ಸಿನೆಮಾ ಮಾಡೋದಕ್ಕೂ ಒಂದು ಶಾಲೆ ಇದೆ. ಅದಕ್ಕೆ ನಾನು ಹೋಗ್ತಿದೇನೆ ಎಂದು ತಿಳಿದಾಗ ಬಹಳ ಜನ ಅಚ್ಚರಿ ಪಟ್ಟಿದ್ದರು. ನಿಜಾ ಹೋಳೋದಾದ್ರೆ, ಅಲ್ಲಿನ ಜೀವನ ಹೇಗಿರಬಹುದು ಎನ್ನೋದರ ಬಗ್ಗೆ ನನಗೂ ಕುತೂಹಲ ಇತ್ತು. ಹಾಸ್ಟೇಲ್ ಸೇರಿದ ಮೊದಲನೆಯ ದಿನವೇ ಸೀನಿಯರ್ ಒಬ್ಬ ಸಿಕ್ಕಿ, “ಏಯ್… ಜೂನಿಯರ್… ಸೆಲ್ಯೂಟ್ ಹೊಡೀ…” ಎಂದಾಗ ನಾನೆಲ್ಲೋ ತಮಾಷೆ ಮಾಡ್ತಿದೇನೆ ಎಂದುಕೊಂಡಿದ್ದೆ. ಆದ್ರೆ ಮತ್ತೆ ಸಂಜೆಯೊಳಗೆ ನಮ್ಮೆಲ್ಲ ಕ್ಲಾಸ್ಮೇಟುಗಳ ಮೂಲಕ ನಮಗೆ ರಾತ್ರಿ ಇಡೀ ರ‍್ಯಾಗಿಂಗ್ ನಡೆಯಲಿದೆ ಎಂದು ತಿಳಿದಾಗ ಕೈಕಾಲಲ್ಲಿ ನಡುಕ ಆರಂಭವಾಗಿತ್ತು. ನಾನು ಮೊದಲಬಾರಿಗೆ ಊರು ಬಿಟ್ಟು ಅಷ್ಟು ದೂರದಲ್ಲಿದ್ದೆ. ಹಿಂದಿ ಬೇರೆ ಸರಿಯಾಗಿ ಬರುತ್ತಿರಲಿಲ್ಲ. ಕನ್ನಡದವರು ಇನ್ಯಾರೂ ಇರಲಿಲ್ಲ. ಒಟ್ಟಿನಲ್ಲಿ ಒಳ್ಳೇ ಪೇಚಿನ ಸಂದರ್ಭ. ಅಂದಹಾಗೆ ಅಲ್ಲಿ ರ‍್ಯಾಗಿಂಗನ್ನು ಸತ್ಸಂಗ ಎಂದು ಕರೆಯ ಬೇಕೆಂದು ನಮಗೆ ನಿರ್ದೇಶವಿತ್ತು. ಯಾಕೆಂದರೆ, ರ‍್ಯಾಗಿಂಗ್ ಬ್ಯಾನ್ ಆಗಿತ್ತು ತಾನೇ?!
ರಾತ್ರಿ ಎಲ್ಲರೊಡನೆ ನಾನೂ ಸತ್ಸಂಗ ನಡೆಯುವ ಸ್ಥಳಕ್ಕೆ ಹೋಗುತ್ತಿರಬೇಕಾದರೆ, ದಾರಿಯಲ್ಲೇ ಒಂದಿಬ್ಬರು ಸೀನಿಯರ್ಸ್ ಸಿಕ್ಕಿದರು. “ಎಲ್ಲಿಂದ?” ಎಂದು ಅವರು ಕೇಳಿದಾಗ “ಕರ್ನಾಟಕದಿಂದ, ಮಂಗಳೂರು” ಎಂದೆ ನಾನು. “ಮೆಚ್ಚಿನ ನಿರ್ದೇಶಕ ಯಾರು?” “ಗಿರೀಶ್ ಕಾಸರವಳ್ಳಿ” ಒಂದು ಕ್ಷಣ ಅವರೊಳಗೆ ಮಾತನಾಡಿ ನನಗಾಗಿ ಒಂದು ಹೊಸ ಕಾಯಕ ರೂಪಿಸಿದರು. ಹಾಸ್ಟೆಲ್ಲಿನ ಬಾಗಿಲಲ್ಲಿ ನಿಂತು ನಾನು ಸತತ ಒಂದು ಗಂಟೆ ಗಂಟಲು ಹರಿಯುವಂತೆ ಶೂನ್ಯವನ್ನೇ ದಿಟ್ಟಿಸುತ್ತಾ “ಮಾನ್ಯ ಗಿರೀಶ್ ಕಾಸರವಳ್ಳಿಯವರೇ… ನಾನು ನಿಮ್ಮ ಅಭಿಮಾನಿ. ನಾನೂ ಕೊನೆಗೂ ಫಿಲಂ ಸ್ಕೂಲಿಗೆ ಸೇರಿಕೊಂಡಿದ್ದೇನೆ” ಎಂದು ಚೀರಿಕೊಳ್ಳಬೇಕಿತ್ತು. ಸರಿ, ಪರವಾಗಿಲ್ಲ ಕೇವಲ ಕಿರಿಚಿಕೊಳ್ಳೋದು ತಾನೇ ಎಂದು ಒಂದು ಗಂಟೆ ಹಾಗೆ ಸಮಯ ಕಳೆದದ್ದಾಯಿತು. ಮೊದಲ ದಿನದ ಸತ್ಸಂಗ ಸಾಕಷ್ಟು ಆರಾಮದಾಯಕವಾಗಿಯೇ ಮುಗಿದು ಹೋಯಿತು.
ಎರಡನೇ ದಿನದಿಂದ ದಿನಾ ಸಂಜೆ ಪಠ್ಯಕ್ಕೆ ಸಂಬಂಧಿಸಿದಂತೆ ಒಂದು ಚಿತ್ರವನ್ನು ತೋರಿಸುತ್ತಿದ್ದರು. ಇದಕ್ಕೆಂದೇ ನಮ್ಮ ಶಾಲೆಯಲ್ಲಿ ಮೂರು ಸುಸಜ್ಜಿತ ಚಿತ್ರಮಂದಿರಗಳಿವೆ. ನಂತರ ಹಾಸ್ಟೆಲ್ಲಿಗೆ ಮರಳಿ, ಊಟ ಮುಗಿಸಿ ಕ್ಯಾಂಪಸ್ಸಿನ ಮಧ್ಯಭಾಗದಲ್ಲಿದ್ದ ಮಾವಿನ ಮರದ ಕೆಳಗಡೆ ಸೇರುತ್ತಿದ್ದೆವು. ನಮ್ಮ ಇಡೀ ಕ್ಲಾಸಲ್ಲಿ ಇದ್ದಿದ್ದು ಮೂವತ್ತೈದು ಜನ. ಸೀನಿಯರ್ಸ್ ಎಲ್ಲಾ ಸೇರಿಸಿ ಇಡೀ ಹದಿನಾಲ್ಕೆಕ್ಕರೆ ಕ್ಯಾಂಪಸ್ಸಲ್ಲಿ ಇದ್ದಿದ್ದು ಬರೇ ಮುನ್ನೂರು ಜನ! ನಾವೆಲ್ಲಾ ಆ ಮಾಮರದಡಿಯಲ್ಲಿ ಸೇರಿ ಸತ್ಸಂಗದಲ್ಲಿ ತೊಡಗಿಕೊಳ್ಳುತ್ತಿದ್ದೆವು. ಅಲ್ಲಿ ನಾಟಕ ಮಾಡುವುದು, ನಾವು ನೋಡಿದ ಸಿನೆಮಾದ ನಕಲು ಮಾಡುವುದು ಹೀಗೆ ನಾನಾ ತರದ ಚೇಷ್ಟೆಗಳನ್ನು ಮಾಡುತ್ತಾ, ಜೊತೆಗೆ ಸೀನಿಯರ್ಗಳಿಂದ ಚಿತ್ರ ಜೀವನದ ಕಷ್ಟ ಸುಖಗಳ ಕುರಿತಾಗಿ, ಅವರ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಬೆಳಗ್ಗಿನ ಜಾವ ನಾಲ್ಕರವರೆಗೂ ಸತ್ಸಂಗ ನಡೆಯುತ್ತಿತ್ತು. ಮತ್ತೆ ಬೆಳಗ್ಗೆ ಒಂಭತ್ತಕ್ಕೇ ತರಗತಿಯಲ್ಲಿ ಹಾಜರಿ. ಸಂಜೆ ಮತ್ತೆ ಪ್ರಪಂಚದ ಶ್ರೇಷ್ಟ ಚಿತ್ರಗಳ ಪ್ರದರ್ಶನ ಮತ್ತೆ ಸತ್ಸಂಗ. ಹೀಗೆ ನೋಡನೋಡುತ್ತಲೇ ಒಂದು ತಿಂಗಳೂ ಕಳೆದೇ ಹೋಯ್ತು. ನಾವೂ ಪ್ರತಿಷ್ಟಿತ ಪೂನಾ ಚಿತ್ರ ಶಾಲೆಯ ಅಧಿಕೃತ (!) ವಿದ್ಯಾರ್ಥಿಗಳಾದೆವು. ಅಲ್ಲಿನ ಸೀನಿಯರ್ಸ್ಗಳಲ್ಲಿ ಅನೇಕರು ಇಂದಿಗೂ ಜೀವದ ಗೆಳೆಯರಾಗಿದ್ದಾರೆ.
ಇಂದು ಹಿಂದಿ, ಮರಾಠಿ, ಇಂಗ್ಲೀಶ್, ಅಸ್ಸಾಮಿ, ಬೆಂಗಾಲಿ, ಮಲಯಾಳ, ನೇಪಾಳಿ ಹೀಗೆ ಬೇರೆ ಬೇರೆ ಭಾಷೆಯಲ್ಲಿ ಗುರುತರ ಸಿನೆಮಾಗಳಲ್ಲಿ ಕಂಡುಬರುವ ಅನೇಕ ಸಹಪಾಠಿಗಳ, ಸೀನಿಯರ್ಸ್ಗಳ ಹೆಸರುಗಳನ್ನು ನೋಡುವಾಗ ಹಳೆಯದೆಲ್ಲ ನೆನಪಾಗಿ ಮತ್ತೆ ಪೂನಾದ ಗಾಳಿ ಮೂಗಿಗೆ ಸೋಕಿದಂತಾಗುತ್ತದೆ.
ಇದು ಅನುಕರಣಯೋಗ್ಯ Ragging ಅಲ್ಲ, ಸತ್ಸಂಗ
amazed to hear that ragging is rampant even in ftii, pune
thought only enlightened souls joined the school, excuse the pun, arty types
really nice.very pleasant to read in kannada.its gives the feeling that ur sitting infront and explaining.