ಕನ್ನಡಪ್ರಭದ ಜೋಗಿಯವರ ಅಪ್ಪಣೆಯ ಮೇರೆಗೆ ನಾನು ಮಾಡಿದ ಈ ಪ್ರಯತ್ನವನ್ನು ಅವರು ಪ್ರೀತಿಯಿಟ್ಟು ಕನ್ನಡಪ್ರಭದ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸಿದ್ದಾರೆ. ಅದನ್ನು ದಯವಿಟ್ಟು ಕೊಂಡು ಓದಿ. ಮತ್ತೆ ಓದಬೇಕೆನಿಸಿದರೆ, ಅದು ಇಲ್ಲಿದೆ ನಿಮಗಾಗಿ:
ಕತ್ತಲ ಗಲ್ಲಿಯೊಂದರಲ್ಲಿ ನಡೆಯುತ್ತಿದ್ದೀರಿ. ಸ್ಥಳ? ಗೊತ್ತಿಲ್ಲ! ಎಲ್ಲಿಂದ ಬಂದಿರಿ? ಗೊತ್ತಿಲ್ಲ! ಎಲ್ಲಿಗೆ ಹೋಗುತ್ತಿರುವುದು? ಗೊತ್ತಿಲ್ಲ! ತಿರುವಿನ ಆಚೆ ಏನಿದೆ? ಗೊತ್ತಿಲ್ಲ! ಸಮಯ? ಗೊತ್ತಿಲ್ಲ! ಭಯ ಆವರಿಸುತ್ತಿದೆ. ಮೇಲೆಲ್ಲೋ ನೇತಾಡುತ್ತಿರುವ ಹಳೆಯ, ಧೂಳು ಹಿಡಿದ ಬಲ್ಬ್ ಒಂದು ಅಗಾಗ ಸತ್ತು-ಸತ್ತು ಉರಿಯುತ್ತಿದೆ. ಅಲ್ಲೆಲ್ಲಿಂದಲೂ ಕರಿಯ ಬೆಕ್ಕೊಂದು ಹಾರಿ ದಾರಿಯ ನಡುವೆ ನಿಂತು ನಿಮ್ಮನ್ನು ನೋಡಿ ಬೊಬ್ಬಿಡುತ್ತದೆ. ಮತ್ತೆ ಓಡಿ ಕತ್ತಲ ಮೂಲೆ ಸೇರುತ್ತದೆ. ನಿಮ್ಮ ಎದೆ ಬಡಿತ ಈಗ ನಿಮಗೇ ಸ್ಪಷ್ಟವಾಗಿ ಕೇಳಿಸುತ್ತಿದೆ. ಸಣ್ಣನೆ ಕೊರೆಯುವ ಚಳಿಗಾಳಿ ಬೀಸುತ್ತಿದೆ. ದೂರದಲ್ಲೆಲ್ಲೋ ಊಳಿಡುತ್ತಿರುವಂತೆ ನಾಯಿಯೊಂದು ಬೊಗಳುತ್ತಿದೆ. ಈಗ ಫಕ್ಕನೆ ನಿಮ್ಮ ಹಿಂದಿನಿಂದ ಒಂದು ದೊಡ್ಡ, ವಿಕಾರದ ಶಬ್ದ ಕೇಳಿಸುತ್ತದೆ. ನೀವು ತಿರುಗಿ ನೋಡಿದರೆ ಅಲ್ಲಿ…
ಇಂಥಾ ಸಂದರ್ಭವೊಂದರಲ್ಲಿ ನೀವು ನಿಜವಾಗಿಯೂ ಇದ್ದಿರೆಂದುಕೊಳ್ಳೋಣ. ಭಯವಾಗುವುದು ಸಹಜ. ಆದರೆ ಅದನ್ನು ಒಪ್ಪಿಕೊಳ್ಳುವುದು ಹೆಚ್ಚಿನವರಿಗೆ ಹಿಡಿಸದ ವಿಷಯ. ಭಯ ನಮ್ಮೆಲ್ಲರಲ್ಲೂ ಅಡಗಿರುವ ಸಹಜ ಗುಣ. ಹುಟ್ಟಿದ ಮಗು ಮೊದಲು ಭಯದಿಂದ ಅಳುತ್ತದೆ. ನಮ್ಮ ಜೀವನದುದ್ದಕ್ಕೂ ನಾವು ಅನೇಕ ವಿಷಯಗಳಿಗೆ ಹೆದರುತ್ತಾ ಇರುತ್ತೇವೆ. ಆದಿ ಮಾನವನಿಗೆ ಕಾಡು ಮೃಗಗಳಿಂದ, ಅವನ ಅರಿವಿಗೆ ನಿಲುಕದ ನೈಸರ್ಗಿಕ ಆಪತ್ತುಗಳಿಂದ ಭಯ ಇದ್ದರೆ, ಆಧುನಿಕ ಮಾನವನ ಭಯದ ಸ್ವರೂಪ ಹೆಚ್ಚು ಸಂಕೀರ್ಣವಾದದ್ದು. ಇಂದು ನಾವು ಬೆಳೆಯುತ್ತಿರುವಂತೆಯೇ, ಸಮಾಜ ನಮ್ಮ ನಡೆ-ನುಡಿಗಳಿಗೆ ಆಧುನಿಕತೆಯ ಒಂದು ಕೃತಕತೆಯನ್ನೂ ಜೋಡಿಸುತ್ತದೆ. ಇದರಿಂದಾಗಿ ಭಯವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದನ್ನು ಅವಹೇಳನಕಾರಿ ಎಂದು ನಾವು ಅಂದುಕೊಳ್ಳುತ್ತೇವೆ. ಸಮಾಜದಲ್ಲಿ ವೀರರಿಗೆ ಮಾತ್ರ ಗೌರವ ಭಯಗೊಂಡವರಿಗೆ ಉಳಿಗಾಲವಿಲ್ಲವೆನ್ನುವ ನಂಬಿಕೆ ಸಾರ್ವತ್ರಿಕ.
ಹಾಗಾದರೆ ಮಾನವ ಸಹಜವಾದ ಈ ಭಾವನೆಗೆ ಒಂದು ಅಭಿವ್ಯಕ್ತಿ ಹೇಗೆ? ಮನುಷ್ಯನ ಸುಪ್ತ ಭಾವಗಳಿಗೆ ಕತ್ತಲ ಮುಸುಕಿನಲ್ಲಿ ಅಭಿವ್ಯಕ್ತಿಕೊಡುವ ಸಿನೆಮಾ ಮಾಧ್ಯಮ ಇಲ್ಲೂ ಸಹಾಯಕ್ಕೆ ಬರುತ್ತದೆ. ಕತ್ತಲ ಕೋಣೆಯಲ್ಲಿ ಕುಳಿತು ತೆರೆಯ ಮೇಲೆ ಮೂಡಿಬರುವ ಪಾತ್ರಗಳಲ್ಲಿ ಒಂದಾಗಿ ಒಂದಷ್ಟು ಹೊತ್ತು ಭಯಗೊಂಡು ರೋಮಾಂಚನ ಅಮುಭವಿಸುವುದು ಒಂದು ರೀತಿಯ ಮನೋರಂಜನೆಯೇ ಆಗಿದೆ. ಸಿನೆಮಾ ಮುಗಿಯುತ್ತಿದ್ದಂತೆಯೇ, ಆ ಪಾತ್ರದಿಂದ ಹೊರಗೆ ಬಂದು ಶಾಂತಗೊಂಡು, ಅಬ್ಬಾ, ನಾನು ಆ ಪಾತ್ರವಲ್ಲವಲ್ಲಾ! ಎಂದು ತೃಪ್ತಿಪಡೆದುಕೊಂಡು ಚಿತ್ರಮಂದಿರದಿಂದ ಹೊರಗೆ ಬರುವುದರಿಂದಾಗಿ ಭಯದ ಭಾವನೆಗಳಿಗೆ ಒಂದು ಅಭಿವ್ಯಕ್ತಿ ದೊರೆತಂತಾಗುತ್ತದೆ. ಭಯಾನಕ ಚಿತ್ರವನ್ನು ನೋಡುವುದಕ್ಕೆ ನನಗೆ ಭಯ ಎನ್ನಿಸುವುದಿಲ್ಲ ಎಂದಿತ್ಯಾದಿ ಬಡಾಯಿಕೊಚ್ಚುವವರನ್ನು ನಾವೆಲ್ಲರೂ ನೋಡಿಯೇ ಇದ್ದೇವೆ ತಾನೆ? ಇವೆಲ್ಲವೂ ಭಯದ ಅಭಿವ್ಯಕ್ತಿಯ ಕುರಿತಾದ ದ್ವಂದ್ವಗಳೇ ಆಗಿವೆ. ಹೀಗಾಗಿ ಶೃಂಗಾರ, ಹಾಸ್ಯ, ಕರುಣ ಇತ್ಯಾದಿ ರಸಗಳನ್ನುಂಟು ಮಾಡುವ ಚಿತ್ರಗಳಂತೆಯೇ, ಭಯ ಹುಟ್ಟಿಸುವ ಒಂದು ಚಲನ ಚಿತ್ರಗಳ ವರ್ಗವೇ ಹುಟ್ಟಿದೆ.
ಭಯ ಎಂದಾಕ್ಷಣ ಅದು ನಮ್ಮನ್ನು ಬೆಚ್ಚಿಬೀಳಿಸುವ ವಿಷಯವೇ ಆಗಿರಬೇಕೆಂದೇನೂ ಇಲ್ಲ. ನಯವಾಗಿ ಭಯದ ಮುಖಗಳನ್ನು ಪರಿಚಯಿಸುತ್ತಾ ನಮ್ಮಲ್ಲಿ ಭಯದ ಭಾವನೆಯನ್ನು ಉದ್ರೇಕಗೊಳಿಸುವುದೋ ಶಮನಮಾಡುವುದೋ ಸಹ ಅನೇಕ ಸಂದರ್ಭಗಳಲ್ಲಿ ನಡೆಯುತ್ತವೆ. ಭಯವನ್ನು ಜಗತ್ತಿನಾದ್ಯಂತ ಬೇರೆ ಬೇರೆ ನಿರ್ದೇಶಕರು ವಿಭಿನ್ನ ರೂಪಗಳಲ್ಲಿ ವಿಕ್ಷಕರ ಮೇಲೆ ಪ್ರಯೋಗಿಸಿ ನೋಡಿದ್ದಾರೆ. ಭಯವನ್ನೇ ಗಮನದಲ್ಲಿಟ್ಟುಕೊಂಡು ಎರಡು ಚಿತ್ರಗಳನ್ನು ನಾವಿಲ್ಲಿ ಗಮನಿಸೋಣ. ಬನ್ನಿ ಸಿನೆಮಾ ನೋಡೋಣ. ಮೊದಲ ಚಿತ್ರ ಮೆಲ್ ಗಿಬ್ಸನ್ ಎಂಬ ನಿರ್ದೇಶಕರ ಅಪಕೊಲಿಪ್ಟೋ.
ಚಿತ್ರಮಂದಿರದ ಸುಖಾಸೀನದಲ್ಲಿ ಪರದೆಯ ಮೇಲೆ ಮೂಡಿಬರಲಿರುವ ಪಾತ್ರಗಳೊಂದಿಗೊಂದಾಗಲು ಮನಸ್ಸನ್ನು ನೀವು ಸಿದ್ಧ ಮಾಡುತ್ತಿದ್ದಂತೆಯೇ, ಸಿನೆಮಾ ಮಂದಿರದೊಳಗೆ ಕತ್ತಲಾಗುತ್ತಲೇ ತೆರೆಯ ಮೇಲೆ ಚಿತ್ರಗಳು ಮೂಡಲಾರಾಂಭಿಸಿತು. ಅದ್ಯಾವುದೋ ದಟ್ಟ ಕಾಡು. ದೃಶ್ಯವು ನಿಧಾನವಾಗಿ ಕಾಡಿನ ಒಂದು ಮೂಲೆಯೆಡೆಗೆ ಚಲಿಸುತ್ತಿದೆ. ಕಾಡಿನ ನೀರವತೆ. ದೂರದಲ್ಲೆಲ್ಲೋ ಕೂಗುವ ಮಂಗ, ಇನ್ಯಾವುದೋ ಹಕ್ಕಿಯ ಸದ್ದು. ಸುಳಿವ ಗಾಳಿಗೆ ಮರದ ಅಸ್ಪಷ್ಟ ಮರ್ಮರ. ಹಾಗೇ ಶಾಂತವಾಗಿ ಹೋಗುತ್ತಿರಬೇಕಾದರೆ, ನೋಟವನ್ನು ನೆಟ್ಟಿರುವ ಮೂಲೆಯಿಂದ ಯಾವುದೇ ಕ್ಷಣಕ್ಕೂ ಹೊರಕ್ಕೆ ಹಾರಬಹುದುದಾದ, ಕ್ರೂರಜಂತುಗಳ ಬಗ್ಗೆ ನಾವು ಯೋಚಿಸುತ್ತಿರುತ್ತೇವೆ. ಘಕ್ಕನೆ ಹಾರಿ, ಕಚ್ಚುವ ಹಾವೋ, ಕೋರೆ ಹಲ್ಲನ್ನು ಕೋರೈಸುತ್ತಿರುವ ಹುಲಿಯೋ, ಘೀಳಿಟ್ಟು ಓಡಿಬರುವ ಮದಗಜವೋ ಅಲ್ಲಿಂದ ಬರಬಹುದು ಎಂದು ನಮ್ಮ ಯೋಚನೆಗಳಿಂದಾಗಿ ನಮ್ಮ ಎದೆಬಡಿತವನ್ನು ನಮ್ಮ ಕಿವಿಗಳಿಗೆ ಕೇಳಿಸುವ ಮಟ್ಟವನ್ನು ತಲುಪಿದೆ. ಈಗ ಒಂದು ಚಿಟ್ಟೆ ನಿಧಾನಕ್ಕೆ, ಶಾಂತವಾಗಿ ತೇಲುತ್ತಾ ನಮ್ಮೆದುರಿನಿಂದ ಸಾಗುತ್ತದೆ. ತೆಲೆಹರಟೆ ಚಿಟ್ಟೆ, ಕಾಡಿನೊಳಗಿನಿಂದ ಬರುವ ಭೀಕರ ಜಂತುವಿಗೆ ಸಿಲುಕಿ ನುಚ್ಚುನೂರಾದೀತು ಸುಮ್ಮನಿರಬಾರದೇ ಎಂದು ನಮಗೆ ಅನಿಸುತ್ತದೆ. ಆದರೆ ನಮ್ಮ ಗಮನ ಅದರ ಕಡೆಗಿಲ್ಲ, ನಾವು ಇನ್ನೂ ಮುಂದೆ ಹೋಗುತ್ತೇವೆ. ಆಗ ಫಕ್ಕನೆ ಕಾಡಿನೊಳಗಿನಿಂದ ಘೀಳಿಡುತ್ತಾ ಒಂದು ಹಂದಿ ಓಡಿ ನಮ್ಮೆಡೆಗೆ ಬರುತ್ತದೆ. ಈವರೆಗೆ ಬೆಳೆದು ಬಂದ ಭಯ ಕ್ಷಣದಲ್ಲಿ ಮಾಯವಾಗಿ ಕುತೂಹಲ ಆ ಜಾಗವನ್ನು ತುಂಬುತ್ತದೆ. ಮಯ ಸಂಸ್ಕೃತಿಯ ಆದಿವಾಸಿಗಳು ಆ ಹಂದಿಯ ಹಿಂದೆ ಓಡುತ್ತಾರೆ. ಅಲ್ಲಿ ಒಂದು ಆದಿವಾಸಿ ಬೇಟೆಗಾರರ ಗುಂಪು ಹಂದಿಯ ಬೇಟೆಯಾಡುತ್ತಿರುವುದು ನಮಗೆ ಅರಿವಾಗುತ್ತದೆ. ಹಂದಿ ಇತ್ತ-ಅತ್ತ ಓಡುತ್ತಾ ಬೇಟೆಗಾರರ ಕೈ ತಪ್ಪಿಸುತ್ತಾ ಸಾಗುತ್ತದೆ. ಅದು ಜೀವ ಭಯದಲ್ಲಿ ಓಡುತ್ತಾ ಹೋಗಿ ಈ ಆದಿವಾಸಿಗಳಿಟ್ಟ ಕುಣಿಕೆಗೆ ಕಾಲು ಸಿಲುಕಿಸಿಕೊಂಡು ಅದು ಏಳಿಸುವ ಭರ್ಚಿಗಳಿಗೆ ಸಿಕ್ಕಿ ಸಾಯುತ್ತದೆ. ಇಲ್ಲಿಗೆ ಆದಿವಾಸಿಗಳು ಓಡಿ ಬರುತ್ತಾರೆ. ಬೇಟೆ ಸಫಲವಾದ ಸಂತೋಷ ಅವರಿಗೆ. ಹಂದಿಯ ಕಣ್ಣುಗಳಲ್ಲಿ ಸಾವಿನ ಭಯ ಸ್ಪಷ್ಟವಾಗಿ ಉಳಿದುಹೋಗಿರುತ್ತದೆ.
ಈ ಚಿತ್ರದ ಕಥೆ ಬಹಳ ಸರಳವಾದದ್ದು. ಒಂದು ಶಾಂತಿಯುತವಾದ ಆದಿವಾಸಿಗಳ ಗುಂಪು ಇದೆ. ಅವರಲ್ಲಿ ಒಬ್ಬ ವಯಸ್ಸಾದ ಮುಖ್ಯಸ್ಥ ಹಾಗೂ ಅವನಿಗೊಬ್ಬ ಯುವಕ ಮಗ. ಆ ಮಗನಿಗೆ ಸುಂದರವಾದ ಪತ್ನಿ ಆಕೆಗೊಂದು ಮಗು ಬಗುಲಲ್ಲಿ ಇನ್ನೊಂದು ಇನ್ನು ಕೆಲವೇ ದಿನಗಳಲ್ಲಿ ಭೂಮಿಗೆ ಅವತರಿಸಲಿದೆ. ಬೇಟೆಯಾಡುತ್ತಾ, ಶಾಂತವಾಗಿ, ನಿರ್ಭಯವಾಗಿ ಇದ್ದಂಥಾ ಈ ಗುಂಪಿಗೆ ಮೊದಲಬಾರಿಗೆ ಭಯದ ಪರಿಚಯವಾಗುತ್ತದೆ. ಒಂದು ದಿನ ಬೇಟೆಯಾಡಿ ಇವರು ಸಂತಸದಿಂದ ಮಾಂಸವನ್ನು ಪಲುಮಾಡಿಕೊಳ್ಳುತ್ತಿರಬೇಕಾದರೆ, ದೂರದ ಯಾವುದೋ ಊರಿನಿಂದ ಬರುವ ದೈನ್ಯಾವಸ್ಥೆಯಲ್ಲಿರುವ, ರೋಗಗಳಿಂದ ನರಳುತ್ತಿರುವ, ಕರುಳು ಕಿತ್ತುಬರುವಂಥಾ ದರಿದ್ರ ಸ್ಥಿತಿಯಲ್ಲಿರುವ ಆದಿವಾಸಿಗಳ ಗುಂಪೊಂದು ಎದುರಾಗುತ್ತದೆ. ಅವರು ಗೋರಿಯ ಮೇಲಿನ ಹೂವಿನಂತೆ ಶಾಂತವಾಗಿಯೂ ತಣ್ಣಗೂ ಇರುತ್ತಾರೆ. ಅವರ ದರ್ಶನವಾಗುತ್ತಲೇ ಸುತ್ತೆಲ್ಲಾ ಅಪಶಕುನದ ಕಳೆ, ಗಾಳಿ ನಿಂತು ಹೋಗುತ್ತದೆ. ನಗು ಅಳಿಸಿಹೋಗುತ್ತದೆ. ಇವರನ್ನು ಕಂಡು ಮೊದಲನೆಯ ಗುಂಪು ಭಯಗೊಳ್ಳುತ್ತದೆ. ಅವರನ್ನು ಮುಂದೆ ಬರಬಹುದಾದ ಅವ್ಯಕ್ತ ಅಪಾಯದ ಭಯ ಆವರಿಸುತ್ತದೆ.
ಆ ದೀನ ಆದಿವಾಸಿಗಳ ಗುಂಪು ಬೇಟೆಗಾರರ ಗುಂಪನ್ನು ದಾಟಿ ಸಾಗುತ್ತದೆ. ಅದನ್ನು ನೋಡುತ್ತಾ ಗುಂಪಿನ ನಾಯಕನ ಮಗನ ಕಣ್ಣುಗಳಲ್ಲಿ ಭಯ ನೆಟ್ಟು ಬಿಡುತ್ತದೆ. ಇದನ್ನು ಗಮನಿಸಿದ ನಾಯಕ ಅವನಿಗೆ ಹೇಳುತ್ತಾನೆ, “ನೋಡು, ಇಲ್ಲಿ ನನಗಿಂತ ಮೊದಲು ನನ್ನ ಹಿರಿಯರು ಅವರ ಹಿರಿಯರು ಬೇಟೆಯಾಡುತ್ತಾ ಬಂದಿದ್ದರು. ನನ್ನ ನಂತರ ನೀನು ಇಲ್ಲಿ ಬೇಟೆಯಾಡುತ್ತೀಯಾ ಹಾಗೂ ನಿನ್ನ ನಂತರ ನಿನ್ನ ಮಕ್ಕಳು ಮರಿಗಳು ಇಲ್ಲಿ ಬೇಟೆಯಾಡಲಿದ್ದೀರಾ. ಇದು ನಮ್ಮ ಕಾಡು. ಇಲ್ಲಿ ನಮಗೆ ಯಾವ ಭಯವೂ ಇಲ್ಲ. ಆದರೆ ಈಗ ನಿನ್ನ ಕಣ್ಣುಗಳಲ್ಲಿ ನಾನು ಭಯವನ್ನು ಕಾಣುತ್ತಿದ್ದೇನೆ. ಅದನ್ನು ನೀನು ಕಾಡಿನಲ್ಲೇ ಇಟ್ಟು ಹಳ್ಳಿಗೆ ಬಾ. ಈ ಭಯ ಎಂಬುದೂ ಒಂದು ಸಾಂಕ್ರಮಿಕ ರೋಗವಿದ್ದಂತೆ. ನೀನಿಲ್ಲೇ ಅದನ್ನು ತೊಡೆದು ಹಾಕದಿದ್ದರೆ, ನೀನು ಅದನ್ನು ಹಳ್ಳಿಗೂ ತಂದು ಇತರಲ್ಲೂ ವಿಷಬೀಜವನ್ನು ಬಿತ್ತುವೆ.” ಮಗ ಆಗಲಿ ಎನ್ನುತ್ತಾನೆ. ಆದರೆ ಅವನ ಮನಸ್ಸು ಅದನ್ನು ಹಳ್ಳಿಗೂ ಕೊಂಡೊಯ್ಯುತ್ತದೆ. ಇಲ್ಲಿಂದ ಆರಂಭವಾಗುತ್ತದೆ ಭಯದ ಆಟ.
ಆ ದಿನವೇ, ಈ ಗುಂಪಿನ ಮೇಲೆ ನರಬೇಟೆಯಾಡುವ ಆದಿವಾಸಿ ಗುಂಪೊಂದರ ಆಕ್ರಮಣ ನಡೆಯುತ್ತದೆ. ಬಹಳ ದೂರದಲ್ಲಿರುವ ಮುಂದುವರೆದ ಜನಾಂಗವೊಂದು ತನ್ನ ಆಧುನಿಕತೆಯ ಹುಂಬಿನಲ್ಲಿ ಪರಿಸರದ ಮೇಲೆ ಮಾಡಿರುವ ಅತ್ಯಾಚಾರಗಳಿಂದಾಗಿ ಭೀಕರ ರೋಗಗಳಿಗೆ ಗುರಿಯಾಗಿವೆ. ಅವುಗಳಿಂದ ಮುಕ್ತರಾಗಲು ಅವರು ಮುಗ್ಧ ಆದಿವಾಸಿಗಳ ಬಲಿಯನ್ನು ತಮ್ಮ ಇಷ್ಟದೇವತೆಗಳಿಗೆ ನೀಡುತ್ತಿರುತ್ತಾರೆ. ಇಲ್ಲಿಗೆ ಈ ಮುಗ್ಧ ಆದಿವಾಸಿಗಳನ್ನು ಮಾರುವುದೇ ಆಕ್ರಮಣ ಮಾಡಿದ ಆದಿವಾಸಿಗಳ ಗುರಿ. ನಾಯಕನ ಮಗ, ಜಾಗ್ವಾರ್ ಪಾ (ಕಪ್ಪುಚಿರತೆಯ ಅಂಗೈ) ಆಕ್ರಮಣದ ಸಂದರ್ಭದಲ್ಲಿ ಉಪಾಯವಾಗಿ ತನ್ನ ಹೆಂಡತಿ ಹಾಗೂ ಮಗುವನ್ನು ಆಳದ ಬಾವಿಯೊಂದರಲ್ಲಿ ಅಡಗಿಸಿಡುವಲ್ಲಿ ಯಶಸ್ವಿಯಾಗುತ್ತಾನೆ. ನರಬೇಟೆಗಾರರು ಅನೇಕ ಹಳ್ಳಿಯವರನ್ನು ಬಂಧಿಸಿ ಅವರ ಕುತ್ತಿಗೆಗಳಿಗೆ ಪಟ್ಟಿಗಳನ್ನು ಕಟ್ಟಿ ಅಲ್ಲಿಂದ ಹೊರಡುತ್ತಾರೆ. ಜಾಗ್ವರ್ ಪಾನಿಗೆ ಬಾವಿಯಲ್ಲಿರುವ ತನ್ನ ಹೆಂಡತಿ ಮಕ್ಕಳದೇ ಚಿಂತೆ. ಅಲ್ಲಿಂದ ಒಂದು ಮಹಾ ಯಾತ್ರೆ ಆರಂಭವಾಗುತ್ತದೆ.
ದಾರಿಯುದ್ದಕ್ಕೂ ನರಬೇಟೆಗಾರರು ಹಾಗೂ ಗುಲಾಮರಾಗಿರುವ ಜಾಗ್ವಾರ್ ಪಾ ಹಾಗೂ ಸಂಗಡಿಗರು ಅನೇಕ ರೀತಿಯ ಕಷ್ಟ, ಭಯಗಳನ್ನು ಎದುರಿಸುತ್ತಾ ಸಾಗುತ್ತಾರೆ. ಒಂದು ಸ್ಥಳದಲ್ಲಿ ಅವರಿಗೆ ಭವಿಷ್ಯ ಹೇಳುವ ಸಣ್ಣ ಹುಡುಗಿಯೊಬ್ಬಳು ಸಿಗುತ್ತಾಳೆ. ಅವಳು ಸತ್ತ ತನ್ನ ತಂದೆಯ ಬಳಿ ಕುಳಿತಿರುತ್ತಾಳೆ. ಅವಳೂ ಯಾವುದೋ ರೋಗದಿಂದ ನರಳುತ್ತಾ ಜೀವಂತ ಹುಡುಗಿಯೋ ಅಥವಾ ಪ್ರೇತಾತ್ಮವೋ ಎಂಬಂತೆ ಕಾಣಿಸುತ್ತಿರುತ್ತಾಳೆ. ಆಕೆ ಈ ಗುಂಪನ್ನು ಕಾಣುತ್ತಲೇ, ಭವಿಷ್ಯ ನುಡಿಯುತ್ತಾಳೆ.
“ನೀವು ನನ್ನನ್ನು ಕಂಡು ಹೆದರುತ್ತಿರುವಿರೇ? ಅದು ಸಹಜ. ಏಕೆಂದರೆ ನೀವೆಲ್ಲಾ ಸೈತಾನರ ವಂಶಜರು. ನೀವು ಹೇಗೆ ಸಾಯುತ್ತೀರೆಂದು ನಿಮಗೇನಾದರೂ ಅರಿವಿದೆಯೇ? ಆ ಪವಿತ್ರ ಸಮಯ ಹತ್ತಿರದಲ್ಲೇ ಇದೆ. ಹಗಲಿನ ಕತ್ತಲೆಗೆ ಹೆದರಿ. ಕಪ್ಪುಚಿರತೆಯನ್ನು ಕರೆತರುವವನಿಗೆ ಹೆದರಿರಿ, ಆತ ಮಣ್ಣಿನಲ್ಲಿ ಒಂದಾಗಿ ಮತ್ತೆ ಹುಟ್ಟಿಬರುವನು. ಅವನ ಅಣತಿಯಂತೆ ಆಕಾಶವೂ ನಡೆಯಲಿದೆ. ಅವನು ನಿಮ್ಮ ನಾಶಕ್ಕೆ ಕಾರಣನಾಗುತ್ತಾನೆ. ಅವನೀಗ ನಮ್ಮೊಂದಿಗಿದ್ದಾನೆ. ನಿಮ್ಮ ಹಗಲುಗಳು ರಾತ್ರಿಗಳಂತೆ ಘೋರವಾಗಲಿದೆ. ಹಾಗೂ ಕಪ್ಪುಚಿರತೆ ನಿಮ್ಮ ಅಂತ್ಯಕ್ಕೆ ನಾಂದಿಯಾಗುತ್ತದೆ.” ಯಾವುದಕ್ಕೂ ಹೆದರದ ನರಬೇಟೆಗಾರರು ಇದಕ್ಕೂ ಲಕ್ಷ್ಯಕೊಡದೆ ಮುಂದುವರೆಯುತ್ತಾರೆ. ಆದರೆ ಜಾಗ್ವರ್ ಪಾನಿಗೆ ತನ್ನ ತಂದೆಯ ಮಾತು ನೆನಪಿಗೆ ಬರುತ್ತದೆ, ತಾನು ಹಳ್ಳಿಯಲ್ಲಿ ಬಿಟ್ಟು ಬಂದಿರುವ ಹೆಂಡತಿ ಮಕ್ಕಳ ಯೋಚನೆ ಬರುತ್ತದೆ. ತನಗೆ ಸಾಯುವ ಕಾಲವಿನ್ನೂ ಬಂದಿಲ್ಲ. ತಾನೇ ಆ ಹುಡುಗಿ ಹೇಳಿದ ಭವಿಷ್ಯದ ಕಪ್ಪುಚಿರತೆ (ಜಾಗ್ವರ್) ಎಂದು ಅವನಿಗೆ ಮನದಟ್ಟಾಗುತ್ತದೆ. ಅವರ ಯಾತ್ರೆ ಮುಂದುವರೆಯುತ್ತದೆ.
ಇಲ್ಲಿಂದ ನಂತರದ ಇಡೀ ಚಿತ್ರ ಸಾಗುವುದು ಹೇಗೆ ಜಾಗ್ವರ್ ಪಾ ಹಾಗೂ ಅವನ ಅನೇಕ ಇತರ ಮಿತ್ರರನ್ನು ದೂರದ ಊರಿಗೆ ಸಾಗಿಸುತ್ತಾರೆ, ಅಲ್ಲಿ ನಡೆದಿರುವ ಅತ್ಯಾಚಾರ, ಕ್ರೌರ್ಯ, ಭಯ, ಮೂಢ ನಂಬಿಕೆಗಳು, ಆಚಾರಗಳು ಇತ್ಯಾದಿಗಳನ್ನು ತೋರಿಸುತ್ತಾ ಜಾಗ್ವಾರ್ ಪಾನಿಗೆ ಉಂಟಾಗುವ ಭಯವನ್ನು ತೋರಿಸುತ್ತಾ ಅದು ಪ್ರೇಕ್ಷಕರ ಮನಸ್ಸಿನಲ್ಲಿ ಕಟ್ಟುತ್ತಾ ಸಾಗುವಂತೆ ಮಾಡುತ್ತಾರೆ ನಿರ್ದೇಶಕರು. ಹಾಗೆ ಭಯ ಬೆಳೆಯುತ್ತಿರುವಂತೆಯೇ, ಅದನ್ನು ಮೀರಿ ನಿಲ್ಲಲು ಅವನಿಗೆ ಪ್ರೇರಣೆ ಕೊಡುವುದು ಹಿಂದೆ ಹಳ್ಳಿಯಲ್ಲಿ ಬಾವಿಯ ಆಳದಲ್ಲಿ ಬದುಕಿ ತನ್ನ ಬರುವಿಕೆಗಾಗಿ ಕಾಯುತ್ತಿರುವ ಹೆಂಡತಿ ಹಾಗೂ ಮಗ. ಅವರ ಕರೆ ಅಸಹನೀಯವಾದಾಗ, ಇಲ್ಲ! ನನಗೆ ಇನ್ನೂ ಸಾಯುವ ಕಾಲ ಬಂದಿಲ್ಲ ಎಂದು ಜಾಗ್ವರ್ ಪಾ ನಿರ್ಧರಿಸುತ್ತಾನೆ!
ಇಲ್ಲಿಂದ ಆರಂಭವಾಗುತ್ತದೆ ಅವನ ಹಿಂದಿರುಗುವಿಕೆ. ಅದು ಅಷ್ಟು ಸುಲಭವಲ್ಲ. ಅವನನ್ನು ಇಲ್ಲಿಯವರೆಗೆ ಕರೆತಂದಿರುವ ಕ್ರೂರಿಗಳು ಅವನ ಬೆನ್ನತ್ತುತ್ತಾರೆ. ಬರುವಾಗ ಸರಪಳಿಯಿಂದ ಬಂಧಿತನಾಗಿ, ವಿನೀತನಾಗಿ ಬಂದ ಜಾಗ್ವರ್‌ನಿಗೆ ಹಿಂದೆ ಹೋಗುತ್ತಾ ತನ್ನ ಮೇಲಿನ ನಂಬಿಕೆ, ಕಾಯುತ್ತಿರುವ ತನ್ನವರನ್ನು ಕಾಣುವ ತವಕ, ತನ್ನ ತಂದೆ ಸದಾ ಹೇಳುತ್ತಿದ್ದ ಮಾತುಗಳು ಅವನ ಮನೋಸ್ಥೈರ್ಯವನ್ನು ಹೆಚ್ಚಿಸುತ್ತಾ ಸಾಗುತ್ತದೆ. ಈ ಹಿಂಪಯಣ ಅವನ ಭಯದ ವಿರುದ್ಧದ ಜಯವಾಗುತ್ತಾ ಸಾಗುತ್ತದೆ. ಹೀಗೆ ನಿರ್ದೇಶಕರು ತೆರೆಯ ಮೇಲೆ ಭಯದ ಆಕ್ರಮಣ ಹಾಗೂ ಅದರ ವಿರುದ್ಧದ ಹೋರಾಟದ ಒಂದು ಪ್ರಪಂಚವನ್ನು ನಮಗೆ ಕಟ್ಟಿಕೊಡುತ್ತಾರೆ.
ಇದು ಭಯದ ಅಭಿವ್ಯಕ್ತಿಯ ಒಂದು ವಿಧಾನವಾದರೆ, ಇನ್ನೊಂದು ವಿಧಾನದಲ್ಲಿ ಭಯವೇ ಪ್ರಧಾನ ಪಾತ್ರದಲ್ಲಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಭಾರತದ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಇತ್ತೀಚಿನ ಪ್ರಯೋಗಗಳನ್ನು ಗಮನಿಸೋಣ. ಮೊದಲು ಭೂತ್ ಎಂಬ ಚಿತ್ರವನ್ನು ನಿರ್ಮಿಸಿದ ಇವರು ಇತ್ತೀಚೆಗೆ ಕನ್ನಡದ ನಟ ಸುದೀಪ್ ಅವರು ನಟಿಸಿದ, ಫೂಂಕ್ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸಿದರು. ಆದರೆ ಭೂತ್ ಚಿತ್ರದಲ್ಲಿ ಅಷ್ಟೋ ಇಷ್ಟೋ ಹೆದರಿಸಿದ್ದ ರಾಮ್ ಗೋಪಾಲ್ ವರ್ಮಾ, ಈ ಚಿತ್ರದಲ್ಲಿ ಒಂದಿಷ್ಟೂ ಹೆದರಿಸುವಲ್ಲಿ ವಿಫಲರಾಗುತ್ತಾರೆ. ಚಿತ್ರದ ಪ್ರಚಾರಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡಿದರೂ, ಚಿತ್ರವು ಭಯದ ಮೂಲವನ್ನು ಅರಿಯುವುದರಲ್ಲೇ ವಿಫಲವಾಗುತ್ತದೆ ಹಾಗೂ ಇದರಿಂದಾಗಿ ಜಾಳುಜಾಳಾಗಿಯೂ ಅಸಂಬದ್ಧವಾಗಿಯೂ ಕಂಡು ಬರುತ್ತದೆ. ಇದಕ್ಕೆ ಮೂಲ ಕಾರಣ, ಚಿತ್ರವು ಕೇವಲ ಭಯವನ್ನು ಹುಟ್ಟಿಸುವುದಷ್ಟನ್ನೇ ತನ್ನ ಗುರಿಯನ್ನಾಗಿಟ್ಟುಕೊಂಡಿರುವುದು. ಚಿತ್ರ ಒಟ್ಟಂದದಲ್ಲಿ ಯಾವುದೇ ಮಹತ್ತರ ವಿಷಯವನ್ನೂ ಹೇಳುತ್ತಿರುವುದಿಲ್ಲ. ದೃಶ್ಯ ಚಮತ್ಕಾರ, ಶ್ರವ್ಯ ಚಮತ್ಕಾರಗಳ ಆಮಿಷಗಳಿಗೆ ನಿರ್ದೇಶಕ ಬಲಿಯಾದಾಗ ನೋಡುಗರ ಮನಸ್ಸು ಮತ್ತೆ ಮತ್ತೆ ಇಂಥದ್ದೆ ಚಮತ್ಕಾರಗಳನ್ನು ನಿರೀಕ್ಷಿಸಲಾರಂಭಿಸುತ್ತದೆ. ಇದರಿಂದಾಗಿ ಈ ಚಮತ್ಕಾರಗಳು ತಮ್ಮ ಬೆಲೆ ಕಳೆದುಕೊಂಡು ನೀರಸವಾಗುತ್ತವೆ. ಇದರಿಂದಾಗಿ ಚಿತ್ರದಲ್ಲಿ ಕ್ಯಾಮರಾವನ್ನು ಎಂಥಾ ವಿಚಿತ್ರ ಸ್ಥಳಗಳಲ್ಲಿ ಇಟ್ಟಿದ್ದಾರೆ ಮತ್ತು ಯಾವಥರದ ಅಬ್ಬರದ ಸಂಗೀತ, ಸದ್ದು ನೀಡಿದ್ದಾರೆ ಎನ್ನುವುದರ ಮೇಲೆ ಅವನ ಗಮನ ಹೋಗಲಾರಂಭಿಸುತ್ತದೆ. ಇದರಲ್ಲಿ ನೋಡುಗನಿಗೂ ಚಿತ್ರಕ್ಕೂ ಒಂದು ಅಂತರ ಬಂದುಬಿಡುತ್ತದೆ. ಈ ಅಂತರದಿಂದಲೇ ನೋಡುಗ ತನ್ನನ್ನು ಚಿತ್ರದ ಪಾತ್ರವಾಗಿ ಪರಿಗಣಿಸದೆ ಆ ಪಾತ್ರದ ಭಯವನ್ನು ಅನುಭವಿಸುವಲ್ಲಿ ವಿಫಲನಾಗುತ್ತಾನೆ. ಇದರಿಂದ ಚಿತ್ರದ ಉದ್ದೇಶಕ್ಕೆ ಸೋಲಾಗುತ್ತದೆ.
ಭಯದ ಚಿತ್ರವನ್ನು ನಿರ್ಮಿಸಲು ಭಯಾನಕವಾದ ಕ್ಯಾಮರಾ ತಂತ್ರ, ವಿಚಿತ್ರ ಶಬ್ದಗಳ ಬಳಕೆಯ ಬಗ್ಗೆ ಮೇಲೆ ಮಾತನಾಡಿದೆವಷ್ಟೇ, ಇದನ್ನು ವಿವರಿಸಲು ನನಗೆ ನೆನಪಾಗುವುದು ಹಿರಿಯ ಚಿತ್ರ ವಿದ್ವಾಂಸ, ನಿರ್ದೇಶಕ ಮಣಿ ಕೌಲ್ ಒಂದು ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದ ವಿಷಯ. ಯಾವುದೋ ಚಲನಚಿತ್ರ ವಿದ್ಯಾರ್ಥಿಯ ಪ್ರಯೋಗವನ್ನು ನೋಡುತ್ತಾ ಅವರು ಒಮ್ಮೆ ಹೇಳಿದರು, “ನೀನು ವಿಚಿತ್ರವಾದ ಕಥೆಯನ್ನು ವಿಚಿತ್ರವಾಗಿ ಹೇಳುತ್ತಾ ಇದ್ದೀಯಾ. ಹಾಗೆ ಅದನ್ನು ಹೇಳಿದಾಗ ಅದು ವಿಚಿತ್ರವಾಗದೆ, ಸ್ವಾಭಾವಿಕವಾಗುತ್ತದೆ. ವಿಚಿತ್ರವಾದ ಕಥೆಯನ್ನು ಸಹಜವಾಗಿ ಹೇಳುತ್ತಾ ಹೋಗು. ಆಗ ಅಲ್ಲಿನ ವಿಚಿತ್ರ ನೋಡುಗರ ಪ್ರಜ್ಞೆಗೆ ಅರಿವಾಗುತ್ತದೆ. ಅದು ಚಿತ್ರದ ಜಯ.”
ರಾಮ್ ಗೋಪಾಲ್ ವರ್ಮಾ ಸೋಲುವುದೇ ಇಲ್ಲಿ. ಅವರು ಎಲ್ಲವನ್ನೂ ಭಯಾನಕವಾಗಿ ವಿವರಿಸಲು ತೊಡಗುತ್ತಾರೆ. ಶಬ್ದ, ಬೆಳಕು, ಪಾತ್ರಗಳು ಪ್ರತಿಯೊಂದೂ ಇಲ್ಲಿ ಭಯಾನಕ. ಇದರಿಂದಾಗಿ ಭಯ ಎಲ್ಲೆಲ್ಲೋ ಹುಟ್ಟಿ ಇನ್ನೆಲ್ಲೆಲ್ಲೋ ಹುಟ್ಟಬಾರದಲ್ಲಿ ಹುಟ್ಟಿ ಆಭಾಸವಾಗಿ ಒಟ್ಟಂದದಲ್ಲಿ ಚಿತ್ರವು ಉದ್ದೇಶಿತ ರಸೋತ್ಪಾದನೆಯಲ್ಲಿ ವಿಫಲವಾಗುತ್ತದೆ.
ಹೀಗೆ ಭಯವನ್ನು ಹುಟ್ಟಿಸುವ ಕಥೆಗಳು, ಚಿತ್ರಗಳು ಅನೇಕಕಾಲದಿಂದ ನಮ್ಮ ಮನಸ್ಸಿನಾಳದಲ್ಲಿ ಹುದುಗಿರುವ ಭಯಕ್ಕೆ ಅಭಿವ್ಯಕ್ತಿಯನ್ನು ಕೊಡುತ್ತಾ ಬಂದಿವೆ. ಚಲನಚಿತ್ರದಂಥಾ ಶ್ರವ್ಯ, ದೃಶ್ಯ ಮಾಧ್ಯಮ ಇದಕ್ಕೆ ಒದಗಿಸುವ ಸಾಧ್ಯತೆಗಳು ಅಪರಿಮಿತ. ಕಾಲದಿಂದ ಕಾಲಕ್ಕೆ ಜಗತ್ತಿನಾದ್ಯಂತ ಚಿತ್ರ ನಿರ್ದೇಶಕರುಗಳು ಈ ಅಭಿವ್ಯಕ್ತಿಗೆ ಹೊಸ ಆಯಾಮವನ್ನು ಕೊಡುತ್ತಾ ಸಾಗಿದ್ದಾರೆ. ಸಮಾಜವು ಇದರ ಫಲವನ್ನು ಅನುಭವಿಸುತ್ತಲೇ ಬಂದಿದೆ.
ತುಂಬ ಚೆನ್ನಾಗಿದೆ. ಭಯದ ಬೇರೆ ಬೇರೆ ಆಯಾಮಗಳ ಬಗ್ಗೆ. ಬರವಣಿಗೆಯ ರೀತಿ ಖುಷಿ ಕೊಡುತ್ತದೆ ಇನ್ನಷ್ಟು ಬರೆಯಬೇಕು. ಓದಲು ನಾವಿದ್ದೇವೆ !
fear is a psychological feeling. it depends on person to person. so it is difficult to produce a movie and create equal effect on spectator.
ಪ್ರಿಯ ಅಭಯ್,
ನಿಮ್ಮ ಲೇಖನ ಬಹಳ ಚೆನ್ನಾಗಿತ್ತು. ಎರಡು ಸಿನಿಮಾಗಳನ್ನು ಆಧಾರದಲ್ಲಿಟ್ಟುಕೊಂಡು ಭಯವನ್ನು ವಿವರಿಸುತ್ತಾ ಹೋಗಿದ್ದೀರಿ. ಆದರೆ ನನಗೆ ಭಯ ಎಂದ ಕೂಡಲೇ ಮೊದಲು ನೆನಪಾಗುವುದು ವರ್ಮಾ ನಿರ್ದೇಶನದ `ಕೌನ್’. ಆ ಚಿತ್ರದಲ್ಲಿ ಭಯ ಆನಾವರಣಗೊಳ್ಳುವ ರೀತಿಗೂ `ಭೂತ್’ನಲ್ಲಿ ಭಯ ಅನಾವರಣಗೊಳ್ಳುವ ರೀತಿಗೂ ಬಹಳ ವ್ಯತ್ಯಾಸ ಇದೆ. ಇತ್ತೀಚೆಗೆ `ಆಮೀರ್’ ಚಿತ್ರ ಉಂಟುಮಾಡುವ ಭಯ ಬೇರೆಯದೇ ಥರ.
ಅ`ಭಯ’ ಕೊಟ್ಟ ಲೇಖನ!
-ವಿಕಾಸ ನೇಗಿಲೋಣಿ
ಸೂಪರ್ ಲೇಖನ…ಒಳ್ಳೆ ಪ್ರತಿಭಾವಂತ ಬರಹಗಾರ..( ಅಶೂಯೆ ಬರುವಷ್ಟು…)
http://shrungara.wordpress.com
ಕನ್ನಡದಲ್ಲಿ ಶೃಂಗಾರರಸಭರಿತ ಕತೆಗಳು…
ಇತಿ ನಿಮ್ಮ
ಆತ್ಮೀಯ ಕತೆಗಾರ