ಯಾವುದ್ಯಾವುದೋ ಬ್ಲಾಗುಗಳ ಮೂಲಕ ಸಂಚರಿಸುತ್ತಿರುವಾಗ ಅಲ್ಲಲ್ಲಿ ಕೆಟ್ಟ ಕಮೆನ್ಟ್ ಹಾಕಿ, ತಮ್ಮ ಕೆಟ್ಟ ಮನಸ್ಸನ್ನು ಪ್ರದರ್ಶಿಸುವ ಅನೇಕರನ್ನು ಕಾಣುತ್ತೇವೆ. ಯಾರನ್ನೋ ಅವಮಾನಿಸುವ, ಯಾರ ಬಗ್ಗೆಯೋ ಅಪ-ಪ್ರಚಾರ ಮಾಡುವ ಕಮೆನ್ಟುಗಳು, ಲೇಖನಗಳನ್ನು ಕಾಣುತ್ತೇವೆ. ಅಂತರ್ಜಾಲದ ಈ ಮುಕ್ತ ಎನ್ನಿಸುವ ವಾತಾವರಣವನ್ನು ಈ ರೀತಿಯಾಗಿ ಬಳಸುವುದನ್ನು ಕಂಡಾಗ ನನಗೆ ನೆನಪಾದದ್ದು, ನನ್ನ ಜರ್ಮನಿಯ ಪ್ರವಾಸ! ಅಚ್ಚರಿಗೊಳ್ಳಬೇಡಿ…
ಜರ್ಮನಿಯ ಕೊಲೋನ್ ಎಂಬ ಜಾಗದಲ್ಲಿ ನಾನು ಒಂದು ಹದಿನೈದು ದಿನ ಚಿತ್ರೀಕರಣಕ್ಕೆಂದು ಹೋಗಿದ್ದೆ. ಅಲ್ಲಿ ಗೋಡೆಯಲ್ಲಿ ಅಲ್ಲಲ್ಲಿ, ವಿಚಿತ್ರ ಅಕ್ಷರಗಳನ್ನು ಬರೆದಿದ್ದರು. ಕೆಲವೆಡೆ ಅಕರಾಳ-ವಿಕರಾಳ ಚಿತ್ರಗಳು. ನಮ್ಮಲ್ಲಿ ರಾಮು loves ರಾಧಿಕಾ ಎಂದಿತ್ಯಾದಿ ಗೋಡೆಗಳಲ್ಲಿ ಬರೆಯುತ್ತಾರಲ್ಲಾ ಹಾಗೆ! ಇಂಥಾ ಮುಂದುವರೆದ ದೇಶ ಜರ್ಮನಿ, ಇವರಿಗೇನು ಬಂತಪ್ಪಾ ಇಂಥಾ ಕೆಟ್ಟ ಬುದ್ಧಿ ಎಂದು ನಾನು ಆಶ್ಚರ್ಯಪಟ್ಟೆ. ನೋಡಿದರೆ, ಅಲ್ಲಿ ಇಂಥಾ ಚಿತ್ರಗಳನ್ನು ಬಿಡಿಸುವ, ಬಣ್ಣಕೆಡಿಸಿ ಓಡುವ ಕೆಲವು ಗುಂಪುಗಳೇ ಇರುತ್ತವಂತೆ! ಇವರ ಕೆಲಸವೆಂದರೆ, ಯಾರೂ ನೋಡದ ವೇಳೆಯಲ್ಲಿ ಹೋಗಿ ಸಾರ್ವಜನಿಕ ಸ್ಥಳಗಳಲ್ಲಿ ಇಂಥಾ ಗೀಚು ಚಿತ್ರಗಳನ್ನು ಮಾಡಿ ಓಡಿಹೋಗುವುದು. ಇಂಥಾ ಎರಡು ಗ್ಯಾಂಗ್ ನಡುವೆ ಆಗೀಗ ಚಕಮಕಿ ನಡೆಯುವುದು, ಪೋಲೀಸರಿಗೆ ಸಿಲುಕಿಹಾಕಿಕೊಂಡು ಕಷ್ಟಕ್ಕೆ ಒಳಗಾಗುವುದು ಇತ್ಯಾದಿ ಸರಣಿಗಳೇ ನಡೆಯುತ್ತವಂತೆ. ಜರ್ಮನಿಯಲ್ಲಿ ಇಂಥವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಇದೆ. ಆದರೂ ಇಂಥಾದ್ದು ನಡೆಯುತ್ತಲೇ ಇರುತ್ತವೆ. ಇದು ಯಾಕೆ ಹೀಗೆ? ಅಲ್ಲಿನ ಜನರಿಗೆ ಜೀವನಕ್ಕೆ ಹೆಚ್ಚಿನ ತೊಂದರೆಯೇನೂ ಇಲ್ಲ. ಜನ ಸಂಖ್ಯೆ ನಿಯಂತ್ರಣದೊಳಗಿದೆ, (ಕಡಿಮೆಯೇ ಇದೆ!). ತಾಂತ್ರಿಕವಾಗಿ ಆ ದೇಶ ಸಾಕಷ್ಟು ಮುಂದುವರೆದಿದೆ. ಜನರು ಒಟ್ಟಿನಲ್ಲಿ ಸಾಕಷ್ಟು ಸುಖವಾಗಿಯೇ ಇದ್ದಾರೆ. ಹಾಗಿದ್ದರೆ ಈ ವಿಕಾರ ಯಾಕೆ? ಬಹುಷಃ ಈ ಸುಖದ ಅತಿರೇಕವೇ ಇದು ಎಂದು ಅನಿಸುತ್ತದೆ. ಇಂತೆಯೇ, ನಮ್ಮ ಬ್ಲಾಗುಗಳಲ್ಲಿ ಪರಿಚಯತಪ್ಪಿಸಿ ಯಾರನ್ನು ಬೇಕಾದರೂ ಅವಹೇಳನ ಮಾಡಬಹುದು ಎನ್ನುವ ಸುಖದ ಭ್ರಮೆಯೇ ಇಂಥರಾ ಮನಸ್ಸಿನ ಈ ವಿಕಾರದ ಅಭಿವ್ಯಕ್ತಿಯಾಗಿದೆ ಎಂದು ನನ್ನ ಭಾವನೆ. ಇಂದು ಹೆಚ್ಚಿನ ಸ್ವಾತಂತ್ರ್ಯದ ಸುಳ್ಳು ಕಲ್ಪನೆಯಿಂದ ಮನಸ್ಸಿನ ವಿಕಾರಗಳು ಸಮಾಜವನ್ನು ಪ್ರವೇಶಿಸುತ್ತಿವೆಯೇ?
ಹಹ್ಹಾ… ಮಜಾ ಎನ್ನಿಸುತ್ತದೆ. ನನಗ್ಯಾಕೋ ಇದು ವಿಕಾರ ಮನಸ್ಸಿನ ಅಭಿವ್ಯಕ್ತಿ ಅನ್ನಿಸಲಿಲ್ಲ. Intriguing ಆಗಿ ತೋರಿತು. ಜಗತ್ತಿನಲ್ಲಿ ಎಂಥೆಂಥ ವಿಚಿತ್ರ ಜನರಿದ್ದಾರಲ್ಲ…