ನಿನ್ನೆ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಸಭಾಂಗಣದಲ್ಲಿ ಐದು ದಿನಗಳ ರಂಗೋತ್ಸವ ಆರಂಭಗೊಂಡಿತು. ಉದ್ಘಾಟನೆಯ ನಂತರ ಮೊದಲ ನಾಟಕ ಉಡುಪಿಯ ಎಂ.ಜಿ.ಎಂ ಕಾಲೇಜಿನ ಮಕ್ಕಳಿಂದ ಕಂಬಾರ ವಿರಚಿತ ‘ಬೆಪ್ಪುತಕ್ಕಡಿ ಭೋಳೇ ಶಂಕರ’ ಪ್ರಯೋಗ ನಡೆಯಿತು.
ಅಜ್ಜಿ ಕಥೆಯಂಥಾ ಒಂದು ಕಥೆಯನ್ನು ಇಟ್ಟುಕೊಂಡು, ಅದೇ ತಂತ್ರಗಾರಿಕೆಯಲ್ಲಿ ಕಥೆ ಹೇಳುತ್ತಾ ಹೋಗುವ ಈ ನಾಟಕವು ಪ್ರಸ್ತುತ ರಾಜಕೀಯದ, ಐಡಿಯಾಲಜಿಗಳ ಕುರಿತಾದ ಗಂಭೀರ ಯೋಚನೆಗಳನ್ನೂ ಮುಂದಿಡುತ್ತದೆ. ಕೈಯಲ್ಲಿ ಕೆಲಸ ಮಾಡುವವರು ಶ್ರೇಷ್ಟರೋ ಇಲ್ಲಾ ತಲೆಯಿಂದ ಕೆಲಸ ಮಾಡುವವರು ಶ್ರೇಷ್ಟರೋ ಎಂಬ ಕಾರ್ಮಿಕ ಚಳುವಳಿಯ ಛಾಯೆಗಳಿರಬಹುದು ಇಲ್ಲಾ, ಮುಟ್ಟಿದ್ದೆಲ್ಲಾ ಚಿನ್ನವಾಗಿಸಿಕೊಂಡು ಉಣ್ಣಲು ಬೇರೆಯವರೆಡೆಗೆ ನೋಡುವ ದುರಾಸೆಯ ಸೂಚನೆಗಳಿರಬಹುದು, ಇನ್ನು ಮಾರಕಾಸ್ತ್ರಗಳನ್ನು, ಬಲಿಷ್ಟ ಸೈನ್ಯವೊಂದನ್ನು ಕಟ್ಟಿ ಎಲ್ಲರನ್ನೂ, ಎಲ್ಲವನ್ನೂ ತನ್ನ ಗುಲಾಮರನ್ನಾಗಿಸಲು ಪ್ರಯತ್ನಿಸುವ ಸಾಮ್ರಾಜ್ಯಶಾಹೀ ಶಕ್ತಿಗಳಿರಬಹುದು ಇವೆಲ್ಲವನ್ನೂ ಈ ನಾಟಕ ಮಕ್ಕಳ ಕಥೆಯ ಸೋಗಿನಲ್ಲಿ ಹೇಳುತ್ತಾ ಹೋಗುತ್ತದೆ.
ನಾಟಕದ ಪ್ರಯೋಗ ಕಾಲೇಜು ಮಕ್ಕಳ ಮಟ್ಟಿಗೆ ಸಾಕಷ್ಟು ಸಮರ್ಥವಾಗಿಯೇ ಇದ್ದರೂ, ಕೆಲವು ವಿಭಾಗಗಳಲ್ಲಿ ಇನ್ನೂ ಗಮನ ಅಗತ್ಯ ಎನ್ನಿಸುತ್ತಿತ್ತು. ಪ್ರತಿಯೊಂದು ದೃಶ್ಯವೂ ಪ್ರತ್ಯೇಕವಾಗಿ ಒಂದು ದೃಶ್ಯವಾಗುತ್ತಾ ಸಾಗುತ್ತದೆ. ಒಂದು ಸಮರ್ಪಕವಾದ ಜೋಡಣೆ ಆಗಿರದಂತೆ ತೋರುತ್ತಿತ್ತು. ದೃಶ್ಯದ ಜೋಡಣೆಗೆ ಬೆಳಕು, ಸಂಗೀತ ಈ ರೀತಿ ಯಾವುದಾದರೂ ಒಂದು ತಂತ್ರವನ್ನು ಬಳಸಬಹುದಾಗಿತ್ತು. ಹಿಂದಿನ, ಮುಂದಿನ ದೃಶ್ಯದ ಭಾವ ಏನೇ ಇದ್ದರೂ, ನಡುವೆ ಕೇಳಿಬರುತ್ತಿದ್ದ ಸಂಗೀತ ಒಂದೇ ಧಾಟಿಯಲ್ಲಿರುತ್ತಿದ್ದುದು ನಾಟಕದ ಒಟ್ಟಂದಕ್ಕೆ ಯಾವುದೇ ರೀತಿಯ ಕೊಡುಗೆ ಕೊಡಲಿಲ್ಲ.
ಪಾತ್ರ ವಹಿಸಿದವರೆಲ್ಲರೂ ಕಾಲೆಜಿನ ಮಕ್ಕಳೇ ಆಗಿದ್ದರೂ, ಯಾವುದೇ ವೃತ್ತಿಪರ ನಟರಿಗೆ ಸಮ ಎನ್ನುವ ಆತ್ಮವಿಶ್ವಾಸದಿಂದ ನಟಿಸುತ್ತಿದ್ದುದು ಕಂಡುಬಂತು. ಒಟ್ಟಿನಲ್ಲಿ ‘ಬೆಪ್ಪುತಕ್ಕಡಿ ಭೋಳೇಶಂಕರ’ ಒಂದು ಸಮರ್ಥ ಪ್ರಯೋಗವಾಗಿ ಮೂಡಿ ಬಂದು ಮುಂದಿನ ದಿನಗಳಲ್ಲಿ ರಂಗೋತ್ಸವದ ನಾಟಕಗಳ ಬಗ್ಗೆ ಕುತೂಹಲವನ್ನೂ ಕೆರಳಿಸುವಲ್ಲಿ ಶಕ್ತವಾಯಿತು.