನ್ನು ಮೊದಲು ಆಕರ್ಷಿಸಿತು. ಅದಲ್ಲದೇ ಕಥೆಯು ಕರ್ನಾಟಕದ ದಟ್ಟಾರಣ್ಯಗಳ ನಡುವೆ ನಡೆಯುತ್ತದೆ. ನಾನು ಕರ್ನಾಟಕದ ಜನತೆಯೊಂದಿಗೆ ಒಂದು ರೀತಿಯಲ್ಲಿ ಗುರುತಿಸಿಕೊಳ್ಳುತ್ತೇನೆ. ಅಲ್ಲಿನ ಜನ, ನಡೆ, ನುಡಿ ಸಾಹಿತ್ಯ ನನ್ನನ್ನು ಬಹಳ ಪ್ರಭಾವಿಸಿದೆ. ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳನ್ನು ನಾನು ಕುತೂಹಲದಿಂದ ತಿಳಿದುಕೊಂಡಿದ್ದೇನೆ. ಇವೆಲ್ಲ ಈ ಚಿತ್ರದ ಆತ್ಮದಲ್ಲಿ ಇದ್ದುದರಿಂದ, ಎಲ್ಲೋ ನನಗೆ ನಟನಾಗಿ ಒಂದು ಹೊಸತನವನ್ನು ಕೊಡಲು ಇದೊಂದು ಅವಕಾಶವಾಗಬಹುದು ಎನಿಸಿತು. ಹೀಗಾಗಿ ನನಗೆ ಶಿಕಾರಿ ಚಿತ್ರದ ಚಿತ್ರಕಥೆ ಬಹಳ ಹಿಡಿಸಿತು. ಚಿತ್ರದಲ್ಲಿ ಕಥಾನಾಯಕ ಆಧುನಿಕ ವ್ಯಕ್ತಿಯೇ. ಅವನೊಬ್ಬ ಸಾಫ್ಟ್ವೇರ್ ಉದ್ಯಮಿ ಅವನೊಂದು ಅಪೂರ್ವವಾದ ಕಥೆಯನ್ನು ಹುಡುಕುತ್ತಾ ಹೊರಡುತ್ತಾನೆ. ಇಂಥಾ ಕೌತುಕಮಯ ಕಥಾವಸ್ತು ನನ್ನನ್ನು ಬಹಳವಾಗಿ ಆಕರ್ಷಿಸಿತು. ನಾನು ನಟನಾಗಿ ರೂಪುಗೊಂಡದ್ದು, ಬೆಳೆದು ಬಂದದ್ದು ಇಂಥಾ ಭಿನ್ನವಾದ ಚಿತ್ರಗಳ ಪರಂಪರೆಯ ಮೂಲಕ. ನನ್ನನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದ ಮಹಾನುಭಾವರೆಲ್ಲರೂ ಭಿನ್ನ ರೀತಿಯ ಚಿತ್ರಗಳನ್ನು ಮಾಡುತ್ತಿದ್ದವರೂ, ಸದಭಿರುಚಿಯ ಚಿತ್ರಗಳನ್ನು ಮಾಡುತ್ತಿದ್ದವರೂ ಆಗಿದ್ದರು ಹಾಗಾಗಿ ಇಂಥಾ ಚಿತ್ರಗಳ ಕಡೆಗೆ, ಗಂಭೀರ ಪ್ರಯತ್ನಗಳ ಕಡೆಗೆ ನನ್ನ ಒಲವು ಸದಾ ಇತ್ತು. ಕೆ. ಮಂಜುವಿನಂಥಾ ಗಟ್ಟಿ ನಿರ್ಪಾಪಕರು ಇಂಥಾ ಒಂದು ಭಿನ್ನವಾದ ಚಿತ್ರವನ್ನು ಪ್ರೋತ್ಸಾಹಿಸಿ ಈ ಚಿತ್ರ ಆರಂಭವಾಗಿರುವುದು ನನಗೆ ಬಹಳ ಸಂತೋಷವನ್ನು ತಂದಿದೆ. ಬಹುಷಃ, ಇದು ಕಥೆ ಹಾಗೂ ಪಾತ್ರದ ಸಾಮರ್ಥ್ಯವಿರಬೇಕೆಂದು ನಾನು ನಂಬಿದ್ದೇನೆ. ಈಗ ಚಿತ್ರೀಕರಣ ಮುಗಿದಿದ್ದು, ನಾನು ಬಹಳಷ್ಟು ಸಂತೋಷಪಟ್ಟಿದ್ದೇನೆ. ನಾವು ಕನ್ನಡದೊಂದಿಗೆ ನಾವು ಮಲಯಾಳಂ ಅವತರಣಿಕೆಯನ್ನೂ ತರುತ್ತಿದ್ದೇವೆ. ನನ್ನ ಮೂಲ ಪ್ರೇಕ್ಷಕರಾದ ಮಲಯಾಳಿಗಳಿಗೂ ಇಂಥಾ ಒಂದು ಒಳ್ಳೆಯ ಚಿತ್ರವನ್ನು ಕೊಡಬೇಕೆಂದು ನಮ್ಮೆಲ್ಲರ ಭಾವನೆಯಾಗಿತ್ತು.

ನೀವು ಬಹಳಷ್ಟು ಜನ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಿದವರು. ಯುವ ನಿರ್ದೇಶಕರೊಡನೆ ಕೆಲಸ ಮಾಡುವ ಹಿನ್ನೆಲೆಯಲ್ಲಿ ನಿಮ್ಮ ಯೋಚನೆ ಏನಿರುತ್ತದೆ?

ನಾನು ಹೊಸಬರೊಡನೆ ಕೆಲಸ ಮಾಡಲು ಇಷ್ಟಪಡುತ್ತೇನೆ ಯಾಕೆಂದರೆ ಅವರು ಹೊಸಬರಾಗಿರುತ್ತಾರೆ! ಅವರೊಡನೆ ಹೊಸ ಯೋಚನೆಗಳು, ಹೊಸ ಕಥಾನಕಗಳು, ಹೊಸ ಪಾತ್ರಗಳು ಇರುತ್ತವೆ. ನನ್ನನ್ನು ಹೊಸದೊಂದು ರೂಪದಲ್ಲಿ ತೋರಿಸಲು ಅವರು ಪ್ರಯತ್ನಿಸುತ್ತಿರುತ್ತಾರೆ. ನನಗೆ ಹೊಸ ಜೀವವೊಂದನ್ನು ಕೊಡುತ್ತಿರುತ್ತಾರೆ. ನಾನು ಒಮ್ಮೆ ಮಾತ್ರ ಅವರೊಡನೆ ಇಂಥಾ ಪ್ರಯೋಗವನ್ನು ಮಾಡಬಹುದು. ಏಕೆಂದರೆ ಒಮ್ಮೆ ಜೊತೆಯಲ್ಲಿ ಕೆಲಸ ಮಾಡಿದ ಮೇಲೆ ಅವರು ಹಳಬರಾಗುತ್ತಾರಲ್ಲವೇ? ಮಲಯಾಳದಲ್ಲಿ ಸಿನೆಮಾ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಯಸುವ ಅನೇಕ ಹೊಸ ಪ್ರತಿಭೆಗಳು ನನಗೆ ಸದಾ ಚಿತ್ರಕಥೆಗಳನ್ನು ಓದುತ್ತಿರುತ್ತಾರೆ. ಒಳ್ಳೆಯ, ಕೆಟ್ಟ, ಸದಭಿರುಚಿಯ, ರುಚಿಹೀನ ಹೀಗೆ ಎಲ್ಲಾ ಬಗೆಯ ಚಿತ್ರಗಳನ್ನೂ ನನ್ನೊಂದಿಗೆ ಮಾಡಲು ಬಯಸುತ್ತಿರುತ್ತಾರೆ. ಬಹುಷಃ ನಾನು ಅಂಥವರಿಗೆ ಅದೃಷ್ಟವನ್ನು ತರುತ್ತೇನೆಂದು ನಂಬಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಅದ್ಯಾವುದೋ ಕಾರಣಕ್ಕೆ ಅವರು ನನ್ನ ಬಳಿಗೆ ಇಂಥಾ ಅವಕಾಶಗಳನ್ನು ಹೊತ್ತು ಬರುತ್ತಿರುತ್ತಾರೆ.

ಬಹುಷಃ ನೀವು ಒಂದು ಸಾಧಾರಣ ಬಸ್ಸಿನಲ್ಲಿ ಪಯಣಿಸಿ ಕನಿಷ್ಟ ಮೂವತ್ತು ವರ್ಷ ಆಗಿರಬಹುದು. ಆದರೆ ಇಂದಿಗೂ ಒಬ್ಬ ಬಸ್ಸ್ ಡ್ರೈವರ್ ಅಥವಾ ಕಂಡಕ್ಟರ್ ಪಾತ್ರವನ್ನು ಸಹಜವಾಗಿ ನಟಿಸುತ್ತೀರಿ. ಇದಕ್ಕೆ ಬೇಕಾದ ತಯಾರಿಯನ್ನು ಹೇಗೆ ಮಾಡುತ್ತೀರಿ? ನಿತ್ಯ ಜೀವನದಿಂದ ಪ್ರೇರಣೆ ಪಡೆಯುವುದು ಸ್ಟಾರ್ಡಂನ ಉತ್ತುಂಗದಲ್ಲಿರುವ ನಿಮಗೂ ಸಾಧ್ಯವಾಗುತ್ತದೆಯೇ?

ವೈದ್ಯನ ನಟನೆ ಮಾಡಲು, ನಾನು ವೈದ್ಯನಾಗಿರುವುದು ಅಗತ್ಯವಲ್ಲ. ಕಟುಕನ ಪಾತ್ರ ಮಾಡಲು ನಾನು ಮಾಂಸದಂಗಡಿಗೆ ಹೋಗಿ ಕೂರುವ ಅಗತ್ಯವಿಲ್ಲ. ಹಾಗೇ ಒಬ್ಬ ನಟನಿಗೆ ಒಂದು ನಟನೆ ಮಾಡಲು ಅವನು ಆ ಕೆಲಸವನ್ನು ನಿಜಜೀವನದಲ್ಲೂ ಮಾಡಿರುವ ಅಗತ್ಯ ಇರುವುದಿಲ್ಲ. ನಾನು ಸಿನೆಮಾ ರಂಗಕ್ಕೆ ಬರುವ ಮೊದಲು ಬದುಕನ್ನು ನೋಡಿದ್ದೇನೆ. ಎಲ್ಲಾ ನಟರೂ ನೋಡಿರುತ್ತಾರೆ. ಆ ಅನುಭವಗಳು, ಮುಂದಿನ ಬದುಕಿಗೆ ಸಾಕಾಗುವಷ್ಟು ಅನುಭವಗಳನ್ನು ಕಟ್ಟಿಕೊಡಬಲ್ಲುದು. ನಮಗೆ ಅದನ್ನು ಗ್ರಹಿಸುವ ಶಕ್ತಿ ಬೇಕು ಅಷ್ಟೇ.

ನೀವು ಅಭಿನಯಿಸಲು ಆರಂಭಿಸಿದ ನಂತರ ಇಂದಿಗೆ ಮೂವತ್ತು ವರ್ಷಗಳಲ್ಲಿ ಸಿನೆಮಾ ಪ್ರೇಕ್ಷಕರ ಒಂದು ಜನರೇಷನ್ ಬದಲಾಗಿದೆ. ಆದರೆ ನಿಮಗೆ ಅಂದು ಇದ್ದ ಅಭಿಮಾನಿ ಬಳಗ ಇಂದೂ ಹಾಗೇ ಇದೆ. ಪ್ರೇಕ್ಷಕರ ಅಭಿರುಚಿ ಬದಲಾದರೂ, ನಿರ್ದೇಶಕರ ಅಭಿವ್ಯಕ್ತಿ ಬದಲಾದರೂ, ನೀವು ಹೇಗೆ ಅಂಥದ್ದೇ ಅಭಿಮಾನವನ್ನು ಇನ್ನೂ ಕಾಯ್ದಿರಿಸಿಕೊಳ್ಳಲು ಸಾಧ್ಯವಾಯಿತು? ಬದಲಾಗುವ ಸಮಯದಲ್ಲಿ ನಟನಾಗಿ ಸಮತೋಲನವನ್ನು ಹೇಗೆ ಕಂಡುಕೊಳ್ಳುತ್ತೀರಿ?

ಬಹುಷಃ ನನ್ನ ಅಭಿಮಾನಿಗಳು ನನ್ನ ಬೆಳವಣಿಗೆಯನ್ನು ಗಮನಿಸಿಲ್ಲ. ಹಾಗಾಗಿ ನಾನಿನ್ನೂ ನಟಿಸಲು ಪ್ರಯತ್ನಿಸುತ್ತಿದ್ದೇನೆ. ಅವರು ನನ್ನನ್ನು ಬೆಂಬಲಿಸುತ್ತಿದ್ದಾರೆ, ಸಹಕರಿಸುತ್ತಿದ್ದಾರೆ. ನಾನು ಇನ್ನೂ ಪ್ರಸ್ತುತನಾಗುವುದು ಬಹುಷಃ ನಾನು ಇಂದಿನ ಬಗ್ಗೆ ಜಾಗ್ರತನಾಗಿರುವುದರಿಂದ ಇರಬಹುದು. ನಾನು ಇರುವ ಕಾಲದ ಅರಿವನ್ನು ಸದಾ ಇಟ್ಟುಕೊಂಡು, ನನ್ನ ಸುತ್ತ ಮುತ್ತಲಿನ ಬದಲಾವಣೆಗಳಿಗೆ, ಘಟನೆಗಳಿಗೆ ಸದಾ ಸ್ಪಂದಿಸುತ್ತಿರುವುದರಿಂದ ನಾನು ಪ್ರಸ್ತುತನಾಗಿರಲು ಸಾಧ್ಯ ಎಂದು ನನ್ನ ಭಾವನೆ. ಕೆಲವೊಮ್ಮೆ ನಾನು ನನ್ನ ಸುತ್ತ ಮುತ್ತಲಿನ ಘಟನೆಗಳಲ್ಲಿ ಭಾಗವಹಿಸುತ್ತೇನೆ, ಮಧ್ಯಸ್ತಿಕೆವಹಿಸುತ್ತೇನೆ. ಕೆಲವೊಮ್ಮೆ ಆ ಘಟನೆಗಳನ್ನು ಪ್ರಭಾವಿಸುತ್ತೇನೆ ಕೂಡಾ. ಹೀಗಾಗಿ ನಾನು ಸದಾ ಕಾಲದ ಬದಲಾವಣೆಗಳ ಮಧ್ಯದಲ್ಲಿರುತ್ತೇನೆ. ಹಾಗೇ ಕಾಲಕ್ಕೆ ತಕ್ಕಂತೆ ಪ್ರಸ್ತುತನಾಗಿರುತ್ತೇನೆ. ಒಬ್ಬ ಸಾಮಾಜಿಕ ಜೀವಿಯಾಗಿ ನೀರು, ಗಾಳಿ, ಬೆಳಕಿನಂತೆ ಸಮಾಜದಿಂದ ನಾನು ಅನೇಕ ವಿಷಯಗಳನ್ನು ಪಡೆಯುತ್ತಿರುತ್ತೇನೆ. ಹೀಗಿರುವಾಗ ಸಮಾಜಕ್ಕೆ ಏನೋ ಒಂದನ್ನು ಮರಳಿಸುವುದೂ ನನ್ನ ಕರ್ತವ್ಯವಾಗಿರುತ್ತದೆ. ಹೀಗೆ ನಾನೊಬ್ಬ ಸಹಜ ಸಮಾಜ ಜೀವಿಯಾಗಿ ಜೀವಿಸುತ್ತಿರುತ್ತೇನೆ ಅಷ್ಟೇ. ಬಹುಷಃ ಹೀಗೆ ಹೇಳಿದರೆ ಅದು ತತ್ವಜ್ಞಾನವಾದೀತು. ಅದರಲ್ಲಿ ನಾನು ನಂಬಿಕೆ ಇಟ್ಟಿಲ್ಲವಾದರೂ, ನನಗೇ ಗೊತ್ತಿಲ್ಲದಂಥಾ ಆಧ್ಯಾತ್ಮಿಕ ಒಂದಂಶ ನನ್ನೊಳಗೆ ಇರಬಹುದು.

ನೀವು ಈಗಲೇ ಆರು ಭಾರತೀಯ ಭಾಷೆಗಳಲ್ಲಿ ನಟಿಸಿದ್ದೀರಿ. ಕನ್ನಡಕ್ಕೆ ಬರುವಾಗಲೂ ಕನ್ನಡವನ್ನು ನಾನೇ ಡಬ್ ಮಾಡುತ್ತೇನೆ ಎಂದು ಒತ್ತಾಯ ಮಾಡಿದ್ದಿರಿ. ಇದರ ಹಿನ್ನೆಲೆ ಏನು? ನಿಮ್ಮ ನಟನೆಗೆ ನಿಮ್ಮದೇ ಧ್ವನಿ ಕೊಡುವ ಬಗ್ಗೆ ಯಾಕಿಷ್ಟು ಒತ್ತು?

ಒಬ್ಬ ನಟ ತನ್ನ ದೇಹ ಭಾಷೆಯ ಮೂಲಕ ಪ್ರತಿಕ್ರಿಯಿಸಬಹುದಷ್ಟೇ. ಆದರೆ ನಟನೆ ಸಂಪೂರ್ಣವಾಗುವುದು ಆ ಪ್ರತಿಕ್ರಿಯೆಗೆ ಧ್ವನಿ ಸೇರಿದಾಗ ಮಾತ್ರ. ನಿಮ್ಮ ಮುಖ ಮಾತನಾಡಬಹುದು. ಆದರೆ ಅದಕ್ಕೆ ಅರ್ಥ ಬರುವುದು ನಿಮ್ಮ ಭಾಷೆ ಸೇರಿದಾಗ ಮಾತ್ರ. ಆದರೆ ನನ್ನ ನಟನೆಗೆ ಇನ್ಯಾರೋ ಒಬ್ಬರು ತಮ್ಮ ಧ್ವನಿಯನ್ನು ನೀಡಿದರೆ, ಅದು ಸಹಜವಾಗಿರುವುದಿಲ್ಲ. ಹೀಗಾಗಿ ಸಂಪೂರ್ಣ ನಟನೆಗೆ ಸ್ವಂತ ಡಬ್ ಮಾಡುವುದು ತೀರಾ ಅಗತ್ಯ ಎಂದು ನಾನು ನಂಬಿದ್ದೇನೆ. ನಾನು ಮಾತನಾಡಲಾಗದ ಭಾಷೆಯಲ್ಲಿ ಅಭಿನಯಿಸುವುದರಿಂದ ನಾನು ದೂರವಿರಲು ಬಯಸುತ್ತೇನೆ. ಹಾಗೂ ಒಮ್ಮೆ ನಿರ್ಧರಿಸಿದ ಮೇಲೆ ಆ ಭಾಷೆಯನ್ನು ಅತ್ಯಂತ ಸಹಜವಾಗಿ ಮಾತನಾಡಲು ನಾನು ಪ್ರಯತ್ನಿಸುತ್ತೇನೆ. ಸಮಾನ್ಯವಾಗಿ ದಕ್ಷಿಣ ಭಾರತದ ಎಲ್ಲಾ ನಾಯಕ ನಟರು ಕನಿಷ್ಟ ಎರಡು ಅಥವಾ ಮೂರು ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದಾರೆ.

ಮೂಲತಃ ನಟನಾಗಲು ಪ್ರೇರಣೆ ಏನಿತ್ತು ನಿಮಗೆ ಆ ಕಾಲದಲ್ಲಿ?

ಅಂಥಾ ಗುರುತರ ಪ್ರೇರಣೆಗಳೇನಿರಲಿಲ್ಲ. ಅಭಿನಯಿಸಬೇಕು ಎನ್ನುವ ಒಳ ಒತ್ತಡವೊಂದಿತ್ತು ಅಷ್ಟೇ. ಯಾವುದೇ ಸಾಮಾನ್ಯ ಯುವಕರಂತೆ ನಾನೂ ಚಿತ್ರಗಳಲ್ಲಿ ಅಭಿನಯಿಸಬೇಕೆಂದು ಆಸೆಪಟ್ಟಿದ್ದೆ. ನನ್ನ ವಿಷಯದಲ್ಲಿ ಅದು ಸಾಧ್ಯವಾಯಿತು ಅಷ್ಟೇ.

ಕೆ.ಜಿ ಜಾರ್ಜ್, ಎನ್.ಟಿ. ವಾಸುದೇವ ನಾಯರ್, ಮಣಿ ರತ್ನಂ ಇತ್ಯಾದಿ ದಿಗ್ಗಜ ನಿರ್ದೇಶಕರೊಡನೆ ಕೆಲಸ ಮಾಡಿದವರು ತಾವು. ದಕ್ಷಿಣ ಭಾರತದ ಅತ್ಯುತ್ತಮ ನಿರ್ದೇಶಕರುಗಳೊಂದಿಗೆ ನೀವು ಕೆಲಸ ಮಾಡಿದ್ದೀರಿ. ನಿಮ್ಮ ಅನುಭವ ಹೇಗಿತ್ತು?

ಅವರಿಗೆ ಪ್ರತಿಯೊಬ್ಬರಿಗೂ ತೀರಾ ಭಿನ್ನವಾದ ಶೈಲಿಯೊಂದಿದೆ. ನಾನು ಅವರನ್ನು ಪರಸ್ಪರ ಹೋಲಿಸಲಾರೆ. ಅವರಿಗೆ ಸಿನೆಮಾದ ಕುರಿತಾಗಿ ಅವರದೇ ಆದ ಒಂದು ಗ್ರಹಿಕೆ ಇದೆ. ಹಿರಿಯರು ಕಿರಿಯರೆನ್ನದೆ ಅವರಿಗೆ ಪ್ರತಿಯೊಬ್ಬರಿಗೂ ಅವರದೇ ಆದ ಹಿರಿತನ ಕಿರಿತನಗಳಿರುತ್ತವೆ.

ನೀವು ಒಂದು ಪಾತ್ರಕ್ಕೆ ತಯಾರಿ ಹೇಗೆ ಮಾಡುತ್ತೀರಿ?

ನಾನು ಅಂಥಾ ವಿಶೇಷ ತಯಾರಿಯನ್ನೇನೂ ಮಾಡುವುದಿಲ್ಲ. ಕೆಲವೊಮ್ಮೆ ನಾನು ಇಡೀ ಕಥೆಯನ್ನೂ ಕೇಳಲು ಬಯಸುವುದಿಲ್ಲ. ಕೆಲವೊಮ್ಮೆ ಕೆಲವು ಹೊಳಹುಗಳು ನನ್ನನ್ನು ಆಕರ್ಷಿಸುತ್ತವೆ. ಮತ್ತು ಆ ಹೊಳಹಿನ ಹಿಂದೆ ಒಂದು ಚಿತ್ರವನ್ನೇ ಮಾಡಿಬಿಡುತ್ತೇನೆ ನಾನು. ಅದು ನನ್ನನ್ನೆಲ್ಲೋ ಕರೆದೊಯ್ಯುತ್ತದೆ. ನಾನು ವಿಶೇಷವಾದ ತಯಾರಿಯನ್ನೇನೂ ಮಾಡುವುದಿಲ್ಲ. ನಟನೆ ಸದಾ ಒಂದು ಪ್ರಯತ್ನ. ನಾನು ಕಳಿತ ಮಾವಿನ ಮರಕ್ಕೆ ಕಲ್ಲನ್ನೆಸೆಯುವ ಕುರುಡನಂತೆ ಸದಾ ಪ್ರಯತ್ನಿಸುತ್ತಲೇ ಇರುತ್ತೇನೆ. ಅನೇಕ ಬಾರಿ ಹಣ್ಣು ದೊರೆಯುತ್ತದೆ. ಅನೇಕ ಬಾರಿ ಕಲ್ಲೇ ಕೆಳಗೆ ಬೀಳುತ್ತದೆ. ನನ್ನ ಪ್ರತಿಯೊಂದು ಪಾತ್ರಕ್ಕೂ ನಾನು ಯಾವುದೋ ಒಂದು ಸಣ್ಣ ಅಂಶವನ್ನು ನಟನೆಯಲ್ಲಿ ಅಳವಡಿಸಿಕೊಳ್ಳುತ್ತೇನೆ. ಸಣ್ಣ ಬದಲಾವಣೆಗಳು ನನ್ನ ಅಭಿನಯವನ್ನು ಪ್ರತಿಯೊಂದು ಬಾರಿಯೂ ಭಿನ್ನವಾಗಿಸುತ್ತದೆ. ಈ ಭಿನ್ನತೆ ನನ್ನ ಅಭಿನಯವನ್ನು ಸದಾ ಪರಿಷ್ಕರಿಸುತ್ತಾ, ಪ್ರಭಾವಿಸುತ್ತಾ ಇರುತ್ತದೆ. ಈ ಅಂಶಗಳು ಸುಪ್ತಮನಸ್ಸಿನಿಂದ ಬರುವ ಪ್ರೇರಣೆಗಳಾಗಿರುತ್ತದೆ.

ನಿಮ್ಮ ವೃತ್ತಿಜೀವನದಲ್ಲಿ ಇತ್ತೀಚೆಗಷ್ಟೇ ಹಾಸ್ಯರಸವನ್ನು ನೀವು ಹೆಚ್ಚು ಶೋಧಿಸಲಾರಂಭಿಸಿದ್ದು. ಅದೇಕೆ ಹೀಗಾಯ್ತು?

ನಾನು ಅಭಿನಯ ಆರಂಭಿಸುವಷ್ಟರಲ್ಲಿ ನಾನು ವಕೀಲನಾಗಿದ್ದೆ. ಮದುವೆಯೂ ಆಗಿತ್ತು. ನಾನು ಹಾಸ್ಯಾಭಿನಯವನ್ನು ಬಹಳ ಪ್ರೀತಿಸುವವನಾಗಿದ್ದರೂ, ನನ್ನನ್ನು ಬಳಸಿಕೊಳ್ಳುತ್ತಿದ್ದ ನಿರ್ದೇಶಕರು, ಮದುವೆಯಾಗಿರುವ ವಕೀಲ ಎಂದರೆ ಭಾರೀ ಗಂಭೀರನೇ ಇರಬೇಕೆಂದುಕೊಂಡರೋ ತಿಳಿಯೆ ಆದರೆ ಕೇವಲ ಗಂಭೀರ ಪಾತ್ರಗಳನ್ನಷ್ಟೇ ನನಗೆ ಕೊಟ್ಟರು! ಹೀಗಾಗಿ ಹಾಸ್ಯ ಪಾತ್ರಗಳನ್ನು ಮಾಡಲು ನಾನು ಇತ್ತೀಚಿನವರೆಗೆ ಕಾಯಬೇಕಾಯಿತು! ನಾನು ಮೂಲತಃ ಹಾಸ್ಯಮಯ ವ್ಯಕ್ತಿಯೇ.

ಒಳ್ಳೆಯ ನಟರು ಅನೇಕ ಬಾರಿ ತಾರೆಗಳಾಗದೆ, ಪ್ರೋತ್ಸಾಹಕ ಪಾತ್ರಗಳಲ್ಲಿ ಉಳಿದು ಬಿಡುತ್ತಾರೆ. ತಾರೆಗಳಾದವರಿಗೆ ಅಭಿನಯಕ್ಕಿಂತ ಇನ್ನೇನೋ ಜನರನ್ನಾಕರ್ಷಿಸುವ ಗುಣಗಳಿರಬೇಕಾಗುತ್ತದೆ ಎನ್ನುವ ಹೇಳಿಕೆಯಿದೆ. ನಿಮ್ಮ ಅನಿಸಿಕೆ ಏನು?

ಮೂಲತಃ ನಾನೊಬ್ಬ ನಟ. ಅನೇಕರು ನನ್ನ ಅಭಿನಯವನ್ನು ಇಷ್ಟಪಡುತ್ತಾರೆ ಹಾಗಾಗಿ ನಾನು ಚಿತ್ರತಾರೆ ಎನಿಸಿಕೊಳ್ಳುತ್ತೇನೆ. ವಿಷಯ ಇಷ್ಟೇ ಇರುವುದು. ಬಹಳ ಸರಳ ಅಷ್ಟೇ. ನನ್ನ ಅನಿಸಿಕೆಯ ಪ್ರಕಾರ ನಾನು ಬೆಳೆಯುತ್ತಿರುವ ನಟ. ನಾನು ಮೂವತ್ತು ವರುಷಗಳ ನಂತರವೂ ಇನ್ನೂ ಬೆಳೆಯುತ್ತಿರುವ ನಟ ಎಂದು ಅನಿಸುತ್ತದೆ. ನಟನಾದವನು ಹೀಗೇ ಇರಬೇಕಾಗುತ್ತದೆ.  ನಾನು ಬೆಳೆಯುವುದು ನಿಲ್ಲಿಸಿದ ದಿನ ನಟನೆಯೂ ಮುಗಿಯುತ್ತದೆ ಎಂದು ನನ್ನ ಭಾವನೆ.

This entry was posted in Shikari. Bookmark the permalink.

7 Responses to ಶಿಕಾರಿ ಚಿತ್ರೀಕರಣದಲ್ಲಿ ಮಮ್ಮುಟ್ಟಿ ಸಂದರ್ಶನ

 1. my pen from shrishaila ಹೇಳುತ್ತಾರೆ:

  Abhaya,
  Till today I have never thought about of any film actor, I always thought them as separate and different from me or my kind of people.
  ನಾನು ಹೊಸಬರೊಡನೆ ಕೆಲಸ ಮಾಡಲು ಇಷ್ಟಪಡುತ್ತೇನೆ ಯಾಕೆಂದರೆ ಅವರು ಹೊಸಬರಾಗಿರುತ್ತಾರೆ! This is correct ! I agree with this, we grow only when we mix with the young and new generation. All the best Abhaya.
  Shailaja

 2. Radhakrishna ಹೇಳುತ್ತಾರೆ:

  ಅಭಯ,
  ಇಂದು ಸಂಜೆಯೇ ಕೆಂಡ ಸಂಪಿಗೆಯಲ್ಲಿ ಶಿಕಾರಿ ಬಗ್ಗೆ – ಮುಮ್ಮುಟ್ಟಿ ಸಂದರ್ಶನ ಓದಿದೆ. ತುಂಬ ಸರಿಯಾಗಿದೆ. ಅತ್ಯಂತ ಸಂತಸ ತಂದದ್ದು ಸರಳತನ. ಸಂದರ್ಶನದ ಕೊನೆಯ ಭಾಗ ವ್ಯಕ್ತಿತ್ವದ ಬಗ್ಗೆ ಎಲ್ಲ ಹೇಳುತ್ತದೆ
  “ನನ್ನ ಅನಿಸಿಕೆಯ ಪ್ರಕಾರ ನಾನು ಬೆಳೆಯುತ್ತಿರುವ ನಟ. ನಾನು ಮೂವತ್ತು ವರುಷಗಳ ನಂತರವೂ ಇನ್ನೂ ಬೆಳೆಯುತ್ತಿರುವ ನಟ ಎಂದು ಅನಿಸುತ್ತದೆ. ನಟನಾದವನು ಹೀಗೇ ಇರಬೇಕಾಗುತ್ತದೆ. ನಾನು ಬೆಳೆಯುವುದು ನಿಲ್ಲಿಸಿದ ದಿನ ನಟನೆಯೂ ಮುಗಿಯುತ್ತದೆ ಎಂದು ನನ್ನ ಭಾವನೆ”
  ಇದೀಗ ಶಿಕಾರಿ ಯಾವಾಗ ನೋಡುವ ಅವಕಾಶ? ಕಾಯುತ್ತಿದ್ದೇವೆ. ಸದ್ಯ ಕ್ರಿಕೇಟ್ ಫೈನಲ್ಸ್ ಮುಗಿಸಿಕೊಂಡು ತಯಾರಾಗುತ್ತೇವೆ.
  ರಾಧ ಮಾವ

 3. ksraghavendranavada ಹೇಳುತ್ತಾರೆ:

  ಒಬ್ಬ ಅಧ್ಬುತವಾದ ನಟನನ್ನು ಕನ್ನಡಕ್ಕೆ ಕರೆ ತರುತ್ತಿದ್ದೀರಿ! ನಿಮ್ಮ ಈ ಪ್ರಯತ್ನ ಖ೦ಡಿತಾ ಯಶಸ್ವಿಯಾಗುತ್ತದೆ. ಮುಮ್ಮಟ್ಟಿ ನನ್ನ ನೆಚ್ಚಿನ ನಟರಲ್ಲಿ ಒಬ್ಬರು. ಅವರ ಮಲೆಯಾಳ ಭಾಷೆಯ ಹಲವಾರು ಚಿತ್ರಗಳನ್ನು ನೋಡಿದ್ದೇನೆ, ಅಥರ್ವ, ಹಿಟ್ಲರ್ ಮು೦ತಾದ ಚಿತ್ರಗಳಲ್ಲಿ ಅವರ ಅಭಿನಯ ಅಮೋಘ! ಭಾಷೆ ಬೇರೆಯಾದರೂ ತನ್ನ ಅಭಿನಯದಿ೦ದ ಮುಮ್ಮಟ್ಟಿ ಹೃದಯಕ್ಕೆ ಹತ್ತಿರವಾಗುತ್ತಾರೆ.
  ಅವರ ಸರಳತೆ, ಇಷ್ಟು ವಯಸ್ಸಾಗಿದ್ದರೂ ಕಾಪಾಡಿಕೊ೦ಡಿರುವ ದೇಹದಾರ್ಡ್ಯವೇ ಅವರ ಸ೦ಪತ್ತು.
  ಒಳ್ಳೆಯದಾಗಲಿ, ಶಿಕಾರಿ ಕನ್ನಡ ಚಿತ್ರರ೦ಗದಲ್ಲೊ೦ದು ಮೈಲುಗಲ್ಲಾಗಲೆ೦ಬ ಹಾರೈಕೆ ನನ್ನಿ೦ದ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 4. krishna pramod ಹೇಳುತ್ತಾರೆ:

  i am waiting for watch shikari

 5. ಸಂದರ್ಶನ ಮಲೆಯಾಳ ಭಾಷೆಯಿಂದ ಬಹಳ ಚೆನ್ನಾಗಿ ಅನುವಾದಗೊಂಡಿದೆ. ಬಹುಶ: ಚಿತ್ರದ ಕುಱಿತಾಗಿಯೂ ನನಗೆ ಇಂಥದೇ ನಿರೀಕ್ಷೆಗಳಿವೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಮಾಡಿರುವ ಅನುವಾದ ಬಲು ಶಕ್ತವಾಗಿರುವುದೆಂದು ನಂಬಿರುವೆನು.
  ಮೆಗಾಸ್ಟಾರ್ ತಮ್ಮ ವೃತ್ತಿಜೀವನದ ಕುಱಿತಾಗಿ ಸೊಗಸಾಗಿ ಮಾತನಾಡಿದ್ದಾರೆ, ತಮ್ಮಲ್ಲಿ ಅಡಗಿರುವ ಹಾಸ್ಯಪ್ರಜ್ಞೆಯನ್ನೂ ತೋಱಿಸಿಕೊಂಡಿದ್ದಾರೆ. 🙂

 6. Sarath Mohan ಹೇಳುತ್ತಾರೆ:

  Abhaya Ji

  i am from kerala and dont know Kannada

  can you repost this feature in English………..

 7. muhammad ashpaq ಹೇಳುತ್ತಾರೆ:

  Mr. abhay
  thank u 4 introducing mammutty in kannada.
  im fan of mammutty
  all d best 4 u & ur film………..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s