ಆಟ ಮುಗಿಸಿ ಹೊರಟು ಹೋದ ಚಿತ್ರ ಮಾಂತ್ರಿಕ


ಚಲನ ಚಿತ್ರವು ಒಂದು ಕನಸಿನಂತೆ, ಸಂಗೀತದಂತೆ. ಅದು ಸಾಮಾನ್ಯ ಪ್ರಜ್ಞೆಯನ್ನು ಮೀರಿ ಹೋಗುತ್ತದೆ. ಚಲನ ಚಿತ್ರವು ಆತ್ಮದ ಬೆಚ್ಚನ ಗೂಡಿನೊಳಗೆ ಭಾವದ ಧಾರೆ ಸುರಿಸುತ್ತದೆ. ಇದು ಬರೇ ಕಣ್ಣಿನ ಮಾಯೆಯಲ್ಲ, ಚಮತ್ಕಾರವಲ್ಲ. ಪ್ರತಿ ಕ್ಷಣ ಹಾರುವ ಇಪ್ಪತ್ನಾಲ್ಕು ಬೆಳಕಿನ ಕಿಂಡಿಗಳು, ನಡುವೆ ಕತ್ತಲೆಯ ವಾಸ.
– ಮ್ಯಾಜಿಕ್ ಲಾಂಟರ್ನ್, ೧೯೮೭

ನಾನು ವಿಶ್ವ ಸಿನೆಮಾ ನೋಡಲಾರಂಭಿಸಿದ ಮೊದಲ ದಿನಗಳಲ್ಲೇ ನೋಡಿದ, ಸದಾ ಕಾಲ ನನ್ನನ್ನು ಕಾಡಿಸಿದ ಒಂದು ಚಿತ್ರ ‘ಸೆವೆನ್ತ್ ಸೀಲ್’, ನಿರ್ದೇಶಕ ಇಂಗ್ಮಾರ್ ಬರ್ಗ್ಮನ್ (೧೯೧೮-೨೦೦೭). ಮತ್ತೆ ಇವರ ‘ಥ್ರೂ ದ ಗ್ಲಾಸ್ ಡಾರ್ಕ್ಲೀ’, ‘ವರ್ಜಿನ್ ಸ್ಪ್ರಿಂಗ್’, ‘ವಿನ್ಟರ್ ಲೈಟ್’, ‘ವೈಲ್ಡ್ ಸ್ಟ್ರಾಬರೀ’ ಹೀಗೆ ಅನೇಕ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿತು. ನೂರಕ್ಕೂ ಮಿಗಿಲಾದ ರಂಗಪ್ರಸ್ತುತಿ, ೧೫೦ರಷ್ಟು ರೇಡಿಯೋ ನಾಟಕಗಳು, ಐವತ್ತಕ್ಕೂ ಹೆಚ್ಚು ಸಿನೆಮಾ ಮಾಡಿದ ಸ್ವೀಡನ್ನಿನ ಈ ಮಹಾ ವ್ಯಕ್ತಿ ಇದೀಗ (೩೦ ಜುಲೈ ೨೦೦೭) ಕಣ್ಮರೆಯಾಗಿದ್ದಾರೆ. ಅವರದೇ ಪ್ರತಿಮೆಯನ್ನು ಬಳಸಿದರೆ, ಸಾವಿನೊಡನೆ ಚೆಸ್ ಆಟ ಮುಗಿಸಿ ಹೊರಟಿದ್ದಾರೆ. ಅವರಿಗೆ ಕನ್ನಡ ನೆಲದಿಂದ ಕಿರಿಯನೊಬ್ಬನ ನುಡಿ ನಮನ ಇದು.

೧೪ ಜುಲೈ, ೧೯೧೮ರಂದು ಇಂಗ್ಮಾರ್ ಬರ್ಗ್ಮನ್ ಜನಿಸಿದರು. ತಂದೆ ಸ್ವೀಡನ್ನಿನಲ್ಲಿ ಪ್ರೊಟೆಸ್ಟ್ಂಟ್ ಧಾರ್ಮಿಕ ನಾಯಕರಾಗಿದ್ದರು. ತುಂಬಾ ಶಿಸ್ತಿನ ವ್ಯಕ್ತಿ. ಈ ಕಾರಣದಿಂದ ಇಂಗ್ಮಾರ್ ಬಾಲ್ಯವನ್ನು ಅನೇಕ ಬಾರಿ ಗಂಟೆಗಟ್ಟಾಲೆ ಕತ್ತಲೆ ಕೋಣೆಯಲ್ಲಿ ಕುಳಿತು ಭಯಭೀತರಾಗಿ, ಅಪ್ಪನ ಹಾಗೂ ಆತನ ಧರ್ಮಪರಿಪಾಲನೆಯಿಂದ ಬಸವಳಿಯುತ್ತಾ ಕಳೆದರು. ಇದು ಇಂಗ್ಮಾರ್ ಬರ್ಗ್ಮನ್ರಲ್ಲಿ ಬಾಲ್ಯದಿಂದಲೇ ಧರ್ಮದ ಬಗ್ಗೆ ಅಸಹನೆಯೂ, ದೇವರು, ಸಾವು ಇತ್ಯಾದಿಗಳ ಕುರಿತು ಆಸಕ್ತಿಯೂ ಹುಟ್ಟಿಸಿತು. ‘ಸೆವೆನ್ತ್ ಸೀಲ್’ನಲ್ಲಿ ಸಾವಿನೊಂದಿಗೆ ಚೆಸ್ ಆಡುವುದಾಗಿ, ಚಳಿಗಾಲದಲ್ಲಿ ದೂರ, ಏಕಾಂತ ಪ್ರದೇಶದ ಪಾದ್ರಿಯೊಬ್ಬನ ಧರ್ಮದ ಕುರಿತಾದ ದ್ವಂದ್ವಗಳಾಗಿ, ‘ಗ್ಲಾಸ್ ಡಾರ್ಕ್ಲಿ’ಯ ಮಾನಸಿಕ ಅಸ್ವಸ್ಥ ಹುಡುಗಿಯ ಚಿತ್ರಣವಾಗಿ ಮತ್ತೆ ಮತ್ತೆ ಕಲಾವಿದ ಬರ್ಗ್ಮನ್ ತಮ್ಮ ಅನುಭವಗಳನ್ನು ಚಿತ್ರಿಸಿದ್ದಾರೆ. ಬರ್ಗ್ಮನ್ ತಮ್ಮ ಜೀವನ ಚರಿತ್ರೆಯಾದ ‘ಮ್ಯಾಜಿಕ್ ಲಾಂಟರ್ನ್’ನಲ್ಲಿ ಈ ಕುರಿತು ಹೀಗೆ ಬರೆದುಕೊಂಡಿದ್ದಾರೆ, “ಚರ್ಚಿನ ಗೂಢತೆಯು ಸದಾ ನನ್ನ ಗಮನ ಸೆಳೆಯುತಿತ್ತು. ಅದರ ಸಣ್ಣ ಕಮಾನುಗಳು, ದಪ್ಪ ಗೋಡೆಗಳು, ಅನಂತತೆಯ ವಾಸನೆ, ಮಧ್ಯಯುಗೀಯ ಚಿತ್ರಗಳ; ಗೋಡೆಗಳ ಮೇಲಿನ ಮೂರ್ತಿಗಳ ದಟ್ಟ ಕಾಡಿನೊಳಗೆ ನಲುಗುವ ಸೂರ್ಯ ಕಿರಣಗಳು ಇವೆಲ್ಲವೂ ಒಬ್ಬನ ಮನಸ್ಸು ಬಯಸುವ ಕಲ್ಪನೆಗೆ ಸಮೃದ್ಧ ಆಹಾರವಾಗಿದ್ದವು. ಅಲ್ಲಿ ಕಿನ್ನರರು, ಸಂತರು, ಸೈತಾನ, ಪ್ರವಾದಿ, ಪ್ರೇತ ಹಾಗೂ ಮನುಷ್ಯ ಎಲ್ಲರೂ ರೂಪುಗೊಳ್ಳುತ್ತಿದ್ದರು.”

ಸ್ಟಾಕ್ಹೋಂನಲ್ಲಿ ಸಾಹಿತ್ಯ ಹಾಗೂ ಕಲೆಯ ಇತಿಹಾಸವನ್ನು ಓದುತ್ತಿದ್ದ ಇವರು ಆ ಸಮಯದಲ್ಲಿ ರಂಗಭೂಮಿಯಿಂದ ವಿಶೇಷವಾಗಿ ಆಕರ್ಷಿತರಾದರು. ಇದು ಅವರಿಗೆ ಮನೆಯವರಿಂದ ದೂರವಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಣಮಿಸಿತು. ತಮ್ಮ ವಿದ್ಯಾಭ್ಯಾಸದ ನಂತರ ಅವರು ವಿದ್ಯಾರ್ಥಿ-ನಿರ್ದೇಶಕನಾಗಿ ಸ್ಟಾಕ್ಹೋಮ್ ಥ್ಯೇಟರಿನಲ್ಲಿ ಕೆಲ ಕಾಲ ಅಭ್ಯಾಸ ಮಾಡಿದರು. ಈ ಸಮಯದಲ್ಲಿ ಅನೇಕ ಕಥೆ, ಕಾದಂಬರಿ, ಚಿತ್ರಕಥೆ ಬರೆದರೂ ಅವನ್ನು ರಂಗಭೂಮಿಗೆ ಇಳಿಸುವುದಾಗಲೀ ಪ್ರಕಟಿಸುವುದಾಗಲೀ ಸಾಧ್ಯವಾಗಲಿಲ್ಲ. ‘ಸೆವೆನ್ಸಕ್ ಫಿಲ್ಮಿಂಡಸ್ಟ್ರಿ’ ಎಂಬ ಕಂಪನಿಯಲ್ಲಿ ಬರ್ಗ್ಮನ್ ಮೊದಲ ಕೆಲಸ ಹಿಡಿದರು. ಇಲ್ಲಿ ಅವರ ಕೆಲಸವೆಂದರೆ, ಖ್ಯಾತ ನಿರ್ದೇಶಕರ ಅಪರೂಪದ ಚಿತ್ರಕಥೆಗಳನ್ನು ಸಂರಕ್ಷಿಸುವುದು. ಈ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಜೀವನಕ್ಕೆ ಮಹತ್ತರ ತಿರುವು ಕೊಟ್ಟ ವರ್ಷ ೧೯೪೪. ಆ ವರ್ಷ ಬರ್ಗ್ಮನ್ ಬರೆದ ಚಿತ್ರಕಥೆಯ ಆಧಾರದ ಮೇಲೆ ‘ಟಾರ್ಮೆನ್ಟ್’ ಎಂಬ ಸಿನೆಮಾ ತಯಾರಾಯಿತು. ಇದರ ಕೊನೆಯ ಒಂದು ಭಾಗವನ್ನು ಅವರೇ ನಿರ್ದೇಶಿಸುವುದರ ಮೂಲಕ ಇದು ಅವರ ಮೊದಲ ಚಿತ್ರವೂ ಆಯಿತು. ಆ ಸಿನೆಮಾದ ಯಶಸ್ಸು ಬರ್ಗ್ಮನ್ನರಿಗೆ ಸ್ವಂತ ನಿರ್ದೇಶನದ ಬಾಗಿಲು ತೆರೆಯಿತು. ಅವರ ಮೊದಲ ಚಿತ್ರಗಳು ಆ ಕಾಲದ ಸ್ವೀಡನ್ನಿನ ಯುವಕರ ಮಾನಸಿಕ ಒತ್ತಡಗಳು, ದ್ವಂದ್ವಗಳ ಬಗ್ಗೆಯೇ ಆಗಿದ್ದು ಅಷ್ಟೇನೂ ಮಹತ್ವ ಪಡೆಯಲಿಲ್ಲ. ಆದರೆ, ಕಲಾವಿದ ಬರ್ಗ್ಮನ್ರನ್ನು ಸ್ವೀಡನ್ ಆಗಲೇ ಗುರುತಿಸಲಾರಂಭಿಸಿತ್ತು.

೧೯೪೭ರಲ್ಲಿ ಬರ್ಗ್ಮನ್ ‘ಅ ಶಿಪ್ ಬೌನ್ಡ್ ಟು ಇನ್ಡಿಯಾ’ ಎಂಬ ಚಿತ್ರವನ್ನು ನಿರ್ದೇಶಿಸಿದರು. ಇದರಲ್ಲಿ ಗೊತ್ತು ಗುರಿಯಿಲ್ಲದ ನಾಡಿಗೆ ಪಯಣಿಸುವ ಪ್ರೇಮಿಗಳ ಕಥನವಿತ್ತು. ಪ್ರಸಿದ್ಧ ಕ್ಯಾಮರಾಮನ್ ಗುನ್ನರ್ ಪಿಸ್ಚರ್ ೧೯೫೦ರಲ್ಲಿ ‘ಸಮ್ಮರ್ ಇನ್ಟರ್ಲೂಡ್’ ಎಂಬ ಸಿನೆಮಾದಲ್ಲಿ ಬರ್ಗ್ಮನ್ರ ಬಳಗವನ್ನು ಸೇರಿಕೊಂಡರು ಹಾಗೂ ಅನೇಕ ಕಾಲ ಬರ್ಗ್ಮನ್ ಸಿನೆಮಾ ಪಯಣದ ಸಾಥಿಯಾಗಿ ನಿಂತರು.

೧೯೫೬ರಲ್ಲಿ ಬರ್ಗ್ಮನ್ ಕಾನ್ಸ್ನಲ್ಲಿ ತಮ್ಮ ಪ್ರಥಮ ಮಹತ್ವದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಯು ಅವರ ‘ಸ್ಮೈಲ್ಸ್ ಆಫ್ ದ ಸಮ್ಮರ್ ನೈಟ್’ ಚಿತ್ರಕ್ಕೆ ದೊರೆಯಿತು. ನಂತರ ಬಂದ ‘ಸೆವೆನ್ತ್ ಸೀಲ್’ (೧೯೫೭) ವಿಶ್ವ ಸಿನೆಮಾದ ಅಚ್ಚಳಿಯದ ಕೆಲವು ಪ್ರತಿಮೆಗಳಲ್ಲಿ ಒಂದಾದ ಸಾವಿನೊಂದಿಗೆ ಚೆಸ್ ಆಡುವ ಧೀರನೊಬ್ಬನ ಚಿತ್ರಣವನ್ನು ನೀಡಿತು. ಅಂಧಕಾರದ ಯುಗದಲ್ಲಿ, ಪ್ಲೇಗ್ ಪೀಡಿತ ಸಮಯದಲ್ಲಿ ಸಾವಿನೊಂದಿಗಿನ ಈ ಸಂಘರ್ಷದ ಚಿತ್ರವನ್ನು ನಿರ್ದೇಶಿಸುವಾಗ ನಾನು ಸಾವಿನ ಕುರಿತಾಗಿ ವಿಪರೀತ ಹೆದರಿದ್ದೆ ಎಂದು ಬರ್ಗ್ಮನ್ ಒಂದೆಡೆ ಹೇಳಿದ್ದರು. ೧೯೫೭ರಲ್ಲಿ ‘ವೈಲ್ಡ್ ಸ್ಟ್ರಾಬೆರ್ರಿಸ್’ ಪ್ರದರ್ಶನ ಕಂಡಿತು. ಇದರಲ್ಲಿ ವೃದ್ಧಾಪ್ಯ ಹಾಗೂ ಅದರ ಒಳತೋಟಿಗಳನ್ನು ಬರ್ಗ್ಮನ್ ಬಿಚ್ಚಿಟ್ಟರು. ಮೂಕೀ ಸಿನೆಮಾಗಳ ಖ್ಯಾತ ನಟ ವಿಕ್ಟರ್ ಸೀಸ್ಟ್ರಾಮ್ ನಟಿಸಿದ್ದ ಈ ಚಿತ್ರ ನಿವೃತ್ತ ಉಪನ್ಯಾಸಕನೊಬ್ಬನ ಮಾನಸಿಕ ತುಮುಲಗಳ ಚಿತ್ರೀಕರಣವನ್ನು ಹೊಂದಿತ್ತು. ಅದು ದೂರದ ವಿಶ್ವ ವಿದ್ಯಾನಿಲಯವೊಂದು ಈ ಉಪನ್ಯಾಸಕನಿಗೆ ಗೌರವ ಪದವಿ ಪ್ರಧಾನ ಮಾಡುವ ಒಂದು ದಿನದ ಕಥನವಾಗಿತ್ತು. ಬರ್ಗ್ಮನ್ರಿಗೆ ಆಸ್ಕರ್ ತಂದುಕೊಟ್ಟ ‘ವರ್ಜಿನ್ ಸ್ಪ್ರಿಂಗ್’ ೧೯೬೦ರಲ್ಲಿ ಹೊರಬಂದಿತು. ದೇವಾಲಯಕ್ಕೆ ಹೋಗುತ್ತಿರುವ ಮುಗ್ಧ ಹುಡುಗಿಯೊಬ್ಬಳನ್ನು ಮೂವರು ಬಲಾತ್ಕಾರಿಸುತ್ತಾರೆ ಹಾಗೂ ಆಕೆಯನ್ನು ಕೊಲ್ಲುತ್ತಾರೆ. ಘಟನೆ ನಡೆದ ಜಾಗದಲ್ಲಿ ಒಂದು ನೀರ ಚಿಲುಮೆ ಹುಟ್ಟುತ್ತದೆ. ಸುದ್ದಿ ತಿಳಿದ ಆಕೆಯ ತಂದೆ ತನ್ನ ಮಗಳ ನೆನಪಿಗೆ ಹಾಗೂ ತನ್ನ ಉಪೇಕ್ಷೆಗೆ ಪರಿಹಾರವಾಗಿ ಅಲ್ಲಿ ಒಂದು ದೇವಾಲಯ ನಿರ್ಮಿಸುವ ಪ್ರತಿಜ್ಞೆ ಮಾಡುವ ದಂತಕಥೆ ಈ ಚಿತ್ರದ ಕಥೆ. ಧಾರ್ಮಿಕ ರೀತಿಗಳ ಕುರಿತಾದ ಜಿಜ್ಞಾಸೆಯನ್ನು ಬರ್ಗ್ಮನ್ ದಂತಕಥೆಯ ನೆಪದಲ್ಲಿ ಇಲ್ಲಿ ಚರ್ಚಿಸುತ್ತಾರೆ. ಮುಂದಿನ ಆಸ್ಕರ್ ಪಡೆದ ಕೃತಿ ‘ಥ್ರೂ ದ ಗ್ಲಾಸ್ ಡಾರ್ಕ್ಲಿ’ (೧೯೬೧) ‘ವಿನ್ಟರ್ ಲೈಟ್’ (೧೯೬೩) ಮತ್ತೆ ಧಾರ್ಮಿಕ ನಾಯಕನೊಬ್ಬನ ಮಾನಸಿಕ ತೊಳಲಾಟವನ್ನು ಚಿತ್ರಿಸುತ್ತದೆ. ೧೯೭೦ರ ದಶಕದಲ್ಲಿ ಬರ್ಗ್ಮನ್ ಟೆಲಿವಿಷನ್ ಮಾಧ್ಯಮದೆಡೆಗೆ ತಮ್ಮ ಗಮನವನ್ನು ಹರಿಸಿದರು. ಸಮಯದೊಂದಿಗಿನ ಆವಿಷ್ಕಾರಗಳಿಗೆ ಅವರು ಸದಾ ತೆರೆದೇ ಇದ್ದರು.

೧೯೭೬ ಬರ್ಗ್ಮನ್ ಜೀವನದಲ್ಲಿ ಪ್ರಮುಖ ಮೈಲುಗಲ್ಲಾಯಿತು. ಅವರು ‘ಡಾನ್ಸ್ ಆಫ್ ಡೆತ್’ ಎಂಬ ನಾಟಕವನ್ನು ನಿರ್ದೇಶಿಸುತ್ತಿದ್ದಾಗ ಸ್ವೀಡನ್ನಿನ ಪೋಲೀಸರು ಅವರನ್ನು ಬಂಧಿಸಿದರು. ಅವರ ಮೇಲೆ ತೆರಿಗೆ-ಮೋಸ ಆರೋಪ ಹೊರಿಸಲಾಯಿತು. ಒಬ್ಬ ಸಾದಾ ಖೈದಿಯಂತೆ ಅವರನ್ನು ನಡೆಸಿಕೊಳ್ಳಲಾಯಿತು. ಇದರಿಂದ ಬರ್ಗ್ಮನ್ ಮಾನಸಿಕ ಆಘಾತಕ್ಕೆ ಒಳಗಾದರು. ಕೆಲ ಕಾಲಾನಂತರ ಅವರ ಮೇಲಿದ್ದ ಆರೋಪಗಳನ್ನು ಹಿಂದೆಗೆಯಲಾಯಿತು, ಬರ್ಗ್ಮನ್ ಆಘಾತದಿಂದ ಹೊರಬಂದರು. ಆದರೆ ಸ್ವೀಡನ್ನಿನ ಪ್ರಧಾನಿಯೂ ಸೇರಿದಂತೆ ಗಣ್ಯಾತಿಗಣ್ಯರ ವಿನಂತಿಯ ಹೊರತಾಗಿಯೂ ಬರ್ಗ್ಮನ್ ಸ್ವೀಡನ್ನಿನಲ್ಲಿನ ತಮ್ಮ ಸ್ಟೂಡಿಯೋ ಸಹಿತ ಎಲ್ಲವನ್ನೂ ಮುಚ್ಚಿ ದೇಶ ಬಿಟ್ಟರು! ಹಾಲಿವುಡ್ನಲ್ಲಿ ಸಿನೆಮಾ ಮಾಡುವುದಾಗಿಯೂ ಘೋಷಿಸಿದರು. ೧೯೭೬ರಿಂದ ೧೯೭೮ರವರೆಗೆ ಜರ್ಮನಿಯಲ್ಲಿ ನೆಲೆಸಿ ಸಿನೆಮಾಗಳನ್ನು ನಿರ್ದೇಶಿಸಿದ ಬರ್ಗ್ಮನ್ ಆ ಕಾಲದಲ್ಲಿ ‘ಸರ್ಪೆನ್ಟ್ಸ್ ಎಗ್’ (೧೯೭೭) ‘ಆಟಂ ಸೊನಾಟಾ’ (೧೯೭೮) ಸಿನೆಮಾಗಳನ್ನು ನಿರ್ದೇಶಿಸಿದರು. ಇವು ಜರ್ಮನ್-ಅಮೇರಿಕನ್ ಸಹಯೋಗದಲ್ಲಿ ನಿರ್ಮಾಣವಾಯಿತು. ಅಷ್ಟರಲ್ಲಿ ಸ್ವೀಡನ್ನಿನ ಮೇಲಿನ ಕಹಿ ಕರಗಿಸಿಕೊಂಡಿದ್ದ ಬರ್ಗ್ಮನ್ ಸ್ವದೇಶಕ್ಕೆ ಮರಳಿದರು. ತಮ್ಮ ೬೦ನೆಯ ಹುಟ್ಟಿದ ದಿನವನ್ನು ತಾಯ್ನಾಡಿನಲ್ಲಿ ಆಚರಿಸಿದ ಬರ್ಗ್ಮನ್ ಸ್ಟಾಕ್ ಹೋಮ್ನ ರಾಯಲ್ ಥ್ಯೇಟರಿನಲ್ಲೂ ಸಿನೆಮಾ ರಂಗದಲ್ಲೂ ಮತ್ತೆ ಸಕ್ರಿಯರಾದರು. ಅವರ ಮರಳುವಿಕೆಯ ಸ್ಮರಣಾರ್ಥ ಸ್ವೀಡನ್ ಸಿನೆಮಾ ಸಂಸ್ಥೆಯು ಬರ್ಗ್ಮನ್ ಪ್ರಶಸ್ತಿಯನ್ನು ಚಿತ್ರರಂಗದ ಗಣ್ಯರಿಗಾಗಿ ಸ್ಥಾಪಿಸಿತು.

ಸ್ವೀಡನ್ ಚಿತ್ರರಂಗಕ್ಕೆ ಮರಳಿದ ಬರ್ಗ್ಮನ್ ಮತ್ತೊಮ್ಮೆ ತಮ್ಮ ಕೌಶಲವನ್ನು ಮೆರೆದರು. ಅವರ ಮತ್ತೊಂದು ಶ್ರೇಷ್ಟ ಕಲಾಕೃತಿ ‘ಫನಿ ಆನ್ಡ್ ಅಲೆಗ್ಸಾಂಡರ್’ ೧೯೮೩ರಲ್ಲಿ ಹೊರಬಂತು. ಗೊಂಬೆಯಾಟದ ರಂಗದಿಂದ ಆರಂಭಿಸಿ, ಲೇಖಕರಾಗಿ, ನಾಟಕಕಾರರಾಗಿ, ನಟರಾಗಿ, ಬರ್ಗ್ಮನ್ ಚಿತ್ರ ನಿರ್ದೇಶನಕ್ಕೆ ಬಂದರು. ಪ್ರತಿಯೊಂದರಲ್ಲೂ ಇವರ ಛಾಪು ವಿಶೇಷವಾದದ್ದೇ. ‘ಫನಿ ಆನ್ಡ್ ಅಲೆಗ್ಸಾಂಡರ್’ ಚಿತ್ರದಲ್ಲಿ ಇದರ ಕುರಿತೇ ಬರ್ಗ್ಮನ್ ಮಾತನಾಡುತ್ತಾರೆ. ನಿರ್ದೇಶಕನಾಗಿ ನನ್ನ ಜೀವನವನ್ನು ಈ ಚಿತ್ರ ಕ್ರೋಢೀಕರಿಸುತ್ತದೆ ಎಂದು ಸ್ವತಃ ಬರ್ಗ್ಮನ್ ಒಂದೆಡೆ ಹೇಳುತ್ತಾರೆ.

೧೯೮೪ರಲ್ಲಿ ಚಿತ್ರ ನಿರ್ಮಾಣದಿಂದ ನಿವೃತ್ತರಾದ ಇವರು ೨೦೦೩ರಲ್ಲಿ ರಂಗಭೂಮಿಗೂ ವಿದಾಯ ಹೇಳಿದರು. ಆಗ ಅವರ ನುಡಿ, “ರಂಗಭೂಮಿ ವಿಧೇಯ ಹೆಂಡತಿಯಂತೆ. ಸಿನೆಮಾ ಸಾಹಸಮಯ, ದುಬಾರಿ ಬೆಲೆವೆಣ್ಣಿನ ಸಂಗದಂತೆ” ಬರ್ಗ್ಮನ್ ತಮ್ಮ ಜೀವನ ಕಥೆಯನ್ನು ಮ್ಯಾಜಿಕ್ ಲ್ಯಾಂಟ್ರನ್ (೧೯೮೭) ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಬರ್ಗ್ಮನ್ರ ವೈಯಕ್ತಿಕ ಜೀವನ ತೀರಾ ಏರಿಳಿತಗಳ ಯಾತ್ರೆ. ಅವರು ೧೯೪೩ರಲ್ಲಿ ನೃತ್ಯ ನಿರ್ದೇಶಕಿ ಹಾಗೂ ಸ್ವತಃ ನೃತ್ಯಗಾತಿಯಾಗಿದ್ದ ಎಲ್ಸೆ ಫಿಸ್ಚರ್ ಎಂಬಾಕೆಯನ್ನು ವಿವಾಹವಾಗಿ ಲೀನಾ ಬರ್ಗ್ಮನ್ ಎಂಬ ಪುತ್ರಿಯನ್ನು ಹೊಂದಿದರು. ೧೯೪೫ರಲ್ಲಿ ಸಿನೆಮಾ ನಿರ್ದೇಶಕಿಯಾದ ಎಲ್ಲೇನ್ ಲುನ್ಡ್ಸ್ಟ್ರಾಂರನ್ನು ವಿವಾಹವಾಗಿ ಮುಂದೆ ನಿರ್ದೇಶಕಿಯಾಗಿ ಹೆಸರು ಪಡೆದ ಈವಾ ಬರ್ಗ್ಮನ್, ಜಾನ್ ಬರ್ಗ್ಮನ್ ಹಾಗೂ ಮಟ್ಸ್-ಅನ್ನಾ ಬರ್ಗ್ಮನ್ ಎಂಬ ಅವಳಿ ಮಕ್ಕಳನ್ನು ಪಡೆದರು. ೧೯೫೧ರಲ್ಲಿ ಪತ್ರಕರ್ತೆಯಾಗಿದ್ದ ಗುನ್ನ್ ಗುರ್ಟ್ ಎಂಬಾಕೆಯನ್ನು ವಿವಾಹವಾಗಿ ಮಗನಾಗಿ ಇಂಗ್ಮಾರ್ ಬರ್ಗ್ಮನ್ ಜೂನಿಯರ್ರನ್ನು ಪಡೆದರು. ೧೯೫೯ರಲ್ಲಿ ಕಬಿ ಲರೆಟ್ಟಿ ಎಂಬ ಪಿಯಾನೋ ಕಲಾವಿದೆಯನ್ನು ವಿವಾಹವಾಗಿ ಡಾನಿಯಲ್ ಬರ್ಗ್ಮನ್ ಎಂಬ ಮುಂದೆ ನಿರ್ದೇಶಕನಾಗಿ ಖ್ಯಾತರಾದ ಮಗನನ್ನು ಪಡೆದರು. ೧೯೭೧ರಲ್ಲಿ ಇಂಗ್ರಿಡ್ ವೊನ್ ರೊಸೆನ್ ಎಂಬಾಕೆಯನ್ನು ವಿವಾಹವಾಗಿ ಮರಿಯಾ ವೊನ್ ರೊಸೆನ್ ಎಂಬ ಮಗಳನ್ನು ಪಡೆದರು. ಇದಲ್ಲದೆ ಲಿನ್ನ್ ಉಲ್ಲ್ಮನ್ ಎಂಬ ಪುತ್ರಿಯನ್ನು ಅವರು ಲಿವ್ ಉಲ್ಲ್ಮನ್ ಎಂಬ ನಟಿಯಿಂದಲೂ ಪಡೆದಿದ್ದರು. ರಂಗಭೂಮಿ ಹಾಗೂ ಸಿನೆಮಾ ಇವೆರಡನ್ನೂ ನಿರಂತರವಾಗಿ ಜೀವಿಸಿದ ಬರ್ಗ್ಮನ್ ಇವೆರಡೂ ನನಗೆ ಸ್ವಂತ ಭಾವನೆಗಳ ತಾಕಲಾಟಗಳಿಂದ, ವೈಯಕ್ತಿಕ ಜೀವನದ ತೊಳಲಾಟಗಳಿಂದ ದೂರ ಉಳಿಯುವ ಸಾಧನ ಎನ್ನುತ್ತಿದ್ದರು.

ನೆರಳು ಬೆಳಕಿನ ಆಟದಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು ಮುಖಗಳ ಕ್ಲೋಸ್-ಅಪ್ ತೆಗೆಯುವುದನ್ನು ಬಹಳ ಇಷ್ಟ ಪಡುತ್ತಿದ್ದರು. ಇವರು ತಮ್ಮ ಚಿತ್ರಗಳಲ್ಲಿ ಕೆಲವೇ ಪಾತ್ರಗಳನ್ನು ಆಯ್ದು ವಿಷಯಗಳನ್ನು ನವಿರಾಗಿ ಹೇಳುತ್ತಾ ಹೋಗುತ್ತಾರೆ. ಇದಕ್ಕಾಗಿ ಬರ್ಗ್ಮನ್ ಬಳಿ ತಮ್ಮ ನೆಚ್ಚಿನ ನಟರ ಒಂದು ದಂಡೇ ಇತ್ತು. ಮಾಕ್ಸ್ ವೊನ್ ಸೈಡೋ, ಬಿಬಿ ಆನ್ಡರ್ಸನ್, ಹರಿಯೆಟ್ ಆನ್ಡರ್ಸನ್, ಅರ್ಲನ್ಡ್ ಜೋಸೆಫ್ಸನ್, ಇಂಗ್ರಿಡ್ ಥುಲಿನ್, ಗುನ್ನರ್ ಇತ್ಯಾದಿ ನಟರು ಬರ್ಗ್ಮನ್ರ ಕನಿಷ್ಟ ಐದು ಚಿತ್ರಗಳಲ್ಲಾದರೂ ಪಾತ್ರವಹಿಸಿದ್ದರು. ಇವರಲ್ಲಿ ಕೊನೆಯವರಾಗಿ ಸೇರಿದವರು ಲಿವ್ ಉಲ್ಮನ್. ಇವರು ಸುಮಾರು ಒಂಭತ್ತು ಬರ್ಗ್ಮನ್ ಚಿತ್ರಗಳಲ್ಲಿ ಪಾತ್ರವಹಿಸಿದ್ದಲ್ಲದೇ (೧೯೬೬ರಲ್ಲಿ ಪರ್ಸೋನಾ ಚಿತ್ರದಿಂದ ಆರಂಭಿಸಿ) ಮುಂದೆ ಅವರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸಿದರು. ನೂರಾರು ಪ್ರಶಸ್ತಿಗಳಿಂದ ಪುರಸ್ಕೃತರಾದ ಇಂಗ್ಮಾರ್ ಬರ್ಮನ್ ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವರ ನಿರ್ದೇಶನದ ‘ಸೆವೆನ್ತ್ ಸೀಲ್’ ಚಿತ್ರ ಈಗ ತನ್ನ ಐವತ್ತನೇ ವರ್ಷ ಆಚರಿಸಲು ಸ್ವೀಡನ್ನಿ ಹಾಗೂ ಇಂಗ್ಲಾಂಡ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಚಲನಚಿತ್ರ ರಂಗದ ಇಂಥಾ ಮಾಂತ್ರಿಕನನ್ನು ಸಾವು ಚೆಸ್ ಆಟದಲ್ಲಿ ಸೋಲಿಸಿ ತನ್ನೊಂದಿಗೆ ಕರೆದೊಯ್ದಿದೆ. ಇವರಿಗೆ ಇದು ನನ್ನ ನುಡಿನಮನ.

This entry was posted in Film Craft. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s